ಸುಮಾರು ೨೨೦೦ ವರ್ಷಗಳ ಹಿಂದೆಯೇ ಗ್ರೀಸಿನ ಪ್ರಸಿದ್ಧ ವೈದ್ಯ ಹಿಪ್ಪಾಕ್ರೆಟಿಸ್ ವೈದ್ಯರಿಗೆ ತಮ್ಮ ವೃತ್ತಿ ಪ್ರಾರಂಭಿಸುವ ಮೊದಲು ತೆಗೆದುಕೊಳ್ಳಬೇಕಾದ ಪ್ರಮಾಣವನ್ನು ಬೋಧಿಸಿದನು. ಪಾಶ್ಚಿಮಾತ್ಯ ವೈದ್ಯ ಪದ್ಧತಿಯನ್ನು ಅನುಸರಿಸುವ ನಾವೆಲ್ಲರೂ ಇಂದಿಗೂ ಅದೇ ಪ್ರಮಾಣವಚನ ಸ್ವೀಕರಿಸುತ್ತೇವೆ. ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಸಾಕಷ್ಟು ವೈಶಾಲ್ಯತೆಯಿಂದ ಕೂಡಿದ ನೂತನ ಪ್ರಮಾಣ ವಚನದ ಅವಶ್ಯಕತೆ ಇದೆ. ಇದನ್ನು ಮನಗಂಡ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವೈಯವೃಂದದ ಅವಗಾಹನೆಗಾಗಿ ಒಂದು ನೀತಿ ಸಂಹಿತೆ ರೂಪಿಸಿದ್ದಾರೆ. ಇದು ಸಾರ್ವತ್ರಿಕವಾಗಿ ಸ್ವೀಕೃತವಾದಲ್ಲಿ ಆಚರಣೆಗೆ ಬರಬಹುದು. ಅದರಲ್ಲಿ ಅಡಕವಾಗಿರುವ ಕೆಲವೊಂದು ಅಂಶಗಳು ನನಗೆ ಸರಿಯೆನಿಸಿದ್ದರಿಂದ ಅದರ ಕನ್ನಡ ಭಾಷಾಂತರವನ್ನು ಇಲ್ಲಿ ಕೊಟ್ಟಿದ್ದೇನೆಃ

೧. ವಿವಿಧ ರೋಗಗಳಿಂದ ಬಳಲುತ್ತಿರುವ ಪ್ರಜಾ ಕೋಟಿಯ ಹೆಸರಿನಲ್ಲಿ ನನ್ನ ಶಕ್ಯವಿದ್ದಷ್ಟು ಮಟ್ಟಿಗೆ ನಮ್ರತೆ ಹಾಗೂ ಅನುಕಂಪದಿಂದ ರೋಗಿಗಳನ್ನು ನೋಡಿಕೊಳ್ಳುತ್ತೇನೆಂದು ಹೇಳಿ ಈ ಪ್ರಮಾಣ ವಚನವನ್ನು ಸ್ವೀಕರಿಸುತ್ತಿದ್ದೇನೆ.

೨. ರೋಗದ ವಿಷಯವನ್ನು ರೋಗಿಗಳಿಂದ ಬಚ್ಚಿಡದೆ ಸತ್ಯ ತಿಳಿಸುತ್ತೇನೆ. ಅದು ಕೆಟ್ಟ ಸುದ್ದಿಯಾದಲ್ಲಿ ಅವರಿಗೆ ಆದಷ್ಟು ನೋವಾಗದಂತೆ ಸಾಕಷ್ಟು ಕಾಲಾಮತರದಲ್ಲಿ ಕ್ರಮೇಣ ತಿಳಿಸುತ್ತೇನೆ.

೩. ರೋಗಕ್ಕೆ ಇತರ ಕಾರಣಗಳು, ಇತರ ಚಿಕಿತ್ಸೆಗಳೂ ಇದ್ದಲ್ಲಿ ಅದರ ವಿವರಗಳನ್ನು ರೋಗಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ಸ್ಪಷ್ಟಪಡಿಸಿ ಹೇಳುತ್ತೇನೆ.

ಅಂತಿಮ ತೀರ್ಮಾನ

೪. ತಮ್ಮ ಚಿಕಿತ್ಸೆಯ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ರೋಗಿಗಳಿಗೆ ಬಿಡುತ್ತೇನೆ. ಯಾವುದೇ ಕಾರಣದಿಂದ ಅವರು ಸ್ವತಃ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿರದಿದ್ದರೆ ಅವರ ಆಪ್ತ ಬಂಧುಗಳ ಸಲಹೆಯಂತೆ ನಡೆಯುತ್ತೇನೆ.

೫. ರೋಗಿಗೆ ದುರ್ನಡತೆ, ದುಶ್ಚಟಗಳೇನೇ ಇರಲಿ, ಅದಾವುಗಳನ್ನು ಲಕ್ಷಿಸದೆ ಅವನನ್ನು ಒಬ್ಬ ರೋಗಿಯಂತೆ ನೋಡಿಕೊಳ್ಳುತ್ತೇನೆ.

೬. ವೈದ್ಯನಾಗಲೀ, ವೈದ್ಯ ವಿಜ್ಞಾನವಾಗಲೀ, ಯಾವುವೂ ಪರಿಪೂರ್ಣತೆಯನ್ನು ಹೊಂದಿಲ್ಲ. ಈ ಮಿತಿಯನ್ನು ಅರಿತು ರೋಗವನ್ನು ಗುಣಪಡಿಸಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅದು ಆಗದಿದ್ದಾಗ ರೋಗವನ್ನು ಆದಷ್ಟು ಶಮನಗೊಳಿಸಲು ಪ್ರಯತ್ನಿಸುತ್ತೇನೆ.

೭. ರೋಗಿಗೆ ವೈದ್ಯಕೀಯ ಪರೀಕ್ಷೆಳು ಅವಶ್ಯವಿದ್ದಲ್ಲಿ ಮಾತ್ರ ಮಾಡಿಸುತ್ತೇನೆ. ಅನವಶ್ಯಕವಾಗಿ ಹಣಕ್ಕಾಗಿ ಇಂತಹ ಪರೀಕ್ಷೆಗಳನ್ನು ಮಾಡಿಸಲು ಹೇಳುವುದಿಲ್ಲ.

೮. ನನಗಿಂತ ಹೆಚ್ಚು ತಿಳಿದ ತಜ್ಞರಿಂದ ಅವರಿಂದ ರೋಗಿಗೆ ಹೆಚ್ಚು ವಿವರಗಳನ್ನು ಅವರು ಕೇಳಿದಾಗ ಕೊಡುತ್ತೇನೆ.

೯. ರೋಗಿಗೆ ಅವನ ಬಂಧುಗಳಿಗೆ ಅವನ ರೋಗದ ಹಾಗೂ ಚಿಕಿತ್ಸೆಯ ವಿವರಗಳನ್ನು ಅವರು ಕೇಳಿದಾಗ ಕೊಡುತ್ತೇನೆ.

೧೦. ನಾನೇ ರೋಗಿಯಾಗಿದ್ದಲ್ಲಿ ಇನ್ನೊಬ್ಬ ವೈದ್ಯರು ಹೇಗೆ ನೋಡಿಕೊಳ್ಳಬೇಕೆಂದು ನಾನು ಬಯಸುತ್ತೇನೋ ಅದೇ ರೀತಿಯಲ್ಲಿ ನನ್ನ ರೋಗಿಗಳನ್ನು ನಾನು ನೋಡಿಕೊಳ್ಳುತ್ತೇನೆ.

ಸದಾ ವಿದ್ಯಾರ್ಥಿ

೧೧. ನಾನು ಸದಾ ವಿದ್ಯಾರ್ಥಿಯಾಗಿಯೇ ಇರುತ್ತೇನೆ. ವೈದ್ಯಕೀಯ ಪತ್ರಿಕೆಗಳಿಂದ, ವೈದ್ಯಕೀಯ ಗೋಷ್ಠಿಗಳಿಂದ ಹಾಗೂ ನನ್ನ ರೋಗಿಗಳಿಂದ ಸದಾ ಕಲಿಯಲು ನಾನು ಪ್ರಯತ್ನಿಸುತ್ತೇನೆ. ಅದೇ ರೀತಿಯಲ್ಲಿ ನಾನು ಕಲಿತಿದ್ದನ್ನು ನನ್ನ ರೋಗಿಗಳಿಗೆ ತಿಳಿಸಿ ಹೇಳಿ ಅವರು ಶೀಘ್ರ ಗುಣಮುಖವಾಗಲು ಸಹಾಯ ಮಾಡುತ್ತೇನೆ.

೧೨. ರೋಗಿಗಳ ಮೇಲೆ ಯಾವ ರೀತಿಯ ಪ್ರಯೋಗಗಳನ್ನು ಮಾಡುವುದಿಲ್ಲ. ಸಂಶೋಧನೆಗಳಿಗಾಗಿ ರೋಗಿಗಳನ್ನು ಉಪಯೋಗಿಸಿಕೊಳ್ಳಬೇಕಾದಾಗ ಅದರ ಸಾಧಕ-ಬಾಧಕಗಳನ್ನು ಅವರಿಗೆ ವಿವರಿಸಿ ಹೇಲಿ, ನಂತರ ಅವರ ಲಿಖಿತ ಸಮ್ಮತಿ ಪಡೆಯುತ್ತೇನೆ.

೧೩. ಜಾತಿ ಮತ ಲಿಂಗ ಭೇದ ವಿಲ್ಲದೆ ನನ್ನ ವೈದ್ಯಕೀಯ ಜ್ಞಾನದ ಉಪಯೋಗವನ್ನು ಎಲ್ಲರಿಗೂ ನೀಡುತ್ತೇನೆ. ಬಡ ರೋಗಿಗಳಿಗೆ ಸಾಧ್ಯವಾದಷ್ಟು ಮುಫತ್ತಾಗಿ ಚಿಕಿತ್ಸೆ ಮಾಡುತ್ತೇನೆ.

೧೪. ರೋಗಿ ಎಂತಹ ರೋಗಗಳಿಂದಲೇ ಬಳಲುತ್ತಿರಲಿ, ಕೊನೆಗೆ ಏಡ್ಸ್‌ನಂತಹ ವಿಷಮ ಸಾಂಕ್ರಾಮಿಕ ರೋಗವಿರಲಿ ಅವರನ್ನು ಚಿಕಿತ್ಸೆ ಮಾಡುವಲ್ಲಿ ಹಿಂಜರಿಯುವುದಿಲ್ಲ.

೧೫. ರೋಗಿಗೆ ತನ್ನ ಕಾಯಿಲೆ ಹಾಗೂ ಚಿಕಿತ್ಸೆಗಳ ವಿಷಯದಲ್ಲಿ ಯಾವುದೇ ಸಂಶಯ ಬಂದಲ್ಲಿ ಅವರು ಇನ್ನೊಬ್ಬ ವೈದ್ಯರ ಸಲಹೆ ಪಡೆಯುವಲ್ಲಿ ನೆರವು ನೀಡುತ್ತೇನೆ.

೧೬. ನನ್ನ ವೈದ್ಯ ಸಹೋದ್ಯೋಗಿಗಳನ್ನು ಗೌರವದಿಂದ ನೋಡುತ್ತೇನೆ. ಅವರ ವೈದ್ಯ ವೃತ್ತಿಯಲ್ಲಿ ಅವರ ಮೇಲ ಸುಳ್ಳು ಆರೋಪವಿದ್ದಲ್ಲಿ, ಅವರ ಪರವಾಗಿ ಹೋರಾಡುತ್ತೇನೆ. ಆದರೆ ಆ ಆರೋಪ ನಿಜವಾಗಿದ್ದಲ್ಲಿ ಅವರ ವಿರುದ್ಧ ಹೇಳಿಕೆ ನೀಡಲು ಹಿಂಜರಿಯುವುದಿಲ್ಲ.

ಆತ್ಮಸಾಕ್ಷಿ

ಒಬ್ಬ ತನ್ನ ಆತ್ಮ ಸಾಕ್ಷಿಗನುಸಾರ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರೆ, ಅವನಿಗೆ ಯಾವ ನೀತಿ ಸಂಹಿತೆಗಳ ಅವಶ್ಯಕತೆಯೂ ಇರುವುದಿಲ್ಲ. ಇದೇ ರೀತಿ ಹಲವು ವೃತ್ತಿಗಳಲ್ಲಿ ಅವರದೇ ಆದ ನೀತಿ ಸಂಹಿತೆಯನ್ನು ಎಲ್ಲ ವೈದ್ಯರೂ ಪಾಲಿಸುವುದು ಅಗತ್ಯ. ಅದೇ ರೀತಿಯ ಒಂದು ನೀತಿಸಂಹಿತೆಯನ್ನು ರಾಜಕೀಯ ವ್ಯಕ್ತಿಗಳೂ ಪಾಲಿಸಿದಲ್ಲಿ ಎಷ್ಟು ಚೆನ್ನ.

* * *