ಪ್ರಪಂಚದಲ್ಲಿ ಇರುವ ಎಲ್ಲಾ ವೈದ್ಯ ಪದ್ಧತಿಗಳ ಚಿಕಿತ್ಸೆಗಳಿಗೂ ತನ್ನದೇ ಇತಿಮಿತಿಗಳಿವೆ. ಹಲವಾರು ವೈದ್ಯಪದ್ಧತಿಗಳಲ್ಲಿ ಒಂದಾದ ಆಯುರ್ವೇದಕ್ಕೂ ಇತಿಮಿತಿ ಇರಬೇಕಲ್ಲವೇ? ಒಂದು ವೈದ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿದ ವೈದ್ಯ ತನ್ನ ಚಿಕಿತ್ಸಾ ಪದ್ಧತಿಯ ಇತಿಮಿತಿಯ ಬಗ್ಗೆ ತಿಳಿಸಲು ಸಮರ್ಥನೆ? ಏಕೆಂದರೆ ಪ್ರತಿಯೊಂದು ವೈದ್ಯ ಪದ್ಧತಿಯೂ ಒಂದೊಂದು ಜ್ಞಾನ ಸಾಗರ. ಆದ್ದರಿಂದ ಎಷ್ಟೇ ಪರಿಣಿತನಾದರೂ ವೈದ್ಯನೂ ಖಚಿತವಾಗಿ ತನ್ನ ವೈದ್ಯಶಾಸ್ತ್ರದ ಮಿತಿಯನ್ನು ತಿಳಿಸಲಾರ. ಹಾಗೆಯೇ ಆಯುರ್ವೇದದ ಇತಿಮಿತಿಯ ಬಗ್ಗೆ ಯಾರಾದರೂ ಯೊಚಿಸಿದರೆ ಅದು ಆ ವೈದ್ಯನ ಇತಿಮಿತಿಯಾಗುತ್ತದೆ. ವೈದ್ಯನ ಜ್ಞಾನ ಮತ್ತು ಅನುಭವವು ಹೆಚ್ಚಾದಂತೆಲ್ಲಾ ಇತಿಮಿತಿಯ ವ್ಯಾಪ್ತಿಯು ಹೆಚ್ಚಾಗುತ್ತದೆ.

ಜನಸಾಮಾನ್ಯರಲ್ಲಿ ಮತ್ತು ಆಯುರ್ವೇದ ವೈದ್ಯ ವಿದ್ಯಾರ್ಥಿಗಳಲ್ಲಿ ಆಯುರ್ವೇದ ಚಿಕಿತ್ಸೆಯು ಅತಿ ನಿಧಾನವಾಗಿ ಕೆಲಸಮಾಡುತ್ತದೆ ಎಂದೂ, ತುರ್ತು ಚಿಕಿತ್ಸೆಗಳಿಗೆ ಇದು ಪ್ರಯೋಜನವಾಗದು ಎಂಬ ತಪ್ಪು ಅಭಿಪ್ರಾಯವಿದೆ. ಕೇವಲ ನೂರು ವರ್ಷಗಳಿಂದ ಆಧುನಿಕ ವೈದ್ಯ ಪದ್ಧತಿಯು ಪ್ರಚಲಿತವಾಗಿದೆ. ಇದಕ್ಕೆ ಮುಮಚೆ ನಮ್ಮಲ್ಲಿ ತುರ್ತು ಪರಿಸ್ಥಿತಿಯು ರೋಗಿಗಳಲ್ಲಿ ಬರುತ್ತಿರಲಿಲ್ಲವೇ? ಜ್ವರ, ಭೇದಿ ಮುಂತಾದ ರೋಗಗಳು ಆಗ ಜನರಲ್ಲಿರಲಿಲ್ಲವೇ? ಇಂತಹ ಪರಿಸ್ಥಿತಿಗಳಲ್ಲಿ ನಮ್ಮ ಪೂರ್ವಿಕರು ಆಯುರ್ವೇದ ಚಿಕಿತ್ಸೆಗಳಿಂದಲೇ ಗುಣಮುಖವಾಗುತ್ತಿದ್ದರು. ಆದ್ದರಿಂದ ಇಂದಿಗೂ ತಕ್ಷಣ ಉಪಶಮನ ಕೊಡುವ ಶಾಸ್ತ್ರೀಯ ಚಿಕಿತ್ಸೆಗಳು ಆಯುರ್ವೇದದಲ್ಲಿವೆ. ಇವುಗಳನ್ನು ಆಳವಾಗಿ ಅಭ್ಯಾಸ ಮಾಡಿ, ದೃಢ ನಂಬಿಕೆಯಿಂದ ರೋಗಿಗಳಿಗೆ ಬಳಸಿದರೆ ವೈದ್ಯರಿಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಇದರ ಬಲವಾಗಿ ಮೇಲ್ನೋಟಕ್ಕೆ ಹೆಕ್ಕಿ ಬಳಸುವ ಚಿಕಿತ್ಸೆಗಳಿಂದ ಯಾವ ಪ್ರಯೋಜನವೂ ಇಲ್ಲ. ಇದೇ ದೃಷ್ಟಿಯಿಂದ ನಾನು, ನನ್ನ ವಿದ್ಯಾರ್ಥಿಗಳಿಗೆ ಕೆಳಕಂಡಂತೆ ತಿಳಿಸುತ್ತೇನೆ. ಆಯುರ್ವೇದ ಎಂಬುದು ಒಂದು ಸಾಗರ. ಇದರ ಬಗ್ಗೆ ಸಾಮಾನ್ಯವಾಗಿ ಜ್ಞಾನವನ್ನು ಹೊಂದಿದರೆ, ಸಾಗರದ ಮೇಲೆ ಸಿಗುವ ಮೀನು, ಸೀಗಡಿ ಮುಂತಾದವನ್ನು ಪಡೆದಂತಾಗುವುದು. ಇದರ ಬದಲಾಗಿ ಸಾಗರದ ಆಳಕ್ಕೆ ಇಳಿಯುವ ಸಾಹಸ ಮಾಡಿದರೆ ಅಮೂಲ್ಯ ಹವಳ, ಮುತ್ತು ಮುಂತಾದವು ಸಿಗುತ್ತವೆ. ಇದೇ ರೀತಿಯ ಆಳವಾದ ಆಯುರ್ವೇದದ ಜ್ಞಾನವು ರೋಗದ ಯಾವುದೇ ಸ್ಥಿತಿಯಲ್ಲಿ ಚಿಕಿತ್ಸೆ ಮಾಡಲು ಸಹಾಯಕವಾಗುತ್ತದೆ.

ಉದಾಹರಣೆಗೆ ಜ್ವರ ಚಿಕಿತ್ಸೆಯ ಬಗ್ಗೆ ತಿಳಿಯೋಣ. ವಾತ ಜ್ವರಗಳಲ್ಲಿ ಅಮೃತಾರಿಷ್ಠ, ಪರ್ವಟಾದ್ಯರಿಷ್ಟ ಇತ್ಯಾದಿಗಳನ್ನು, ಪಿತ್ತ ಜ್ವರದಲ್ಲಿ ಸುದರ್ಶನ ಚೂರ್ಣದ ಮಾತ್ರೆಯನ್ನು, ಕಫಜ್ವರದಲ್ಲಿ, ತ್ರಿಭುವನ ಕೀರ್ತಿ, ಸಂಜೀವಿನಿವಟಿ ಮುಂತಾದವನ್ನು ಬಳಸಬಹುದು. ಈ ಔಷಧಗಳನ್ನು ಪ್ರತಿ ಗಂಟೆಗೂ ಕೊಡುತ್ತಾ ಸೂಕ್ತ ಪಥ್ಯವನ್ನು ವಿಧಿಸಬೇಕು. ಈ ಕ್ರಮದಿಂದ ಯಾವುದೇ ತರಹದ ಜ್ವರಗಳು ತಹಬದಿಗೆ ಬರುತ್ತವೆ. ಇಂತಹ ಅನೇಕ ಶಾಸ್ತ್ರೀಯ ಚಿಕಿತ್ಸೆಗಳು ಆಯುರ್ವೇದದಲ್ಲಿ ಲಭ್ಯವಿದೆ.

ಪ್ರಾಚೀನ ಆಯುರ್ವೇದವು ಎಂಟು ಅಂಗಗಳನ್ನು ಹೊಂದಿತ್ತು. ಕಾಯ ಚಿಕಿತ್ಸೆ, ಬಾಲ ಚಿಕಿತ್ಸೆ, ಗ್ರಹ ಚಿಕಿತ್ಸೆ, ಶಾಲಾಕ್ಯ ಚಿಕಿತ್ಸೆ, ಶಲ್ಯ ಚಿಕಿತ್ಸೆ, ವಿಷ ಚಿಕಿತ್ಸೆ, ರಸಾಯನ ಚಿಕಿತ್ಸೆ ಮತ್ತು ವಾಜಿಕರಣ ಚಿಕಿತ್ಸೆಗಳೇ ಆ ಎಂಟು ಅಂಗಗಳು. ಇವುಗಳಲ್ಲಿ ಕಾಯ ಚಿಕಿತ್ಸೆಯನ್ನು ಬಿಟ್ಟು ಉಳಿದ ಅಂಗಗಳ ಬಗ್ಗೆ ಪೂರ್ಣ ಮಾಹಿತಿಯು ಈಗ ಅಲಭ್ಯವಾದ ಕಾರಣ ಇಂದಿನ ಆಯುರ್ವೇದ ವೈದ್ಯ ಕೆಲವು ರೋಗ ಸ್ಥಿತಿಯಲ್ಲಿ ಆಧುನಿಕ ವೈದ್ಯರಲ್ಲಿ ಕಳುಹಿಸಬೇಕಾಗುತ್ತದೆ. ಉದಾಹರಣೆಗೆ ಅಪೆಂಡಿಸೈಟಿಸ್ ಮುಂತಾದ ಶಸ್ತ್ರಚಿಕಿತ್ಸೆ ಮಾಡಬೇಕಾದ ರೋಗಗಳಲ್ಲಿ ಆಧುನಿಕ ಶಸ್ತ್ರಚಿಕಿತ್ಸಕನ ನೆರವು ಬೇಕೇ ಬೇಕು. ಅಪಘಾತ ಉಂಟಾದ ರೋಗಿಗಳಲ್ಲಿ ರಕ್ತಸ್ರಾವ ಉಂಟಾಗಿದ್ದರೆ, ರಕ್ತ ಪೂರೈಕೆ ಮಾಡಲು ಆಸ್ಪತ್ರೆಗೆ ಸೇರಿಸಬೇಕು. ಭಗಂದರ, ಅಶಣಸ್ ಮುಂತಾದ ರೋಗಗಳಲ್ಲಿ ಕ್ಷಾರ ಸೂತ್ರವನ್ನು ಕಟ್ಟುವಾಗ ಆಧುನಿಕ ಅರಿವಳಿಕೆ ಔಷಧ ತಜ್ಞರ ಸಹಾಯ ಬೇಕು.

ಆಯುರ್ವೇದ ಏಳು ಅಂಗಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿದರೆ ಈ ಸಮಸ್ಯೆಗಳು ಮುಂದೆ ಪರಿಹಾರವಾಗಬಹುದು.

ಉಳಿದ ಚಿಕಿತ್ಸಾ ಪದ್ಧತಿಗಳಲ್ಲಿಲ್ಲದ ಚಿಕಿತ್ಸಾ ಸೂತ್ರವು ಆಯುರ್ವೇದದಲ್ಲಿದೆ. ಉದಾಹರಣೆಗೆ, ಪ್ರತಿಯೊಂದ ರೋಗದಲ್ಲೂ ವೈದ್ಯನು ರೋಗ ಕಾರಣವನ್ನು ಪತ್ತೆ ಹಚ್ಚಿ ಅವನ್ನು ವರ್ಜಿಸಲು ರೋಗಿಗೆ ತಿಳಿಸುತ್ತಾನೆ. ಇದರಿಂದ ರೋಗಿ ಶೀಘ್ರ ಗುಣಮುಖವಾಗಿರುವುದರೊಂದಿಗೆ ರೋಗವು ಪುನಃ ಮರುಕಳಿಸುವುದಿಲ್ಲ.

ಎಲ್ಲಾ ಚಿಕಿತ್ಸಾ ಪದ್ಧತಿಗಳಲ್ಲಿ ರೋಗಲಕ್ಷಣಕ್ಕೆ ಉಪಶಮನ ಕೊಡುವ ಔಷಧಗಳಿದ್ದರೆ ಆಯುರ್ವೇದದಲ್ಲಿ ಶಮನ ಔಷಧಗಳ ಜೊತೆಗೆ ರೋಗ ಕಾರಣವಾದ ದೋಷಗಳನ್ನು ದೇಹದಿಂದ ಕಿತ್ತು ಹೊರಹಾಕುವ ‘ಪಂಚಕರ್ಮ’ ಎಂಬ ಚಿಕಿತ್ಸೆ ಇದೆ. ಈ ಚಿಕಿತ್ಸೆಯಿಂದ ಅನೇಖ ಕಠಿಣ ರೋಗಗಳು ಶಾಶ್ವತವಾಗಿ ಗುಣುಮಖ-ವಾಗುತ್ತವೆ. ಈ ಚಿಕಿತ್ಸಾ ಕ್ರಮವು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಖ್ಯಾತಿ ಪಡೆದಿದೆ.

ಪ್ರತಿಯೊಂದು ರೋಗಕ್ಕೂ ನುರಿತ ಆಯುರ್ವೇದ ವೈದ್ಯನು ರೋಗಿಯ ದೇಹ, ಕೆಲಸ ಮುಂತಾದವನ್ನು ಗಮನಿಸಿ ಸೂಕ್ತ ಪಥ್ಯ ಅಪಥ್ಯವನ್ನು ತಿಳಿಸುತ್ತಾನೆ. ಅಂದರೆ ರೋಗಿಯು ಬೆಳಗಿನಿಂದ ಹಿಡಿದು ರಾತ್ರಿಯವರೆಗೆ ಯಾವ ಯಾವ ಆಹಾರ ಸೇವಿಸಬಾರದು ಮತ್ತು ಉಳಿದ ಜೀವನ ಕ್ರಮಗಳು ಹೇಗಿರಬೇಕು ಎಂಬುದೇ ಪಥ್ಯಾ ಅಪಥ್ಯ. ಇದನ್ನು ಆಚರಿಸುವುದರಿಂದ ರೋಗಿಯು ಅಲ್ಪ ಪ್ರಮಾಣದ ಮತ್ತು ಅಲ್ಪಾವಧಿಯ ಔಷಧ ಸೇವನೆಯಿಂದ ಗುಣಮುಖನಾಗುತ್ತಾನೆ. ಇವುಗಳು ಆಯುರ್ವೇದ ವ್ಯಾಪಕವಾದ ಚಿಕಿತ್ಸಾ ದೃಷ್ಟಿಕೋನದ ಉದಾಹರಣೆಗಳು.

ಹೀಗೆ ಆಯುರ್ವೇದ ವೈದ್ಯರು ತಮ್ಮ ಜ್ಞಾನ, ಅನುಭವದ ಆಧಾರದ ಮೇಲೆ ತಾವು ಚಿಕಿತ್ಸಿಸುವ ರೋಗಿಯ ಚಿಕಿತ್ಸೆಯ ಬಗ್ಗೆ ಇತಿಮಿತಿಯನ್ನು ರೂಪಿಸಿಕೊಂಡರೆ ಅವರಿಗೆ ಯಶಸ್ಸು, ಕೀರ್ತಿಯು ಕಟ್ಟಿಟ್ಟ ಬುತ್ತಿಯಾಗುತ್ತದೆ. 

ಡಾ| ಎನ್. ಅನಂತರಾಮನ್
ಅನಂತ ಆಯುರ್ವೇದ ಭವನ, ಬಸವನಗುಡಿ ರಸ್ತೆ
ಬೆಂಗಳೂರು, ಫೋನ್: ೬೬೭೬೫೫೮, ೬೬೭೯೭೧೦

ವೈದ್ಯಕೀಯಸಾಹಿತಿಯಾಗಿನನ್ನಅನುಭವ
ಪ್ರಯೋಜನ ಸಿಕ್ಕಿದ್ದು ನನಗೆ!
– ಡಾ| ಅನಂತರಾಮನ್ ನನ್ನ ತಂದೆಯವರು ಸುಪ್ರಸಿದ್ಧ ಲೇಖಕರಾದ್ದರಿಂದ ನಾನೂ ವೈದ್ಯಕೀಯ ಕ್ಷೇತ್ರದಲ್ಲಿ ಬರೆಯಲು ಪ್ರಾರಂಭಿಸಿದೆ. ಜನ ಸಾಮಾನ್ಯರ ಆರೋಗ್ಯ ರಕ್ಷಣೆಯ ಬಗ್ಗೆ ನನ್ನ ಲೇಖನಗಳು ನಾನೂರ ಗಡಿ ದಾಟಿದಾಗ ವೈದ್ಯ ಸಾಹಿತಿ ಎಂಬ ಪದವು ನನ್ನ ಹೆಸರಿನ ಜೊತೆಗೆ ಅಂಟಿಕೊಂಡಿತು.

ಇದನ್ನು ನೆಪಿಸಿಕೊಂಡಾಗ ನನಗೇ ನಗು ಬರುತ್ತದೆ. ಏಕೆಂದರೆ ನನ್ನ ಲೇಖನಗಳು ಉಪಯುಕ್ತವಾಗಿವೆ ಎಂದು ಅನೇಕ ವಾಚಕರು ತಿಳಿಸಿದರೂ ಮಹತ್ತರವಾದ ಪ್ರಯೋಜನವು ಸಿಕ್ಕಿದ್ದು ನನಗೆ!! ಒಂದು ಲೇಖನ ಬರೆಯುವಾಗ ಲೇಕನದ ಹತ್ತುಪಟ್ಟಷ್ಟಾದರೂ ನಾನು ಓದಿಕೊಳ್ಳಬೇಕು. ಇದರಿಂದ ಪ್ರತಿನಿತ್ಯವೂ ವಿವಿಧ ಗ್ರಂಥಗಳ ಅಧ್ಯಯನ ಮಾಡುವಾಗ ಆಗುವ ಪ್ರಯೋಜನವು ನನಗೆ ತಾನೇ ಆಗುವುದು. ಇದರ ಜೊತೆಗೆ ವಾಚಕರ ಪ್ರತಿಕ್ರಿಯೆಗಳಿಂದ ನನಗೆ ಉತ್ತೇಜನವು ಸಿಕ್ಕಿದೆ; ನನ್ನ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಮತ್ತು ವಾಚಕರ ಅಗತ್ಯವೂ ನನಗೆ ಅರಿವಾಗಿದೆ. ನನ್ನ ವೈದ್ಯಕೀಯ ಲೇಖನಗಳು ಸುಪ್ರಿಸಿದ್ಧ ದಿನಪತ್ರಿಕೆ, ವಾರಪತ್ರಿಕೆ ಮುಂತಾದವುಗಳಲ್ಲಿ ಪ್ರಕಟವಾಗುವುದರಿಂದ ನನಗೆ ಅನೇಕ ಪತ್ರಿಕೋದ್ಯಮದ ಮಿತ್ರರು ಸಿಕ್ಕಿದ್ದಾರೆ. ಇದರಿಂದ ನನ್ನ ಸನ್ಮಿತ್ರರ ಗುಂಪು ಹೆಚ್ಚಾಗಿದೆ. ವೈದ್ಯ ಮತ್ತು ಜನಸಾಮಾನ್ಯರ ಸಂಬಂಧವು ಕೇವಲ ರೋಗ ಚಿಕಿತ್ಸೆಗೆ ಮಾತ್ರವೇ ಸೀಮಿತವಾಗಿರದೇ ಜನರಿಗೆ ಆರೋಗ್ಯ, ರೋಗಗಳು, ಔಷಧಗಳ ಬಗ್ಗೆ ಮಾಹಿತಿ ಕೊಡುವ ಸರಳ ಲೇಖನಗಳ ಅವಶ್ಯಕತೆ ಇದೆ ಎಂಬುದು ನನ್ನ ಅಭಿಪ್ರಾಯ. ವೈದ್ಯಕೀಯ ಮಾಹಿತಿಗಳು ಜನರು ಅರ್ಥಮಾಡಿಕೊಳ್ಳಲು ‘ಕಬ್ಬಿಣದ ಕಡಲೆ’ಯಂತಿವೆ ಎಂಬ ಭಾವನೆ ಹೋಗಬೇಕು. ವೈದ್ಯಕೀಯ ವಿಚಾರಗಳು ಜನರಿಗೆ ಶುಷ್ಕ ಎನಿಸಬಾರದು. ಹಾಗಾಗಬೇಕಾದರೆ ಪ್ರತಿಯೊಬ್ಬ ವೈದ್ಯನೂ ಜನರಿಗೆ ವೈದ್ಯ ವಿಚಾರಗಳನ್ನು ತಿಳಿಸುವ ಲೇಖಕನಾಗಬೇಕು. ಗಹನ ವಿಚಾರಗಳನ್ನು ಸರಳ ಭಾಷೆಯೊಂದಿಗೆ, ಉದಾಹರಣೆಗಳೊಂದಿಗೆ ಬರೆಯಬೇಕು. ವೈದ್ಯಕೀಯ ಲೇಖನ ಆಕರ್ಷಕವಾಗಲು ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಎರವಲನ್ನು ಪಡೆಯಬೇಕು. ಅಂದರೆ, ಕಥೆ, ನಾಟಕ ಮುಂತಾದ ಸಾಹಿತ್ಯವನ್ನು ಆಧಾರವಾಗಿಟ್ಟುಕೊಂಡು ವೈದ್ಯಕೀಯ ಲೇಖನಗಳನ್ನು ಬರೆಯಬಹುದು. ಇದರ ಜೊತೆಗೆ ಇತರ ಪ್ರಸಿದ್ದ ವೈದ್ಯರ ಲೇಖನ, ಪುಸ್ತಕಗಳಿಂದ ಮಾರ್ಗದರ್ಶನ ಪಡೆದು ಅಂದವಾದ ಲೇಖನಗಳನ್ನು ಬರೆಯಬಹುದು. ನನ್ನ ಅನುಭವದ ಪ್ರಕಾರ ವೈದ್ಯಕೀಯ ಲೇಖನಗಳು ಇಂದಿನ ಕಾಲಕ್ಕೆ ಅತ್ಯಾವಶ್ಯಕವಾಗಿವೆ; ವೈದ್ಯ ಮತ್ತು ಜನರ ಸಂಬಂಧವು ನಿಕಟವಾಗುತ್ತದೆ ಮತ್ತು ವೈದ್ಯರ ಜ್ಞಾನ ವೃದ್ಧಿಗೆ ಲೇಖನ ರಚನೆ ಉಪಯುಕ್ತವಾಗುತ್ತವೆ. ಕೊನೆಯದಾಗಿ ವೈದ್ಯ ಲೇಖನಗಳಿಂದ ಭಾಷೆಯು ಸಮೃದ್ಧವಾಗುತ್ತದೆ.

* * *