ಪ್ರತಿಯೊಬ್ಬ ವ್ಯಕ್ತಿಗೂ ಇರುವಂತೆ ವೃದ್ಧರಿಗೂ ಕೆಲವು ವಸ್ತುಗಳ ಮೇಲೆ ವಿಶೇಷ ಅಭಿಮಾನವಿರುತ್ತದೆ. ತಮ್ಮದೇ ಆದ ಸೋಪು, ಬಾಚಣಿಗೆ, ಅಂಗವಸ್ತ್ರ, ಲೋಟ, ಇಷ್ಟ ದೇವರ ಪೋಟೋ, ತಮ್ಮ ಪ್ರೀತಿ-ಪಾತ್ರರ ಭಾವಚಿತ್ರ-ಇವೆಲ್ಲಾ ಅವರ ಆಸ್ತಿಯಾಗಿರುತ್ತವೆ. ಒಬ್ಬ ವೃದ್ಧೆಯಂತೂ ಒಡೆದ ಕನ್ನಡಿಯ ಚೂರೊಂದನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ಅದರ ಮೇಲೆ ಅತೀವ ಮಮಕಾರ ಅವರಿಗೆ. “ಬಿಸಾಡಿ, ಅದನ್ನು, ಹೊಸ ಕನ್ನಡಿ ಕೊಡಿಸುತ್ತೇವೆ” ಎಂದು ಹೇಳಿದ ಮ್ಯಾನೇಜರನನ್ನು ಬಯದ್ದು ಹೊರಗಟ್ಟಿದ್ದರು. ಆಕೆಯ ಗಂಡ ಪ್ರೀತಿಯಿಂದ ಕೊಟ್ಟಿದ್ದ ಕನ್ನಡಿಯಂತೆ ಅದು. ಒಡೆದು ಚೂರಾದರೇನಂತೆ, ನಿತ್ಯ ಆತನ ನಗುಮೊಗವನ್ನು ಆಖೆ ಅದರಲ್ಲಿ ಕಾಣುತ್ತಿದ್ದರು. ಅವರು ಅದನ್ನು ಹೇಗೆ ತಾನೆ ಎಸೆದಾರು?

ಇನ್ನೊಬ್ಬ ಅಜ್ಜಿ ತನ್ನ ಬಳಿ ವಿಶಿಷ್ಟ ವಸ್ತುವೊಂದನ್ನು ಇಟ್ಟುಕೊಂಡಿದ್ದರು. ಬಹು ಬೆಲೆಬಾಳುವಂಥದಲ್ಲವಾದರೂ ಬೆಲೆಯುಳ್ಳದ್ದು. ಮಾರುದ್ದದ ಹಗ್ಗ ಅಷ್ಟೇ. ಪೂಜೆಯ ಸಮಯದಲ್ಲಿ ಉಡುವ ಮಡಿಬಟ್ಟೆ ಒಣಗಿಸಿಕೊಳ್ಳಲು ಬೇಕಂತೆ ಅವರಿಗೆ ಅದು. ತಮ್ಮ ಬೇರೆ ಎಲ್ಲಾ ಬಟ್ಟೆಗಳನ್ನು ಸಾಮೂಹಿಕವಾಗಿ ಸ್ವಚ್ಛಪಡಿಸಿಕೊಂಡರೂ ಮಡಿಬಟ್ಟೆಯನ್ನು ಮಾತ್ರ ತಾವೇ ಒಗೆದು ಹಗ್ಗದ ಮೇಲೆ ಹರವಿ ಒಣಗಿಸುತ್ತಿದ್ದರು. ಇಂಥ ಸಣ್ಣಪುಟ್ಟ ನಂಬಿಕೆಗಳನ್ನು ತುಚ್ಛೀಕರಿಸದೆ ಪಾಲಿಸಲು ಬಿಡುವುದು ಕ್ಷೇಮ. ಇಲ್ಲದಿದ್ದಲ್ಲಿ ಅವರು ನೊಂದು ಕೊರಗಿ ಮನೋರೋಗಿಗಳಾಗುತ್ತಾರೆ.

ಆಶ್ರಮಕ್ಕೆ ದಾನದ ರೂಪದಲ್ಲಿ ಬರುವ ಹಣ ತಮಗಾಗಿಯೇ ಇರುವುದು ಎಂಬುದು ಅವರ ಅಚಲ ನಂಬಿಕೆ. ಅಷ್ಟೊಂದು ಬಂದರೂ ಇಷ್ಟೇ ನಮಗೆ ನೀಡುತ್ತಿರುವುದು ಎಂದು ಗೊಣಗುತ್ತಾರೆ. ಇತರ ಖರ್ಚಿನ ಬಗೆಗೆ ಅವರ ಗಮನ ಹರಿಯದು. ಅವರು ಎಳೆಯ ಮಕ್ಕಳಿನಂತೆಯೇ ವರ್ತಿಸಿ, ಅಗತ್ಯಗಳು ತಕ್ಷಣದಲ್ಲಿಯೇ ಈಡೇರಬೇಕೆಂದು ಬಯಸುತ್ತಾರೆ.

ವಯಸ್ಸಾದಂತೆ ಆಹಾರ ಸೇವನೆಯ ಪ್ರಮಾಣ ಕಡಿಮೆಯಾಗುವುದು. ವೃದ್ಧರು ಕಡಿಮೆ ಆಹಾರ ಸೇವಿಸುತ್ತಾರೆ ಎಂಬುದು ನಮ್ಮ ನಂಬಿಕೆ. ಆದರೆ ವ್ಯತಿರಿಕ್ತವಾಗಿ ಅವರು ಹೆಚ್ಚು ಹೆಚ್ಚು ಆಹಾರ ಸೇವಿಸುತ್ತಾರೆ. ರುಚಿ ರುಚಿಯಾದ ಆಹಾರವನ್ನು ಬಯಸುತ್ತಾರೆ. ನಂಬಿಕೆಗೂ ವಾಸ್ತವಕ್ಕೂ ಇರುವ ಅಜಗಜಾಂತರ ವ್ಯತ್ಯಾಸವನ್ನು ನೋಡಿ.

ಆಶ್ರಮದ ಒಳ ಹೊರಗೆ ಸ್ವಚ್ಛತೆ ಕಾಪಾಡಲು ವೃದ್ಧರ ಸಹಕಾರ ಅಗತ್ಯ. ಆದರೆ ಅವರ ಮನೋಭಾವವೇ ಬೇರೆ. ಹೇಗಿದ್ದರೂ ಕಸಗುಡಿಸುವವ ಬಂದೇ ಬರುತ್ತಾನೆ ಎಂಬ ಧೋರಣೆಯಿಂದ ಎಲ್ಲೆಂದರಲ್ಲಿ ಕಸ ಹಾಕುವುದು, ಬೇಡದ ವಸ್ತುಗಳನ್ನು ಹಾಸಿಗೆಯಡಿ ತುರುಕುವುದು ಮುಂತಾದ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಅವರಿಗೆ ತಿಳಿಹೇಳುವ ಸಂದರ್ಭ ಒದಗಿಬರುತ್ತದೆ.

ಆರೋಗ್ಯ: ಕೆಲ ವೃದ್ಧರು ತಮ್ಮ ರೋಗಗಳಿಗೆ ಇಂಥದ್ದೇ ಔಷಧಿಗಳು ಬೇಕು ಅದಿದ್ದರೆ ಮಾತ್ರ ತಮ್ಮ ಕಾಯಿಲೆ ವಾಸಿಯಾಗುವುದಂಬ ದೃಢವಾದ ನಂಬಿಕೆ ಹೊಂದಿರುತ್ತಾರೆ. ಅದಕ್ಕಾಗಿ ಹಟ ಹಿಡಿಯುತ್ತಾರೆ. ಅದನ್ನು ಕೊಡಿಸದೆ ತಮ್ಮನ್ನು ವಂಚಿಸುತ್ತಿದ್ದಾರೆಂದುಕೊಳ್ಳುತ್ತಾರೆ.

ವೃದ್ಧರು: ಪ್ರತೀ ತಿಂಗಳು ಶುಲ್ಕ ತೆರುವ ವೃದ್ಧರಂತೂ, ಆಶ್ರಮ ನಡೆಯುವುದೇ ತಮ್ಮ ಹಣದಿಂದ. ತಮಗೆ ಇನ್ನೂ ಉತ್ತಮ ಸೌಲಭ್ಯ ದೊರೆಯಬೇಕೆಂದು ಅಪೇಕ್ಷಿಸುತ್ತಾರೆ. ಸೇವೆಯಲ್ಲಿನ ಏರುಪೇರು, ಕೊರತೆಯನ್ನು ಅವರು ಸಹಿಸರು, ಕೂಗಾಡುತ್ತಾರೆ.

ಸಾವಿನ ಭಯ: ಎಲ್ಲ ವೃದ್ಧರನ್ನು ಸಾವಿನ ಭಯ ಕಾಡುತ್ತಲೇ ಇರುತ್ತದೆ. ತಮ್ಮ ಸಹವಾಸಿಗಳಲ್ಲೊಬ್ಬರು ತೀರಿಕೊಂಡಾಗ ಹಲವರು ಭಯಮಿಶ್ರಿತ ದುಗುಡದಿಂದ ಮೌನವಿದ್ದು ಊಟಮಾಡಲು ನಿರಾಕರಿಸುತ್ತಾರೆ. ಖಿನ್ನತೆಯಿಂದ ವಿಷಣ್ಣ ವದನರಾಗುತ್ತಾರೆ. ಇಂಥ ಪ್ರತಿಕ್ರಿಯೆ ಮೆದುಳಿಗೆ ಸಾವು ಮಾತ್ರ ಕಾರಣವಲ್ಲ. ತಾವು ಒಮ್ಮೆ ಸತ್ತಾಗ ತನಗಾಗಿ ಉಳಿದವರು ದುಃಖಿಸುವರೋ ಇಲ್ಲವೋ, ತಮ್ಮ ಧರ್ಮಕ್ಕನುಸಾರವಾಗಿ ಸಂಸ್ಕಾರ ಮಾಡುವರೋ ಇಲ್ಲವೋ ಎಂಬ ಯೋಚನೆಗಳೂ ಮನದಾಳದಲ್ಲಿ ನೆಲೆಯಾಗಿರುತ್ತದೆ.

ವೃದ್ಧಾಪ್ಯವನ್ನೂ ಎರಡನೇ ಬಾಲ್ಯವೆಂದೇ ಕರೆಯುತ್ತೇವೆ. ವೃದ್ಧರ ಮನಃಸ್ಥಿತಿಯು ಹಾಗೆಯೇ ಇರುತ್ತದೆ. ತಮ್ಮ ಮಾತೇ ಸರಿಯಾದ ಧೋರಣೆ, ಕಿರಿಯರು ಯಾವಾಗಲೂ ತಮ್ಮನ್ನು ಗಮನಿಸುತ್ತಿರಬೇಕೆಂಬ ಹಂಬಲ. ಔಷಧಗಳ ಅನಗತ್ಯ ಅವಲಂಬನೆ, ಮಿತಿಮೀರಿ ಊಟಮಾಡುವುದು,  ಜಗಳಗಂಟತನ, ದೈಹಿಕ ವಿಸರ್ಜನೆಗಳಿಗೆ ಕ್ಲುಪ್ತ ಸಮಯವನ್ನು ನಿಗದಿಪಡಿಸಿಕೊಳ್ಳದಿರುವುದು, ಹೊಗೆ ಸೊಪ್ಪಿನ ಚಟ, ಧೂಮಪಾನ, ಸೌಲಭ್ಯಗಳು ಮೊದಲು ತಮಗೇ ಸಿಗಬೇಕೆಂಬ ಮನೋಭಾವ, ವೃತ್ತಪತ್ರಿಕೆಗಳನ್ನು ತಮ್ಮ ಕೊಠಡಿಗೆ ತೆಗೆದುಕೊಂಡು ಹೋಗಿ, ಓದಿ ನಂತರ ನೆನಪಾದರೆ ಹಿಂದಿರುಗಿಸುವುದು. ಸ್ವಾರ್ಥ, ಅತಿಯಾಸೆ, ಅತೃಪ್ತಿ, ಅಸಮಾಧಾನ, ಹರಟೆಹೊಡೆಯುವುದು, ನಿದ್ರಾಹೀನತೆ, ಗೀಳು, ಮಾನಸಿಕ ಅಸ್ವಾಸ್ಥ್ಯ ಅನಗತ್ಯವಾಗಿ ಆಡಳಿತದಲ್ಲಿ ಸಲಹೆ ನೀಡುವುದು, ತಮ್ಮ ಹುಡುಕುವುದು ಮುಂತಾದ ಸ್ವಭಾವಗಳನ್ನು ಅದರಲ್ಲಿ ಕಾಣುತ್ತೇವೆ.

ಉತ್ತಮ ನಡವಳಿಕೆಯ ವೃದ್ಧರೂ ಇದ್ದೇ ಇರುತ್ತಾರೆಂಬುದನ್ನು ಮರೆಯಲಾಗದು. ಸಾಧುಸ್ವಭಾವದ, ಅಕ್ಷರಸ್ಥ, ಮೃದು ನಡವಳಿಕೆಯ, ಸಹಾಯ ಹಸ್ತ ಚಾಚುವ, ಸ್ವಚ್ಛವಾದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಸ್ವಭಾವದವರೂ ಸಿಗುತ್ತಾರೆ. ಅವರೊಂದಿಗೆ ದೇವರ ಭಯವುಳ್ಳ, ಪುಕ್ಕಲು ಸ್ವಭಾವುಳ್ಳ ಅತಿ ಧಾರ್ಮಿಕತೆಯ, ತಮ್ಮಷ್ಟಕ್ಕೆ ತಾವಿರುವ ಅಂಜುಕುಳಿಗಳೂ ಇರುತ್ತಾರೆ.

ಇಂಥ ವೈವಿಧ್ಯಮಯ ಮನೋಭಾವದ ವೃದ್ಧರು ಜೀವಿಸುವ ವೃದ್ಧಾಶ್ರಮದಲ್ಲಿ ಅವರೆಲ್ಲರ ಅಗತ್ಯಗಳನ್ನು ಪೂರೈಸಿ, ಸಂತೃಪ್ತಿಗೊಳಿಸಿ ಸಹವಾಸಿಗಳಲ್ಲಿ ಸೌಹಾರ್ದ ಏರ್ಪಡುವಂತೆ ಆಡಳಿತ ನಡೆಸುವುದು ಸುಲಭವೇನಲ್ಲ.

ಯುವಜನತೆಗೊಂದು ಕಿವಿಮಾತು

ವಯಸ್ಸಾದವರ ಬಗ್ಗೆ ವ್ಯಕ್ತಿಯೊಬ್ಬ ಕುಟುಂಬಕ್ಕೆ ಹೊರೆಯಾಗುತ್ತಾನೆ ಎಂಬ ಭಾವನೆ ಇದೆಯಲ್ಲ, ಅದು ತಪ್ಪು, ಅದು ಸಲ್ಲದು. ಆ ವ್ಯಕ್ತಿ ಕೆಲವೇ ವರ್ಷಗಳ ಹಿಂದೆ ನಮ್ಮೆಲ್ಲರ ಒಳಿತಿಗಾಗಿ ಶ್ರಮಿಸಿದಾತ, ಆತ ಕುಟುಂಬದ ಅವಿಭಾಜ್ಯ ಅಂಗ ಎಂಬುದನ್ನು ಮರೆಯಬಾರದು. ವೃದ್ಧಾಶ್ರಮಕ್ಕೆ ಸೇರಿಸುವುದು ಕಟ್ಟ ಕಡೆಯ ಆಯ್ಕೆಯಾಗಿರಬೇಕು. ತೀರಾ ಅನಿವಾರ್ಯ ಕಾರಣಗಳ ಹೊರತು ಅದೂ ಸಲ್ಲದು. ವೃದ್ಧಾಶ್ರಮಗಳಿರುವುದು ಅನಾಥರಿಗೆ, ನೋಡಿಕೋಳ್ಳುವವರಿಲ್ಲದೆ ಹಾಸಿಗೆ ಹಿಡಿದ ವೃದ್ಧ ರೋಗಿಗಳಿಗೆ ಮಾತ್ರ ಎಂಬುದನ್ನು ನೆನಪಿಡಬೇಕು.

ನೀವೂ ವೃದ್ಧಾರಗಲಿದ್ದೀರಿ ಎಂಬುದನ್ನು ಮರೆಯದಿರಿ

ವೈದ್ಯಸಾಹಿತಿಯಾಗಿನನ್ನಅನುಭವ
ಅಮ್ಮನಿಂದ ಬಂದ ಬಳುವಳಿ…’
– ಡಾ| ಕೇಶವಮೂರ್ತಿ ಸಿ.ಜಿ.ನಾನು ಬರೆದ ಮೊದಲ ವೈದ್ಯಲೇಖನ ‘ಉಗ್ಗುವುದನ್ನು ನಿವಾರಿಸಬಹುದು’ ಪ್ರಕಟವಾದದ್ದು ೧೯೭೨ರಲ್ಲ ‘ಸುಧಾ’ ವಾರಪತ್ರಿಕೆಯಲ್ಲಿ ಆಗಿನ್ನೂ ನಾನು ವೈದ್ಯವಿದ್ಯಾರ್ಥಿ. ಆಗ ಆದ ಪುಳಕ ಅವರ್ಣನೀಯ. ಕಿರೀಟಕ್ಕೊಂದು ಗರಿ ಮೂಡಿದ ಅನುಭವ. ನಂತರ ಬರೆದಿದ್ದು ೧೯೭೩ರಲ್ಲಿ ಫೊಲಿಯೋ ವ್ಯಾಧಿಯ ಬಗ್ಗೆ. ಎಂ.ಬಿ.ಬಿ.ಎಸ್ ನಂತರದ ೨೦ ವರ್ಷಗಳು ವೈದ್ಯವೃತ್ತಿಯಲ್ಲಿ, ಅದರ ಏಳು ಬೀಳುಗಳಲ್ಲಿ ಮುಳುಗಿ ಯಾವ ಒಂದು ಲೇಖನವನ್ನೂ ಬರೆಯಲಿಲ್ಲ. ಬಹುಶಃ ಈ ಅವಧಿಯಲ್ಲಿ ಅಮೂರ್ತ ಭಾವನೆಯೊಂದು ಗಟ್ಟಿಯಾಗುತ್ತಾ ಸಾಗಿ ಮೂರ್ತ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತು ಎಂಬುದು ನನ್ನ ಅನಿಸಿಕೆ. ಎಳೆಯ ಮಕ್ಕಳ ಬಗ್ಗೆ ಜನರಿಗಿದ್ದ ಕಾಳಜಿ, ವೃದ್ಧರ ಬಗ್ಗೆ ಕಾಣದಿದ್ದುದು ನನ್ನ ಮನಸ್ಸನ್ನು ಚಿಂತೆಗೀಡು ಮಾಡುತ್ತಿತ್ತು. ಹಾಗಾಗಿ ವೃದ್ಧರ ಬಗ್ಗೆ ಬೇಕು ಬೇಡಗಳನ್ನು, ಅವರ ರೋಗರುಜಿನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಶ್ರಮಿಸಿದೆ. ಬರೆಯಲು ಬೇಕಾದ ಮಾನಸಿಕ ತಯಾರಿ ಗಟ್ಟಿಗೊಳ್ಳುತ್ತಿತ್ತು. ಅದಕ್ಕೆ ಅಗತ್ಯವಾಗಿದ್ದ ಕನ್ನಡ ಭಾಷೆಯ ಮೇಲಿನ ಹಿಡಿತ, ಪದಗಳನ್ನು ಬಳಸುವಿಕೆ, ಒಂದು ಪದವನ್ನು ಬಳಸಿ ವಾಕ್ಯವನ್ನು ಕಿರಿದುಗೊಳಿಸುವ ಕಲೆ, ಇವುಗಳ ಬಗ್ಗೆ ಗಮನವಿತ್ತೆ. ಅರ್ಥಗರ್ಭೀತ ಹಾಗೂ ಪದಲಾಲಿತ್ಯ ಪಡೆದುಕೊಳ್ಳುವ ಬಗ್ಗೆ ಗಮನಕೊಟ್ಟೆ. ಬರವಣಿಗೆ ಸಾಗುತ್ತಿದ್ದಂತೆ ಈ ಅಂಶಗಳು ತಂತಾನೇ ಹಿಡಿತಕ್ಕೆ ಬರುತ್ತಿದ್ದುದು ಗೋಚರವಾಗುತ್ತಿತ್ತು.

ಬರೆಯಲೇಬೇಕೆಂಬ ತುಡಿತ ಹೆಚ್ಚಾದಂತೆ ೧೯೯೪ರಲ್ಲಿ ಪುನಃ ಪೆನ್ನು ಹಿಡಿದೆ. ಬರೆದೆ ಅನ್ನುವುದಕ್ಕಿಂತ ವಿಷಯ ತಾನಾಗಿಯೇ ಸ್ಫೋಟಿಸಿ, ಲೇಖನವಾಗಿ ಹೊರಬಿತ್ತು ಎಂದು ಹೇಳಿದರೆ ಅದು ಸತ್ಯಕ್ಕೆ ಹತ್ತಿರವಾದ ಹೇಳಿಕೆಯಾದೀತು.

ಕನ್ನಡ ಭಾಷೆಯ ಮೇಲಿನ ಪ್ರೀತಿಯನ್ನು ಚಿಕ್ಕಂದಿನಲ್ಲಿಯೇ ನನಗೆ ನಮ್ಮಮ್ಮ ಅರೆದು ಕುಡಿಸಿದ್ದರು. ಶಾಲಾಶಿಕ್ಷಣ ೮ನೇ ತರಗತಿಗೇ ಸೀಮಿತಗೊಂಡಿದ್ದರೂ (ಸುಮಾರು ೭೦ ವರ್ಷಗಳ ಹಿಂದೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿರಲಿಲ್ಲ ಎಂಬುದನ್ನು ನೆನಪಿಡಿ) ಆಕೆಯ ಭಾಷೆಯ ಮೇಲಿನ ಹಿಡಿತ. ಅರ್ಥದ ನೆಲಗಟ್ಟು ಡಾಕ್ಟರೇಟ್ ಪಡೆಯುವಷ್ಟು ಸಮೃದ್ಧವಾಗಿತ್ತು. ಆಕೆ ಹದಿನೆಂಟು ಪುರಾಣಗಳನ್ನು ಓದಿದವಳು. ಯಕ್ಷಗಾನ ರೂಪದಲ್ಲಿರುವ ಹಲವಾರು ಕೃತಿಗಳನ್ನು ಸಾಂಪ್ರದಾಯಿಕ ಹಾಡಿನ ಮಟ್ಟಿನಲ್ಲಿ, ಮನೆಯಲ್ಲೇ ಸಂಜೆ ಸೇರುವ ಹೆಂಗಳೆಯರ ಕಿರುಸಭೆಯಲ್ಲಿ ಹಾಡಿ, ಅದರ ಅರ್ಥ ವಿವರಿಸುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಗದುಗಿನ ಭಾರತ ಕರತಲಾಮಲಕವಾಗಿತ್ತು.

ನಾನು, ಈ ಹಿನ್ನೆಲೆಯಲ್ಲಿ ಹೈಸ್ಕೂಲು ಹಂತದಲ್ಲಿ ಭಾಮೀನೀ ಷಟ್ಪದಿಯಲ್ಲಿ ೧೯೬೧-೬೨ರ ಭಾರತ-ಚೀನಾ ಯುದ್ಧವನ್ನು ವಿವರಿಸಿದ್ದು, ಪುರವಣಿಯಲ್ಲಿ ಲೇಖನಗಳನ್ನು ಬರೆದದ್ದು ಇತ್ಯಾದಿ ನಡೆದೇ ಇತ್ತು.

೧೯೯೪ರ ನಂತರ ಆರೋಗ್ಯ ವಿಷಯದಲ್ಲಿ ಲೆಖಕರ ಕೊರತೆ ಇರುವುದು ನನ್ನ ಗಮನಕ್ಕೆ ಬಂತು. ಈ ದಿಸೆಯಲ್ಲಿಯೇ ಮುಂದುವರಿಯುವುದೆಂದು ನಿರ್ಧರಿಸಿದೆ. ಅದರ ಫಲವಾಗಿ ‘ಸುಧಾ’ದಲ್ಲಿ ಹಲವಾರು ಲೇಖನಗಳು, ತರಂಗದಲ್ಲಿ ಹತ್ತಕ್ಕೂ ಮಿಕ್ಕ ಮುಖಪುಟ ಲೇಖನಗಳು, ೨೪-೨೫ ಒಳಪುಟ ಲೇಖನಗಳು, ೪ ವೈದ್ಯಕಿಯ ಪುಸ್ತಕಗಳು ಪ್ರಕಟಗೊಂಡಿವೆ. ಒಟ್ಟಾರೆ ೧೨೦ ಕ್ಕೆ ಮಿಗಿಲಾಗಿ ಕಿರು ಲೇಖನಗಳು ಪ್ರಕಟಗೊಂಡಿವೆ. ಶಿವಮೊಗ್ಗದ ‘ನಾವಿಕ’ ಸಂಜೆಪತ್ರಿಕೆ, ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಸುಧಾ, ತರಂಗ, ಮಂಗಳ, ಪತ್ರಿಕೆಗಳಿಗೆ ನಾನು ಆಭಾರಿಯಾಗಿದ್ದೇನೆ. ನಾವಿಕ ಪತ್ರಿಕೆಯಂತೂ ನನ್ನ ವೈದ್ಯಕೀಯ ಲೇಖನಗಳನ್ನು ಪಾಕ್ಷಿಕ ಅಂಕಣ ರೂಪದಲ್ಲಿ ೪ ವರ್ಷಗಳ ಕಾಲ ಪ್ರಕಟಿಸಿ ಆಸರೆಯಾಗಿ ನಿಂತಿತ್ತು.

ಏಕತಾನತೆ ಕಳೆಯಲು ವೃದ್ಧಾಪ್ಯಶಾಸ್ತ್ರವನ್ನು (GERIATRICS) ಅಧ್ಯಯನ ಮಾಡಿ (ದೆಹಲಿ ಮತ್ತು ಕಾರೈಕುಡಿ) ಈ ವಿಷಯವಾಗಿಯೇ ಹಲವಾರು ಲೇಖನಗಳನ್ನು ಬರೆದೆ. ಇದೇ ನನಗೆ ಸಮಾಜದಲ್ಲಿ ಗುರುತನ್ನೂ, ಗುರಿಯನ್ನೂ ಗಳಿಸಿಕೊಟ್ಟಿದ್ದು.

ಆಂಗ್ಲ ವೈದ್ಯಕೀಯ ಪದಗಳಿಗೆ ಕನ್ನಡ ಸಮಾನಾರ್ಥ ಪದವನ್ನು ಹುಡುಕುವುದು ಶ್ರಮದ ಕೆಲಸವೇ. ಎಷ್ಟೋ ಬಾರಿ ಹೊಸ ಪದಗಳನ್ನು ಸೃಷ್ಟಿಸಬೇಕಾಗಿ ಬಂತು. ಅದಕ್ಕಾಗಿ ನನ್ನದೇ ಆದ ಸಣ್ಣ ಅರ್ಥಕೋಶವನ್ನು ತಯಾರಿಸಿಟ್ಟುಕೊಂಡಿದ್ದೇನೆ. ಈ ದಿಸೆಯಲ್ಲಿ ನನ್ನ ‘ಕನ್ನಡ-ರತ್ನ’ ಪದವಿಯೂ ಸಹಾಯಕ್ಕೆ ಬಂತು. ಹಿಂದೆಲ್ಲಾ ಕವಿಗಳಿಗೆ ರಾಜಾಶ್ರಯವಿರುತ್ತಿತ್ತಂತೆ. ಅದೇ ರೀತಿಯಲ್ಲಿ ‘ತರಂಗ’ವು ನನ್ನ ಲೇಖನಗಳಿಗೆ ಆಶ್ರಯವಿತ್ತಿದೆ. ತರಂಗಕ್ಕೆ ನಾನು ಋಣಿ.

ಲೇಖನ ಪ್ರಕಟವಾದಾಗ, ಓದುಗರ ಪ್ರತಿಕ್ರಿಯೆಗಳು ಬಂದಾಗ, ಅಭಿನಂದಿಸಿ ಬೇರೆಡೆಯಿಂದ ಪತ್ರಗಳು ಬಂದಾಗ ಆಗುವ ಧನ್ಯತಾಭಾವ, ಪುಳಕ ಅನನ್ಯ.

ಹೀಗೆ ಸಾಗಿದೆ ನನ್ನ ಸಾಹಿತ್ಯದ ಕೃಷಿ.

* * *