ಇದು ನಿಮ್ಮ ನಿರ್ಣಯಕ್ಕೆ ಬಿಟ್ಟ ವಿಷಯ. ಯಾವ ಕಾರಣವನ್ನೇ ಕೊಡಿ ಇಲ್ಲವೇ ಬಿಡಿ. ಆದರೆ ಬೇಗನೆ ನಿರ್ಣಯಿಸಿ. ಬೇಗನೆ ಸಾಯಬೇಕೆಂದು ನಿರ್ಣಯಿಸಿದರೆ, ಕೆಳಗೆ ಸೂಚಿಸಿದಂತೆ ಮಾಡಿ. ನೀವು ನಿಜವಾಗಿಯೂ ಬೇಗನೆ ಸಾಯುವಿರಿ. ಸೂಚಿಸುತ್ತಿರುವ ಸಲಹೆಗಳೂ ಹೊಸದೇನೂ ಅಲ್ಲ. ನೀವೂ ಈಗಾಗಲೇ ಪಾಲಿಸುತ್ತಲೂ ಇರಬಹುದು.

ಒಂದನೆಯದು ಅಮಿತ, ಅಕಾಲ ಆಹಾರ ಸೇವನೆ. ಭಾರತೀಯರು ಜಾಣರು. ಅವರು ಉತ್ತಮ ಆಹಾರ ಪದ್ಧತಿಗಳನ್ನು ರೂಢಿಯಲ್ಲಿ ತಂದಿದ್ದರು. ಈ ರೂಢಿಗಳ ಪೂರ್ವಜರು ಅನುಭವದ ಆಧಾರದ ಮೇಲೆ ನಿಂತಿವೆ. ಆಹಾರದಲ್ಲಿ ಭಾರತೀಯರು ಇಡೀ ಕಾಳು, ದ್ವಿದಳಧಾನ್ಯ, ಮೊಳಕೆಯೊಡೆದ ಕಾಳು, ತಾಜಾ ಕಾಯಿಪಲ್ಲೆ, ಹಣ್ಣುಗಳನ್ನು ಬಳಸುತ್ತಿದ್ದರು. ಹಾಲು ಮೊಸರುಗಳನ್ನು ಉಣ್ಣುತ್ತಿದ್ದರು. ತೌಡು ಕೂಡಿದ ಹಿಟ್ಟಿನಿಂದ ಮಾಡಿದ ರೊಟ್ಟಿ, ಚಪಾತಿ, ಮುದ್ದೆಗಳನ್ನು ಮಾಡಿ ತಂಗಳಾಗುವಷ್ಟರಲ್ಲಿ ತಿಂದು ಮುಗಿಸುತ್ತಿದ್ದರು. ಸಿಹಿ ಅಡುಗೆಯನ್ನು ಕೇವಲ ತಿಂಗಳಿಗೆ ಒಂದು ಸಲ ಇಲ್ಲವೆ ಹಬ್ಬದ ದಿನಗಳಲ್ಲಿ ಮಾಡುತ್ತಿದ್ದರು. ಮಾಂಸಾಹಾರ, ತತ್ತಿ ತಿನ್ನುವುದರಲ್ಲಿ ನಿರಾಸಕ್ತರಾಗಿದ್ದರು ಎಂದೇ ಅವರು ದೀರ್ಘಕಾಲ ಬಾಳುತ್ತಿದ್ದರು. ನಿಮ್ಮ ಆಶೆ ಬೇಗನೆ ಸಾಯಬೇಕೆಂದಿರುವಾಗ ಭಾರತೀಯ ಆಹಾರ ಪದ್ಧತಿ ಒಳ್ಳೆಯದಲ್ಲ. ಇದನ್ನು ತ್ಯಜಿಸಿ ಪಾಶ್ಚಿಮಾತ್ಯ ಆಹಾರ ಪದ್ಧತಿ ಪ್ರಾರಂಭಿಸಬೇಕು. ಬಿಳಿ ಮೆದು ಬ್ರೆಡ್ಡು, ಬಿಸ್ಕೆಟ್‌ಗಳು, ಜಾಮ್, ಚಾಕಲೇಟ್, ಸಾಸ್ ಮುಂತಾದ ತೌಡುರಹಿತ ಪದಾರ್ಥಗಳನ್ನು ಮಾತ್ರ ತಿನ್ನಿರಿ. ಇದರಿಂದ ನಿಮಗೆ ಮಲಬದ್ಧತೆ ಕಾಣುವುದು. ಮುಂದೆ ಕರುಳಿನ ಕ್ಯಾನ್ಸರ್ ಬರುವುದು. ಅಪೆಂಡಿಕ್ಸ್‌ನಲ್ಲಿ ಕರುಳಿನಲ್ಲಿ ಉರಿಯಾತನೆ ಶುರುವಾಗುವುದು. ಈ ನವೀನ ಕ್ರಮ ಇನ್ನೂ ಹಲವಾರು ತೊಂದರೆಗಳನ್ನು ತರುವುದು. ಅಂದರೆ ನೀವು ಮರಣದ ಸಮೀಪ ಬರುತ್ತೀರಿ.

ಆಹಾರದಲ್ಲಿ ಸಕ್ಕರೆ ಹೆಚ್ಚಿದಷ್ಟು ದೇಹಕ್ಕೆ ಹಾನಿ. ದೀರ್ಘಕಾಲ ಬದುಕಬೇಕೆನ್ನುವವರು ಸಕ್ಕರೆ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕು. ಸಕ್ಕರೆಗೆ ಬಿಳಿ ಬಣ್ಣದ ಸವಿ ರುಚಿಯ ವಿಷ ಎನ್ನುವರು. ನಾವು ಬೇಗನೆ ಸಾಯಬೇಕಾದರೆ ಸಕ್ಕರೆಯನ್ನು ಬಹಳ ತಿನ್ನಬೇಕು. ದಿನಾಲು ೨೫ ರಿಂದ ೩೦ ಚಮಚೆಯಷ್ಟು ತಿನ್ನಬೇಕು. ಈಗಂತೂ ಮಿಠಾಯಿ ಅಂಗಡಿ ಪ್ರತಿ ಗಲ್ಲಿಗೂ ಇದೆ. ಹಣ ಕೊಟ್ಟರೆ ಮನೆಗೆ ತಂದು ಸುರಿಯುವರು. ತಿನ್ನಿರಿ ಬಹಳ ತಿನ್ನಿರಿ. ಅಂದರೆ ಸಾಯುವಿರಿ. ಮಿಠಾಯಿಗಳಲ್ಲಿ ಹಳದಿ, ಹಸುರು ವರ್ಣ ಕೂಡಿಸಿದ ವಸ್ತುಗಳನ್ನು ಆರಿಸಿ ತಿನ್ನಿ. ಇದರಿಂದ ದೇಹದಲ್ಲಿ ಮೆಟಾನಿಲ್ ಎಲ್ಲೋ (ಹಳದಿ) ಎಂಬ ವಿಷಯವೂ ಸೇರುವುದು. ಈ ವಿಷಯ ಮೂತ್ರಪಿಂಡದ ಕ್ಯಾನ್ಸರ್ ತರುವುದು. ಸಿಕ್ಕಾಪಟ್ಟೆ ಸಕ್ಕರೆ ತಿಂದರೆ ಮಧುಮೇಹ ಬೇಗನೆ ಬರುವುದು. ಮಧುಮೇಹ ಅಂದರೆ ಸಕ್ಕರೆ ರೋಗ ಬಂದರೆ ಮರಣದ ದಿಬ್ಬಣ ಬಂದಂತೆ. ಅದರೊಡನೆ ಹಲವಾರು ತೊಂದರೆಗಳು ಬರುತ್ತವೆ. ನಿಮ್ಮ ಪ್ರಯತ್ನ ಫಲಿಸಿದಂತೆಯೇ!

ಮಿಠಾಯಿಗಳನ್ನು ಬಹಳ ತಿನ್ನಬೇಕಾದರೆ ಕೇವಲ ಸಿಹಿ ತಿಂದರೆ ಸಾಲದು. ರುಚಿಗಾಗಿ ಕರಿದ ಪದಾರ್ಥಗಳನ್ನು ನಡು ನಡುವೆ ತಿಂದರೆ ಇನ್ನೂ ಒಳ್ಳೆಯದು ಹಾಗೂ ರುಚಿಯೂ ಹೌದು. ಕರಿದ ಪದಾರ್ಥಗಳಲ್ಲಿ ಪರ್ಯಾಪ್ತ ನೆಣ ಇರುವುದು. ಇದರಿಂದ ನಿಮ್ಮ ರಕ್ತದಲ್ಲಿ ಕೊಲೆಸ್ಟೆರಾಲ್ ಹೆಚ್ಚಾಗುವುದು. ಅದು ನೇರವಾಗಿ ರಾಮಬಾಣದಂತೆ ನಿಮ್ಮ ರಕ್ತವಾಹಿನಿಗಳ ಭಿತ್ತಿಯಲ್ಲಿ ಕೂಡುವುದು. ರಕ್ತವಾಹಿನಿಗಳನ್ನು ಬಿರುಸಾಗಿಸುವುದು ಮತ್ತು ಅವುಗಳ ನಾಳ ರಂದ್ರಗಳು ಕಿರಿದಾಗುವಂತೆ ಮಾಡುವುದು. ಇದರಿಂದ ನಿಮ್ಮ ರಕ್ತದ ಒತ್ತಡ ಹೆಚ್ಚುತ್ತದೆ ಹಾಗೂ ಹೃದಯ ಕ್ಷೀಣಿಸುತ್ತದೆ. ಕಾರಣ ನೀವು ಇನ್ನೂ ಯುವಕರಿರುವಾಗಲೇ ಹೃದಯಾಘಾತವಾಗಿ ತಕ್ಷಣ ಮರಣ ಹೊಂದಬಹುದು. ಸಸ್ಯಜನ್ಯ ಎಣ್ಣೆಗಿಂತ ಪ್ರಾಣಿಜನ್ಯ ಕೊಬ್ಬು ದೇಹಕ್ಕೆ ಹೆಚ್ಚು ಹಾನಿಕರ. ಪ್ರಾಣಿಯ ಮಾಂಸದಲ್ಲಿ ಇದು ಜಾಸ್ತಿ. ಮಾಂಸಾಹಾರಿ ಆದರೆ ಬೇಗನೆ ಸಾಯಬೇಕೆನ್ನುವವರಿಗೆ ಇನ್ನೂ ಒಳ್ಳೆಯದು. ತತ್ತಿಗಳ ಬಗ್ಗೆ ಒಂದೆರಡು ಮಾತು ಹೇಳುವೆನು. ತತ್ತಿಯ ಬೆಲೆ ಹೆಚ್ಚು. ಪೌಷ್ಟಿಕತೆಯಲ್ಲಿ ಅದು ಧಾನ್ಯ, ಮೊಳಕೆ ಕಾಳು, ಹಣ್ಣುಗಳಿಗಿಂತ ಕಡಿಮೆ. ಆದರೂ ತತ್ತಿ ತಿನ್ನಿರೆಂದು ಹೇಳುವ ಸಂಸ್ಥೆಗಳು ಹುಟ್ಟಿವೆ. ತತ್ತಿಯನ್ನು ಸಸ್ಯಾಹಾರವೆಂದೇ ಹೇಳುವರು. ನಿಜವಾಗಿ ನೋಡಿದರೆ ಸಸ್ಯಾಹಾರವೆಂದು ಹೇಳಲ್ಪಡುವ ತತ್ತಿ ಗರ್ಭಸ್ರಾವವಾದ ಮೃತ ಭ್ರೂಣ. ಇರಲಿ, ತತ್ತಿಯಲ್ಲಿರುವ ಪ್ರೋಟೀನ್ ಪಚನಕ್ಕೆ ಹಗುರವಾದುದೇನಲ್ಲ. ಬಿಳಿ ಭಾಗದ ಲೋಳೆಯಲ್ಲಿ ಸುಮಾರು ೩೦ ರಿಂದ ೫೦ ರಷ್ಟು ಪಚನವಾಗದೇ ಮಲದಲ್ಲಿ ವಿಸರ್ಜಿಸಲ್ಪಡುತ್ತದೆ. ಹಳದಿ ಭಾಗದ ತತ್ತಿ ಕೊಲೆಸ್ಟೆರಾಲ್‌ನ ಕೆನೆ ಎಂದೇ ವರ್ಣಿಸಬೇಕು. ರಕ್ತದಲ್ಲಿ ಇದು ಹೆಚ್ಚಾದಂತೆ ನಿಮಗೆ ಮರಣ ಸಮೀಪಿಸಿದಂತೆಯೇ. ತಿನ್ನುವ ಕಾರ್ಯ ಸದಾಕಾಲ ನಡೆದೇ ಇರಬೇಕು. ಹೊತ್ತುಗೊತ್ತಿಲ್ಲದೇ ತಿನ್ನುತ್ತಿರಬೇಕು. ಭಾರತೀಯ ಯುವಕರು ಪ್ರತಿಶತ ೨೫ರಷ್ಟು ಜನ ಗರ್ಭಿಣಿಯರೆಂದು ವದಂತಿ! ಈ ಬಸಿರು ಕೂಸಿನ ಬಸಿರಲ್ಲ. ಹೊಟ್ಟೆಯ ಒಳ ಹೊರಗೆ ನೆಣವನ್ನು ಮುದ್ದೆಯಾಗಿ ಶೇಖರಿಸಿರುತ್ತಾರೆ. ಇದು ಬೇಗನೆ ಸಾಯುವವರಿಗೆ ಒಳ್ಳೆಯದೇ. ಇದರಿಂದ ರಕ್ತದಲ್ಲಿ ಕೊಲೆಸ್ಟೆರಾಲ್ ಸದಾಕಾಲ ಮಹಾಪೂರದಲ್ಲೇ ಇರುತ್ತದೆ. ಹೊಟ್ಟೆ ಜೋತಾಡುವ ಹಾಗೆ ತಿನ್ನಿರಿ.

ಎರಡನೆಯ ಕಾರ್ಯವೆಂದರೆ, ನೀವು ಕೆಲವು ಚಟಗಳನ್ನು ಪೋಷಿಸಬೇಕು. ಇವು ಬೇಗ ಸಾಯಲು ವರಗಳಿದ್ದಂತೆ. ಒಂದೊಂದನ್ನೇ ತೆಗೆದುಕೊಳ್ಳೋಣ. ತಂಬಾಕು ಸೇದುವಿಕೆ ಮೊದಲನೆಯದು. ಇದು ರಕ್ತದೊತ್ತಡ ಹೆಚ್ಚಿಸುವುದು. ರಕ್ತವಾಹಿನಿಗಳನ್ನು ಬಿಡುಸಾಗಿಸುವುದು. ಮನೆಯಲ್ಲಿ ಮಕ್ಕಳ ಸಮೀಪ, ಗರ್ಭಿಣಿಯರ ಸಮೀಪ ತಂಬಾಕು ಹೊಗೆ ಬಿಟ್ಟರೆ ನಿಮ್ಮೊಡನೆ ಅವರೂ ಮರಣದ ಸಮೀಪಕ್ಕೆ ಬರುವರು. ಬಸ್ಸು, ರೈಲ್ವೆ, ನಾಟಕ, ಥೇಟರ್ ಮೊದಲಾದ ಸ್ಥಳಗಳು ಪರರನ್ನೂ ತೊಂದರೆಯಲ್ಲಿ ಸಿಗಿಸಲುಉತ್ತಮ. ತಂಬಾಕು ಕ್ಯಾನ್ಸರ್ ತರುವುದು, ರಕ್ತದ ಒತ್ತಡ ಹೆಚ್ಚಿಸುವುದು, ಹೃದಯ ಕ್ಷೀಣವಾಗುವಂತೆ ಮಾಡುವುದು. ಇನ್ನೇನು ಬೇಕು?

ಮತ್ತೊಂದು ಚಟವೆಂದರೆ ಸೆರೆ ಕುಡಿಯುವುದು. ಇದನ್ನೂ ಮಿತಿಮೀರಿ ಮಾಡಿದರೆ ಮರಣ ಇನ್ನೂ ಸಮೀಪ. ಯಕೃತ್ತಿನ ಸಿರೋಸಿಸ್, ಯಕೃತ್ತಿನ ಕ್ಯಾನ್ಸರ್, ಬೇರೆ ಕಡೆಗಳಲ್ಲಿ ಕ್ಯಾನ್ಸರ್ ಹುಟ್ಟುವವು. ಇವೆಲ್ಲವುಗಳೊಡನೆ ನೀವು ಚಿಂತಾಮಗ್ನರಾಗಿರಲೂ ಬೇಕು. ರಾತ್ರಿ ವಿಶ್ರಾಂತಿ ಸಿಗದಂತೆ ಚಡಪಡಿಸುತ್ತ ಇರಬೇಕು. ನಿದ್ರೆ ಬರದಿದ್ದರೆ ಸೇದಬೇಕು. ಕುಡಿಯಬೇಕು. ತಿನ್ನುತ್ತಿರಬೇಕು. ಆಗ ಮರಣ ಬೇಗನೆ ದರ್ಶನ ಕೊಟ್ಟೇ ಕೊಡುವುದು.

ಮೂರನೆಯ ಉಪಾಯವೆಂದರೆ, ದೈಹಿಕ ಶ್ರಮ ಕಡಿಮೆ ಮಾಡಬೇಕು. ವಾಯುವಿಹಾರ, ಆಟಪಾಟ, ಆಸನ, ವ್ಯಾಯಾಮಗಳಲ್ಲಿ ಆಸಕ್ತಿ ವಹಿಸಬಾರದು. ಸ್ವಲ್ಪ ಅಂತರದ ಸ್ಥಳಕ್ಕೆ ಹೋಗಬೇಕಾದರೂ ನಡೆಯಕೂಡದು, ಪಾದರಕ್ಷೆಗಳು ಸವೆಯಬಾರದು. ವಾಹನಗಳಲ್ಲೇ ಸುತ್ತಬೇಕು.

ಈ ಉಪಾಯಗಳು ನಿಮ್ಮನ್ನು ಯಾವಾಗಲೂ ಸಂತೋಷದಲ್ಲಿರಿಸುತ್ತವೆ. ನಿಮ್ಮ ಪ್ರತಿಷ್ಠೆ ಹೆಚ್ಚಿಸುತ್ತವೆ. ಇವನ್ನು ಪಾಲಿಸಲು ಸರ್ಕಾರಗಳು ಬೆಂಬಲ ನೀಡುತ್ತವೆ. ಯಾರೂ ನಿಮ್ಮನ್ನು ಸಂಶಯದಿಂದ ನೋಡುವುದಿಲ್ಲ. ಆದರೂ ಇವು ಆತ್ಮಹತ್ಯೆಯ ಉಪಾಯಗಳೇ ಸರಿ. ಬೇಗನೆ ನಿಶ್ಚಯಿಸಿ.

* * *