ಶೀತಕಾಲದಲ್ಲಿ ಜನರಿಗೆ ಬರುವ ದಮ್ಮಿಗೆ ಆಯುರ್ವೇದದಲ್ಲಿ ತಮಕಶ್ವಾಸವೆಂದು ಹೆಸರು.

ಕಾರಣ

ದಮ್ಮು ಬರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯ ಕಾರಣಗಳು :

 • ಶೀತ ಹವೆಯಲ್ಲಿ ತಿರುಗಾಡುವುದು.
 • ತಣ್ಣನೆಯ ನೀರನ್ನು ಕುಡಿಯುವುದು
 • ಶೀತ ಪ್ರದೇಶದಲ್ಲಿ ತಣ್ಣನೆ ನೆಲದಲ್ಲಿ ಮಲಗುವುದು
 • ಕಲುಷಿತ ಹವೆಯನ್ನು ಕುಡಿಯುವುದು
 • ಐಸ್‌ಕ್ರೀಮ್ ಸೇವಿಸುವುದು
 • ಹೊತ್ತುಹೊತ್ತಿಗೆ ಊಟಮಾಡದೇ ಇರುವುದು
 • ಆಗಾಗ್ಗೆ ಊಟ ಮಾಡುವುದು
 • ಜಾಸ್ತಿ ಊಟ ಮಾಡುವುದು
 • ಜಾಸ್ತಿ ಬೇಕರಿ ಪದಾರ್ಥಗಳನ್ನು ಸೇವಿಸುವುದು
 • ದಾರಿಯಲ್ಲಿ ಮಾರುವ ಕರಿದ ಪದಾರ್ಥ ಸೇವಿಸುವುದು, ಕಲುಷಿತ ಎಣ್ಣೆ ಉಪಯೋಗಿಸಿ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ದುಷ್ಪರಿಣಾಮ ಉಂಟಾಗಿ ಅಲರ್ಜಿ, ಅಸ್ತಮಾ ಉಂಟಾಗುತ್ತದೆ. ಅತಿಯಾಗಿ ಊಟ ಮಾಡುವುದರಿಂದ ಜೀರ್ಣವಾಗದೆ ಆಹಾರ ಪಚನವಾಗುವುದಿಲ್ಲ.
 • ಕಾರ್ಖಾನೆಗಳ ಧೂಮ ಸೇವಿಸುವುದು.
 • ಮನೆಯಲ್ಲಿ ಅಡಿಗೆ ಮಾಡುವಾಗ ಉಂಟಾಗುವ ಹೊಗೆಯಿಂದ ಸಹ ರೋಗ ತಗಲುತ್ತದೆ.
 • ಎಣ್ಣೆ ತಿಕ್ಕಿ ಸ್ನಾನ ಮಾಡಿದ ನಂತರ ಶೀತಗಾಳಿಗೆ ಮೈ ಒಡ್ಡುವುದು.

ಹರಿಹಾರ : ನಾವು ಆರೋಗ್ಯವಾಗಿರಲು ಒಳ್ಳೆಯ ಆಹಾರ ಸೇವಿಸಬೇಕು. ಈ ಆಹಾರ ಸಾವಯವ ಪದ್ಧತಿಯಲ್ಲಿ ತಯಾರಾಗಿದ್ದರೆ ಒಳ್ಳೆಯದು. ರಸಾಯನಿಕ ವಸ್ತುಗಳನ್ನು ಸೇರಿಸಿ ತಯಾರಿಸಿದ ಆಹಾರ ಸೇವಿಸುವುದರಿಂದ ಶರೀರಕ್ಕೆ ಅಲರ್ಜಿ ಆಗುತ್ತದೆ. ಶೀತಗಾಳಿ, ಶೀತದ ಆಹಾರ ಸೇವಿಸಬಾರದು, ಶೀತದ ನೆಲದ ಮೇಲೆ ಮಲಗಬಾರದು, ಧೂಮ (ಹೊಗೆಯನ್ನು) ಕುಡಿಯಬಾರದು. ಒಳ್ಳೆಯ ವಾತಾವರಣದಲ್ಲಿ ಮಲಗಬೇಕು. ಒಳ್ಳೆಯ ಗಾಳಿ ಬರುವ ಮನೆಯಲ್ಲಿ ವಾಸ ಮಾಡಬೇಕು. ನೀರನ್ನು ಕಾಯಿಸಿ ಕುಡಿಯಬೇಕು. ೪ ಗ್ಲಾಸು ನೀರನ್ನು ಚೆನ್ನಾಗಿ ಕಾಯಿಸಿ ಒಂದು ಗ್ಲಾಸ್‌ಗೆ ಇಳಿಸಿ ಅದನ್ನು ಬಿಸಿಯಾಗಿದ್ದಾಗ ಕುಡಿಯಬೇಕು.

ದಮ್ಮು ಬರಲು ಮೊದಲು ಶೀತ, ನೆಗಡಿ ಕೆಮ್ಮುಗಳು ಪ್ರಾರಂಭವಾಗುತ್ತದೆ. ಇವನ್ನು ಆಗಲೇ ಗುಣಪಡಿಸಿಕೊಳ್ಳಬೇಕು. ಗುಣಪಡಿಸದೇ ಹೋದರೆ ಈ ಕಫ ಶ್ವಾಸಕೋಶಕ್ಕೆ ಹೋಗಿ ಅಲ್ಲಿ ಶ್ವಾಸಕೋಶದ ಸಣ್ಣ ಆಲವಿಯೋಲಗಳಲ್ಲಿ ಹಾಗೂ ಬ್ರಾಂಕಿಯೋಲ್ಸ್‌ಗಳಲ್ಲಿ ಅಡ್ಡಕಟ್ಟಿ ದಮ್ಮು ಬರುತ್ತದೆ. ಉಸಿರನ್ನು ಎಳೆದುಕೊಂಡಾಗ ಆಮ್ಲಜನಕ ಬರುತ್ತದೆ. ಅದು ರಕ್ತದಲ್ಲಿ ಸೇರಿಕೊಳ್ಳುತ್ತದೆ. ಶರೀರದೊಳಗಿನ ಶ್ವಾಸಕೋಶದಿಂದ ಕಾರ್ಬನ್ ಡೈ ಆಕ್ಸೈಡ್ ಮೂಗಿನ ಮೂಲಕ ಹೊರಗೆ ಹೋಗಬೇಕು. ರೋಗಿಯು ಕೆಮ್ಮುತ್ತಾನೆ. ಎದ್ದು ಕೂತರೆ ಸ್ವಲ್ಪ ಆರಾಮವಾಗುತ್ತದೆ. ಕೆಮ್ಮಿ ಕೆಮ್ಮಿ ರೋಗಿ ಸುಸ್ತಾಗುತ್ತಾನೆ.

ಈ ರೋಗಿಗಳು ಬಿಸಿಯಾದ ಲಘು ಆಹಾರ ಸೇವಿಸಬೇಕು. ರಾತ್ರಿಯಲ್ಲಿ ಆಹಾರ ಸೇವಿಸಬಾರದು. ಏನೆಂದರೂ ಸಾಯಂಕಾಲ ೭ರ ಒಳಗೆ ಊಟ ಮಾಡಿದರೆ ರಾತ್ರಿ ದಮ್ಮು ಬರುವುದನ್ನು ತಡೆಗಟ್ಟಬಹುದು. ಆಯುರ್ವೇದದಲ್ಲಿ ಪಂಚವಿಧ ದಮ್ಮುಗಳಲ್ಲಿ ತಮಕ ಶ್ವಾಸವು ಒಂದಾಗಿದೆ.

ತಮಕ ಶ್ವಾಸ ಶೀತಕಾಲದಲ್ಲಿ ದಮ್ಮು ಬರುತ್ತದೆ. ಗಂಟಲಿನಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಶ್ವಾಸಕೋಶದಲ್ಲಿ ಕಫ ಸೇರಿ ಫರ್‌, ಫರ್, ಕೊಂಯಿ ಕೊಂಯಿ ಶಬ್ದ ಬರುತ್ತದೆ.

ಆಹಾರ : ತರಕಾರಿಗಳಾದ ಪಡವಲ, ಬದನೆಕಾಯಿ, ಬೆಳ್ಳುಳ್ಳಿ, ತೊಂಡೆಕಾಯಿ, ಗಜನಿಂಬೆ, ಕಿರಕಸಾಲೆ ಸೊಪ್ಪು, ದ್ರಾಕ್ಷಿ, ಶುಂಠಿ, ಧನಿಯ ಸೇರಿದ ಸಂಸ್ಕರಿತ ನೀರು ಸೇವಿಸಬೇಕು.

ಮೂಲಂಗಿ, ಗುಜ್ಜರಿ, ಸುವರ್ಣಗೆಡ್ಡೆ, ಕೋಸು, ನವಿಲುಕೋಸು, ಹೀರೇಕಾಯಿ, ಸಂಬಾರ ಪದಾರ್ಥಗಳಾದ ಶುಂಠಿ, ಮೆಣಸು, ಚಕ್ಕೆ ಲವಂಗ ಇಂಗು ಇವುಗಳನ್ನು ವೈದ್ಯರ ಸೂಚನೆಯಂತೆ ಉಪಯೋಗಿಸಬೇಕು. ಹಳೆ ಅಕ್ಕಿ, ರಾಗಿ, ಜೋಳ, ಗೋಧಿ, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ ಸೇವಿಸಿರಿ. ಫಾಸ್ಟ್ ಪುಡ್ ಸಹ ನಿಷೇಧಿಸಿ. ಜಾಸ್ತಿ ದಮ್ಮು ಇದ್ದವರು ಪಂಚಕರ್ಮ ಚಿಕಿತ್ಸೆಯನ್ನು ನುರಿತ ವಮನಕಾರ್ಯ ಪರಿಣಿತ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಆರೋಗ್ಯದಿಂದಿರಬಹುದು.

ವೈದ್ಯಸಾಹಿತಿಯಾಗಿನನ್ನಅನುಭವ
ವಿದೇಶಿ ಭಾಷೆಗಳಿಗೆ ತರ್ಜುಮೆ
ಡಾ| ಟಿ.ಎಲ್. ದೇವರಾಜದೂರವಾಣಿ : ೦೮೦ ೨೬೩೯೦೬೯೪ 

ನಾನು ವೈದ್ಯನಾಗಿ ಹಾಸನದಲ್ಲಿದ್ದಾಗ ಹಾಸನ ಜಾತ್ರಾ ಪ್ರಯುಕ್ತ ಹೊರತರುತ್ತಿದ್ದ ಪುರವಣಿಯಲ್ಲಿ ಲೇಖನ ಬರೆಯುತ್ತಿದ್ದೆ. ನಾನು ಕಾಶೀ ಹಿಂದು ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಎಂ.ಡಿ. ಮಾಡುತ್ತಿದ್ದಾಗ ನಾಗಾರ್ಜುನದಲ್ಲಿ, ಸಚಿತ್ರ ಆಯುರ್ವೇದ ಹಾಗೂ ನೀಮ ಜರ್ನಲ್‌‌ಗಳಲ್ಲಿ ಆಯುರ್ವೇದ ಕುರಿತು ಲೇಖನಗಳನ್ನು ಪ್ರಕಟಿಸುತ್ತಿದ್ದೆ. ಕಾಲೇಜುಗಳ ಮ್ಯಾಗಜೈನ್‌ಗಳಲ್ಲಿ ಸಹ ವೈದ್ಯಕೀಯ ಲೇಖನ, ಕೇಸ್ ರಿಪೋರ್ಟ್‌‌ಗಳನ್ನು ಪ್ರಕಟಿಸುತ್ತಿದ್ದೆ.

ಕರ್ನಾಟಕಕ್ಕೆ ಬಂದು ಮೈಸೂರಿನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಸೇರಿ ಎಂ.ಡಿ. ಕೋರ್ಸ್‌‌ನ ಉಪನ್ಯಾಸಕನಾಗಿ ಸೇರಿದ ಮೇಲೆ ಪಂಚಕೂರ್‌ ಚಿಕಿತ್ಸಾಹ ವಿಜ್ಞಾನ ಎಂಬ ೨ ಸಂಪುಟದ ಸುಮಾರು ೧೦೦೦ ಪೇಜಿನ ಪುಸ್ತಕಗಳನ್ನು ಸಚಿತ್ರಗಳೊಡನೆ ಪ್ರಕಟಿಸಿದೆ. ಅದರ ಜೊತೆಗೆ ಪ್ರಾಕೃತ ದೈನಂದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದ ‘ಮನೆ ಮದ್ದು’ ಶಿರೋನಾಮೆಯಲ್ಲಿ ಪುಸ್ತಕರೂಪದಲ್ಲಿ ನಮ್ಮ ಪ್ರಕಾಶನದಿಂದ ಪ್ರಕಟವಾಯಿತು.

ನನ್ನ ಪುಸ್ತಕ ರಷ್ಯಾ ಭಾಷೆಗೆ ತರ್ಜುಮೆಯಾಗಿದೆ. ಸ್ವಾನಿಷ್‌ಭಾಷೆಗೆ ತರ್ಜುಮೆ ಆಗುತ್ತಿದೆ. ಇಂಗ್ಲೀಷ್ ಭಾಷೆಯಲ್ಲಿ ಬರೆದ ನನ್ನ ಪುಸ್ತಕಗಳು ಪ್ರಪಂಚದೆಲ್ಲೆಡೆಗೆ ರಫ್ತಾಗಿದೆ. ಒಟ್ಟು ಈಗ ನಾನು ೪೦ ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದೇನೆ.

ಭಾರತದಲ್ಲಿ ವೈದ್ಯಸಾಹಿತಿಯಾಗಿ ಎಷ್ಟು ಪುಸ್ತಕ ಬರೆದರೂ ಅವನು ಬಡವನಾಗಿಯೇ ಇರುತ್ತಾನೆ. ಪ್ರಕಾಶಕರು ಕೋಟ್ಯಾಧಿಪತಿಗಳಾಗುತ್ತಾರೆ. ಕೇರಳ ರಾಜ್ಯದಲ್ಲಿ ಮಾತ್ರ ಸಹಕಾರ ಸಂಘಗಳಿಂದ ಪುಸ್ತಕ ಪ್ರಕಟಿಸಿ ಲೇಖಕರಿಗೆ ೩೦ ಪ್ರತಿಶತ ಹಣವನ್ನು ರಾಯಲ್ಟಿಯಾಗಿ ಕೊಡುತ್ತಿದ್ದಾರೆ.

ಆಯುರ್ವೇದಕ್ಕೆ ಸಲ್ಲಿಸಿರುವ ಪರಿಣಿತ ಸೇವೆಗಾಗಿ, ಒಳ್ಳೆಯ ವೈದ್ಯನಾಗಿ ಒಳ್ಳೆಯ ವೈದ್ಯಸಾಹಿತಿಯಾಗಿ ಒಳ್ಳೆಯ ಆಡಳಿತಗಾರನೆಂದು ಪರಿಗಣಿಸಿ ಈ ರಾಷ್ಟ್ರೀಯ ಪ್ರಶಸ್ತಿಯಾದ ಶ್ರೀರಾಮನಾರಾಯಣ ವೈದ್ಯ ೨೦೦೭ ನ್ನು ನೀಡಿದ್ದಾರೆ. ಇದು ಕರ್ನಾಟಕ ರಾಜ್ಯದ ಮೊಟ್ಟಮೊದಲ ವೈದ್ಯನಿಗೆ ಸಿಕ್ಕಿದ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ಜೊತೆಗೆ ಮಾಜಿ ಉಪರಾಷ್ಟ್ರಪತಿಗಳಾದ ಶ್ರೀ ಬಿ.ಡಿ. ಜತ್ತಿಯವರಿಂದ ಶ್ರೀ ಆರ‍್ಯಭಟ ಪ್ರಶಸ್ತಿ, ಶ್ರೀ ಕೆಂಪೇಗೌಡ ಪ್ರಶಸ್ತಿ, ವೈದ್ಯಮಿತ್ರ ಪ್ರಶಸ್ತಿ, ಆಯುರ್ವೇದ ಅಕಾಡೆಮಿ ಪ್ರಶಸ್ತಿ, ಅಗ್ನಿಮೇಳ ಆಯುರ್ವೇದ ಅನುಷ್ಠಾನ ಪ್ರಶಸ್ತಿ, ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ, ಲಯನ್ಸ್‌ ಇಂಟರ್‌ ನ್ಯಾಷನಲ್ ಮೈಸೂರು ಬಯಗ್ರಾಪಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೇರಿಕ ಮತ್ತು ಇಂಗ್ಲೆಂಡ್‌ನ ಮ್ಯಾನ್ ಆಫ್ ೨೦೦೦. ನಾಡಪ್ರಭು ಶ್ರೀ ಕೆಂಪೇಗೌಡ ಪ್ರಶಸ್ತಿ, ಬೆಂಗಳೂರು ರತ್ನ ಪ್ರಶಸ್ತಿ ದೊರೆತಿವೆ.

* * *