ಕೊಲಂಬಸ್ಸನು ಅಮೇರಿಕಾ ಕಂಡುಹಿಡಿದನೆಂಬುದು ಪ್ರತಿಯೊಬ್ಬರಿಗೂ ತಿಳಿದ ವಿಷಯ. ಆದರೆ ಅವನೇ ತಂಬಾಕನ್ನು ಕಂಡುಹಿಡಿದನೆಂಬುದು ಅನೇಕ ಜನರಿಗೆ ತಿಳಿದಿರಲಾರದು. ಅಧ್ಯಕ್ಷಹ್ಯಾರಿ ಟ್ರೂಮ್ಯಾನ್ ರವರು ‘ಕೊಲಂಬಸ್ ಗುಹ್ಯರೋಗವನ್ನು ರೆಡ್ ಇಂಡಿಯನ್ನರಿಗೆ ತಂದುಕೊಟ್ಟನು. ರೆಡ್ ಇಂಡಿಯನ್ನರು ಅವನಿಗೆ ತಂಬಾಕನ್ನು ಕೊಟ್ಟರು. ಇವೆರಡರಲ್ಲಿ ಯಾವುದು ಹೆಚ್ಚು ಮಾರಕವೆಂಬುದು ವಿವಾದಸ್ಪದ’ ಎಂದು ಒಮ್ಮೆ ಹೇಳಿದರು. ಭಾರತದಲ್ಲಿ ಎಲ್ಲಾ ತರಹ  ತಂಬಾಕುಗಳನ್ನೂ ಬೆಳೆಯುತ್ತೇವೆ ಮತ್ತು ಅನೇಕ ಬಗೆಯ ಸಿಗರೇಟು ಬೀಡಿಗಳನ್ನು ತಯಾರು ಮಾಡಲಾಗುತ್ತದೆ. ಆದರೂ ನಮ್ಮಲ್ಲಿ ಧೂಮಪಾನದಿಂದುಂಟಾಗುವ ಶ್ವಾಸಕೋಶಗಳ ರೋಗಿಗಳ ಸಂಖ್ಯೆ ನಿರ್ದಿಷ್ಟವಾಗಿ ಸಿಕ್ಕಿಲ್ಲ. ಇದಕ್ಕೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಮ್ಮ ಗಮನ ಸೆಳೆದಿರುವುದು ಒಂದು ಮುಖ್ಯ ಕಾರಣವಾಗಿರಬಹುದು.

ಧೂಮಪಾನವು ಧೂಮಪಾನಿಗಳಿಗೆ ಬಹುಪ್ರಿಯ. ಧೂಮಪಾನವು ಕೆಮ್ಮನ್ನೂ, ಕಫವನ್ನೂ ಉಂಟುಮಾಡುತ್ತದೆಂದು ಅವರೆಲ್ಲರಿಗೂ ತಿಳಿದ ವಿಷಯ. ಆದರೆ ಶ್ವಾಸಕೋಶಗಳ ಮೇಲೆ ದೀರ್ಘಕಾಲ ಧೂಮಪಾನದಿಂದುಂಟಾಗುವ ಪರಿಣಾಮಗಳು ಅನೇಕ ಧೂಮಪಾನಿಗಳಿಗೆ ತಿಳಿಯದೇ ಇರಬಹುದು. ಇವುಗಳಲ್ಲಿ ಮುಖ್ಯವಾದುವುಗಳೆಂದರೆ ಶ್ವಾಸಕೋಶಗಳ ಕ್ಯಾನ್ಸರ್ ಮತ್ತು ಉಬ್ಬಸ ರೋಗಗಳು.

ಈ ಶತಮಾನದ (ಇಪ್ಪತ್ತನೆಯ) ಮೊದಲಿನಲ್ಲಿಯೇ ಧೂಮಪಾನ ಶ್ವಾಸಕೋಶಗಳಿಗೆ ಹಾನಿಕಾರವೆಂದು ಸಂದೇಹ ಪಡಲಾಯಿತು. ೧೯೫೦ರ ಹೊತ್ತಿಗೆ ವ್ಯಾಪಕ ಮತ್ತು ತೀವ್ರ ವೈಜ್ಞಾನಿಕ ಸಂಶೋಧನೆಗಳಿಂದ ಧುಮಪಾನಿಗಳು ಶ್ವಾಸಕೋಶಗಳ ಮತ್ತು ತೀವ್ರವಾದ ಶ್ವಾಸಕೋಶ ಕ್ಯಾನ್ಸರ್ ರೋಗಕ್ಕೆ ಒಳಪಡುವರು ಎಂದು ದೃಢೀಕರಿಸಲಾಯಿತು ಮತ್ತು ಅನೇಕ ಪ್ರಯೋಗಗಳು ಸಿಗರೇಟಿನ ಹೊಗೆಯಲ್ಲಿರುವ (ಟಾರ್) ವಸ್ತುವು ಕ್ಯಾನ್ಸರ್‌ನ್ನು ಉಂಟುಮಾಡುತ್ತದೆಂದು ತೋರಿಸಿದವು. ಈ ಟಾರ್ ವಸ್ತುವನ್ನು ಇಲಿಗಳ ಚರ್ಮದ ಮೇಲೆ ಲೇಪಿಸಿದಾಗ ಕ್ಯಾನ್ಸರ್ ಉಂಟಾಗುತ್ತದೆ. ಶೇಕಡ ೯೦ರಷ್ಟು ಶ್ವಾಸಕೋಶಗಳ ಕ್ಯಾನ್ಸರ್ ಧೂಮಪಾನಿಗಳಲ್ಲಿಯೇ ಕಂಡುಬರುತ್ತದೆ. ದಿನಕ್ಕೆ ೨೦ ಸಿಗರೇಟು ಸೇದುವವನು, ಧೂಮಪಾನ ಮಾಡದೇ ಇರುವವರಿಗಿಂತ ೨೫ರಷ್ಟು ಹೆಚ್ಚು ಭಾಗಶಃ ಶ್ವಾಸಕೋಶಗಳ ಕ್ಯಾನ್ಸರಿಗೆ ಒಳಗಾಗುವ ಸಂಭವವುಂಟು. ಇದಕ್ಕಿಂತಲೂ ಹೆಚ್ಚು ಧೂಮಪಾನ ಮಾಡಿದಂತೆಲ್ಲಾ ರೋಗದ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಬಾಯಿ ಗಂಟಲು ಮತ್ತು ಅನ್ನನಾಳಗಳ ಕ್ಯಾನ್ಸರ್ ಧೂಮಪಾನ ಮಾಡದಿರುವವರಿಗಿಂತ ಧೂಮಪಾನಿಗಳಲ್ಲಿಯೇ ಜಾಸ್ತಿ. ೧೯೪೦ರಲ್ಲಿ ಐಸ್‌ಲ್ಯಾಂಡ್ ರಾಷ್ಟ್ರದಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ಬಹು ವಿರಳವಾಗಿತ್ತು. ಭಾರತದಲ್ಲಿ ಸಿಖ್ಖರ ಧರ್ಮವು ಧೂಮಪಾನವನ್ನು ನಿಷೇಧಿಸಿರುವುದರಿಂದ ಅವರಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ವಿರಳ.

ಧೂಮಪಾನಿಗಳ ಶ್ವಾಸಕೋಶಗಳು ಆಮ್ಲಜನಕ ಹೀರಲು ಉತ್ಕೃಷ್ಟ ಪರಿಸ್ಥಿತಿಯಲ್ಲಿರುವುದಿಲ್ಲ. ಇದರಿಂದಾಗಿ ಧೂಮಪಾನವು ಆಟಗಾರರ ವ್ಯಾಯಾಮ ಶಕ್ತಿಯನ್ನು ಕುಂದಿಸುತ್ತದೆ.

ಬೆಳಗಿನ ಕೆಮ್ಮು, ಮಧ್ಯಾಹ್ನದ ಕೆಮ್ಮು ಸಂಜೆಯ ಕೆಮ್ಮು ಇವುಗಳು ಧೂಮಪಾನದಿಂದ ಗಂಟಲು ಮತ್ತು ಶ್ವಾಸಕೋಶಗಳ ಮೇಲೆ ಆಗುವ ತೊಂದರೆಯನ್ನು ತೋರಿಸುವ ಚಿಹ್ನೆಗಳು. ದಿನಕ್ಕೆ ೫ಸಿಗರೇಟು ಸೇದುವ ಯುವಕರು ದೀರ್ಘಕಾಲದ ಧೂಮಪಾನಿಯಷ್ಟೇ ಕಫ, ಕೆಮ್ಮು ಮತ್ತು ದಮ್ಮುಗಳಿಗೆ ಒಳಗಾಗಬಹುದು. ಹೆಚ್ಚು ಸಿಗರೇಟ್ ಹೊಗೆ ಎಳೆದಂತೆಲ್ಲಾ ಶ್ವಾಸಕೋಶಗಳು ಹೆಚ್ಚು ಜಖಂ ಆಗುತ್ತವೆ. ಆಗಾಗ್ಗೆ ಬರುವ ನೆಗಡಿ, ವಕ್ಷಸ್ಥಳಗಳ ನೋವು, ಸೈನಸ್ ತೊಂದರೆಗಳು ಮತ್ತು ಲಘು ಶೀತಜ್ವರಗಳು ಧೂಮಪಾನದಿಂದ ಉಂಟಾಗುವ ಸಾಮಾನ್ಯ ವ್ಯಾಧಿಗಳು. ಧೂಮಪಾನವು ಶ್ವಾಸಕೋಶದ ಸೋಂಕುರೋಗಗಳ ನಿವಾರಣಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಆದುದರಿಂದ, ಧೂಮಪಾನಿಗಳು ಮತ್ತೆ ಮತ್ತೆ ಶೀತಜ್ವರ ಮತ್ತು ನಿಮೋನಿಯಾಗಳಿಗೆ ಒಳಗಾಗುವ ಸಂಭವವುಂಟು. ವರ್ಷಾನುಗಟ್ಟಲೆ ಧುಮಪಾನ ಮಾಡುವುದರಿಂದ ಶ್ವಾಸಕೋಶಗಳ ಗಾಳಿಯ ಕೊಳವೆಗಳು ಸಂಕುಚಿತವಾಗುತ್ತವೆ. ಇದರಿಂದ ಉಬ್ಬಸ ಸಂಭವಿಸಿ ಉಸಿರಾಡಲು ಕಷ್ಟವಾಗುತ್ತದೆ. ಗೂರಲು ರೋಗ, ಉಬ್ಬಸ, ಆಯಾಸಗಳಿಂದ ಪೀಡಿಸಲ್ಪಟ್ಟ ಅನೇಕ ಧೂಮಪಾನಿಗಳು ಓಡಾಟ ಮಾಡಲು ಅಸಹಾಯಕರಾಗುತ್ತಾರೆ. ತೀವ್ರ ಗೂರಲುಬ್ಬಸಕ್ಕೆ ಗುರಿಯಾದ ಧೂಮಪಾನವು ತೀವ್ರ ಗೂರಲು ರೋಗಕ್ಕೆ ಅವಕಾಶವಾಗುತ್ತದೆ. ಉಬ್ಬಸರೋಗದ ಧೂಮಪಾನಿಗಳು ಹಠಾತ್ತನೆ ಸಾಯದಿರಬಹುದು. ಆದರೆ ನಿಧಾನವಾಗಿ ನರಳಿ, ನರಳಿ ನೋವಿನಿಂದ ಕೂಡಿದ ಸಾವಿಗೆ ಒಳಗಾಗುತ್ತಾರೆ.

ಬೇರಾವುದೋ ರೋಗಗಳಿಂದ ಹಾಸಿಗೆ ಹಿಡಿದಲ್ಲಿ, ಧೂಮಪಾನಿಯು ಶ್ವಾಸಕೋಶಗಳ ತೊಂದರೆಗುಂಟಾಗುವ ಸಂಭವ ಹೆಚ್ಚು.

ಧೂಮಪಾನಿಯು ಧೂಮಪಾನ ಬಿಟ್ಟರೆ ಶ್ವಾಸಕೋಶಗಳ ಹಾನಿ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯಬೇನೆಗಳು ಹಿಮ್ಮೆಟ್ಟುತ್ತವೆ. ಧೂಮಪಾನವನ್ನು ಬಿಟ್ಟಿರುವ ಬ್ರಿಟಿಷ್ ವೈದ್ಯರುಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮತ್ತು ಗೂರಲು ರೋಗ ಕಡಿಮೆಯಾಗಿದೆ. ಸಂಗತಿಯು ಪ್ರಶಂಸನೀಯ ಮತ್ತು ಅನುಕರಣನೀಯ ವಿಷಯ. ಧುಮಪಾನಿಯು ಸಿಗರೇಟು ತ್ಯಜಿಸುವುದರಿಂದ ಕಫ ಕಡಿಮೆಯಾಗುತ್ತದೆ, ಕೆಮ್ಮು ಕಣ್ಮರೆಯಾಗುತ್ತದೆ. ಉಸಿರು ಕಟ್ಟುವುದು ನಿಲ್ಲುತ್ತದೆ. ಆಹಾರ ರುಚಿಸುತ್ತದೆ. ನಿದ್ದೆ  ಹೆಚ್ಚುತ್ತದೆ. ಜೇಬಿನಿಂದ ಹರಿದು ಹೋಗುವ ಹಣ ಉಳಿಯುತ್ತದೆ. ಶ್ವಾಸಕೋಶಗಳ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಪ್ರಸಂಗಗಳೂ ಹಿಂಜರಿಯುತ್ತವೆ.

* * *