ದಂತ ವಿಜ್ಞಾನ ಎಷ್ಟು ಮುಂದುವರಿದಿದೆಯೆಂದರೆ ಹಲ್ಲುನೋವು ಅಂದಾಕ್ಷಣ ಕೀಳಿಸಬೇಡಿ, ಉಳಿಸಿ ಎಂದು ಹಿತೋಪದೇಶ ಮಾಡುವಷ್ಟು ಮುಂದುವರೆದಿದೆ. ಅಷ್ಟೇಕೆ? ಫಳಫಳಿಸುವ ಹರಳು, ವಜ್ರದ ಬೊಟ್ಟುಗಳನ್ನಿಟ್ಟು ನಿಮ್ಮ ಹಲ್ಲನ್ನು ಲಕಲಕ ಹೊಳೆಸುವ ಟೀತ್ ಸ್ಟಡೆಡ್ ಜ್ಯುವೆಲ್ಲರಿ ಕೂಡ ಈಗ ಮಹಾನಗರಗಳಲ್ಲಿ ದೊಡ್ಡ ಸುದ್ದಿಯಾಗಿದೆ.

ನೆತ್ತಿಯ ಮೇಲೆ ಸುಡುವ ಸೂರ್ಯ, ಕೈಯಲ್ಲಿ ತಂಪು ತಂಪಾದ ಸಿಹಿ ಐಸ್ ಕ್ರೀಮ್ ಖುಷಿಯಿಂದ ಅಸ್ವಾದಿಸುತ್ತಿರುವಾಗ ಎಲ್ಲೋ ಒಂದು ಕಡೆ ಹಲ್ಲು ಜುಮ್ ಅನ್ನುತ್ತದೆ. ನೋವು ಕಾಣಿಸಿಕೊಳ್ಳುತ್ತದೆ. ಹೋಗಲಿ ಎಂದು ಅಲಕ್ಷಿಸಿ ಐಸ್‌ಕ್ರೀಮ್ ಸವಿಯುತ್ತೀರಿ, ಆಮೇಲೆ ಕೆಲವು ದಿನಗಳ ನಂತರ ಬೆಳಗ್ಗೆ ಎದ್ದು ಬ್ರಷ್ ಮಾಡುವಾಗ ಹಲ್ಲಿನ ಮೇಲೆ ಏನೋ ಕಂಡಂತಾಗುತ್ತದೆ. ಸರಿಯಾಗಿ ನೋಡಿದರೆ ಹಲ್ಲಿನ ಮೇಲ ಸಣ್ಣ ಕಪ್ಪು ಚುಕ್ಕಿ! ಸಣ್ಣದು, ಹೋಗಲಿ ಎಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ವರ್ಷ ಕಳೆಯುವಷ್ಟರಲ್ಲಿ ಆಗಾಗ್ಗೆ ನೋವು ಕೊಡುವ ಹಲ್ಲಿನ ಕಪ್ಪು ಚುಕ್ಕಿ ದೊಡ್ಡದಾಗಿರುತ್ತದೆ. ಆಗಾಗ್ಗೆ ಆಹಾರ ಸಿಕ್ಕಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ತಡೆಯಲಾರದಷ್ಟು ನೋವು. ಎಷ್ಟೆಂದರೆ, ರಾತ್ರಿಯಿಡೀ ನಿದ್ದೆ ಕೂಡ ಮಾಡಲಾಗುವುದಿಲ್ಲ. ಏನನ್ನು ತಿನ್ನಲೂ ಕುಡಿಯಲೂ ಆಗದೆ ಮುಖವೂ ಬೀಗಿ, ಎದ್ದೊಡನೆ ದಂತವೈದ್ಯರ ಬಳಿ ಧಾವಿಸುತ್ತೀರಿ. ವೈದ್ಯರು ಹಲ್ಲನ್ನು ಪರೀಕ್ಷಿಸಿ ಎಕ್ಸರೇ ತೆಗೆದು ನೋಡಿ ನಿಮ್ಮ ಈ ಹಲ್ಲಿಗೆ ಇನ್‌ಫೆಕ್ಷನ್ ಬೇರಿನತನಕ ಹೋಗಿದೆ. ಮಾತ್ರೆ ತೆಗೆದುಕೊಂಡು ನೋವು ಕಡಿಮೆ ಆದ ಅನಂತರ ಬನ್ನಿ ಎಂದುಮಾತ್ರೆ ನೀಡುತ್ತಾರೆ. ನಿಮಗೋ ಗಾಬರಿ ‘ಅಯ್ಯೋ ನನ್ನ ಹಲ್ಲು ಹೋದಂತೆಯೇ ಸರಿ. ಅಂತ ಹಾಂ!ತಾಳಿ! ನಿಮ್ಮ ಹಲ್ಲನ್ನು ಕೀಳಿಸಬೇಕಿಲ್ಲ. ಈಗಲೂ ಹಲ್ಲನ್ನು ಉಳಿಸಬಹುದು. ಹೇಗೆ ಅಂತೀರಾ? ಉತ್ತರ ರೂಟ್ ಕೆನಾಲ್ ಚಿಕಿತ್ಸೆ.

ಒಂದು ಹಲ್ಲನ್ನು ಗಮನಿಸಿದರೆ ಕಾಣುವ ಎರಡು ಸ್ಥೂಲ ಭಾಗಗಳು ಮುಕುಟ ಹಾಗೂ ಬೇರು. ನಮಗೆ ಹೊರಗೆ ಕಾಣುವ ಬಿಳಿ ಭಾಗ್ ಎನಾಮೆಲ್, ಒಳಗಿರುವ ತಿಳಿ ಹಳದಿ ಬಣ್ಣದ ಡೆಂಟೀನ್, ಬೇರಿನ ಸುತ್ತ ಇರುವ ಸಿಮೆಂಟನ್ನು ಹಾಗೂ ಹಲ್ಲಿನ ತಿರುಳು (ಪಲ್ಸ್). ಇವು ಹಲ್ಲಿನ ರಚನಾ ಕ್ರಮ. ಈ ದಂತಕುಳಿ ಎಂಬುದು ಮೊದಲಿಗೆ ಎನಾಮೆಲ್‌ನಲ್ಲಿ ಆರಂಭವಾಗಿ ಅನಂತರ ಡೆಂಟೀನ್‌ಹರಡಿ, ಕಡೆಗೆ ಹಲ್ಲಿನ ತಿರುಳನ್ನು ತಲುಪುತ್ತದೆ. ಅಲ್ಲಿಂದ ಬೇರಿಗೆ ಹರಡಿ ಮುಂದೆ ಬೇರಿನ ಸುತ್ತ ಇರುವ ಮೂಳೆಯೂ ರೋಗಗ್ರಸ್ತವಾಗಬಹುದು. ದಂತಕುಳಿ ಎನಾಮಲ್ ಅಥವಾ ಡೆಂಟಿನ್‌ನಲ್ಲಿ ಇದ್ದರೆ ಬೆಳ್ಳಿ, ಕಾಂಪೋಸಿಟ್, ಗ್ಲಾಸ್ ಐನೋಮರ್ ಹೀಗೆ ವಿವಿಧ ರೀತಿಯ ವಸ್ತುಗಳನ್ನು ಬಳಸಿ ಫಿಲ್ಲಿಂಗ್ ಮಾಡಬಹುದು. ಆದರೆ ಬೇರು ಹಾಗೂ ಅದರ ಸುತ್ತಮುತ್ತ ಸೋಂಕು ತಗಲಿದ್ದರೆ ರೂಟ್ ಕೆನಾಲ್ ಚಿಕಿತ್ಸೆ ಮಾಡಬೇಕಾಗುತ್ತದೆ.

ರೂಟ್ ಕೆನಾಲ್ ಚಿಕಿತ್ಸೆಯಲ್ಲಿ ಮುಖ್ಯವಾಗಿ ನಾಲ್ಕು ಹಂತಗಳಿವೆ. ಹಲ್ಲಿನ ಮುಕುಟದಿಂದ ಬೇರಿಗೆ ಸರಿಯಾದ ರಂಧ್ರ ಮಾಡುವುದು, ಸೋಂಕನ್ನು ತೆಗೆದು ಸ್ವಚ್ಛ ಮಾಡುವುದು, ಬೇರಿನ ಒಳಭಾಗವನ್ನು ಸರಿಯಾಗಿ ತಯಾರಿಸುವುದು ಹಾಗೂ ತಿರುಳಿನ ಬದಲು ಬೇರೆ ವಸ್ತುವನ್ನು ತುಂಬುವುದು.

ರೋಗಿಗಿರುವ ತೀವ್ರತರ ನೋವು ಮಾತ್ರೆಗಳಿಂದ ನಿಯಂತ್ರಣಕ್ಕೆ ಬಂದ ಅನಂತರ ಚಿಕಿತ್ಸೆ ಆರಂಭಿಸಲಾಗುತ್ತದೆ. ಮೊದಲು ಇಂಜೆಕ್ಷನ್ ಕೊಟ್ಟು ಹಲ್ಲನ್ನು ಮರಗಟ್ಟಿಸಲಾಗುತ್ತದೆ. ಅನಂತರ ಮುಂದಿನ ಹಲ್ಲಾದರೆ ಹಿಂಬದಿಯಿಂದ ಹಿಂದಿನ ಹಲ್ಲಾದರೆ ಜಗಿಯುವ ಕಡೆಯಿಂದ ಮುಕುಟದಿಂದ ಬೇರಿಗೆ ನೇರ ರಂಧ್ರವನ್ನು ಮಾಡಲಾಗುತ್ತದೆ. ಅನಂತರ ಸೋಂಕುಯುಕ್ತ ಹಲ್ಲಿನ ತಿರುಳನ್ನು ನಿಧಾನವಾಗಿ ತೆಗೆಯಲಾಗುತ್ತದೆ. ಈ ಉದ್ದೇಶಕ್ಕಾಗಿ ಸೂಜಿಯಂಥ ಸಣ್ಣ ಉಪಕರಣವನ್ನು ಉಪಯೋಗಿಸಲಾಗುತ್ತದೆ. ಈ ಸೋಂಕಿನ ತಿರುಳನ್ನು ಸಂಪೂರ್ಣವಾಗಿ ತೆಗೆಯುವುದು ಚಿಕಿತ್ಸೆಯ ಯಶಸ್ಸಿಗೆ ಮುಖ್ಯವಾದುದು. ಏಕೆಂದರೆ ಸೋಂಕು ನಿವಾರಣೆಯಾದ ಹೊರತು ಹಲ್ಲಿನ ನೋವು ಕಡಿಮೆಯಾಗುವುದಿಲ್ಲ. ಬಳಿಕ ಖಾಲಿಯಾದ ಬೇರಿನ ಒಳಭಾಗವನ್ನು ತುಂಬುವ ಮೊದಲು ನಿಖರವಾಗಿ ಸ್ವಚ್ಛಗೊಳಿಸಲಾಗುತ್ತದೆ. ಇದಕ್ಕಾಗಿ ಮೊಳೆಯಂಥ ರೀಮರ್ಸ್ ಮತ್ತು ಫೈಲ್ಸ್ ಅನ್ನುವ ಸೂಕ್ಷ್ಮ ಉಪಕರಣಗಳನ್ನು ಬಳಸುತ್ತಾರೆ. ಬೇರಿನ ಒಳಭಾಗವನ್ನು ಸೋಂಕಿನಿಂದ ತಡೆಗಟ್ಟಲುಕೆಲವು ರೀತಿಯ ದ್ರಾವಣಗಳನ್ನು ಹಾಕುತ್ತಾರೆ.

ಒಮ್ಮೆ ಬೇರೆ ರೋಮುಕ್ತವಾದೊಡನೆ ಬೇರಿನ ಒಳಭಾಗವನ್ನು ಅಂದರೆ, ಹಲ್ಲಿನ ತಿರುಳು ಇದ್ದ ಜಾಗವನ್ನು ಗಟ್ಟಾಪರ್ಚ ಎಂಬ ರಬ್ಬರ್‌ನಂಥ ವಸ್ತುವಿನಿಂದ ತುಂಬಲಾಗುತ್ತದೆ. ಈ ಮೇಲ್ಕಂಡ ಹಂತಗಳಲ್ಲಿ ಆಗಾಗ್ಗೆ ಎಕ್ಸರೇಗಳನ್ನು ತೆಗೆದು ಬೇರಿನವರೆಗೆ ಉಪಕರಣಗಳ ಮೂಲಕ ಗಟ್ಟಪರ್ಚ ವಸ್ತು ಹೋಗಿದೆಯೇ ಎಂದು ಖಚಿತ ಪಡಿಸಿಕೊಳ್ಳಲಾಗುತ್ತದೆ. ಅನಂತರ ಮುಕುಟದ ಭಾಗವನ್ನು ಬೆಳ್ಳಿ ಅಥವಾ ಇತರ ವಸ್ತುಗಳಿಂದ ತುಂಬಲಾಗುತ್ತದೆ.

ಸೋಂಕಿನ ಮೇಲೆ ಅವಲಂಬಿತವಾದ ರೂಟ್ ಕೆನಾಲ್ ಚಿಕಿತ್ಸೆಗೆ ಮೂರರಿಂದ ಎಂಟು ವಾರಗಳ ತನಕ ಸಮಯ ಬೇಕಾಗಬಹುದು. ಈ ಅವಧಿಯಲ್ಲಿ ರೋಗಿ ಐದು ಆರು ಸಲವಾದರೂ ದಂತವೈದ್ಯರಲ್ಲಿ ಚಿಕಿತ್ಸೆಗೆ ಬರಬೇಕಾಗಬಹುದು. ಖಚಿತವಾಗಿ ಹಾಗೂ ಸೂಕ್ಷ್ಮವಾಗಿ ಮಾಡಬೇಕಾದ ಚಿಕಿತ್ಸೆ ಇದಾಗಿರುವುದಿಂದ ಅವಧಿಯೂ ಹೆಚ್ಚು ತಗಲುವ ವೆಚ್ಚವೂ ಸಾಧಾರಣ ಫಿಲ್ಲಿಂಗ್‌ಗಳಿಗಿಂತ ಹೆಚ್ಚಾಗಿರುತ್ತದೆ.

ಹಲ್ಲು ಸಾಯಬಾರದು

ಹಲ್ಲಿನ ತಿರುಳು ಇಡೀ ಹಲ್ಲಿನ ಜೀವಂತ ಅಂಗಾಂಶ. ತಿರುಳು ಸತ್ತರೆ ಹಲ್ಲು ಸತ್ತಂತೆಯೇ. ಒಮ್ಮೆ ಹಲ್ಲಿನ ತಿರುಳು ಹೋದ ಅನಂತರ ಏನೇ ತುಂಬಿಸಿದರೂ ಹಲ್ಲು ಪುನಃ ಜೀವಂತವಾಗುವುದಿಲ್ಲ. ಹಾಗೆಯೇ ಅಷ್ಟು ಗಟ್ಟಿಯೂ ಇರುವುದಿಲ್ಲ. ಹಾಗಾಗಿ ರೂಟ್ ಕೆನಾಲ್ ಚಿಕಿತ್ಸೆಯ ಅನಂತರ ಹಲ್ಲಿಗೆ ಬಲ ನೀಡಲು ಕ್ಯಾಪ್ (ಕ್ರೌನ್) ನೀಡಲಾಗುತ್ತದೆ.

ರೂಟ್ ಕೆನಾಲ್ ಚಿಕಿತ್ಸೆಯನ್ನು ಮುರಿದ ಹಲ್ಲುಗಳಿಗೂ ಮಾಡಬಹುದು. ಸಾಧಾರಣವಾಗಿ ಮೇಲಿನ ಹಲ್ಲು ಮುಂದೆ ಇರುವವರಲ್ಲಿ, ಆಟ ಆಡುವ ಮಕ್ಕಳಲ್ಲಿ ಬಿದ್ದು ಪೆಟ್ಟಾಗಿ ಹಲ್ಲು ಮುರಿಯುವ ಸಂಭವ ಹೆಚ್ಚಾಗಿರುತ್ತದೆ. ಹೀಗೆ ಪೆಟ್ಟು ಬಿದ್ದೊಡನೆ ವೈದ್ಯರನ್ನು ಕಾಣುವುದು ಉತ್ತಮ.

ಏಕೆಂದರೆ, ಕೆಲವೊಮ್ಮೆ ಹಾಗೇ ನೋಡಿದಾಗ ಏನೂ ಪೆಟ್ಟಾಗದಿರುವಂತೆ ಕಂಡರೂ ಅನೇಕ ದಿನಗಳ ವರ್ಷಗಳ ಅನಂತರ ಹಲ್ಲು ನಿಧಾನವಾಗಿ ಬಣ್ಣ ಬದಲಾಯಿಸುತ್ತಾ ಬರುತ್ತದೆ. ಕೆಲವು ಬಾರಿ ನೋವೂ ಇರಬಹುದು. ಇದು ಹಲ್ಲಿನ ತಿರುಳಿಗೆ ಆದ ಪೆಟ್ಟು. ಕ್ರಮೇಣ ಕಾಣಿಸುವ ರೀತಿ ತಿರುಳು ಸಾಯುತ್ತಾ ಬಂದಂತೆ ಹಲ್ಲಿನ ಬಣ್ಣ ಬದಲಾಗುತ್ತದೆ. ಇಂಥ ಸಂದರ್ಭದಲ್ಲಿ ವೈದ್ಯರು ಹಲ್ಲನ್ನು ಜೀವಂತವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿ ಅಗತ್ಯವಿದ್ದಲ್ಲಿ ರೂಟ್ ಕೆನಾಲ್ ಚಿಕಿತ್ಸೆ ಮಾಡಿ ಕ್ಯಾಪ್ ಹಾಕುತ್ತಾರೆ.

ಒಂದು ವೇಳೆ ಹಲ್ಲು ಸ್ವಲ್ಪ ಮಾತ್ರ ಮುರಿದಿದ್ದು ತಿರುಳು ಆರೋಗ್ಯವಾಗಿದ್ದರೆ ಹಲ್ಲನ್ನು ತುಂಬಿಸುವುದು. ಹಿಂದಿನ ಹಲ್ಲಾದರೆ ಬೆಳ್ಳಿ, ಮುಂದಿನ ಹಲ್ಲಾದರೆ ಹಲ್ಲಿನ ಬಣ್ಣದ್ದೇ ಆದ ಕಾಂಪೋಸಿಟ್ ಅಥವಾ ಗ್ಲಾಸ್ ಐನೋಮರ್ ಎಂಬ ವಸ್ತುಗಳಿಂದ ತುಂಬಿಸಬಹುದು. ಇವು ಮುರಿದ ಹಲ್ಲಿನ ಆಕಾರ ಸರಿಪಡಿಸಿ ಸೌಂದರ್ಯ ಹೆಚ್ಚಿಸಬಹುದು. ಮತ್ತೇ ಮುರಿದ ಹಲ್ಲಿನ ಆಕಾರ ಸರಿಪಡಿಸಿ ಸೌಂದರ್ಯ ಹೆಚ್ಚಿಸಬಹುದು. ಮತ್ತೆ ಕೆಲವು ಬಾರಿ ಹಲ್ಲಿಗೆ ಕ್ಯಾಪ್ ಕೂಡ ಹಾಕಕೂಡದು. ಹಿಂದಿನ ಹಲ್ಲಾದರೆ ಅಗಿಯಲು ಶಕ್ತಿ ಬೇಕು ಎಂಬ ದೃಷ್ಟಿಯಿಂದ ಹಲ್ಲಿನ ಬಣ್ಣದ್ದೆ ಆದ ಅಕ್ರಿಲಿಕ್ ಅಥವಾ ಪೋರ್ಸ್‌‌ಲಿನ್‌ಗಳಿಂದ ಮಾಡಿದ ಕ್ಯಾಪ್ ಹಾಕಬಹುದು. ಇನ್ನು ಕೆಲವು ಸಲ ಮಾತ್ರೆಗಳಿಂದ, ಉದಾಹರಣೆಗೆ ಟೆಟ್ರಾಸೈಕ್ಲಿನ್‌ನಿಂದ ಹಲ್ಲಿನ ಬಣ್ಣ ಬದಲಾಗಿದ್ದರೆ ಅಥವಾ ಹಲ್ಲು ಚೆನ್ನಾಗಿಯೇ ಇದ್ದು ಆಕಾರ ಸರಿ ಇರದೆ ಇದ್ದರೆ ಚೆಂದ ಕಾಣಲು ಕಾಂಪೋಸಿಟ್ ಅಥವಾ ಪೋರ್ಸಲಿನ್ ವೆನಿಯರಿಂಗ್ ಮಾಡಬಹುದು. ಇದರಲ್ಲಿ ಹಲ್ಲಿನ ಒಂದೇ ಪದರಕ್ಕೆ ಬೇರೆ ವಸ್ತು ಹಾಕಲಾಗುತ್ತದೆ. ಸಿನಿಮಾ ತಾರೆಯರ ಮುತ್ತಿನಂಥ ನಗುವಿನ ಒಳಗುಟ್ಟು ಇದೇ. ಇತ್ತೀಚೆಗೆ ಬ್ಲಿಚಿಂಗ್ ಕೂಡ ತುಂಬಾ ಜನಪ್ರಿಯವಾಗುತ್ತಿದೆ. ಹಲ್ಲುಗಳ ಬಣ್ಣವನ್ನು ಈ ಚಿಕಿತ್ಸೆಯಿಂದ ಮೂಲಕವೂ ಕೆಲ ಮಟ್ಟಿಗೆ ತಿಳಿಗೊಳಿಸಬಹುದು.

ಬೇಡ, ಸುಮ್ಮನೆ ಅಲಂಕಾರಕ್ಕೆ ಇರಲಿ ಎಂದು ಚೆಂದ ಕಾಣಲು ಮುಂದಿನ ಹಲ್ಲುಗಳ ಮೇಲೆ ಹೊಳೆಯುವ ಹರಳನ್ನು ಅಥವಾ ವಜ್ರವನ್ನು ಕೂರಿಸಿಕೊಳ್ಳುವ ಟೀತ್ ಸ್ಟಡೆಡ್ ಜ್ಯುವೆಲರಿ ಈಗ ಮಹಾನಗರಗಳಲ್ಲಿ ಜನಪ್ರಿಯವಾಗುತ್ತಿದೆ.

ಹೀಗೆ ದಂತ ವಿಜ್ಞಾನ ಹಲ್ಲುನೋವು ಎಂದರೆ ಹಲ್ಲು ಕೀಳಿಸಲು ಎನ್ನುವುದರ ಬದಲು ಆದಷ್ಟು ಹಲ್ಲನ್ನು ಉಳಿಸು ಎಂಬ ಘಟ್ಟ ತಲುಪಿದೆ. ಏನೇ ಆದರೂ ತೊಂದರೆಯ ಪ್ರಾರಂಭಿಕ ಹಂತದಲ್ಲೇ ಗಮನ ಹರಿಸಿದರೆ ಚಿಕಿತ್ಸೆ ಸುಲಭ ಹಾಗೂ ಪರಿಣಾಮಕಾರಿ. ಆದರೆ ಒಂದೊಮ್ಮೆ ನಿರ್ಲಕ್ಷಿಸಿದ್ದರೆ ಈಗಲಾದರೂ ಎಚ್ಚೆತ್ತು ದಂತವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.

* * *

ವೈದ್ಯಸಾಹಿತಿಯಾಗಿನನ್ನಅನುಭವ
ತಪ್ಪು ಮಾಹಿತಿ ನೀಡಬಾರದು
– ಡಾ| ಕೆ.ಎಸ್.ಚೈತ್ರಚೈತ್ರ ಡೆಂಟಲ್ ಕ್ಲಿನಿಕ್
ಜಿ.೧೯೫, ಶಂಕರ್‌ನಗರ, ಬೆಂಗಳೂರು-೫೬೦ ೦೯೨
ಮೊಬೈಲ್: ೯೮೪೫೨೨೯೫೪೨, ೦೮೦-೨೩೩೩೭೪೦೦

ವೈದ್ಯನಾಗಿ ರೋಗಿಯ ನೋವನ್ನು ನೀಗುವುದು ಎಷ್ಟು ಮುಖ್ಯವೋ, ರೋಗದ ಬಗ್ಗೆ ಸಮಗ್ರವಾದ ಮಾಹಿತಿ ನೀಡುವುದೂ ಅಷ್ಟೆ ಮುಖ್ಯ. ವಿಷಯ ಪೂರ್ತಿ ತಿಳಿದಾಗ ರೋಗಿ ಶ್ರದ್ಧೆಯಿಂದ ಚಿಕಿತ್ಸೆ ತೆಗೆದುಕೊಳ್ಳುತ್ತಾನೆ ಮತ್ತು ಮಾನಸಿಕವಾಗಿಯೂ ಪರಿಸ್ಥಿತಿ ಎದುರಿಸಲು ಸಮರ್ಥನಾಗುತ್ತಾನೆ. ಈ ನಿಟ್ಟಿನಲ್ಲಿ ಲಕ್ಷಾಂತರ ಜನರನ್ನು ತಲುಪುವಲ್ಲಿ ವೈದ್ಯಕೀಯ ಲೇಖನಗಳು ಸೂಕ್ತ ಮತ್ತು ಪರಿಣಾಮಕಾರಿ ಮಾಧ್ಯಮ. ಆದರೆ ಗಮನದಲ್ಲಿಡಬೇಕಾದ ಪ್ರಮುಖ ಅಂಶವೆಂದರೆ ನೀಡುವ ಮಾಹಿತಿ ನಿಖರವಾಗಿರಬೇಕು, ಸ್ಪಷ್ಟವಾಗಿರಬೇಕು. ಶೈಲಿ ಸರಳವಾಗಿದ್ದು ಅರ್ಥವಾಗುವಂತಿರಬೇಕು. ಹಾಗೆಯೇ ಜನರಲ್ಲಿ ಅನಗತ್ಯ ಭೀತಿ ಮೂಡಿಸದೇ ವಸ್ತುಸ್ಥಿತಿ ತಿಳಿಸುವಂತಿರಬೇಕು.

ನಾನೊಬ್ಬ ದಂತವೈದ್ಯೆಯಾಗಿ ಸುಮಾರು ಹತ್ತು ವರ್ಷಗಳಿಂದ ವೈದ್ಯಕೀಯ ಲೇಖನಗಳನ್ನು ಬರೆಯುತ್ತಿದ್ದೇನೆ. ದಂತವೈದ್ಯಕೀಯದ ಕುರಿತಾಗಿ ಶಿಕ್ಷಣ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವ ನನಗಿರುವುದರಿಂದ ನನ್ನ ವಿಯದ ಬಗ್ಗೆ ಅಧಿಕಾರಿಯುತವಾಗಿ ಬರೆಯಬಲ್ಲೆ. ಆದರೆ ಆರೋಗ್ಯದ ಇತರ ವಿಷಯಗಳನ್ನು ಬರೆಯುವಾಗ ವೈದ್ಯಕೀಯ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡಿದ್ದೇನೆ. ವೈದ್ಯರಾದ ಅಪ್ಪ, ಗಂಗಿ, ಭಾವ, ಸ್ನೇಹಿತರು ಹೀಗೆ ಹಲವಾರು ವೈದ್ಯರ ಸಲಹೆ ಪಡೆದಿದ್ದೇನೆ, ಚರ್ಚೆ ನಡೆಸಿದ್ದೇನೆ. ಅವರ ಅನುಭವದ ಪ್ರಯೋಜನ ಪಡೆದಿದ್ದೇನೆ. ಇದಲ್ಲದೆ ಚಂದನ ವಾಹಿನಿಯಲ್ಲಿ ‘ಟಿ.ವಿ.ಡಾಕ್ಟರ್’ ನೇರ ಸಂವಾದ ಕಾರ್ಯಕ್ರಮ ನಡೆಸಿಕೊಡುವುದರಿಂದ ತಜ್ಞವೈದ್ಯರಿಂದ ಇತರ ವೈದ್ಯಕೀಯ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ನನಗೆ ಸಾಧ್ಯವಾಗಿದೆ. ಏನೂ ಬರೆಯದಿದ್ದರೂ ಪರವಾಗಿಲ್ಲ, ತಪ್ಪು ಮಾಹಿತಿ ನೀಡಬಾರದು ಎಂಬ ಸಿದ್ಧಾಂತ ನನ್ನದು. ಏಕೆಂದರೆ ವೈದ್ಯಸಾಹಿತಿಯ ಲೇಖನವನ್ನು ಸಾವಿರಾರು ಜನ ಓದಿ ಅದನ್ನು ನಂಬುತ್ತಾರೆ.ಅ ದರಲ್ಲಿನ ಸಲಹೆಗಳನ್ನು ಪಾಲಿಸುತ್ತಾರೆ. ಹಾಗಾಗಿ ವೈದ್ಯಸಾಹಿತಿಗೆ ಜವಾಬ್ದಾರಿ ಹೆಚ್ಚು.

ಈ ವೈದ್ಯಸಾಹಿತ್ಯದ ಬರವಣಿಗೆ ನನ್ನನ್ನು ಹೆಚ್ಚು ಅಧ್ಯಯನ ಶೀಲಳನ್ನಾಗಿ ಮತ್ತು ಜನಪ್ರಿಯಳನ್ನಾಗಿಸಿದೆ. ನನಗೆ ತಿಳಿದಿರುವ, ಕಲೆಹಾಕುವ ಸರಿಯಾದ ಮಾಹಿತಿಗಳಿಂದ ಕುಡಿದ ವೈದ್ಯಲೇಖನಗಳಿಂದ ಒಂದಿಷ್ಟು ಜನರಿಗೆ ಧೈರ್ಯ, ಮತ್ತೊಂದಿಷ್ಟು ಜನರಿಗೆ ಚಿಕಿತ್ಸೆಗೆ ಅನುಕೂಲವಾದರೆ ನನ್ನ ಅಳಿಲು ಸೇವೆ ಸಾರ್ಥಕವಾದಂತೆಯೇ!

* * *