ಬಲಹೀನತೆಯನ್ನು ಆಂಗ್ಲಭಾಷೆಯಲ್ಲಿ ಡಿಸೆಬಿಲಿಟಿ ಎನ್ನುತ್ತಾರೆ. ಈ ಪದಕ್ಕೆ ದೌರ್ಬಲ್ಯ, ಹೆಳವತನ, ನಿತ್ರಾಣ, ಅಶಕ್ತತೆ ಎಂಬ ಅನೇಕ ಪರ್ಯಾಯ ಹೆಸರುಗಳಿವೆ.

ರೋಗಗಳಿಂದ, ಅಪಘಾತಗಳಿಂದ ಅಥವಾ ಹುಟ್ಟಿನಿಂದ ಬರುವ ಬಲಹೀನತೆಯು ಸಾಮಾನ್ಯವಾಗಿ ಊನತ್ವದಿಂದಾಗುತ್ತದೆ. ಸಾಮಾನ್ಯ ಮನುಷ್ಯರಿಗೆ ಹೋಲಿಸಿದಾಗ ಈ ತೊಂದರೆಗೊಳಗಾಗದ ವ್ಯಕ್ತಿಯು ಅವನ ವಯಸ್ಸು ಮತ್ತು ಲಿಂಗಕ್ಕನುಗುಣವಾಗಿ ಕೆಲವು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥನಾಗುತ್ತಾನೆ. ಈ ಸ್ಥಿತಿಗೆ ಬಲಹೀನತೆ ಎನ್ನುತ್ತೇವೆ. ಇದು ರೋಗದಿಂದ ನರಳಿದ ನಂತರ ಅಥವಾ ಅಪಘಾತದ ನಂತರ ತಲೆದೋರುವ ನಿಧಾನವಾದ ಹಂತ. ಉದಾಹರಣೆಗೆ, ಸರಿಯಾಗಿ ನಡೆಯಲಾಗದಿರುವುದು, ಅಸಹ್ಯ ನಡಿಗೆ, ಮೂಗತನ ಮತ್ತು ಕಿವುಡತನದಿಂದ ಇತರರೊಡನೆ ವ್ಯವಹರಿಸುವುದು. ದೈನಂದಿನ ಕೆಲಸಗಳಾದ ಸ್ನಾನ ಮಾಡುವುದು ಉಡುಪು ಧರಿಸುವುದು, ಊಟ ಮಾಡಲಾಗದಿರುವುದು ಅಂಧತ್ವದಿಂದ ಓಡಾಡಲು ತೊಂದರೆ, ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಲಾಗದಿರುವುದು ಮುಂತಾದವುಗಳನ್ನು ಇವರಲ್ಲಿ ಕಾಣಬಹುದು.

. ಊನತ್ವ (ಇಂಪ್ಲಿಮೆಂಟೇಶನ್) : ಅಂಗಾಂಗಗಳ ರಚನೆ, ಕ್ರಿಯೆ ಅಥವಾ ಮಾನಸಿಕ ಕ್ರಿಯೆಯಲ್ಲಿ ತೊಂದರೆಯುಂಟಾದರೆ ಅಥವಾ ಹದಗೆಟ್ಟರೆ, ಅಸಹಜತೆ ಇದ್ದರೆ, ಅಸ್ವಾಭಾವಿಕವಾಗಿದ್ದರೆ ಅದನ್ನು ಊನತ್ವ ಎನ್ನುತ್ತೇವೆ.

ಇದು ಒಂದು ಅಂಗದ ವ್ಯತ್ಯಯವನ್ನು ನಿರೂಪಿಸುತ್ತದೆ. ಉದಾಹರಣೆಗೆ ಕಾಲು, ಕೈ ಅಥವಾ ಅದರ ಭಾಗಗಳು ಊನತ್ವಕ್ಕೆ ಸಿಲುಕಿ ಉಪಯೋಗಕ್ಕೆ ಬರದಿರುವುದು. ಮೋತಿಬಿಂದು (ಕ್ಯಾಟರಾಕ್ಟ್) ವಿನಿಂದ ದೃಷ್ಟಿಯಿಂದ ವ್ಯತ್ಯಯ ಉಂಟಾಗುವುದು. ಕೀಲುಗಳ ಬಿರುಸು, ಬುದ್ಧಿಮಾಂದ್ಯತೆ ಮುಂತಾದವುಗಳು ಊನತ್ವದ ಹೊರನೋಟಕ್ಕೆ ಕಾಣುವಂತಿರಬಹುದು ಅಥವಾ ಕಾಣದಿರಬಹುದು. ಅದು ತಾತ್ಕಾಲಿಕ ಅಥವಾ ಶಾಶ್ವತ ಊನತ್ವವಾಗಿರಬಹುದು. ಒಂದು ಊನತ್ವವು ಮತ್ತೊಂದು ಊನತ್ವಕ್ಕೆ ಎಡೆಮಾಡಿಕೊಡಬಹುದು. ಉದಾಹರಣೆಗೆ ಕುಷ್ಠರೋಗಿಗಳಲ್ಲಿ ನರಗಳ ಕ್ರಿಯೆಯು ಕುಂದಿ, ಪಾದದ ಗಾಯಕ್ಕೆ ಎಡೆ ಮಾಡಿಕೊಡಬಹುದು. ಇದು ಪ್ರಾರಂಭದ ಹಂತ. ಇದಕ್ಕೆ ವೈದ್ಯಕೀಯ ಚಿಕಿತ್ಸೆ ಅತ್ಯವಶ್ಯಕ.

. ಪ್ರತಿಕೂಲತೆ (ಹ್ಯಾಂಡಿಕ್ಯಾಪ್) : ಬಲಹೀನತೆ ಕಾರಣದಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಕೆಲವು ಪ್ರತಿಕೂಲಗಳನ್ನು ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಅವನು ನಿರ್ವಹಿಸಬೇಕಾದ ಕಡ್ಡಾಯವಾದ ಕೆಲಸಗಳನ್ನು ಮಾಡಲು ಅಸಮರ್ಥನಾಗಿರುತ್ತಾನೆ. ಅವನ ವಯಸ್ಸು ಮತ್ತೆ ಲಿಂಗಕ್ಕೆ ಅನುಗುಣವಾಗಿ ಸಮಾಜಕ್ಕೆ ಮತ್ತು ಸಂಸ್ಕೃತಿಗೆ ತಕ್ಕಂತಹ ಪಾತ್ರ ನಿರ್ವಹಿಸಲು ಅವನ ಊನತ್ವ ಅಥವಾ ಬಲಹೀನತೆಯು ಅಡಚಣೆಯನ್ನುಂಟು ಮಾಡುತ್ತದೆ ಅಥವಾ ಪ್ರತಿಬಿಂಬಿಸುತ್ತದೆ. ಈ ಸ್ಥಿತಿಯನ್ನು ಪ್ರತಿಕೂಲತೆ ಎನ್ನುತ್ತೇವೆ.

೧. ನೆಲೆಯು ಹಿತದಲ್ಲಿರುವುದು (ಒರಿಜಿನೇಶನ್ ಹ್ಯಾಂಡಿಕ್ಯಾಪ್) : ಈ ತೊಂದರೆ ಇರುವ ವ್ಯಕ್ತಿಗೆ ತನ್ನ ಪರಿಸರ ನೆಲೆಯ ಹಿಡಿತ ತಪ್ಪುತ್ತದೆ. ಆದುದರಿಂದ ಇತರರೊಂದಿಗೆ ವ್ಯವಹರಿಸುವುದು ತೊಂದರೆಯಾಗುತ್ತದೆ.

೨. ಪರಾವಲಂಬಿತನ (ಫಿಸಿಕಲ್ ಇಂಡಿಪೆಂಡೆನ್ಸ್ ಹ್ಯಾಂಡಿಕ್ಯಾಪ್) : ಈ ವ್ಯಕ್ತಿಯು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಬೇರೆಯವರ ಮೇಲೆ ಅವಲಂಬಿಸಬೇಕಾಗುತ್ತದೆ.

೩. ವೃತ್ತಿಯ ಪ್ರತಿಕೂಲತೆ (ಆಕ್ಯುಲೇಶನಲ್ ಹ್ಯಾಂಡಿಕ್ಯಾಪ್) : ವ್ಯಕ್ತಿಯು ದೈಹಿಕ ಅಥವಾ ಮಾನಸಿಕ ತೊಂದರೆಗಳಿಂದ ವೃತ್ತಿಯಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಮನೆಯ ಚಟುವಟಿಕೆಗಳಲ್ಲಿ ಮನರಂಜನೆಗಳಲ್ಲಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಲಾಗುವುದಿಲ್ಲ.

೪. ಸಂಪರ್ಕದ ತೊಂದರೆ (ಸೋಷಿಯಲ್ ಇಂಟಿಗ್ರೇಷನ್ ಹ್ಯಾಂಡಿಕ್ಯಾಪ್) : ಸಮಾಜದ ಇತರರೊಡನೆ ಬೆರೆಯಲು ವ್ಯವಹರಿಸಿ ತೊಂದರೆಯಾಗುತ್ತದೆ.

೫. ಆರ್ಥಿಕ ತೊಂದರೆ (ಎಕನಾಮಿಕನ್‌ಸೆಲ್ಫ್‌ಸಫಿಶಿಯೆನ್ಸಿ ಹ್ಯಾಂಡಿಕ್ಯಾಪ್) : ದುಡಿಯಲಾಗದಿದ್ದರೆ ಅಥವಾ ಊನತ್ವದಿಂದ ಕಡಿಮೆ ವರಮಾನ ಬಂದರೆ ಅವನ ದುಡಿಮೆಯು ಅವನಿಗೇ ಸಾಕಾಗದಿರಬಹುದು. ಕಾರಣ ಕುಟುಂಬ ವರ್ಗದವರ ಲಾಲನೆ ಪಾಲನೆಗೆ ಹಣದ ಕೊರತೆಯುಂಟಾಗುತ್ತದೆ.

ಬಲಹೀನತೆಯ ಪ್ರತಿಬಂಧಕ ಕ್ರಮ (ಡಿಸೆಬಿಲಿಟಿ ಪ್ರಿವೆನ್ಷನ್)

ಬಲಹೀನತೆ ಅಥವಾ ದೌರ್ಬಲ್ಯದ ಪ್ರತಿಬಂಧಕವೆಂದರೆ, ಊನತ್ವವನ್ನು ತಡೆಗಟ್ಟಲು ಬಳಸುವ ಮಾರ್ಗಗಳು ಅಥವಾ ಊನತ್ವವು ದೌರ್ಬಲ್ಯ ಹಂತವನ್ನು ತಲುಪದಂತೆ ಎಚ್ಚರ ವಹಿಸುವುದು ಅಥವಾ ದೌರ್ಬಲ್ಯವನ್ನು ಕೊನೆಗಾಣಿಸಿ ಪುನಶ್ಚೇತನಗೊಳಿಸುವ ಮತ್ತು ಊನತ್ವವು ಪ್ರತಿಕೂಲವನ್ನು ಉಂಟು ಮಾಡುವುದನ್ನು ತಡೆಗಟ್ಟಲು ಅನುಸರಿಸುವ ವಿಧಾನಗಳಿಗೆ ದೌರ್ಬಲ್ಯ ಪ್ರತಿಬಂಧಕಗಳೆನ್ನುತ್ತೇವೆ. ಇದರಡಿ ಆರೋಗ್ಯಕರ ಮಾರ್ಗಗಳ ಅನುಸರಣೆ, ಸಾಮಾಜಿಕ ವೃತ್ತಿ ಸಮಬಂಧಿತ ಶೈಕ್ಷಣಿಕ ಹಾಗೂ ಕಾನೂನು ಕ್ರಮಗಳಲ್ಲದೆ ಇನ್ನೂ ಅನೇಕ ಮಾರ್ಗಗಳು ಅಡಕವಾಗಿವೆ. ಈ ಎಲ್ಲ ಕ್ರಮಗಳ ಮಿಶ್ರಣ ಮಾರ್ಗಗಳು ಉತ್ತಮ ಫಲಿತಾಂಶವನ್ನು ಕೊಡುತ್ತವೆ. ಅವುಗಳಲ್ಲಿ ಮುಖ್ಯವಾದವು :

೧. ವ್ಯಕ್ತಿ ಸಂಬಂಧಿತ ಮಾರ್ಗಗಳ ನೇರ ಬಳಕೆ.

೨. ವ್ಯಕ್ತಿ ಸಂಬಂಧಿಸಿದ ಅತ್ಯಂತ ಸಮಿಪದ ಪರಿಸರಕ್ಕೆ ಸಂಬಂಧಿಸಿದ ಮಾರ್ಗೋಪಾಯಗಳು. ಉದಾಹರಣೆಗೆ ಕುಟುಂಬ, ಸಮುದಾಯ ಉದ್ಯೋಗದ ವೇಳಾ ನಿಯಮ, ಉದ್ಯೋಗಪತಿಗಳ ನಡವಳಿಕೆ ಮುಂತಾದವು.

೩. ಸಮಾಜದಲ್ಲಿ ಒದಗಬಹುದಾದ ಒತ್ತಡಭರಿತ ಕಾರಣಗಳಿಗೆ ಸಂಬಂಧಿಸಿದ ಕ್ರಮಗಳ ಅನುಸರಣೆಗಳು ಪ್ರಧಾನವಾದವುಗಳು. ಇವುಗಳನ್ನು ೩ನೇ ಹಂತದಲ್ಲಿ ಅನುಸರಿಸಬಹುದು. ಈ ಸಂದರ್ಭದಲ್ಲಿ ಎಲ್ಲಾ ಹಂತಗಳನ್ನು ಬಳಸಬಹುದು.

. ಪ್ರಾಥಮಿಕ ಪ್ರತಿಬಂಧಕ ಕ್ರಮಗಳು :

ಪ್ರಾರಂಭದ ಹಂತದಲ್ಲಿ ಪ್ರತಿಬಂಧಕ ಕ್ರಮಗಳನ್ನು ಅಳವಡಿಸಿ, ಊನತ್ವವನ್ನು ಪ್ರತಿಬಂಧಿಸಬಹುದು. ಉದಾ : ಪೋಲಿಯೋ ಲಸಿಕೆ ನೀಡುವುದರಿಂದ ಪೋಲಿಯೋ ರೋಗವನ್ನು ತಡೆಗಟ್ಟಿ ಅದರ ಊನತ್ವದಿಂದ ತಪ್ಪಿಸಿಕೊಳ್ಳಬಹುದು. ಈ ಹಂತದಲ್ಲಿ ಸಾಮಾಜಿಕ ಅಥವಾ ಪರಿಸರ ಸಂರಕ್ಷಣೆ ಅತ್ಯವಶ್ಯಕ. ಸಾಮಾನ್ಯ ಶಿಕ್ಷಣ, ಆರೋಗ್ಯ ಶಿಕ್ಷಣ, ಸ್ವಚ್ಛತೆ, ನೈರ್ಮಲ್ಯ, ಲಸಿಕೆಗಳು, ಉದ್ಯೋಗ ಮತ್ತು ಅಪಘಾತದ ಕುಂದು ಕೊರತೆಗಳ ಬಗ್ಗೆ ಇರುವ ಕಾನೂನು ಮಾರ್ಗಗಳು ಉದ್ಯೋಗದಲ್ಲಿ ಬಳಸುವ ಸಂರಕ್ಷಣಾ ಕ್ರಮಗಳು. ಆಹಾರದಲ್ಲಿಯ ಸುಧಾರಣಾ ಕ್ರಮಗಳು, ಆರೋಗ್ಯ ರಕ್ಷಣಾ ಕ್ರಮಗಳ ಬಳಕೆಗಳಿಂದ ಊನತ್ವವನ್ನು ತಪ್ಪಿಸಬಹುದು.

. ದ್ವಿತೀಯ ಪ್ರತಿಬಂಧಕ ಕ್ರಮಗಳು :

ಇದರಡಿ ಶೀಘ್ರ ರೋಗಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆಗಳು ಬರುತ್ತವೆ. ಅದರಲ್ಲೂ ಉದ್ಯೋಗ ಸಂಬಂಧಿತ ರೋಗಗಳ ಪತ್ತೆ, ವ್ಯಾಯಾಮ, ತೊಂದರೆ ಗಳಾಗದ ಅಂಗಗಳ ಶೀಘ್ರ ಬಳಕೆ, ಅಪಘಾತವನ್ನುಂಟು ಮಾಡಬಹುದಾದಂತಹ ವಸ್ತುಗಳ ಸಂಪರ್ಕ ಹೆಚ್ಚು ಕಾಲ ಆಗದಂತೆ ಕಟ್ಟೆಚ್ಚರ ವಹಿಸುವುದು, ವೃತ್ತಿಶಿಕ್ಷಣ, ವ್ಯಕ್ತಿಯ ಸಾಮರ್ಥ್ಯಕ್ಕನುಗುಣವಾದ ಕೆಲಸವನ್ನು ಕೊಡುವುದು, ಅತ್ಯಂತ ಸಮಂಜಸ  ಬಲಹೀನತೆಯನ್ನು ತಡೆಯುವುದು ಈ ಹಂತದ ಬೀಜ ಮಂತ್ರ.

. ತೃತೀಯ ಪ್ರತಿಬಂಧಕ ಕ್ರಮಗಳು :

ಇದರಲ್ಲಿ ಚಿಕಿತ್ಸಾ ಕ್ರಮಗಳು ಪ್ರಧಾನ ಪಾತ್ರ ವಹಿಸುತ್ತವೆ. ಪರಿಸ್ಥಿತಿಗೆ ಅನುಗುಣವಾಗಿ ಭೌತಿಕ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ವೃತ್ತಿ ಸಂಬಂಧಿತ ಚಿಕಿತ್ಸೆ, ವಾಕ್ ಶ್ರವಣ ಚಿಕಿತ್ಸೆಗಳನ್ನು ಮಾಡಬೇಕಾಗುತ್ತದೆ. ಮರು ಹೊಂದಾಣಿಕೆಯ ಕ್ರಮ ಈ ಹಂತದ ಕೇಂದ್ರಬಿಂದು.

. ಮರು ಹೊಂದಾಣಿಕೆ : (ರಿಹ್ಯಾಬಿಲಿಟೇಶನ್)

ಉತ್ಪನ್ನ ಶೂನ್ಯರನ್ನು ಉಪ್ಪನ್ನ ಶೂರರನ್ನಾಗಿಸುವುದೇ ಇದರ ಮೂಲಾಧಾರ. ಇವರ ಸಾಧನೆಗೆ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ವೃತ್ತಿಯಲ್ಲಿಯ ಮರು ಹೊಂದಾಣಿಕೆಗಳ ಮಿಶ್ರಣ ಮತ್ತು ಅವುಗಳ ಪರಸ್ಪರ ಬಳಕೆ, ತರಬೇತಿ ಮತ್ತು ಮರು ತರಬೇತಿಗಳ ಸಹಾಯದಿಂದ ವ್ಯಕ್ತಿಯು ತನ್ನಲ್ಲಿ ಉಳಿದಿರುವ ಶಕ್ತಿ ಸಾಮರ್ಥ್ಯಗಳ ಆಧಾರದ ಮೇಲೆ ಆದಷ್ಟೂ ಗರಿಷ್ಠ ಮಟ್ಟದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಕೆಲಸ ನಿರ್ವಹಿಸಲು ಸಾಧ್ಯವಾಗುವಂತಿದ್ದರೆ ಆ ವ್ಯಕ್ತಿಗೆ ಸೂಕ್ತ ಕೆಲಸ ನೀಡಿ, ನಂತರ ವೃತ್ತಿ ತರಬೇತಿ ಮತ್ತು ಮರು ತರಬೇತಿ ನೀಡಬೇಕಾಗುತ್ತದೆ. ತಾಂತ್ರಿಕ ನೆರವು ಔದ್ಯೋಗಿಕ ಪರಿಸರದ ನ್ಯೂನತೆಗಳ ನಿವಾರಣೆ, ಭೌತಿಕ ಕುಂದುಕೊರತೆಗಳ ನಿವಾರಣೆ, ಸಾಮಾಜಿಕ ಮತ್ತು ಔದ್ಯೋಗಿಕ ಪರಿಸರದ ನ್ಯೂನತೆಗಳ ನಿವಾರಣೆ, ಭೌತಿಕ ಕುಂದುಕೊರತೆಗಳ ನಿವಾರಣೆ, ಸಾಮಾಜಿಕ ಮತ್ತು ಔದ್ಯೋಗಿಕ ಶಿಕ್ಷಣ ಮತ್ತು ಸಹಾಯ, ತೊಂದರೆಗೊಳಗಾಗಿರುವ ವ್ಯಕ್ತಿಯ ಜೊತೆ ಸಮಾಜ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ಮತ್ತು ವ್ಯಕ್ತಿಯು ಸಮಾಜದ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಶಿಕ್ಷಣ ಅತಿ ಮುಖ್ಯ.

ವ್ಯಕ್ತಿಯು ಯಾವ ಕೆಲಸವನ್ನು ಮಾಡಲೂ ಸಮರ್ಥನಾಗಿಲ್ಲದಿದ್ದರೆ, ಅವನು ತನ್ನ ಕೆಲಸವನ್ನು ತಾನೇ ಮಾಡಿಕೊಂಡು ಇತರರ ಮೇಲೆ ಅವಲಂಬಿತನಾಗದಂತೆ ತರಬೇತಿ ನೀಡಬೇಕು. ಸ್ವತಂತ್ರವಾಗಿ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅವನಿಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಕುಟುಂಬ, ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ಏಕೆಂದರೆ ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುವ ನಾಗರಿಕರು ಸರ್ಕಾರದ ಆಸ್ತಿ, ಅವರಿಗೆ ವ್ಯವಸ್ಥೆ ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ.

ಬಲಹೀನತೆಯು ಪ್ರತಿಕೂಲತೆಯ ಹಂತವನ್ನು ತಲುಪದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದುದು. ಊನತ್ವ ಮತ್ತೆ ಬಲಹೀನತೆಯನ್ನು ಪ್ರತಿಬಂಧಿಸಿ ವಿಕಲತೆಯನ್ನು ತಪ್ಪಿಸಿ, ಅವರೂ ಸಹ ಸಮಾಜದಲ್ಲಿ ಇತರರಂತೆ ಬಾಳಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಏಕೆಂದರೆ ಅವರಿಗೂ ಅರ್ಹತೆ ಇದೆ ಹಾಗೂ ಅದು ಅವರ ಹಕ್ಕು.

ವೈದ್ಯಸಾಹಿತಿಯಾಗಿನನ್ನಅನುಭವ
ಸುಲಭದ ಆತ್ಮಹತ್ಯೆಯ ಮಾರ್ಗ ತಿಳಿಸಿ
ಡಾ| ಬಿ.ಜಿ. ಚಂದ್ರಶೇಖರ್ಪ್ರಾಧ್ಯಾಪಕರು, ಸಮುದಾಯ ವೈದ್ಯಶಾಸ್ತ್ರವಿಭಾಗ
ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು, ತುಮಕೂರು. 

‘ನರಳ್ತಾ ನರಳ್ತಾ ರೋಗ, ಹಾಡ್ತ ಹಾಡ್ತ ರೋಗ’ಎಂಬಂತೆ ‘ಬರೀತ ಬರೀತ ಬರವಣಿಗೆ ಸರಾಗ’ ಎಂದರೆ ತಪ್ಪಾಗಲಾರದು.

ಪ್ರಾರಂಭದ ತೊಂದರೆಗಳು : ನಾನು ೩ನೇ ವರ್ಷದ ಎಂ.ಬಿ.ಬಿ.ಎಸ್. ಓದುತ್ತಿದ್ದಾಗ ವೈದ್ಯಕೀಯ ಲೇಖನಗಳನ್ನು ಬರೆಯಲು ಪ್ರಾರಂಭಿಸಿದೆ. ಅದು ಸಿದ್ಧಗಂಗಾ ಮತ್ತು ಜೆ.ಎಸ್.ಎಸ್. ಮಠ ಪ್ರಸಾದ ಎಂಬ ತ್ರೈಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಬರೆಯಲು ಪ್ರಾರಂಭಿಸಿದಾಗ ಅತಿ ಕಷ್ಟವೆನ್ನಿಸಿತು. ಸರಿಯಾದ ಪದಗಳು ಸಿಗುತ್ತಿರಲಿಲ್ಲ. ಪ್ರಾಸಬದ್ಧವಾಗಿರುತ್ತಿರಲಿಲ್ಲ.

ವಾಕ್ಯಗಳು ಸ್ಪಷ್ಟವಾಗಿಲ್ಲದೆ ಸರಿಯಾದ ಅರ್ಥ ಬರುತ್ತಿರಲಿಲ್ಲ. ಒಂದು ಪುಟ ಬರೆಯುವುದು ಒಂದು ಕಾದಂಬರಿ ಬರೆದಂತಾಗುತ್ತಿತ್ತು. ಈಗ ಒಂದು ಪುಟ ಬರೆಯಲು ಕುಳಿತರೆ ಒಂದು ಕಾದಂಬರಿಯಷ್ಟಾಗುತ್ತದೆ. ಆಗ ಯಾವ ವಿಷಯಗಳ ಮೇಲೆ ಬರೆಯುವುದು ಎಂಬ ಗೊಂದಲ. ಓದುಗರು ಮೆಚ್ಚುತ್ತಾರೆಯೇ ಇಲ್ಲವೋ ಎಂಬ ಅನುಮಾನ. ಪ್ರಕಟಿಸುತ್ತಾರೆಯೋ ಇಲ್ಲವೋ ಎಂಬ ಭಯ ಕಾಡುತ್ತಿತ್ತು.

ವೈದ್ಯಸಾಹಿತ್ಯ ರಚನೆ ಕಷ್ಟವಲ್ಲವೇ. ಏಕೆಂದರೆ ಕನ್ನಡದಲ್ಲಿ ಒಳ್ಳೆಯ ಆಕರ ಗ್ರಂಥಗಳು ಲಭ್ಯವಿಲ್ಲ. ಸಿಕ್ಕರೂ ಅವು ಆಂಗ್ಲಭಾಷೆಯಲ್ಲಿರುತ್ತವೆ. ಅದರ ವಿವರವು ನಮ್ಮ ರಾಷ್ಟ್ರಕ್ಕೆ ಹೊಂದಿಕೊಳ್ಳುವುದು ಕಡಿಮೆ. ಹೊಂದಿಕೊಂಡರೂ ಅದನ್ನೇ ಭಾಷಾಂತರಿಸಲು ಆಂಗ್ಲ ತಾಂತ್ರಿಕ ಪದಗಳಿಗೆ ಸರಿಯಾದ ಅರ್ಥ ಸೂಚಿಸುವ ಇಂಗ್ಲಿಷ್ ಕನ್ನಡ ನಿಘಂಟಿರಲಿಲ್ಲ. ಆದಕಾರಣ ಒಂದೇ ಪದಕ್ಕೆ ೧೦ ಜನ ೧೦ ಅರ್ಥಗಳನ್ನು ಬರೆಯುತ್ತಿದ್ದರು. ಅದರಲ್ಲಿ ಯಾವುದು ತಪ್ಪು ಯಾವುದು ಸರಿ ಎಂದು ನಿರ್ಧರಿಸಲು ಕಷ್ಟವಾಗುತ್ತಿತ್ತು. ಒಂದು ಇಂಗ್ಲಿಷ್ ಪದಕ್ಕೆ ಒಬ್ಬೊಬ್ಬರು ಬೇರೆ ಬೇರೆ ಕನ್ನಡ ಪದಗಳನ್ನು ಬಳಸುವುದರಿಂದ ಓದುಗರಲ್ಲಿ ದ್ವಂದ್ವ ಉಂಟಾಗುತ್ತದೆ.

ಪ್ರಾರಂಭದ ಶೈಲಿ : ಸಾಧಾರಣ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದೆ. ಕೆಲವರು ಅದನ್ನು ಕಳಪೆ ಸಾಹಿತ್ಯ ಎನ್ನಲಾರಂಭಿಸಿದರು. ಬರೆಯುತ್ತಾ ಬರೆಯುತ್ತಾ, ಭಾಷೆ ಉತ್ತಮವಾಗತೊಡಗಿತು. ಭಾಷಾಸಂಪತ್ತಿನಿಂದ ಕೂಡಿರುತ್ತಿತ್ತು. ಅದನ್ನು ಪಂಡಿತ ಭಾಷೆ ಎನ್ನಲಾರಂಭಿಸಿದರು. ಇದು ಕೇವಲ ಪಂಡಿತರಿಗೆ, ಜನಸಾಮಾನ್ಯರಿಗಲ್ಲ ಎನ್ನತೊಡಗಿದರು.

ಯಾವುದೇ ಲೇಖನವನ್ನು ಒಂದು ಗುಂಪಿನ ಜನಗಳಿಗೆ ಮಾತ್ರ ಬರೆಯಲಾಗುವುದಿಲ್ಲ ಅಲ್ಲವೆ? ಲೇಖನವು ಪ್ರಕಟವಾದಾಗ ಅದು ಎಲ್ಲಾ ಪ್ರಾಂತ್ಯಗಳ ಎಲ್ಲಾ ಬಗೆಯ ಜನಗಳು ವಿವಿಧ ಜ್ಞಾನ ಮಟ್ಟದ ಜನಗಳನ್ನು ತಲುಪುತ್ತದೆ. ಆದಕಾರಣ ಸಮಾಜದ ಅನೇಕ ಜನಗಳಿಗೆ ಅರ್ಥವಾಗುವಂತೆ ಬರೆಯಬೇಕಾದುದು ಲೇಖಕನ ಕರ್ತವ್ಯವಲ್ಲವೇ?

ಶೀರ್ಷಿಕೆಯ ಗೊಂದಲ : ಒಮ್ಮೊಮ್ಮೆ ಲೇಖನದ ಶೀರ್ಷಿಕೆ ಏನಿರಬೇಕೆಂಬ ಗೊಂದಲ ಉಂಟಾಗುತ್ತಿತ್ತು. ಅದು ಸಾಧ್ಯವಾದಷ್ಟು ಚಿಕ್ಕದಾಗಿ, ಚೊಕ್ಕವಾಗಿ ನೇರವಾಗಿ ಅರ್ಥಗರ್ಭಿತವಾಗಿರಬೇಕೆಂದು ಕೆಲವರೆಂದರೆ, ಪ್ರಾಸಬದ್ಧವಾಗಿ ಆಕರ್ಷಕವಾಗಿರಬೇಕೆಂಬುದು ಕೆಲವರ ಅಭಿಪ್ರಾಯ.

ನನ್ನ ಬರಹಗಳ ಕುರಿತು ಓದುಗರಿಂದ ನೂರಾರು ಮೆಚ್ಚುಗೆಯ ಪತ್ರಗಳು ಬಂದಿವೆ. ಅನೇಕರು ಪತ್ರಗಳನ್ನು ಬರೆದಾಗ ಸಂತೋಷವಾಗುತ್ತದೆ. ನಾನು ಬರೆಯಲು ಪಟ್ಟ ಶ್ರಮ ಸಾರ್ಥಕ ಎಂದೆನಿಸುತ್ತದೆ.

ನಮಗೆ ಗೊತ್ತಿಲ್ಲದ ಅನೇಕ ಓದುಗರು ‘ನಾನು ನಿಮ್ಮ ಅಭಿಮಾನಿ. ನೀವು ಬರೆದ ಕಥೆ ನನ್ನ ಕಥೆಯಂತೆಯೇ ಇದೆ’ ಎಂದು ಬರೆದವರೂ ಇದ್ದಾರೆ. ಕೆಲವರು ಓದಿದ ನಂತರ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಉತ್ತರ ಬೇಕೆಂದು ಸ್ವವಿಳಾಸದ ಕವರ್‌ಅನ್ನು ಸಹ ಕಳುಹಿಸಿರುತ್ತಾರೆ. ಉತ್ತರ ಬರೆದ ನಂತರ ನಿಮ್ಮ ಸಲಹೆಯಂತೆ ನಡೆದುಕೊಳ್ಳುತ್ತಿದ್ದೇವೆ. ಈಗ ನನ್ನ ಸಮಸ್ಯೆ ಬಹಳ ಕಡಿಮೆಯಾಗಿದೆ. ನಿಮ್ಮಿಂದ ಉಪಕಾರವಾಯಿತು ಎಂದು ಕೆಲವರು ಪ್ರತಿಕ್ರಿಯಿಸುತ್ತಾರೆ.

ಒಮ್ಮೆ ಬಂದ ಪತ್ರ ಕುತೂಹಲಕರವಾಗಿಯೂ, ಭಯದಿಂದಲೂ ಕೂಡಿತ್ತು. ನಾನು ಜೀವನದಲ್ಲಿ ಬೇಸುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನ್ನಿಸುತ್ತದೆ. ಸುಲಭವಾದ ಆತ್ಮಹತ್ಯೆಯ ಮಾರ್ಗತಿಳಿಸಿ ಎಂದು ಬರೆದಿದ್ದರು. ಆಗ ಅವರಿಗೆ ಕೂಲಂಕಷವಾಗಿ ಪತ್ರ ಬರೆದು ಉಪದೇಶ ನೀಡಿ ನಂತರ ನನ್ನ ಲೇಖನ ‘ಆತ್ಮಹತ್ಯೆಗೆ ಕಾರಣ ಮತ್ತು ಆತ್ಮಹತ್ಯೆಯನ್ನು ಪ್ರತಿಬಂಧಿಸುವ ಕ್ರಮ’ ಎಂಬ ಲೇಖನದ ಪ್ರತಿ ಕಳಿಸಿಕೊಟ್ಟೆ. ಒಂದು ತಿಂಗಳ ನಂತರ ನಿಮ್ಮ ಲೇಖನ ಬಹಳಷ್ಟು ಅನುಕೂಲವಾಯ್ತು. ಈಗ ಜೀವನದಲ್ಲಿ ಬದುಕಬೇಕೆಂಬ ಆಸೆ ಹುಟ್ಟಿದೆ. ಆತ್ಮಹತ್ಯೆಯ ಅನಿಸಿಕೆ ಸಂಪೂರ್ಣ ಮನಸ್ಸಿನಿಂದ ದೂರವಾಗಿದೆ. ನೂರಾರು ವಂದನೆಗಳು” ಎಂದು ಬರೆದಿದ್ದರು.

ಕೆಲವೊಮ್ಮೆ ನನ್ನ ಬರಹಗಳು ಮೇಲೆ ಕೆಲವರು ಟೀಕಾ ಪ್ರಹಾರವನ್ನು ಸಹ ಮಾಡಿದ್ದಾರೆ. ಅವರಿಗೆ ಟೀಕೆ ಮಾಡುವ ಹಕ್ಕಿದೆ. ಟೀಕೆ ಸರಿ ಇದ್ದರೆ ತಿದ್ದಿಕೊಳ್ಳುತ್ತೇನೆ. ಟೀಕೆ ಮಾಡಲೋಸುಗ ಪತ್ರ ಬರೆದಿದ್ದರೆ ಮರೆತುಬಿಡುತ್ತೇನೆ.

ವೈದ್ಯಸಾಹಿತಿಯಾಗುವುದರಿಂದ ಅನುಕೂಲಗಳು : ಸಾಹಿತ್ಯ ರಚನೆಗೆ ಅನೇಕ ಪುಸ್ತಕಗಳನ್ನು ಓದುತ್ತೇನೆ. ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಬಹಳಷ್ಟ ಉಪಯೋಗಕ್ಕೆ ಬರುತ್ತದೆ. ಏಕೆಂದರೆ ಅನೇಕ ಹೊಸ ವಿಷಯಗಳನ್ನು ತಿಳಿಸಲು ಅನುಕೂಲವಾಗುತ್ತದೆ. ಕನ್ನಡದಲ್ಲಿ ವೈದ್ಯಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಅಂಗನ ವಾಡಿ ಕಾರ್ಯಕತೆಯರಿಗೆ, ಶಿಶುಸಂರಕ್ಷಣ ಕೇಂದ್ರದ ಉಪಾಧ್ಯಾಯರಿಗೆ ಕಾರ್ಪೊರೇಷನ್ ಉದ್ಯೋಗಿಗಳಿಗೆ ಕನ್ನಡದಲ್ಲಿ ಪಾಠ ಹೇಳಲು ಹೆಚ್ಚು ಅನುಕೂಲವಾಗುತ್ತದೆ.

ನಾನು ವೈದ್ಯಸಾಹಿತಿಯಾದುದರಿಂದ ೧೯೯೦ ರಿಂದ ೧೯೯೭ ರವರೆಗೆ ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ೧೯೯೮ ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಹಾಯವಾಯಿತು. ೧೯೯೫ ರಲ್ಲಿ ಬಳ್ಳಾರಿ ಜಿಲ್ಲೆ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ (ಕ.ಸಾ.ಪ) ಕಾರ್ಯದರ್ಶಿಯಾಗಿ ಶಾಲಾಕಾಲೇಜುಗಳಿಗಾಗಿ ಕಾರ್ಯಕ್ರಮದಲ್ಲಿ ೧೦೧ ಸಂಸ್ಥೆಗಳಲ್ಲಿ ವೈದ್ಯಕೀಯ ವಿಷಯಗಳ ಮೇಲೆ ಕಾರ್ಯಕ್ರಮ ನಡೆಸಲು ಅನುಕೂಲವಾಯಿತು. ಹೊಸಪೇಟೆ, ಧಾರವಾಡ ಮತ್ತು ಬೆಂಗಳೂರಿನ ಆಕಾಶವಾಣಿಯಲ್ಲಿ ನೂರಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಹಾಯವಾಯಿತು. ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ವೈದ್ಯಕೀಯ ಸಮಸ್ಯೆಗಳಿಗೆ ಕನ್ನಡದಲ್ಲಿ ಉತ್ತರ ನೀಡಲು ಅನುಕೂಲವಾಗಿದೆ. ಸಭೆ-ಸಮಾರಂಭಗಳಿಗೆ ಹೋದಾಗ ಅನೇಕರು ನನ್ನನ್ನು ಗುರುತಿಸಿ ‘ನಾನು ನಿಮ್ಮ ಅಭಿಮಾನಿ ನಿಮ್ಮ ಎಲ್ಲ ಬರಹಗಳನ್ನು ಓದುತ್ತೇನೆ. ಎಲ್ಲ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ’ ಎಂದಾಗ. ‘ನಿಮ್ಮನ್ನು ನೋಡಿ ಸಂತೋಷವಾಯಿತು. ನಿಮ್ಮ ಜೊತೆ ಮಾತನಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅದು ಇಂದು ಫಲಿಸಿತು’ ಎಂದಾಗ ಸಂತೋಷವಾಗುತ್ತದೆ.

ನನ್ನ ಅನೇಕ ಬರಹಗಳ ಆಡಿಯೋ ಕ್ಯಾಸೆಟ್‌ಗಳನ್ನು ನಿತ್ಯಾನಂದ ಎಂಬುವವರು ತಮ್ಮ ಕಂಠದಲ್ಲಿ ಮುದ್ರಿಸಿ ಕರ್ನಾಟಕದ ಎಲ್ಲಾ ಅಂಧರ ಶಾಲೆಗಳಿಗೆ ಕಳಿಸುತ್ತಿದ್ದಾರೆ. ನೂರಾರು ಕ್ಯಾಸೆಟ್‌ಗಳು ಅಂಧರಿಗೆ ಲಭ್ಯವಿದೆ.

ನನ್ನ ಸಾಹಿತ್ಯ ಕೃಷಿಗೆ ಸಂದಿರುವ ಪ್ರಶಸ್ತಿಗಳು ಅನೇಕ ಅವುಗಳಲ್ಲಿ ‘ಕನ್ನಡ ವೈದ್ಯ ಸಾಹಿತ್ಯಶ್ರೀ’, ‘ವೈದ್ಯ ಸಾಹಿತ್ಯ ರತ್ನ’ ಪ್ರಶಸ್ತಿಯ ವಿತರಣೆಯ ಸಮಯವು ಸದಾ ಮನಸ್ಸಿನಲ್ಲಿ ಉಳಿಯುವಂತಹುದು.

ಒಂದು ಪುಟ ಬರೆಯಲು ಕಷ್ಟವಾಗಿದ್ದ ನನಗೆ ಇಂದು ನೂರಾರು ಪುಟಗಳ ೧೫ ಪುಸ್ತಕಗಳನ್ನು ಬರೆಯಲು ಸಾಧ್ಯವಾಗಿದೆ.

ಈಗ ಹೇಳಿ ಬರೀತ ಬರೀತ ಬರವಣಿಗೆ ಸರಾಗವಲ್ಲವೆ?

* * *