ಒಂದು ದಿನ ನನ್ನ ಕ್ಲಿನಿಕ್ಕಿನಲ್ಲಿ ಮೆಟೀರಿಯ ಮೆಡಿಕ ಓದುತ್ತಿದ್ದೆ. ಓರ್ವ ಮಹಿಳೆ ತನ್ನ ಹೆಗಲ ಮೇಲೆ ಹುಡುಗನೊಬ್ಬನನ್ನು ಹಾಕಿಕೊಂಡು ಬರುತ್ತಿದ್ದಳು. ಆಕೆಯ ಜೊತೆಯಲ್ಲಿ ಹಲವರಿದ್ದರು. ಆಕೆ ನನ್ನ ಕ್ಲಿನಿಕ್ಕಿಗೆ ಬಂದವಳೇ ಮಗುವನ್ನು ಬೆಂಚಿನ ಮೇಲೆ ಮಲಗಿಸಿದಳು. ನಂತರ ‘ಸ್ವಾಮಿಯೋರ’ ನನ್ನ ಮಗುವನ್ನು ಸಾಧ್ಯವಾದರೆ ಬದುಕಿಸಿ ಇಲ್ಲವೇ ಅವನನ್ನು ಸಾಯಲು ಬಿಡಿ’ ಎಂದು ಬೇಸರದಿಂದ ಹೇಳಿದಳು. ಆಗ ಆಕೆಯೊಡನೆ ಬಂದಿದ್ದ ಒಬ್ಬ ಗಂಡಸು ‘ಸ್ವಾಮಿ…’ ಆ ಹುಡುಗ ಈಗಾಗಲೇ ಸತ್ತು ಹೋಗಿದ್ದಾನೆ. ನಿಮಗೆ ಕೆಟ್ಟ ಹೆಸರು ತರೋಕೆ ಹೆಣಾನ ಹೊತ್ಕೊಂಡು ಬಂದಿದ್ದಾಳೆ’ ಎಂದನು. ನನಗೆ ಆ ಕ್ಷಣಕ್ಕೆ ಭಯವಾಯಿತು. ಕೂಡಲೇ ನನ್ನ ಸ್ಟೆಥೋಸ್ಕೋಪಿನಿಂದ ಮಗುವಿನ ಎದೆಯನ್ನು ಪರೀಕ್ಷಿಸಿದೆ. ಹೃದಯವು ಕ್ಷೀಣವಾಗಿ ಲಬ್‌ಡಬ್ ಎಂದು ಹೊಡೆದುಕೊಳ್ಳುತ್ತಿತ್ತು.

‘ನೋಡಿ ಮಗುವಿಗೇನೂ ಆಗಿಲ್ಲ. ಮಗುವನ್ನು ಒಳಗೆ ಬೆಡ್ ಮೇಲೆ ಮಲಗಿಸಿ. ನನ್ನಕೈಲಾದದ್ದನ್ನು ಮಾಡುತ್ತೇನೆ’ ಎಂದೆ. ಅವರು ಮಗುವನ್ನು ಪರೀಕ್ಷಾ ಮೇಜಿನ ಮೇಲೆ ಮಲಗಿಸಿದರು. ನಂತರ ಆ ಹೆಂಗಸನ್ನು ಬಿಟ್ಟು ಉಳಿದವರೆಲ್ಲ ಹೊರಗೆ ಹೋದರು. ನಾನು ಮಗುವನ್ನು ವಿವರವಾಗಿ ಪರೀಕ್ಷಿಸಿದೆ. ೫ರಿಂದ ೬ ವರ್ಷದ ಮಗು. ಮಗುವಿನ ಉದರ ಊದಿತ್ತು. ಊತವು ಕಿಬ್ಬೊಟ್ಟೆ ಪ್ರದೇಶದಿಂದ ಕುತ್ತಿಎಯವರೆಗೆ ವ್ಯಾಪಿಸಿತ್ತು. ಮಗುವು ಅತ್ಯಂತ ಕ್ಷೀಣವಾಗಿ ಉಸಿರಾಡುತ್ತಿತ್ತು. ವಿಚಾರಿಸಿದೆ. ಮಗು ೫,೬ದಿನಗಳಿಂದ ಮಲ ವಿಸರ್ಜಿಸಿಲ್ಲ ಎಂದು ತಿಳಿಯಿತು. ನಂತರ ಮಗುವಿನ ರೋಗ ಇತಿಹಾಸವನ್ನು ಕೇಳಿದೆ. ಆಕೆ ಹೇಳಿದ ಮಾತಿನ ಸಾರಾಂಶ ಹೀಗಿದೆ:

ಒಂದು ವಾರದಿಂದ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು. ಮೇಲುಕೋಟೆ ಸರ್ಕಾರಿ ವೈದ್ಯರಿಗೆ ತೋರಿಸಿದರು. ಅವರು ಮಗುವನ್ನು ಆಸ್ಪತ್ರೆಯಲ್ಲಿ ೩ ದಿನ ಉಳಿಸಿಕೊಂಡರು. ಜ್ವರ ಕಡಿಮೆಯಾಗಲಿಲ್ಲ. ನಂತರ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಆ ಮಹಿಳೆಯು ಮಗುವಿಗೆ ಸುಮಾರು ಒಂದು ತಿಂಗಳವರೆಗೆ ಚಿಕಿತ್ಸೆ ನೀಡಿದರು. ಅವರು ಕೊಟ್ಟ ಔಷಧಿಗಳನ್ನು ಸೇವಿಸಿದ ಮಗುವಿಗೆ ಮಲಬದ್ಧತೆ ಆರಂಭವಾಯಿತು. ಹೊಟ್‌ಎಯು ದಿನೇ ದಿನೇ ಊದುತ್ತಾ ಬಂದಿತು. ಹಿರಿಯ ವೈದ್ಯರು ಕೃತಕವಾಗಿ ಮಲವಿಸರ್ಜನೆ (ಎನೀಮ) ಮಾಡಿಸಲು ಯತ್ನಿಸಿದರು. ಅದು ಅಷ್ಟು ಫಲಕಾರಿಯಾಗಲಿಲ್ಲ. ಹೊಟ್ಟೆಯ ಊತವೂ ಇಳಿಯಲಿಲ್ಲ. ‘ಮಗುವು ಉಳಿಯಲಾರದು, ಮನೆಗೆ ಕರೆದುಕೊಂಡುಹೋಗಿ’ ಎಂದು ಹೇಳಿದರು. ಆಕೆ ಮಗುವನ್ನುಕರೆದುಕೊಂಡು ನಿನ್ನೆ ಮನೆಗೆ ಹಿಂದಿರುಗಿದ್ದಳು. ಈಗ ನನ್ನ ಕ್ಲಿನಿಕ್ಕಿಗೆ ಕರೆದುಕೊಂಡು ಬಂದಿದ್ದಳು.

ಇದು ನಕ್ಸ್ ವಾಮಿಕ ಪ್ರಕರಣವೆಂದು ನನಗೆ ಮನದಟ್ಟಾಯಿತು. ನಕ್ಸ್ ವಾಮಿಕ ಅಥವಾ ವಿಷಮುಷ್ಠಿ ಬೀಜದಿಂದ ತಯಾರಿಸಿದ ಹೋಮಿಯೋಪತಿ ಔಷಧವಿದೆ. ಇದರ ೩೦೦ ಸತ್ವದ ಐದು ಹನಿಗಳನ್ನು ಕುಡಿಸಲು ಹೋದೆ. ಮಗುವು ಬಾಯಿಯನ್ನೇ ತೆರೆಯಲಿಲ್ಲ. ಆಗ ಇದೇ ಔಷಧವನ್ನು ಇಂಜಕ್ಷನ್ ರೂಪದಲ್ಲಿ ನೀಡಿದೆ. ನಂತರ ಮಗುವಿನ ತಾಯಿ ಮಗುವಿನ ಬಳಿಯಲ್ಲೇ ಕುಳ್ಳಿರಲು ಹೇಳಿ ಹೊರಬಂದೆ. ೧೦ ನಿಮಿಷವಾಯಿತು. ನನ್ನ ಪರೀಕ್ಷಾ ಕೊಠಡಿಯಿಂದ ಪಟ ಪಟ ಪಠ್ ಎಂದು ಶಬ್ದ ಹೊರಬಂದಿತು. ಕೂಡಲೇ ಒಳಗೆ ಹೋದೆ. ಹಳದಿ ಮಿಶ್ರಿತ ಕಂದುಬಣ್ಣದ, ಅತ್ಯಂತ ದುರ್ವಾಸನೆಯನ್ನು ಬೀರುತ್ತಿದ್ದ ಮಲವು ಪಿಚಕಾರಿಯಿಂದ ನೀರು ಬರುವ ಹಾಗೆ ನಿರಂತರವಾಗಿ ಹೊರಬರುತ್ತಿತ್ತು. ನಾನು ಆ ತಾಯಿಗೆ ಅಲ್ಲೇ ಇರಲು ಹೇಳಿ ಮೂಗನ್ನು ಮುಚ್ಚಿಕೊಂಡು ಹೊರಬಂದೆ.

೧೦ ನಿಮಿಷ ಕಳೆಯಿತು. ಪರೀಕ್ಷಾ ಕೊಠಡಿಯಿಂದ ಅಮ್ಮಾ ಹಸಿವು ಎಂಬ ಕ್ಷೀಣ ಧ್ವನಿಕೇಳಿ ಬಂತು. ಆಗ ನಾನು ಒಳಗೆ ಹೋದೆ. ಮಗುವಿನ ಊದಿದ ಹೊಟ್ಟೆ ಇಳಿದು ಸಪಾಟಾಗಿತ್ತು. ಮಗು ಸರಾಗವಾಗಿ ಉಸಿರಾಡುತ್ತಿತ್ತು. ನಾನು ಒಂದುಲೋಟ ನೀರಿಗೆ ಒಂದಷ್ಟು ಗ್ಲೂಕೋಸ್ ಕದಡಿದೆ. ಮಗುವಿಗೆ ಕುಡಿಯಲು ನೀಡಿದೆ. ಇಡ್ಲಿ ಹಾಗೂ ಹಾಲನ್ನು ಕೊಡುವಂತೆ ಹೇಳಿದೆ. ಹೊರಗೆ ಬಂದೆ. ಆ ಮಗುವಿನ ನೋವನ್ನು ನಿವಾರಿಸಿದ ಹಾಗೂ ಆ ಮಹಿಳೆಯ ಚಿಂತೆಯನ್ನು ನಿವಾರಿಸಿದ ತೃಪ್ತಿ ನನ್ನ ಮುಖದಲ್ಲಿ ಮೂಡಿತು. 

ವೈದ್ಯಸಾಹಿತಿಯಾಗಿನನ್ನಅನುಭವ
ನನ್ನ ಅನುಭವವೇ ಲೇಖನಗಳಿಗೆ ಸ್ಪೂರ್ತಿ
– ಡಾ. ಬೋರಾಪುರದ ಜೈರಾಂ ಪಿ.ಯು.ಸಿ ಪರೀಕ್ಷೆ ಮುಗಿಯುತ್ತಿದ್ದಂತೆ ನಾನು ಬೆಂಗಳೂರಿಗೆ ಬಂದೆ. ಕರ್ನಾಟಕ ಹೋಮಿಯೋಪಥಿ ಕಾಲೇಜನ್ನು ಸೇರಿದೆ. ಅಲ್ಲಿ ನಾಲ್ಕು ವರ್ಷಗಳ ವೈದ್ಯಕೀಯ ಶಿಕ್ಷಣ ಮುಗಿಸಿದೆ. ನಂತರ ಮಂಡ್ಯದಲ್ಲಿ ಬಿ.ಎ. ಪದವಿ ಪೂರೈಸಿದೆ. ಹೈದ್ರಾಬಾದಿನಲ್ಲಿ ಎಸ್.ಐ.ಎ.ಟಿ.ಡಿಪ್ಲೋಮ ಮಾಡಿಕೊಂಡೆ. ೨ವರ್ಷಗಳ ನಂತರ ಮೇಲುಕೋಟೆಯ ಹತ್ತಿರದ ಜಕ್ಕನಹಳ್ಳಿಯಲ್ಲಿ ಕ್ಲಿನಿಕ್ ಆರಂಭಿಸಿ. ೬ ವರ್ಷಗಳ ಕಾಲ ನಡೆಸಿದೆ. ನಂತರ ಬ್ಯಾಂಕೊಂದರಲ್ಲಿ ವ್ಯವಸ್ಥಾಪಕನಾಗಿ ಸೇರಿಕೊಂಡೆ. ಮನೆಯಲ್ಲಿ ಹೋಮಿಯೋಪಥಿ ವೃತ್ತಿ ಮುಂದುವರೆಸಿದೆ. ಬ್ಯಾಂಕ್ ಕೆಲಸದಿಂದ ನಿವೃತ್ತಿಹೊಂದಿದ ಮೇಲೆ ಮನೆಯಲ್ಲಿಯೇ ವೈದ್ಯಕೀಯ ಕೆಲಸ ಮುಂದುವರೆಸಿದೆ.

ನಿವೃತ್ತಿಯ ನಂತರ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಬಂದಿತು. ಚೆಲುವ ಮತ್ತು ಇತರ ಕಥೆಗಳು, ಬಸುರಿಕಲ್ಲು, ಪುಸ್ತಕಗಳನ್ನು ಬರೆದೆ. ಇಷ್ಟರಲ್ಲಿಯೇ ಪಂಚಾಕ್ಷರೀ ಆಚಾರ್ಯ ರಾಮಾನುಜರು ಕೃತಿಯು ಬಿಡುಗಡೆ ಆಗಲಿದೆ. ಹೋಮಿಯೋಪಥಿ ವೈದ್ಯದ ಅನುಭವಗಳು ಎಂಬ ಪುಸ್ತಕವೂ ಹೊರಬೀಳಲಿದೆ. ನನ್ನ ಕೆಲವು ಅನುಭವ ಲೇಖನಗಳು ಕಸ್ತೂರಿ, ಹೋಮಿಯೋಪಥಿಕ್ ಬಂಧು, ಹೋಮಿಯೋಪಥಿ ಮುಂತಾದ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ನಾನು ಚಿಕಿತ್ಸೆ ನೀಡಿದ ಅನೇಕ ಅಪರೂಪದ ವೈದ್ಯಕೀಯ ಪ್ರಕರಣಗಳನ್ನು ಲೇಖನ ರೂಪದಲ್ಲಿಬರೆದು ಜನಸಾಮಾನ್ಯರಿಗೆ ತಿಳಿಸುವುದು ನನ್ನ ಬರಹದ ಉದ್ದೇಶ.

* * *