ನಮ್ಮ ಆಧುನಿಕ ಸಮಾಜದ ತರುಣ ತರುಣಿಯರಲ್ಲಿ ಎಂದಿಗಿಂತಲೂ ಇಂದಿನ ದಿನಗಳಲ್ಲಿ ಈ ಕುರಿತು ಹೆಚ್ಚು ಗೊಂದಲವಿದೆ. ಈ ಭಯ ಅನುಮಾನಗಳು, ಸುಶಿಕ್ಷಿತರನ್ನು ಮತ್ತು ಬುದ್ದಿಜೀವಿಗಳನ್ನು ಹೆಚ್ಚಾಗಿ ಕಾಡುತ್ತಿದೆ.

ಇದಕ್ಕೆ ಸಾಕ್ಷಿಯೆಂಬಂತೆ ನನಗೆ ಈ ಕುರಿತು ಹಲವಾರು ಪತ್ರಗಳು ಪ್ರತಿವಾರವೂ ಬರುತ್ತಿವೆ. ಹಲವಾರು ಯುವಕ ಯುವತಿಯರು ಈ ವಿಚಾರದಲ್ಲಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ ಹಾಗೂ ಸಲಹೆ ಕೇಳಿದ್ದಾರೆ. ಈ ವಿಷಯ ಕುರಿತ ತಿಳುವಳಿಕೆಯ ಅಭಾವದಿಂದಾಗಿ ಮನೆಯಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಅನಗತ್ಯ ಕಲಹ, ಅಸಮಾಧಾನ ಮತ್ತು ವೈಮನಸ್ಯಗಳು ಹೊಗೆಯಾಡಲಾರಂಭಿಸಿವೆ. ಕೊನಗೆ ದೊಡ್ಡ ಜ್ವಾಲೆಯಾಗಿ ಮನೆಯ ಸುಖ, ಸಂತೋಷ ನೆಮ್ಮದಿಗಳನ್ನು ಸುಟ್ಟು ಭಸ್ಮ ಮಾಡಿರುವ ನಿದರ್ಶನಗಳೂ ಇಲ್ಲದಿಲ್ಲ.

ಕುಟುಂಬದಲ್ಲಿ ಇಂತಹ ದುರಂತಕ್ಕೆ ಓದುಗರು ಈ ಸಂಬಂಧದಲ್ಲಿ ಸ್ಪಷ್ಟ ತಿಳಿವಳಿಕೆ ಪಡೆದುಕೊಳ್ಳುವುದು ಅತ್ಯಗತ್ಯ. ಈ ದಿಶೆಯಲ್ಲಿ ಈ ಲೇಖನ ಕುಟುಂಬದ ಅಜ್ಜಿ, ಅಜ್ಜಂದಿರಿಂದ ಮೊದಲುಗೊಂಡು, ಮೊಮ್ಕಕ್ಕಳಿವರೆಗೆ ತಮ್ಮ ಈ ಕುರಿತ ಧೋರಣೆಯನ್ನು ಸರಿಯಾಗಿ ರೂಪಿಸುವಲ್ಲಿ ಸಾಕಷ್ಟು ಮಾಹಿತಿ ಕೊಡಬಲ್ಲದೆಂದು ನನ್ನ ಎಣಿಕೆ. ಈಗ ಈ ಕೆಳಗೆ ಕಾಣಿಸಿರುವ ಪ್ರಶ್ನೆಗಳ ಸರಮಾಲೆಗಳ ಕಡೆಗೆ ಗಮನ ಹರಿಸೋಣ.

ಸೋದರ ಮಾವನೊಂದಿಗೆ ಮದುವೆಯಾಗಬಹುದೇ? ಅಪಾಯವಿಲ್ಲವೇ? ಹಾನಿಕಾರಕ ಎನ್ನುತ್ತಾರಲ್ಲ? ಇಂತಹ ದಂಪತಿಗಳಿಗೆ ಮಕ್ಕಳಾಗುವುದೇ? ಈ ಮಕ್ಕಳಿಗೆ ಅಂಧತ್ವ ಪ್ರಾಪ್ತಿಯಾಗುತ್ತದೆಯೇ? ಶಿಶು ಸತ್ತು ಹುಟ್ಟುತ್ತದಂತಲ್ಲಾ? ಅಂಗವೈಕಲ್ಯವುಂಟಾಗುತ್ತದೆಯೇ? ಸಗೋತ್ರ ವಿವಾಹದಿಂದ ಕುಟುಂಬದಲ್ಲಿ ಅನಾಹುತವಾಗುತ್ತದೆಯೇ? ಎರಡೂ ಕುಟುಂಬಗಳಲ್ಲಿ ಗಂಡಾಂತರ ಸಂಭವಿಸುತ್ತದೆ ಎನ್ನುತ್ತಾರಲ್ಲ? ವಿವಾಹವಾದ ದಂಪತಿಗಳು ಸಂತಾನಹೀನರಾಗಿ ಉಳಿಯುತ್ತಾರೆಯೇ? ಮತ್ತೇನಾದರೂ ಅನಿಷ್ಟ ಸಂಭವಿಸುತ್ತದೆಯೇ? ಬುದ್ಧಿಮಾಂದ್ಯ ಮಕ್ಕಳ ಸಮಸ್ಯೆ ಮುಂದಿನ ಪೀಳಿಗೆ ಶಾಪವಾಗಬಹುದೇ?

ಇವು ನನಗೆ ಬಂದ ಪತ್ರಗಳಲ್ಲಿನ ಪ್ರಶ್ನೆಗಳಿಗೆ.

ಇಂತಹ ಹಲವು ಹನ್ನೊಂದು ಸಂಶಯಗಳು ಇದನ್ನು ಓದುವ ಬಂಧು ಭಗನಿಯರನ್ನೂ ಬಾಧಿಸುತ್ತಿರಬಹುದು. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ತರುಣ ತರುಣಿಯರು, ಹಿರಿಯರು ಕಿರಿಯರು ಹಾಗೂ ಕುಟುಂಬದ ಸದಸ್ಯರೆಲ್ಲರೂ ಕಾತುರರಾಗಿರಬಹುದು. ನಿಮ್ಮಲ್ಲಿ ಕೆಲವರು, ಇಂತಹ ಇಕ್ಕಟ್ಟಿನ ಸನ್ನಿವೇಷಕ್ಕೆ ಸಿಲುಕಿ ಇತ್ಯರ್ಥ ಕಾಣದೆ ತೊಳಲುತ್ತಿರಲೂಬಹುದು.

ಇತ್ಯರ್ಥ ಕಾಣಲಾಗದ ಸನ್ನವೇಶಗಳು

ತನ್ನ ಮಗನಿಗೂ, ಮಗಳ ಮಗಳಿಗೂ ತೊಟ್ಟಿಲಿನಲ್ಲೇ ಮದುವೆ ನಿಶ್ಚಯ ಮಾಡಿ, ಅವರು ವಯಸ್ಸಿಗೆ ಬರುವುದನ್ನೇ ಕಾಯುತ್ತಾ ಕುಳಿತುರವ ಅಜ್ಜಿ ಮತ್ತು ಬಾಲ್ಯದಿಂದಲೇ ಗಂಡ ಹೆಂಡತಿಯೆಂಬ ಭಾವನೆಯಲ್ಲಿಯೇ ಬೆಳೆಯುತ್ತಿರುವ ತರುಣ ತರುಣಿಯರು ಒಂದು ಕಡೆಯಾದರೆ, ಇಂತಹ ವಿವಾಹದಿಂದ ಹುಟ್ಟಲಿರುವ ಮಕ್ಕಳು ಅನುವಂಶಿಕ ದೋಷಗಳನ್ನು ಪಡೆದುಕೊಳ್ಳುವ ಅಪಾಯ ಕುರಿತು ಎಚ್ಚರಿಸುವ ಕುಟಂಬ ವೈದ್ಯ ಮತ್ತೊಂದು ಕಡೆ. ಇದು ಸಾಲದೆಂಬಂತೆ ಇಂದಿನ ದಿನಗಳಲ್ಲಿ ನಿಯತಕಾಲಿಕಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಹೊಸ ಅಲೆಯ ಕಥೆ ಕಾದಂಬರಿಗಳು ಮಗದೊಂದು ಕಡೆ. ಇವಂತೂ ಇಂತಹ ವಿವಾಹದ ಪರಿಣಾಮವನ್ನು ಅತ್ಯಂತ ಭಯಾನಕವಾಗಿ ಬಣ್ಣಿಸುತ್ತವೆ. ಇಂತಹ ದಂಪತಿಗಳಿಗೆ ಹುಟ್ಟುವ ಮಕ್ಕಳು ಇವರ ಕಥೆಯಲ್ಲಿ ಅಂಗವೈಕಲ್ಯ ಹೊಂದಿಕುಟುಂಬದ ನೆಮ್ಮದಿಯನ್ನೆಲ್ಲಾ ಮಣ್ಣುಪಾಲು ಮಾಡುವ ದುರಂತ ದಾರುಣ ಚಿತ್ರವಿರುತ್ತದೆ. ಹತ್ತಿರದ ಸಂಬಂಧದಲ್ಲಿ ಮದುವೆ ನಿಶ್ಚಯವಾದ ದಂಪತಿಗಳಿಗಂತೂ ಹುಟ್ಟಲಿರುವ ಒಂದಾದ ಮೇಲೆ ಮತ್ತೊಂದು ಅಂಧ ಮಗುವಿನ ದುಃಸ್ವಪ್ನವೇ ಕಾಡುತ್ತಿರುತ್ತದೆ. ಕೆಲವು ಬಾರಿ ಅಸತ್ಯ ಅರ್ಧ ಸತ್ಯಗಳನ್ನಾಧರಿಸಿ ಬರೆದ ಈ ಕಾಲ್ಪನಿಕ ಕಥೆಗಳು ಸಮಾಜಕ್ಕೆ ಒಳಿತಿಗಿಂತ ಹೆಚ್ಚಾಗಿ ಕೇಡನ್ನೇ ಮಾಡುತ್ತವೆ.

ಹೀಗಿದ್ದರೂ ಕೆಲವು ಯುವಜನರು ಸಮಾಜದ ಸಂಕೋಲೆಗಳನ್ನು ಮುರಿದು ಸಗೋತ್ರದಲ್ಲೇ ವಿವಾಹವಾಗುವ ಸಾಹಸ ಮಾಡುತ್ತಾರೆ. ತಂದೆಯ ತಮ್ಮನೊಂದಿಗೆ ಪ್ರೇಮ ವಿವಾಹ ಮಾಡಿಕೊಳ್ಳುವ ಯುವತಿಯರ ಅಪರೂಪದ ಘಟನೆಗಳೂ ಕೂಡ ಸಮಾಜದಲ್ಲಿ ಜರುಗುತ್ತವೆ. ಇಂತಹ ವಿದ್ಯಮಾನಗಳು ನಡೆದಾಗ ಕೂಡ ಕುಟುಂಬದಲ್ಲಿ ಮೇಲೆ ತಿಳಿಸಿದ ಯಾವುದೇ ಅಂಗವೈಕಲ್ಯ ಶಿಶುವಿನಲ್ಲಿ ತಲೆದೋರದಿರುವುದು ಕೂಡ ಗಮನಕ್ಕೆ ಬರುತ್ತದೆ.

ಕೆಲವು ಬಾರಿ ರಕ್ತ ಸಂಬಂಧಿಯಲ್ಲದವರ ವಿವಾಹದಲ್ಲೂ ಕೂಡ ಮಗುವಿನಲ್ಲಿ ಅಂಗವೈಕಲ್ಯವಿರುವುದು ಕಂಡುಬರುತ್ತದೆ. ಆದ್ದರಿಂದ ಹತ್ತಿರದ ಸಂಬಂಧಗಳಲ್ಲಿ ಮದುವೆಯಾದರೆ ತೊಂದರೆಯಿದೆಯೇ ಅಥವಾ ಇಲ್ಲವೇ ಎಂದು ತಿಳಿದು ಇಂತಹ ಗೊಂದಲ ನಿವಾರಿಸಿಕೊಳ್ಳಬೇಕಾದರೆ, ನಾವು ಬಿಚ್ಚುಮನಸ್ಸಿನಿಂದ ವಸ್ತುಸ್ಥಿತಿಯ ಪರಾಮರ್ಶೆ ಮಾಡಬೇಕು, ಹೊಸ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮರುಚಿಂತನೆ ಕೂಡ ಅವಶ್ಯ. ಈ ನಿಟ್ಟಿನಲ್ಲಿ ಇತ್ತೀಚಿಗಿನ ವೈಜ್ಞಾನಿಕ ಅಧ್ಯಯನಗಳು ಈ ಸಮಸ್ಯೆ ಮೇಲೆ ಹೊಸಬೆಳಕು ಚೆಲ್ಲಿರುವುದು ಸಮಾಧಾನಕರ ಸಂಗತಿ. ಸಂಶೋಧನೆಗಳು ಸದಾಕಾಲ ಸಾಂಪ್ರದಾಯಿಕ ನಂಬಿಕೆಗಳಿಗೆ ವ್ಯತಿರಿಕ್ತವಾಗಿರುವುದಿಲ್ಲ ಎಂಬುದು ಈ ಅಧ್ಯಯನಗಳಿಂದ ಸಾಭೀತಾಗಿದೆ. ಇವುಗಳ ಫಲಶೃತಿ ನಮ್ಮ ಮಹಿಳೆಯರಿಗೂ ಕೂಡ ಸಂತಸ ತರುತ್ತದೆ. ಆದರೂ ಈ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ.

ಸಂಬಂಧದಲ್ಲಿ ವೈದ್ಯರ ನಂಬಿಕೆಗಳು ಏನು?

ವಿಕಲಾಂಗ ಮಗುವೊಂದನ್ನು ವೈದ್ಯರಿಗೆ ತೋರಿಸಲು ಹೋದಾಗ ಅವರು ಸಾಮಾನ್ಯವಾಗಿ ಕೇಳುವ ಪ್ರಶ್ನೆಯೆಂದರೆ, ಮಗುವಿನ ತಂದೆ, ತಾಯಿಯರು ರಕ್ತಸಂಬಂಧಿಗಳೇ? ಎಂಬುದು.

ವೈದ್ಯರಲ್ಲಿ ಮತ್ತು ಜೆನೆಟಿಕ್ ತಜ್ಞರಲ್ಲಿಯೇ ಬಹುಕಾಲದಿಂದಲೂ ಇರುವ ಒಂದು ನಂಬಿಕೆಯೆಂದರೆ, ಸೋದರ ಸಂಬಂಧದಲ್ಲಿ ವಿವಾಹ ಜರುಗಿದ ಸಂದರ್ಭದಲ್ಲಿ ಸತಿ ಪತಿಗಳಿಬ್ಬರೂ ಒಂದೇ ಪಂಥಕ್ಕೆ ಸೇರಿರುವುದರಿಂದ ಒಂದೇ ನಮೂನೆಯ ಗುಣವಾಹಿಗಳು ಶಿಶುವಿಗೂ ಸಾಗುತ್ತವೆ. ಹೀಗಾಗಿ ಅವರಿಗೆ ಹುಟ್ಟಲಿರುವ ಮಕ್ಕಳಲ್ಲಿ ಅಂಗವೈಕಲ್ಯ ಬುದ್ಧಿಮಾಂದ್ಯ ಮತ್ತಿತರ ಅನುವಂಶಿಕ ರೋಗಗಳು ತಲೆದೋರುವ ಸಾಧ್ಯತೆಯಿದೆ ಎಂದು. ಇದಕ್ಕೆ ವೈಜ್ಞಾನಿಕ ರುಜುವಾತುಗಳು ಇಲ್ಲ. ಆದರೂ ವೈದ್ಯರು, ತಮ್ಮಲ್ಲಿ ಸಮಾಲೋಚನೆಗೆ ಬರುವವರಿಗೆ ಇಂತಹ ವಿವಾಹ ಬೇಡ ಎಂಬ ಸಲಹೆ ನೀಡುವುದುಂಟು.

ಇನ್ನು ನಮ್ಮ ಸಮಾಜದ ಸಂಪ್ರದಾಯ ಹಾಗೂ ನಂಬಿಕೆಗಳೇನು ಎಂಬುದರ ಕಡೆಗೆ ಸ್ವಲ್ಪ ಗಮನ ಹರಿಸೋಣ.

ದಕ್ಷಿಣ ಭಾರತದಲ್ಲಿ

ತಮಿಳುನಾಡು, ಆಂಧ್ರಪ್ರೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಸುಮಾರು ೨೦೦೦ ವರ್ಷಗಳಿಂದ ಸೋದರ ಮಾವನೊಂದಿಗೆ ವಿವಾಹ ನಡೆಸುವುದು ರೂಢಿಯಲ್ಲಿದೆ. ಇಂತಹ ಸಂಬಂಧ ಅತೀ ಪ್ರಶಸ್ತ, ಇದಕ್ಕೆ ಜಾತಕ ನೋಡುವ ಅವಶ್ಯಕತೆ ಕೂಡ ಇಲ್ಲ ಎಂಬುದು ಇವರ ಅಚಲ ವಿಶ್ವಾಸ. ಇಂತಹ ಸಂಬಂಧ ಒಗಿಬಂದಾಗ, ಅಂತಸ್ತು, ವಿದ್ಯಾರ್ಹತೆ ಮುಂತಾದವುಗಳು ಗೌಣವಾಗುತ್ತವೆ. ಭಾವನಾತ್ಮಕ ಧೋರಣೆಯೇ ಪ್ರಧಾನ. ಪ್ರತಿ ನೂರು ಮದುವೆಗಳಲ್ಲಿ ಇಂತಹ ಪ್ರಕರಣಗಳು ೩೦ರಿಂದ ೪೦ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಅನುವಂಶಿಕ ರೋಗಗಳಿರುವುದಿಲ್ಲ. ಆರೋಗ್ಯ ಸಮಸ್ಯೆಗಳು ಕೂಡ ರಕ್ತಸಂಬಂಧಿಗಳಲ್ಲದವರ ಮದುವೆ ಪ್ರಸಂಗದಲ್ಲಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲೇನೂ ಇಲ್ಲ ಎಂದು ಅಧ್ಯಯನಗಳು ತಿಳಿಸುತ್ತವೆ.

ಆದರೆ ವಿಪರ್ಯಾಸವೆಂದರೆ, ನಮ್ಮ ಸಮಾಜ ಸಗೋತ್ರ ವಿವಾಹವನ್ನು ಪ್ರಬಲವಾಗಿವಿರೋಧಿಸುತ್ತದೆ. ಇದರಿಂದ ಕುಟುಂಬಕ್ಕೆ ಗಂಡಾಂತರ ಒದಗುವುದು ನಿಶ್ಚಿತ ಎಂದು ತಿಳಿಯುತ್ತಾರೆ. ಸಮಾಜ  ಇವರಿಗೆ ಬಹಿಷ್ಕಾರ ಹಾಕುತ್ತದೆ. ವಾಸ್ತವದಲ್ಲಿ ಅನುವಂಶಿಕ ಗುಣಗಳು ಹಾಗೂ ದೋಷಗಳು ತಂದೆ ಹಾಗೂ ತಾಯಿಯ ಕುಟುಂಬಗಳಿಂದ ಸಮ ಪ್ರಮಾಣದಲ್ಲಿ ಮುಂದಿನ ಸಂತತಿಗೆ ಸಾಗುತ್ತವೆ. ಹೀಗಿರುವಾಗ ನಮ್ಮ ಸಮಾಜ ಒಂದು ಗುಂಪಿನ ವಿವಾಹ ಸಂಬಂಧ ನಿಷೇಧಿಸುವುದು ಅವೈಜ್ಞಾನಿಕ ಮತ್ತು ಅತಾರ್ಕಿಕವಲ್ಲವೇ? ಸೋದರ ಮಾವನನ್ನು ಮದುವೆಯಾಗುವುದು ಹಾನಿಕಾರವಲ್ಲವಾದರೆ, ಸಗೋತ್ರಿಗಳು ಅತಿ ದೂರದ ಸಂಬಂಧವಾಯಿತಲ್ಲ, ಅದು ಹೇಗೆ ಹಾನಿಕಾರಕವಾಗುತ್ತದೆ ಎನ್ನುತ್ತಾರೆ ಜೆನೆಟಿಕ್ ತಜ್ಞರು.

ಕೆಲವು ಸಮುದಾಯದಲ್ಲಿ ತಂದೆಯ ತಮ್ಮನನ್ನೇ ಮದುವೆಯಾಗುವ ರೂಢಿಯಿದೆ. ಈ ಕಾರಣದಿಂದ ಈ ಸಮುದಾಯದಲ್ಲಿ ಅನುವಂಶಿಕ ರೋಗಗಳು, ಇತರ ಗುಂಪುಗಳಿಗಿಂತ ಹೆಚ್ಚಾಗಿರಬೇಕಲ್ಲವೆ? ಆದರೆ ಹಾಗೇನಿಲ್ಲ ಎನ್ನುತ್ತಾರೆ ಜೆನಿಟಿಕ್ ತಜ್ಞರು.

ಇನ್ನು ಐರೋಪ್ಯ ಸಮುದಾಯದಲ್ಲಂತೂ ರಕ್ತ ಸಂಬಂಧಿಗಳಲ್ಲಿ ವಿವಾಹ ತೀರಾ ಅಪರೂಪ, ಪ್ರತಿ ಸಾವಿರದಲ್ಲಿ ಒಂದು.

೧೯೮೦ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ಒಂದು ತಂಡ ನವಜಾತ ಶಿಶುಗಳಲ್ಲಿ ಅನುವಂಶಿಕತೆ ರೋಗ ಪತ್ತೆ ಮಾಡಲು ಕರ್ನಾಟಕದಾದ್ಯಂತ ಒಂದು ಲಕ್ಷ ಇಪ್ಪತ್ತು ಸಾವಿರ ಮಕ್ಕಳ ಅಧ್ಯಯನ ಮಾಡಿದರು. ಇವುಗಳಲ್ಲಿ ೪೦ ಮಾತ್ರ ಅನುವಂಶಿಕ ರೋಗ ಪತ್ತೆಯಾಯಿತು. ಪ್ರಮಾಣನುಪಾತದಲ್ಲಿ ೭೦೦೦:೩೨೦೦ ಮಕ್ಕಳಲ್ಲಿ ಒಂದು ಪ್ರಕರಣದಲ್ಲಿ ಅನುವಂಶಿಕ ರೋಗ ಕಾಣಬಂದಿತು. ಇದು ಐರೋಪ್ಯ ಮಕ್ಕಳಲ್ಲಿ ಕಂಡುಬರುವ ರೋಗ ಪ್ರಸಂಗಗಳ ಶೇಕಡವಾರು ಪ್ರಮಾಣಕ್ಕೆ ಸಮನಾಗಿಯೇ ಹೊರತು ಹೆಚ್ಚಾಗೇನಿಲ್ಲ. ಇದರಿಂದ ತಿಳಿದುಬರುವುದೇನೆಂದರೆ,ರಕ್ತ ಸಂಬಂಧಿಗಳೊಳಗೆ ವಿವಾಹ, ಅನುವಂಶಿಕ  ರೋಗಗಳ ಮೇಲೆ ಏನೂ ಪ್ರಭಾವ ಬೀರುವುದಿಲ್ಲ ಎಂದಾಯಿತು.

ಆದ್ದರಿಂದ ಓದುಗರೇ, ಸೋದರ ಸಂಬಂಧದಲ್ಲಿ ಮತ್ತು ಸಗೋತ್ರದಲ್ಲಿ ವಿವಾಹ ಕುರಿತಂತೆ ನಿಮ್ಮ ಧೊರಣೆ ಹೀಗಿರಲಿಃ

  • ರಕ್ತ ಸಂಬಂಧಿಗಳೊಡನೆ ವಿವಾಹ ಮತ್ತು ಸಗೋತ್ರ ವಿವಾಹ ಎಂದೊಡನೆ ಏನೋ ಅನಾಹುತ ಎಂದು ಭಾವಿಸಬೇಡಿ.
  • ಇವರಿಗೆ ಹುಟ್ಟುವ ಮಕ್ಕಳೆಲ್ಲರೂ ಅಂಧತ್ವಕ್ಕೆ ಅಥವಾ ಅಂಗವೈಕಲ್ಯಕ್ಕೆ ಗುರಿಯಾಗುತ್ತಾರ ಎಂಬ ಭಾವನೆ ಕಿತ್ತೊಗೆಯಿರಿ.
  • ಸೋದರ ಮಾವ ಅಥವಾ ಸೋದರತ್ತೆಯ ಮಗನನ್ನು ಮದುವೆಯಾಗಬಯಸುವವರು. ಕುಟುಂಬದಲ್ಲಿ ಅಂಗವೈಕಲ್ಯ ಮತ್ತಾವುದಾದರೂ ಅನುವಂಶಿಕ ರೋಗಗಳಿವೆಯೇ ಎಂಬುದನ್ನು ತಿಳಿಯಿರಿ. ಈ ನಿಯಮ ಸೋದರ ಸಂಬಂಧವಲ್ಲದ ಮದುವೆಗಳಲಿಗೂ ಅನ್ವಯಿಸುತ್ತದೆ. ಅಂತಹ ರೋಗವೇನೂ ಇಲ್ಲದಿದ್ದರೆ, ಇಂತಹ ಮದುವೆಗೆ ಯಾವುದೇ ಹಿಂಜರಿಕೆ ಬೇಡ.
  • ಒಂದು ವೇಳೆ ಈಗಾಗಲೇ ಅಂತಹ ಸಂಬಂಧ ಬೆಳೆಸಿದ್ದಲ್ಲಿ, ಕುಟುಂಬದಲ್ಲಿ ವಂಶಪಾರಂಪರ್ಯ ರೋಗವಿಲ್ಲದಿದ್ದಲ್ಲಿ ವಿಕೃತ ಮಗು ಹುಟ್ಟುವುದೇನೋ ಎಂಬ ಭೀತಿಯಿಂದ ಕಂಗಾಲಾಗಬೇಕಿಲ್ಲ.
  • ಇನ್ನು ಯಾವುದೇ ಒಂದು ಕುಟುಂಬದಲ್ಲಿ ಅನುವಂಶಿಕ ರೋಗಗಳಿದ್ದಲ್ಲಿ ವಿವಾಹ ಸಂಬಂಧ ಬೆಳೆಸದಿರುವುದೇ ಲೇಸು.
  • ಇಂತಹ ರೋಗಗಳು ಮುಂದಿನ ಪೀಳಿಗೆಗೂ ಸಾಗುವ ಸಾಧ್ಯತೆಯಿದೆ. ಪತಿ ಪತ್ನಿಯರ ಇಬ್ಬರ ವಂಶದಿಂದಲೂ ರೋಗಗ್ರಸ್ತ ಜೀನ್ಸ್‌ಗಳು ಮುಂದಿನ ಸಂತತಿಗೆ ಹರಿಯುವ ಸಾಧ್ಯತೆಯಿರುವುದರಿಂದ ರೋಗಗಳ ಸಂಭವ ಇದರಲ್ಲಿ ಹೆಚ್ಚೇ ಇರಬಹುದು.
  • ಒಂದು ವೇಲೆ ಇಂತಹ ಮದುವೆ ನಡೆಯಲೇಬೇಕೆಂಬ ಆಗ್ರಹ ಅಜ್ಜಿಯಿಂದ ಅಥವಾ ಪ್ರೇಮದ ಅಮಲಿನಲ್ಲಿರುವ ತರುಣ ತರುಣಿಯರಿಂದ ಬಂದರೆ, ಇವರ ಜೆನಿಟಿಕ್ ಸೆಟ್ ಆಪ್ ಏನು ಎಂಬುದನ್ನು ಜೆನಿಟಿಕ್ ತಜ್ಞರಿಂದ ಪರೀಕ್ಷಿಸಿ ತಿಳಿಯಿರಿ ಹಾಗೂ ಕುಟುಂಬದಲ್ಲಿ ಕಾಣಬಂದ ವಂಸಪಾರಂಪರ್ಯ ರೋಗ ಯಾವ ಪ್ರಮಾಣದಲ್ಲಿ ಅವರಿಗೆ ಹುಟ್ಟುವ ಮಕ್ಕಳಲ್ಲಿ ಪ್ರಕಟಗೊಳ್ಳಬಹುದು ಎಂಬುದನ್ನು ಕೂಲಂಕಷವಾಗಿ ತಜ್ಞರೊಡನೆ ಸಮಾಲೋಚಿಸಿ ಅವರ ಸಲಹೆಯನ್ನು ಮನ್ನಿಸಿರಿ.
  • ಗರ್ಭಧರಿಸಿದಾಗ ಆದಷ್ಟು ಬೇಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಂಡು ಗರ್ಭಸ್ಥ ಶಿಶುವಿನಲ್ಲಿ ಅಂಗವಿಕಲತೆ ಇದೆಯೇ ಎಂದು ತಿಳಿದು ಅದಕ್ಕೆ ವೈದ್ಯರು ಸೂಚಿಸಿದ ಕ್ರಮ ತೆಗೆದುಕೊಳ್ಳಿರಿ.
  • ಈ ಕುರಿತ ಸಂಶೋಧನೆಯ ಸಾರಾಂಶ ನಮ್ಮ ಸಮಾಜದ ಸಂಪ್ರದಾಯಗಳಿಗೆ ವಿರೋಧವಾಗಿಲ್ಲ ಎಂಬುದು ನಿಮಗೆ ಸಮಾಧಾನ ತಂದೀತು.
  • ಇನ್ನು ಪತ್ರಿಕೆಗಳಲ್ಲಿ ಆಗಾಗ ಬರುವ ಕಥೆ, ಕಾದಂಬರಿಗಳನ್ನು ಬಿಡಿರಿ, ಅವುಗಳಿಗೆ ಕಾಲಿಲ್ಲ. ಅವುಗಳನ್ನು ನಿಜ ಜೀವನಕ್ಕೆ ಅನ್ವಯಿಸಬೇಡಿರಿ.

ಇಲ್ಲಿಗೆ ನಿಮ್ಮ ಗೊಂದಲ ಅನುಮಾನಗಳು ಪರಿಹಾರವಾಗಿರಬೇಕಲ್ಲ. ಯಾವುದೇ ಪೂರ್ವಾಗ್ರಹವಿಲ್ಲದೆ, ನಿಮ್ಮ ಕುಟುಂಬದವರೆಲ್ಲ ಈ ಸಮಸ್ಯೆ ಎದುರಿಸಬಲ್ಲಿರಿ ಅಲ್ಲವೆ?

ವೈದ್ಯಸಾಹಿತಿಯಾಗಿನನ್ನಅನುಭವ
ತೃಪ್ತಿ, ನೆಮ್ಮದಿ, ಜನಾನುರಾಗ ದೊರೆತಿದೆ
– ಡಾ| ಸಿ.ಅನ್ನಪೂರ್ಣಮ್ಮನಾನು ವೈದ್ಯಸಾಹಿತಿ ಎಂದು ಗುರುತಿಸುವಂತಾದುದು, ಒಂದು ಆಕಸ್ಮಿಕ ಬಯಸದೇ ಬಂದ ಭಾಗ್ಯ ಎನ್ನಬಹುದು. ನನ್ನ ಇಳಿವಯಸ್ಸಿನಲ್ಲಿ ೩೦ ವರ್ಷಗಳಷ್ಟು ಸುದೀರ್ಘ ಕಾಲ ತಮಿಳುನಾಡಿನಲ್ಲಿ ವೃತ್ತಿ ಜೀವನ ನಡೆಸಿ, ನಿವೃತ್ತಳಾಗಿ ಬೆಂಗಳೂರಿಗೆ ಹಿಂತಿರುಗಿ ಬಂದು ನೆಲೆಸಿದ ಮೇಲೆ ಕನ್ನಡ ವಾತಾವರಣದಲ್ಲಿ ಉಸಿರಾಡತೊಡಗಿದಾಗ. ಈ ಮೊದಲು ಎಂದೂ ಬರವಣಿಗೆ ಮಾಡುವ ಆಲೋಚನೆ ಮಾಡದಿದ್ದರೂ, ಈ ನುಡುವಿನ ಸ್ಥಿತ್ಯಂತರ ಹಾಗೂ ಸ್ಥಳಾಂತರದ ಸಂದರ್ಭದಲ್ಲಿ ವೈದ್ಯಲೇಕನಗಳನ್ನು ಕನ್ನಡದಲ್ಲಿಯೇ ಬರೆದ ಅತ್ಯಂತ ಗಹನ ವಿಷಯಗಳನ್ನು ಹಾಗೂ ವೈದ್ಯಕೀಯದ ಅತ್ಯಾಧುನಿಕ ಬೆಳವಣಿಗೆ, ಚಿಕಿತ್ಸೆ ಇವುಗಳನ್ನೂ ಮತ್ತು ನಾನೇ ಮೆಚ್ಚಿಕೊಂಡ ಹಾಗೂ ವಿಸ್ಮಯಪಟ್ಟ ವೈದ್ಯ ಚಿಕಿತ್ಸಾ ಸಂದರ್ಭದ ಕೆಲ ಅಂಶಗಳನ್ನು ಯಥವತ್ತಾಗಿ ಓದುಗರೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ನನ್ನಲ್ಲಿ ಮೊಳೆತು ಹಟವಾಗಿ ಪರಿಣಮಿಸಿತು.

ಇದೇನು ಇಷ್ಟು ಹಟ? ಹಗಲು-ರಾತ್ರಿ ವಿಶ್ರಾಂತಿಯಿಲ್ಲದೆ, ಯಾರೊಡನೆಯೂ ಬೆರೆಯದೆ ಸದಾ ಬರೆಯುತ್ತಲೇ ಇರುತ್ತೀಯಲ್ಲ? ಎಂದು ಮನೆಯಲ್ಲಿ ಟೀಕಿಸುತ್ತಿದ್ದರು. ಈಗ ನಿನಗೇನು ಕಡಿಮೆಯಾಗಿದೆ? ನಿನ್ನಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ನಿನನ್ನಲ್ಲಿ ಅಪಾರ, ಗೌರವ ಪ್ರೀತಿ ಇದೆಯಲ್ಲ, ನಿನ್ನ ಸಹೋದ್ಯೋಗಿಗಳು, ಸುತ್ತಮುತ್ತಲಿನವರೆಲ್ಲ ನಿನ್ನ ಕಾರ್ಯದಕ್ಷತೆ, ಕರ್ತವ್ಯನಿಷ್ಠೆ, ಶಸ್ತ್ರಚಿಕಿತ್ಸೆಯಲ್ಲಿನ ನೈಪುಣ್ಯತೆ ಎಲ್ಲವನ್ನು ಶ್ಲಾಘಿಸುತ್ತಾರಲ್ಲ ಇನ್ನೇನು ಬೇಕು? ಎಂದು ಮನೆಯವರೆಲ್ಲ ಹೇಳಿದ್ದುಂಟು, ಅವರು ಹೇಳಿದ್ದಯಥಾರ್ಥವೇ ಆಗಿದ್ದರೂ, ಬರವಣಿಗೆಯಿಂದ ಪಡೆಯುವ ಸಂತೋಷ ಧನ್ಯತೆ, ಸಾರ್ಥಕತೆ ಹಿಂದೆ ಬರಿ ವೃತ್ತಿಜೀವನವೊಂದರಲ್ಲೇ ತನ್ಮಯಳಾಗಿದ್ದಾಗ ಇದ್ದ ಸಂತೋಷಕ್ಕಿಂತ ಮಿಗಿಲಾದುದೇನೋ ಸಿಕ್ಕಿದೆ, ಅದೇಕೆಂದೇ, ನನ್ನ ವೈದ್ಯವೃತ್ತಿ ನನ್ನನ್ನು ಸಾಮಾಜಿಕವಾಗಿ ಬೆಳೆಸಲಿಲ್ಲ ನಾನಾಯಿತು, ನನ್ನ ವೃತ್ತಿಯಾಯಿತು ಎಂದು ಇದ್ದುಬಿಟ್ಟಿದೆ. ಎದುರಿಗಿದ್ದ ರೋಗಿಯಷ್ಟೇ ನನ್ನ ಪ್ರಪಂಚ, ರೋಗಿಯ ಪರಿವಾರವೇ ನನ್ನ ಲೋಕ. ಜನರ ಸಂಪರ್ಕ ಹೆಚ್ಚಾದದ್ದು, ನನ್ನ ಪ್ರವೃತ್ತಿ ಬರವಣಿಗೆಯಿಂದ; ನಾಡಿನ ಉದ್ದಗಲಷ್ಟು ಜನ ನನ್ನನ್ನು ಗುರುತಿಸುವಂತಾಯಿತು. ಆರಂಭದಲ್ಲಿ ಐಬಿಎಚ್ ಸಂಸ್ಥೆಯ ಇಂಚರ ಎಂಬ ಪತ್ರಿಕೆಯಲ್ಲಿ ನನ್ನ ಆರು ಲೇಕನಗಳು ಧಾರಾವಾಹಿಯಾಗಿ ಬಂದವು. ಅನಂತರ ಸುಧಾ ವಾರಪತ್ರಿಕೆಯಲ್ಲಿ ಬಸುರಿನ ಬಾಧೆಗಳು ಮುಂತಾಗಿ ಹದಿಮೂರು ಲೇಖನಗಳು ಬಂದವು. ಅನಂತರ ‘ತರಂಗ’ ವಾರಪತ್ರಿಕೆಗೆ ಬೇಡಿಕೆಗಳು ಬಂದು ಭ್ರಮಾ ಬಸಿರು, ಋತುಚಕ್ರ, ಪ್ರನಾಳ ಶಿಶುತಂತ್ರ ಇತ್ಯಾದಿ ೧೩ ಲೇಖನಗಳು ಪ್ರಕಟವಾದವು. ಪ್ರನಾಳ ಶಿಶು ಕುರಿತಂತೆ ಬಂದ ಲೇಖನಗಳಂತೂ ಆ ವಿಷಯದಲ್ಲಿ ಹೊಸ ಬೆಳಕನ್ನೇ ಚೆಲ್ಲಿದ್ದವು. ಏಕೆಂದರೆ ಕಾಲೇಜು ಪ್ರಾಧ್ಯಾಪಕರು ಮತ್ತು ಅಕೆಡೆಮಿಶನ್‌ಗಳೂ ಇವು ಶಾಸ್ತ್ರೀಯ ಅಧ್ಯಯನದ ಫಲ ಎಂದು ಅಭಿಪ್ರಾಯ ಸೂಚಿಸಿದರು.

ಕೆಲವರು ಸಾಹಿತ್ಯದ ಹಾದಿ ಹೋರಾಟ ಎನ್ನುತ್ತಾರೆ. ನನ್ನ ವಿಚಾರದಲ್ಲಿ ಅದು ಹಾಗಾಗಲಿಲ್ಲ. ನಿಮ್ಮ ಆರೋಗ್ಯ ಎಂಬ ಪ್ರಶ್ನೋತ್ತರ ಅಂಕಣ ಸತತವಾಗಿ ೧೬ ವರ್ಷ ನನ್ನ ಲೇಖನ ಪ್ರಕಟವಾಗಿವೆ. ಪ್ರಿಯ ಓದುಗರಿಂದ ಮೆಚ್ಚಿಗೆಯ ಮಹಾಪೂರವೇ ಬರುತ್ತಿದ್ದವು. ಡಾ ಅನ್ನಪೂರ್ಣಮ್ಮನ ಬರೆಹದಲ್ಲಿ ವೈದ್ಯಕೀಯ ಬರೆಹಗಳಲ್ಲಿ ಹಿಂದೆಂದೂ ಕಾಣದಿದ್ದ ತಲಸ್ಪರ್ಶಿ ಅಂಶಗಳಿವೆ.

ಬೆಂಗಳೂರು ವಿಶ್ವವಿದ್ಯಾಲಯ ‘ಬಾಣಂತಿ ಆರೈಕೆ’ ಕುರಿತಂತೆ ಪುಸ್ತಕಬರೆದುಕೊಡಲು ಆಹ್ವಾನಿಸಿತು. ನನ್ನ ಕೃತಿ ‘ತಾಯಿಲೋಕ’ ಪ್ರಕಟಗೊಂಡಿದೆ. ನ್ಯಾಶನಲ್ ಬುಕ್ ಟ್ರಸ್ಟ್ You and Your Healt ಎಂಬ ೬೦ ಅಧ್ಯಾಯಗಳಿರುವ ಆಯಾ Speciality expertಗಳಲ್ಲಿ ಆಗಿರುವವರು ಬರೆದ ಹಲವು ಸ್ಪೆಶೆಲಿಸ್ಟ್‌ಗಳು ಬರೆದಿರುವ ಪುಸ್ತಕ ಅನುವಾದಕ್ಕಾಗಿ ಕಳಿಸಿತು. ಸುಮಾರು ೪೫೦ ಪುಟಗಳ ನೀವು ಮತ್ತು ನಿಮ್ಮ ಆರೋಗ್ಯ’ ಪ್ರಕಟಗೊಂಡಿದೆ.

ನನಗೆ ಒಂದು ಅನುಕೂಲವಿತ್ತು ನಾನು ಬೆಂಗಳೂರಿಗೆ ಹೊಸ ಪರಿಚಯವಾದ್ದರಿಂದ ಯಾವ ಪಬ್ಲಿಕೇಶರ್‌ಗಳಿಗೂ ನನ್ನ ಮೇಲೆ ಪೂರ್ವಾಗ್ರಹ, ಪಶ್ಚಿಮ ಗ್ರಹಗಳಿರಲಿಲ್ಲ. ಎಲ್ಲ ಪತ್ರಿಕೆಗಳಿಗೂ ಈ ಹೊಸ ಲೇಖಕಿಯ ಬರಹಕ್ಕೆ ಬೇಡಿಕೆಯಿತ್ತು. ಹೀಗಾಗಿ ಒಂದು ಸಾಂಸ್ಕೃತಿಕ ಸಂಸ್ಥೆ ನನಗೆ ಪತ್ರಿಕಾ ಕಣ್ಮಣಿ ಎಂಬ ಬಿರುದು ದಯಪಾಲಿಲಸಿ ಗೌರವಿಸಿತ್ತು.

ಅನಂತರ, ಆಕಾಶವಾಣಿ ಮತ್ತು ದೂರದರ್ಶನಗಳು ನನ್ನ ವೈದ್ಯಸಾಹಿತ್ಯವನ್ನು ಗಮನಿಸಿ ಸಂದರ್ಶನ ಚರ್ಚೆ ಉಪನ್ಯಾಸಗಳಿಗೆ ನನ್ನನ್ನು ಆಹ್ವಾನಿಸಿದವು. ಇಲ್ಲಿ ಗಮನಿಸಬೇಕಾದ್ದೇನೆಂದರೆ, ಅಂದಿನ ದಿನ ೧೯೮೪ರ ಕಾಲ ಕನ್ನಡದಲ್ಲಿ ವೈದ್ಯಕೀಯ ವಿಷಯಗಳನ್ನು ಸುಲಲಿತವಾಗಿ ಕನ್ನಡದಲ್ಲಿ ವಿವರಿಸಬಲ್ಲ ವೈದ್ಯರು ಅತಿ ವಿರಳವಾಗಿದ್ದು. ಆದ್ದರಿಂದ ಪ್ರೇಕ್ಷಕರಿಂದ ಸಮ್ಮೇಳನಗಳಲ್ಲಿ ಮತ್ತು ವೀಕ್ಷಕರಿಂದ, ಶ್ರೋತೃಗಳಿಂದ ಅಪಾರ ವಿಶ್ವಾಸ ಮತ್ತು ಮೆಚ್ಚಿಗೆ ನನಗೆ ಲಭಿಸಿತು.

ವೈದ್ಯಸಾಹಿತಿಯಾಗಿ ನನಗೆ ಅನುಭವ ಕೊಟ್ಟಷ್ಟು ತೃಪ್ತಿ ನೆಮ್ಮದಿ, ಜನಾನುರಾಗ ನನ್ನ ಜೀವನದ ಯಾವ ಅವಧಿಯಲ್ಲೂ ನನಗಾಗಿಲ್ಲ. ಹಲವಾರು ಸಮ್ಮೇಲನ, ಆರೋಗ್ಯ ಸಮಾವೇಶ, ಯೋಗಶಿಬಿರ ಪ್ರಶಿಕ್ಷಣ ಶಿಬಿರಗಳು, ಸಮಾಜಿಕ ಸಮಾರಂಭ ಮಹಿಳಾ ಸಮಾವೇಶಗಳಿಂ ನನಗೆ ಅತಿಥಿಯಾಗಲು ಭಾಷಣಕಾರ ಆಗಲು ಆಹ್ವಾನಿಸುತ್ತಿದ್ದವು. ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ನನ್ನನ್ನು ಗೌರವಿಸಿದವು. ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ನನಗೆ ಲಭಿಸಿವೆ.

ಸಾಹಿತಿಯಾದಾನಿಂದ ಮೆಲುಕುಹಾಕಲು ಹಲವಾರು ಸವಿನೆನಪುಗಳು ಇವೆ. ಅವುಗಳಲ್ಲಿ ಕೆಲವು, ಹುಬ್ಬಳ್ಳಿಯ ಪ್ರಸಿದ್ಧ ಪತ್ರಕರ್ತ ಗೊಯೆಂಕ. ಪ್ರಶಸ್ತಿ ವಿಜೇತ, ಲಾಂಗೂಲಾಚಾರ್ಯಅವರಿಂದ ಬಂದ ಒಂದು ಮೆಚ್ಚುಗೆಯ ಪತ್ರ ಇನ್ನೊಂದು, ಒಮ್ಮೆ ಹಣ್ಣು ಕೊಂಡುಕೊಂಡ ಒಬ್ಬವ್ಯಕ್ತಿ ಹಣ್ಣು ಕಟ್ಟಿದ ಪೊಟ್ಟಣದ ಕಾಗದದ ಮೇಲೆ ಕಂಡ ನನ್ನ ಲೇಕನದಲ್ಲಿ “ಗರ್ಭಕೋಶದ ಒಳಗೆ ಮೊಳೆತಿರುವ ಜೀವಾಂಕುರ ಸಾಸಿವೆ ಕಾಳಿನಷ್ಟು ಮೂಲಗಾತ್ರದಿಂದ ಬೆಳೆಯುತ್ತಾ ಹೋಗುವಾಗ ಅದಕ್ಕೆ ಆಹಾರ ಹೇಗೆ? ಉಸಿರಾಟ ಹೇಗೆ? ರಕ್ತಚಲನೆ ಹೇಗೆ? ಇತ್ಯಾದಿ ವಿವರಗಳನ್ನು ಓದಿ ಪುಳಕಿತನಾಗಿ ಅವರ ಮೇಲಿದ್ದ ನನ್ನ ವಿಳಾಸ ಹುಡುಕಿಕೊಂಡು ಬನಶಂಕರಿ ಬಡಾವಣೆಯಿಂದ ರಾತ್ರಿ ೧೦ ಗಂಟೆಗೆ ನಮ್ಮ ಮನೆಗೆ ಬಂದು ಲೇಖನ ತೆಗೆದುಕೊಂಡು ಹೋದ ಘಟನೆ ಮರೆಯಲು ಸಾಧ್ಯವೇ?

‘ಕನ್ನಡಕ್ಕಾಗಿ ಕೊರಳೆತ್ತು”-ಅಲ್ಲಿ ಪಾಂಚಜನ್ಯ ಮೊಳಗುತ್ತದೆ’
“ಕನ್ನಡಕ್ಕಾಗಿ ಬೆರಳೆತ್ತು”-ಅಲ್ಲಿಗೋವರ್ಧನ ಗಿರಿ ಮೂಡುತ್ತದೆ’
“ಕನ್ನಡಕ್ಕಾಗಿ ಎದ್ದು ನಿಲ್ಲು”-ಅಲ್ಲಿ ಕಲ್ಪವೃಕ್ಷ ಮೂಡುತ್ತದೆ.

ಈ ಕವಿವಾಣಿ ಕನ್ನಡಕ್ಕಾಗಿ ನಾನು ಮಾಡಿದ ಕಿಂಚತ್ ಕೈಂಕರ್ಯಕ್ಕೆ ಸ್ಥೂರ್ತಿ! ಎಲ್ಲ ಪ್ರಕಾಶಕರು, ಕರ್ನಾಟಕದ ಸಮಸ್ತ ಓದುಗರ ಜನತೇರು ಪ್ರೋತ್ಸಾಹಕ್ಕೆ ನಾನು ಚಿರಋಣಿ.

ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಇಂದು ನನಗೆ ತೋರಿಸಿದ ಗೌರವಾದರಗಳಿಗೆ ನಾನು ಅತ್ಯಂತ ಅಭಾರಿ. ನನ್ನ ಅನುಭವದ ತುಣಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದು ನನ್ನ ಸುಯೋಗ.

ಸಿರಿಗನ್ನಡಂ ಗೆಲ್ಗೆ!

ಹೊತ್ತಗೆಗಳು

ಡಾ. ಅನ್ನಪೂರ್ಣಮ್ಮ ನವರು ಕನ್ನಡ ಸಾರಸ್ವತದಲ್ಲಿ ವೈದ್ಯಕೀಯ ಸಾಹಿತ್ಯವನ್ನು ಶ್ರಿಮಂತಗೊಳಿಸಿದ್ದಾರೆ. ಇಪ್ಪತ್ಮೂರಕ್ಕಿಂತಲೂ ಹೆಚ್ಚು ಕೃತಿಗಳು ಅವರ ಸಾಹಿತ್ಯ ಕಮ್ಮಟದಿಂದ ಈತನಕ ಹೊರಬಿದ್ದಿವೆ. ಜೊತೆಗೆ, ಪ್ರಸಿದ್ಧ ವೈದ್ಯಕೀಯ ಅಂಕಣಗಾರ್ತಿಯಾಗಿ ಅವರು ನಾಡಿನ ಉದ್ದಗಲಕ್ಕೂ ಓದುಗ ಕೋಟಿಗೆ ಕಂಡೂ ಕಾಣದ ಆತ್ಮೀಯರಾಗಿರುವರು.

೧. ಹೊಸ ಜೀವನದ ಹುಟ್ಟು, ೨. ಹದಿಹರೆಯದ ಹೆಣ್ಣು, ೩. ಋತುಚಕ್ರ, ೪. ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು ೫. ಸ್ನಪಾನಕ್ಕೆ ಬೆಂಬಲ ೬. ವೈದ್ಯರೊಡನೆ ಮಾತುಕತೆ ಭಾಗ-೧, ಭಾಗ-೨,೭. ಶಿಶು ನಿರೀಕ್ಷೆಯಲ್ಲಿ ಸ್ತ್ರೀರಕ್ಷೆ, ೮. ಪ್ರೌಢಮಹಿಳೆ, ೯. ಗರ್ಭಿಣಿಯ ಯೋಗಕ್ಷೇಮ, ೧೦. ಆರೋಗ್ಯಜೀವನ, ೧೧. ಆರೋಗ್ಯ ಮಾರ್ಗದರ್ಶಿ ೧೨. ಮಗುವೊಂದು ಅದ್ಭುತ ಸೃಷ್ಟಿ, ೧೩. ಬಾ ಗೆಳತಿ, ೧೪. ಸ್ವಾಸ್ಥ್ಯ ಶ್ರುತಿ ೧೫. ತಾಯಿ ಲೋಕ ೧೬. ನಿಮ್ಮ ಮಗು ಆರೋಗ್ಯವಾಗಿರಬೇಕು. ೧೭. ನಿಮ್ಮ ಮಗು ಹೀಗಿರಲಿ ೧೮. ಸಂಜೀವಿನಿ, ಅನ್ನಪೂರ್ಣ-ಅಭಿನಂದನಾ ಗ್ರಂಥ ೧೯. ವೈದ್ಯಕೀಯದ ಎಲ್ಲ ಶಾಖೆಗಳ ಕುರಿತ ಪ್ರಬಂಧಗಳು ೨೦. Child survival and safe Mother’s home (ಅನುವಾದ) ೨೧. ಗೃಹಿಣಿಯರೇ ಕುಶಲವೇ? ೨೨. ಬೊಜ್ಜು; ಕಾರಣ ಪರಿಹಾರ ಸರ್ವರಿಗೂ ಆರೋಗ್ಯ ೨೩. ನಿಮ್ಮ ಶೀಘ್ರ ಚೇತರಿಕೆಗೆ ನಮ್ಮ ಹಾರೈಕೆಗಳು. ೨೪. ನೀವು ಮತ್ತು ನಿಮ್ಮ ಮಗು. You and Your Health-ನ ಅನುವಾದ “ನೀವು ಮತ್ತು ನಿಮ್ಮ ಆರೋಗ್ಯ’ NBT National Book Trust Publieshed ನಿಮ್ಮ ಶೀಘ್ರ ಚೇತರಿಕೆಗೆ ನಮ್ಮ ಹಾರೈಕೆಗಳು… ೧೫೨

* * *