“ಟ್ರೆಡ್‌ಮಿಲ್ ಮೇಲೆ ಹತ್ತಿದರೆ ಸಾಕು, ಅದು ಒಂಥರಾ ಸರಪಣೀ ಇದ್ದಹಾಗೆ. ಗೊತ್ತಿಲ್ಲದ ಹಾಗೆ ನೀವು ಸರ್ಜನನ ಟೇಬಲ್ ಮೇಲೆ ಮಲಗಿರುತ್ತೀರಿ ನೋಡಿ. ಒಂದೇ ಒಂದು ಸಲ ಎದೆನೋವು. ಹೋದ ತಕ್ಷಣ ಬೈಪಾಸ್ ಮುಗಿಸಿಕೊಂಡೇ ಮನೆಗೆ ಬಂದರು. ಇನ್ನೂ ಐವತ್ತಾರು ವರ್ಷ ನೋಡಿ. ಬೆಂಗಳೂರಿನಲ್ಲಿ ಗುರುತಿನವರೊಬ್ಬರು ಹೇಳಿದ್ದರು. ಅದಕ್ಕೇ ಏನೋ ಪರೀಕ್ಷೆಯನ್ನೇ ಮಾಡಿಸಬಾರದು ಅಂದುಕೊಂಡಿದ್ದೇನೆ. ಸುಮ್ಮನೆ ಒಂದರ ಹಿಂದೆ ಒಂದು ಪರೀಕ್ಷೆ. ಕೊನೆಗೆ ಆಗುವುದು ಆಗೇ ತೀರುತ್ತದೆ. ಈಗ ಯಾಕೆ ತಲೆ ಕೆಡಿಸಿಕೊಳ್ಳಬೇಕು ಹೇಳಿ.”

ಇದು ಓದು ಬರಹ ಬರದ ಹಳ್ಳಿ ಮುಕ್ಕನ ಮಾತಲ್ಲ. ಬೆಂಗಳೂರಿನಲ್ಲಿ ಈತ  ದೊಡ್ಡ ಕಂಪನಿಯ ಜನರಲ್ ಮ್ಯಾನೇಜರ್ ಆಗಿ ರಿಟೈರ್ ಆಗಿರುವಾತ. ಹೃದಯದ ತೊಂದರೆಗೆ ಒಳಗಾಗಬಹುದಾದ ಮೇಲ್ಮಧ್ಯಮ ಅಥವಾ ಶ್ರೀಮಂತ ಅನ್ನುವ ವರ್ಗಕ್ಕೇ ಸೇರಿದಾತ. ಯಾವ ಪರೀಕ್ಷೆ ಅಥವಾ ಶುಶ್ರೂಷೆಗೆ ಹಣ ಒದಗಿಸಲಾಗದೇನಿಲ್ಲ ಈತನಿಗೆ. ಆದರೂ ಈತನಿಗೆ ಹತಾಶೆ. ಹತ್ತು ವರ್ಷದ ಹಿಂದೆ ಮದ್ರಾಸಿಗೋ ಬಾಂಬೆಗೋ ಹೋಗಬೇಕಾಗಿದ್ದ ಅವಶ್ಯಕತೆಗಳೆಲ್ಲವೂ ಈಗ ಬೆಂಗಳೂರಿನಲ್ಲೇ ಪೂರೈಸಲ್ಪಟ್ಟರೂ ಈ ವ್ಯವಸ್ಥೆಯ ಬಗ್ಗೆ ಈತನಿಗೆ ನಂಬಿಕೆಯಿಲ್ಲ. ಏಕೆ? ಹದಿನೈದಕ್ಕೂ ಹೆಚ್ಚು ಕ್ಯಾತ್ ಲಾಬ್‌ಗಳಿವೆ ಬೆಂಗಳೂರಿನಲ್ಲಿ. ಖಾಸಗೀ ಹೃದಯ ತಜ್ಞನೊಬ್ಬನಿಗೆ ಕೈತುಂಬಾ ಕೆಲಸವಿದೆ. ಸ್ವಲ್ಪ ಹೆಸರು ಮಾಡಿದ್ದರೆ ತಿಂಗಳಿಗೆ ಒಂದೂವರೆಯಿಂದ ಎರಡು ಲಕ್ಷದಷ್ಟು ಸಂಪಾದನೆ(ಗಮನವಿಡಿ: ಸ್ವಲ್ಪ ಹೆಸರು) ಸಂಪಾದನೆಯಿದೆ. ಫಿಜಿಶಿಯನ್ ಮತ್ತು ಕಾರ್ಡಿಯಾಲಜಿಸ್ಟ್‌ಗೂ ಕಾರ್ಡಿಯಾಲಸ್ಟ್‌ಗೂ ವ್ಯತ್ಯಾಸ ತಿಳಿದುಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ ನಮ್ಮ ರೋಗಿಗಳು. ಒಬ್ಬ ಹೃದಯತಜ್ಞ ಎಥಿಕ್ಸ್‌ಗೆ ಬದ್ಧನಾಗಿ ಮಾಡಬೇಕಾದ ಎಲ್ಲವನ್ನೂ ಸರಿಯಾಗಿ ಮಾಡುತ್ತಿರುವ ಒಂದು ಸುಂದರ ಲೋಕದಲ್ಲಿ ನಾವಿದ್ದರೂ ಪ್ರತಿರೋಗಿಗೆ ಆತನಿಗೆ ಬೇಕಾಗುವ ಚಿಕಿತ್ಸೆ ಸಿಗುತ್ತದೋ ಇಲ್ಲವೋ ಅನ್ನುವ ಅನುಮಾನವಿದೆ.

ಇದಕ್ಕೆ ಕಾರಣ ಆಸ್ಪತ್ರೆಗಳ ಕಾರ್ಪೋರೇಟೀಕರಣ, ವೈದ್ಯರುಗಳ ಧನದಾಹ ಎಂದು ಹೇಳಿಬಿಡಬಹುದು. ಅದು ತೀರ ಸುಲಭವಾದ ಉತ್ತರ. ಆದರೆ ವೈದ್ಯಶಾಸ್ತ್ರದ ಅದೂ ಹೃದಯವೈದ್ಯದ ಸಂಶೋಧನೆಯ ಮೂಲವನ್ನೊಮ್ಮೆ ಸ್ವಲ್ಪ ಗಮನವಿಟ್ಟು ನೋಡಿದರೆ ಇವೆಲ್ಲಾ ಮೂಲತಃ ರೋಗಿಯ ಹಿತಕ್ಕಾಗಿ ಆಗುತ್ತದೆಯೋ ಇಲ್ಲವೋ ಅನ್ನುವ ಅನುಮಾನ ಬಂದುಬಿಟ್ಟರೆ ಸಂದೇಹವೇನಿಲ್ಲ. ಒಬ್ಬ ವೈದ್ಯನಾಗಿ, ಆಧುನಿಕ ವೈದ್ಯದ ಹಾಗೂ ಅದರ ಉದ್ದೇಶವಾದ ಕೆಟ್ಟದನ್ನು ಮಾಡಬೇಡ ಅನ್ನುವ ದುರಹಂಕಾರದ ಮಾತಾಡಲು ನಾ ಹೊರಟಿಲ್ಲ. ಆದರೆ ಈ ಸಂಶೋಧನೆಗಳನ್ನು ಓದದೆ ಹಾಗೂ ಸರಿಯಾಗಿ ಅರಿತುಕೊಳ್ಳದೆ, ಹೊಸದಾಗಿ ಬರುವುದೆಲ್ಲಾ ಶ್ರೇಷ್ಟ ಅನ್ನುವ ಕುರುಡು ನಂಬಿಕೆಯಿಂದ ನಮ್ಮ ವೈದ್ಯರು ಹಾಗೂ ರೋಗಿಗಳು ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ನನಗೆ ನಾನೇ ಕೆಲವು ಪ್ರಶ್ನೆಗಳನ್ನು ಕೇಳಿಕೊಂಡಿದ್ದೇನೆ. ಕೆಲವು ಪ್ರಶ್ನೆಗಳಿಗೆ ಉತ್ತರ ನನಗೂ ಗೊತ್ತಿಲ್ಲ.

ಪಾಶ್ಚಿಮಾತ್ಯ ವೈದ್ಯ ನಿಂತಿರುವುದೇ ಸಾಕ್ಷಿಗಳ ಮೇಲೆ. ಇಲ್ಲಿ ಪ್ರತಿಯೊಂದಕ್ಕೂ ಚಾನ್ಸ್ ಮೀರಿದ ಸಾಕ್ಷಿ ಬೇಕು. ಉದಾಹರಣೆಗೆ ನೀವು ವಿಜ್ಞಾನಿಯೆಂದಿಟ್ಟುಕೊಳ್ಳಿ. ನಿಮ್ಮ ಪ್ರಯೋಗಶಾಲೆಯಲ್ಲಿ ಕೊಲೆಸ್ಟರಾಲ್ ಕಮ್ಮಿ ಮಾಡುವುದಕ್ಕೆ ಒಂದು ಹೊಸ ಗುಳಿಗೆ ಕಂಡುಹಿಡಿದುಕೊಂಡಿದ್ದೀರಿ. ಅದನ್ನು ಪ್ರಾಣಿಗಳ ಮೇಲೆ ನೀವು ಉಪಯೋಗಿಸಿದಾಗ ಕೊಲೆಸ್ಟರಾಲ್ ಅದ್ಬುತವಾಗಿ ಶೇಕಡಾ ೬೦ ಭಾಗ ಕಡಿಮೆಯಾದರೂ ಅದನ್ನು ಮನುಷ್ಯರ ಮೇಲೆ ಉಪಯೋಗಿಸಲು ಇನ್ನೂ ಹಲವು ಹತ್ತು ವರ್ಷ ನೀವು ಸಂಶೋಧನೆ ಮಾಡಬೇಕಾಗುತ್ತದೆ. ಈ ಹೊಸ ಗುಳಿಗೆಯ ದುಷ್ಪರಿಣಾಮಗಳು ಅದರ ಯಾವುದೇ ಸತ್ಪರಿಣಾಮಗಳಿಗಿಂತ ಕಮ್ಮಿಯೆಂದು, ಚಾನ್ಸ್ ಮೀರಿದ ಆಧಾರಸಮೇತ ನೀವು ತೋರಿಸಿದ್ದಲ್ಲಿ ಆ ಔಷಧ ಮಾರುಕಟ್ಟೆಗೆ ಬರುತ್ತದೆ. ಆಔಷಧ ತಯಾರಿಸಿದ ಕಂಪೆನಿ ಮಾರುಕಟ್ಟೆಯಲ್ಲಿ ಹಣ ಕೊಳ್ಳೆಹೊಡೆಯುತ್ತದೆ.

ಮುಕ್ಕಾಲುವಾಸಿ ಸಂಶೋಧನೆಗಳೆಲ್ಲಾ ಈ ಔಷಧಿ ತಯಾರಿಕೆಯ ಕಂಪೆನಿಗಳಿಂದಲೇ ಆಗುತ್ತಿರುವುದರಿಂದ, ಸಂಶೋಧನೆಯ ಮೊದಲ ವ್ಯವಸ್ಥಿತ  ಬಯಾಸ್ ಅಲ್ಲೇ ಇರುತ್ತದೆ. ಯಾಕೆ ಗೊತ್ತಾ? ಒಂದು ಕಂಪನಿ ಒಂದು ಔಷಧಕ್ಕೆ ಪೇಟೆಂಟ್ ತೆಗೆದುಕೊಂಡರೆ ದುಡ್ಡು ಪ್ರಿಂಟ್ ಮಾಡಲು ಲೈಸನ್ಸ್ ತೆಗೆದುಕೊಂಡಹಾಗೆ. ಆ ಔಷಧಿಯ ಸಂಶೋಧನೆಗೆ, ಮಾರ್ಕೆಟಿಂಗ್‌ಗೆ ಬೇಕಾಗುವ ಎಲ್ಲಾ ಖರ್ಚನ್ನು ಬಳಕೆದಾರರನ ಮೇಲೆಯೇ ಹಾಕುತ್ತದೆ. ಆ ಕಂಪೆನಿ ಪೇಟೆಂಟಿನ ಅವಧಿಯಾದ ಮುಂದಿನ ಹತ್ತು ಹದಿನೈದು ವರುಷಗಳವರೆಗೆ ಆ ಔಷಧಿಯನ್ನು ತನ್ನ ಮನಬಂದ ದರಕ್ಕೆ ಮಾರಾಟ ಮಾಡುವ ಹಕ್ಕನ್ನು ಆ ಕಂಪನಿ ಪಡೆದುಕೊಂಡಿರುತ್ತದೆ. ನಾನು ಹೇಳುತ್ತಿರುವುದು ಅಮೇರಿಕಾದ ಕಂಪನಿಗಳ ವಿಚಾರ. ಆದರೆ, ಭಾರತದಲ್ಲಿ ಪರಿಸ್ಥಿತಿ ತೀರಾ ಭಿನ್ನವಾಗೇನೂ ಇಲ್ಲ.

ಹೀಗಾದಾಗ, ಒಂದು ಔಷಧವನ್ನು ಮಾರುಕಟ್ಟೆಗೆ ತರಿಸಲೇಬೇಕಾದ ಅನಿವಾರ್ಯತೆ ಸಂಶೋಧನೆಯ ಫಲಿತಾಂಶವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಇನ್‌ಫ್ಲುಯೆನ್ಸ್ ಮಾಡಿರುವ ಸಾಧ್ಯತೆಗಳು ಬಹಳ ಇರುತ್ತವೆ. ಅಮೇರಿಕಾದಲ್ಲಿ ಕೆಲವು ವರ್ಷಗಳ ಹಿಂದೆ ಆಹಾರ ಮತ್ತು ಔಷಧ ಪ್ರಾಧಿಕಾರ (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್) ಪಾರ್ಶ್ವವಾಯುವಿಗೆ ಟಿ.ಪಿ.ಎ. ಅನ್ನುವ ಒಂದು ಮದ್ದನ್ನು ಬಳಸುವುದು ಉಪಯೋಗಕಾರಿ ಹಾಗೂ ಸುರಕ್ಷಿತ ಎಂದು ತೀರ್ಮಾನಿಸಿ ಮಾರುಕಟ್ಟೆಗೆ ಬಿಟ್ಟಿತು. ಅದುವರೆವಿಗೂ ಟಿ.ಪಿ.ಎ. ಹೃದಯಾಘಾತಕ್ಕೆ ಉಪಯೊಗಿಸುತ್ತಿದ್ದ ಮದ್ದು ಅದರ ತಯಾರಿಕಾ ಸಂಸ್ಥೆ ಜೆನಿಟಿಕ್ ಟಿ.ಪಿ.ಎ.ಯಷ್ಟೇ ಪರಿಣಾಮಕಾರಿಯಾದ ಆದರೆ ಅದಕ್ಕಿಂತ ತೀರಾ ಕಡಿಮೆ ದರದ ಸ್ಟ್ರೆಪ್ಟೋಕಿನಿಸ್ ಅನ್ನುವ ಔಷಧಿಯನ್ನು ಅಮೇರಿಕಾದ ಮಾರುಕಟ್ಟೆಯಿಂದ ನಾನಾ ಕಾರಣಗಳಿಂದ ಹೊಡೆದೋಡಿಸಿತ್ತು. ಪಾರ್ಶ್ವವಾಯುವಿಗೆ ಟಿ.ಪಿ.ಎ. ಉಪಯೋಗಕಾರಿ ಎಂದು ನಿರ್ಣಾಯಕವಾಗಿದ್ದು ತಯಾರಕರಿಂದ ಪ್ರಾಯೋಜಿಸಲ್ಪಟ್ಟ ಒಂದೇ ಒಂದು ಸಂಶೋಧನೆಯಿಂದ. ಇಂದಿಗೂ ಅದರ ಉಪಯೋಗಕ್ತತೆಯ ಬಗ್ಗೆ ಮತ್ತು ಪಾರ್ಶ್ವವಾಯುವಿಗೆ ಅದನ್ನು ಉಪಯೋಗಿಸಬೇಕಾದಾಗ ಆಗುವ ದ್ವಂದ್ವದ ಬಗ್ಗೆ ಬಹಳಷ್ಟು ವೈದ್ಯರುಗಳೀಗೆ ಅನುಮಾನವಿದೆ. ನಂತರ ಯೂರೋಪಿನಲ್ಲಿ ಹಾಗೂ ಅಮೇರಿಕಾದಲ್ಲಿ ನಡೆದ ಸುಮಾರು ಆರೇಳು ಸಂಶೋಧನೆಗಳ ಪ್ರಕಾರ ಟಿ.ಪಿ.ಎ. ಇದುವರೆಗೂ ನಾವಂದುಕೊಂಡಿದ್ದಕ್ಕಿಂತ ಅಪಾಯಕಾರಿ ಎಂದೂ, ಅದರಿಂದ ನಿರೀಕ್ಷಿತ ಪರಿಣಾಮಗಳು ನಮಗೆ ತಿಳಿದಿರುವಷ್ಟು ಕಪ್ಪು ಬಿಳುಪಾಗಿಲ್ಲವೆಂದು ಪರಿಣತರು ಅಭಿಪ್ರಾಯಪಟ್ಟರು.

ಪಾರ್ಶ್ವವಾಯು ಹೊಡೆಯುವುದು ಮಿದುಳಿನ ಒಂದು ಭಾಗಕ್ಕೆ, ರಕ್ತಸಂಚನೆ ಸರಿಯಾಗಿಲ್ಲದೇ ಇರುವುದರಿಂದ, ಹಾಗೆಯೇ ಹೃದಯಾಘಾತವೂ, ಕೂಡ. ಹೀಗೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಗಡ್ಡೆಯನ್ನು ಒಡೆದು ಆ ರಕ್ತ ಸಂಚನೆಯನ್ನು ಸರಿಮಾಡುವುದು ಈ ಔಷಧಿ. ಆದರೆ ಇದೇ ಕ್ರಿಯೆಯಲ್ಲಿ ರಕ್ತದ ಗಡ್ಡೆ ದ್ರವಿಸುವುದರ ಜೊತೆಗೆ ಅದೇ ಮಿದುಳಿನಲ್ಲಿ ರಕ್ತಸ್ರಾವವಾಗಿ, ಪರಿಸ್ಥಿತಿ ಬಿಗಡಾಯಿಸಬಹುದು. ಆದರೆ ಒಮ್ಮೆ ಮಾರುಕಟ್ಟೆಗೆ ಬಂದು ಬಹಳಷ್ಟು ಮಂದಿ ಅದನ್ನು ಉಪಯೋಗಿಸಲು ಪ್ರಾರಂಭಿಸಿದಾಗ ಅದರ ಉಪಯುಕ್ತತೆಯ ಬಗ್ಗೆ ಅನುಮಾನ ಇರುವ ವೈದ್ಯನೂ ಉಪಯೋಗಿಸಲೇಬೇಕಾದ ಅನಿವಾರ್ಯತೆ ಹಾಗೂ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಅಷ್ಟರಮಟ್ಟಿಗೆ ತಯಾರಕರು ಅದನ್ನು ಮಾರ್ಕೆಟ್ ಮಾಡಿರುತ್ತಾರೆ. ಪತ್ರಿಕೆ ಟಿ.ವಿ.ಯಲ್ಲಿ ಜಾಹೀರಾತು ಬರುತ್ತದೆ. ರೋಗಿ ಮತ್ತು ಆತನ ಕುಟುಂಬದವರು ಆಸ್ಪತ್ರೆಗೆ ಬಂದು ಈ ರೀತಿಯ ಔಷಧಿ ಒಂದಿದೆಯಂತೆ, ನೀವು ಯಾಕೆ ಕೊಡಬಾರದು? ಎಂದು ಒತ್ತಡಹಾಕುತ್ತಾರೆ. ಈ ಸಂಶೋಧನೆ, ಅಂಕಿ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಸಾಮಾನ್ಯ ನಾನ್ ಅಕ್ಯಾಡೆಮಿಕ್ ವೈದ್ಯ ಔಷಧಿ ಕೊಡುತ್ತಾನೆ. ಕೆಲವು ವರ್ಷಗಳಲ್ಲಿ ಅದು ಚಿಕಿತ್ಸಾಕ್ರಮವಾಗಿ ಹೋಗುತ್ತದೆ. ಆಗ ಅದನ್ನು ಮಾರುಕಟ್ಟೆಯಿಂದ ಹೊರಹಾಕುವುದು ಕಷ್ಟ ಸಾಧ್ಯವಿಲ್ಲವೆಂದಲ್ಲ. ಆದರೆ ಕಷ್ಟ.

* * *