ಎಲ್ಲರೂ ಆರೋಗ್ಯದಿಂದಿರಬೇಕೆನ್ನುತ್ತಾರೆ. ದೀರ್ಘಕಾಲ ಬಾಳಬೇಕೆಂದು ಬಯಸುತ್ತಾರೆ. ಬದುಕಿರುವ ತನಕ ದೈಹಿಕವಾಗಿ ಸ್ವತಂತ್ರವಾಗಿದ್ದು ಯಾವುದಕ್ಕೂ ಯಾರನ್ನೂ ಅವಲಂಬಿಸುವಂತಾಗಬಾರದೆಂದು ಇಚ್ಛಿಸುತ್ತಾರೆ. ಆರ್ಥಿಕ ಸ್ವಾವಲಂಬನೆಯೊಂದಿಗೆ ಮಾನಸಿಕ ನೆಮ್ಮದಿ ಆಶಿಸುತ್ತಾರೆ. ಇದು ಸಹಜ. ಆದರೆ ಈ ದೇಹ ಆರೋಗ್ಯವಾಗಿ ಉಳಿಯಲು ರೋಗಗಳು ಬಿಡಬೇಕಲ್ಲ. ಒಂದಿಲ್ಲೊಂದು ವಯಸ್ಸಿಗೆ, ಒಂದಿಲ್ಲ ಒಂದು ಏಕೆ? ಅನೇಕ ರೋಗಗಳು ಆಕ್ರಮಿಸಲು ಹಾತೊರೆಯುತ್ತಿರುತ್ತವೆ. ಜನ್ಮದಾರಭ್ಯ ಬರುವ ರೋಗಗಳ, ಅನುವಂಶಿಕ ರೋಗಗಳು ಸೋಂಕು ರೋಗಗಳು, ಪೌಷ್ಠಿಕಾಂಶದ ಕೊರತೆಯ ರೋಗಗಳು ಕಾಯ್ದು ಕುಳಿತಿರುತ್ತವೆ.

ಮಗುವಿಗೆ ಸೋಂಕು ರೋಗಗಳ ಭಯವೇ ಭಯ. ಬಡತನದಿಂದ ಬಳಲುವ ನಮ್ಮ ದೇಶದಲ್ಲಿ ಪೌಷ್ಠಿಕ ಮತ್ತು ಜೀವಸತ್ವಗಳ ಕೊರತೆಯ ರೋಗಗಳು ಹೇರಳ. ರಿಕೆಟ್ಸ್, ಸ್ಕರ್ವಿ, ಇರುಳು ಕುರುಡು, ಕ್ವಾಶಿಯಾರ್ಕರ್‌ಗಳಂತಹ ರೋಗಗಳಿಗೆ ಕೊರತೆಯೆ ಇಲ್ಲ. ದಡಾರ, ನಾಯಿಕೆಮ್ಮು, ಧನುರ್ವಾಯು, ಪೋಲಿಯೋಗಳಂತಹ ಸೋಂಕುರೋಗಗಳ ದಾಳಿಯಿಂದ ಪಾರಾಗುವುದು ಕಷ್ಟದ ಸಾಹಸವೆನಿಸುತ್ತದೆ. ಇವುಗಳಲ್ಲದೆ ನಡೆಯುವಾಗ, ಓಡಾಡುವಾಗ, ಕೆಲಸದಲ್ಲಿರುವಾಗ ಬಿದ್‌ಉದ, ಇಲ್ಲವೆ ಅಪಘಾತಕ್ಕೊಳಗಾಗಿ ಪೆಟ್ಟು ತಿಂದು ಹಾಸಿಗೆ ಹಿಡಿಯುವಂತಾಗುವುದೂ ಅಪರೂಪವಲ್ಲ. ವಯಸ್ಸಾದಂತೆ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡಗಳ ಬಳಲಿಕೆ, ಪುಪ್ಪುಸಗಳ ದಣಿಯುವಿಕೆ, ಹೃದಯದ ಆಯಾಸ, ಹೃದಯಾಘಾತ, ಮಿದುಳು ಸಂಬಂಧದ ಪಾರ್ಶ್ವವಾಯು, ಮೂಳೆ ಮೆತ್ತಗಾಗುವಿಕೆ, ಎಲುಗೀಲುರಿತ, ಹೀಗೆ ನೆನೆಯುತ್ತಾ ಹೋದಂತೆ ಗಾಬರಿಯಾಗುತ್ತದೆ. ಎದೆ ಝಲ್ ಎನ್ನುತ್ತದೆ. ಇಷ್ಟೆಲ್ಲ ತಾಪತ್ರಯಗಳಿದ್ದರೂ ಇಂದು ಮಾನವನು ಬದುಕುಳಿಯುವ ಸರಾಸರಿ ವಯಸ್ಸು ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಹೆಚ್ಚಾಗಿದೆ. ಹೆಚ್ಚುತ್ತಿದೆ. ಸುಮಾರು ೫೦ ವರ್ಷಗಳ ಹಿಂದೆ ಭಾರತ ದೇಶದ ಜನರ ಬದುಕುವ ಸರಾಸರಿ ೪೦ ವರ್ಷಗಳಿಗಿಂತ ಕಡಿಮೆಯಿತ್ತು. ಅದು ಒಂದು ೬೭ ವರ್ಷಕ್ಕೆ ಏರಿದೆ. ವೈದ್ಯವಿಜ್ಞಾನದ ಪ್ರಗತಿಯಿಂದಾಗ ಮಾನವ ದೀರ್ಘಕಾಲ ಆರೋಗ್ಯವಂತನಾಗಿ ಬದುಕುಳಿಯುವುದು ಸಾಧ್ಯವಾಗಿದೆ. ವಿಶ್ವ ಸಂಸ್ಥೆಯ ಹೇಳಿಕೆಯ ಪ್ರಕಾರ, ಆರೋಗ್ಯವೆಂದರೆ ಬರೀ ದೈಹಿಕವಾಗಿ ರೋಗಮುಕ್ತನಾಗಿರುವುದೆಂದು ಅಲ್ಲ. ಅದು ದೈಹಿಕವಾಗಿ ಮಾನಸಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಸ್ವಾಸ್ಥ್ಯದಿಂದಿರುವುದು. ದೈಹಿಕವಾಗಿದ್ದರೆ ಮಾನಸಿಕ ನೆಮ್ಮದಿ ಸಾಧ್ಯ. ಮಾನಸಿಕ ನೆಮ್ಮದಿಯಿಂದ ಸಾಮಾಜಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ತಿಳಿವಳಿಕೆ ಉಳ್ಳವರ ಸಂಖ್ಯೆ ಹೆಚ್ಚಾದಂತೆ ಧಾರ್ಮಿಕ ಅಸಹಿಷ್ಣುತೆ ಕಡಿಮೆಯಾಗುತ್ತದೆ. ಹೀಗೆ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ಆರೋಗ್ಯ ತಳಪಾಯ.

ದೈಹಿಕವಾಗಿ ಆರೋಗ್ಯವಂತರಾಗಿ ಉಳಿಯುವುದಕ್ಕಾಗಿ ರೋಗ ಬರದಂತೆ ತಡೆಗಟ್ಟುವುದು ಒಂದು ಉಪಾಯ. ರೋಗ ಬಂದನಂತರ ಚಿಕಿತ್ಸೆ ಪಡೆದು ರೋಗ ಮುಕ್ತರಾಗುವುದು ಇನ್ನೊಂದು ಸಾಧನೆ. ರೋಗದ ಕಾರಣ ಗೊತ್ತಾದರೆ ಅದನ್ನು ತಡೆಗಟ್ಟಬಹುದು. ಅಂತಹ ರೋಗಗಳನ್ನು ಸಮರ್ಥವಾಗಿ ಉಪಚರಿಸಬಹುದು. ಕೆಲವೊಮ್ಮೆ ರೋಗದ ಕಾರಣ ಗೊತ್ತಾದರೂ ಅದನ್ನು ತಡೆಗಟ್ಟುವುದು ಇಲ್ಲವೆ ಉಪಚರಿಸುವುದು ಕಷ್ಟವಾಗಬಹುದು.

ಸ್ಮಾಲ್ ಪಾಕ್ಸ್ ಅಂದರೆ ಸಿಡುಬು. ಇದು ವೈರಸ್‌ನಿಂದಾಗುವ ರೋಗ. ವೈರಸ್ ರೋಗಗಳಿಗೆ ಪರಿಣಾಮಕಾರಿಯಾದ ಔಷಧಗಳು ಇಲ್ಲ. ಆದರೆ ಇದನ್ನು ಲಸಿಕೆಯಿಂದ ರೋಗ ನಿರ್ನಾಮವಾಗುವಂತೆ ಆದದ್ದು ವಿಜ್ಞಾನದ ಮಹತ್ವರ ಸಾಧನೆಯಾಗಿದೆ. ಇಂದು ವಿಶ್ವದಲ್ಲಿ ಸಿಡುಬು ಇಲ್ಲ. ಅದು ಮತ್ತೇ ಕಾಣಿಸಿಕೊಳ್ಳುವ ಸಂಭವವೂ ಇಲ್ಲ. ಪೋಲಿಯೋ ಸಹ ವೈರಸ್‌ನಿಂದಾಗುವ ರೋಗ. ಎಳೆ ಮಕ್ಕಳಲ್ಲಿ ಸಾಂಕ್ರಾಮಿಕವಾಗಿ ಹರಡಿ ಅಂಗವಿಕಲತೆಯನ್ನುಂಟು ಮಾಡುತ್ತದೆ. ಪೋಲಿಯೋ ರೋಗ ಹರಡದಂತೆ ಮಾಡುವ ಲಸಿಕೆಗಳಿದೆ. ಇಂದು ಪಲ್ಸ್ ಪೋಲಿಯೋ ಪರಿಣಾಮಕಾರಿಯಾಗಿ ಕಾರ್ಯಗಳ ಮಾಡುತ್ತಿರುವುದರಿಂದ ಅದು (ಪೋಲಿಯೋ) ನೇಪಥ್ಯಕ್ಕೆ ಸರಿಯಬಹುದು.

ಪ್ಲೇಗ್, ಕಾಲರಾ, ಮಲೇರಿಯಾ, ಡೆಂಗ್ಯುಜ್ವರ, ಕ್ಷಯ, ಕುಷ್ಠಗಳಂತಹ ರೋಗಗಳನ್ನು ಇಂದು ವೈಜ್ಞಾನಿಕ ರೀತಿಯಲ್ಲಿ ಹರಡದಂತೆ ತಡೆಗಟ್ಟಬಹುದು. ರೋಗವನ್ನು ಉಪಚರಿಸಿ ಗುಣಮುಖಗೊಳಿಸುವುದು ಸಾಧ್ಯವಾಗಿದೆ. ಒತ್ತಡದ ಜೀವನದ ಇಂದಿನ ದಿನಗಳಲ್ಲಿ ಏರು ರಕ್ತದೊತ್ತಡ, ಮಧುಮೇಹ, ಹೃದಯಾಘಾತಗಳು ಹೆಚ್ಚಿಗೆ ಕಾಣಿಸಿಕೊಳ್ಳುತ್ತಿವೆ. ವಿಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ರೋಗದಿಂದ ನರಳುತ್ತಿರುವಾಗ ಆ ರೋಗ ಯಾವುದೆಂದು ಕಂಡುಕೊಂಡರೆ ಅದರ ಚಿಕಿತ್ಸೆ ಸರಳವಾಗುತ್ತದೆ. ರೋಗಿಯನ್ನು ಮಾತನಾಡಿಸಿ ರೋಗದ ಲಕ್ಷಣಗಳನ್ನು ಅವನ ಶಬ್ದಗಳಲ್ಲೇ ತಿಳಿದುಕೊಳ್ಳಬೇಕು. ನಂತರ ರೋಗಿಯನ್ನು ಪರೀಕ್ಷಿಸಬೇಕು. ಮುಟ್ಟಿ, ತಟ್ಟಿ, ಆಲಿಸಿ ರೋಗಿಯನ್ನು ಪರೀಕ್ಷಿಸುವುದಿದೆ. ನಂತರ ಪ್ರಯೋಗಾಲಯದ ಪರೀಕ್ಷೆಗಳನ್ನು ಮಾಡಿಸಬೇಕು. ರಕ್ತ, ಮೂತ್ರ, ಮಲ, ಕಫಗಳನ್ನು ಪ್ರಯೋಗಾಲಯದ ಪರೀಕ್ಷೆಗೊಳಪಡಿಸಬೇಕಾಗಬಹುದು. ರೋಗಕ್ಕೊಳಗಾದ ಭಾಗದ ಎಕ್ಸ್‌ರೇ ಚಿತ್ರ ತೆಗೆಯಿಸಿ ಪರಿವೀಕ್ಷಿಸಬೇಕು. ಕೆಲವು ವಿಶೇಷ ಸಂದರ್ಭಗಳಲ್ಲಿ ನಿಖರವಾಗಿ ನ್ಯೂನತೆ ತೋರಿಸುವ ಎಂ.ಆರ್.ಐ. ಅಂದರೆ ಮ್ಯಾಗ್ನೆಟಿಕ್ ರಿಸೋನೆನ್ಸ್ ಇಮೇಜಿಂಗ್ (ಕಾಂತೀಯ ಅನುಕರಣೀಯ ಪ್ರತಿಬಿಂಬ) ಮಾಡಿಸಿ ನೋಡಬೇಕಾಗುತ್ತದೆ. ಟಿ.ವಿ. ಎಕ್ಸರೇಯೆಂದೇ ಜನಸಾಮಾನ್ಯರಲ್ಲಿ ಪ್ರಚಲಿತವಿರುವ ಅಲ್ಟ್ರಾಸೌಂಡ್ (ಶ್ರವಣಾತೀತ) ಪರೀಕ್ಷೆ ಮಾಡಿ ಒಳಾಂಗಗಳ ಸ್ಥಿತಿಗತಿ ತಿಳಿದುಕೊಳ್ಳಬಹುದು. ಅನಿವಾರ್ಯವಾದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ರೋಗಗ್ರಸ್ಥ ಊತಕ (ಅಂಗಾಂಶ) ಕೊಯ್ತೆಗೆದು ಅದನ್ನು ಸೂಕ್ಷ್ಮದರ್ಶಕ ಪರೀಕ್ಷೆಗೊಳಪಡಿಸಿ ರೋಗವನ್ನು ನಿಶ್ಚಿತವಾಗಿ ಗುರುತಿಸಬಹುದು.

ಹೀಗೆ ವೈಜ್ಞಾನಿಕವಾಗಿ ರೋಗಗಳನ್ನು ಗುರುತಿಸುವಲ್ಲಿ ಉಪಚರಿಸುವಲ್ಲಿ ಹಾಗೂ ತಡೆಗಟ್ಟುವಲ್ಲಿ ಸಾಕಷ್ಟು ಯಶಸ್ಸು ಸಿಕ್ಕಿದೆ. ಅನೇಕ ಶತ ಶತಮಾನಗಳಿಂದ ಮನೆಮಾಡಿಕೊಂಡಿದ್ದ ಮೂಢನಂಬಿಕೆಗಳು ಕ್ರೂರ ಆಚರಣೆಗಳು, ಅನಾವಶ್ಯಕ ಪದ್ಧತಿಗಳು ಅಕ್ಷರತೆಯ ಪ್ರಬಲ ಅಸ್ತ್ರದಿಂದ ಮಾಯವಾಗಿವೆ. ಮಾಯವಾಗುತ್ತಿವೆ.

ಒಬ್ಬ ವ್ಯಕ್ತಿ ರೋಗಮುಕ್ತನಾಗಿರಬೇಕಾದರೆ ಆತನಿಗೆ ಆರೋಗ್ಯದ ತಿಳಿವಳಿಕೆ ಇರಬೇಕು. ಸ್ವಚ್ಛತೆಯ ಮಹತ್ವ ಅರಿತಿರಬೇಕು. ಆಹಾರದ ಪೌಷ್ಠಿಕಾಂಶದ ಕಾಳಜಿ ವಹಿಸಬೇಕು. ತಂಬಾಕು, ಮದ್ಯ, ವ್ಯಭಿಚಾರಗಳಂತಹ ದುರಭ್ಯಾಸಗಳಿಂದ ಮುಕ್ತನಾಗಿರಬೇಕು. ನಿಯಮಿತ ವ್ಯಾಯಾಮದ ಮಹತ್ವಕ್ಕೆ ಬೆಲೆ ಕೊಡಬೇಕು. ದುಡಿದು ಆರ್ಥಿಕ ಸ್ವಾವಲಂಬನೆ ಪಡೆದಿರಬೇಕು. ದಣಿದ ಶರೀರಕ್ಕೆ ತಕ್ಕ ವಿಶ್ರಾಂತಿಯ ಅವಶ್ಯಕತೆ ಇರುವುದನ್ನು ಮನಗಂಡಿರಬೇಕು. ಹೀಗಿದ್ದಾಗ ಸಹಜವಾಗಿಯೇ ವ್ಯಕ್ತಿಯಾಗಲಿ, ಕುಟುಂಬವಾಗಲಿ ಇಲ್ಲವೆ ಸಮಾಜವಾಗಲಿ ರೋಗಮುಕ್ತವಾಗಿರಲು ಸಾಧ್ಯ.

ವೈದ್ಯಸಾಹಿತಿಯಾಗಿನನ್ನಅನುಭವ
ಬರೆಯುವುದು ನನಗೆ ಆನಂದ ನೀಡಿದೆ
– ಡಾ|| ಎಸ್.ಎಸ್. ಪಾಟೀಲನಾನು ಆಸ್ತಿ ತಜ್ಞ. ಕರ್ನಾಟಕದ ಸರಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ವಿಭಾಗದಲ್ಲಿ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವೆ. ಜಿಲ್ಲಾ ಆಸ್ಪತ್ರೆ ಗುಲಬರ್ಗಾದಲ್ಲಿ ಬಹಳ ವರ್ಷ ಕೆಲಸ ಮಾಡಿದ್ದೇನೆ. ಪ್ರೌಢಶಾಲೆಯಲ್ಲಿರುವಾಗ ಕಥೆ ಕಾದಂಬರಿಗಳನ್ನು ಓದುತ್ತಿದ್ದೆ. ವೈದ್ಯಕೀಯ ಶಿಕ್ಷಣದ ಸಮಯದಲ್ಲಿ ಪಠ್ಯೇತರ ಓದು ನಿಂತಿತ್ತು. ಸೇವೆಯ ಪ್ರಾರಂಭದ ದಿನಗಳಲ್ಲೂ ಓದುವುದು ಆಗುತ್ತಿರಲಿಲ್ಲ. ನಿಜಗುಣ ಶಿವಯೋಗಿಗಳ ಹಾಗೂ ಸಿದ್ಧಾರೂಢರ ದಟ್ಟ ಪ್ರಭಾವದ ಪರಿಸರದಲ್ಲಿ ಬೆಳೆದ ನನಗೆ ಬಸವಾದಿ ಶರಣರ ಸಾಹಿತ್ಯದಲ್ಲಿಯೂ ಅಪಾರ ಆಸಕ್ತಿ ಇದೆ.

ಗುಲಬರ್ಗಾದ ಕುಷ್ಠ ರೋಗ ಮರುವಸತಿ ಕೇಂದ್ರಕ್ಕೆ ವರ್ಗಾವಣೆಯಾದಾಗ ನನಗೆ ಸುಮಾರು ನಲವತ್ತೈದು ವರ್ಷ ವಯಸ್ಸು. ಅಲ್ಲಿ ಕೈತುಂಬ ಕೆಲಸವಿರಲಿಲ್ಲ. ಓದುವುದಕ್ಕೆ ಸಾಕಷ್ಟು ಸಮಯ ಸಿಕ್ಕಿತು. ಬರೆಯುವ ಹಂಬಲವೂ ಅಂಕುರಿಸಿತು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ‘ಎಲುಬು ಕೀಲುಗಳ ಪರಿಚಯ’ ಪುಸ್ತಕ (೧೯೯೪) ಪ್ರಕಟವಾಯಿತು. ೧೯೯೬ ರಲ್ಲಿ ‘ಅರವತ್ಮೂರು ಪುರಾತನರ ಪರಿಚಯ’ ವೆಂಬ ಪುಸ್ತಕ ಪ್ರಕಟಿಸಿದೆ. ಹಿರಿಯರಾದ ಡಾ| ಎಂಎ.ಸ್. ಲಠ್ಠೆಯವರ ಪ್ರೋತ್ಸಾಹದಿಂದ ಪ್ರಕಟಣೆಯ ಸಾಹಸಕ್ಕಿಳಿದೆ. ನಂತರ ವೈದ್ಯಕೀಯ ವಿಷಯಗಳನ್ನು ವಚನ ರೂಪದಲ್ಲಿ ಬರೆದೆ. ನಾಲ್ಕರಲ್ಲಿ ಮೂರನ್ನು ನಾನೇ ಪ್ರಕಟಿಸಿದೆ. ಕಥೆ ಕಾದಂಬರಿಗಳಂತೆ ವೈದ್ಯ ವಿಷಯ ಬರೆದದ್ದು ಅನ್ಯ ಪ್ರಕಾಶನಗಳಿಂದ ಪ್ರಕಟಗೊಂಡವು. ಇಲ್ಲಿಯವರೆಗೆ ಹನ್ನೆರಡು ಕೃತಿಗಳನ್ನು ರಚಿಸಿರುವೆ. ಸ್ವಸಂತೋಷಕ್ಕಾಗಿ ಬರೆದಿದ್ದೇನೆ. ಬರೆಯುವದನ್ನು ಆನಂದಿಸಿದ್ದೇನೆ. ಸ್ವಂತ ಪ್ರಕಟಣೆಯಿಂದ ಆರ್ಥಿಕ ತೊಂದರೆಯಾಗಿಲ್ಲ. ಆದರೆ ಮಾರಾಟದ ಕಷ್ಟ ಅನುಭವಿಸಿದ್ದೇನೆ. ಸ್ವಲ್ಪ ಬರೆದುದಕ್ಕೆ ಸಾಹಿತಿಯೆಂಬ ಪಟ್ಟ ಪಡೆದು ಸಮಾಜದಲ್ಲಿ ಗುರುತಿಸಿಕೊಂಡ ಸಂತಸವಿದೆ, ಹೆಮ್ಮೆ ಇದೆ.

* * *