ಹಲು ಉಲುಳ್ಳಾಯಿ

ಹವ್ವಿಯೆಂದೋರ್ಯಾರು
ಹವಳ ಕದ್ದೋರಾನೆ
ನಾನಲ್ಲ ನಮ್ಮಮಗು ತಂತೂ

ಎಂದು ಜೋಗುಳವನ್ನು ಹಾಡುತ್ತಾ, ತೊಟ್ಟಿಲನ್ನು ತೂಗಿ, ಮಗುವು ನಿದ್ರಿಸುವಂತೆ ಪ್ರೇರೇಪಿಸುವುದು ನಮ್ಮಲ್ಲಿ ಕಾಲಾನುಕಾಲದಿಂದಲೂ ನಡೆದುಬಂದ ಪದ್ಧತಿ. ಈ ಹಾಡನ್ನು ಹಾಡುವಾಗ ಎಳೆದೆಳೆದು ಹಾಡಿದರೂ, ತಾಯಂದಿರು ತಾಳವನ್ನು ತಪ್ಪುವುದಿಲ್ಲ. ತಾಳದ ಮೇಲೆ ಗಮನವಿಟ್ಟುಕೊಂಡು ಹಳ್ಳಿಯ ಹಾಗೂ ದಿಲ್ಲಿಯ ಹೆಂಗಸರು ಹಾಡುತ್ತಾರೆ ಎಂದೇನೂ ಅಲ್ಲ. ಆದರೆ ಸ್ವಾಭಾವಿಕವಾಗಿ, ತಮ್ಮ ಬಾಲ್ಯದಲ್ಲಿ ಕಲಿತುದನ್ನು ಹಾಗೆಯೇ ಅನುಸರಿಸಿ ಹಾಡುತ್ತಾರೆ. ತಾಳವೂ ಸರಿಗೂಡಿ ಬರುತ್ತೆ. ಕಾಲಮಾನದ ಪ್ರಕಾರ ತಾಳದ ಅಂತರವು ಎಷ್ಟು ಅಂತೀರಿ?

ಇದೆಂಥ ಸೋಜಿಗ

ಆರೋಗ್ಯವಂತರಲ್ಲಿ ನಾಡಿಯು ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಸರಾಸರಿಯಾಗಿ ಬಡಿಯುತ್ತದೆ. ಹಲು ಉಲುಳಾಯಿಯು ತಾಳವೂ ನಿಮಿಷಕ್ಕೆ ಸುಮಾರು ಎಪ್ಪತ್ತೆರಡರ ಹತ್ತಿರವೇ ಇದೆ. ಇದು ಯಾಕೋ ಸೋಜಿಗದ ಆಕಸ್ಮಿಕದಂತೆ ಕಾಣಿಸುತ್ತದೆಯಲ್ಲವೇ? ಮನನ ಮಾಡುವ.

ಶಿಶುಗಳಿಗೆ ಅಮೆರಿಕಾದ ತಾಯಂದಿರು ಸ್ತನ್ಯಪಾನವನ್ನು ಹೇಗೆ ಮಾಡಿಸುತ್ತಾರೆ ಎಂಬ ಸಂಶೋಧನೆಯನ್ನು ಕೆಲವು ವರ್ಷಗಳ ಹಿಂದೆ ಅಮೇರಿಕಾದಲ್ಲಿ ವಿಜ್ಞಾನಿಗಳು ನಡೆಸಿದರು. ಇಂತಹ ಸಂಶೋಧನೆಗಳೆಲ್ಲವೂ ವೈಜ್ಞಾನಿಕವಾಗಿ ಅಮೇರಿಕಾದಲ್ಲಿಯೇ  ಸಾಧ್ಯ! ಅಲ್ಲಿನ ಮನಃಶಾಸ್ತ್ರ ವಿಜ್ಞಾನಿಗಳಿಗೆ, ಮಾನವ ನಡವಳಿಕೆಯನ್ನು ಕುರಿತು ಸಂಶೋಧಿಸುವವರಿಗೆ ಇಂತಹ ವಿಷಯಗಳಲ್ಲಿ ಅಸಾಧ್ಯ ಕುತೂಹಲ. ಸಂಶೋಧನೆಯ ಫಲಿತಾಂಶಗಳು ಈ ರೀತಿ ಇದ್ದುವು. ನೂರರಲ್ಲಿ ಎಂಭತ್ತು ಜನ ತಾಯಂದಿರು, ಬಾಗಿದ ಎಡತೋಳಿನ ತೊಟ್ಟಿಯಲಿ ಮಗುವಿನ ತಲೆಯನ್ನು ಇರಿಸಿಕೊಂಡು, ಎಡ ಮೊಲೆಯಿಂದ ಹಾಲೂಡಿಸುತ್ತಿದ್ದರು. ಬಲಗೈಯನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಲು ಆಗ ಸಾಧ್ಯ. ಆದುದರಿಂದ ಹಾಗೆ ಮಾಡುತ್ತಾರೆ ಎಂದು ಹೇಳಬಹುದು. ಆದರೆ ಎಡಗೈ ಮುಂದಾದ ತಾಯಂದಿರು ಲೊಡ್ಡಗೈಯ್ಯಿನವರು, ಅವರೂ ಮಗುವಿಗೆ ಎಡಸ್ತನದಿಂದಲೇ ಹಾಲೂಡಿಸುವುದು ಅತಿಯಾಗಿ ಕಂಡುಬಂದಿತು. ದಿಟ, ಬಲಸ್ತನದಿಂದಲೂ ಹಾಲನ್ನು ಕುಡಿಸುತ್ತಾರೆ. ಆದರೆ ಸರಾಸರಿ ಲೆಕ್ಕಮಾಡಿದಾಗ ಎಡಮೊಲೆಯ ಬಳಕೆಯು ಹೆಚ್ಚಾಗಿದ್ದುದು ಕಂಡುಬಂತು.

ಏಕೆ ಹೇಗೆ?

ಹಾಲು ಕುಡಿಯುವ ಎಳೆಯ ಮಕ್ಕಳ ನಡವಳಿಕೆಯನ್ನು ಪರೀಕ್ಷಿಸಿದರು. ಎಡಸ್ತನವನ್ನು ಹಿಡಿದು ಹಾಲು ಕುಡಿಯುವಾಗ ಮಕ್ಕಳು ಶಾಂತರಾಗಿಯೂ, ಸಮಾಧಾನ ಹೊಂದಿದವರೂ ಆಗಿರುತ್ತಿದ್ದರು. ಆದರೆ ಬಲಸ್ತನ್ಯ ಪಾನ ಮಾಡುವಾಗ, ತಂಟೆತಕರಾರನ್ನು ಮಾಡುತ್ತಿದ್ದರವು. ಅಂಕಿ ಅಂಶಗಳಂತೆ ಗಮನಾರ್ಹವಾಗಿ ಈ ಫಲಿತಾಂಶಗಳು ಸಾಕ್ಷ್ಯನೀಡಿದವು. ಏಕೆ ಹೇಗೆ? ಬಲಮೊಲೆಗಿಂತ ಎಡಮೊಲೆಯು ಶಿಶುಗಳಿಗೆ ಹೆಚ್ಚು ಸಮಾಧಾನವನ್ನು ಏಕೆ ಕೊಡಬೇಕು?

ಅನಂತರ ವಿಜ್ಞಾನಿಗಳು ಪರೀಕ್ಷಾ ಪ್ರಯೋಗವನ್ನು ನಡೆಸಿದರು. ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ಬೇರ್ಪಡಿಸಿದರು. ಒಂದೊಂದು ಗುಂಪಿನಲ್ಲಿ ಒಂಭತ್ತು ಮಕ್ಕಳಿದ್ದವು. ಮಕ್ಕಳನ್ನು ಮಲಗಿಸಿದ ತೊಟ್ಟಿಲುಗಳನ್ನು ಕೊಠಡಿಯಲ್ಲಟ್ಟು, ಆ ಕೊಠಡಿಯಲ್ಲಿ ಟೇಪ್ ರೆಕಾರ್ಡನ್ನು ಇಟ್ಟರು. ಹೃದಯದ ಬಡಿತದ ಸದ್ದುಗಳನ್ನು ರೆಕಾರ್ಡ್ ಮಾಡಿದ ಟೇಪನ್ನು, ಆ ರೆಕಾರ್ಡ್‌ನಲ್ಲಿಟ್ಟು ನಡೆಸಿದರು. ಹೃದಯವು ಬಡಿಯುತ್ತಿದ್ದಂತೆ ಆದ ಸದ್ದುಗಳನ್ನು ಕೊಠಡಿಯಲ್ಲಿ ಹದವಾಗಿ ಕೇಳಿಬರುತ್ತಿತ್ತು.

ರೆಕಾರ್ಡರ್ ಅನ್ನುನಡೆಸದೆ ಇದ್ದಾಗ, ಕೊಠಡಿಯು ನಿಶ್ಯಬ್ಧವಾಗಿದ್ದಾಗ, ಹಲವಾರು ಮಕ್ಕಳು, ಒಂದು ಗಂಟೆಯಲ್ಲಿ ಮೂವತ್ತು ನಲವತ್ತು ನಿಮಿಷ ರಚ್ಚೆ ಹಿಡಿದು ಅಳುತ್ತಿದ್ದವು. ಆದರೆ ಟೇಪ್‌ರೆಕಾರ್ಡರನ್ನು ನಡೆಸಿದಾಗ, ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಹೃದಯವು ತಮಟೆ ಬಾರಿಸಿದಾಗ ಮಕ್ಕಳು ಗಂಟೆಯೊಂದರಲ್ಲಿ ಕೇವಲ ೧೫ರಿಂದ ೨೦ ನಿಮಿಷಗಳು ಅಳುತ್ತಿದ್ದರು.

ಎರಡೂ ಗುಂಪಿನ ಮಕ್ಕಳಿಗೆ, ತೂಕಕ್ಕೆ ತಕ್ಕ ಆಹಾರವನ್ನು ಸಮಸಮ ಕೊಟ್ಟರು. ಒಂದು ಗುಂಪಿನ ಮಕ್ಕಳಿದ್ದ ಕೊಠಡಿಯು ನಿಶ್ಯಬ್ದವಾಗಿತ್ತು ಇನ್ನೊಂದರ ಕೊಠಡಿಯಲ್ಲಿ ಹೃದಯದ ಬಡಿತದ ರೆಕಾರ್ಡರ್ ನಡೆಯುತ್ತಿತ್ತು. ಕೆಲವು ವಾರಗಳ ನಂತರ ಪರೀಕ್ಷಿಸಿದಾಗ ರೆಕಾರ್ಡರ್ ಇದ್ದ ಕೊಠಡಿಯ ಮಕ್ಕಳು ಹೆಚ್ಚು ತೂಕವನ್ನು ಹೊಂದಿದ್ದರು. ಆದರೆ ನಿಶ್ಯಬ್ದದ ಕೊಠಡಿಯ ಮಕ್ಕಳು ಅತ್ತು ಅತ್ತು ರಂಪ ಮಾಡುವುದರಲ್ಲಿ, ಸೇವಿಸಿದ ಆಹಾರದ ಒಂದು ಭಾಗವನ್ನು ಉಪಯೋಗಿಸಿಕೊಂಡಿದ್ದರು. ಆದ ಕಾರಣ ತೂಕದ ಹೆಚ್ಚುವಿಕೆಯು ಇಳಿಮುಕವಾಗಿತ್ತು.

ಹೃದಯದ ಬಡಿತ

ಸ್ವಲ್ಪ ಬೆಳೆದಿದ್ದ ಅಂದರೆ ಐದು ಆರು ತಿಂಗಳು ವಯಸ್ಸಾಗಿದ್ದ ಮಕ್ಕಳನ್ನು ಇನ್ನೊಂದು ಪರೀಕ್ಷೆಗೆ ಒಳಪಡಿಸಿದರು. ಹೃದಯದ ಬಡಿತದ ಟೇಪ್ ಇದ್ದ ರೆಕಾರ್ಡರನ್ನು ಒಂದು ಕೊಠಡಿಯಲ್ಲಿ ಇರಿಸಿದರು. ಇನ್ನೊಂದು ಕೊಠಡಿಯು ನಿಶ್ಯಬ್ಧವಾಗಿತ್ತು. ಮೂರನೆಯ ಕೊಠಡಿಯಲ್ಲಿ ಟಕ್ಟಾಕ್ ಸದ್ದು ಮಾಡುವ ಗಡಿಯಾರದಂತಹ ಮೆಟ್ರೋನೋಮ್ ಎನ್ನುವ ಯಂತ್ರವನ್ನು ಇರಿಸಿದರು. ಮಕ್ಕಳಿಗೆ ಎಷ್ಟು ಹೊತ್ತಿನಲ್ಲಿ ನಿದ್ರೆ ಹತ್ತುತ್ತದೆ ಎಂದು ಪರೀಕ್ಷೆ ಮಾಡಿದರು. ಹೃದಯದ ಬಡಿತವು ಕೇಳಿಸಿದ ಕೊಠಡಿಯಲ್ಲಿದ್ದ ಮಕ್ಕಳು, ಇತರ ಗುಂಪಿನ ಮಕ್ಕಳಿಗಿಂತ ಅರ್ಧದ ಕಾಲಾವಧಿಯಲ್ಲಿ ನಿದ್ರೆ ಮಾಡಿದವು. ಹೃದಯದ ಬಡಿತದ ಸದ್ದು ಎಳೆಯ ಮಕ್ಕಳಿಗೆ ತುಂಬಾ ಸಮಾಧಾನವನ್ನು ಕೊಡುತ್ತದೆ. ತಾಳದಂತೆ ಸದ್ದು ಮಾಡುವ ಮೆಟ್ರೋ ನೋಮ್ ರೀತಿಯ ಸಮಾಧಾನವನ್ನು ಕೊಡುವುದಿಲ್ಲ ಎಂಬುದು ಖಚಿತವಾಯಿತು. ಹೀಗೇಕೆ?

ತಾಯಿ ಗರ್ಭದಲ್ಲಿ

ಗರ್ಭದಲ್ಲಿರುವಾಗ, ಗರ್ಭದಾರಣೆಯಾದ ಎರಡು ಮೂರು ತಿಂಗಳುಗಳಾದ ಮೇಲೆ, ಒಂದು ತೆರನ ಅರಿವು ಮೂಡುತ್ತದೆ. ಅವುಗಳ ತಲೆಯ ಮೇಲೆಯೇ ಎಂಬಂತೆ ತಾಯಿಯ ಹೃದಯವು ಬಡಿದುಕೊಳ್ಳುತ್ತಲೇ ಇರುತ್ತದೆ. ತಾಯ ಗರ್ಭದಲ್ಲಿರುವ ಭ್ರೂಣಗಳಿಗೆ ಈ ಸದ್ದೇ ಮೊದಲು ಕೇಳಿಸುವುದು. ಪ್ರತಿನಿಮಿಷವೂ, ಪ್ರತಿತಾಸೂ, ದಿನರಾತ್ರಿ ಎಂಬ ಭೇದವಿಲ್ಲದೆ, ಆರೇಳು ತಿಂಗಳುಗಳ ಕಾಲ, ಈ ಶಬ್ಧವನ್ನೇ ಕೇಳುತ್ತಿರುತ್ತವೆ. ಅದೇ ಅವುಗಳಿಗೆ ‘ಲಾಲಿ’ ಹಾಡಿಕೊಂಡಂತಿರುತ್ತದೆ. ಭ್ರೂಣಗಳು ತೇಲಾಡುವ ನೀರಿನ ತೊಟ್ಟಿಲಿನಲ್ಲಿ ಈ ಶಬ್ದತರಂಗಗಳು ತಾಳಕ್ಕೆ ಸರಿಯಾಗಿ ಸುವ್ವಿ ಹಾಡಿದಂತಿರುತ್ತದೆ. ಗರ್ಭದಲ್ಲಿರುವ ಮಕ್ಕಳು ಈ ಶಬ್ದಕ್ಕೆ ಮಾರುಹೊಗಿರುತ್ತಾರೆ.

ಜನ್ಮ ತಾಳಿದ ಮೇಲೆ, ಹೊರಪ್ರಪಂಚದಲ್ಲಿ ಬಾಳಿ ಬೆಳೆಯುವಾಗಲೂ, ಆ ಸುರಕ್ಷಿತವಾಗಿದ್ದ, ಕಾಲ ಸ್ಮರಣೆಯು ದೃಢವಾಗಿಯೇ ಇರುತ್ತದೆ. ಆದಕಾರಣವೇ ಈ ಶಬ್ದವು ಚೆನ್ನಾಗಿ ಕೇಳಿಸುವ ಹಾಗಾದಾಗ ಮಕ್ಕಳು ನೆಮ್ಮದಿಯಿಂದಿರುತ್ತವೆ. ಆದುದರಿಂದಲೇ ಎಡಸ್ತನ್ಯಪಾನವು ಹೆಚ್ಚು ಹಿತ ಮಕ್ಕಳಿಗೆ. ಏಕೆಂದರೆ ತಾಯಹೃದಯದ ಬಡಿತವು ಆ ಪಕ್ಕದಲ್ಲಿ ತಾನೇ ಲಕ್ಷಣವಾಗಿ ಕೇಳಿಸುವುದು. ತೊಟ್ಟಿಲನ್ನು ತೂಗುವಾಗಲೂ ನಿಮಿಷಕ್ಕೆ ಎಪ್ಪತ್ತೆರಡರ ಸುಮಾರಿಗೆ ತೂಗಿದರೆ, ಮಕ್ಕಳು, ಆರೋಗ್ಯವಂತ ಮಕ್ಕಳು ಬೇಗ ಮಲಗುತ್ತವೆ.

ಎಷ್ಟು ವೈಜ್ಞಾನಿಕ

ಇವೆಲ್ಲ ಪ್ರಯೋಗಗಳನ್ನು ನಡೆಸಿ, ನಮ್ಮ ತಾಯಂದಿರು, ಪುರಾತನ ಕಾಲದಲ್ಲಿ ಈ ರೀತಿ ನಿರ್ಧರಿಸಿ, ಆಚರಿಸಿದರು ಎಂದೇನೂ ಹೇಳುತ್ತಿಲ್ಲ. ಆದರೆ ಅನುಭವದಿಂದ ಕಲಿತು ಹಾಲು ಉಳ್ಳಾಯ ಹಾಡನ್ನು ನಿಮಿಷಕ್ಕೆ ೭೨ರ ಸುಮಾರಿನ ತಾಳಕ್ಕೆ ಸರಿಯಾಗಿ ಹಾಡುತ್ತ, ಅದೇ ತರಹದ ತೊಟ್ಟಿಲನ್ನು ತೂಗುತ್ತಾ, ಮಕ್ಕಳಿಗೆ ನೆಮ್ಮದಿಯ ನಿದ್ರೆಯನ್ನು ತರಿಸುತ್ತಿದ್ದರು. ಮಕ್ಕಳ ಬೆಳವಣಿಗೆಗೂ ಈ ಹಾಡುಗಳಿಂದ ಅನುಕೂಲವಾಗುತ್ತಿತ್ತು. ಇತ್ತೀಚಿನ ವೈಜ್ಞಾನಿ ಸಂಶೋಧನೆಗಳಿಂದ ಈ ವಿಷಯವು ಖಚಿತವಾಗಿದೆ. ಅಲ್ಲವೆ?

* * *