ಬೊಗಳೆ ವೈದ್ಯ ಮೋಸಕ್ಕೆ ಹೆಸರಾದದ್ದು. ಮಾನವ ನಾಗರಿಕನಾದಂದಿನಿಂದಲೂ ಬೊಗಳೆ ವೈದ್ಯಗಾರಿಕೆ ಇದ್ದೇ ಇದೆ. ವಾಲ್ಟೇರ್ ಹೇಳಿರುವಂತೆ, ಮೊದಲನೆ ಮಂಕ ಮೊದಲನೇ ಮಡೆಯನನ್ನು ಸಂಧಿಸಿದಾಗ ಬೊಗಳೆ ವೈದ್ಯ ಹುಟ್ಟಿಕೊಂಡಿತು.

ಕೇಶವರ್ಧನಕ್ಕಾಗಿ ಮೊಟ್ಟಮೊದಲ ಈಜಿಪ್ಟಿನ ರಾಣಿ ಸೆಸ್‌ಗೆ ಕ್ರಿ.ಪೂ. ೩೪೦೦ರಲ್ಲೇ ನಿಯಮಿಸಿದ ಮದ್ದಿನಲ್ಲಿ ನಾಯಿಯ ಕಾಲ್ಬೆರಳು, ಖರ್ಜೂರದ ಸಿಪ್ಪೆ, ಕತ್ತೆ ಗೊರಸು ಇದ್ದುವಂತೆ. ನಿಮ್ಮ ಕೂದಲನ್ನು ಬೆಳೆಸಲು ಈಗ ಮಾರಾಟವಾಗುತ್ತಿರುವುವು ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಗಳಲ್ಲ.

ವಿಶೇಷ ವಿಧಾನ, ರೀತಿಗಳಿಂದ ಒಂದು ಗೊತ್ತಾದ ತಯಾರಿಕೆಯಿಂದ ರೋಗವನ್ನು ವಾಸಿ ಮಾಡುವೆವೆಂದು ಹೇಳಿಕೊಳ್ಳುವವರು ಅನೇಕರಿದ್ದಾರೆ. ಏಡಿಗಂತಿ, ಕೀಲುನೋವು, ಮನೋದುರ್ಬಲತೆ, ಸಿಹಿಮೂತ್ರ, ಕ್ಷಯ, ನಪುಂಸಕತೆ, ಲೈಂಗಿಕ ದುರ್ಬಲತೆಯೇ ಮುಂತಾದ ರೋಗಗಳನ್ನೂ ಗುಣಪಡಿಸುವ ಸೋಗು ಹಾಕುವರು. ಖಯಾಲು, ವಂಚನೆ, ಮೋಸ, ಸುಳ್ಳು, ಭ್ರಮೆ ಇವುಗಳ ಮೂಲಕ ಏನೂ ಅರಿಯದ ಮುಕ್ಕರಿಗೆ ಆರೋಗ್ಯ ಸಾಧನೆಗಾಗಿ ಇಲ್ಲ ಸಲ್ಲದ ಹತ್ತಿರದ ದಾರಿ ತೋರುವೆವೆಂದು ಕೊಚ್ಚಿಕೊಳ್ಳುವರು. ಬೀದಿಯಲ್ಲಿ ಸಾರಿ ಹೇಳಿದ ಅವರ ಮಾತನ್ನೇ ನಂಬಿ ವರುವರುಷವೂ ಲಕ್ಷಾಂತರ ಮಂದಿ ತಾವೇ ಕಂಡು ಕೊಂಡ ರೋಗಗಳಿಗೆ ತಾವೇ ಮದ್ದು ಮಾಡಿಕೊಂಡು ಸೇವಿಸುವರು. ಎಂದಿಗೂ ವಾಸಿಯಾಗದ ರೋಗಗಳೂ ಬೇಗನೆ ಗುಣವಾಗುತ್ತವೆಂಬ ಇವರ ಮಾತನ್ನು ನಂಬುವರು. ನೀತಿವಂತ ವೈದ್ಯ ಯಾವಾಗಲೂ ಇಂತಹ ಭರವಸೆ ನೀಡಲಾರ. ಕಸಬಿನ ನೀತಿ, ಧರ್ಮಗಳಿಗೆ ಕಟ್ಟಿಬೀಳದ ಬೊಗಳೆ ವೈದ್ಯನಿಗೆ ಇವಾವ ತಡೆ, ಮಿತಿಗಳೂ ಇಲ್ಲ.

ವೈದ್ಯ ವಿಜ್ಞಾನದಿಂದ ಒಳ್ಳೆಯದಾಗುವುದಕ್ಕೆ ಕಲ್ಲು ಹಾಕುವವನು ಬೊಗಳ ವೈದ್ಯ. ರೋಗ ಇನ್ನೂ ಬಲಿಯದೆ ಎಳಸಿನಲ್ಲಿ ಇರುವಾಗಲೇ ತಡಮಾಡದೆ ಸಮರ್ಥ ಚಿಕಿತ್ಸೆ ನೀಡಿದರೆ ಸಾವು ಉಳಿವುಗಳ ವ್ಯತ್ಯಾಸ ಕಾಣುತ್ತದೆ. ಯಾರೋ ಬೊಗಳೆ ವೈದ್ಯ ಕೊಟ್ಟನೆಂದು ದುಡ್ಡುತತ್ತು ತಂದ ಕುಂಟು ಮದ್ದನ್ನು ಸೇವಿಸುವ ಏಡಿಗಂತಿ ರೋಗಿ, ಔಷಧಗಳು, ವಿಕಿರಣ ರೋಗಚಿಕಿತ್ಸೆ ಇವುಗಳಿಂದ ರೋಗವನ್ನು ಅಣಗಿಸುವ ಸದವಕಾಶವನ್ನು ಅನ್ಯಾಯವಾಗಿ ಕಳೆದುಕೊಳ್ಳುವನು. ಇದಕ್ಕೆ ಲೆಕ್ಕವಿಲ್ಲದಷ್ಟು ನಿದರ್ಶನಗಳಿವೆ.

ಬೊಗಳೆ ವೈದ್ಯರಿಂದ ರೋಗದ ಮೇಲೆ ಬರೆ ಎಳೆದಂತಾಗಬಹುದು. ಹೊಟ್ಟೆ ಕೆಟ್ಟಿದೆಯೆಂದು ಸುಮ್ಮನೆ ಏನೋ ಮದ್ದುಗಳನ್ನು ನುಮಗುತ್ತಿದ್ದರೆ, ಜಠರದಲ್ಲಿ ಹುಣ್ಣಾಗಿ, ಕೈಮೀರಿ ಹರಡಿಕೊಳ್ಳುವ ತನಕ ವೈದ್ಯನಲ್ಲಿಗೆ ಹೋಗುವುದಕ್ಕೆ ತಡೆಯಾಗುತ್ತದೆ. ಎಷ್ಟೋ ವೈದ್ಯ ವಿಚಾರಗಳಲ್ಲಿದ್ದಂತೆ ಇದರ ಪರಿಹಾರ ಸುಲಭವಲ್ಲ. ಮದ್ದುಗಳ ಹೆಸರಿನಲ್ಲಿ ನಡೆವ ಮೋಸವನ್ನು ತಪ್ಪಿಸುವುದು ಬಹಳ ಕಷ್ಟ. ಇಲ್ಲದ ರೋಗಗಳನ್ನೆಲ್ಲ ರೋಗಮನಸ್ಕ ಭ್ರಮಿಸುವಂತೆ, ಸುಲಭವಾಗಿ ಮೋಸ ಹೋಗುವವರು ಕೂಡ ತಮಗೆ ರೋಗ ಇನ್ನೂ ಇದ್ದರೂ ವಾಸಿಯಾದಂತೆ ಬಾವಿಸುವರು.

ಸರ್ಕಾರಿ ಕಾನೂನುಗಳಿಂದ ಮಾತ್ರವೇ ಬೊಗಳೆ ವೈದ್ಯರನ್ನು ಹೋಗಲಾಡಿಸುವುದು ಆಗದ ಮಾತು. ಜನರು ಅರಿತುಕೊಂಡು ಇದಕ್ಕೆ ನೆರವಾಗಬೇಕು. ಜೀವಸತ್ವಗಳು, ಭೇದಿ ಮದ್ದುಗಳು, ಜೀರ್ಣಕಾರಿಗಳು, ತಲೆನೋವು, ಕೀಲುನೋವು ಮದ್ದುಗಳಿಗಾಗಿ ವರುವರುಷವೂ ಕೋಟ್ಯಾನುಕೋಟಿ ರೂಪಾಯಿಗಳನ್ನು ಜನರು ಖರ್ಚು ಮಾಡುವರು.

ವೈದ್ಯರ ಹಾಗೆಯೇ ಉಡುಗೆ ತೊಡಗೆಯನ್ನು ಜರ್ಬಾಗಿ ತೊಡುವವನು ಬೊಗಳೆ ವೈದ್ಯ. ರೋಗಿ ಹೇಳುವುದನ್ನೆಲ್ಲ ಬಲು ಸಾವಧಾನವಾಗಿ ಕೇಳುವನು. ಚಿಕಿತ್ಸೆಗಾಗಿ ಜನರಿಗೆ ನೇರವಾಗಿ ಜಾಹೀರಾತು ಮಾಡುವ ಆಸಾಮಿಗಳಿಂದಲೂ, ಸಂಸ್ಥೆಗಳಿಂದಲೂ ತಿಳಿವಳಿಕಸ್ತರು ದೂರವಿರಬೇಕು. ತೀವ್ರ ರೋಗಕ್ಕೆ ಗುಣಕಾರಿಯೆಂದು ಹೇಳಿಕೊಳ್ಳುವ ಪತ್ರಿಕೆ, ರೇಡಿಯೋ ಪ್ರಚಾರಗಳನ್ನು ಲಕ್ಷಿಸಬಾರದು. ಅಂತಹವರು ತಾವು ವಾಸಿ ಮಾಡಿದ್ದೆಂದು ಸೂಚಿಸುವ ರೋಗಿಗಳು ಬರೆದ ಸ್ವಂತ ಪದಗಳ ನಕಲನ್ನೂ ಹಂಚುವುದುಂಟು. ತಮಗೆ ಗುಣವಾಯಿತೆಂದು ಇವನನ್ನು ಯಾರೋ ಹೊಗಳುವ ಪತ್ರಕ್ಕೆ ಬೆಲೆ ಕೊಡುವಂತಿಲ್ಲ. ಮುಖ್ಯವಾಗಿ, ಬೊಗಳೆ ವೈದ್ಯವನ್ನು ಗುರುತಿಸಲು ಆರು ಅಂಶಗಳಿವೆ.

ತನ್ನಲ್ಲಿ ಮಾತ್ರ ಇರುವ ಗುಟ್ಟಾದ ಮದ್ದು ಗುಣಕಾರಿ ಎನ್ನುತ್ತಾನೆ. ಬೇಗನೆ ವಾಸಿ ಮಾಡುವ ಭರವಸೆ ನೀಡುವನು. ತನ್ನ ಮದ್ದಿನ ವಿಚಾರವಾಗಿ ರೋಗಿಗಳು ಹೊಗಳಿ ಬರೆದ ಪತ್ರಗಳನ್ನು ಪ್ರಕಟಿಸುವನು. ತಾನು ಕಂಡುಹಿಡಿದಿರುವುದನ್ನು ವೈದಯರೂ ಪರೀಕ್ಷಿಸಿ ಮನ್ನಣೆ ನೀಡುವಂತೆ ಅಂಗಲಾಚುವನು. ಶಸ್ತ್ರಕ್ರಿಯೆ ಎಕ್ಸ್ ಕಿರಣ ಚಿಕಿತ್ಸೆ, ವೈದ್ಯರ ಔಷಧಗಳನ್ನೂ ಹೀಗೆಳೆಯುತ್ತಾನೆ. ವೈದ್ಯರು ತನ್ನ ಸವಾಲನ್ನು ಎದುರಿಸಲಾರರು ಎನ್ನುವನು.

ಬೊಗಳೆ ವೈದ್ಯರ ಸಾಧನೆಗಳು, ಮದ್ದುಗಳು, ಗೀಳಿನ ಆಹಾರಗಳನ್ನು ಹೀಗೆ ವಿಂಗಡಿಸಬಹುದು. ಸರಿಯಾದ ಉಸ್ತುವಾರಿಯಿಲ್ಲದೆ ಬಳಸಿದರೆ ಆರೋಗ್ಯಕ್ಕೋ ಪ್ರಾಣಕ್ಕೋ ಅಪಾಯಕಾರಿಯಾಗುವಂತಹವು. ಯಾವುದಕ್ಕಾಗಿ ಸೇವಿಸುವರೋ ಅದಕ್ಕೆ ಕೆಲಸಕ್ಕೆ ಬಾರದಂತಿರುವುದು. ಇರುವ ಕಾಯಿಲೆಗೆ ಚಿಕಿತ್ಸೆ ಅಷ್ಟರಿಂದಲೇ ಸಾಕಾಗದವು. ಇಂತಹವನ್ನು ನಂಬಿ ಕುಳಿತರೆ, ರೋಗ ಮತ್ತಷ್ಟು ಬಲಿತು ಆಮೇಲೆ ಏನೂ ಮಾಡದಂತಾಗಬಹುದು. ಇದನ್ನೆಲ್ಲ ತಪ್ಪಿಸಬೇಕಾದರೆ ಜನರ ತಿಳಿವಳಿಕೆ ಹೆಚ್ಚಬೇಕು.

ಇದಕ್ಕಾಗಿಯೇ, ಔಷಧಗಳ ಡಬ್ಬಿ, ಸೀಸೆ, ಪೊಟ್ಟಣ, ಪೆಟ್ಟಿಗೆಗಳ ಮೇಳೆ ಒಳಗಿರುವುದರ ಹೆಸರುಗಳನ್ನು ಸೂಚಿಸಬೇಕೆಂದು ಕಾನೂನಿನಲ್ಲಿದೆ. ಅಮೆರಿಕದಲ್ಲಿ ೧೯೩೭ರಲ್ಲಿ ಮಕ್ಕಳಿಗೆ ಕೊಡುವ ಸ್ವಲ್ಪ ಮದ್ದನ್ನು, ಗ್ಲಿಸರಿನ್‌ಗೆ ಬದಲಾಗಿ ಅದೇ ತೆರನಾಗಿ ಕಾಣುವ ಬೇರೊಂದು ಮದ್ದಿನೊಂದಿಗೆ ತಯಾರಿಸಿ ಮಾರಿದ್ದರಿಂದ, ಅದನ್ನು ಬಳಸಿದ ನೂರಾರು ಮಕ್ಕಳು ಸತ್ತರು. ಇದರಿಂದ ಅಲ್ಲಿ ೧೯೩೮ರಲ್ಲಿ, ಆಹಾರ, ಔಷಧ ಮತ್ತು ಅಂಗರಾಗಗಳ ಕಾನೂನು ಜಾರಿಗೆ ಬಂದಿತು.

ಎಂದಿನ ಸಾಧಾರಣ ಸಮತೋಲದ ಆಹಾರ ವಸ್ತುಗಳನ್ನು ಸೇವಿಸುವವರು ಯಾವ ಹೆಚ್ಚಿನ ಜೀವಸತ್ರಗಳನ್ನಾಗಲಿ, ಪ್ರೋಟೀನು, ಖನಿಜಗಳನ್ನಾಗಲಿ, ಗುಳಿಗೆ, ‘ಟಾನಿಕ್ಕು’ಗಳನ್ನಾಗಲಿ ದಿನವೂ ಸೇವಿಸಬೇಕಿಲ್ಲ. ಎ,ಬಿ೧೨ ಮತ್ತು ಜೀವಸತ್ವಗಳನ್ನು ಬಿಟ್ಟರೆ, ಹೆಚ್ಚಾಗಿ ಸೇವಿಸಿದ ಮತ್ತಾವ ಜೀವಸತ್ವವೂ ಮೈಯಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ಹೆಚ್ಚಾಗಿ ಸೇವಿಸಿದ್ದೆಲ್ಲ ವ್ಯರ್ಥ. ವೈದ್ಯರು ನಿಯಮಿಸಿದ್ದಕ್ಕೆ ಇದು ಅನ್ವಯಿಸುವುದಿಲ್ಲ. ಕೇವಲ ಜಾಹೀರಾತುಗಳ ಅಬ್ಬರಕ್ಕೆ ಮನಸೋತು ತಂತಾವಾಗಿ ಇವನ್ನು ಯಾರೂ ಸೇವಿಸಬಾರದು.

ರಕ್ತ ಮಲಿನತೆ, ರಕ್ತಕೊರೆ, ಸುಸ್ತು, ನಿರ್ಬಲತೆ, ಯೌವನ, ಹುಮ್ಮಸ್ಸು, ಕಸವು ವೀರ್ಯವೃದ್ಧಿ, ನಪುಂಸಕತೆ ಇವುಗಳಿಗಾಗಿ ಮದ್ಯಸಾರದ ಮಿಶ್ರಣಗಳ ಜಾಹೀರಾತುಗಳನ್ನು ನಂಬಬೇಡಿ. ಬರಿದೇ ದಣಿವು, ಸುಸ್ತಾಗುತ್ತಿದ್ದರೆ ಏನೋ ತೀವ್ರ ರೋಗ ಕಾರಣವಿರಬಹುದು. ಇದಕ್ಕಾಗಿ ನುರಿತ ವೈದ್ಯರನ್ನು ಕಾಣಬೇಕೇ ಹೊರತು ಟಾನಿಕ್ಕುಗಳನ್ನು ಕುಡಿಯುತ್ತಾ ಅಮೂಲ್ಯ ಕಾಲ ಹಾಳುಮಾಡಿ ರೋಗ ಬಲಿಯಲು ಬಿಡಬಾರದು.

ಏಡಿಗಂತಿಯನ್ನು ನಿರ್ಮೂಲ ಮಾಡುವ ಒಂದು ವಿಶೇಷ ಚಿಕಿತ್ಸೆಯನ್ನು ಕಂಡುಹಿಡಿದಿರುವೆ ಎನ್ನುವವರಿಂದ ಹುಷಾರಾಗಿ ದೂರವಿರಿ. ಮತ್ತಾರಿಗೂ ಗೊತ್ತಿರದ ಗುಟ್ಟಾದ ವಿಧಾನ, ಪದ್ಧತಿ, ಮದ್ದು ಇವೆಯೆನ್ನುವುದು ಸಂಪೂರ್ಣ ಸುಳ್ಳು, ಮೋಸ. ಅಂತಹುದು ಏನಾದರೂ ಇರುವುದಾದರೆ ಸಾವಿರಾರುಮಂದಿ ವೈದ್ಯರೇ ಏಡಿಗಂತಿಗೆ ಬಲಿಯಾಗುತ್ತಿರಲಿಲ್ಲ. ಕೀಲು ನೋವುಗಳಿಗೆ ಗುಣಕಾರಿ ಮದ್ದು ಎನ್ನುವುದೂ ಅಷ್ಟೇ, ಆಸ್ಪರಿನ್ನನ್ನು ಹೇಗೆ ಕೊಟ್ಟರೂ ಒಂದೇ, ನೆನಪಿರಲಿ.

ಕುಡಿತದ ಚಟವನ್ನು ಸುಲಭವಾಗಿ ತಪ್ಪಿಸಲು ಯಾವ ವಿಶೇಷ ಮದ್ದೂ ಇಲ್ಲ. ಅವರವರ ಮನಸ್ಸಿನ ದೃಢತೆ, ಆಸಕ್ತಿ ಮುಖ್ಯ. ಹಾಗೆಯೇ ಬೋಳುತಲೆಯಲ್ಲಿ ಕೂದಲು ಬೆಳೆಸುವ, ಉದುರುವುದನ್ನು ತಪ್ಪಿಸುವ, ಕೂದಲ ಬುಡವನ್ನು ಪೋಷಿಸುವ, ಯಾವ ಹೆಚ್ಚಿನ ವಿಧಾನ, ಮದ್ದೂ ಇಲ್ಲ. ಮೇಲ್ಗಡೆ ಕೂದಲಿಗೆ ಹಚ್ಚಿದ್ದೇನೂ ಅದರ ಬೆಳವಣಿಗೆಗೆ ನೆರವಾಗುವುದಿಲ್ಲ. ಉಗುರುಗಳ ಹಾಗೆ ಕೂದಲೂ ಒಂದು ಸತ್ತವಸ್ತು.

ಹೆಣ್ಣಿನ ಸ್ತನಗಳನ್ನು ದುಂಡಗೆ ಬೆಳೆಸುವಂತಹ ಯಾವ ವಿಧಾನ, ಮದ್ದು, ಅಂಗಸಾಧನೆ, ಯಂತ್ರ, ತಂತ್ರಗಳೂ ಇಲ್ಲ. ಬೆದೆಜನಕ ಚೋದನಿ ರಸದ ಮದ್ದುಗಳನ್ನು ವೈದ್ಯನ ಸಲಹೆಯಿಲ್ಲದೆ ಬಳಸುವುದು ತೀರ ಅಪಾಯಕರ. ಹಾಗೆ ಬೆಳೆಸಿದರೂ ಎಲ್ಲೋ ಕೆಲವರಿಗೆ ಮಾತ್ರ ಅನುಕೂಲಿಸಬಹುದು.

ಸಿಹಿಮೂತ್ರ ರೋಗಿಗಳು ಆಗಿಂದಾಗ್ಗೆ ವೈದ್ಯನ ಸಲಹೆಗಳನ್ನು ಪಡೆಯುತ್ತಿರಬೇಕು. ಈಗ ಬಂದಿರುವ ಕೆಲವು ಮಾತ್ರೆಗಳನ್ನು ಬಿಟ್ಟರೆ, ಉಳಿದವರು ಇನ್ಸುಲಿನ್ ಜೊತೆಗೆ ಪಥ್ಯವನ್ನು ಪಾಲಿಸಲೇಬೇಕು. ಬೇರೆ ಚಿಕಿತ್ಸೆಗಳನ್ನು ನಂಬಿದರೆ ಇಲ್ಲದ ತೊಡಕುಗಳಾಗಿ ಬೇಗನೆ ಸಾವಿಗೂ ಕಾರಣವಾಗಬಹುದು.

ಮೊಲ್ಲಾಗರವನ್ನು (ಅಪಸ್ಮಾರ) ಕೆಲವು ಮದ್ದುಗಳಿಂದ ಹತ್ತೊಟಿಗೆ ತರಬಹುದೇ ಹೊರತು, ಅದನ್ನುಪೂರ್ತಿಯಾಗಿ ವಾಸಿಮಾಡುವಂತಿಲ್ಲ. ಇದರ ನಿಜವಾದ ಕಾರಣ ಗೊತ್ತಿಲ್ಲದ್ದೇ ಕಾರಣ. ಆದ್ದರಿಂದ ಹಾಗೆ ಗುಣಕಾರಿಯೆಂಬ ಮದ್ದಿಗೆ ದುಡ್ಡು ಹಾಕಿದರೆ ಹಾಳು.

ಮಾನವನ ಕಣ್ಣು ಕೋಮಲವಾದ ಸಂಕೀರ್ಣ ಇಂದ್ರಿಯವಾದ್ದರಿಂದ ತಿಳಿಯದವರ ಕೈಮುಟ್ಟಿಸಲೇಬಾರದು. ವೈದ್ಯರ ಸಲಹೆಯ ಮೇಲೆ ತಯಾರಿಸಿದ ಲೇಪದ್ರವ, ತೊಟ್ಟುಗಳನ್ನು ಮಾತ್ರ ಬಳಸಬೇಕು. ವಯಸ್ಸಾದವರ ಕಣ್ಣು ಪರೆಯನ್ನು ಕರಗಿಸುವ ಯಾವ ಮದ್ದೂ ಇಲ್ಲ. ಕಣ್ಣು ಸರಿಯಾಗಿ ಕಾಣದಿರಲು ಕಾರಣಗಳು ಹಲವಾರು. ಆದ್ದರಿಂದ ಪ್ರಚಾರ ಪುಸ್ತಕವನ್ನೂ, ಪತ್ರಿಕೆಗಳನ್ನೂ ಓದಿ ಕಣ್ಣು ನೋಟವನ್ನು ತಾವಾಗಿ ಸರಿಪಡಿಸಿಕೊಳ್ಳುವುದು ಆಗದ ಕೆಲಸ.

ಕೂದಲಿಗೆ ಬಣ್ಣ ಹಾಕುವ ವಸ್ತುಗಳಾಗಿ ಈಗ ಮಾರಾಟದಲ್ಲಿ ಇರುವಲ್ಲಿ ಬಹುಪಾಲು ಸರಿಯಾಗಿ ಬಳಸಿದರೆ ಬಹುಮಂದಿಗೆ ಹಾನಿಯಾಗದಿದ್ದರೂ ಸರಿಯಾಗಿ ಹುಷಾರಾಗಿ ಬಳಸದಿದ್ದಲ್ಲಿ ಕೆಡುಕಾಗಬಹುದು. ಕೆಲವಂತೂ ಹೆಚ್ಚು ಅಪಾಯಕಾರಿ. ಕೂದಲಿಗೆ ಬಣ್ಣ ಹಾಕಿಕೊಳ್ಳುವವರು ಅದರೊಂದಿಗೇ ಕೊಟ್ಟಿರುವ ಸೂಚನೆಗಳನ್ನು ತಪಪ್ದೆ ಪಾಲಿಸಿ, ತಮಗೆ ಅದು ಒಗ್ಗುವುದೋ ಇಲ್ಲವೋ ಎಂದು ಕೊಂಚ ಹಚ್ಚಿಕೊಂಡು ಒಂದೊಂದು ಸಲವೂ ಮೊದಲು ಪರೀಕ್ಷಿಸಿಕೊಳ್ಳಬೇಕು. ಬೆಳೆಯುವ ನೆರೆಗೂದಲನ್ನು ಕಪ್ಪಾಗಿಸುವ ಶಾಶ್ವತ ಬಣ್ಣವಸ್ತುವನ್ನು ಯಾರೂ ಕಂಡುಹಿಡಿದಿಲ್ಲ. ಎಷ್ಟು ಜೀವಸತ್ವಗಳನ್ನು ನುಂಗಿದರೂ ಎಂದಿಗೂ ಪ್ರಯೋಜನ ಆಗುವುದಿಲ್ಲ.

ಬೇಡೆದೆಡೆ ಬೆಳೆದ ಕೂದಲನ್ನು ಅಪಾಯವಿಲ್ಲದಂತೆ ಶಾಶ್ವತವಾಗಿ ತೆಗೆದುಹಾಕುವ ವಿದ್ಯುಲ್ಲಯನದ ವಿಧಾನವೊಂದೇ ಇದೆ. ಇದನ್ನು ಸರಿಯಾಗಿ ಮಾಡದಿದ್ದರೆ ಕಲೆಗಳಾಗಿ ವಿಕಾರವಾಗುತ್ತದೆ. ಸದ್ಯಕ್ಕೆ ಕೂದಲನ್ನು ನಾಶ ಮಾಡಲು ಮದ್ದು, ಪಟ್ಟಿಗಳಿವೆ. ಆದರೆ ಕೂದಲು ಬೆಳೆಯುವುದನ್ನು ಇವು ತಪ್ಪಿಸವು. ಎಕ್ಸ್ ಕಿರಣ ಚಿಕಿತ್ಸೆಯನ್ನು ಇದಕ್ಕಾಗಿ ಬಳಸುವುದು ಒಳ್ಳೆಯದಲ್ಲ.

ಏರಿದ ರಕ್ತದೊತ್ತಡವೇ ಒಂದು ರೋಗವಲ್ಲ. ಕೆಲವು ರೋಗಗಳ ಒಂದು ಲಕ್ಷಣವದು. ಇದಕ್ಕಾಗಿ ತಂತಾವಾಗಿ ಬಳಸಬಹುದುದಾದ ಯಾವ ಮದ್ದೂ ಇಲ್ಲ. ಬೆಳ್ಳುಳ್ಳಿ, ಈರುಳ್ಳಿ ಕಡಲೆಕಾಳು, ಅವರೆ, ಕುಸುಬಿ ಎಣ್ಣೆ ಇವನ್ನು ಸೂಚಿಸುವುದುಂಟು. ಅವು ಇದರ ಚಿಕಿತ್ಸೆಯಲ್ಲಿ ಗುಣಕಾರಿಗಳಲ್ಲ.

ನಪುಂಸಕತೆಯಲ್ಲಿ ಗುಂಡಿನ ಚೋದನಿ ಮದ್ದುಗಳ ಬಳಕೆಗೆ ಹೆಚ್ಚು ಮಿತಿಯಿದೆ. ಅವುಗಳಿಂದಾಗುವ ಅಪಾಯ, ಹಾನಿಗಳೇ ಹೆಚ್ಚಾದ್ದರಿಂದ ಯಾರೂ ವೈದಯರ ಸಲಹೆಯ ಹೊರತಾಗಿ ಬಳಸುವಂತಿಲ್ಲ.

ಎಲ್ಲರವನ್ನೂ ಒಂದಿಲ್ಲೊಂದು ದಿನ ಕಾಡುವ ಅಂಟುರೋಗವಾದ ನೆಗಡಿ ಬಾರದಂತೆ ತಡೆವ, ವಾಸಿಮಾಡುವ ಮದ್ದನ್ನು ಈತನಕ ಯಾರೂ ಕಂಡುಹಿಡಿದಿಲ್ಲ. ಇದಕ್ಕೆ ವಿಶಿಷ್ಟ ಚಿಕಿತ್ಸೆ ಏನೂ ಇಲ್ಲ.

ಮೂತ್ರಪಿಂಡ, ಮೂತ್ರಕೋಶ ಇವುಗಳ ರೋಗಗಳಿಗಾಗಿ ರೋಗಿಗಳು ತಂತಾವಾಗಿ ಬಳಸುವ ಮದ್ದುಗಳಿಲ್ಲ. ಆದ್ದರಿಂದ ಅಂತಹ ಮದ್ದುಗಳ ಜಾಹೀರಾತುಗಳನ್ನು ನೆಚ್ಚಿಕೊಳ್ಳಬಾರದು. ಅಂತಹ ತೀವ್ರ ರೋಗಗಳು ವೈದ್ಯ ಚಿಕಿತ್ಸೆಗೆ ಒಳಗಾಗಬೇಕು.

ಹುಟ್ಟು ಮಚ್ಚೆಯ ಚಿಕಿತ್ಸೆಗೆ ಕೈಹಾಕಿದಲ್ಲಿ ಅದು ಅಪಾಯಕರ ಗಂತಿಯಾಗಿ ಬೆಳೆಯಬಹುದು. ಆದ್ದರಿಂದ, ಪ್ರಚಾರದ ಮದ್ದುಗಳನ್ನು ಬಳಸದೆ ವೈದ್ಯನಿಂದಲೇ ಅದನ್ನು ತೆಗೆಯಿಸಬೇಕು.

ಬೊಜ್ಜು ಬೆಳೆಯಲು ಮಿತಿಮೀರಿ ತಿನ್ನುವುದೇ ಒಂದು ಮುಖ್ಯ ಕಾರಣ. ವ್ಯಾಯಾಮ ಸಾಕಷ್ಟಿಲ್ಲದಿರುವುದೂ ಇನ್ನೊಂದು ಕಾರಣ. ತಿನ್ನುವುದನ್ನು ಕಡಿಮೆ ಮಾಡಲು ಮನಸ್ಸು ಗಟ್ಟಿಯಾಗಿರಬೇಕು. ಕಟ್ಟುನಿಟ್ಟಾಗಿ ಉಪವಾಸ ಮಾಡಬೇಕಾದರೆ ವೈದ್ಯರ ಉಸ್ತುವಾರಿಯಲ್ಲಿರಬೇಕು. ಇದ್ದಕ್ಕಿದ್ದ ಹಾಗೆ ಸರಕ್ಕನೆ ಮೈ ತೂಕವನ್ನು ಇಳಿಸುವುದೂ ಒಳ್ಳೆಯದಲ್ಲ. ಹಸಿವನ್ನು ಮುಚ್ಚಿಸುವ ಮದ್ದುಗಳನ್ನು ವೈದ್ಯನ ಸಲಹೆಗಳಿಲ್ಲದೆ ಸೇವಿಸಬಾರದು. ಅವುಗಳಿಂದ ತೀವ್ರ ಅಡ್ಡಪರಿಣಾಮಗಳು ಆಗುವುದುಂಟು. ಭೇದಿ ಮಾತ್ರೆ ಮೈ ತೂಕವನ್ನು ಇಳಿಸುವ ಮದ್ದಲ್ಲ. ನೀವುವುದೂ ತಿಕ್ಕುವುದೂ ಕೊಬ್ಬುಕರಗಿಸುವ, ತೂಕವಿಳಿಸುವ ವಿಧಾನಗಳಲ್ಲ. ನಡುಪಟ್ಟಿಗಳಂತೂ ವ್ಯಕ್ತಿಗೆ ಸಣ್ಣಗೆ ಕಾಣುವಂತೆ ಮಾಡುವುದೇ ಹೊರತು, ಹೊಟ್ಟೆಯನ್ನು ಕರಗಿಸಿ ತೂಕ ಇಳಿಸಲಾರವು. ಕೇವಲ ಬೆವರನ್ನು ಸುರಿಸುವುದರಿಂದ ಬೊಜ್ಜು ಶಾಶ್ವತವಾಗಿ ಹೋಗದು.

ಹುಮ್ಮಸ್ಸು ಹುಟ್ಟಿಸುವ ಪ್ರಚೋದಕ ಮಾತ್ರೆಗಳಲ್ಲಿ ಬೆಂಜಿಡ್ರಿನ್, ಡೆಕ್ಸಡ್ರಿನ್‌ನಂತಹ ಆಂಫಿಟಿಮೀನ್ ಮಾತ್ರೆಗಳಲ್ಲಿ ಯಾವ ವೈದ್ಯಕ ಗುಣವೂ ಇಲ್ಲ. ಅಲ್ಲದೆ ಅವು ಕೆಟ್ಟ ಚಾಳಿ ಹಿಡಿಸುತ್ತವೆ. ಸರಿಯಾಗಿ ಸೇವಿಸದಿದ್ದರೆ ಅಪಾಯಕರ. ಅವನ್ನು ಬಳಸುವವರು ಆಕಸ್ಮಿಕಗಳಿಗೆ ಸಿಕ್ಕಿಬಿದ್ದು ಹಾನಿಗೊಳಗಾಗಿದ್ದಾರೆ.

ಮೊಳೆ ರೋಗಕ್ಕೆ ಮೇಲೆ ಹಚ್ಚುವ ಕೆನೆ, ಮುಲಾಮುಗಳಿಂದ ನೋವು, ಉರಿ, ಕೆರೆತ, ಊತ ತಗ್ಗಬಹುದೇ ಹೊರತು ಅವುಗಳಿಂದ ಪೂರ್ಣ ಗುಣವಾಗುವುದಿಲ್ಲ. ಸೊಪ್ಪು ಸೆದೆ, ಕಟ್ಟಿ ಕರಗಿಸುವುದು ಎನ್ನುವುದರಲ್ಲಿ ಹುರುಳಿಲ್ಲ. ಆದ್ದರಿಂದ ಹಾನಿಯೇ ಹೆಚ್ಚು. ಮೊಳೆಗಳು ಬಹಳವಾಗಿ ಬೆಳೆದಿದ್ದರೆ ಶಸ್ತ್ರಕ್ರಿಯೆಯೊಂದೇ ಪರಿಹಾರ. ಮೊಳೆ ರೋಗ ಬೇರೆ ರೋಗಗಳ ಒಂದು ಲಕ್ಷಣವಾಗಿರಬಹುದಾದ್ದರಿಂದ ಯಾವಾಗಲೂ ತಂತಾವಾಗಿ ಚಿಕಿತ್ಸೆ ಮಾಡಿಕೊಳ್ಳಲು ಹೋಗಬಾರದು. ಹಾಗೆಯೇ ಸುಮ್ಮನೆ ಭೇದಿಗೆ ತೆಗೆದುಕೊಳ್ಳುವುದೂ ಸರಿಯಲ್ಲ.

ವಯಸ್ಕರಲ್ಲಿ ಬೂರುವಿನ (ಹರ್ನಿಯಾ) ಪರಿಹಾರಕ್ಕೆ, ಸಾಮಾನ್ಯವಾಗಿ ಶಸ್ತ್ರಕ್ರಿಯೆಯೊಂದೇ ಉಪಾಯ. ತಳ್ಳಿದರೆ ಒಳಕ್ಕೆ ಪೂರ್ತಿಯಾಗಿ ಹೋಗುವ ಬೂರುವಿಗೆ ಸರಿಯಾಗಿ ಹಿಡಿಯುವ ಸರಿಯಳತೆಯ ಜೇರ್ಕಟ್ಟೆಗೆಯನ್ನು ಹಾಕಿಕೊಳ್ಳದಿದ್ದರೆ ಸದ್ಯಕ್ಕೆ ಶಮನವಾಗುತ್ತದೆ. ಇದನ್ನು ರೋಗಿ ತಾನೇ ಹೋಗಿ ಆರಿಸಿ ತಂದು ಹಾಕಿಕೊಳ್ಳಬಾರದು. ವೈದ್ಯನ ನೆರವಿಲ್ಲದೆ ಬೂರನ್ನು ತಂತಾವಾಗಿ ಹಾಗೆ ಚಿಕಿತ್ಸೆ ಏರ್ಪಡಿಸಿಕೊಂಡರೆ ಮುಂದೆ ತೊಡಕಾಗುತ್ತದೆ.

ಚರ್ಮದ ಕೆರೆತಕ್ಕೂ ಕೆಲವು ಸಲ ಹುಣ್ಣು, ಗುಳ್ಳೆ, ಗಾಯಗಳಿಗೂ ಮೇಲೆ ಹಚ್ಚುವ ಮದ್ದುಗಳಿವೆ. ಆದರೆ, ರೋಗ ಏನೆಂದೂ ಸರಿಯಾದ ಚಿಕಿತ್ಸೆ ಯಾವುದೆಂದೂ ತಿಳಿಯಲು ಚರ್ಮದ ವೈದ್ಯ ಪರಿಣತನವನ್ನೇ ಕಾಣಬೇಕು. ಚರ್ಮದ ಮೇಲೆ ಹಚ್ಚುವ ಮದ್ದುಗಳು ಮುಂದೆ ಒಗ್ಗದಂತಾಗಿ, ಆಮೇಲೆ ಎಂದಾದರೂ ಅದೇ ಮದ್ದನ್ನು ಚುಚ್ಚಿದರೆ ತೀವ್ರ ಪ್ರತಿಕ್ರಿಯೆ ಏಳುವ ಸಂಭವ ಹೆಚ್ಚು. ಆದ್ದರಿಂದಲೇ, ಪೆನಿಸಿಲಿನ್, ಸಲ್ಫಾ ಮದ್ದುಗಳನ್ನು ಚರ್ಮಕ್ಕೆ ಎಂದಿಗೂ ಹಚ್ಚಬಾರದು. ಅಲ್ಲದೆ, ಸಲ್ಲದ ತೊಡಕುಗಳೆದ್ದು ರೋಗ ಬೇರೂರಬಹುದು. ಒಂದು ಹೋಗಿ ಇನ್ನೊಂದಾಗಬಹುದು. ಚರ್ಮರೋಗಗಳಲ್ಲಿ ಒಂದಕ್ಕೊಂದು ತಪ್ಪು ತಿಳಿಯುವುದೇ ಹೆಚ್ಚಾದ್ದರಿಂದ ಸ್ವಂತ ಚಿಕಿತ್ಸೆ, ಇನ್ನೊಬ್ಬನಿಗೆ ನಿಯಮಿಸಿದ ಮದ್ದು ಬಳಕೆ ಸರಿಯಲ್ಲ.

ಜಠರದ ಹುಣ್ಣುಗಳಿಗಾಗಿ ಆಮ್ಲರೋಧಕ ಮದ್ದುಗಳಿಂದ ನೋವು ಕೊಂಚ ತಗ್ಗಿದ್ದರೂ, ಅಂತಹ ರೋಗಿಗಳು ವೈದ್ಯರ ಸಲಹೆಯನ್ನು ಪಡೆದು ಅವರ ಉಸ್ತುವಾರಿಯಲ್ಲಿರಬೇಕು. ಎಷ್ಟೋ ವೇಳೆ, ಜಠರದ ಏಡಿಗಂತಿ ಎದ್ದಿರುವಾಗಲೂ ಜಠರದ ಹುಣ್ಣಿನ ಲಕ್ಷಣಗಳನ್ನೇ ತೋರುತ್ತದೆ. ಜಠರದ ಹುಣ್ಣಿನ ಚಿಕಿತ್ಸೆಗೆ ರೋಗ ನಿರ್ಧಾರ, ಪಥ್ಯ, ವಿಶ್ರಾಂತಿ, ನೆಮ್ಮದಿ, ಮದ್ದು ಮುಂತಾದುವೆಲ್ಲ ಅಗತ್ಯ. ಕೆಲವೇಳೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಬೇಕಾಗಬಹುದು.

ಕೆಮ್ಮಿನ ಮದ್ದುಗಳು ಪತ್ರಿಕೆಗಳು, ಬಾನುಲಿಗಳಲ್ಲಿ, ಜಾಹೀರಾತುಗಳಲ್ಲಿ ಎಲ್ಲೆಲ್ಲೂ ಪ್ರಚಾರದಲ್ಲಿವೆ. ಅನೇಕ ರೋಗಗಳ ಒಂದು ಲಕ್ಷಣವೇ ಹೊರತು, ಕೆಮ್ಮು ಒಂದು ರೋಗವಲ್ಲ. ಆದ್ದರಿಂದ ಅದರ ಮೂಲ ಕಾರಣದ ಚಿಕಿತ್ಸೆ ನಡೆಯಬೇಕು. ಕೆಲವು ದಿನಗಳಿಗಿಂತಲೂ ಹೆಚ್ಚಾಗಿ ಕೆಮ್ಮಿನ ಯಾವ ಮದ್ದನ್ನೂ ವೈದ್ಯನ ಸಲಹೆ ಇಲ್ಲದೆ ಸೇವಿಸುತ್ತಾ ಹೋಗಬಾರದು. ಇಲ್ಲವಾದರೆ, ರೋಗ ಏನೆಂದು ಗೊತ್ತಾಗದೆ ಚಿಕಿತ್ಸಿಸಲಾಗದಷ್ಟು ಉಲ್ಬಣಿಸಬಹುದು. ಗೂರಲಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಮನಸ್ಸೂ ಒಂದು. ಇದರಿಂದಲೇ ಪತ್ರಿಕೆಗಳಲ್ಲಿ ಅಮಾವಾಸ್ಯೆ, ಪೂರ್ಣಿಮೆಗಳಲ್ಲಿ ಮೀನು ಸಂಗಣೆ, ಭಸ್ಮಸೇವನೆ ಇವು ಪ್ರಚಾರವಾಗುತ್ತಿವೆ. ರೋಗಿಯ ಸರಿಯಾದ ವೈದ್ಯ ಪರೀಕ್ಷೆ, ಹವಾಗುಣ, ಆಹಾರ, ಧೂಳು ಪರಿಸರ, ಕಸಬು ಇವನ್ನು ಗಮನಿಸಿ ಚಿಕಿತ್ಸೆ ನಡೆಸಿದರೆ ಗೂರಲೇ ಇರಲಿಲ್ಲ ಎನ್ನುವಷ್ಟು ಚೆನ್ನಾಗಿ ಹತೋಟಿಯಲ್ಲಿಡಬಹುದು.

ಡಾ| ಶಿವಪ್ಪ ಡಿ.ಎಸ್.: ಕನ್ನಡದಲ್ಲಿ ಮಾತ್ರವಲ್ಲ. ಇಡೀ ಭಾರತೀಯ ಪ್ರಾದೇಶಿಕ ಭಾಷೆಯಲ್ಲಿ ಪ್ರಥಮ ವೈದ್ಯ ನಿಘಂಟನ್ನು ಬರೆದವರು. ಇಂಗ್ಲೀಷ್ ಕನ್ನಡ ವೈದ್ಯ ಪದಕೋಶ ಇಂದಿಗೂ ಕನ್ನಡದ ಏಕೈಕ ವೈದ್ಯ ಪದಕೋಶವಾಗಿದೆ. ಇವರ ವೈದ್ಯಕ ಪದಗಳ ಹುಟ್ಟು ರಚನೆಎಂಬ ಬೃಹತ್ ಕೃತಿ. ಒಂದು ವಿಶ್ವವಿದ್ಯಾನಿಲಯ ಮಾಡುವಂತಹ ಅದ್ಭುತ ಕೃತಿಯಾಗಿದೆ. ಅನೇಕ ಸ್ವತಂತ್ರ ಹಾಗೂ ಅನುವಾದಿತ ಕೃತಿಗಳನ್ನು ನೀಡಿರುವ ಗಣ್ಯರು. ‘ವೈದ್ಯರನ್ನು ಯಾವಾಗ ಕಾಣಬೇಕುಎಂಬ ಪುಸ್ತಕದಿಂದ ಪ್ರಸ್ತುತ ಲೇಖನವನ್ನು ಆರಿಸಲಾಗಿದೆ.

* * *