ತಂದೆ ಎನಿಸಿಕೊಳ್ಳುವುದು ಬಹು ಸುಲಭವಾದುದು ಎಂದು ಭಾವಿಸಿರುವಿರೇನು? ಹಾಗೆ ಕರೆಸಿಕೊಳ್ಳಲು ನೀವು ನಿಮ್ಮ ಪತ್ನಿಯಂತೆಯೇ ತುಂಬಾ ತ್ಯಾಗ ಮಾಡಬೇಕಾಗುತ್ತದೆ. ನಿಮ್ಮ ಸ್ವಾತಂತ್ರ್ಯದ ಹರಣವೂ ಸ್ವಲ್ಪಮಟ್ಟಿಗೆ ಆಗುತ್ತದೆ. ಆದರೆ ನಾಳೆ ಬರುವ ನಿಮ್ಮ ಮಗುವನ್ನು ಕಂಡಾಗ ನೀವು ಪಟ್ಟ ತೊಂದರೆಗಳು ಬಹು ಅಲ್ಪವಾಗಿ ತೋರುತ್ತವೆ. ಅವನು ತನ್ನ ಸುಂದರ ನಗುವಿನಿಂದ ಪುಟ್ಟ ಆಟಗಳಿಂದ ನಿಮಗೆ ನೀಡುವ ಸಂತೋಷದ ಮುಂದೆ ಪ್ರಪಂಚದ ಎಲ್ಲ ಸೌಖ್ಯಗಳೂ ನಿಮಗೆ ತೃಣಸಮಾನ ಎನಿಸುತ್ತವೆ.

ಈ ಅವಧಿಯಲ್ಲಿ ನಿಮ್ಮ ಪತ್ನಿಯನ್ನು ಸುಖಿಯಾಗಿ, ಸಂತುಷ್ಟೆಯನ್ನಾಗಿ ಇಡುವುದು ನಿಮ್ಮ ಕರ್ತವ್ಯಗಳಲ್ಲಿ ಒಂದು. ಆಕೆಯ ಮೇಲೆ ಯಾವ ಕಾರಣಕ್ಕೇ ಆಗಲಿ ರೇಗುವುದನ್ನು, ಹಂಗಿಸುವುದನ್ನು ಬಿಟ್ಟುಬಿಡಿ. ಉದಾಹರಣೆಗೆ ನೀವು ಕೆಲಸಕ್ಕೆ ಹೋಗುವ ಮುನ್ನ ಅಡುಗೆ ಪೂರ್ತಿಯಾಗಿರುವುದಿಲ್ಲ ಅಥವಾ ನಿಮ್ಮ ಕೋಟಿನ ಗುಂಡಿಗಳು ಕಿತ್ತುಹೋಗಿರುತ್ತವೆ. ಎಲ್ಲವನ್ನೂ ಮೊದಲಿನಂತೆ ಲವಲವಿಕೆಯಿಂದ ಮಾಡಲು ನಿಮ್ಮ ಪತ್ನಿಗೆ ಈಗ ಸಾಧ್ಯ ಇಲ್ಲ. ಮಗನ ಭಾರವನ್ನು ಹೊತ್ತ ಆಕೆಗೆ ಪ್ರತಿಬಾರಿಯೂ ಏಳುವುದೂ, ಕೂಡುವುದೂ ಕೂಡ ಕಷ್ಟವೆಂಬುದನ್ನು ನೀವು ನೆನಪಿನಲ್ಲಿಡಬೇಕು. ಆದುದರಿಂದ ಆಕೆಯ ದಿನನಿತ್ಯದ ಕಾರ್ಯಗಳಲ್ಲಿ ತುಸು ನೆರವಾಗಿ. ನೀರು ತುಂಬಿಸುವುದು, ಅಡುಗೆ ಮನೆಯಲ್ಲಿ ಸಣ್ಣ ಪುಟ್ಟ ಸಾಮಾನುಗಳನ್ನು ತೆಗೆದುಕೊಡುವುದು-ಇಂತಹವನ್ನು ಮಾಡಿದರೆ, ನಿಮ್ಮಾಕೆಗೆ ಶ್ರಮ ಕಡಿಮೆಯಾಗುವುದಲ್ಲದೆ, ಅವಳ ಮನಸ್ಸಿಗೆ ಎಷ್ಟೋ ಸಂತೋಷವಾಗುತ್ತದೆ. ಆದಷ್ಟು ಮಟ್ಟಿಗೆ ನಿಮ್ಮ ಸ್ವಂತದ ಕೆಲಸಗಳನ್ನು ನೀವೇ ಮಾಡಿಕೊಳ್ಳಿ.

ಗರ್ಭಿಣಿಯಾದ ಕಾಲದಲ್ಲಿ ನಿಮ್ಮ ಪತ್ನಿಯ ಮನಸ್ಸು ಬಹುಸೂಕ್ಷ್ಮ ಆಗಿರುತ್ತದೆ. ಸಣ್ಣಪುಟ್ಟ ಕಾರಣಗಳಿಗೆಲ್ಲಾ ಆಕೆ ಅಳಬಹುದು. ವಿನಾಕಾರಣದ ವಾಗ್ವಾದಗಳಿಂದ ಆಕೆಯನ್ನು ದುಃಖಿಯನ್ನಾಗಿ ಮಾಡಬೇಡಿ. ಅವಳಿಗೆ ಇಷ್ಟವಾದಂತೆ ನಡೆದುಕೊಳ್ಳಿ. ಪ್ರೀತಿಯಿಂದ ಅವಳಿಗೆ ಹೂವುಗಳನ್ನೋ, ಆಗಾಗ್ಗೆ ಸಣ್ಣಪುಟ್ಟ ಉಡುಗೊರೆಗಳನ್ನೋ ತಂದುಕೊಡಿ. ಬಿಡುವಾದಾಗಲೆಲ್ಲಾ ಆಕೆಯನ್ನು ಓಡಾಡಲು ಕರೆದುಕೊಂಡು ಹೋಗಿ ಸಿನಿಮಾ ನಾಟಕಗಳಿಗೂ ಅಷ್ಟೆ. ಇದರಿಂದ ಮಾನಸಿಕವಾಗಿ ಸುಖಿಯಾದ ಆಕೆ, ತನ್ನ ದೈಹಿಕ ತೊಂದರೆಗಳನ್ನೆಲ್ಲಾ ಮರೆಯುವಳು.

ಮಗು ತನ್ನ ಹೊಟ್ಟೆಯಲ್ಲಿ ಓಡಾಡಿದಾಗ ನಿಮ್ಮ ಪತ್ನಿಗೆ ವಿಚಿತ್ರವಾದ ಸಂತೋಷವಾಗುತ್ತದೆ. ಈ ಬಗ್ಗೆಯೂ ಮಗುವಿನ ಬೆಳವಣಿಗೆಯ ಬಗ್ಗೆಯೂ ಪಾಲುಗೊಳ್ಳಿರಿ. ಯಾವುದಾದರೂ ನಿರ್ಧಾರಕ್ಕೆ ಬರುವ ಮುನ್ನ ಪತ್ನಿಯ ಅಭಿಪ್ರಾಯ ಕೇಳಿ, ನೀವು ಬುದ್ಧಿವಂತರಾದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಹೋಗಬೇಡಿ.

ಉದಾಹರಣೆಗೆ, ಆಕೆ ಪ್ರಸವಕ್ಕೆ ತವರುಮನೆಗೆ ಹೋಗುತ್ತೇನೆ ಎನ್ನುತ್ತಾಳೆ. ಆಕೆಯನ್ನು ತುಂಬಾ ಪ್ರೀತಿಸುವ ನೀವು ಆಕೆಯನ್ನು ಬಿಟ್ಟಿರಲಾರದೆ ‘ಹೋಗಬೇಡ’ ಎನ್ನಬೇಡಿ. ಹೆಣ್ಣಿಗೆ ಪ್ರಸವವಾಗುವ ಸಮಯದಲ್ಲಿ ತನಗೆ ಬಹು ಆಪ್ತಳಾದ ತಾಯಿ ತನ್ನೊಂದಿಗಿರಬೇಕೆಂಬ ಮನಸ್ಸಿರುತ್ತದೆ. ನಿಮ್ಮ ಹೆಂಡತಿ ಇದನ್ನು ಇಚ್ಛಿಸಿದರೆ ಅದಕ್ಕೆ ಅಡ್ಡಿ ಮಾಡಬೇಡಿ.

ಪ್ರಸವ ವಿಜ್ಞಾನದ ವಿಷಯಗಳನ್ನೆಲ್ಲಾ ನೀವೂ ತಿಳಿದುಕೊಂಡರೆ ಪ್ರಸವದ ಬಗೆಗಿರುವ ವಿನಾಕಾರಣ ಭೀತಿಗಳು ಮಾಯವಾಗುತ್ತವೆ.

ಕಡೆಯ ತಿಂಗಳಲ್ಲಿ ತಾನು ತನ್ನ ಪತಿಗೆ ಆಕರ್ಷಕಳಾಗಿ ಕಾಣುತ್ತಿಲ್ಲ. ಕುರೂಪಿಯಾಗಿ ಕಾಣುತ್ತಿದ್ದೇನೆ ಎಂಬ ಭಾವನೆ ಸಾಧಾರಣವಾಗಿ ಎಲ್ಲ ಹೆಂಗಸರಿಗೂ ಬರುತ್ತದೆ. ಒಂದು ವೇಳೆ ನಿಮಗೆ ಹಾಗೆ ಅನಿಸಿದರೂ ಪತ್ನಿಯ ಮುಂದೆ ಇದನ್ನು ತೋರಿಸಿಕೊಳ್ಳಬೇಡಿ. “ನೀನೀಗ ಇನ್ನೂ ರೂಪವತಿ ಆಗಿ, ಗೌರವಯುತವಾಗಿ ಕಾಣುತ್ತೀಯ, ಮೊದಲಿಗಿಂತ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ”, ಎಂದು ಹೇಳಿ. ಹೀಗೆ ಆಗಾಗ್ಗೆ ಹೇಳುತ್ತಿದ್ದರೆ ನಿಮ್ಮ ಹೆಂಡತಿಗೆ ಎಷ್ಟೋ ಆನಂದವಾಗುತ್ತದೆ.

ಮಗುವಿಗೆ ಬಟ್ಟೆಗಳನ್ನೋ ಉಣ್ಣೆಯಂಗಿಯನ್ನೋ ನಿಮ್ಮ ಪತ್ನಿ ಸಿದ್ಧ ಮಾಡುತ್ತಿದ್ದರೆ, ಅವಳಿಗೆ ಬೇಕಾದುದನ್ನು ಕೊಂಡು ತಂದುಕೊಡಿ, ಮಗುವಿನ ಕೊಠಡಿ ಸಿದ್ಧಮಾಡಲು ಆಕೆಗೆ ನೆರವಾಗಿ.

ಎಲ್ಲಕ್ಕಿಂತ ಮುಖ್ಯವಾಗಿ ನೀವು ಶಾಂತರಾಗಿಯೂ ಆತ್ಮ ವಿಶ್ವಾಸವುಳ್ಳವರಾಗಿಯೂ ಇದ್ದರೆ, ನಿಮ್ಮ ಪತ್ನಿಗೆ ನೀವು ದೊಡ್ಡ ಆಸರೆಯಾಗುತ್ತೀರಿ.

ನಿಮ್ಮ ಪ್ರೀತಿಯ ಫಲವಾಗಿ ನಾಳೆ ಸಿಗುವ ಉಡುಗೊರೆ ಅತ್ಯಮೂಲ್ಯ ಆದುದು. ಅದಕ್ಕೋಸ್ಕರ ನೀವು ಮಾಡುವ ತ್ಯಾಗಗಳಿಂದ ನಿಮಗೆ ದುಃಖ ಆಗುವುದಿಲ್ಲ; ಬದಲು ಸಂತೋಷವಾಗುತ್ತದೆ.

ನಿಮ್ಮ ಪ್ರೀತಿಯ ಫಲವಾಗಿ ನಾಳೆ ಸಿಗುವ ಉಡುಗೊರೆ ಅತ್ಯಮೂಲ್ಯ ಆದುದು. ಅದಕ್ಕೋಸ್ಕರ ನೀವು ಮಾಡುವ ತ್ಯಾಗಗಳಿಂದ ನಿಮಗೆ ದುಃಖ ಆಗುವುದಿಲ್ಲ; ಬದಲು ಸಂತೋಷವಾಗುತ್ತದೆ.

* * *