ವಯಸ್ಕರಿಗಿಂತ ಎಳೆಯರು ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗುವುದರಿಂದ ಆ ವಯೋಮಾನವನ್ನು ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ಘಟ್ಟ ಎಂದು ಪರಿಗಣಿಸಲಾಗಿದೆ. ಸಾವು, ನೋವು, ಮತ್ತು ಅಂಗವಿಕಲತೆಯನ್ನುಂಟು ಮಾಡುವ ಮಕ್ಕಳ ಮಾರಕ ರೋಗಗಳ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು ವೈಜ್ಞಾನಿಕ ಆವಿಷ್ಕಾರಗಳಿಂದ ಸಾಧ್ಯವಾಗಿದೆ. ಬ್ಯಾಕ್ಟೀರಿಯ ಮತ್ತು ವೈರಸ್ ದೇಹದೊಳಗೆ ಸೇರಿದಾಗ ದೇಹ ಈ ವಿಜಾತಿಯ ವಸ್ತುವಿನ ವಿರುದ್ಧ ಸೆಣೆಸಲು ಪ್ರಯತ್ನಿಸುತ್ತೆ. ಆ ಹೋರಾಟದಲ್ಲಿ ಬಿಳಿರಕ್ತಕಣಗಳು ಮತ್ತು ಪ್ರತಿಕಾಯಗಳು ಪ್ರಮುಖ ಪಾತ್ರವಹಿಸುತ್ತವೆ. ಈ ರೋಗಾಣುಗಳ ಪ್ರಭಾವಕ್ಕೆ ದೇಹ ಪೂರ್ವಭಾವಿಯಾಗಿ ಒಳಗಾಗಿದ್ದರೆ ಅವುಗಳ ವಿರುದ್ಧ ಯುದ್ಧಕ್ಕೆ ಸಜ್ಜಾಗುವ ಪ್ರತಿಕಾಯಗಳು ದೇಹದಲ್ಲಿ ಬೆಳವಣಿಗೆಯಾಗಿರುತ್ತವೆ. ದೇಹದ ಬಿಳಿ ಹಾಲ್ರಸ ಕಣಗಳು ಪ್ರತಿಕಾಯಗಳ ಗ್ಲಾಬುಲಿನ್‌ಗಳನ್ನು ಸಿದ್ಧಪಡಿಸುತ್ತವೆ. ಅವು ದೇಹದಲ್ಲಿ ಪುನರಪಿ ರೋಗಾಣುಗಳು ಒಳಸೇರಿದಾಗ ಅದನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆದಿದ್ದು, ರೋಗಾಣುಗಳು ಒಳಸೇರಿದ ಪ್ರದೇಶಕ್ಕೆ ತಕ್ಷಣ ಪ್ರತಿಕಾಯಗಳನ್ನು ರವಾಣಿಸುತ್ತದೆ. ಅವುಗಳೊಡನೆ ಸಂಯೋಗಗೊಂಡು ರೋಗಾಣುಗಳನ್ನು ನಿಸ್ತೇಜಗೊಳಿಸುತ್ತವೆ. ನಂತರ ಶ್ವೇತಗೋಲಕಗಳು ಅವುಗಳನ್ನು ನುಂಗಿ ನೀರು ಕುಡಿಯುತ್ತವೆ. ಅದರ ಪರಿಣಾಮವಾಗಿ ರೋಗ ಬೆಳವಣಿಗೆಯಾಗುವುದಿಲ್ಲ.

ಪ್ರಬಲ ರೋಗಾಣುಗಳು ದೇಹದೊಳ ಸೇರಿ ರೋಗಾಣುಗಳನ್ನುಂಟು ಮಾಡಿದಾಗ ಉತ್ಪತ್ತಿಯಾಗುವ ಪ್ರತಿಕಾಯಗಳಿಗೆ ಪ್ರತಿಯಾಗಿ ರೋಗೋತ್ಪಾದಕ ಶಕ್ತಿಯನ್ನು ಕಳೆದುಕೊಂಡ ರೋಗಾಣುಗಳನ್ನು ದೇಹದೊಳಗೆ ಲಸಿಕೆ ಮುಖಾಂತರ ಚುಚ್ಚಿ ಪ್ರತಿಕಾಯಗಳ ಉತ್ಪಾದನೆಗೆ ಪ್ರಚೋದನೆ ನೀಡಿ ರೋಗದ ಬೆಳವಣಿಗೆಯನ್ನು ತಡೆಗಟ್ಟಬಹುದು. ಇದೇ ರಕ್ಷಣಾ ಚಿಕಿತ್ಸೆಯ ಗುಟ್ಟು. ಶತಶತಮಾನಗಳಿಂದ ಮನುಕುಲಕ್ಕೆ ಮಹಾಮಾರಿಯಾಗಿದ್ದ ಸಿಡುಬು ರೋಗವನ್ನು ಲಸಿಕೆ ನೀಡಿಕೆಯಿಂದ ನಿರ್ಮೂಲ ಮಾಡಿರುವುದು ಒಂದು ಮಹತ್ವದ ನಿರ್ದೇಶವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಕ ಸೋಂಕು ರೋಗಗಳು ಮಾಯವಾಗಿವೆ.

ಶ್ರೇಷ್ಠ ವರದಾನ: ಮಕ್ಕಳಿಗೆ ಮಾರಕವಾಗಿರುವ ಕ್ಷಯ, ಪೋಲಿಯೋ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ದಡಾರ ರೋಗಗಳ ವಿರುದ್ಧ ಪ್ರತಿರೋಧಕ ಮದ್ದನ್ನು ದೇಹದೊಳಗೆ ಚುಚ್ಚಿ, ರೋಗ ಬರದಂತೆ ತಡೆಯುವ ವಿಧಾನಮಕ್ಕಳಿಗೆ ವೈದ್ಯಕೀಯ ವಿಜ್ಞಾನ ನೀಡಿರುವ ಅತ್ಯಂತ ಶ್ರೇಷ್ಠ ವರದಾನವಾಗಿದೆ. ರಕ್ಷಣಾ ಚಿಕಿತ್ಸೆ ಎಂದಿನಿಂದ?

ರೋಗ ಪ್ರತಿರೋಧಕ ಚುಚ್ಚುಮದ್ದುಗಳನ್ನು ಮಗುವಿನ ವಯಸ್ಸಿನುಗುಣವಾಗಿ ಕೊಡಿಸಿದಲ್ಲಿ ಈ ಕಾಯಿಲೆಗಳನ್ನು ತಡೆಗಟ್ಟಬಹುದು. ಅವುಗಳಿಂದಾಗುವ ದುಷ್ಪರಿಣಾಮಗಳಾದ ಅಂಧತ್ವ, ಅಪೌಷ್ಟಿಕತೆ, ಕಿವುಡತನ, ಅಂಗವಿಕಲತೆ, ಬುದ್ಧಿ ಮಾಂದ್ಯತೆಗಳನ್ನು ತಡೆಯಬಹುದು. ಮಗುವಿಗೆ ರಕ್ಷಣಾ ಚಿಕಿತ್ಸೆ ಕೊಡಿಸುವುದು ತಾಯಿಯ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ. ಅಂದರೆ ಗರ್ಭಿಣಿ ಗರ್ಭಾವಧಿಯ ೧೬-೩೨ ವಾರಗಳಲ್ಲಿ ಎರಡು ಸಾರಿ ಕನಿಷ್ಟ ನಾಲ್ಕು ವಾರಗಳ ಅಂತರದಲ್ಲಿ ಟೆಟಾನಸ್ ಟಾಕ್ಸಾಯಿಡ್ ಚುಚ್ಚುಮದ್ದನ್ನು ಪಡೆದರೆ ನವಜಾತ ಶಿಶುವಿಗೆ ಬರುವ ಧನುರ್ವಾಯು ರೋಗವನ್ನು ಬಾಣಂತಿ ನಂಜನ್ನು ಯಶಸ್ವಿಯಾಗಿ ತಡೆಗಟ್ಟಬಹುದು.

ರಕ್ಷಣಾ ಚಿಕಿತ್ಸೆ ಜನಾಂಗದ ಭವಿಷ್ಯತ್ತಿಗೆ ಪೂರಕ ಎಂಬುದರತ್ತ ಎಲ್ಲರ ಗಮನ ಸೆಳೆಯುವ ಸದುದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ‘ಶಿಶು ಸಂರಕ್ಷಣಾ ದಿನಾಚರಣೆ’ಗೆ ಕರೆ ನೀಡಿದೆ. ಯುನಿಸೆಫ್, ಭಾರತೀಯ ವೈದ್ಯಕೀಯ ಸಂಸ್ಥೆ, ಭಾರತೀಯ ಚುಚ್ಚುಮದ್ದು ಮಿಶನ್, ರೋಟರಿ ಇಂಟರ್‌ನ್ಯಾಶನಲ್ ಒಟ್ಟಿಗೆ ಸೇರಿ ಮನೆ ಮನೆಗೂ ಸೇವೆ ಸಲ್ಲಿಸುವ ಕಾರ್ಯಕ್ರಮಗಳನ್ನು ತಯಾರಿಸಿವೆ. ಶೀತಲ ಸರಪಣಿಯ ಕೊಂಡಿಗಳನ್ನು ಗಟ್ಟಿಗೊಂಡಿವೆ. ಪ್ರಭಾವಿ ಲಸಿಕೆಗಳು ಲಭ್ಯವಾಗುವಂತೆ ಮಾಡಿವೆ.

ಸದ್ಯ ನಾವು ಕ್ಷಯ, ಪೋಲಿಯೋ, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ದಡಾರ, ಮಂಗನಬಾವು, ಜರ್ಮನ್ ದಡಾರಗಳ ವಿರುದ್ಧ ಲಸಿಕೆಗಳನ್ನುಕೊಡುತ್ತಿದ್ದೇವೆ. ಭಾರತೀಯ ಶಿಶುವೈದ್ಯರ ಸಂಘವು ಸಲಹೆ ಮಾಡಿರುವ ಲಸಿಕೆಯ ವೇಳಾಪಟ್ಟಿಯನ್ನು ಗಮನಿಸಿ (ಕೋಷ್ಟಕ).

ಯಾರಿಗೆ

ಯಾವ ವಯಸ್ಸಿನಲ್ಲಿ ೧೬-೩೨ವಾರಗಳ ಗರ್ಭಾವಧಿಯಲ್ಲಿ

ಲಿಸಿಕೆ ಟೆಟಾನಸ್ ಟಾಕ್ಸಾಯಿಡ್

ವಿವರ ೪-೬ವಾರಗಳ ಅಂತರದಲ್ಲಿ ಎರಡು ಸಾರಿ

ಶಿಶುಗಳು ನವಜಾತ ಶಿಶು ಬಿಸಿಜಿ
ಪೋಲಿಯೊ ಹನಿ
ಹೆಪಟೈಟಿಸಿ ‘ಬಿ’
ಒಂದು ಸಾರಿ
೧ನೇ ಡೋಜ್
೧ನೇ ಡೋಜ್
೬ನೇ ವಾರ ಡಿಪಿಟಿ
ಪೋಲಿಯೊ ಹನಿ
ಹೆಪಟೈಟಿಸ್ ‘ಬಿ’
೧ನೇ ಡೋಜ್
೨ನೇ ಡೋಜ್‌
೨ನೇ ಡೋಜ್
೧೦ನೇವಾರ ಡಿಪಿಟಿ
ಪೋಲಿಯೊ ಹನಿ
೨ನೇ ಡೋಜ್
೩ನೇ ಡೋಜ್
೧೪ನೇ ವಾರ ಡಿಪಿಟಿ
ಪೋಲಿಯೊ ಹನಿ
೩ನೇ ಡೋಜ್
೪ನೇ ಡೋಜ್
೬-೯ತಿಂಗಳು ಪೋಲಿಯೊ ಹನಿ
ಹೆಪಟೈಟಿಸ್ ‘ಬಿ’
೫ನೇ ಡೋಜ್
೩ನೇ ಡೋಜ್
೯-೧೨ ತಿಂಗಳು ದಡಾರ
ಮಕ್ಕಳು ೧೫-೧೮ತಿಂಗಳು ಎಂ.ಎಂ.ಆರ್
ಡಿಪಿಟಿ
ಪ್ರಮಾಣ
೧ನೇ ವರ್ಧಕ
ಪೋಲಿಯೊ ಹನಿ
೩ ವರ್ಷ ತುಂಬಿದ ಮಕ್ಕಳಿಗೆ ವಿಷಮ ಜ್ವರ ಲಸಿಕೆ ಒಂದೇ ಒಂದು ಡೋಜ್
೪ ೧/೨ಯಿಂದ ೫ವರ್ಷ ಡಿಪಿಟಿ ಪೋಲಿಯೊ ಹನಿ ೨ನೇ ವರ್ಧಕ ಪ್ರಮಾಣ
ಯಾರಿಗೆ ಯಾವ ವಯಸ್ಸಿನಲ್ಲಿ ೧೬-೩೨ವಾರಗಳ ಗರ್ಭಾವಧಿಯಲ್ಲಿ ಲಿಸಿಕೆ ಟೆಟಾನಸ್ ಟಾಕ್ಸಾಯಿಡ್ ವಿವರ ೪-೬ವಾರಗಳ ಅಂತರದಲ್ಲಿ ಎರಡು ಸಾರಿ
೪ರಿಂದ ೧೦ನೆ ವರ್ಷ ಟಿಟಾನಸ್ ಟಾಕ್ಸಾಯಿಡ್ ಹೆಪಟೈಟಿಸ್ ಬಿ ೨ಸಾರಿ, ೬ ವಾರಗಳ ಅಂತರದಲ್ಲಿ ವರ್ಧಕ ಪ್ರಮಾಣ
೧೫-೧೬ ವಾರ ಟೆಟಾನಸ್ ಟಾಕ್ಸಾಯಿಡ್ ೨ಸಾರಿ, ೪ರಿಂದ ೬ವಾರಗಳ ಅಂತರದಲ್ಲಿ

ವಿಜ್ಞಾನಿಗಳು ಇತರ ಮಾರಕ ರೋಗಗಳ ವಿರುದ್ಧವೂ ಅತ್ಯುತ್ತಮ ಲಸಿಕೆಗಳನ್ನು ನಿರ್ಮಿಸಿದ್ದಾರೆ. ಆದರೆ ಇವು ಸ್ವಲ್ಪ ದುಬಾರಿ. ಹಾಗಾಗಿ ಸರಕಾರವೂ ಈ ಲಸಿಕೆಗಳನ್ನು ಉಚಿತವಾಗಿ ಕೊಡಲು ಅಸಮರ್ಥವಾಗಿದೆ. ಆದರೆ, ಇವುಗಳನ್ನು ಕೊಡಿಸುವುದು ಅವಶ್ಯ. ಅನೇಕ ಸಂಘ ಸಂಸ್ಥೆಗಳು ಈ ದುಬಾರಿ ಲಸಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಸಾಮೂಹಿಕವಾಗಿ ನೀಡಲು ಪ್ರಯತ್ನಿಸುತ್ತಿರುವುದು ಸ್ತುತ್ಯ ಕೆಲಸ.

ಈಗ ಲಭ್ಯವಿರುವ ಹೊಸ ಲಸಿಕೆಗಳಲ್ಲಿ ಹೆಪಟೈಟಿಸ್ ‘ಬಿ’ ಮತ್ತು ವಿಷಮಜ್ವರ ಮುಖ್ಯವಾದುದು. ನ್ಯೂಮೊನಿಯಾಕ್ಕೆ ಕಾರಣವಾಗಿರುವ ಹಿಮೋಪಿಲಾನ್ ಇನ್‌ಫ್ಲೂಯೆಂಜಾ ‘ಬಿ’ ವಿರುದ್ಧವೂ ಸಹ ಲಸಿಕೆ ಈಗ ದೊರೆಯುತ್ತಿದೆ. ಇನ್ನು ಹಲವು ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತದಲ್ಲಿವೆ.

ರಕ್ಷಣಾ ಚಿಕಿತ್ಸೆಯ ವೈಶಿಷ್ಟ್ಯಗಳು

ರಕ್ಷಣಾ ಚಿಕಿತ್ಸೆ ಕೊಡಿಸುವುದು ಕಡಿಮೆ ಖರ್ಚಿನದು. ಸಾರ್ವತ್ರಿಕ ಮಹತ್ವವುಳ್ಳದ್ದು. ಅದು ತ್ವರಿತಗತಿಯಲ್ಲಿ ಪರಿಣಾಮಗಳನ್ನುಂಟು ಮಾಡುತ್ತದೆ. ಮಕ್ಕಳಲ್ಲಿ ಗೋಚರಿಸುವ ಅಂಗವಿಕಲತೆ ನ್ಯೂನತೆ ಪೋಷಣೆ ಮತ್ತು ಸೋಂಕು, ಅವರ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ವಿಕಾಸದ ಮಹತ್ವದ ವರುಷಗಳಲ್ಲಿ ಬೀರುವ ದುಷ್ಪರಿಣಾಮಗಳನ್ನು ತಡೆಗಟ್ಟುತ್ತದೆ.

ರಕ್ಷಣಾ ಚಿಕಿತ್ಸೆ ನೀಡುವಾಗ, ಮಗುವಿಗೆ ನೆಗಡಿ, ಕೆಮ್ಮು ವಾಂತಿ, ಭೇದಿ, ಮುಂತಾದ ತೊಂದರೆಗಳು ಇರದಿದ್ದರೆ ಒಳ್ಳೆಯದು. ಮೊದಲ ಸಾರಿ ತ್ರಿರೋಗ ಲಸಿಕೆ ಕೊಟ್ಟಾಗ ಮಗುವಿಗೆ ಸೆಳವುಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ರೋಗ ಪ್ರತಿರೋಧಕ ಚುಚ್ಚುಮದ್ದು ಕೊಟ್ಟ ಮೇಲೆ ಮಕ್ಕಳಿಗೆ ಜ್ವರ ಬರುವುದು ಸರ್ವೇಸಾಮಾನ್ಯ. ಮಗು ಪ್ರತಿರೋಧಕ ಶಕ್ತಿ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವುದನ್ನು ಇದು ಸೂಚಿಸುತ್ತದೆ. ಇದಕ್ಕೆ ಪಾಲಕರು ಗಾಬರಿಯಾಗುವ ಅವಶ್ಯಕತೆಯಿಲ್ಲ. ರಕ್ಷಣಾ ಚಿಕಿತ್ಸೆಯಿಂದ ಮಕ್ಕಳು ಬದುಕಿ ಉಳಿದು, ಉತ್ಪಾದಕ ಜೀವನವನ್ನು ನಡೆಸಬಲ್ಲವರಾಗುತ್ತಾರೆ.

* * *