ಒಂದು ಮರದ ಕಾಂಡ ಟಿಸಿಲೊಡೆದು ಸಣ್ಣ ಟೊಂಗೆಗಳನ್ನು ಎಲೆಗಳನ್ನು, ಹೂಹಣ್ಣುಗಳನ್ನು ತರುತ್ತಲವೇ? ಈ ಆಕರ ಜೀವಕೋಶಗಳು ಹಾಗೆಯೇ ಪ್ರತಿಯೊಂದು ಸುಮಾರು ಇನ್ನೂರಾದರೂ ಬೇರೆ ಬೇರೆ ಬಗೆಯ ಜೀವಕೋಶಗಳನ್ನು ಹೊರತರುವಷ್ಟು ಸೃಷ್ಟಿ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಆಕರ ಜೀವಕೋಶಗಳು ಎಲ್ಲಿರುತ್ತವೆ? ಅವು ಎಲ್ಲಿ ಸಿಗುತ್ತವೆ? ಅವುಗಳನ್ನು ಮೊದಲು ಪತ್ತೆಮಾಡಿದ್ದು ಮೂಳೆನೆಣದಲ್ಲಿ, ನಂತರ ಭ್ರೂಣದಲ್ಲಿ. ಈಗ ಕತ್ತರಿಸಿದ ಹೊಕ್ಕುಳ ಬಳ್ಳಿಯಿಂದ ಬಸರುವ ರಕ್ತದಲ್ಲಿ ಅವು ಸಾಕಷ್ಟು ಪ್ರಮಾಣದಲ್ಲಿ ದಕ್ಕುತ್ತವೆ ಎಂದು ಗೊತ್ತಾಗಿದೆ. ಋತುಸ್ರಾವದಲ್ಲಿಯೂ ಈ ಅದ್ಭುತ ಜೀವಕೋಶಗಳು ಹೇರಳವಾಗಿ ದೊರಕುತ್ತವೆ. ಅಂಡಾಣು, ವೀರ‍್ಯಾಣುಗಳು ಸಂಯೋಗಗೊಂಡು, ಯುಗ್ಮವಾಗಿ ಅದರ ಒಂದೆರಡು ಮೆಟ್ಟಲು ಗುಣಿತದ ಫಲವಾಗಿ ಎಳೆ ಭ್ರೂಣ ರೂಪಗೊಳ್ಳುತ್ತದಲ್ಲಾ- ಅದರಲ್ಲಿನ ಆಕರ ಜೀವಕೋಶಗಳಲ್ಲಿ ಪ್ರತಿಯೊಂದು ಒಂದು ಮಗುವಾಗುವಷ್ಟು ಕ್ಷಮತೆ ಹೊಂದಿರುತ್ತದೆ.

ನಂತರದ ದಿನದ ಬಲಿತ ಭ್ರೂಣದಿಂದ ಪಡೆದ ಆಕರ ಜೀವಕೋಶಗಳಿಗೆ ಕೆಲವು ಮಿತಿಗಳಿವೆ. ಆದರೆ, ಅವಕ್ಕೂ ಹಲವು ಬಗೆಯ ಜೀವಕೋಶಗಳಾಗಿ ತಿರುಗುವ ಶಕ್ತಿ ಇರುತ್ತದೆ. ಇವು ‘ಪ್ಲೂರಿ ಪೋಟೆಂಟ್‌’ಗಳು. ದೊಡ್ಡವರ ಅಂಗಗಳಿಂದ ಹೆಕ್ಕಿತೆಗೆದ ಆಕರ ಜೀವಕೋಶಗಳಿಗೆ ಬರೀ ಒಂದೆರಡು ಬಗೆಯ ಜೀವಕೋಶಗಳಾಗಿ ಗುಣಿತಗೊಳ್ಳುವ ಸಾಮರ್ಥ್ಯವಿರುತ್ತದೆ. ವೃಷಣಗಳಲ್ಲಿರುವ ಆಕರ ಜೀವಕೋಶಗಳು “ಯೂನಿಪೋಟೆಂಟ್” ಅಂದರೆ ಅವು ಬರೀ ವೀರ‍್ಯಾಣುಗಳಾಗಬಹುದು ಅಷ್ಟೆ. ಅಂಡಕೋಶದ ಮೇಲ್ಪದರದಿಂದಲೂ ಆಕರ ಜೀವಕೋಶಗಳನ್ನು ತೆಗೆದು, ಅಂಡಾಣುಗಳನ್ನು ಪಡೆಯಬಹುದು. ತ್ವಚೆಯಲ್ಲಿಯೂ ಈ ರೀತಿ ಆಕರ ಜೀವಕೋಶಗಳಿದ್ದು, ಅವು ತಮ್ಮದೇ ಜಾತಿಯ ಕಣಗಳನ್ನು ಮತ್ತೆ ಮತ್ತೆ ಹೊಸದಾಗಿ ಉತ್ಪಾದಿಸುತ್ತಾ ಇರುತ್ತವೆ.

ಈ ಆಕರ ಜೀವಕೋಶಗಳ ಅಚ್ಚರಿ ಮೂಡಿಸುವ ಶಕ್ತಿಯನ್ನು ಮೊದಲು ಕಂಡುಹಿಡಿದಾತ, ಜೇಮ್ಸ್ ಥಾಮ್ಸನ್ (೧೯೯೮)

ಸರಿ, ಮೂಳೆಯ ಆಳದಲ್ಲಿರುವ ಆಕರ ಜೀವಕೋಶಗಳು ಸತತವಾಗಿ ರಕ್ತಕಣಗಳು ತಯಾರಿಸಿ, ರಕ್ತಕ್ಕೆ ಸೇರಿಸುತ್ತಿರುವುದು ವಿಜ್ಞಾನಿಗಳ ಚೂಪುದೃಷ್ಟಿಗೆ ಬಿದ್ದ ಮೇಲೆ ತ್ವಚೆಯಲ್ಲಿ ಕ್ಷಣ ಕ್ಷಣಕ್ಕೂ ಉದುರುತ್ತಿರುವ ಜೀವಕೋಶಗಳ ಸ್ಥಾನ ತುಂಬಲು ಅಲ್ಲಿನ ಆಕರ ಜೀವಕೋಶಗಳು ಹೊಸಕಣಗಳನ್ನು ಉತ್ಪಾದಿಸುತ್ತಿರುವುದೂ ಅವರ ಕಣ್ಣಿಗೆ ಬಿತ್ತು. ಕರುಳಿನಲ್ಲಿ ಇಂಥದ್ದೆ ಕೆಲಸ ಜರುಗುತ್ತಿದ್ದುದೂ ಗೊತ್ತಾಯಿತು. ಈ ಸೃಷ್ಟಿಕಣಗಳ ದಿವ್ಯಶಕ್ತಿ ಎಲ್ಲರನ್ನೂ ಬೆರಗುಗೊಳಿಸಿತು. ಆಕರ ಜೀವಕೋಶಗಳು ವಿಭಜನೆ ಹೊಂದಿ, ಬೇರೆ ಜೀವಕೋಶಗಳನ್ನು ಅಸ್ತಿತ್ವಕ್ಕೆ ತಂದಾಗ ತಾವು ಮಾತ್ರ ಹಾಗೆ ಉಳಿಯುವುದಂತೂ ಅವರಿಗೆ ವಿಚಿತ್ರವಾಗಿ ತೋರಿತು.

ಪ್ರಯೋಗಗಳು ಮುಂದುವರಿದವು. ಮೂಳೆ ಮಜ್ಜೆಯನ್ನು ತೆಗೆದು, ಥಾಲಸ್ಸೀಮಿಯಾ, ಲ್ಯೂಕೀಮಿಯಾ, ಅನೀಮಿಯಾ – ಇಂಥಾ ವೈಪರೀತ್ಯಗಳಿದ್ದವರಲ್ಲಿ ಸೇರಿಸಿದಾಗ, ಆರೋಗ್ಯವಾಗಿದ್ದ ರಕ್ತಕಣಗಳು ಉತ್ಪಾದನೆಯಾಗತೊಡಗಿದ್ದು, ಚಿಕಿತ್ಸಾ ವಲಯದಲ್ಲಿ ಒಂದು ಹೊಸ ಬಾಗಿಲನ್ನು ತೆರೆದಂತಾಯಿತು.

ಮಗುವಿನ ಹೊಕ್ಕುಳ ಬಳ್ಳಿಯ ಮೋಟಿನಿಂದ ತೆಗೆದ ರಕ್ತದಲ್ಲಿ ಸಾಕಷ್ಟು ಮಲ್ಟಿ ಪೋಟೆಂಟ್ ಆಕರ ಜೀವಕೋಶಗಳಿವೆಯೆಂದು ಪತ್ತೆಯಾಯಿತು. ಡಾ|| ಎಲಿಬೇನ್ ಗ್ಲಕ್‌ಮನೇ ಎಂಬಾಕೆ ಮೊದಲ ಬಾರಿಗೆ ಅವುಗಳನ್ನು ಬಳಸಿ ರಕ್ತದ ಅಸಹಜತೆ ಇದ್ದ ೫ ವರ್ಷದ ಒಂದು ಮಗುವನ್ನು ಗುಣಪಡಿಸಿದರು. ಅದರ ನಂತರ ಸುಮಾರು ೬೦೦೦ ಕ್ಕಿಂತಲೂ ಹೆಚ್ಚು ಜನ ಈ ವಿಧಾನದ ಪ್ರಯೋಜನ ಪಡೆದಿದ್ದಾರೆ.

ಆಕರ ಜೀವಕೋಶಗಳ ಇನ್ನೊಂದು ಪ್ರಮುಖ ಮೂಲವೆಂದರೆ ಮಾನವ ಭ್ರೂಣ ಯುಗ್ಮವು ಗುಣಿತಗೊಂಡು ೮-೧೦ ಕಣಗಳಾಗುವ ಗಳಿಗೆಯಲ್ಲಿ, ಪ್ರತಿಯೊಂದು ಕಣವೂ (ಬ್ಲಾಸ್ಟೋಮಿಯರ್ ಹಂತ) ನಾವು ಕತೆಗಳಲ್ಲಿ ಓದುವ ಯಾವ ಮಾಯಾವಿಗೂ ಕಡಿಮೆಯಿಲ್ಲ. ಒಂದೊಂದು ಕಣವೂ ಇನ್ನೊಂದು ಸಂಪೂರ್ಣ ಮಗುವನ್ನು ಸೃಷ್ಟಿಸುವಷ್ಟು ಅಗಾಧ ಶಕ್ತಿಯನ್ನು ತನ್ನೊಳಗೆ ಅಡಗಿಸಿಕೊಂಡಿರುತ್ತದೆ (ಟೋಚಿಪೋಟೆಂಟ್). ಗರ್ಭಪಾತವು ತಂತಾನೆ ಆಗಿದ್ದಲ್ಲಿ ಮಾತ್ರ ಹೊರಬಂದ ಭ್ರೂಣವನ್ನು ಆಕರ ಜೀವಕೋಶಗಳನ್ನು ಹೆಕ್ಕಲು ಬಳಸಿಕೊಳ್ಳಬಹುದು.

ಯಾವ ರೋಗಗಳಿಗೆ ಆಕರ ಜೀವಕೋಶಗಳು ಸಂಜೀವಿನಿಯಾಗಲಿವೆ?

೧. ಸಾಮಾನ್ಯವಾಗಿ ಕ್ಯಾನ್ಸರ್‌ಗಳು ಆಕರ ಜೀವಕೋಶಗಳ ರೋಗಗಳೇ ಆಗಿವೆ. ನಾವು ಅಲ್ಲಿ ನೀಡುವ ಮಾಮೂಲು ಚಿಕಿತ್ಸೆಯಲ್ಲಿ ಕೆಲವು ಅಪಕ್ವ ಜೀವಕೋಶಗಳು ಔಷಧಿಗಳ ಪ್ರಭಾವದಿಂದಲೂ ವಿಕಿರಣಗಳಿಂದಲೂ ತಪ್ಪಿಸಿಕೊಂಡು ಕ್ಯಾನ್ಸರ್ ಮರುಕಳಿಸಲು ಕಾರಣಗಳಾಗಿವೆ. ಇಂಥಾ ಪರಿಸ್ಥಿತಿಯಲ್ಲಿ ಆಕರ ಜೀವಕೋಶಗಳ ಚಿಕಿತ್ಸೆ ಫಲಪ್ರದವಾಗುತ್ತದೆ.

೨. ನೀಳಿತವಾಗಿ ಬೇರೂರಿ ಅಂಗ ಅಂಗಾಂಶಗಳನ್ನು ನಾಶಗೊಳಿಸಲು ಧೂಮಪಾನ ಮದ್ಯಪಾನಗಳ ಚಟವಿರುವವರಲ್ಲಿ ಹಾಳಾಗಿರುವ ಜೀವಕೋಶಗಳನ್ನು ತೆಗೆದುಹಾಕಿ ಅಲ್ಲಿನ ಆಕರ ಜೀವಕೋಶಗಳನ್ನು ತಜ್ಞರು ಚುರುಕುಗೊಳಿಸುತ್ತಾರೆ.

೩. ಸ್ತನದ ಕ್ಯಾನ್ಸರ್ ಲ್ಯೂಕೀಮೀಯ (ರಕ್ತದ ಕ್ಯಾನ್ಸರ್) ಗಳಲ್ಲೂ ಅಷ್ಟೆ. ಕ್ಯಾನ್ಸರ್‌ನ ಆಕರ ಜೀವಕೋಶಗಳ ಕಡೆಗೆ ಚಿಕಿತ್ಸಕರು ಗಮನ ಹರಿಸುತ್ತಿದ್ದಾರೆ.

೪. ಅಂಡಾಣು ಉತ್ಪಾದನೆಯಾಗದೆ, ಹೆಣ್ಣಿಗೆ ಮಕ್ಕಳಾಗದೆ ಇದ್ದಾಗ ಅಂಡಾಶಯದ ಮೇಲ್ಪದರದಲ್ಲಿನ ಆಕರ ಜೀವಕೋಶಗಳನ್ನು ಬಳಸಿ, ಅಂಡಾಣು ಉತ್ಪಾದನೆ ಮುಂದುವರೆಯುವಂತೆ ಮಾಡುವುದೂ ಸಾಧ್ಯವಾಗಿದೆ. ಹೀಗೆಯೇ ಋತುಬಂಧವನ್ನು (ಮೆನೋಪಾಸ್) ಮುಂದೂಡಲೂಬಹುದು.

೫. ಅವನತಿಯ ರೋಗಗಳಾದ ಪಾರ್ಕನ್‌ಸೋನಿಸಮ್, ಅಲ್‌ಜೈಮರ್‌ಮುಂತಾದವುಗಳಿಗೆ ಸದ್ಯದಲ್ಲಂತೂ ಯಾವ ಚಿಕಿತ್ಸೆಯೂ ಇಲ್ಲ. ಆದರೆ ಅದೇ ವ್ಯಕ್ತಿಯ ಮೂಳೆ ಮಜ್ಜೆಯಲ್ಲಿಯೇ ಬೇರೆ ಜೀವಕೋಶಗಳಾಗಿ ಪರಿವರ್ತನೆ ಹೊಂದಬಲ್ಲ ಆಕರಜೀವಕೋಶಗಳನ್ನು ಬಳಸಿ, ರೋಗಿಯನ್ನು ತಕ್ಕಮಟ್ಟಿಗೆ ಗುಣಪಡಿಸಲು ಸಾಧ್ಯವಾಗುತ್ತದೆ. ಇನ್ನೂ ಅನೇಕ ರೋಗಗಳಲ್ಲಿ ಇದು ಉಪಕಾರಿ.

ವೈದ್ಯಸಾಹಿತಿಯಾಗಿನನ್ನಅನುಭವ
ಇತ್ಯಾತ್ಮಕ ಸ್ಥಿತಿಯಲ್ಲಿ ಪಡೆಯುವುದು ಹೇಗೆ?”
ಡಾ|| ಲೀಲಾವತಿ ದೇವದಾಸ್ ಪ್ರಸಿದ್ಧ ವಿಜ್ಞಾನ ಸಾಹಿತಿ ಜೆ.ಬಿ.ಎಸ್. ಹಾಲ್ಡೇನ್ ಒಂದು ಕಡೆ ಹೀಗೆ ಹೇಳಿದ್ದಾರೆ – “ಜ್ಞಾನ ಅತ್ಯಮೂಲ್ಯವಾದದ್ದು, ನಮಗೆ ತಿಳಿದಿದ್ದನ್ನು ಇತರರೊಡನೆ ಹಂಚಿಕೊಳ್ಳುವುದು ನಮ್ಮ ಕರ್ತವ್ಯ”.

ವೈದ್ಯಸಾಹಿತಿಯಾದ ನನಗೆ ಇದೇ ತಾರಕಮಂತ್ರ! ಅರಿವಿನ ಕೊರತೆ ತೀವ್ರವಾಗಿರುವ ನಮ್ಮ ಜನತೆಯಲ್ಲಿ ಆರೋಗ್ಯದ ಬಗ್ಗೆ, ರೋಗಗಳನ್ನು ದೂರವಿರಿಸುವ ಬಗ್ಗೆ, ರೋಗ ಬಂದಾದ ಮೇಲೆ ಅದನ್ನು ಚಿಗುರಿನಲ್ಲೇ ಚಿವುಟಿ ಹಾಕುವ ಅಗತ್ಯದ ಬಗ್ಗೆ, ದಿವ್ಯ ನಿರ್ಲಕ್ಷ್ಯವಿರುವುದು ಢಾಳಾಗಿ ಕಾಣುತ್ತಿರುವಾಗ ಅವೆಲ್ಲವುಗಳ ವಿಷಯ ಸ್ವಲ್ಪ ಮಟ್ಟಿಗಾದರೂ ತಿಳಿದಿರುವ ನಾವು ಸುಮ್ಮನೆ ಕೂಡಲಾಗುವುದಿಲ್ಲ. ಅವೆಲ್ಲವುಗಳ ಬಗ್ಗೆ ಮಾಹಿತಿ ನೀಡಲೇಬೇಕಾದ ಕರ್ತವ್ಯ ನಮ್ಮ ಮೇಲಿರುತ್ತದೆ.

ಈ ಕಾಳಜಿಯೇ ನನ್ನನ್ನು ಆರೋಗ್ಯ ವಿಷಯಗಳಲ್ಲಿ ಸಾಹಿತ್ಯ ರಚನೆ ಮಾಡಲು ಪ್ರಚೋದಿಸಿತು. ಈ ಕಳಕಳಿಯೇ ನನ್ನನ್ನು ಎಲ್ಲ ಮಾಧ್ಯಮಗಳಲ್ಲೂ ಆರೋಗ್ಯಮಾಹಿತಿಗಳನ್ನು ನೀಡುತ್ತಾ ಬರಲು ಪ್ರೇರಣೆ ನೀಡಿತು. ಈ ಚಿಂತನೆಯ ನನ್ನನ್ನು ವೈದ್ಯಸಾಹಿತ್ಯ ಪರಿಷತ್ತಿಗೆ ಆಕರ್ಷಿಸಿ ಸಹಚಿಂತಕರ ಒಡನಾಟ ಹೊಂದುವಂತೆ ಮಾಡಿತು. ವೈದ್ಯಕೀಯ ಕ್ಷೇತ್ರ ಒಂದು ಮುಚ್ಚಿದ ಕೋಟೆಯಾಗಿರಬಾರದು. ಅದರ ದಿಡ್ಡೀ ಬಾಗಿಲನ್ನು ತೆರೆದು, ಒಂದು ಸಣ್ಣ ಹಣತೆಯಾಗಿ ನಿಂತು ಆರೋಗ್ಯದ ವಿಷಯದಲ್ಲಿ ವ್ಯಾಪಕವಾಗಿರುವ ಒಂದು ನಿಗೂಢತೆಯ ಕತ್ತಲನ್ನು ಹೊಡೆದೋಡಿಸಬೇಕೆಂಬುದೇ ನನ್ನ ಅಭೀಷೆ. ಅದು ನನ್ನ ಅನುಭವವೂ ಹೌದು.

ಈ ಸಾಹಿತ್ಯ ಪ್ರಕಾರದಲ್ಲಿ ಪಾಂಡಿತ್ಯ ಪ್ರದರ್ಶನ ಸಲ್ಲದು. ಭಾಷೆ ಸರಳವಾಗಿರಬೇಕು. ತಮ್ಮ ಆರೋಗ್ಯವನ್ನು ಅಲಕ್ಷಿಸಿ, ತಮ್ಮ ದೇಹ ಮನಸ್ಸುಗಳನ್ನು ಹಾಳು ಮಾಡಿಕೊಳ್ಳುತ್ತಿರುವವರಲ್ಲಿ ತಮ್ಮ ಸ್ವಸ್ಥತೆಯ ಬಗ್ಗೆ ತೀರಾ ಹೆದರಿಕೊಂಡು ಹೆಜ್ಜೆ ಹೆಜ್ಜೆಗೂ ಅದನ್ನು ಕಾಪಾಡಿಕೊಳ್ಳಲು ತೊಳಲುತ್ತಿರುವವರಲ್ಲಿ ನಾವು ಧೈರ‍್ಯ ತುಂಬಬೇಕು. ಕಾಯಿಲೆ ಒಳನುಗ್ಗಿದ ಮೇಲೆ ಅದನ್ನು ಗುಣಪಡಿಸಿಕೊಳ್ಳಲು ಹೆಣಗುವುದಕ್ಕಿಂತ ಅದನ್ನು ಮಾರು ದೂರವಿರಿಸುವುದೇ ಜಾಣತನ ಎಂದು ನನ್ನ ಲೇಖನಗಳಲ್ಲಿ, ಭಾಷಣಗಳಲ್ಲಿ, ಮಾತುಕತೆಗಳಲ್ಲಿ, ಪುಸ್ತಕಗಳಲ್ಲಿ, ಪ್ರಶ್ನೋತ್ತರಗಳಲ್ಲಿ ಒತ್ತಿ ಒತ್ತಿ ಹೇಳುವುದು ನನ್ನ ಧರ್ಮವಾಗಿದೆ.

ವೈದ್ಯ ಸಾಹಿತ್ಯವನ್ನು ರೋಚಕವನ್ನಾಗಿಸಲು ಶುಷ್ಕ ಮಾಹಿತಿಗಳೊಂದಿಗೆ ನಮ್ಮ ಅನುಭವದಿಂದ ಹೆಕ್ಕಿ ತೆಗೆದ ಉದಾಹರಣೆಗಳೂ ಉಪಕತೆಗಳೂ ಸೇರಿಕೊಂಡು ಅದನ್ನು ಸೃಜನಾತ್ಮಕವಾಗಿಸುತ್ತವೆ. ಈ ಪ್ರಕಾರದ ಭಾಷೆ ಸರಳ, ಸುಂದರವಾಗಿರಬೇಕು, ತಪ್ಪಿಲ್ಲದಿರಬೇಕು. ಹಾಗಾಗಿ, ನನ್ನ ಓದೂ ವ್ಯಾಪಕವಾಗಿದ್ದು ನನಗೆ ಕುಮ್ಮಕ್ಕು ನೀಡಿತೆನ್ನಬಹುದು. ನಿಜ, ವೈದ್ಯ ಸಾಹಿತಿಗೆ ಭಾಷೆಯ ಮೇಲೆ ಹಿಡಿತವಿರಬೇಕು, ಅದರಲ್ಲಿ ಅನುಮಾನವಿಲ್ಲ.

ಜನರ ಮೂಢನಂಬಿಕೆಗಳನ್ನು, ತಪ್ಪು ಅಭಿಪ್ರಾಯಗಳನ್ನು ತೊಡೆದುಹಾಕಲು ಕಟಿಬದ್ಧರಾಗಿರುವ ನಾವು ನಮ್ಮ ಮನಸ್ಸುಗಳಿಂದ ಅವುಗಳನ್ನು ಕಿತ್ತೆಸೆಯುವುದೂ ಬಹಳ ಮುಖ್ಯ. ಆರೋಗ್ಯ ಅಂಕಣಗಳು, ಆರೋಗ್ಯ ಲೇಖನಗಳು, ಆರೋಗ್ಯ ಪತ್ರಿಕೆಗಳು ಅಣಬೆಗಳಂತೆ ತಲೆಯೆತ್ತಿರುವಾಗ, ಈ ವಿಷಯದಲ್ಲಿ ನಾವು ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕೊನೆಯ ಮಾತು ‘ವೈದ್ಯ ಸಾಹಿತ್ಯ’ ಎನ್ನುವ ಪದವೇ ತಪ್ಪೇನೋ ಎಂದು ಎನಿಸತ್ತದೆ ನನಗೆ. ವೈದ್ಯರು ರೋಗಿಗೆ ಕೊಡುವ ಸೂಚನೆ ಚಿಕಿತ್ಸೆಗಳನ್ನು ಅದು ಸೂಚಿಸುತ್ತದೆ. ಬದಲಾಗಿ ನಮ್ಮ ಬರವಣಿಗೆ ಯನ್ನು ‘ಆರೋಗ್ಯಸಾಹಿತ್ಯ’ ಎಂದು ಕರೆದಾಗ, ಅದರಲ್ಲಿ ಜೀವನ ಶೈಲಿಯನ್ನು ಉತ್ತಮಗೊಳಿಸುವುದು ಹೇಗೆ ಕಾಯಿಲೆಗಳನ್ನು ತಡೆ ಹೇಗೆ ಎಂದೆಲ್ಲಾ ಅರ್ಥಗಳು ಮಿಂಚುತ್ತವೆ. ಆರೋಗ್ಯ ಸಾಹಿತ್ಯ ಊರ್ಧ್ವಮುಖಿಯಾಗಿ ಮೇಲೆ ಮೇಲೇರಲಿ!

* * *