ಹೀಗೊಂದು ಲೈಂಗಿಕ ಸ್ವಾಸ್ಥ ಚಿಂತನೆ

ಖಂಡಿತಾ ಇದೆ!

ಇತ್ತೀಚಿನ ಹಲವು ಅಧ್ಯಯನಗಳ ಪ್ರಕಾರ, ಮಧ್ಯವಯಸ್ಸಿನ ಅನಂತರ ಪುರುಷ ಚೋದನಿಯಾದ ಟೆಸ್ಟೋಸ್ಟಿರೋನ್‌ನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪುರುಷನಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಸ್ಥಿತಿಗೆ ‘ಪುರುಷ ಋತುಬಂಧ’ ಎನ್ನುತ್ತಾರೆ.

ಪುರುಷ ಋತುಬಂಧವನ್ನು ಆಡಂ ಎಂದು ಸಂಕ್ಷಿಪ್ತವಾಗಿ ಕರೆಯುವರು. ಇದರ ಪೂರ್ಣ ರೂಪ ಆಂಡ್ರೋಜನ್ ಡೆಫಿಶಿಯನ್ಸಿ ಇನ್ ಏಜಿಂಗ್ ಮೆನ್ ಎಂದಾಗಿದೆ. ಅಂದರೆ ವಯಸ್ಸಾಗುತ್ತಿರುವ ಪುರುಷರಲ್ಲಿ ಪುರುಷ ಲಕ್ಷಣ ವರ್ಧಕ ಹಾರ್ಮೋನುಗಳ ಕೊರತೆ ಎಂದು ಕನ್ನಡದಲ್ಲಿ ಅರ್ಥ. ಇದನ್ನು ಮೇಲ್ ಮೆನೋಪಾಸ್ ವಿರೋಪಾಸ್ ಅಥವ ಕ್ಲೈಮಾಕ್ಟೆರಿಕ್ ಎಂದೂ ಕರೆಯುವರು.

ಆಡಮ್ ಎಂದರೆ ಏನು? ಇದಕ್ಕೆ ಕಾರಣವೇನು? ಇದನ್ನು ತಿಳಿಯಲು ಯಾವ ಯಾವ ಪರೀಕ್ಷೆಗಳನ್ನು ಮಾಡುತ್ತಾರೆ? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.

ಸ್ತ್ರೀಯರಲ್ಲಿ ಸ್ತ್ರೀ ಲಕ್ಷಣಗಳನ್ನು ವರ್ಧಿಸುವ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಎಂಬಹಾರ್ಮೋನ್‌ಗಳಿವೆ. ಹಾಗೆಯೇ ಪುರುಷರಲ್ಲಿಯೂ ಪುರುಷ ಲಕ್ಷಣ ವರ್ಧಕ ಹಾರ್ಮೋನುಗಳಿವೆ. ಇವನ್ನು ಆಂಡ್ರೋಜನ್ ಎಂದು ಕರೆಯುವರು. ಋತುಬಂಧವು ಸ್ತ್ರೀ ಹಾಗೂ ಪುರುಷರಲ್ಲಿ ಕಂಡುಬರಲು ಈ ಹಾರ್ಮೋನ್‌ಗಳ ಕೊರತೆ ಕಾರಣವಾಗುತ್ತದೆ. ಸ್ತ್ರೀಯರಲ್ಲಿ ಈ ಹಾರ್ಮೋನುಗಳ ಕೊರತೆ ಉಂಟಾದಾಗ ಋತುಚಕ್ರ ನಿಲ್ಲುತ್ತದೆ. ಇದು ಋತುಬಂಧ ಆರಂಭವಾಗಿರುವ ಸ್ಪಷ್ಟ ಲಕ್ಷಣ. ಆದರೆ ಪುರುಷರಲ್ಲಿ ಇಂತಹ ಯಾವುದೇ ಸ್ಪಷ್ಟ ಲಕ್ಷಣ ಕಂಡುಬರುವುದಿಲ್ಲ. ಪುರುಷರಲ್ಲಿ ಇದು ಸರಿ ಸುಮಾರು ೪೦ ರಿಂದ ೫೫ ವಯಸ್ಸಿನ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ.

ಟೆಸ್ಟೋಸ್ಟಿರೋನ್ ಹಾರ್ಮೋನನ್ನು ಕನ್ನಡದಲ್ಲಿ ಪುರುಷಲಕ್ಷಣ ವರ್ಧಕ ಹಾರ್ಮೋನುಗಳು ಎಂದು ಕರೆದೆವು. ಒಬ್ಬ ಬಾಲಕ ಹದಿಹರೆಯಕ್ಕೆ ಕಾಲಿಟ್ಟಾಗ ಆ ಬಾಲಕನ ವೃಷಣಗಳು ಈ ಹಾರ್ಮೋನ್‌ನನ್ನು ಉತ್ಪಾದಿಸಲು ಆರಂಭಿಸುತ್ತವೆ. ಅವನ ದೈಹಿಕ, ಮಾನಸಿಕ, ಭಾವನಾತ್ಮಕ, ಲೈಂಗಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಆಗ ಹುಡುಗನು ಬಾಲ್ಯವನ್ನು ಕ್ರಮಿಸಿ ಪ್ರೌಢಾವಸ್ಥೆಯನ್ನು ತಲುಪುತ್ತಾನೆ. ಈ ಬದಲಾವಣೆಗಳ ಜೊತೆಗೆ ಬಾಲಕನ ಮೂಳೆಗಳ ಬೆಳವಣಿಗೆಗೆ, ಸ್ನಾಯುವರ್ಧನೆಗೆ, ಕೆಂಪುರಕ್ತ ಕಣಗಳ ಉತ್ಪಾದನೆಗೆ ಟೆಸ್ಟೋಸ್ಟೀರೋನ್‌ ಕಾರಣವಾಗುತ್ತದೆ. ಮಾನಸಿಕ ಬೆಳವಣಿಗೆ ಹಾಗೂ ಭಾವನೆಗಳ ಬೆಳವಣಿಗೆಗೆ ಟೆಸ್ಟೋಸ್ಟಿರೋನ್ ಅಪಾರ ಪ್ರಮಾಣದಲ್ಲಿ ನೆರವಾಗುತ್ತದೆ. ಓರ್ವ ಪುರುಷನ ಬಾಳಿನ ೨೦, ೩೦ ವರ್ಷಗಳ ವಯಸ್ಸಿನಲ್ಲಿ ಟೆಸ್ಟೋಸ್ಟಿರೋನ್ ಗರಿಷ್ಠ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ನಂತರ ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕಡಿಮೆಯಾಗುವ ವೇಗ ಒಬ್ಬೊಬ್ಬ ಪುರುಷನಲ್ಲಿ ಒಂದೊಂದು ಪ್ರಮಾಣದಲ್ಲಿರಬಹುದು. ಯಾರಲ್ಲಿ ಈ ವೇಗ ತೀವ್ರವಾಗಿರುತ್ತದೆಯೋ, ಅವರಲ್ಲಿ ಪುರುಷಬಂಧವೂ ಬೇಗ ಕಾಣಿಸಿಕೊಳ್ಳುತ್ತದೆ.

ಪುರುಷ ಋತುಬಂಧಕ್ಕೆ ಒಳಗಾಗುತ್ತಿರುವವರಲ್ಲಿ ಕಂಡುಬರುವ ಸಾಮಾನ್ಯ ದೈಹಿಕ ಹಾಗೂ ಮಾನಸಿಕ ರೋಗಲಕ್ಷಣಗಳು ಈ ಕೆಳಕಂಡಂತಿರುತ್ತದೆ:

 • ಸುಸ್ತು, ಚಟುವಟಿಕೆ ಕಡೆಮೆಯಾಗುವುದು ಶಕ್ತಿ ಕಡಿಮೆಯಾಗಿದೆ ಎಂದು ಭಾವಿಸುವುದು.
 • ಮೂಳೆ ಕೀಲುಗಳಲ್ಲಿ ನೋವು, ಕೈಗಳು ಬಿಗಿಯಾದಂತನ್ನಿಸುವುದು.
 • ಸ್ನಾಯುಗಳಲ್ಲಿ ನೋವು
 • ಮೈಯಲ್ಲಿ ಬಿಸಿ ಬಿಸಿಯಾದ ಅನುಭವ
 • ನಿದ್ದೆಯಲ್ಲಿ ತೊಂದರೆಗಳು
 • ಖಿನ್ನತೆ, ಬೇಸರ, ಕೆಲಸಗಳಲ್ಲಿ ನಿರಾಸಕ್ತಿ
 • ಕಿರಿ ಕಿರಿ, ವಿಪರೀತ ಕೋಪ
 • ಕೂದಲು, ಚರ್ಮದಲ್ಲಿ ಬದಲಾವಣೆ
 • ಲೈಂಗಿಕಾಸಕ್ತಿಯ ಕೊರತೆ ಇದು ಶೇ. ೮೦ರಷ್ಟು ಜನರಲ್ಲಿ ಕಂಡುಬರುತ್ತದೆ.
 • ನಿಮಿರು ದೌರ್ಬಲ್ಯ.

ಇವೆಲ್ಲವೂ ಆರೋಗ್ಯವಂತನಾಗಿದ್ದ ಪುರುಷನಲ್ಲಿ ಒಮ್ಮೆಲೇ ಇಲ್ಲ ಕ್ರಮವಾಗಿ ಕಂಡುಬರುವ ಲಕ್ಷಣಗಳು. ಕೆಲವು ಪುರುಷರಲ್ಲಿ ನಾನಾ ಅನಾರೋಗ್ಯಗಳ ಕಾರಣದಿಂದ ಪುರುಷ ಋತುಬಂಧವು ಅಕಾಲಿಕವಾಗಿ ಕಂಡುಬರಬಹುದು. ಅಂತಹ ಕೆಲವು ಉದಾಹರಣೆಗಳು :

 • ವೃಷಣ ಸೋಂಕುಗಳು
 • ವೃಷಣ (ವೃಷಣದ ಕ್ಯಾನ್ಸರ್‌)
 • ವೃಷಣಕ್ಕೆ ಪೆಟ್ಟು ಬೀಳುವುದು
 • ವೃಷಣ ಕಾರ್ಯ ಹಠಾತ್ ನಿಲ್ಲುವಿಕೆ
 • ತಂಬಾಕು ಸೇವನೆ
 • ಅನಿಯಂತ್ರಿತ ಸಕ್ಕರೆ ಖಾಯಿಲೆ
 • ಕ್ಯಾನ್ಸರ್ ಚಿಕಿತ್ಸೆಯ ಒಂದು ಭಾಗವಾದ ರಾಸಾಯನಿಕ ಚಿಕಿತ್ಸೆ (ಕೀಮೋಥೆರಪಿ)
 • ಕ್ಷಕಿರಣ ಚಿಕಿತ್ಸೆ

ಪರೀಕ್ಷೆಗಳು

ಪುರುಷರಲ್ಲಿ ಋತುಬಂಧ ಆರಂಭವಾಗುವ ಲಕ್ಷಣಗಳನ್ನು ಪುರುಷರೂ ಮತ್ತು ಸ್ತ್ರೀಯರೂ ತಿಳಿದುಕೊಳ್ಳಬೇಕು. ಮಧ್ಯ ವಯಸ್ಸಿಗೆ ಬಂದಿರುವ ಓರ್ವ ಪುರುಷ, ಮೇಲಿನ ಲಕ್ಷಣಗಳನ್ನು ತೋರಿದರೆ ಅದನ್ನು ನಿರ್ಲಕ್ಷಿಸದೆ, ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಯಾವುದೇ ನಿರ್ದಿಷ್ಟ ರೋಗವಿಲ್ಲವೆಂದು ಖಚಿತವಾದ ಮೇಲೆ ಆತನ ರಕ್ತದಲ್ಲಿ ಟೆಸ್ಟೋಸ್ಟಿರೋನಿನ ಪ್ರಮಾಣ ಎಷ್ಟಿದೆಯೆಂದು ಪರೀಕ್ಷಿಸಬೇಕು.

ಆರೋಗ್ಯವಂತ ಪುರುಷನ ರಕ್ತದಲ್ಲಿ ಮುಕ್ತ ಟೆಸ್ಟೋಸ್ಟಿರೋನ್ ೩೦೦ ರಿಂದ ೧೧೦೦ ಎನ್‌ಜಿ/ಡಿಎಲ್ ಇರುತ್ತದೆ. ಈ ಪ್ರಮಾಣವು ೨೫೦ ಎನ್ ಜಿ/ಡಿಎಲ್‌ಗಿಂತಲೂ ಕಡಿಮೆಯಾದಾಗ ಆ ವ್ಯಕ್ತಿಗೆ ಟೆಸ್ಟೋಸ್ಟೀರೊನಿನ ಕೊರತೆ ಉಂಟಾಗಿದೆ ಎನ್ನಬಹುದು.

ಚಿಕಿತ್ಸೆ

ಪುರುಷ ಋತುಬಂಧಕ್ಕೆ ಚಿಕಿತ್ಸೆಯಿದೆ :

ಸ್ತ್ರೀಯರಲ್ಲಿ ಋತುಬಂಧ ಕಾಣಿಸಿಕೊಂಡಾಗ ಅವರಿಗೆ ಈಸ್ಟ್ರೋಜನ್ ಹಾರ್ಮೋನಿನ ಮರುಪೂರೈಕೆಯ ಚಿಕಿತ್ಸೆಯನ್ನು ನೀಡುವಂತೆ ಪುರುಷರಲ್ಲಿಯೂ ಟೆಸ್ಟೋಸ್ಟಿರೋನ್ ಹಾರ್ಮೋನನ್ನು ಕೊಡಬಹುದು. ಇದರ ಜೊತೆಗೆ ವಯಾಗ್ರ ಉಪಯೋಗಿಸುವುದರಿಂದ ಪುರುಷನ ಲೈಂಗಿಕ ಬದುಕು ಸುಧಾರಿಸುತ್ತದೆ.

ಟೆಸ್ಟೋಸ್ಟಿರೋನ್ನನ್ನು ಗುಳಿಗೆಗಳ ಮೂಲಕ ನೀಡಬಹುದು. ಸೂಜಿಮದ್ದಿನ ಮೂಲಕವೂ ನೀಡಬಹುದು. ಗುಳಿಗೆಗಳ ಬೆಲೆ ಸ್ವಲ್ಪ ದುಬಾರಿ. ಒಂದು ದಿನದ ವೆಚ್ಚ ಸುಮಾರು ರೂ. ೪೦ ಆಗಬಹುದು. ಸೂಜಿಮದ್ದನ್ನು ೧೫ ದಿನಗಳಿಗೆ ಒಮ್ಮೆ ತೆಗೆದುಕೊಳ್ಳಬೇಕಾಗುತ್ತದೆ.

ಟೆಸ್ಟೋಸ್ಟೀರೊನ್ ಮರುಪೂರೈಕೆಯಿಂದ ವ್ಯಕ್ತಿಯ ದೇಹದಲ್ಲಿ ಕಂಡುಬರುವ ಬದಲಾವಣೆಗಳನ್ನು ಹೀಗೆ ಪಟ್ಟಿಮಾಡಬಹುದು :

 • ಭಾವನೆಗಳಲ್ಲಿ ಸುಧಾರಣೆ, ಆಹ್ಲಾದಕರ ಭಾವನೆ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದಲ್ಲಿ ಸುಧಾರಣೆ.
 • ಕೋಪ, ಸಿಡಿಮಿಡಿ, ಬೇಜಾರು, ಸುಸ್ತು ಹೆದರಿಗೆ ಇತ್ಯಾದಿಗಳು ಕಡಿಮೆಯಾಗುವುದು.
 • ನಿದ್ರೆಯಲ್ಲಿ ಸುಧಾರಣೆ
 • ಲೈಂಗಿಕಾಸಕ್ತಿ ಹಾಗೂ ನಿಮಿರು ದೌರ್ಬಲ್ಯದಲ್ಲಿ ಸುಧಾರಣೆ
 • ಸ್ನಾಯುಗಳ ಶಕ್ತಿ ವರ್ಧನೆ, ಬೊಜ್ಜಿನಲ್ಲಿ ಇಳಿತ
 • ಮೂಳೆಗಳು ಗಟ್ಟಿಯಾಗುವುದು
 • ಹೃದ್ಯೋಗಗಳು ತೊಂದರೆಗಳಲ್ಲಿ ಸುಧಾರಣೆ

ಪಾರ್ಶ್ವ ಪರಿಣಾಮಗಳು

ಟೆಸ್ಟೋಸ್ಟೀರೋನ್ ಹಾರ್ಮೋನಿನ ಪೂರೈಕೆಯನ್ನು ಎಲ್ಲ ಪುರುಷರಿಗೂ ನೀಡುವುದು ಸಾಧ್ಯವಿಲ್ಲ. ಅಂತಹ ಕೆಲವು ಸಂದರ್ಭಗಳು ಹೀಗಿವೆ :

 • ಪ್ರಾಸ್ಟೆಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್
 • ಪ್ರಾಸ್ಟೆಟ್ ಗ್ರಂಥಿಯ ಅತಿ ವೃದ್ಧಿ
 • ಯಕೃತ್ತು ಕಾಯಿಲೆಗಳು
 • ಮೂತ್ರಪಿಂಡದ ಕಾಯಿಲೆಗಳು
 • ಅನಿಯಂತ್ರಿತ ಸಕ್ಕರೆ ಕಾಯಿಲೆಗಳು
 • ಹಾರ್ಮೋನುಗಳಿಗೆ ಅಲರ್ಜಿ
 • ರಕ್ತ ಹೆಪ್ಪುಗಟ್ಟುವಲ್ಲಿ ಇರುವ ತೊಂದರೆಗಳು
 • ಹಾಸಿಗೆ ಹಿಡಿದಿರುವ ವ್ಯಕ್ತಿಗಳು

ಟೆಸ್ಟೋಸ್ಟಿರೋನ್‌ ಹಾರ್ಮೋನಿನ ಮರುಪೂರೈಕೆಯ ಚಿಕಿತ್ಸೆಯನ್ನು ಪಡೆಯುವ ಮೊದಲು ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯವನ್ನು ತಿಳಿಸುವ ಪಿ.ಎಸ್.ಎ. ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಯಕೃತ್, ಮೂತ್ರಪಿಂಡಗಳು, ಆರೋಗ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಆ ನಂತರ ಚಿಕಿತ್ಸೆಯನ್ನು ಪಡೆಯಬಹುದು, ಚಿಕಿತ್ಸಾವಧಿಯಲ್ಲೂ ಮೂರು ತಿಂಗಳಿಗೆ ಒಮ್ಮೆ ಈ ಪರೀಕ್ಷೆಗಳನ್ನು ಪುನರಾವರ್ತಿಸಬೇಕಾಗುತ್ತದೆ.

ಉಪಸಂಹಾರ : ಪುರುಷನಲ್ಲಿ ಋತುಬಂಧ ಕಾಣಿಸಿಕೊಳ್ಳುವುದು ನಿಜ. ಇದು ಕಾಣಿಸಿಕೊಳ್ಳುವ ನಿರ್ದಿಷ್ಟ ಅವಧಿಯಾಗಲಿ, ನಿರ್ದಿಷ್ಟ ಲಕ್ಷಣವಾಗಲಿ ಇಲ್ಲ. ರಕ್ತದಲ್ಲಿ ಇರುವ ಟೆಸ್ಟೋಸ್ಟಿರೋನಿನ ಪ್ರಮಾಣವನ್ನು ತಿಳಿಯುವುದರ ಮೂಲಕ ಪುರುಷ ಋತುಬಂಧ ಬಂದಿರುವ ಬಗ್ಗೆ ಖಚಿತವಾಗಿ ಹೇಳಬಹುದು. ಹಾರ್ಮೋನು ಪೂರೈಕೆಯ ಮೂಲಕ ಪುರುಷ ಲೈಂಗಿಕ ಹಾಗೂ ಸಾಮಾನ್ಯ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ಇದಕ್ಕಾಗಿ ತಜ್ಞ ವೈದ್ಯರ ಉಸ್ತುವಾರಿಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

ವೈದ್ಯಸಾಹಿತಿಯಾಗಿನನ್ನಅನುಭವ
ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ
– ಡಾ|| ಪದ್ಮಿನಿ ಪ್ರಸಾದ್ನನ್ನಲ್ಲಿ ಹುಟ್ಟಿನಿಂದ ಬರವಣಿಗೆಯ ಕಲೆ ರೂಢಿಸಿರದಿದ್ದರೂ, ಬಲವಂತವಾಗಿ ನನ್ನಲ್ಲಿಯ ಲೇಖಕಿಯನ್ನು ಹೊರಗೆ ತಂದವರು ಇಬ್ಬರು ವ್ಯಕ್ತಿಗಳು ಅವರೆಂದರೆ ನನ್ನ ಪತಿ ಡಾ| ಕೆ.ಎನ್. ಪ್ರಸಾದ್ ಹಾಗೂ ನನ್ನ ಬಾಲ್ಯದ ಗೆಳತಿ ಡಾ|| ಆರ್.ಪೂರ್ಣಿಮಾ.

ಬದುಕಿನಲ್ಲಿ ನಮ್ಮ ಅನುಭವಕ್ಕೆ ಬಂದರೂ ಅರಿವಿಗೆ ಸರಿಯಾಗಿ ಬಾರದ ಅನೇಕ ಸಂಗತಿಗಳು ಇರುತ್ತವೆ. ಇವುಗಳಲ್ಲಿ ಲೈಂಗಿಕತೆ ಮುಖ್ಯವಾದುದು. ನಾನು ಲೈಂಗಿಕ ವಿಜ್ಞಾನದಲ್ಲಿ ಪರಿಣಿತಿ ಪಡೆದುಕೊಂಡಾಗ, ಆರೋಗ್ಯಕರ ಲೈಂಗಿಕತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಬರವಣಿಗೆಯನ್ನು ರೂಢಿಸಿಕೊಳ್ಳಲು ನನ್ನನ್ನು ಪ್ರೇರೇಪಿಸಿದವರು ಪ್ರಸಾದ್ ಮತ್ತು ಪೂರ್ಣಿಮಾ.

’ಲೈಂಗಿಕತೆಯ’ ಬಗ್ಗೆ ಮಾತನಾಡುವುದೇ ಅಪರಾಧವೆನ್ನುವ ಕಾಲವೊಂದಿತ್ತು. ಇನ್ನು ಅದರ ಬಗ್ಗೆ ಓದಿ ತಿಳಿಯುವುದಂತೂ ದೂರ ಉಳಿದಿತ್ತು. ಆದರೂ ಅನೇಕರು ಅಂದು ಸಿಗುತ್ತಿದ್ದ ಲೈಂಗಿಕ ಸಾಹಿತ್ಯವನ್ನೆ ಕದ್ದು ಮುಚ್ಚಿ ಓದುತ್ತಿದ್ದರು. ಅಪ್ರಬುದ್ಧ, ಅಶ್ಲೀಲ, ಅವೈಜ್ಞಾನಿಕ ಬರವಣಿಗೆಗಳು ಅನುಕೂಲಕ್ಕಿಂತ ಅನಾನುಕೂಲವನ್ನೇ ಉಂಟುಮಾಡುತ್ತಿದ್ದವು. ಅದರಿಂದಾಗಿ ಜನರಲ್ಲಿ ಮಿಥ್ಯೆ ಮತ್ತು ತಪ್ಪು ತಿಳಿವಳಿಕೆಗಳು ಹೆಚ್ಚಾಗುತ್ತಿದ್ದುವು. ಜನರಲ್ಲಿದ್ದ ಈ ಅರೆಬರೆ ಜ್ಞಾನವನ್ನೆ ಬಂಡವಾಣವನ್ನಾಗಿ ಮಾಡಿಕೊಂಡ ಯಾವುದೇ ಅರ್ಹತೆಗಳಿಲ್ಲದಿದ್ದ ನಕಲಿ ವೈದ್ಯರು ಜನರನ್ನು ತಪ್ಪುದಾರಿಗೆಳೆಯುತ್ತಿದ್ದ ಸಮಯದಲ್ಲಿ ಲೈಂಗಿಕ ಸಂತಾನೋತ್ಪತ್ತಿ ಲೈಂಗಿಕ ಆರೋಗ್ಯ ಇವುಗಳಿಗೆ ಸಂಬಂಧಿಸಿದ ಲೇಖನಗಳನ್ನು, ಪ್ರಶ್ನೋತ್ತರ ಕಾಲಂಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಆಸೆಯಿಂದ ಅನೇಕ ದಿನಪತ್ರಿಕೆಗಳು, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಬರೆಯುತ್ತಾ ಬಂದಿದ್ದೇನೆ. ಮುಖ್ಯವಾಗಿ ತರಂಗ, ಸುಧಾ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಉದಯವಾಣಿ, ಸಂಜೆವಾಣಿ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾನು ಬರೆಯುವ ಲೇಖನಗಳನ್ನು ನನ್ನ ಪತಿ ಪ್ರಸಾದ್ ಅವರು ಸ್ವಲ್ಪ ಮಟ್ಟಿಗೆ ಸಂಸ್ಕರಿಸಿ ಕೊಡುತ್ತಾರೆ.

ನನ್ನ ಲೇಖನಗಳು ಹಾಗೂ ಪುಸ್ತಕಗಳಿಗೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ಬಂದಿವೆ. ಇದು ನನಗೆ ಮತ್ತೆ ಮತ್ತೆ ಬರೆಯಲು ಸ್ಫೂರ್ತಿ ಹಾಗೂ ಪ್ರೇರಣೆಯನ್ನು ನೀಡುತ್ತಿದೆ. ಲೈಂಗಿಕತೆಯ ಬಗ್ಗೆ ವೈಜ್ಞಾನಿಕ ಮತ್ತು ವಾಸ್ತವ ವಿಷಯಗಳ ಬಗೆಗಿನ ಬರಹಗಳಾದ್ದರಿಂದ ಜನರು ಅವನ್ನು ಮುಕ್ತವಾಗಿ ಸ್ವೀಕರಿಸಿದ್ದಾರೆ. ನನ್ನ ‘ಲೈಂಗಿಕ ಆರೋಗ್ಯ’ ಪುಸ್ತಕಕ್ಕೆ ಡಾ| ಪಿ.ಎಸ್.ಶಂಕರ ಪ್ರತಿಷ್ಠಾನದ ಪ್ರಶಸ್ತಿ ಸಿಕ್ಕಿದೆ. ಇವೆಲ್ಲಾ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಹೆಚ್ಚು ವೈದ್ಯಸಾಹಿತ್ಯವನ್ನು ಹೊರತರಲು ಪ್ರೇರೇಪಿಸುತ್ತಿವೆ. ಒಂದು ಆಶ್ಚರ್ಯದ ಸಂಗತಿಯೆಂದರೆ ಓದುಗರು ನನ್ನ ಬರಹಗಳನ್ನು ಅಶ್ಲೀಲ ಸಾಹಿತ್ಯವೆಂದು ಪರಿಗಣಿಸದೆ, ಸಂಪೂರ್ಣ ವೈಜ್ಞಾನಿಕ ಸಾಹಿತ್ಯವೆಂದು ಒಪ್ಪಿಕೊಂಡಿರುವುದಾಗಿದೆ. ಇದಕ್ಕಾಗಿ ಎಲ್ಲ ಓದುಗರಿಗೂ ನಾನು ಚಿರಋಣಿ.

* * *