“ಯಪ್ಪ ಹಲ್ಲ ಬ್ಯಾನಿ ಮುಟ್ಟಾ ಆಗೈತಿ, ಕಪಾಳ ಕಿವಿ ರವರವ ಅಂತ ಜಗ್ಗತಾವ. ತಲಿ ಅಂತೂ ಸುತ್ಗೀಲೆ ಹೊಡದಂಗ್ ಅನಸತೈತಿ. ಯಾವ್ದರ ದವಾ ಗಿವ ಇದ್ರ ಬಿಡು. ಇಲ್ಲಾಂದ್ರ ಹಲ್ಲೀಗ ಚೂಜಿ ಚುಚ್ಚಿ ಕಿತ್ತಬಿಡೂ. ಮಗಂದ್ ಹಲ್ಲ ಮಾತೇ ಕೇಳಲ್ಲಾಗೇದ್. ಭಾಳ್ ಅಗೇದ್ ಅದ್ರುದ್.”

ತನ್ನ ಹಠಮಾರಿ ಹಲ್ಲುನೋವಿಗೆ ಒಂದು ಗತಿ ಕಾಣಿಸಿಯೇ ಬಿಡಬೇಕು ಎಂದು ನಿರ್ಧರಿಸಿ ಸಮೀಪದ ಹಳ್ಳಿಯ ಹಿರಿಯನೊಬ್ಬ ತನ್ನ ಬಾತುಕೊಂಡ ಮುಖ ಹೊತ್ತು ನನ್ ದವಾಖಾನೆಗೆ ಬಂದಿದ್ದ.

ಆ ಹಲ್ಲನ್ನು ಪರೀಕ್ಷಿಸಿದೆ. ಹಲ್ಲಿನ ಸುತ್ತಲೂ ಕೀವು ಉಂಟಾಗಿತ್ತು. ವಸಡು ಕೊಳೆತ ಟೊಮ್ಯಾಟೋ ಹಣ್ಣನ್ನು ಹೋಲುತ್ತಿತ್ತು. ಹಲ್ಲು ಇನ್ನೇನು ಬಿದ್ದೇ ಬಿಡುತ್ತೆ ಎನ್ನುವಷ್ಟು ಅಲ್ಲಾಡುತ್ತಿತ್ತು. ಆ ಹಲ್ಲುಗಳ ನಡುವಿನ ಸಂದಿಯಲ್ಲಿ ತಂಬಾಕು ಗಟ್ಟಿಯಾಗಿ ಅಂಟಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಬಾಯಿಯಲ್ಲಿಯ ಉಳಿದ ಹಲ್ಲುಗಳ ನಡುವಿನ ಸಂದುಗಳಲ್ಲಿಯೂ ತಂಬಾಕು ಮೆತ್ತಿಕೊಂಡಿತ್ತು. ಒಟ್ಟಿನಲ್ಲಿ ಬಾಯಿಪೂರಾ ತಂಬಾಕುಮಯವಾಗಿತ್ತು. ವಿಚಿತ್ರವೆಂದರೆ ಆ ಹಿರಿಯರಿಗೆ ತಂಬಾಕಿನ ಕುರಿತು ಇನ್ನಷ್ಟು ವಿಚಾರಿಸಿದಾಗ ಅವರಿಗೆ ಹಲ್ಲು ನೋವು ಕಾಣಿಸಿಕೊಳ್ಳುವ ಮೊದಲು ತಂಬಾಕಿನ ಚಟವೇ ಇರಲಿಲ್ಲವಂತೆ! ಈಗ ತಂಬಾಕು ಅವರ ಪ್ರತಿ ಕ್ಷಣದ ಸಂಗಾತಿ!!

ಪಿಯುಸಿ ಓದುತ್ತಿರುವ ಸತೀಶನದ್ದೂ ಇದೇ ಪರಿಸ್ಥಿತಿ. ಆತನ ಬುದ್ದಿ ಹಲ್ಲು (ವಿಸಡಮ್ ಟೂತ್) ನೋವು ನೀಡುತ್ತಿದ್ದಾಗ ಗೆಳೆಯರು ಸೂಚಿಸಿದ ಹಾಗೆ ಬಾಯಿಗೆ ಗುಟಕಾ ಹಾಕಿದ. ನೋವು ಕಡಿಮೆ ಆಗಲಿಲ್ಲ. ಆದರೆ ಗುಟಕಾ ಚಟವಾಗಿ ಬೆಳೆಯಿತು. ಅದರ ಚಟದಿಂದ ಹಾಗೂ ಅದರಿಂದಾದ ಹಲ್ಲಿನ ಅಸಹ್ಯ ಕಲೆಗಳಿಂದ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದಾನೆ.

ಇದರಿಂದ ಒಂದಂಶ ಮಾತ್ರ ನಿಜ ಎನಿಸುತ್ತದೆ. ಹಲ್ಲು ನೋವು ತಂಬಾಕಿನಿಂದ ಕಡಿಮೆಯಾಗುವುದೋ ಇಲ್ಲವೋ, ಆದರೆ ಅದು ತಂಬಾಕು ಜಗಿಯುವ ಚಟಕ್ಕೆ ಮಾತ್ರ ಹಾಕುವುದು ಖಚಿತ.

ನಮ್ಮ ದೇಶದಲ್ಲಿ ಶೇ. ೪೮ರಷ್ಟು ಪುರುಷರು ಹಲ್ಲುನೋವಿಗಾಗಿಯೇ ತಂಬಾಕನ್ನು ಚಟವಾಗಿ ಬಳಸಿಕೊಂಡಿದ್ದಾರೆ! ತಂಬಾಕು ಮೆಲ್ಲುವ ಸ್ತ್ರೀಯರ ಸಂಖ್ಯೆಯೂ ಶೇಕಡಾ ೯೨ರಷ್ಟು ಇದೆ ಎನ್ನುವುದು ಅಷ್ಟೇ ಸತ್ಯ.

ಹಾಗಾದರೆ ತಂಬಾಕು ಹಲ್ಲುನೋವಿಗೆ ಉಪಯುಕ್ತವಲ್ಲವೇ? ಅದನ್ನು ಹಚ್ಚಿದಾಗ ಹಲ್ಲು ನೋವು ಶಮನವಾಗುತ್ತದಲ್ಲ. ಅದು ಹೇಗೆ?

ಹೌದು. ತಂಬಾಕನ್ನು ನೋವಿರುವ ಹಲ್ಲಿನ ಜಾಗದಲ್ಲಿಟ್ಟರೆ ನೋವು ಕಡಿಮೆ ಆಗುತ್ತದೆ. ಆದರೆ ಅದು ತಾತ್ಕಾಲಿಕ.

ಏಕೆಂದರೆ ತಂಬಾಕು ಒಂದು ಪ್ರತ್ಯಾಮ್ಲೀಯ ಪದಾರ್ಥ, ಅದರಲ್ಲಿ ಪಿಎಚ್ ಅಂಶ ಹೆಚ್ಚಾಗಿರುತ್ತದೆ. ಇದನ್ನು ಬಾಯಿಯಲ್ಲಿ ಇರಿಸಿದಾಗ ಅದು ಜೊಲ್ಲಿನ ಜೊತೆ ಸೇರಿ ಅಲ್ಲಿ ಪ್ರತ್ಯಾಮ್ಲೀಯ ವಾತಾವರಣ ಸೃಷ್ಟಿಸಿಬಿಡುತ್ತದೆ.

ಈ ಪ್ರತ್ಯಾಮ್ಲೀಯ ವಾತಾವರಣ ಹಲ್ಲುನೋವನ್ನು ತಕ್ಷಣವೇ ಮರೆಮಾಡುತ್ತದೆ. ಆದರೆ ಶಮನಗೊಳಿಸುವಲ್ಲಿ ವಿಫಲವಾಗುತ್ತದೆ. ಕೆಲ ಸಮಯದ ನಂತರ ಇದು ಹಲ್ಲಿನ ತಿರುಳಂಗಾಂಶವನ್ನು ಕೆರಳಿಸಿ, ನೋವು ಬಾವು ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತದೆ.

ತಂಬಾಕು ಜಗಿಯುವುದರಿಂದ ದಂತ ಕುಳಿ ತಡೆಗಟ್ಟಬಹುದೆಂದು ಬಹಳಷ್ಟು ಜನರಲ್ಲಿ ನಂಬುಗೆಯಿದೆ.

ಇದು ಅಲ್ಪಮಟ್ಟಿಗೆ ಸತ್ಯ. ಹೇಗೆಂದರೆ ಬಾಯಿಯಲ್ಲಿ ತಂಬಾಕು ನಿರ್ಮಿಸುವ ಪ್ರತ್ಯಾಮ್ಲೀಯ ವಾತಾವರಣದಲ್ಲಿ ಸೂಕ್ಷ್ಮಾಣುಗಳು ಹಲ್ಲಿನಲ್ಲಿ ಕುಳಿ ಉಂಟುಮಾಡುವ ಹಾನಿಕಾರಕ ಆಮ್ಲಗಳನ್ನು ಉತ್ಪಾದಿಸದ ಹಾಗೆ ನಿಷ್ಕ್ರಿಯವಾಗಿ ಬಿಡುತ್ತವೆ. ಹಾಗೇನಾದರೂ ಆಮ್ಲ ಬಿಡುಗಡೆಯಾದರೆ ಬಾಯಿಯಲ್ಲಿಯ ಸದಾ ಜಗಿಯುವಿಕೆ, ನಾಲಿಗೆಯ ಚಲನೆ, ಜೊಲ್ಲು ರಸದ ನಿರಂತರ ಸ್ರವಿಸುವಿಕೆ ಕ್ರಿಯೆ ಅದನ್ನು ತೊಳೆದು ತಿಳಿಗೊಳಿಸಿಬಿಡುತ್ತದೆ. ಆದ್ದರಿಂದ ಸದಾ ತಂಬಾಕು ಜಗಿಯುವವರ ಬಾಯಿಯಲ್ಲಿ ಸಾಮಾನ್ಯವಾಗಿ ದಂತಕುಳಿಗಳು ಕಂಡುಬರುವುದಿಲ್ಲ.

ಆದರೆ ಇಂತಹ ಉಪಕಾರಿ ಕ್ರಿಯೆಯ ಜೊತೆಗೆ ಬಹಳಷ್ಟು ಅಪಾಯಕಾರಿ ಕ್ರಿಯೆಗಳು ಜರುಗುತ್ತವೆ ಎನ್ನುವುದು ಅನೇಕ ಜನರ ಅರಿವಿಗೆ ಬರುವುದೇ ಇಲ್ಲ.

ಬಾಯಿಯಲ್ಲಿ ಇರುವ ಈ ಅತಿಯಾದ ಪ್ರತ್ಯಾಮ್ಲೀಯ ವಾತಾವರಣ ಹಲ್ಲನ್ನು ಮೂಳೆಗೆ ಅಂತಿಸಲು ಸಹಾಯಕಾರಿ ಹಾಗೂ ಆಧಾರವಾಗಿರುವ ಹಲ್ಲಿನ ಸುತ್ತಲ ದಳಗಳನ್ನು ನಾಶಪಡಿಸುತ್ತದೆ. ಹಲ್ಲಿನ ಸಂದುಗಳಲ್ಲಿ ಸಿಕ್ಕಿಕೊಳ್ಳುವ ತಂಬಾಕು ದಂತ ದಳಗಳನ್ನು ನಾಶಪಡಿಸುತ್ತದೆ. ಹಲ್ಲಿನ ಸಂದುಗಳಲ್ಲಿ ಸಿಕ್ಕಿಕೊಳ್ಳುವ ತಂಬಾಕು ದಂತ ಮೂಳೆಯ ಕೊರೆತಕ್ಕೆ ಕಾರಣವಾಗುತ್ತದೆ. ಹಲ್ಲು ಮತ್ತು ವಸಡಿನ ನಡುವಿನ ಜಾಗ ಇನ್ನಷ್ಟು ಅಗಲವಾಗಿ ಆಹಾರ ಕಣಗಳು ಸಿಕ್ಕಿಕೊಂಡು ಕ್ರಮೇಣ ಕೊಳೆತು ಹಲ್ಲಿಗೆ ಪಯೋರಿಯಾ ವ್ಯಾಧಿ ತಂದೊಡ್ಡುತ್ತವೆ.

ಹಲ್ಲುಗಳು ಅಲುಗಾಡುತ್ತವೆ, ನೋವು ನೀಡಲು ಪ್ರಾರಂಭಿಸುತ್ತವೆ. ಕೊನೆಗೊಂದು ದಿನ ಬಿದ್ದುಹೋಗುತ್ತವೆ ಅಥವಾ ಕೀಳಿಸಿಕೊಳ್ಳಬೇಕಾಗುವ ಪ್ರಮೇಯ ಬಂದೊದಗುತ್ತದೆ.

ಸದಾ ತಂಬಾಕು ಜಗಿಯುವುದರ ಇನ್ನೊಂದು ದುಷ್ಪರಿಣಾಮ ಎಂದರೆ, ಹಲ್ಲಿನ ಮೇಲ್ಪದರು ದಂತ ವಜ್ರ (ಎನಾಮಲ್) ಸವೆದುಹೋಗುತ್ತದೆ. ಎರಡನೆಯ ಪದರು ದಂತಲೋಳೆ (ಡೆಂಟಿನ್) ಹೊರ ತೆರೆದುಕೊಂಡು ತಣ್ಣನೆಯ ಹಾಗೂ ಬಿಸಿ ಪದಾರ್ಥಗಳಿಗೆ ಅತೀ ನೋವಿನಿಂದ ಸ್ಪಂದಿಸಲು ಪ್ರಾರಂಭಿಸುತ್ತದೆ. ಆಗ ಹಲ್ಲುಗಳು ಜುಂ ಎನ್ನುತ್ತಾ ಪ್ರತಿಕ್ಷಣ ದೈಹಿಕ ಮಾನಸಿಕ ಹಿಂಸೆ ನೀಡಿ ಆಹಾರ, ನೀರುಸೇವನೆಗೆ ತಡೆಯೊಡ್ಡುತ್ತವೆ.

ಗರ್ಭಿಣಿಯರ ಹಲ್ಲು ಹಾಗೂ ವಸಡಿನ ಆರೋಗ್ಯಕ್ಕೆ ತಂಬಾಕು?

ಸ್ತ್ರೀಯರು ಗರ್ಭಾವಸ್ಥೆಯಲ್ಲಿ ವಸಡಿಗೆ ಹಾಗೂ ಹಲ್ಲಿಗೆ ತಂಬಾಕನ್ನು, ನಶ್ಯ ಅಥವಾ ಮಿಸ್ರಿ ರೂಪದಲ್ಲಿ ಲೇಪಿಸುತ್ತಾರ.ಎ ಈ ಪದ್ದತಿ ಹಿಂದಿನಿಂದಲೂ ನಡೆದು ಬಂದದ್ದು. ತಂಬಾಕು ಪುಡಿ ಪದಾರ್ಥವನ್ನು ಹಾಗೆ ಲೇಪಿಸುವುದರಿಂದ ಗರ್ಭಿಣಿಯರ ವಸಡು ಹಲ್ಲುಗಟ್ಟಿಯಾಗಿರುತ್ತದೆ. ಹೆರಿಗೆ ಸಮಯಾನುಸಾರ ಸರಳವಾಗಿ ಆಗುವುದು. ಬಾಯಿಯಲ್ಲಿ ರಕ್ತ ಬರುವುದನ್ನು ತಡೆಗಟ್ಟುವುದೆಂದು ನಂಬುಗೆ ನಮ್ಮ ಜನರಲ್ಲಿದೆ.

ಆದರೆ ಅಸಲು ವಿಷಯವೇ ಬೇರೆ. ಬರ್ಭಾವಸ್ಥೆಯಲ್ಲಿ ದೇಹದಲ್ಲಿ ಹಾರ್ಮೋನು (ರಸವಿಶೇಷ) ಗಳ ಪ್ರಮಾಣ ಏರುಪೇರು ಉಂಟಾಗುವ ಸಹಜ ಪ್ರಕ್ರಿಯೆ. ಈ ವ್ಯತ್ಯಾಸ ವಸಡಿಗೆ ಸೋಂಕು ರಕ್ಷಣಾ ಕೊರತೆ ಉಂಟಾಗಲು ಕಾರಣವಾಗುತ್ತದೆ.

ಹಸಿ ಮೈ ಬಾಣಂತಿಯ ವಸಡು ಮೆತ್ತಗಿರುತ್ತದೆ ಅನ್ನುವ ಮೌಢ್ಯ ಕಾರಣದಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಈ ಸಂದರ್ಭದಲ್ಲಿ ಹಲ್ಲು ಶುಚಿಗೊಳಿಸದೇ ಹೋದಲ್ಲಿ ವಸಡು ಸೋಂಕುಪೀಡಿತವಾಗಿ ರಕ್ತ ಹರಿಸಲು ಪ್ರಾರಂಭಿಸುತ್ತದೆ.

ಗರ್ಭಿಣಿಯರಲ್ಲಿ ಪಯೋರಿಯಾ ವ್ಯಾಧಿ ಕಾಣಿಸಿಕೊಂಡರೆ ದಿನ ತುಂಬುವ ಮೊದಲೇ ಹೆರಿಗೆ, ಕಡಿಮೆ ತೂಕದ, ಅನಾರೋಗ್ಯಪೀಡಿತ ಕೂಸಿಗೆ ಜನ್ಮ ನೀಡುವ ಸಾಧ್ಯತೆಯನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.

ಹಾಗಾಗಿ ತಂಬಾಕನ್ನು ಔಷಧೀಯ ಪದಾರ್ಥವಾಗಿ ಬಳಸುವುದು ವ್ಯಕ್ತಿಯ ಅಜ್ಞಾನಕ್ಕೆ ಹಿಡಿದ ಕನ್ನಡಿ. ಏಕೆಂದರೆ ಅದೊಂದು ನಿಧಾನ ವಿಷ. ದೈಹಿಕ ಮಾನಸಿಕ ಆರೋಗ್ಯಕ್ಕೆ ಹಿತವಲ್ಲದ್ದು. ಆದ್ದರಿಂದ ಅರ್ಬುದದಂತಹ ಅನೇಕ ಮಾರಣಾಂತಿಕ ರೋಗಗಳು ಬರುತ್ತವೆ. ಆದ್ದರಿಂದ ದೂರವಿದ್ದಷ್ಟೂ ಒಳ್ಳೆಯದು.

* * *