ಕವಿತಾ ಎರಡನೆಯ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಕಷ್ಟವಾಯಿತು. ಆದರೆ ಹುಟ್ಟಿದ್ದು ಗಂಡು ಮಗು. ಆಕೆಯೂ ಸೇರಿದಂತೆ ಎಲ್ಲರೂ ಸಂಭ್ರಮದಲ್ಲಿದ್ದಾರೆ. ಮೊದಲನೆಯ ಮಗು ಹೆಣ್ಣು ಮಗು, ಮೂರು ವರ್ಷ ವಯಸ್ಸು. ಕವಿತಾಳ ಮದುವೆಯಾಗಿ ಐದು ವರ್ಷವಾಗಿದೆ. ಗಂಡನೊಂದಿಗೆ, ಅತ್ತೆ ಮಾವನೊಂದಿಗೆ ಸಂಬಂಧ ಅಷ್ಟಕಷ್ಟೆ. ಊಟ ಬಟ್ಟೆ, ಒಡವೆ ಇತರ ಅನುಕೂಲಗಳಿಗೆ ಕೊರತೆಯಿಲ್ಲವಾದರೂ, ಆತ್ಮೀಯವಾದ ಪ್ರೀತಿವಿಶ್ವಾಸಗಳಿಲ್ಲ. ಕವಿತಾ ತಂದೆ ತಾಯಿ ಮದುವೆ ಸಂದರ್ಭದಲ್ಲಿ ಯೋಗ್ಯರೀತಿಯಲ್ಲಿ ವರೋಪಚಾರ ವರದಕ್ಷಿಣೆ ಕೊಡಲಿಲ್ಲ. ಗಂಡನ ಕಡೆಯವರನ್ನು ನಿರ್ಲಕ್ಷಿಸಿದರು ಎಂಬ ಆರೋಪ ಇನ್ನೂ ನಿಂತಿಲ್ಲ. ಹಬ್ಬಗಳ ಸಂದರ್ಭದಲ್ಲಿ ಚಕಮಕಿ ನಡೆಯುತ್ತಲೇ ಇರುತ್ತದೆ. ಕವಿತಾ ಪ್ರಕಾರ ಗಂಡ ಸದಾಶಿವ ಒಳ್ಳೆಯವನೇ ಆದರೂ, ತಂದೆತಾಯಿಗಳ ಮಾತನ್ನು ಕೇಳುವುದೇ ಹೆಚ್ಚು. ಹೆಂಡತಿಗೆ ಹೊಸ ಸೀರೆ ತರಬೇಕಾದರೆ ಹೊರಗಡೆ ಕರೆದುಕೊಂಡು ಹೋಗಬೇಕಾದರೆ, ತಂದೆ ತಾಯಿಯ ಅಪ್ಪಣೆ, ನಿರ್ದೇಶನವನ್ನು ಬೇಡುವಾತ. ಯಾವುದೇ ದುರಭ್ಯಾಸ, ದುಶ್ಚಟಗಳಿಲ್ಲ ಎಂಬುದೇ ದೊಡ್ಡ ಸಮಾಧಾನ. ಒಂದು ವಾರದ ತನಕ ಚೆನ್ನಾಗಿದ್ದ ಕವಿತಾ ಕಳೆದ ಐದಾರು ದಿನಗಳಿಂದ ಮಂಕಾಗಿದ್ದಾಳೆ. ಮಗು ಅತ್ತಾಗಲೂ ಎಲ್ಲೋ ನೋಡುತ್ತಾ ಕೂತಿರುತ್ತಾಳೆ, ತಾಯಿ ಬಂದು “ಮಗು ಅಳ್ತಿದೆ, ಎದೆ ಕೊಡೆ” ಎಂದು ಹೇಳಬೇಕು. ಸ್ನಾನ ಮಾಡಲು ಊಟಮಾಡಲು, ಬಲವಂತ ಮಾಡಬೇಕು. “ಏಕೆ ಹೀಗಿದ್ದೀಯಾ, ಏನಾಯ್ತೇ ನಿನಗೆ”, ಎಂದರೆ “ಏನಿಲ್ಲ ಚೆನ್ನಾಗಿದ್ದೇನೆ” ಎಂಬ ಚುಟುಕು ಉತ್ತರ ಕೊಡುತ್ತಾಳೆ. ರಾತ್ರಿ ಎಷ್ಟು ಹೊತ್ತಾದರೂ ನಿದ್ರೆಮಾಡದೇ ಕಣ್ಣುಬಿಟ್ಟುಕೊಂಡೇ ಮಲಗಿರುತ್ತಾಳೆ. ಯಾರದೋ ದೃಷ್ಟಿ ತಾಗಿದೆ ಎಂದು ತಾಯಿ ದೃಷ್ಟಿ ನಿವಾಳಿಸಿದಳು. ಪ್ರಯೋಜನವಾಗಲಿಲ್ಲ. ಯಾವುದೋ ಗಾಳಿ, ಪೀಡೆ  ಇರಬೇಕೆಂದು ಅನುಮಾನ ಬಂದು ಊರಮ್ಮನ ದೇವಸ್ಥಾನದ ಪೂಜಾರಿಯಿಂದ ಮಂತ್ರಿಸಿದ ತಾಯತ ತಂದು ಕಟ್ಟಿದರು. ಮೇಲಾಗಲಿಲ್ಲ. ಈಗ ತನ್ನಷ್ಟಕ್ಕೇ ತಾನೇ ಮಾತಾಡಿಕೊಳ್ಳಲು ಪ್ರಾರಂಭಿಸಿದ್ದಾಳೆ. ಏನನ್ನೋ ನೆನೆಸಿಕೊಂಡು ಅಳುತ್ತಾಳೆ. ಕೋಪಿಸಿಕೊಳ್ಳುತ್ತಾಳೆ, ನಗುತ್ತಾಳೆ, ಮಗುವನ್ನು ಪೂರ್ಣವಾಗಿ ನಿರ್ಲಕ್ಷಿಸಿದ್ದಾಳೆ. ‘ಈ ಅನಿಷ್ಟವನ್ನು ದೂರ ತೆಗೆದುಕೊಂಡು ಹೋಗಿ, ಈ ಮಗು ನನ್ನದಲ್ಲ’ ಎಂದು ಕಿರಿಚುತ್ತಾಳೆ. ಆಕೆಯನ್ನು ನೋಡಲು ಬಂದ ಗಂಡನನ್ನು ಬಾಯಿಗೆ ಬಂದಂತೆ ಬೈದು ಮತ್ತೆ ಈ ಕಡೆ ಬರಬೇಡ, ನಿನಗೂ ನನಗೂ ಯಾವ ಸಂಬಂಧವೂ ಬೇಡ ಎಂದು ಕೂಗಾಡಿದಳು. ಪಾಪ ಗಂಡ ಪೆಚ್ಚಾಗಿಬಿಟ್ಟ. ಕವಿತಾಗೆ ಸನ್ನಿ ಹಿಡಿದಿದೆ ಯಾವುದೋ ದೆವ್ವ ದುಷ್ಟ ಶಕ್ತಿಯ ದೆಸೆಯಿಂದ ಹೀಗಾಡುತ್ತಿದ್ದಾಳೆ. ಒಳ್ಳೆಯ ಮಂತ್ರವಾದಿಯನ್ನು ಕರೆಸಿ ಮಾಟ ಮಂತ್ರ ತೆಗೆಸಿ. ದೇವಸ್ಥಾನಕ್ಕೆ ಕರೆದೊಯ್ಯಿರಿ. ಹರಕೆ ಕಾಣಿಕೆ ಒಪ್ಪಿಸಿ ಎಂದು ಒಬ್ಬೊಬ್ಬರು ಒಂದೊಂದು ಸಲಹೆ ನೀಡುತ್ತಿದ್ದಾಗ ಏನು ಮಾಡುವುದೆಂದು ಆಕೆಯ ಮನೆಯವರು ಕಂಗಾಲಾಗಿದ್ದಾರೆ.

ಏನಿದು ಬಾಣಂತಿ ಸನ್ನಿ?

ಹೆರಿಗೆಯಾದ ನಂತರ ೪೨ ದಿನಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ತೀವ್ರ ರೀತಿಯ ಮಾನಸಿಕ ಕಾಯಿಲೆಯೇ ಬಾಣಂತಿ ಸನ್ನಿ – ಪ್ಯುರ್ಪೆರಲ್ ಸೈಕೋಸಿಸ್. ಅನುವಂಶೀಯ ಕಾರಣಗಳು, ದೈಹಿಕ ಕಾಯಿಲೆಗಳು, ಮಾನಸಿಕ ಒತ್ತಡ, ಗರ್ಭಧಾರಣೆ ಮತ್ತು ಹೆರಿಗೆಯ ಪ್ರಕ್ರಿಯೆ ವ್ಯಕ್ತಿಯ ಮೇಲೆ ಮಾಡುವ ಪ್ರಭಾವಗಳಿಂದ ಬಾಣಂತಿ ಸನ್ನಿ ಕಾಣಿಸಿಕೊಳ್ಳುತ್ತದೆ ಎನ್ನಬಹುದಾಗಿದೆ. ಈ ಕಾಯಿಲೆ ಸಾಮಾನ್ಯವಾಗಿ ಸ್ವಲ್ಪಕಾಲ ಇದ್ದು ಹೋಗುವಂತಹದ್ದು. ಕೆಲವರಲ್ಲಿ ಬಾಣಂತಿ ಸನ್ನಿ ಮುಂದುವರೆದು ಸ್ಕೀಜೋಫ್ರೀನಿಯಾ ಅಥವಾ ಅಫೆಕ್ಟಿವ್ ಡಿಸ್‌ಆರ್ಡರ್‌ಆಗಿ ಪರಿವರ್ತನೆಗೊಳ್ಳುತ್ತದೆ. ಬಾಣಂತಿ ಸನ್ನಿಯ ಸಾಮಾನ್ಯ ಲಕ್ಷಣಗಳು:

 • ಹೆರಿಗೆಯಾದ ೮ ಅಥವಾ ೧೦ ದಿನದಂದು ಕಾಣಿಸಿಕೊಳ್ಳುವುದು.
 • ಮಂಕುತನ ಅಥವಾ ಚಡಪಡಿಕೆ ಅಥವಾ ಚಟುವಟಿಕೆ ಇಲ್ಲದಿರುವುದು.
 • ಭಾವನೆಗಳ ಏರುಪೇರು, ಆಳು-ನಗು, ಕೋಪ, ಭಯ ಭ್ರಮೆಗಳು ಸಂಶಯ ತಪ್ಪು ಕಲ್ಪನೆಗಳು.
 • ತನ್ನ ಮತ್ತು ಮಗುವಿನ ಬೇಕುಬೇಡಗಳನ್ನು ನಿರ್ಲಕ್ಷಿಸುವುದು.
 • ವಿಚಿತ್ರವಾದ ನಡೆ ಮತ್ತು ನುಡಿ ಹಾಗೂ ಪ್ರತಿಕ್ರಿಯೆಗಳು.
 • ಆಹಾರ ಸೇವನೆ, ನಿದ್ರೆ ವ್ಯತ್ಯಾಸಗೊಳ್ಳುವುದು.
 • ದೈಹಿಕ ಸ್ವಚ್ಛತೆ ಬಗ್ಗೆ ನಿರಾಸಕ್ತಿ
 • ಅಪರೂಪಕ್ಕೆ ಹಿಂಸಾಚಾರ ಅಥವಾ ಆತ್ಮಹತ್ಯೆಯ ಪ್ರಯತ್ನ.
 • ಗೊಂದಲ, ತನ್ನ ಸುತ್ತುಮುತ್ತಲಿನವರನ್ನು, ಮನೆಯವರನ್‌ಉ ಗುರುತಿಸದಿರುವುದು, ಅರೆಪ್ರಜ್ಞಾವಸ್ಥೆ.

ಜನಸಾಮಾನ್ಯರು ನಂಬುವಂತೆ ದೆವ್ವ, ಭೂತ, ಮಾಟ, ಮಂತ್ರ, ಕೆಟ್ಟ, ಕಣ್ಣು, ಬಾಣಂತಿ ತಣ್ಣೀರನ್ನು ಮುಟ್ಟುವುದು ಹೊರಗೆ ಬರುವುದು, ಆಹಾರ ಪಥ್ಯವಿಲ್ಲದಿರುವುದು ಬಾಣಂತಿ ಸನ್ನಿಗೆ ಕಾರಣವಲ್ಲ.

ಬಾಣಂತಿ ಸನ್ನಿ ಯಾರಲ್ಲಿ ಕಾಣಿಸಿಕೊಳ್ಳುತ್ತದೆ?

 • ಚೊಚ್ಚಲ ಹೆರಿಗೆ
 • ಇಷ್ಟವಾಗದ ಗರ್ಭಧಾರಣೆ
 • ಸ್ತ್ರೀಯ ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಕಾಯಿಲೆ ಇದ್ದರೆ
 • ಗರ್ಭಧಾರಣೆ ಅವಧಿಯಲ್ಲಿ ಸ್ತ್ರೀಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ
 • ಅತಿಯಾದ ಮಾನಸಿಕ ಒತ್ತಡದಲ್ಲಿದ್ದಾಗ
 • ಗರ್ಭಧಾರಣೆಯಲ್ಲಿ ಕಡೆ ಅವಧಿಯಲ್ಲಿ ನಂಜೇರುವುದು, ರಕ್ತದೊತ್ತಡ ಏರುವುದು ಕೈ ಕಾಲು ಮುಖ ಊದಿಕೊಳ್ಳುವುದು, ಜ್ವರ, ಫಿಟ್ಸ್
 • ಹೆರಿಗೆ ಕಷ್ಟವಾಗುವುದು.
 • ಹೆರಿಗೆಯ ನಂತರ ವಿಪರೀತ ರಕ್ತಸ್ರಾವವಾಗುವುದು.
 • ಹೆರಿಗೆಯ ನಂತರ ಸ್ತ್ರೀಗೆ ವಿಪರೀತ ನೋವು, ನಿರಾಶೆ, ಅತೃಪ್ತಿಗೆ ಒಳಗಾಗುವುದು. ಗಂಡ ಅತ್ತೆ ಮಾವ ತಂದೆತಾಯಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವುದು.
 • ಮಗು ಅಂಗವಿಕಲ ಅಥವಾ ಚೆನ್ನಾಗಿಲ್ಲದಿರುವುದು, ಅನಾರೋಗ್ಯಪೀಡಿತವಾಗುವುದು ಅಥವಾ ಸಾಯುವುದು.

ಚಿಕಿತ್ಸೆ : ಬಾಣಂತಿ ಸನ್ನಿ ಇರುವ ಬಾಣಂತಿಯನ್ನು ಕೂಡಲೇ ಸಾಮಾನ್ಯ ವೈದ್ಯರು ಅಥವಾ ಮನೋವೈದ್ಯರಿಗೆ ತೋರಿಸಿ.

 • ಚಿತ್ತವಿಕಲತೆ ನಿರೋಧಕ ಔಷಧಿ, ಖಿನ್ನತೆ ಅಥವಾ ಆತಂಕ ನಿವಾರಣ ಔಷಧಿಯನ್ನು ಎರಡರಿಂದ ಮೂರು ತಿಂಗಳ ಕಾಲ ನೀಡಬೇಕಾಗುತ್ತದೆ.
 • ಕೆಲವು ತೀವ್ರ ಸ್ವರೂಪದ ಸನ್ನಿಯಲ್ಲಿ ತಾಯಿಯನ್ನು ಆಸ್ಪತ್ರೆಯಲ್ಲಿ ಇರಿಸಬೇಕಾಗುತ್ತದೆ. ವಿದ್ಯುತ್ ಕಂಪನ ಚಿಕಿತ್ಸೆ (ಇ ಸಿ ಟಿ)ಯನ್ನು ನೀಡ ಬೇಕಾಗುತ್ತದೆ.
 • ಬಾಣಂತಿಗಿರುವ ದೈಹಿಕ ನ್ಯೂನತೆ, ಅನೀಮಿಯಾ ಕಾಯಿಲೆ, ಸೋಂಕನ್ನು ಸರಿಪಡಿಸಬೇಕಾಗುತ್ತದೆ.
 • ಮಗುವಿನ  ಲಾಲನೆ ಪಾಲನೆ ಮಾಡಲು ಪ್ರೋತ್ಸಾಹ ನೀಡಬೇಕು.
 • ಮನೆಯವರ ಆಸರೆ ಪ್ರೀತಿ, ವಿಶ್ವಾಸ ಲಭ್ಯವಾಗಬೇಕು. ಅವಳ ಬೇಕು ಬೇಡಗಳನ್ನು ಅವರು ಗಮನಿಸುವಂತೆ ನೋಡಿಕೊಳ್ಳಬೇಕು.

ಬಹುತೇಕ ಪ್ರಕರಣಗಳಲ್ಲಿ ಬಾಣಂತಿ ಸನ್ನಿ ಸಂಪೂರ್ಣವಾಗಿ ಗುಣವಾಗುತ್ತದೆ. ಮುಂದಿನ ಹೆರಿಗೆಯಲ್ಲಿ ಪುನರಾವರ್ತನೆ ಆಗಬಹುದು ಅಥವಾ ಆಗದೆಯೂ ಇರಬಹುದು. ಸರಿಯದ ಸಮಯದಲ್ಲಿ ಚಿಕಿತ್ಸೆ ಮತ್ತು ಆರೈಕೆಯಿಂದ ಬಾಣಂತಿ ಸನ್ನಿ ಸಂಪೂರ್ಣವಾಗಿ ಗುಣವಾಗುತ್ತದೆ. ಈ ಬಗ್ಗೆ ಯಾವ ಭಯ, ಅಂತಕವೂ ಬೇಡ. ಕೆಲವರಲ್ಲಿ ಬಾಣಂತಿ ಸನ್ನಿ ಸ್ಕಿಜೋಫ್ರೀನಿಯಾ ಅಥವಾ ಅಫೆಕ್ಟಿವ್ ಡಿಸ್‌ಆರ್ಡರ್ ಆಗಿ ಪರಿವರ್ತನೆ ಹೊಂದಿದಾಗ ದೀರ್ಘಕಾಲದ ಔಷಧೋಪಚಾರ ಅಗತ್ಯವಾಗುತ್ತದೆ.

ಗರ್ಭಿಣಿ ಸ್ತ್ರೀಯ ಸರಿಯಾದ ಆರೈಕೆ ವೈದ್ಯಕೀಯ ತಪಾಸಣೆ ಮತ್ತು ಹೆರಿಗೆ ಮತ್ತು ಹೆರಿಗೆಯ ನಂತರದ ಅವಧಿಯಲ್ಲಿ ವೈದ್ಯಕೀಯ ನೆರವಿನಿಂದ ಬಾಣಂತಿ ಸನ್ನಿಯನ್ನು ತಡೆಗಟ್ಟಬಹುದು. ಮಾನಸಿಕ ಒತ್ತಡ, ನೋವುಗಳಿದ್ದರೆ ಆಪ್ತ ಸಲಹೆ ಸಾಂತ್ವನ ಅತ್ಯಗತ್ಯವಾಗುತ್ತದೆ.

* * *

ವೈದ್ಯಸಾಹಿತಿಯಾಗಿನನ್ನಅನುಭವ
ವಿಷಾದ ಪತ್ರದೊಂದಿಗೆ ವಾಪಸ್ಸಾಗುತ್ತಿದ್ದವು
ಡಾ| ಸಿ.ಆರ್. ಚಂದ್ರಶೇಖರ್ ನನ್ನ ಮೊದಲ ವೈದ್ಯಲೇಖನ ಸ್ತನ ಕ್ಯಾನ್ಸರ್‌ಬಗ್ಗೆ ‘ಏನು ತೊಂದರೆ ತಾಯಿ’ ಎಂಬ ಶಿರೋನಾಮೆಯಲ್ಲಿ ಪ್ರಜಾಮತ ಪತ್ರಿಕೆಯಲ್ಲಿ ೧೯೭೨ ರಲ್ಲಿ ಪ್ರಕಟವಾಯಿತು. ಆಗ ನಾನು ವೈದ್ಯವಿದ್ಯಾರ್ಥಿಯಾಗಿದ್ದೆ. ವೈದ್ಯ ಪದಬ್ರಹ್ಮನೆಂದೇ ಖ್ಯಾತಿಪಡೆದಿದ್ದ ಡಾ| ಡಿ.ಎಸ್. ಶಿವಪ್ಪನವರು ಮಾರ್ಗದರ್ಶನ ಮಾಡಿದ್ದರು. ಮೊದಲ ಎರಡು ಪುಸ್ತಕಗಳಾದ ‘ಮಿದುಲು’ (೧೯೭೯) ಮತ್ತು ‘ಮಗು ಮನಸ್ಸು ಆರೋಗ್ಯ’ (೧೯೮೦) ವನ್ನು ನಾನು ಬರೆಯಲು ಪ್ರೇರಣೆ ನೀಡಿದವರು. ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಜನಪ್ರಿಯ ವಿಜ್ಞಾನ ಮಾಸಪತ್ರಿಕೆಯ ಸಂಪಾದಕರೂ ನನ್ನ ಪಿ.ಯು. ಸಹಪಾಠಿಯೂ ಆಗಿದ್ದ ದಿವಂಗತ ಶ್ರೀ ಕೆ.ಎಚ್. ರಾಮಯ್ಯ. ಆನಂತರ ಅವರು ನನ್ನ ಹತ್ತಾರು ಲೇಖನಗಳು, ನಾಟಕಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾಸ ಪತ್ರಿಕೆಯಾದ ‘ಜನಪ್ರಿಯ ವಿಜ್ಞಾನ’ದಲ್ಲಿ ಪ್ರಕಟಿಸಿದರು.

ಮಕ್ಕಳ ಸಾಹಿತಿ ದಿವಂಗತ ಶ್ರೀ ಸುಬ್ರಹ್ಮಣ್ಯ ಆಚಾರ‍್ಯ (ರಸಿಕ ಪುತ್ತಿಗೆ) ಐಬಿಎಚ್ ಪ್ರಕಾಶನದ ಮುಖ್ಯಸ್ಥ ಶ್ರೀ ಅನಂತರಾಮ ಅವರಿಗೆ ಪರಿಚಯಿಸಿ, ಆ ಸಂಸ್ಥೆಯ ಮುಖಾಂತರ ನಲವತ್ತಕ್ಕೂ ಹೆಚ್ಚಿನ ಪುಸ್ತಕಗಳ ಪ್ರಕಟಣೆಗೆ ನೆರವಾದರು. ನಂತರ ಆಕಸ್ತಮಿಕವಾಗಿ ನನಗೆ ಪತ್ರ ಬರೆದು ‘ನಮ್ಮ ನವಕರ್ನಾಟಕ ಪ್ರಕಾಶನಕ್ಕೆ ಒಂದೆರಡು ಪುಸ್ತಕವನ್ನು ಬರೆದುಕೊಡಿ’ ಎಂದು ಆಹ್ವಾನಿಸಿದ, ಆ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್ ಶ್ರೀ ಆರ್.ಎಸ್. ರಾಜಾರಾಂ, ನನ್ನ ಅರವತ್ತಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿ, ನನ್ನ ಬರವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪುಸ್ತಕದ ಒಂದು ಆವೃತ್ತಿ ಮುಗಿಯುತ್ತಿದ್ದಂತೆ ಮರುಮುದ್ರಣ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ನವಕರ್ನಾಟಕ ಸಂಸ್ಥೆ ಮಾಡುತ್ತಿದೆ. ಹತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡ ಪುಸ್ತಕಗಳನ್ನು ಪ್ರಕಟಿಸಿರುವುದು ಈ ಸಂಸ್ಥೆ. ನಾಡಿನ ಹೆಮ್ಮೆಯ ಪತ್ರಿಎಕಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ಸುದ್ದಿ ಸಂಗಾತಿ, ಮಂಗಳಾ ಸೇರಿದಂತೆ ಹತ್ತಾರು ಪತ್ರಿಕೆಗಳು ನನ್ನ ಬಿಡಿಲೇಖನಗಳನ್ನು, ಆರೋಗ್ಯ ಅಂಕಣಗಳು ಪ್ರಶ್ನೋತ್ತರ ಅಂಕಣಗಳನ್ನುಪ್ರಕಟಿಸಿ ನನ್ನ ಬರವಣಿಗೆ ನಾಡಿನ ಮೂಲೆ ಮೂಲೆಗೆ ತಲುಪುವಂತೆ ಮಾಡಿವೆ. ಒಟ್ಟು ಒಂದು ಸಾವಿರಕ್ಕೂ ಹೆಚ್ಚಿನ ಬಿಡಿಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೬೦ ಕ್ಕೂ ಹೆಚ್ಚಿನ ಪುಸ್ತಕಗಳು ಬೆಳಕು ಕಂಡಿವೆ. ಪತ್ರಿಕಾ ಓದುಗರು ಮತ್ತು ಪುಸ್ತಕ ಪ್ರಿಯರಿಗೆಲ್ಲಾ ಮಾನಸಿಕ ಆರೋಗ್ಯ ಅನಾರೋಗ್ಯದ ಬಗ್ಗೆ ಮಾಹಿತಿಯನ್ನು ತಲುಪಿಸಿದ ತೃಪ್ತಿ ನನಗಿದೆ.

ನಮ್ಮ ರಾಜ್ಯದಲ್ಲಿರುವ ೧೮೦ ಕ್ಕೂ ಹೆಚ್ಚಿನ ಮನೋವೈದ್ಯರ ಬಳಿಗೆ, ಅನೇಕ ವ್ಯಕ್ತಿಗಳು ನನ್ನ ಲೇಖನ ಮತ್ತು ಪುಸ್ತಕವನ್ನು ತೋರಿಸಿ, ಸಲಹೆ ಚಿಕಿತ್ಸೆ ಬೇಕೆಂದು ಕೇಳುತ್ತಾರೆ. ತಮಗೆ ಮಾನಸಿಕ ರೋಗ ಸಮಸ್ಯೆ ಇದೆ ಎಂದು ಹೇಳಿಕೊಳ್ಳಲು ಸಂಕೋಚ ಪಟ್ಟುಕೊಳ್ಳುವುದಿಲ್ಲ. ಮಾನಸಿಕ ರೋಗಗಳಿಗೆ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಶತಶತಮಾನಗಳಿಂದ ಅಂಟಿಕೊಂಡು ಬಂದಿರುವ ಸಾಮಾಜಿಕ ಕಳಂಕ ನನ್ನ ಬರವಣಿಗೆಯಿಂದ ಕಡಿಮೆಯಾಗುತ್ತಿರುವುದು ನನಗೆ ಬಹಳ ಸಂತೋಷವನ್ನು ತಂದುಕೊಟ್ಟಿದೆ. ಪತ್ರಿಕಾ ಸಾಹಿತ್ಯ-ರೇಡಿಯೋ ಸಾಹಿತ್ಯ ನನಗೆ ಅಪಾರ ಜನಪ್ರಿಯತೆ ಮತ್ತು ಜನಮನ್ನಣೆಯನ್ನು ತಂದುಕೊಟ್ಟಿದೆ.

ವೈದ್ಯಸಾಹಿತ್ಯದ ಮೂಲಕ, ಆರೋಗ್ಯ ಕ್ಷೇತ್ರದಲ್ಲಿ ವೈಜ್ಞಾನಿಕ ಮಾಹಿತಿದೃಷ್ಟಿಕೋನವನ್ನು ಪಸರಿಸಿ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವವನ್ನುಂಟು ಮಾಡಿದ್ದಕ್ಕೆ ಭಾರತ ಸರ್ಕಾರದ ರಾಷ್ಟ್ರೀಯ ಪುರಸ್ಕಾರ. ವಿಶ್ವವಿದ್ಯಾಲಯ ಧನ ಆಯೋಗದ ಹರಿ ಓಂ ಪ್ರಶಸ್ತಿ. ಡಾ| ಬಿ.ಸಿ.ರಾಯ್ ಪ್ರಶಸ್ತಿ, ಡಾ| ಕೆ.ಶಿವರಾಮಕಾರಂತ ಪ್ರಶಸ್ತಿ ಇತ್ಯಾದಿ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ನನ್ನ ಅನೇಕ ಪುಸ್ತಕಗಳೂ ನಾಡಿನ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿವೆ. ಮನೆ ಮನಸ್ಸು (ಸುಧಾ ಕಾದಂಬರಿ ವಿಶೇಷ ಬಹುಮಾನ), ನಾವು ಬಳಸುವ ಔಷಧಗಳು (ಡಾ| ಪಿಎಸ್ ಶಂಕರ ಶ್ರೇಷ್ಠ ವೈದ್ಯಸಾಹಿತ್ಯ ಪ್ರಶಸ್ತಿ) ಬುದ್ಧಿಮಾಂದ್ಯತೆ- ಕಾರಣ ಪರಿಹಾರ ಡಾ|| ಎಸ್.ಎಸ್. ಜಯರಾಂ ಪ್ರಶಸ್ತಿ) ಮಗು ಮನಸ್ಸು ಮತ್ತು ಆರೋಗ್ಯ ಹಾಗೂ ನಮ್ಮ ಅಸಹಜ ನಡೆವಳಿಕೆಗಳಿಗೆ ಕಾರಣ ಮತ್ತು ಪರಿಹಾರ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ) ಇತ್ಯಾದಿ.

ಪ್ರಾರಂಭದಲ್ಲಿ ನನ್ನ ಕೆಲವು ಲೇಖನಗಳು ಸಂಪಾದಕರ ವಿಷಾದ ಪತ್ರದೊಂದಿಗೆ ವಾಪಸ್ಸಾಗುತ್ತಿದ್ದವು ಅಥವಾ ಕಳುಹಿಸಿದ ಲೇಖನ ಏನಾಯಿತೆಂದು ಗೊತ್ತಾಗುತ್ತಲೇ ಇರಲಿಲ್ಲ. ಇತ್ತೀಚಿಗೆ ‘ನಿಮ್ಮ ಯಾವುದೇ ಲೇಖನವಿದ್ದರೆ ಪ್ರಕಟಣೆಗಾಗಿ ಕಳುಹಿಸಿಕೊಡಿ’ ಎಂಬ ಸಂಪಾದಕರ ಪತ್ರಗಳು ಬರುತ್ತಿವೆ. ಪುಸ್ತಕ ಪ್ರಕಟಣೆಗೆ ಹಲವಾರು ತಿಂಗಳುಗಳು, ಒಂದೆರಡು ವರ್ಷ ಕಾದಿದ್ದುಂಟು. ಈಗ ‘ನಮಗೊಂದು ಪುಸ್ತಕ ಬರೆದುಕೊಡುವಿರಾ’ ಎಂದು ಪ್ರಕಾಶಕರು ಕೇಳುತ್ತಾರೆ. ಕರ್ನಾಟಕದ ಯಾವುದೇ ಊರಿಂದ ಪತ್ರಗಳು ಬರುತ್ತವೆ. ‘ನಿಮ್ಮ ಲೇಖನ ಓದಿದ್ದೇನೆ. ನಿಮ್ಮ ಪುಸ್ತಕ ಓದಿದ್ದೇವೆ ನಿಮ್ಮ ಅಂಕಣದಲ್ಲಿ ನಿಮ್ಮ ಉತ್ತರಗಳನ್ನು ಗಮನಿಸಿದ್ದೇವೆ. ನಮಗೊಂದು ಸಮಸ್ಯೆ ಇದೆ. ಉತ್ತರಿಸುತ್ತೀರಾ’ ಎಂದು ಕೇಳುತ್ತಾರೆ. ತಿಂಗಳಿಗೆ ನೂರರಿಂದ ಇನ್ನೂರು ಪತ್ರಗಳು ಬರುತ್ತವೆ. ಉಪನ್ಯಾಸ, ಸಂವಾದ, ಕಾರ್ಯಾಗಾರಗಳನ್ನು ನಡೆಸಲು ಹೋದಾಗ ಹತ್ತಾರು ಪುಸ್ತಕಗಳನ್ನು ಜನ ಮುಗಿ ಬಿದ್ದುಕೊಂಡುಕೊಳ್ಳುತ್ತಾರೆ.

ಜನರಲ್ಲಿ ಪುಸ್ತಕ ಪ್ರೀತಿ ಇನ್ನೂ ಉಳಿದಿದೆ. ಓದುವ ಹವ್ಯಾಸ ಜೀವಂತವಾಗಿದೆ ಎಂಬುದನ್ನು ಕಂಡಾಗ ಸಂತೋಷವಾಗುತ್ತದೆ. ವೈದ್ಯವಿಷಯಗಳನ್ನು ಜನಸಾಮಾನ್ಯರಿಗೆ ಉಣಬಡಿಸುವ ಈ ಬರವಣಿಗೆ ಸಾಹಿತ್ಯವೇ ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಬರವಣಿಗೆಯಲ್ಲಿ ವೈಜ್ಞಾನಿಕ ಮತ್ತು ಉಪಯುಕ್ತ ಮಾಹಿತಿ ಇರುವುದೇನೋ ಸರಿ. ಆದರೆ ಸಾಹಿತ್ಯ ಅಂಶಗಳಿವೆಯೇ ಅಥವಾ ಇರಬೇಕೆ ಎಂಬುದರಲ್ಲಿ ಕೆಲವು ಭಿನ್ನ ಅಭಿಪ್ರಾಯಗಳಿವೆ. ಜನರಿಗೆ ಹಿತವನ್ನು ಕೊಡುವ ಬರವಣಿಗೆಯಲ್ಲಾ ಸಾಹಿತ್ಯವೇ ಅಲ್ಲವೇ? ವೈದ್ಯಸಾಹಿತ್ಯ ಪಠ್ಯಪುಸ್ತಕ ರೂಪದಲ್ಲಿರುವುದಿಲ್ಲ. ಜನಪ್ರಿಯ ವಿಜ್ಞಾನ ಶೈಲಿಯಲ್ಲಿರುತ್ತದೆ. ಜನರಿಗೆ ಅವರಿಗೆ ತಿಳಿಯುವ ಭಾಷೆಯಲ್ಲಿ ಆರೋಗ್ಯ ಅನಾರೋಗ್ಯ ವಿಚಾರಗಳನ್ನು ತಿಳಿಸುವ ಈ ಬರವಣಿಗೆ ಅತ್ಯುಪಯುಕ್ತವೆಂಬುದರಲ್ಲಿ ಸಂದೇಹವಿಲ್ಲ. ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಪ್ರಶಸ್ತಿ ಪುರಸ್ಕಾರ ನೀಡುವ ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಜ್ಞಾನ ಸಾಹಿತ್ಯವನ್ನು ವಿಶೇಷವಾಗಿ ಪರಿಗಣಿಸಿರುವುದು ಗಮನಾರ್ಹ. ವಿಜ್ಞಾನ ಸಾಹಿತ್ಯದಲ್ಲಿ ಆರೋಗ್ಯ/ವೈದ್ಯ ಸಾಹಿತ್ಯದ್ದೆ ಸಿಂಹಪಾಲು. ವೈದ್ಯಸಾಹಿತ್ಯಕ್ಕೆ ವಿಶೇಷ ಸ್ಥಾನ ಮಾನ ಸಿಗಲಿ ಎಂಬುದೇ ನನ್ನ ಹಾರೈಕೆ. ನನ್ನ ವೈದ್ಯಸಾಹಿತ್ಯ ಸೃಷ್ಟಿಗೆ ಸ್ಫೂರ್ತಿಯಾದ ಖ್ಯಾತ ಲೇಖಕರಾದ ಶ್ರೀಮತಿ ತ್ರಿವೇಣಿ, ದಿ| ಎಂ ಶಿವರಾಂ (ರಾಶಿ), ಡಾ| ಡಿ.ಎಸ್. ಶಿವಪ್ಪ, ಅಸಂಖ್ಯಾತ ಮನೋರೋಗಿಗಳು, ನಾಡಿನ ಎಲ್ಲ ಪತ್ರಿಕಾ ಸಂಪಾದಕರು, ಹಲವಾರು ಪ್ರಕಾಶಕರು ಮತ್ತು ಓದುಗ ಬಂಧುಗಳಿಗೆ ನಾನು ಋಣಿ.

ಪರಿಚಯ

ನಾಡಿನ ಹಿರಿಯ ಮನೋವೈದ್ಯರಾದ ಡಾ|| ಸಿ.ಆರ್.ಸಿ. ಅವರು ತಮ್ಮ ೧೦೦೦ ಲೇಖನಗಳಿಂದ ೧೪೦ ಪುಸ್ತಕಗಳಿಂದ, ಬಾನುಲಿ ಮತ್ತು ದೂರದರ್ಶಕನಗಳ ಮೂಲಕ ನೀಡುವ ಉಪನ್ಯಾಸಗಳಿಂದ ಕನ್ನಡ ವೈದ್ಯ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ವೈದ್ಯ ಸಾಹಿತ್ಯದ ಮುಖಾಂತರ ಆರೋಗ್ಯದ ಅರಿವನ್ನು ಹೆಚ್ಚಿಸಿರುವುದಲ್ಲದೆ, ಜನರಲ್ಲಿರುವ ನೂರಾರು ಮೂಢನಂಬಿಕೆ ಕಂದಾಚಾರಗಳನ್ನು ತಗ್ಗಿಸಿದ್ದಾರೆ ಮಾನಸಿಕ ರೋಗಿಗಳ ಬಗ್ಗೆ ಇರುವ ಸಾಮಾಜಿಕ ಕಳಂಕವನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ೪೦ಕ್ಕೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದಾರೆ. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸ್ಥಾಪಕ ಸದಸ್ಯರಗಿ ಸೇವೆ ಸಲ್ಲಿಸಿದ್ದಾರೆ. ಶೇಕಡಾ ೭೫ ರಷ್ಟು ಪುಸ್ತಕಗಳು ಹಲವು ಸಲ ಮರು ಮುದ್ರಣಗೊಂಡು ಜನಪ್ರಿಯಗೊಂಡಿದೆ.

* * *