ಜನಸಾಮಾನ್ಯರಲ್ಲಿ ಹಾಗೂ ವಿದ್ಯಾವಂತರಲ್ಲಿ ಬಲವಾಗಿ ಬೇರೂರಿರುವ ಒಂದು ತಪ್ಪು ಅಭಿಪ್ರಾಯವೆಂದರೆ, ಸ್ವಲ್ಪ ಮದ್ಯಪಾನ ಮಾಡುವುದು (ದಿನಾ ೧,೨ ಪೆಗ್ ವಿಸ್ಕಿ) ಆರೋಗ್ಯಕ್ಕೆ ಒಳ್ಳೆಯದು ಹಾಗೂ ಹೃದಯಾಘಾತದಂತಹ ಮಹತ್ತರ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುವುದೆಂಬುದು. ಇದನ್ನು ಹಲವು ಸಲ ವೈದ್ಯ ಸಮುದಾಯ ಉತ್ತೇಜಿಸುವುದು ಸತ್ಯ.

ಮೊದಲಿಗೆ ಈ ತಪ್ಪು ಅಭಿಪ್ರಾಯ ಹೇಗೆ ತಳವೂರಿತೆಂದು ನೋಡುವುದು ಅಗತ್ಯ. ಹಲವಾರು ಸಣ್ಣಪುಟ್ಟ ಸಮೀಕ್ಷೆಗಳು ಹಿಂದೆ ಇಂತಹ ನಿರ್ಣಯಕ್ಕೆ ಬಂದಿವೆ. ಅದಲ್ಲದೆ ಇತ್ತೀಚಿನ ಇಂಗ್ಲೆಂಡಿನ ಸರ್ ರಿಚರ್ಡ್ ಡೋಲ್ ಹಾಗೂ ಪೆಟೋ ಎಂಬಿಬ್ಬರು ಆಕ್ಸ್ಫರ್ಡ್ ವಿಜ್ಜಾನಿಗಳು ಈ ವಿಷಯಕ್ಕೆ ತಮ್ಮ ಒಂದು ಸಮೀಕ್ಷೆಯಿಂದ ಹೆಚ್ಚಿನ ಪುರಸ್ಕಾರ ನೀಡಿರುವರು. ಮೂರನೆ ಕಾರಣವೇ ಫ್ರೆಂಚ್ ಜನರನ್ನು ಸ್ಕಾಟ್ಲಂಡಿನ ಜನರಿಗೆ ಹೋಲಿಸಿ ಮಾಡಿದ ಸಮೀಕ್ಷೆ. ಫ್ರೆಂಚರು ಬಹಳ ಹೆಚ್ಚು ವೈನ್ ಕುಡಿದರೆ, ಸ್ಕಾಟ್‌ಗಳು ಹೆಚ್ಚು ವಿಸ್ಕಿ ಕುಡಿಯುತ್ತಾರೆ. ಫ್ರೆಂಚ್ ಜನರಿಗೆ ಕಡಿಮೆ ಪ್ರಮಾಣದ ಹೃದಯಾಘಾತವಾಗುವುದರಿಂದ ವೈನ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೆಂಬ ಅಭಿಪ್ರಾಯ ಹುಟ್ಟಿಕೊಂಡಿತು.

ಸತ್ಯ ಸಂಗತಿ ಏನು? ಸ್ಕಾಟ್ಲಂಡ್ ಹಾಗೂ ಫಿನ್ಲೆಂಡ್ ಜನರಿಗೆ ಹೃದಯಾಘಾತ ಯೂರೋಪಿಯನರ ಪೈಕಿ ಹೆಚ್ಚೆಂಬುದಕ್ಕೆ ಹಲವು ಕಾರಣಗಳಿವೆ. ವೈನ್‌ಗೂ ಹೃದಯಾಘಾತಕ್ಕೂ ಯಾವುದ ಸಂಬಂಧವಿಲ್ಲ. ಅಂತೆಯೇ ಡೋಲ್ ಮತ್ತು ಪೆಟೋರವರ ಸಮೀಕ್ಷೆ ಮದ್ಯಪಾನದ ವಿಷಯದಲ್ಲಿ ಆಗಿರಲಿಲ್ಲ. ಅದು ಜನ ಆಸ್ಪಿರಿನ್ ಗುಳಿಗೆ ತಿನ್ನುವ ವಿಚಾರದಲ್ಲಿತ್ತು. ಅದರೊಟ್ಟಿಗೆ ಅವರ ಮದ್ಯಪಾನದ ಅಭ್ಯಾಸವನ್ನು ಹೆಚ್ಚುವರಿ ಪ್ರಶ್ನೆಯಾಗಿ ಕೇಳಲಾಗಿತ್ತು. ಅದರಲ್ಲಿ ತುಂಬಾ ಹೆಚ್ಚು ಕಡಿಮೆ ತೋರಿ ಬಂದಿವೆ. ಜನ ತಮ್ಮ ಕುಡಿಯುವ ಅಭ್ಯಾಸವನ್ನು ಬೇರೆಯವರು ತಿಳಿದುಕೊಳ್ಳಬಾರದೆಂಬ ಅಭಿಪ್ರಾಯದಿಂದ ತಾವು ಕುಡಿಯುವುದಿಲ್ಲವೆಂದು ಹೇಳಿದ್ದರೆ ಇನ್ನಿತರರು ತಮ್ಮ ಪೌರುಷವನ್ನು ಪ್ರದರ್ಶಿಸಲು ತಾವು ಹೆಚ್ಚು ಕುಡಿಯುವುದಾಗಿ ಬರೆದಿರುವುದೀಗ ತಿಳಿದಿದೆ.

ಮದ್ಯಪಾನ ಮತ್ತು ಆರೋಗ್ಯದ ವಿಚಾರ ಬಂದ ಎಲ್ಲಾ ಸಮೀಕ್ಷೆಗಳನ್ನು ಪರೀಕ್ಷಿಸಿ ಕೂಲಂಕಷವಾಗಿ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷ ಒಂದು ಸಮಿತಿಯನ್ನು ನೇಮಿಸಿತ್ತು. ಆ ಸಮಿತಿಯ ಅಧ್ಯಕ್ಷ ಡಾ| ಆರ್ಗೋನೊಂಡಾ ಕಳೆದ ತಿಂಗಳು ತಮ್ಮ ವರದಿಯನ್ನು ವಿಶ್ವಸಂಸ್ಥೆಗೆ ಒಪ್ಪಿಸಿದರು. ಅದರ ಪ್ರಕಾರ, ಯಾವ ತರದ ಮದ್ಯಪಾನವೂ (ಒಂದು ಬಿಂದು ಕೂಡಾ) ಆರೋಗ್ಯಕ್ಕೆ ಒಳ್ಳೆಯದೆಂಬ ಅಭಿಪ್ರಾಯ ಖಂಡಿತ ತಪ್ಪೆಂದು ತಿಳಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಆರೋಗ್ಯಕ್ಕೆ ಖಂಡಿತ ಹಾಳೆಂಬ ವಿಷಯ ಸರಿಯಾಗಿ ತಿಳಿದಿಲ್ಲವಾದರೂ, ಅದು ಆರೋಗ್ಯಕ್ಕೆ ಒಳ್ಳೆಯದೆಂಬ ಅಭಿಪ್ರಾಯ ತೀರಾ ತಪ್ಪು. ಜನರಿಗೆ ಸ್ವಲ್ಪ ಕುಡಿಯುವುದು ಹೃದಯಕ್ಕೂ ಆರೋಗ್ಯಕ್ಕೂ ಒಳ್ಳೆಯದೆಂಬ ಅಭಿಪ್ರಾಯ ಖಂಡಿತ ಕೊಡಬೇಡಿರಿ. ಇದು ಡಾ. ಆರ್ಗೋನೊಂಡಾರ ಕಿವಿಮಾತು. ವೈದ್ಯ ಜನಾಂಗ ಕೇಳುವರೇ?

ಆದರೆ ಮದ್ಯಪಾನದ ಲಾಬಿ ಇದನ್ನು ಸುಮ್ಮನಿದ್ದು ಕೇಳುವರೇ? ಅವರ ಪ್ರತಿನಿಧಿ ಈಚೆಗೆ ವಿಶ್ವ ಆರೋಗ್ಯ ಸಂಸ್ಥೆಗೆ ಒಂದು ಸವಾಲು ಕಳುಹಿಸಿದರು. ಜನ ಸಾಮಾನ್ಯರು ತಾವು ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳದೆ ಎಷ್ಟು ಕುಡಿಯಬಹುದು? ಇದಕ್ಕೆ ಉತ್ತರವಾಗಿ ವಿಶ್ವ ಸಂಸ್ಥೆ ಈ ಕೆಳಗಿನ ಹೇಳಿಕೆ ನೀಡಿದೆ. ಒಂದು ಬಿಂದು ಮದ್ಯಪಾನವೂ ಆರೋಗ್ಯಕ್ಕೆ ಒಳ್ಳೆಯದಲ್ಲ (ನೋ ಅಮೌಂಟ್ ಆಫ್ ಆಲ್ಕೋಹಾಲ್ ಈಸ್ ಗುಡ್ ಫಾರ್ ಹೆಲ್ತ್). ಇದು ಬಹಳ ಗಂಭೀರ ವಿಚಾರ.

ಸಾಮಾಜಿಕ ಆರೋಗ್ಯ ವೈದ್ಯಕೀಯ ಜಗತ್ತು ಹಾಗೂ ಆಸ್ಪತ್ರೆಗಳಿಂದ ಸಾಧಿಸುವ ವಿಷಯವಲ್ಲ. ಇದು ಎಲ್ಲ ಪ್ರಜೆಗಳ ಸಾಮಾಜಿಕ ಜವಾಬ್ದಾರಿ. ಇದು ವೈದ್ಯ ಜಗತ್ತಿನ ಹೊರಗೇ ಸಾಧಿಸಬೇಕಾದುದು ಎಂಬುದು ವಿಶ್ವಸಂಸ್ಥೆಯ ಮಹಿಳಾ ಪದಾಧಿಕಾರಿಯ ಅಭಿಪ್ರಾಯ. ಸೋಂಜಾ ಹಂಟ್ ಎಂಬಾಕೆ ಬಹಳ ಗಾಢ ಆಲೋಚನೆಯ ನಂತರ ಈ ವಿಷಯವನ್ನು ವಿಶ್ಲೇಷಿಸಿದ್ದಾರೆ (ಹೆಲ್ತ್‌ಆಫ್ ದಿ ಪಾಪ್ಯುಲೇಶನ್ ಈಸ್ ಆಲ್ಮೋಸ್ಟ್ ಟೋಟಲಿ ಔಟ್ಸೈಡ್ ದ ಪ್ರಿವ್ಯು ಆಫ್ ಡಾಕ್ಟರ್ಸ್ ಅಂಡ್ ಹಾಸ್ಪಿಟಲ್ಸ್.)

ಹೃದಯದ ಕಾಯಿಲೆಯನ್ನು ತಡೆಯುವಲ್ಲಿ ಮದ್ಯಪಾನದ ಪಾತ್ರವಿದೆ ಎಂದು ಹೇಳುವುದು ಸತ್ಯಕ್ಕೆ ದೂರ ಮಾತ್ರವಲ್ಲದೆ ಅಪಾಯಕಾರಿ ಬೇರೆ ಆಗಿದೆ. ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನದಿಂದ ಹೃದಯದ ಕಾಯಿಲೆಗಳಿಗೆ ಖಂಡಿತ ಲಾಭವಿಲ್ಲ. ಆದರೆ ಇದೀಗ ಮದ್ಯಪಾನದಿಂದ ಹೃದಯದ ಸ್ನಾಯುಗಳು ಕ್ರಮೇಣ ಕ್ಷೀಣಿಸಿ ಒಂದು ಹೊಸ ತರದ ಹೃದಯದ ಕಾಯಿಲೆ ಬರುವುದೆಂದು ತಿಳಿದಿದೆ (ಆಲ್ಕೋಹಾಲಿಕ್ ಕಾರ್ಡಿಯೋಮಯೊಫಥಿ). ಇದು ಹೃದಯಾಘಾತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಿಢೀರ್ ಮರಣಕ್ಕೆ ಮುಖ್ಯ ಕಾರಣವೆಂಬುದೀಗ ವೈಜ್ಞಾನಿಕ ಸತ್ಯ. ಹೃದಯಬಡಿತದಲ್ಲಿ ಬದಲಾವಣೆಗಳನ್ನುಂಟು ಮಾಡಿ ಹೃದಯದ ಕೆಲಸವನ್ನು ಹಾಳುಮಾಡುವ ಸಾಮಾನ್ಯ ಕಾಯಿಲೆ (ಆರ್ಟಿಯಲ್ ಫೈಬ್ರಿಲೇಶನ್) ಯ ಮುಖ್ಯ ಕಾರಣವೇ ಮದ್ಯಪಾನ. ಇಂತಹ ಪರಿಸ್ಥಿತಿಯಲ್ಲಿ ಮದ್ಯಪಾನ ಹೃದಯಕ್ಕೆ ಒಳ್ಳೆಯದೆಂದು ಹೇಳುವುದರಲ್ಲಿ ಸತ್ಯವಿರಲು ಸಾಧ್ಯವಿಲ್ಲ.

ಅಲ್ಪಸ್ವಲ್ಪ ಮದ್ಯಪಾನ ಮೊದಲಿಗೆ ಒಂದು ಸಾಮಾಜಿಕ ಸ್ಥಾನಮಾನಕ್ಕಾಗಿ ಆರಂಭಿಸಿದವರಲ್ಲಿ ಶೇಕಡಾ ೧೦ ಜನ ತಾಜಾ ಮದ್ಯಪಾನಿಗಳಾಗುವುದೀಗ ತಿಳಿದಿದೆ. ಇಂತಹ ಜನರಿಂದ ಸಾಮಾಜಿಕ ಆರೋಗ್ಯ ಬೇಗ ಕೆಡುವುದೂ ಸತ್ಯ. ವಾಹನ ಅವಘಡಗಳು, ದರೋಡೆ, ಕೊಲೆ, ಜಗಳ, ಕುಟುಂಬ, ಕಲಹಗಳು ಮದ್ಯಪಾನದ ಅತಿ ಹತ್ತಿರದ ಮಿತ್ರರು.

ಮನುಷ್ಯನ ಅನಾರೋಗ್ಯಕ್ಕೆ ಮುಖ್ಯ ಕಾರಣ ಬಡತನವೆಂಬುದನ್ನು ಪಾಶ್ಚಾತ್ಯ ವೈದ್ಯ ವಿಜ್ಞಾನಿಳಾದ. ಡಾ. ಬಾರ್ಕ್ ಮತ್ತು ಸ್ಮಿತ್  ಎಂಬಿಬ್ಬರು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಆ ದೇಶಗಳಲ್ಲಿಯೂ ಬಡಜನ ಅದರಲ್ಲೂ ಮನೆ ಮಠ ಇಲ್ಲದ ಜನ ಹೆಚ್ಚಿನ ಕಾಯಿಲೆಗಳಿಗೆ ತುತ್ತಾಗುವುದು ತಿಳಿದಿದೆ. ಇಂತಹವರಲ್ಲಿ ಮದ್ಯಪಾನ ಇನ್ನೂ ಹೆಚ್ಚಿನ ಪರಿಣಾಮ ಬೀರುವುದು ತಿಳಿದಿದೆ. ಅಲ್ಲೇ ಹಾಗಿದ್ದರೆ, ನಮ್ಮ ಬಡಜನರ ಪಾಡೇನು? ಅಲ್ಪಸ್ವಲ್ಪ ಗಳಿಸಿದ್ದನ್ನು ಮದ್ಯಪಾನದಲ್ಲಿ ವ್ಯಯಿಸಿ ತನ್ನದಲ್ಲದೆ ತನ್ನನ್ನು ಹೊಂದಿದವರ ಜೀವನದ ನರಕಪ್ರಾಯವಾಗಿಸುವುದು ನಿತ್ಯದ ಸಂಗತಿ.

ಅಲ್ಪ ಪ್ರಮಾಣದಲ್ಲಿ ಮದ್ಯಪಾನ ಸೇವನೆಯಿಂದ ಮಿದುಳಿನ ಕಣಗಳಿಗೆ (ಸೆರೆಬೆಲಾರ್ ಪರ್ಕಿಂಜಿಸೆಲ್ಸ್) ಸತ್ತು ಹೋಗುತ್ತವೆ ಎಂಬುದೀಗ ವಿಜ್ಞಾನಕ್ಕೆ ತಿಳಿದ ವಿಚಾರ (ಬಿಎಮ್‌ಜೆ ೧೯೯೪, ೩೦೮, ೧೬೬೩-೧೬೬೭). ಆದುದರಿಂದ ಸ್ವಲ್ಪ ಸೇವಿಸುವುದು ಆರೋಗ್ಯಕ್ಕೆ ಒಳಿತೆಂಬ ಉಪದೇಶ ವಿಷಯ ಜ್ಞಾನದ ಕೊರತೆಯಿಂದ ಬಂದಿದೆ ಎಂಬುದರಲ್ಲಿ ಸಂಶಯ ಬೇಡ.

ಇನ್ನೊಂದು ಮಹತ್ತರ ಹೊಸ ವಿಜ್ಞಾನ ವೈದ್ಯಕೀಯ ಜಗತ್ತಿಗೀಗ ಚೆನ್ನಾಗಿ ಅರಿವಾಗಿದೆ. ಹೆಂಗಸರು ಗರ್ಭಿಣಿಯಾಗಿ ಮೂರೇ ವಾರದೊಳಗೆ ಸ್ವಲ್ಪ ಪ್ರಮಾಣದ ಮದ್ಯಪಾನ ಮಾಡಿದರೂ ಹೊಟ್ಟೆಯಲ್ಲಿರುವ (ಮೂರು ವಾರದ) ಮಗುವಿನ ಮೇಲೆ ದುಷ್ಪರಿಣಾಮ ಬೀರುವುದೀಗ ತಿಳಿದಿದೆ. ಅದೇ ದುಃಖದ ವಿಚಾರವೆಂದರೆ, ಮೂರು ವಾರದೊಳಗೆ ಆಕೆಗೆ ತಾನು ಗರ್ಭಿಣಿ ಎಂದು ತಿಳಿದಿರುವುದಿಲ್ಲ ತಾನೇ? ಆದುದರಿಂದ ಸ್ವಲ್ಪ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದೆಂಬ ಅಪಪ್ರಚಾರದ ಗಂಭೀರ ಪರಿಣಾಮ ಸಮಾಜದ ಜನರಿಗೆ ಮಾತ್ರವಲ್ಲದೆ ಮುಂದಿನಪೀಳಿಗೆಗೂ ಇದೆ ಎಂದರೆ ಹೆದರಿಕೆ ಸಮಾಜದ ಜನರಿಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಇದೆ ಎಂದರೆ ಹೆದರಿಕೆ ಉಂಟಾಗುವ ಪರಿಸ್ಥಿತಿ (ಮೆಡಿಕಲ್ ಜರ್ನಲ್. ಆಫ್ ಆಸ್ಟ್ರೇಲಿಯಾ ೧೯೯೪: ೧೬೧,೪೬೧-೪೬೨). ಮದ್ಯಪಾನ ಆರೋಗ್ಯಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಲ್ಲ. ಈ ತರದ ಅಪಪ್ರಚಾರ ನಿಲ್ಲಲಿ. ಮಾನವ ಕುಲದ ಒಳಿತಿಗಾಗಿಯಾದರೂ ನಾವಿದನ್ನು ತಿಳಿದಿರಬೇಕು.

ಸಮಾಜ ಮತ್ತು ಆರೋಗ್ಯ

ನಮ್ಮ ಸಾಮಾನ್ಯ ವಾಡಿಕೆಯಂತೆ ಸಾವಿಗೂ ಅನಾರೋಗ್ಯಕ್ಕೂ ಮುಖ್ಯ ಕಾರಣಗಳು ಹೃದಯಾಘಾತ, ಕ್ಯಾನ್ಸರ್ ಭಯಾನಕ ಕಾಯಿಲೆಗಳು. ನಿಜ ಸಂಗತಿ ಬೇರೆಯೇ ಇದೆ. ಇದು ಈಗ ಹೆಚ್ಚಾಗಿ ಪಾಶ್ಚಾತ್ಯರಿಗೆ ಅರಿವಾಗಿರುವುದರಿಂದ ಅಲ್ಲಿ ಈ ದಿಸೆಯಲ್ಲಿ ತುಂಬಾ ಹೊಸ ಆಯಾಮಗಳು ಹುಟ್ಟಿಕೊಂಡಿವೆ.

* * *