ಸುಮಾಳಿಗೆ ಬೆಳಗ್ಗಿನ ಕಛೇರಿಗೆ ಹೋಗುವ ವೇಳೆ, ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡ ಬಸ್ಸಿನಲ್ಲಿ ಕುಳಿತಿದ್ದಾಳೆ. ಎಲ್ಲಾ ಕಡೆ, ವಾಹನಗಳ ಹಾರ್ನ್ ಓಡಾಟದ ಕರ್ಕಶ ಶಬ್ದ. ಯಾಕೋ ಸುಮಳಿಗೆ ತಲೆ ಸಿಡಿತ. ತಲೆ ಸುತ್ತಿ ಬವಳಿ ಬಂದಂತಾಯಿತು. ಆ ದಿನ ಕಚೇರಿಯಲ್ಲಿ ಎಲ್ಲರ ಮೇಲ ರೇಗಾಡಿದ್ದೇ ರೇಗಾಡಿದ್ದು. ಸಂಜೆ ಮನೆಗೆ ಬಂದ ಮೇಲೆ ಮಕ್ಕಳ ಗಲಾಟೆ, ಟಿವಿಯ ಶಬ್ದ ಇದೆಲ್ಲಾ ಸುಮಳಿಗೆ ಮಾನಸಿಕೆ ಶಾಂತಿಯೇ ಹಾಳಾಗಿದೆ ಎನಿಸಿತು. ಅಂದರೆ, ಈ ಶಬ್ದವು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇದು ಅತಿಯಾಗಿ ನಿಧಾನ ವಿಷವಾಗಿ ನಮ್ಮನ್ನಾವರಿಸುತ್ತದೆ ಎಂದರೆ ನಂಬುವಿರಾ?

ಎಲ್ಲಿ ನೋಡಿದರಲ್ಲಿ ಶಬ್ದ!ಶಬ್ದ!

೨೦ನೇ ಶತಮಾನವನ್ನು ಶಬ್ದಗಳ ಶತಮಾನ ಎಂದು ಬಣ್ಣಿಸಲಾಗಿತ್ತು. ಮಾನವನ ಪರಿಸರದಲ್ಲಿ ಅತಿಯಾದ ಶಬ್ದವೇ ಒತ್ತಡಕ್ಕೆ ಕಾರಣ. ಈ ಜಾಗತೀಕರಣದ ಯುಗದಲ್ಲಿ ಎಲ್ಲರೂ ತುಂಬಾ ಬ್ಯುಸಿಯಿದ್ದಾಗ ಒಮ್ಮೆಲೇ ಒತ್ತಡಕ್ಕೆ ಶರಣಾಗಿ ಮಾನಸಿಕ ವ್ಯಾಧಿಗೆ ಒಳಗಾಗುತ್ತಾರೆ. ಅದಕ್ಕೆ ಕಾರಣವಾಗಿರುವ ವಿಶ್ಲೇಷಣೆಯನ್ನು ಯಾರೂ ಮಾಡುತ್ತಿಲ್ಲ.

ಶಬ್ದ ಯಾವುದರಿಂದ ಉಂಟಾಗುತ್ತದೆ?

ಮುಖ್ಯವಾಗಿ ದೊಡ್ಡ ಕಾರ್ಖಾನೆಗಳು, ವಾಹನಗಳು, ವಿಮಾನಗಳು, ರೈಲುಗಳು, ಮನೆಯ ಒಳಗಡೆಯ ರೇಡಿಯೋ, ಟಿ.ವಿ. ಮಿಕ್ಸಿ, ಗ್ರೈಂಡರ್, ಟೇಪ್ ರೆಕಾರ್ಡರ್ ವ್ಯಾಕ್ಯೂಂ ಕ್ಲೀನರ್ ಇತ್ಯಾದಿ.

ಶಬ್ದಕ್ಕೆ ಎರಡು ಮುಖ್ಯ ಗುಣಗಳಿವೆ

. ಶಬ್ಧದ ಪ್ರಮಾಣ: ಇದನ್ನು ಡೆಸಿಬಲ್ಸ್‌ನಲ್ಲಿ ಅಳೆಯಲಾಗುತ್ತದೆ. ನಾವು ಸಾಮಾನ್ಯ ಮಾತನಾಡಿದಾಗ ೬೦ ರಿಂದ ೬೫ ಡಿಬಿನಷ್ಟು ಪ್ರಮಾಣ ಎಂದು ಅಂದಾಜಿಸಿದೆ. ಪ್ರಿಂಟಿಂಗ್ ಪ್ರೆಸ್‌ನ ಶಬ್ಧ ೮೦ ಡಿಬಿ ನಷ್ಟಾದರೆ ನಾವು ಪಿಸುಗುಟ್ಟಿದಾಗ ೨೦ ರಿಂದ ೩೦ ಡಿಬಿ, ಮಕ್ಕಳು ಅತ್ತಾಗ ೮೦ ಡಿಬಿ, ರೇಡಿಯೋ ೮೦ ಡಿಬಿ, ಜೋರಾದ ಟ್ರಾಫಿಕ್ ನಿಂದ ೬೦, ೮೦ ಡಿಬಿ. ಕಾರಿನ ಹಾರನ್ ೧೨೦ ಡಿಬಿ, ವ್ಯಾಕ್ಯೂಮ್ ಕ್ಲೀನರ್ ೭೬ಡಿಬಿ, ಬಾಯ್ಲರ್ ಕಾರ್ಖಾನೆ ೧೨೦ ಡಿಬಿ, ನಷ್ಟು ಶಬ್ದ ಉತ್ಪತ್ತಿಯಾಗುತ್ತದೆ. ಹಾಗೇ ವಿಮಾನ ಇಳಿದಾಗ ೧೫೦ ಡಿಬಿ, ರೈಲು ಚಲನೆಯಲ್ಲಿದ್ದಾಗ ೧೧೦ ಡಿಬಿ ಎಂದು ಅಂದಾಜಿಸಿದೆ. ಪ್ರತಿದಿನ ಮಾನವ ೮೫ ಡಿಬಿಯಷ್ಟು ಶಬ್ದವನ್ನು ಯಾವುದೇ ತೊಂದರೆಯಿಲ್ಲದೆ ಗ್ರಹಿಸಬಹುದು.

ಮಾನವನ ಕಿವಿಯು ಬೇರೆ ರೀತಿಯ ಶಬ್ದಗಳಿಗೆ ಬೇರೆ ತರಹದಲ್ಲಿ ಸ್ಪಂದಿಸುತ್ತದೆ. ಶಬ್ದಕ್ಕಿಂತ ಶಬ್ದದ ಪ್ರಮಾಣ ಮುಖ್ಯವಾಗುತ್ತದೆ.

ಶಬ್ದದ ಪ್ರಮಾಣ ಎಷ್ಟಿರಬೇಕು?

ಮಲಗುವ ಕೋಣೆ = ೨೫ ಡಿಬಿ
(ಲಿವಿಂಗ್)ಕೋಣೆ  = ೪೦ಡಿಬಿ
ಕಛೇರಿ = ೩೫-೪೫ ಡಿಬಿ
ರೆಸ್ಟೋರೆಂಟ್ = ೪೦-೬೦ ಡಿಬಿ
ಕ್ಲಾಸ್ ರೂಮ್ = ೩೦-೪೦ ಡಿಬಿ
ಲೈಬ್ರರಿ = ೩೫-೪೦ ಡಿಬಿ
ಆಸ್ಪತ್ರೆ ವಾರ್ಡ್ = ೨೦-೩೫ ಡಿಬಿ

ಈ ಮೇಲೆ ತಿಳಿಸಿದಷ್ಟು ಪ್ರಮಾಣದಲ್ಲಿದ್ದಾಗ, ಯಾವುದೇ ಕಿರಿಕಿರಿ ಎನಿಸುವುದಿಲ್ಲ.

ಶಬ್ದದ ಅಲೆಗಳು

ಇದನ್ನು ಹರ್ಟ್ಸ್ ಎನ್ನುತ್ತೇವೆ. ಮಾನವನ ಕಿವಿ ೨೦ರಿಂದ ೨೦,೦೦೦ ಹರ್ಟ್ಸ್ ನಷ್ಟು ಅಲೆಗಳನ್ನು ಸಹಿಸುತ್ತದೆ. ಹೆಚ್ಚಿನ ಪ್ರಾಣಿಗಳು ಮಾನವನಿಗೆ ಕೇಳದ ಶಬ್ದಗಳನ್ನು ಗ್ರಹಿಸುತ್ತವೆ. ಉದಾ: ನಾಯಿ.

ಶಬ್ದದಿಂದ ದುಷ್ಪರಿಣಾಮಗಳು

ಇದರಲ್ಲಿ ಎರಡು ವಿಧ:

೧. ಕಿವಿಯ ಮೇಲಿನ ದುಷ್ಪರಿಣಾಮಗಳು

೨. ಬೇರೆ ತರಹದ ದುಷ್ಪರಿಣಾಮಗಳು.

ಕಿವಿ ಮೇಲಿನ ದುಷ್ಪರಿಣಾಮ

. ಕಿವಿಯಲ್ಲಿ ತಳಮಳ : ಇದು ಶಬ್ದವು ೯೦ ಡಿಬಿ ಯಷ್ಟಿದ್ದಾಗ ಉಂಟಾಗುತ್ತದೆ. ಇದು ಕಿವಿಯ ಮೇಲೆ ಶಿಳ್ಳೆ ಹೊಡೆದ ಹಾಗೆ, ಗುಂಯ್ ಎನ್ನುವ ಹಾಗೆ ಅನುಭವಕ್ಕೆ ಬರುತ್ತದೆ.

. ಕಿವುಡುತನ : ತ್ರೀವ್ರ ತರಹದ ತೊಂದರೆ. ಇದು ತಾತ್ಕಾಲಿಕ ಅಥವಾ ಶಾಶ್ವತವಾಗಿರುತ್ತದೆ. ತಾತ್ಕಾಲಿಕ ಕಿವುಡತನ ಒಂದು ಬಾರಿ ಜೋರಾದ ಶಬ್ಧದಿಂದ ಉಂಟಾಗುತ್ತದೆ. ಇದು ೪೦೦೦ ದಿಂದ ೬೦೦೦ ಹರ್ಟ್ಸ್ ಅಲೆಗಳಿದ್ದಾಗ ಆಗುತ್ತದೆ. ಇದು ೨೪ ಗಂಟೆಗಳ ನಂತರ ಸರಿಹೋಗುತ್ತದೆ.

ಶಾಶ್ವತ ಕಿವುಡುತನವು ೧೦೦ ಡಿಬಿ ನಷ್ಟು ಶಬ್ದವು ನಿರಂತರವಾಗಿರುವ ಪರಿಸರದಲಿದ್ದಾಗ ಉಂಟಾಗುತ್ತದೆ. ಒಳಕಿವಿಯಲ್ಲಿ ಸೂಕ್ಷ್ಮವಾಗಿ ಹಾಗೂ ತೀವ್ರವಾಗಿ ತೊಂದರೆಗಳಾಗಬಹುದು. ಇದು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯ.

ಎಚ್ಚರ!

೧೬೦ ಡೆಸಿಬಲ್ಸ್‌ಗಿಂತ ಶಬ್ಧ ಹೆಚ್ಚಿದ್ದಾಗ ಕಿವಿಯ ತಮಟೆಯೇ ಹರಿದುಹೋಗುತ್ತದೆ ಹಾಗೂ ಶಾಶ್ವತ ಕಿವುಡುತನ ಉಂಟಾಗುತ್ತದೆ.

. ಬೇರೆ ತರಹದ ದುಷ್ಪರಿಣಾಮ

ಮಾತಿನಲ್ಲಿ ತೊಂದರೆ: ಪರಿಸರದಲ್ಲಿ ೩೦೦ ರಿಂದ ೫೦೦ ಹರ್ಟ್ಸ್‌ನಷ್ಟು ಶಬ್ದ ಪ್ರತಿನಿತ್ಯ ಇದ್ದಾಗ ಮಾತಾಡನಾಡುವಾಗ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ರಸ್ತೆ ಹಾಗೂ ವಿಮಾನಗಳ ಟ್ರಾಫಿಕ್‌ನಿಂದಾಗುತ್ತದೆ. ನೀವು ಮಾತನಾಡುವಾಗ ಕೇವಲ ೧೨ ಡಿಬಿ ನಷ್ಟು ಶಬ್ದವಿದ್ದರೆ ಸಾಕು.

ಏಕಾಗ್ರತೆ ಕಳೆದುಕೊಳ್ಳುವ ಅಪಾಯ

ಓದಿನಲ್ಲಿ ಏಕಾಗ್ರತೆ ಹೆಚ್ಚಿಸಲು, ಹೆಚ್ಚು ಕೆಲಸ ಮಾಡಲು ಆದಷ್ಟು ಕಡಿಮೆ ಶಬ್ದವಿರುವ ಪರಿಸರವಿರಬೇಕು. ಇದು ಮಕ್ಕಳ ಓದಿಗೂ ಅನ್ವಯಿಸುತ್ತದೆ.

ಮಾನಸಿಕ ದುಷ್ಪರಿಣಾಮ

ಈಗ ಎಲ್ಲಿ ನೋಡಿದರೂ ಟೆನ್ಷನ್ನಿನಿಂದ ಬಿ.ಪಿ. ಜಾಸ್ತಿಯಾಗಿದ್ದು ವೈದ್ಯರು ವಿಶ್ರಾಂತಿಯಲ್ಲಿರಲು ಹೇಳಿದ್ದಾರೆ ಎಂದೋ ಅಥವಾ ಟೆನ್ಷನ್ ನಿಂದ ನನ್ನ ಮಗ/ ಮಗಳು ಎಸ್.ಎಸ್.ಎಲ್‌.ಸಿಯಲ್ಲಿ ಮಾರ್ಕ್ಸ್ ತೆಗೆಯಲಿಲ್ಲ ಎಂದೋ ಪ್ರತಿನಿತ್ಯ ಕೇಳುತ್ತೇವೆ. ಆದರೆ ಈ ಟೆನ್ಷನ್ ಎಲ್ಲಿಂದ ಬಂತು? ಮನೆಯಲ್ಲೇ ಬಂತು. ಮನೆಯಲ್ಲಿ ದಿನ ನಿತ್ಯ ನೋಡುವ ಹೊಡೆದಾಟ, ಬಡಿದಾಟ ಸಿನಿಮಾಗಳ ಕ್ರೌರ್ಯ ಕರ್ಕಸ ಶಬ್ದಗಳಿಂದ ಮಾನಸಿಕವಾಗಿ ಅಲ್ಲೋಲಕಲ್ಲೋಲವಾಗುತ್ತದೆ. ಅದಕ್ಕೆಂದೇ ಪ್ರತಿನಿತ್ಯ ಬೆಳಗ್ಗೆ ದೇವರನಾಮ ಸಂಗೀತ ಕೇಳೂವುದರಿಂದ ಸ್ವಲ್ಪ ಮಟ್ಟಿಗೆ ದಿನಪೂರ್ತಿ ಮಾನಸಿಕ ಶಾಂತಿ ದೊರೆಯುತ್ತದೆ.

ಅತಿ ಶಬ್ದದಿಂದ ರಕ್ತದೊತ್ತಡ ಹಾಗೂ ಮೆದುಳಿನ ಮೇಲೆಯೂ ಒತ್ತಡ ಹೆಚ್ಚುತ್ತದೆ. ಹೃದಯದ ಬಡಿತದಲ್ಲಿ, ಉಸಿರಾಟದಲ್ಲಿ, ಬೆವರಿನ ಪ್ರಮಾಣದಲ್ಲಿಯೂ ಏರುಪೇರು ಕಂಡುಬರುತ್ತದೆ. ಸುಸ್ತು, ವಾಂತಿ, ತಲೆಸುತ್ತು, ನಿದ್ರಾಹೀನತೆ, ದೃಷ್ಟಿಹೀನತೆ ಸಹ ಉಂಟಾಗುತ್ತದೆ. ಯಾರಾದರು ಮಾನಸಿಕ ರೋಗಿಗಳಿದ್ದಾಗ, ಅತಿ ಶಬ್ದದಿಂದ ರೋಗ ಉಲ್ಬಣಿಸು ಸಾಧ್ಯತೆ ಇದೆ.

ಮಕ್ಕಳಲ್ಲಿ ತೊಂದರೆಗಳು

ಸಾಮಾನ್ಯವಾಗಿ ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವಿರಬೇಕೆಂದು ಬಯಸುತ್ತೇವೆ. ಆದರೆ ಮಕ್ಕಳಲ್ಲಿ ಅತಿ ಶಬ್ದದಿಂದ ಏಕಾಗ್ರತೆ ಕಡಿಮೆಯಾಗಿ ಓದಿನಲ್ಲಿ ಹಿಂದೆ ಬೀಳುತ್ತಾರೆ. ಪರಿಣಾಮ ಸರಿಯಾಗಿ ಊಟ, ತಿಂಡಿ, ನಿದ್ರೆ ಮಾಡುವುದಿಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೂ ರೇಗಾಡುತ್ತಾರೆ. ತಾಳ್ಮೆ ಕಳೆದುಕೊಳ್ಳುತ್ತಾರೆ ಅಥವಾ ಶಾಲೆಯಲ್ಲಿ ಘಟಿಸಿದ ಘಟನೆಗಳಿಗೆ ಟೆನ್ಷನ್ ಮಾಡಿಕೊಳ್ಳುತ್ತಾರೆ. ಶಾಲೆಯಲ್ಲಿ ಆಟೋಟ ಸ್ಪಧೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ.

ಆರ್ಥಿಕ ನಷ್ಟ: ಶಬ್ದದ ದುಷ್ಪರಿಣಾಮದಿಂದ ಕಾರ್ಮಿಕರಲ್ಲಿ ದುಡಿಯುವ ಶಕ್ತಿ ಕ್ಷೀಣಿಸಿ, ಕೆಲಸದಲ್ಲಿ ನಿರಾಸಕ್ತಿ ಉಂಟಾಗಿ ಪರೋಕ್ಷವಾಗಿ ಕಾರ್ಖಾನೆಗಳಲ್ಲಿ ಆರ್ಥಿಕ ನಷ್ಟ ಸಂಭವಿಸುತ್ತದೆ.

ಶಬ್ದ ಮಾಲಿನ್ಯದ ನಿಯಂತ್ರಣ

೧. ನಗರಗಳಲ್ಲಿ ಕಾರ್ಖಾನೆಗಳು ಹೊರವಲಯದಲ್ಲಿರುವ ಹಾಗೆ ನಕ್ಷೆ ತಯಾರಿಸಬೇಕು.

೨. ಬಡಾವಣೆಗಳಲ್ಲಿ ಹಸಿರಿರಬೇಕು.

೩. ವಿಶಾಲವಾದ ರಸ್ತೆಗಳಿರಬೇಕು.

೪. ಮುಖ್ಯವಾಗಿ ಅತಿ ಭಾರದ ವಾಹನಗಳು ಕಿರಿದಾಗ ರಸ್ತೆಗಳಲ್ಲಿ ಸಂಚರಿಸಬಾರದು. ವಾಹನಗಳ ಹಾರ್ನ್‌ಗಳನ್ನು ನಿಯಂತ್ರಿಸಬೇಕು.

೫. ಕಾರ್ಖಾನೆಗಳಲ್ಲಿ ಪಾರ್ಕ್‌ನ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕು. ಕಾರ್ಮಿಕರು ೮೫ ಡಿಬಿಗಿಂತ ಹೆಚ್ಚಿನ ಶಬ್ದದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕಿವಿಗಳಿಗೆ ಉಪಕರಣವನ್ನು ಒದಗಿಸಬೇಕು ಹಾಗೂ ಕಾರ್ಮಿಕರನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಹಾಗೂ ನಿರಂತರ ಆರೋಗ್ಯ ತಪಾಸಣೆ ಅವಶ್ಯಕ.

೬. ತೀವ್ರ ಆರೋಗ್ಯದ ತೊಂದರೆಗೊಳಗಾದಾಗ ಕಾರ್ಮಿಕರಿಗೆ ಪರಿಹಾರ ನಿಧಿ ಸಹ ಲಭ್ಯವಿರಬೇಕು.

೭. ಮುಖ್ಯವಾಗಿ ಮಾಧ್ಯಮಗಳಲ್ಲಿ ಜನರಿಗೆ ಶಬ್ದಮಾಲಿನ್ಯದ ಬಗ್ಗೆ ತಿಳುವಳಿಕೆ ನೀಡುವುದರಿಂದ ಒಂದು ಮಹತ್ತರ ತೊಂದರೆಯಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಬಹುದಾಗಿದೆ.

* * *

ವೈದ್ಯಸಾಹಿತಿಯಾಗಿನನ್ನಅನುಭವ
ಬಂತು ನೋಡಿ ಫೋನುಗಳ ಭರಾಟೆ
– ಡಾ| ಹೆಚ್.ಎಂ.ಚಂದ್ರಕಲಾನಂ.೧೩೧, ‘ಎನ್’ ಬ್ಲಾಕ್, ಕೆ.ಎಸ್.ಆರ್.ಟಿ.ಸಿ
ಡಿಪೋ ಸರ್ಕಲ್ ಹತ್ತಿರ, ಕುವೆಂಪುನಗರ, ಮೈಸೂರು 

ನಾನು ವೈದ್ಯೆಯಾಗಿದ್ದಕ್ಕಿಂತ ‘ವೈದ್ಯ ಸಾಹಿತಿ’ಯಾಗಿದ್ದಕ್ಕೆ ಹೆಚ್ಚು ಹೆಮ್ಮೆ ಪಡುತ್ತೇನೆ. ನನ್ನ ಮೊದಲ ಲೇಖನ ‘ಬಿಕ್ಕಳಿಕೆ’ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದಾಗ ನನಗಾದ ಆನಂದ ವರ್ಣನಾತೀತ. ಅಂದು ಪತ್ರಿಕೆಯಲ್ಲಿ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದೆ. ನಂತರ ಬಂತು ನೋಡಿ, ಫೋನ್‌ಗಳ ಭರಾಟೆ.. ಮೇಡಮ್, ನಾನು ಶಿರಸಿಯಿಂದ ಮಾತನಾಡುತ್ತಿದ್ದೇನೆ, ನನ್ನ ತಾಯಿಗೆ ನಿಲ್ಲದೆ ಬಿಕ್ಕಳಿಕೆ ಬರುತ್ತಿದೆ. ನೀವು ಎಲ್ಲಿ ಸಿಗುತೀರ? ಯಾವ ರೀತಿ ಚಿಕಿತ್ಸೆ ಕೊಡಿಸಬೇಕು? ಹೀಗೆ ದೂರದ ಕಾರವಾರ, ಧಾರವಾಡ, ಕುಂದಾಪುರ, ಇಟಗಿ, ಬೆಂಗಳೂರು ಹೀಗೆ ನಾನಾ ಕಡೆಗಳಿಂದ ಬಿಕ್ಕಳಿಕೆ ರೋಗಿಗಳ ಸಂಬಂಧಿಕ ಅಳಲು ಹೇಳತೀರದು. ಸುಮಾರು ಆರು ತಿಂಗಳವರೆಗೂ, ಫೋನ್ ಕರೆಗಳು ಬಂದವು. ಅಬ್ಬಾ! ಲೇಖನ ಬರೆದಿದ್ದು ಸಾರ್ಥಕ. ಒಂದು ಲೇಖನದಿಂದ ಎಷ್ಟು ಜನರು ಉಪಯೋಗ ಪಡೆದುಕೊಂಡರು.

ಆನಂತರ ನಾನು ಲೇಖನ ಬರೆಯುವ ಚಿಕ್ಕ ಹವ್ಯಾಸವನ್ನೇ ದೊಡ್ಡದು ಮಾಡಿಕೊಂಡೆ, ಹಾಗೇಂದರೆ ವೈದ್ಯ ಸಾಹಿತಿಯಾದವರು, ನಿರಂತರವಾಗಿ ಲೇಖನಗಳ ಬಗ್ಗೆಯೇ ಯೋಚನೆ ಮಾಡಬೇಕಾಗುತ್ತದೆ… ಮೊದಲು ಹೆಸರಾಂತ ಪತ್ರಿಕೆಗಳಿಗೆ ಬರೆದ ಲೇಖನಗಳು ಪ್ರಕಟವಾಗಲೇ ಇಲ್ಲ. ಮುಂದೆ ನಿರಾಶೆ ಪಡೆದ ಲೇಖನಗಳನ್ನು ಬರೆದಾಗ, ನಿರಂತರವಾಗಿ ಲೇಖನಗಳು ಪ್ರಕಟವಾದವು. ವಿಸ್ಮಯವೆಂದರೆ ನಾನು ಒಂದು ವಿಷಯದ ಬಗ್ಗೆ ಲೇಖನ ಬರೆಯಬೇಕೆಂದು ಯೋಚನೆ ಮಾಡಿದ್ದರೆ ನಾಳೆಯೇ ಆರೋಗ್ಯ ಪುರವಣಿಗಳಲ್ಲಿನ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತಿತ್ತು. ಇದರಿಂದ ತೀವ್ರವಾಗಿ ಯೋಚನೆ ಮಾಡಿದ ವಿಷಯವನ್ನು ತಕ್ಷಣ ಬರೆದು ಕಳಿಸಬೇಕು ಎನ್ನುವುದನ್ನು ಕಲಿತೆ.

ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ, ವೈದ್ಯರು ಸಾಮಾನ್ಯ ವೈದ್ಯಸಾಹಿತ್ಯವನ್ನು ಬರೆದಾಗ ವಿಷಯಗಳಲ್ಲಿ ಆಳವಿರುತ್ತದೆ. ಏಕೆಂದರೆ, ನಿಜವಾದ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿರುವ  ಅನುಭವವಾಗಿರುತ್ತದೆ. ಆದ್ದರಿಂದ ಹೆಚ್ಚು ವೈದ್ಯರು ಲೇಖನಗಳನ್ನು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂಬುದು ನನ್ನ ಆಶಯ. ಪ್ರಸ್ತುತ ನಾನು ಪ್ರಾ.ಆ.ಕೇಂದ್ರ, ಗಗೇಶ್ವರಿ, ಮೈಸೂರು ಜಿಲ್ಲೆ, ಇಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಯದ ಅಭಾವದಿಂದ ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಸಾಹಿತಿಯಾದ ನಂತರ ವೈದ್ಯ ಪದವಿಯಲ್ಲಿನ ಎಲ್ಲಾ ವಿಷಯಗಳ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ ಹಾಗೂ ನಿರಂತರ ಅಭ್ಯಾಸದಿಂದ ಜ್ಞಾನವೂ ಹೆಚ್ಚಾಗಿದೆ. ಇದರಿಂದಾಗಿ ನನ್ನ ವೈದ್ಯ ವೃತ್ತಿಗೂ ಹೆಚ್ಚು ಉಪಯೋಗವಾಗಿದೆ ಸಾಹಿತಿಯಾದ ಮೇಲೆ ನನಗೆ ವೃತ್ತಿ ಬಾಂಧವರು, ಜನಪ್ರತಿನಿಧಿಗಳು, ಗ್ರಾಮಪಂಚಾಯಿತಿ ಅಧ್ಯಕ್ಷರು, ಮೇಲಧಿಕಾರಿಗಳು, ಸಿಬ್ಬಂದಿ ವರ್ಗದವರಿಂದ ಸಹ ಮೊದಲಿಗಿಂತ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು, ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತೇನೆ. ಇದು ನನಗೆ ದೊರೆತ ಹೆಚ್ಚಿನ ಗೌರವ, ಜವಾಬ್ದಾರಿ ಎಂದು ಭಾವಿಸಿದ್ದೇನೆ.

ಇನ್ನು ಕಹಿ ಅನುಭವವೆಂದರೆ, ಕೆಲವು ಲೇಖನಗಳನ್ನು ಒಂದು ಹೆಸರಾಂತ ಪತ್ರಿಕೆಗೆ ಕಳುಹಿಸಿದ್ದೆ. ನಂತರ ಅದರಲ್ಲಿ ಒಂದು ಲೇಖನ ಆರು ತಿಂಗಳಾದ ಮೇಲೆ ಹೆಸರಿಲ್ಲದೆ ಪ್ರಕಟವಾಗಿತ್ತು. ಇದರಿಂದ ಆ ಪತ್ರಿಕೆಗೆ ಲೇಖನ ಕಳುಹಿಸಲೇ ಇಲ್ಲ. ವೈದ್ಯ ಸಾಹಿತಿಯಾದರೆ ತುಂಬಾ ಚಾಲೆಂಜಿಂಗ್ ಆಗಿರಬೇಕಾಗುತ್ತದೆ. ಯಾರೂ ಬರೆದಿರದ ಅಪರೂಪದ ಕಾಯಿಲೆಗಳು ಹಾಗೂ ಜನಸಾಮಾನ್ಯರ ಆರೋಗ್ಯದ ದಿನನಿತ್ಯದ ಸಮಸ್ಯೆಗಳು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮೂಢನಂಬಿಕೆಗಳನ್ನು ತೊಲಗಿಸಲು ಲೇಖನಗಳು ಪರಿಣಾಮಕಾರಿ ಎಂದು ಕಂಡುಕೊಂಡಿದ್ದೇನೆ.

ನನ್ನ ಇನ್ನೊಂದು ಅನುಭವವೆಂದರೆ, ನಾನು ಲೇಖನಗಳನ್ನು ಬರೆಯಲು ಪ್ರಾರಂಭಿಸಿದ ಮೇಲೆ ನನ್ನ ಮಾನಸಿಕ ಒತ್ತಡಗಳು, ಜೀವನವನ್ನು ನೋಡುವ ದೃಷ್ಟಿಕೋನ ಎಲ್ಲವು ಬದಲಾಗಿವೆ. ಲೇಖನದಿಂದ ಮನಸ್ಸಿಗೆ ಸಿಗುವ ಆ ಒಂದು ರಿಲೀಫ್ ಯಾವುದೇ ಆಸ್ತಿಯಿಂದಲೂ ಗಳಿಸಲು ಸಾಧ್ಯವಿಲ್ಲ. ಮುಂದೆ ಇನ್ನೂ ಹೆಚ್ಚು ಲೇಖನಗಳನ್ನು ಬರೆದು ಅವು ಹೆಚ್ಚು ಜನರನ್ನು ತಲುಪಬೇಕೆಂಬುದೇ ನನ್ನ ಆಶಯ.

* * *