ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯ ಸಮಪರ್ಕವಾಗಿಲ್ಲದಿದ್ದರೆ, ಅಂತಹವನ್ನು ಅತ್ಯಾಧುನಿಕ ಸೌಲಭ್ಯವುಳ್ಳ, ವಿಶೇಷ, ಸತತ ವೈದ್ಯಕೀಯ ಆಶ್ರಯದಲ್ಲಿರಿಸಬೇಕಾಗುತ್ತದೆ. ಅಂತಹ ವಿಶೇಷ ಸವಲತ್ತು ಸೌಲಭ್ಯಗಳುಳ್ಳ ಸುರಕ್ಷಾ ಸ್ಥಳವೇ ತೀವ್ರಘಟಕ (ಐ.ಸಿ.ಯು). ಇಲ್ಲಿ ಶಸ್ತ್ರಚಿಕಿತ್ಸೆಯಾದವರನ್ನಲ್ಲದೆ ಹಾವು ಕಚ್ಚಿರುವವರು, ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಾಪಾಯದ ಅಂಚಿನಲ್ಲಿರುವರು ಮುಂತಾದ ವ್ಯಕ್ತಿಗಳು, ಅಂದರೆ ಬದುಕು ಸಾವಿನೊಡನೆಹೋರಾಟ ನಡೆಸುತ್ತಿರುವ ವ್ಯಕ್ತಿಗಳ ವಿಶೇಷ ಆರೈಕೆ ಪವಿತ್ರಾಲಯವೇ ‘ತೀವ್ರ ಆರೈಕೆ ನಿಗಾ ಘಟಕ’.

ಘಟಕದ ವ್ಯವಸ್ಥೆ: ಈ ಘಟಕವು ಆಸ್ಪತ್ರೆಯ ಪ್ರಮುಖ ಪ್ರಶಾಂತ ಸ್ಥಳದಲ್ಲಿರುತ್ತದೆ. ಸಾಮಾನ್ಯವಾಗಿ ವೃತ್ತಾಕಾರವಾಗಿದ್ದು, ಅದರ ಮಧ್ಯದಲ್ಲಿ ಪರಿಣಿತ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ದಿನದ ೨೪ ಗಂಟೆ ಹಾಗೂ ವರ್ಷದ ೩೬೫ ದಿನವೂ ನುರಿತ ವೈದ್ಯಕೀಯ ಸಿಬ್ಬಂಧಿಯು ಆ ಘಟಕದಲ್ಲಿರುವ ಎಲ್ಲ ರೋಗಿಗಳ ಕಡೆ ತೀವ್ರ ನಿಗಾ ವಹಿಸುತ್ತಿದ್ದು, ಅವಶ್ಯವೆನಿಸುವ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸುತ್ತಾರೆ.

ರೋಗಿಗಳಿಗೆ ದೊರೆಯುವ ಸೌಲಭ್ಯ: ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಕೊಠಡಿ ಅಥವಾ ವಿಭಜನೆ ಇರುತ್ತದೆ. ಆಮ್ಲಜನಕ ಅವಶ್ಯಕತೆ ಎಷ್ಟಿದ್ದರೂ ಸಹ ಪೂರೈಸಬಲ್ಲ ಪೈಪ್‌ಲೈನ್ ವ್ಯವಸ್ಥೆ ಇರುತ್ತದೆ. ಇ.ಸಿ.ಜಿ. ರಕ್ತದೊತ್ತಡ, ನಾಡಿಬಡಿತ ಮುಂತಾದವುಗಳನ್ನೆಲ್ಲಾ ತಿಳಿಸುವ (ದಾಖಲಿಸುವ) ಅತ್ಯಾಧುನಿಕ ಉಪಕರಣ (ಮಾನಿಟರ್)ಗಳು ಪ್ರತಿ ರೋಗಿಯ ಬಳಿಯೂ ಇರುತ್ತದೆ. ಅವಶ್ಯಕತೆ  ಬೀಳಬಹುದಾದ ಎಲ್ಲಾ ಬಗೆಯ ಔಷಧಿಗಳು, ಕೃತಕ ಉಸಿರಾಟದ ಉಪಕರಣ (ವೆಂಟಿಲೇಟರ್)ವೆ ಗಾಳಿ ಹೀರುವ ಯಂತ್ರ (ಸಕ್ಷನ್ ಅಪರೇಟಸ್) ದೂರವಾಣಿ ಮುಂತಾದ ಅವಶ್ಯಕ ಉಪಕರಣಗಳೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ಆ ಘಟಕದಲ್ಲಿರುತ್ತವೆ. ಯಾವ ರೋಗಿಗೂ, ಯಾವ ಬಗೆಯ ಕೊರತೆಯೂ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಸಾಧ್ಯವಾದಷ್ಟು ಅತ್ಯಾಧುನಿಕ ಉಪಕರಣಗಳು, ಪರಿಣಿತ ವೈದ್ಯಕೀಯ ಸಿಬ್ಬಂದಿ ರೋಗಿಯ ಸೇವೆಗೆ ಸನ್ನದ್ಧವಾಗಿರುತ್ತಾರೆ.

ಈ ಘಟಕದಲ್ಲಿರುವ ರೋಗಿಗಳಿಗೆ ನಂಜಿನಿಂದ ರಕ್ಷಿಸುವಲ್ಲಿ ಸಕಲ ವಿಧವಾದ ವ್ಯವಸ್ಥೆಗಳನ್ನು ಮಾಡಿರುವುದರ ಜೊತೆಗೆ ಸಂದರ್ಶಕರನ್ನು ಬಹಳ ಮಟ್ಟಿಗೆ ನಿಯಂತ್ರಿಸಲಾಗುತ್ತದೆ. ಈ ರೀತಿಯ ವ್ಯವಸ್ಥೆಯ ಮೂಲಕ ಆಸ್ಪತ್ರೆಯ ಸಿಬ್ಬಂದಿ ಕೆಲವೊಮ್ಮೆ ಸಾರ್ವಜನಿಕರ (ರೋಗಿಯ ಸಂಬಂಧಿಕರ) ಕೋಪಕ್ಕೂ ಸಹ ಬಲಿಯಾಗಬೇಕಾಗುತ್ತದೆ. ಜನರು ಸಹಕರಿಸಿದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಈ ಘಟಕದ ಒಳಗಡೆ ಹೋಗಲೇಬೇಕಾದವರು, ತಮ್ಮ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟು, ದೇವಾಲಯ ಪ್ರವೇಶಿಸಿದಂತೆ ಹೋಗಬೇಕು. ಅನಾವಶ್ಯಕವಾಗಿ ರೋಗಿಗಳಿಗೆ ಶ್ರಮ ಕೊಡಬಾರದೆಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿದೆ.

ರೋಗಿಯು ಒಮ್ಮೆ ಚೇತರಿಸಿಕೊಂಡ ನಂತರ, ಅವರನ್ನು ಬೇರೆ ವಾರ್ಡಿಗೆ ವರ್ಗಾಯಿಸಿ ತೀವ್ರ ಆರೈಕೆ ನಿಗಾ ಘಟಕದ ಮಂಚವನ್ನು ಆಗಮಿಸಬಹುದಾದ ರೋಗಿಗಳ ಸೇವೆಗೆ ಮೀಸಲಾಗಿಡಲಾಗುತ್ತದೆ.

ಘಟಕದ ಮೇಲ್ವಿಚಾರಣೆ: ಐ.ಸಿ.ಯು. ಸಾಮಾನ್ಯವಾಗಿ ಅರಿವಳಿಕೆ ತಜ್ಞರ ಮೇಲ್ವಿಚಾರಣೆಯಲ್ಲಿರುತ್ತದೆ. ಶಸ್ತ್ರ ಚಿಕಿತ್ಸೋತ್ತರ ಹಾಗೂ ಇತರ ವಿಧವಾದ ಉಸಿರಾಟದ ತೊಂದರೆಗಳಿಗೆ ಅರಿವಳಿಕೆ ತಜ್ಞರೇ ಪ್ರಮುಖ ಚಿಕಿತ್ಸಕರು. ಅವಶ್ಯವೆನಿಸಿದರೆ ಇತರ ತಜ್ಞರೂ ಸಹ ಬಂದು ತಮ್ಮ ಸಲಹೆ ಸೇವೆಗಳನ್ನು ನಿಡುತ್ತಾರೆ.

ತೀವ್ರ ಹೃದಯ ಆರೈಕಾ ಘಟಕ (ಇಂಟಿನ್ಸೀವ್ ಕಾರ್ಡಿಯಕ್ ಕೇರ್ ಯೂನಿಟ್ ಅಥವಾ ಐ.ಸಿ.ಸಿ.ಯು) ಸಹ ಇದೇ ರೀತಿಯಲ್ಲಿ ಇರುತ್ತದೆ. ಅದು ಹೃದಯದ ಸಮಸ್ಯೆ ಚಿಕಿತ್ಸೆಗಳಿಗೆ ಮೀಸಲಾದದ್ದು. ಅದು ಹೃದಯ ತಜ್ಞರ ಮೇಲ್ವಿಚಾರಣೆಯಲ್ಲಿರುತ್ತದೆ.

ವಿಶೇಷ ಗಮನ: ತೀವ್ರ ಆರೈಕೆ ನಿಗಾ ಘಟಕವು ಸ್ವಲ್ಪ ಹೆಚ್ಚು ಕಡಿಮೆ ಶಸ್ತ್ರ ಚಿಕಿತ್ಸಾಲಯದಂತೆಯೇ ಇರುತ್ತದೆ. ಇಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಆಸ್ಪತ್ರೆಯಲ್ಲಿ ಲಭ್ಯವಾಗಬಹುದಾದ ಎಲ್ಲಾ ಬಗೆಯ ಸೌಲಭ್ಯಗಳು ಇಲ್ಲಿರುತ್ತವೆ ಅಥವಾ ಕೆಲವೇ ನಿಮಿಷಗಳಲ್ಲಿ ಇಲ್ಲಿಗೆ ಸರಬರಾಜಾಗುತ್ತದೆ.

ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಸಹ ಕೆಲವೊಮ್ಮೆ ರೋಗಿಗಳನ್ನು ರಕ್ಷಿಸಲಾಗದಂತಹ ಅಸಹಾಯಕ ಪರಿಸ್ಥಿತಿಯೂ ಉಂಟಾಗಬಹುದು. ವಿಧಿ ಕ್ರೂರವಾದರೆ ಮಾನವ ಪ್ರಯತ್ನಗಳೂ ಫಲಿಸುವುದಿಲ್ಲ. ಪ್ರಯತ್ನ ನಮ್ಮದು. ಫಲಾಫಲ ಪರಮಾತ್ಮನದಾದರೂ ಸಹ ತೀವ್ರ ಆರೈಕಾ ಘಟಕದ ಸಿಬ್ಬಂದಿ ರೋಗಿಗಳ ಕಡೆ ವಿಶೇಷ ಗಮನ ಹರಿಸಿ, ತಮ್ಮೆಲ್ಲ ಶಕ್ತಿ ಮೀರಿ ಸೇವೆ ಸಲ್ಲಿಸುತ್ತಾರೆಂದು ಘಂಟಾಘೋಷವಾಗಿ ಹೇಳಬಹುದು.

ಡಾ.ಸಿ.ಅಶ್ವಥ್ : ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಪರಿಷತ್ತಿನ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ‘ಪರಿಷತ್ತಿನ ತಾಯಿ ಬೇರುಎಂದೇ ಇವರು ಖ್ಯಾತರು. ಅರಿವಳಿಕೆ ತಜ್ಞರಾಗಿದ್ದ ಇವರು ೨೦೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿರುವರು. ಪುಸ್ತಕಗಳು ಪ್ರಕಟವಾಗಿವೆ. ವೈದ್ಯಸಾಹಿತ್ಯ ರಚಿಸಿದ್ದು ಕಡಿಮೆ. ಆದರೆ ಪರಿಷತ್ತಿನ ಕೆಲಸ ಕಾರ್ಯಗಳಲ್ಲಿ ಇತರರಿಗೆ ಮಾದರಿಯಾಗಿದ್ದರು. ಬರೆಯುವವರನ್ನು ಪ್ರೋತ್ಸಾಹಿಸುತ್ತಿದ್ದರು. ಪ್ರಸ್ತುತ ಲೇಖನವನ್ನು ಮಹಿಳೆಯರಿಗೆ ಮೀಸಲಾದ ಶಸ್ತ್ರಚಿಕಿತ್ಸೆಗಳುಎಂಬ ಪುಸ್ತಕದಿಂದ ಆರಿಸಲಾಗಿದೆ.

* * *