ಸುಮಾರು ೬ ತಿಂಗಳ ಶಿಶುವಿನಿಂದ ಹಿಡಿದು ೫, ೬ ವರ್ಷಗಳ ಮಕ್ಕಳಲ್ಲಿ ಕೆಲವರು ಸಣ್ಣ ಪ್ರಮಾಣದ ಜ್ವರದಿಂದ ನರಳುವುದು, ಕೃಶವಾದರೂ, ಹೊಟ್ಟೆ ಊದಿಕೊಂಡು ಮೈಯೆಲ್ಲಾ ಅರಿಸಿನ ಬಣ್ಣಕ್ಕೆ ತಿರುಗುವುದು, ಹೀಗೆ ಕೆಲಕಾಲ ನರಳಿ ನಂತರ ಮಯಕ ಹಿಡಿದು ಅಸುನೀಗುವುದು. ಹಿಂದೆ ಮಕ್ಕಳಿಗೆ ಮಾರಕವಾಗಿದ್ದ ಒಂದು ಕಾಯಿಲೆಯ ಪ್ರಮುಖ ಲಕ್ಷಣಗಳಿವು. ನಮ್ಮ ದೇಶದ ಮಕ್ಕಳನ್ನು ಅನಾದಿಯಿಂದಲೂ ಪೀಡಿಸುತ್ತಿದ್ದ ಈ ರೋಗವನ್ನು ಪ್ರಾಚೀನ ವೈದ್ಯ ಶೃಶ್ರುತ, ಸುಮಾರು ಎರಡು ಸಾವಿರ ವರ್ಷಗಳಿಗಿಂತರಲೂ ಮೊದಲೇ ಗುರುತಿಸಿ ಮುಖ ಮಂಡಿಕಾಗ್ರಹ ಎಂದು ನಾಮಕರಣ ಮಾಡಿದ್ದ. ಐದಾರು ದಶಕಗಳ ಹಿಂದೆ ಸಾಮಾನ್ಯ ಜನರೂ ಇದನ್ನೇ ಮಕ್ಕಳಿಗೆ ಲಿವರ್ ಆಗಿದೆ ಎಂದು ಹೇಳುತ್ತಿದ್ದರು. ಅರಿಸಿನ ಮುಂಡಿಗೆ ರೋಗದ ಲಕ್ಷಣಗಳಿರುವ ಈ ಕಾಯಿಲೆಯನ್ನು ಈಗ ಭಾರತದ ಮಕ್ಕಳ ಯಕೃತ್ ರೋಗ (ಇಂಡಿಯನ್ ಚೈಲ್ಡ್‌ಹುಡ್ ಸಿರೋಸಿಸ್) ಎಂದು ಕರೆಯುತ್ತಾರೆ.

ಒಂದು ಕಾಲದಲ್ಲಿ ಮಧ್ಯಮ ವರ್ಗದವರ ಪ್ರತಿಯೊಂದು ಮನೆಯಲ್ಲೂ ಹೊಟ್ಟೆ ಊದಿದ, ಪೇಲವ ಮುಖದ ಇಂಥ ಒಂದೆರಡು ಮಕ್ಕಳಾದರು ಸಿಗುತ್ತಿದ್ದರು. ಒಂದು ತಾಯಿ ತಂದೆಯ ಇಲ್ಲವೇ ಒಂದೇ ಸಂಸಾರದಲ್ಲಿ ಜನಿಸಿದಂಥ ಮಕ್ಕಳು ಒಬ್ಬರಾದಂತೆ ಇನ್ನೊಬ್ಬರು ಈ ಕಾಯಿಲೆಗೆ ಬಲಿಯಾಗುತ್ತಿದ್ದುದ್ದು ಅಪರೂಪವಾಗಿರಲಿಲ್ಲ. ಆ ಸಂಸಾರದವರು ಯಾವುದೇ ದೆವ್ವ ಭೂತಗಳ ಅವಕೃಪೆಗೊಳಗಾಗಿದ್ದಾರೆಂತಲೋ, ಸರ್ಪಶಾಪ ತಗುಲಿದೆಯೊಂದೋ ಜನ ಆಡಿಕೊಳ್ಳುತ್ತಿದ್ದರು. ಪರಿಹಾರಕ್ಕೆ ಹಲವು ದೇವರುಗಳಿಗೆ ಹರಕೆ, ತೀರ್ಥಯಾತ್ರೆ, ನಾಗರ ಪ್ರತಿಷ್ಠೆ ಮುಂತಾದವು ಸತತವಾಗಿ ನಡೆಯುತ್ತಿದ್ದುದು ಉಂಟು. ನಾಟಿ ವೈದ್ಯರ ಗಿಡ ಮೂಲಿಕೆಯ ಮದ್ದುಗಳಿಂದ ಹಿಡಿದು ಆಧುನಿಕ ತಜ್ಞ ವೈದ್ಯರ ಔಷಧೋಪಚಾರಗಳೂ ನಡೆಯುತ್ತಿದ್ದವು. ಲಿವರ್ ಕ್ಯೂರ್‌ಗಳೆಂಬ ತಲೆಬರಹಗಳ ಡೊಳ್ಳು ಹೊಟ್ಟೆಯ, ಬಡಕಲ ಶರೀರದ ಮಕ್ಕಳ ಚಿತ್ರದ ಜಾಹೀರಾತುಗಳಿರದ ಪತ್ರಿಕೆಗಳೇ ಇರುತ್ತಿರಲಿಲ್ಲ. ಈಗ ಅವೆಲ್ಲಾ ಮಾಯವಾಗಿವೆ. ಅಂದರೆ ಮುಖ ಮಂಡಿಕಾಗ್ರಹ ಮಯವಾಗಿದೆ ಎಂದರ್ಥವಲ್ಲ. ಈಗಲೂ ಕೆಲವು ಹಿಂದುಳಿದ ಪ್ರದೇಶಗಳ ಮಕ್ಕಳನ್ನು ಅದು ಬಲಿ ತೆಗೆದುಕೊಳ್ಳುತ್ತಲೇ ಇದೆ.

ಸಂಶೋಧನೆ

ಆನಾದಿಯಿಂದಲೂ ಈ ಕಾಯಿಲೆಯ ಮೂಲ ಕಾರಣ ಮತ್ತು ಚಿಕಿತ್ಸೆಗಳ ಬಗೆಗೆ ಸಂಶೋಧನೆಗಳು ಜರುಗುತ್ತಲೇ ಇವೆ. ಆದರೆ ಈ ದಶಕದ ಆದಿಯವರೆಗೂ ಅವು ನಿಗೂಢವಾಗಿಯೇ ಇದ್ದವು. ತಾಮ್ರ ವಿಷತೆಯೇ ಈ ಕಾಯಿಲೆಗೆ ಮೂಲ ಕಾರಣವೆಂಬ ಅನುಮಾನ ಆಗ ಉಂಟಾಯಿತು. ಮಾನವನ ರಕ್ತ ಮತ್ತು ಅವಯವಗಳಲ್ಲಿರಬಹುದಾದ ಕೆಲವು ಲೋಹಾಂಶಗಳನ್ನು ಕರಾರುವಕ್ಕಾಗಿ ಗುರುತಿಸಿ, ಅಳತೆ ಮಾಡುವ ಅತ್ಯಂತ ಸೂಕ್ಷ್ಮ ರೀತಿಯ ಪರೀಕ್ಷಾ ವಿಧಾನಗಳು ಕಳೆದ ದಶಕದ ಅಂತ್ಯದಲ್ಲಿ ಲಭ್ಯವಾದವು. ಇಂಗ್ಲೆಂಡಿನ ಟ್ಯಾನರ್ ಮತ್ತು ಕಾಪ್ಟರ್ (೧೯೩೯) ಎಂಬ ವಿಜ್ಞಾನಿಗಳು ಹಲವು ತರಹದ ರೋಗಗ್ರಸ್ಥ ಮಕ್ಕಳ ಲಿವರ್ (ಯಕೃತ್ತು) ನಲ್ಲಿರುವ ಕೆಲವು ಲೋಹಾಂಶಗಳ ಪ್ರಮಾಣಗಳನ್ನು ಪತ್ತೆ ಹಚ್ಚುವ ಪ್ರಯೋಗಗಳನ್ನು ಮಾಡುತ್ತಿದ್ದರು. ಭಾರತದಲ್ಲಿಯ ಮಕ್ಕಳ ಯಕೃತ್ ರೋಗದ ಮಕ್ಕಳ ಲಿವರ್‌ನಲ್ಲಿ ತಾಮ್ರದ ಅಂಶ ಅತಿ ಹೆಚ್ಚಾಗಿರುವುದು ಅವರ ಗಮನ ಸೆಳೆಯಿತು. ಉದಯಪುರದ ಭಂಡಾರಿ ಮತ್ತು ಶಾರದಾ (೧೯೮೧) ಇಂಥ ಮಕ್ಕಳ ಲಿವರ್‌ನಲ್ಲೇ ಅಲ್ಲದೇ ಅವರ ರಕ್ತ, ಮೂತ್ರ, ಕೂದಲು, ಉಗುರುಗಳಲ್ಲೂ ತಾಮ್ರದ ಅಂಶ ಅತಿ ಹೆಚ್ಚಾಗಿರುವುದನ್ನು ಪತ್ತೆ ಹಚ್ಚಿದರು. ಮುಂದೆ ಈ ಮಕ್ಕಳಲ್ಲಿ ತಾಮ್ರದ ಅಂಶ ಹೆಚ್ಚಾಗಿ ಸೇರುವ ಬಗೆಗೆ ಸಂಶೋಧನೆಗಳು ಆರಂಭವಾದವು.

ತಾಮ್ರದ ವಿಷ

ಈ ರೀತಿಯ ಕಾಯಿಲೆಗಳಿಂದ ನರಳುವ ಮಕ್ಕಳ ಆಹಾರ ಅಭ್ಯಾಸಗಳ ಪರಿಚಯ ಮಾಡಿಕೊಳ್ಳುವುದು ಮೊದಲ ಹೆಜ್ಜೆ. ಇಂಥ ಮಕ್ಕಳ ತಾಯಂದಿರಲ್ಲಿ ಎದೆ ಹಾಲಿನ ಕೊರತೆ ಇದ್ದು ಮೇಲು ಹಾಲು ಹಾಕುವುದು ಸರ್ವೇಸಾಮಾನ್ಯವಾಗಿತ್ತು. ಅದಕ್ಕಾಗಿ ಉಪಯೋಗಿಸುವ ಹಸುವಿನ ಹಾಲನ್ನು ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳಲ್ಲಿ ಕಾಯಿಸಿ ಇಡುವುದು ಈ ಮನೆಗಳನ್ನು ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿ. ಒಂದು ಡೆಸಿ ಲೀಟರ್ ಹಾಲಿನಲ್ಲಿ ಸಹಜವಾಗಿರುವ ೪೦ ಮೈಕ್ರೋ ಗ್ರಾಮ್ ತಾಮ್ರದ ಅಂಶ, ಮೊದಲ ಸಾರಿ ಈ ತೆರನ ಪಾತ್ರೆಗಳಲ್ಲಿ ಕುದಿಸಿದಾಗ ೧೧೩ ಮೈ. ಗ್ರಾಮ್‌ಗೆ ಏರಿತು! ಅದನ್ನೇ ಪದೇ ಪದೇ ಕಾಯಿಸಿ ೨೪ ಗಂಟೆಗಳ ನಂತರ ಪರೀಕ್ಷಿಸಿದಾಗ ತಾಮ್ರದ ಪ್ರಮಾಣ ೩೫೦೦ ಮೈ. ಗ್ರಾಂ.ಗೆ ಏರಿತು. ಅವಳಿ ಮಕ್ಕಳಿಬ್ಬರಲ್ಲಿ ಒಂದು ಮಗುವಿಗೆ ಬರೇ ತಾಯಿಯ ಮೂಲೆಯುಣಿಸಿ, ಇನ್ನೊಂದಕ್ಕೆ ತಾಮ್ರದ ಪಾತ್ರೆಯಲ್ಲಿ ಕಾಯಿಸಿದ ಹಾಲನ್ನು ಕುಡಿಸಿದ ಅಪೂರ್ವ ಪ್ರಕರಣವೊಂದು ಸಹ ಸಂಶೋಧಕರ ಗಮನಕ್ಕೆ ಬಂತು. (೧೯೮೨) ತಾಮ್ರದ ಪಾತ್ರೆಯ ಹಾಲನ್ನು ಕುಡಿಯುತ್ತಿದ್ದ ಮಗುವಿನಲ್ಲಿ ಮಾತ್ರ ಯಕೃತ್ ರೋಗ ಕಾಣಿಸಿಕೊಂಡಿತು. ಎದೆಹಾಲು ಕುಡಿಯುತ್ತಿದ್ದ ಮಗುವಿನಲ್ಲಿ ಅದು ಉದ್ಭವವಾಗಲಿಲ್ಲ.

ಇದೇ ಸಮಯದಲ್ಲಿ ಪುಣೆಯ ಭಾವೆ ಮತ್ತು ಪಂಡಿತ್ ಸಹ ಇಂತಹದೇ ಸಂಶೋಧನೆಯಲ್ಲಿ ತೊಡಗಿದ್ದರು. ಅವರು ೧೯೮ ಯಕೃತ್ ರೋಗದ ಮಕ್ಕಳ ಹಾಲು ಕುಡಿಯುವ ಅಭ್ಯಾಸಗಳನ್ನು ಪರಿಶೀಲಿಸಿದಾಗ, ಅವರೆಲ್ಲರಿಗೂ ತಾಮ್ರ ಹಿತ್ತಾಳೆ ಪಾತ್ರೆಗಳಲ್ಲಿ ಕಾಯಿಸಿದ ಮೇಲುಹಾಲು ಹಾಕುತ್ತಿದ್ದುದು ಕಂಡುಬಂದಿತು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹಿಂದೆ ಯಕೃತ್ ರೋಗದಿಂದ ಸತ್ತ ೧೨೦ ಮಕ್ಕಳ ನಂತರ, ಒಡಹುಟ್ಟಿದ ಶಿಶುಗಳಿಗೆ ಹಳೆಯ ಅಭ್ಯಾಸವನ್ನು ನಿಲ್ಲಿಸಿ, ಹಾಲು ಕಾಯಿಸಲು ಸ್ಟೇಯಿನ್‌ಲೆಸ್ ಸ್ಟೀಲ್ ಪಾತ್ರೆಗಳನ್ನೊದಗಿಸಿದರು. ಅಂತಹ ಮಕ್ಕಳಲ್ಲೂ ಯಕೃತ್ ರೋಗ ಉದ್ಭವಿಸಲಿಲ್ಲ ಸಾವಿರಾರು ವರ್ಷಗಳಿಂದ ಪತ್ತೆ ಹಚ್ಚಲಾಗಲಾರದಿದ್ದ ಮುಖ ಮಂಡಿಕಾ ಗ್ರಹದ ಕಾರಣ ಈಗ ಬಯಲಾಯಿತು.

ಈ ಕಾಯಿಲೆಯ ಪ್ರಸ್ತಾಪ ಬಂದಾಗಲೆಲ್ಲಾ ಭಾರತದ ಮಕ್ಕಳ ಯಕೃತ್ ರೋಗವೆಂದೇ ಹೆಸರಿಸುತ್ತಿರುವುದು ಗಮನಾರ್ಹ. ಅದು ಭಾರತದ ಮಕ್ಕಳಲ್ಲಿ ಮಾತ್ರ ಉದ್ಭವಿಸುತ್ತಿತ್ತು. ಬೇರೆ ದೇಶದ ಮಕ್ಕಳಲ್ಲಿ ಕಾಣಿಸದಿರುವುದೇ ಇದಕ್ಕೆ ಕಾರಣ. ಮಲೇಷ್ಯಾ, ಇಂಡೋನೇಷ್ಯಾ ಮೊದಲಾದ ದೇಶಗಳ ಕೆಲವು ಮಕ್ಕಳಲ್ಲಿ ಅದು ಪ್ರಕಟವಾದ ನಿದರ್ಶನಗಳಿದ್ದರೂ ಅಲ್ಲಿ ನೆಲೆಸಿದ ಭಾರತೀಯರ ಮಕ್ಕಳಲ್ಲಿ ಮಾತ್ರ.

ಮಧ್ಯಮ ವರ್ಗದ ಹಿಂದೂ ಮತಸ್ಥರ ಮಕ್ಕಳಲ್ಲೇ ಅದು ಹೆಚ್ಚಾಗಿರುವುದು ಇನ್ನೊಂದು ವೈಶಿಷ್ಟ್ಯ. ಅದಕ್ಕೂ ಕಾರಣಗಳಿವೆ. ಕ್ರೈಸ್ತರು ಮತ್ತು ಮುಸ್ಲಿಮರು ತಾಮ್ರ, ಹಿತ್ತಾಳೆ ಪಾತ್ರೆಗಳನ್ನು ಹಾಲು ಕಾಯಿಸಲು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ. ಹಿಂದೂಗಳಲ್ಲೂ ಶ್ರೀಮಂತರು ಸ್ಟೇಯಿನ್‌ಲೆಸ್‌ಸ್ಟೀಲ್ ಪಾತ್ರೆಗಳನ್ನು ಬಳಸುತ್ತಾರೆ. ತೀರಾ ಬಡವರು ಮಣ್ಣಿನ ಮಡಿಕೆ ಕುಡಿಕೆಗಳಲ್ಲಿ ಹಾಲು ಕಾಯಿಸುತ್ತಾರೆ. ಅದರಿಂದ ಶ್ರೀಮಂತರು ಮತ್ತು ಬಡವರ ಮಕ್ಕಳಲ್ಲಿ ಈ ಕಾಯಿಲೆ ಅಪರೂಪವೆಂದೇ ಹೇಳಬಹುದು. ತಾಮ್ರ ಹಿತ್ತಾಳೆಯ ಪಾತ್ರೆಗಳು ಶ್ರೇಷ್ಠವಾದವೆಂಬ ಭಾವನೆ ಕೆಲವು ಮಧ್ಯಮ ವರ್ಗದವರಲ್ಲಿ ಇನ್ನೂ ಬೇರೂರಿದ್ದು, ಸ್ಟೇಯಿನ್‌ಲೆಸ್‌ಸ್ಟೀಲ್ ಮಯವಾಗಿರುವ ಪ್ರಸ್ತುತ ಕಾಲದಲ್ಲೂ ಕೆಲವು ಕಡೆ ಮುಖ ಮಂಡಿಕಾಗ್ರಹ ಇನ್ನೂ ತಲೆ ಎತ್ತುತ್ತಿದೆ!

ವಿಲ್ಸನ್ಕಾಯಿಲೆ

ತಾಮ್ರದ ಅಂಶ ದೇಹದ ಹಲವು ಜೈವಿಕ ಕ್ರಿಯೆಗಳಿಗೆ ಅತ್ಯವಶ್ಯವೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಅದು ಮಿತಿಮೀರಿದಾಗ ಮಾರಕವಾಗುತ್ತದೆಯನ್ನುವುದಕ್ಕೆ ವಿಲ್ಸನ್ ಕಾಯಿಲೆ ಮೊದಲ ಉದಾಹರಣೆಯಾಗಿತ್ತು. ಭಾರತದ ಮಕ್ಕಳ ಯಕೃತ್ ರೋಗವೂ ಅದರ ಸಾಲಿಗೆ ಸೇರಿದೆಯೆಂಬುದು ಈಗ ದೃಢಪಟ್ಟಿದೆ.

ತಾಮ್ರ ಮತ್ತು ಹಿತ್ತಾಳೆ (ಎರಡು ಭಾಗ ತಾಮ್ರ ಮತ್ತು ಒಂದು ಭಾಗ ಸತುವಿನ ಮಿಶ್ರಲೋಹ) ಪಾತ್ರೆಗಳಿಗೆ ಸರಿಯಾಗಿ ಕಲಾಯಿ ಮಾಡಿಸುವುದರಿಂದ ತಾಮ್ರದ ಅಂಶ ಹಾಲು ಮತ್ತತರ ಆಹಾರ ವಸ್ತುಗಳೊಡನೆ ಬೇರೆಯದಂತೆ ಮಾಡಬಹುದು. ಆದರೆ ಕಲಾಯಿ ಮಾಡಿಸುವುದು ದುಬಾರಿಯಾಗಿರುವುದರಿಂದಲೂ, ಉದಾಸೀನತೆ- ಯಿಂದಲೋ ಇಂಥ ಪಾತ್ರೆಗಳಲ್ಲಿ ಕಲಾಯಿ ಬಹಳ ಸಮಯದಿಂದ ಅಳಿಸಿಹೋಗಿರುತ್ತದೆ. ಈ ದಿಸೆಯಲ್ಲಿ ಈಗ ಹೆಚ್ಚಿನ ಪ್ರಚಾರವಾಗಬೇಕಾಗಿದೆ.

ವೈದ್ಯಸಾಹಿತಿಯಾಗಿನನ್ನಅನುಭವ
೭೦ ಪತ್ರಿಕೆಗಳಲ್ಲಿ ಪ್ರಕಟವಾಯಿತು
– ಡಾ| ಎಚ್.ಡಿ. ಚಂದ್ರಪ್ಪಗೌಡನಿವೃತ್ತ ಜಿಲ್ಲಾ ವೈದ್ಯಾಧಿಕಾರಿ
೬೪, ಶ್ರೀನಿವಾಸ ನಿಲಯ,
ಮಿಷನ್ ಕಾಂಪೌಂಡು, ಶಿವಮೊಗ್ಗ-೫೭೭೨೦೧ 

ಸರ್ಕಾರದ ಸೇವೆಯಲ್ಲಿದ್ದು, ನಿವೃತ್ತ ಅಂಚಿನ ೫೦ರ ವಯಸ್ಸಿನಲ್ಲಿ ಜನಪ್ರಿಯ ವೈದ್ಯ ಸಾಹಿತ್ಯದ ಹವ್ಯಾಸಕ್ಕೆ ಇಳಿದವ ನಾನು. ನನ್ನ ಮೊದಲ ಲೇಖನ ವಯಸ್ಕರ ಶಿಕ್ಷಣ ಪುಸ್ತಕ ಪ್ರಪಂಚದಲ್ಲಿ ಪ್ರಕಟವಾದದ್ದು ೧೯೭೯ ರಲ್ಲಿ. ಆ ವಿಷಯದಲ್ಲಿ ಯಾವುದೇ ತರಬೇತಿ ಇಲ್ಲದೆ ಬರೆಯುತ್ತಿದ್ದ ನನ್ನ ಲೇಖನಗಳು ಬಹಳ ಅಪರೂಪವಾಗಿ ಪ್ರಕಟವಾಗುತ್ತಿದ್ದವು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ೧೯೮೩ ರಲ್ಲಿ ಜರುಗಿದ ವಿಜ್ಞಾನ ಲೇಖಕರ ಶಿಬಿರ (ಕಮ್ಮಟ)ದಲ್ಲಿ ಒಂದು ವಾರ ಭಾಗವಹಿಸುವ ಅವಕಾಶ ಒದಗಿಬಂತು. ಅದರಲ್ಲಿ ಅನುಭವಿ ವಿಜ್ಞಾನ ಲೇಖಕರ ಭಾಷಣ, ಚರ್ಚಾಕೂಟ, ಬರವಣಿಗೆಯ ಕಲೆ, ಶೈಲಿ ಮುಂತಾದ ಹಲವು ವಿಷಯಗಳಲ್ಲಿ ಮಾರ್ಗದರ್ಶನ ದೊರೆಯಿತು. ಆ ತನಕ ನನ್ನ ಲೇಖನಗಳಲ್ಲಿರುತ್ತಿದ್ದ ಓರೆ, ಕೋರೆ, ಶೈಲಿ ಮುಮತಾದವನ್ನು ತಿದ್ದಿಕೊಳ್ಳಲು ಸಾಧ್ಯವಾಯಿತು.

ಕರಾವಿಪದವರ ಸಂಪರ್ಕವಾದ ನಂತರ ಅವರ ‘ಬಾಲವಿಜ್ಞಾನ’ ಮಾಸಪತ್ರಿಕೆಯಲ್ಲಿ ನನ್ನ ಹಲವಾರು ಲೇಖನಗಳು ಪ್ರಕಟವಾಗಲಾರಂಭಿಸಿದವು. ಅವುಗಳ ಪೈಕಿ ಲೂಯೀ ಪಾಶ್ಚರ್ ಮತ್ತು ರೇಬೀಸ್ ರೋಗದ ಕತೆ (೧೯೮೭) ಲೇಖನಕ್ಕೆ ಮೈಸೂರಿನ ಶ್ರೀಮತಿ ಯಮುನಾಬಾಯಿ ಸ್ಮಾರಕ ಬಹುಮಾನ (ರೂ. ೨೫೦) ದೊರೆಯಿತು. ಅದರಿಂದಾಗಿ ನನ್ನ ಬರವಣಿಗೆಯಲ್ಲಿ ಸತ್ವವಿರಬಹುದೆಂಬುದರ ಆತ್ಮವಿಶ್ವಾಸ ಉಂಟಾಯಿತು.

ಮುಂದೆ ಕನ್ನಡದ ಹಲವಾರು ನಿಯತಕಾಲಿಕಗಳಲ್ಲಿ ಆಗಾಗ್ಗೆ ನನ್ನ ಲೇಖನಗಳಿಗೆ ಅನಿಯಮಿತವಾಗಿ ಅವಕಾಶಗಳು ದೊರೆಯುತ್ತಿದ್ದವು. ಸುಮಾರು ಇನ್ನೂರು ಬಿಡಿ ಲೇಖನಗಳು ಪ್ರಕಟವಾಗಿರಬಹುದು. ಮುಂದೆ ವಿಷಯಾಧಾರಿತ ಪುಸ್ತಕಗಳು, ಅನುವಾದ, ಜೀವನ ಚರಿತ್ರೆಗಳನ್ನು ಬರೆಯುವ ಸಾಹಸಕ್ಕಿಳಿದೆ. ಅವುಗಳ ರಚನೆಗೆ ಆಳವಾದ ಅಭ್ಯಾಸ, ವಿಷಯ ಸಂಗ್ರಹಣೆ, ಬರವಣಿಗೆಯ ಶಿಸ್ತುಗಳನ್ನು ಗಳಿಸಿಕೊಂಡೆನೆನ್ನಬಹುದು. ಈ ತನಕ ಇಪ್ಪತ್ತನಾಲ್ಕು ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗಿದೆ. ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಬಂದಿವೆ. ಕನ್ನಡ ಸಾಹಿತ್ಯ ಅಕಾಡೆಮಿಯ ನೀಡುವ ಹೆಚ್ಚೆಂದರೆ ಮೂರು ಪುಸ್ತಕ ಪುರಸ್ಕಾರಗಳು – ವಿಜ್ಞಾನ ಸಾಹಿತ್ಯ (೧೯೯೩), ಅನುವಾದ ಸಾಹಿತ್ಯ (೧೯೯೮) ಮತ್ತು ಜೀವನ ಚರಿತ್ರೆ (೨೦೦೦) ದೊರೆತಿರುವುದು ನನ್ನ ಬರವಣಿಗೆಗೆ ಸಾರ್ಥಕ್ಕೆ ಉಂಟುಮಾಡಿದೆ ಎಂದು ಕೊಳ್ಳಬಹುದೇನೋ!

ಇನ್ನೂ ಕೆಲವು ವಿಚಿತ್ರ ಅನುಭವಗಳನ್ನು ಸಂಕ್ಷಿಪ್ತವಾಗಿ ದಾಖಲಿಸಲಿಚ್ಛಿಸುತ್ತೇನೆ. ಎಕ್ಸರೇ ವಿಕಿರಣದ ಅಪಾಯ ಕುರಿತು ವಾರಪತ್ರಿಕೆಯೊಂದಕ್ಕೆ ಕಿರುಲೇಖನ ಕಳುಹಿಸಿದ್ದೆ. ಹಲವಾರು ತಿಂಗಳು ಕಳೆದರೂ ಪ್ರಕಟವಾಗಲಿಲ್ಲ. ಅನಂತರ ಅದನ್ನು ಆಗ ತಾನೇ ಪ್ರಕಟಣೆ ಆರಂಭಿಸಿದ ಮಾಸಪತ್ರಿಕೆಗೆ ಕಳುಹಿಸಿದೆ. ಅದು ಮುಂದಿನ ಸಂಚಿಕೆಯಲ್ಲೇ ಪ್ರಕಟವಾಯಿತು. ಆ ಲೇಖನ ೩-೪ ವರ್ಷಗಳ ನಂತರ ಹಿಂದೆ ಕಳುಹಿಸಿದ್ದ ವಾರಪತ್ರಿಕೆಯವರು ಪ್ರಕಟಿಸಿ ಅಚ್ಚರಿ ಮೂಡಿಸಿದರು. ಸದ್ಯ ಅದು ಕ.ಬು. ಸೇರಿರಲಿಲ್ಲ.

ಇಂತಹದೇ ಇನ್ನೊಂದು ಅನುಭವ. ಕಾಲರಾ, ವಾಂತಿ, ಭೇದಿಯಾಗುತ್ತಿರುವವರಿಗೆ ಮರುನೀರ್ಗೂಡಿಕೆ ಚಿಕಿತ್ಸಾ ವಿಧಾನ ಚಾಲ್ತಿಗೆ ಬಂದಾಗ ಪ್ರಸಿದ್ಧ ವಾರ ಪತ್ರಿಕೆಗೆ ಕಳುಹಿಸಿದ್ದೆ. ಅದನ್ನು ಯಾರಾದರೂ ಓದಿದರೋ ಇಲ್ಲವೋ; ೨-೩ ದಿನದಲ್ಲೇ ವಾಪಸ್ಸಾಯಿತು. ಅದನ್ನು ಅದೇ ಪತ್ರಿಕಾ ಗುಂಪಿನ ಮಾಸಪತ್ರಿಕೆಗೆ ಕಳುಹಿಸಿದೆ. ಮುಂದಿನ ಸಂಚಿಕೆಯಲ್ಲೇ ಪ್ರಕಟವಾಯಿತು. ಲೇಖಕಿಯೊಬ್ಬರು ಅಂತಹ ಉಪಯುಕ್ತ ಲೇಖನ ಕಳುಹಿಸಿದ ಲೇಖಕ ಹಾಗೂ ಪ್ರಕಟಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಮುಕ್ಕಾಲು ಕಾಲಂ ವಿಮರ್ಶೆ ಪ್ರಕಟಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದವರ ‘ಬಿತ್ತರ’ ಯೋಜನೆಯಲ್ಲಿ ಹಳ್ಳಿಗಾಡಿನ ಪತ್ರಿಕೆಗಳಿಗೆ ಲೇಖಕರಿಂದ ಸಂಗ್ರಹಿಸಿ ಕಳುಹಿಸುತ್ತಾರೆ. ಆ ನನ್ನ ಪುಟ್ಟ ಲೇಖನ ಗ್ರೈಪ್ ವಾಟರ್, ಅದೆಷ್ಟು ಅವಶ್ಯಕ? ಕಳುಹಿಸಿದ್ದೆ. ಅದು ಸುಮಾರು ೭೦ ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಇಂದಿನ ದಿನಗಳಲ್ಲಿ ವೈದ್ಯಕೀಯ ಲೇಖನಗಳನ್ನು ವಿಪುಲವಾಗಿ ಪ್ರಕಟಿಸುತ್ತಿರುವವರಿಗೆ ಹೋಲಿಸಿದರೆ ನನ್ನ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತಹದಲ್ಲೆ ಆದರೂ ನನ್ನ ‘ಸಾಧನೆ’ಗೆ ಸಂತೃಪ್ತಿ ಇದೆ.

* * *