ಸುರೇಶ್‌ ಒಂದು ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಗುಮಾಸ್ತ. ಆತನ ಹೆಂಡತಿ ಸುಶೀಲ ಸ್ಥಳೀಯ ಸಹಕಾರಿ ಬ್ಯಾಂಕೊಂದರಲ್ಲಿ ಉದ್ಯೋಗಸ್ಥೆ. ಅವರಿಗೆ ಎಲ್.ಕೆ.ಜಿ. ಓದುವ ಮುದ್ದು ಗಂಡು ಮಗು. ಒಟ್ಟಿನಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಿದ್ಧವಾಗಿರುವ ಸುಂದರ, ಸುಖಮಯ ಸಂಸಾರ.

ಸುರೇಶನು ಕೆಲಸ ಮಾಡುವ ಬ್ಯಾಂಕ್ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಕರೆಯಿತು. ಮಧ್ಯಮ ವರ್ಗದ ಸುರೇಶ್, ತಾನೂ ಅಧಿಕಾರಿಯಾದರೆ ತಲೆಯ ಮೇಲೆ ಒಂದು ಸೂರನ್ನು ಕಟ್ಟಿಕೊಳ್ಳಬಹುದು, ಮಗನಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಬಹುದು ಎಂದು ಆಲೋಚಿಸಿದನು. ಹೆಂಡತಿಯೂ ಒಪ್ಪಿದಳು. ಸುರೇಶ್ ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿದ. ಸ್ವಭಾವತಃ ಬುದ್ಧಿವಂತನೂ ಹಾಗೂ ಉತ್ಸಾಹಿಯೂ ಆದ ಸುರೇಶ ಬ್ಯಾಂಕ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ. ನಂತರ ಅವನಿಗೆ ದಾವಣಗೆರೆಯಿಂದ ಅಧಿಕಾರಿಯಾಗಿ ಗುಲ್ಬರ್ಗಕ್ಕೆ ವರ್ಗವಾಯಿತು!

ಕೈ ಕೆಸರಾದರೆ ತಾನೇ ಬಾಯಿ ಮೊಸರಾಗುವುದು ! ಹೆಂಡತಿ ಮತ್ತು ಮಗನನ್ನು ಬಿಟ್ಟು ತಾನೊಬ್ಬನೇ ಗುಲ್ಬರ್ಗಕ್ಕೆ ಹೊರಟ. ಒಳ್ಳೆಯ ರೂಮ್ ಹುಡುಕಿದ. ಒಂದೆರಡು ವಾರ ಹೋಟೆಲ್ಲಿನಲ್ಲಿ ಊಟ ತಿಂಡಿ ಮಾಡಿದ. ನಂತರ ಒಂದು ಸ್ಟವ್ ತಂದು ತಾನೇ ಅಡುಗೆ ಮಾಡಿಕೊಂಡು ಊಟ ಮಾಡಲಾರಂಭಿಸಿದ. ಬ್ಯಾಂಕಿನಲ್ಲಿ ಅಂತಹ ಕೆಲಸದ ಒತ್ತಡವಿರಲಿಲ್ಲ. ಸಹೋದ್ಯೋಗಿಗಳ ಸಹಕಾರ ಚೆನ್ನಾಗಿತ್ತು. ಹದಿನೈದು ದಿನಕ್ಕೊಮ್ಮೆ ಶನಿವಾರ ಮಧ್ಯಾಹ್ನ ಗುಲ್ಬರ್ಗ ಬಿಟ್ಟು ದಾವಣಗೆರೆಗೆ ಬರುತ್ತಿದ್ದ. ಹೆಂಡತಿ ಮಗುವಿನೊಡನೆ ವಾರಾಂತ್ಯ ಕಳೆದು ಭಾನುವಾರ ರಾತ್ರಿ ದಾವಣಗೆರೆಯನ್ನು ಬಿಟ್ಟು ಗುಲ್ಬರ್ಗಕ್ಕೆ ಹಿಂದಿರುಗುತ್ತಿದ್ದ.

ಒಂದು ತಿಂಗಳು ಕಳೆಯಿತು. ಸುರೇಶನಿಗೆ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಾರಂಭಿಸಿತು. ಊಟ ಬೇಡವೆನಿಸಿತು. ನಿದ್ರೆ ಸರಿಯಾಗಿ ಬರುತ್ತಿರಲಿಲ್ಲ. ಸಹೋದ್ಯೋಗಿಗಳ ಜೊತೆ ಮಾತುಕತೆ ಅಪರೂಪವಾಯಿತು. ಬದುಕು ನೀರಸವೆನಿಸಿ ಎಲ್ಲ ವಿಷಯಗಳಲ್ಲಿ ಅನಾಸಕ್ತಿ ಬೆಳೆಯಿತು. ಸುರೇಶ ನಾಲ್ಕು ದಿವಸ ರಜೆ ಹಾಕಿ ದಾವಣಗೆರೆಗೆ ಬಂದ. ಹೆಂಡತಿ ಮಗುವಿನೊಡನೆ ಕಳೆದ. ಹೆಂಡತಿ ಸುಶೀಲಳೂ ಸಹಾ ಒಂದಷ್ಟು ದಿನ ರಜೆ ಹಾಕಿ ಗಂಡನೊಡನೆ ಗುಲ್ಬರ್ಗದಲ್ಲಿ ಕಾಲ ಕಳೆದಳು. ಅಂತಹ ಪ್ರಯೋಜನವಾಗಲಿಲ್ಲ. ಸುರೇಶನು ಅಫೀಸರ್‌ಕೆಲಸವೇ ಬೇಡ ಎಂದು ಆಳಲಾರಂಭಿಸಿದನು. ‘ನಾನು ಸತ್ತುಹೋಗುವುದೇ ವಾಸಿ, ನೀನು ಮಗುವನ್ನು ಚೆನ್ನಾಗಿ ನೋಡಿಕೋ’ ಎಂದು ಹೇಳಲಾರಂಭಿಸಿದಾಗ ಸುಶೀಲ ಕಂಗಾಲಾದಳು. ಬ್ಯಾಂಕಿಗೆ ಒಂದು ತಿಂಗಳು ರಜೆ ಹಾಕುವಂತೆ ಸುರೇಶನಿಗೆ ಹೇಳಿ ಅವನನ್ನು ದಾವಣಗೆರೆಗೆ ಕರೆತಂದಳು.

ಸುರೇಶನನ್ನು ನನ್ನ ಬಳಿಗೆ ಕರೆತಂದಾಗ, ನಾನು ಆತನ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದೆ. ಸುರೇಶನಿಗೆ ಮಂಕು ವಿಕಲತೆಯಾಗಿದೆ, ಸರಿಯಾದ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂದು ಧೈರ್ಯ ಹೇಳಿದೆ. ಸುರೇಶನಿಗೆ ಆತ್ಮಹತ್ಯೆಯ ವಿಚಾರ ಪದೇ ಪದೇ ಬರುತ್ತಿರುವುದರಿಂದ ಆತನಿಗೆ ಇ.ಸಿ.ಟಿ. ಚಿಕಿತ್ಸೆ ಕೊಡಬೇಕಾಗುತ್ತದೆ. ಆತನನ್ನು ಆಸ್ಪತ್ರೆಗೆ ಸೇರಿಸಿ ಎಂದೆ. ಸುರೇಶನನ್ನು ಆಸ್ಪತ್ರೆಗೆ ಸೇರಿಸಿದರು. ಖಿನ್ನತೆ ನಿವಾರಕ ಔಷಧಗಳನ್ನು ನೀಡಿದೆ. ವಾರಕ್ಕೆ ಎರಡು ಸಲ ಇ.ಸಿ.ಟಿ. ಚಿಕಿತ್ಸೆ ನೀಡುತ್ತಿರುವಂತೆಯೇ ಸುರೇಶ್ ಚೇತರಿಸಿಕೊಂಡ ಆದರೆ ಗುಲ್ಬರ್ಗಕ್ಕೆ ಹೋಗಿ ಕೆಲಸ ಮಾಡಲು ತನ್ನಿಂದ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ.

ನಾನು ಸುರೇಶ ಹಾಗೂ ಸುಶೀಲರ ಜೊತೆಯಲ್ಲಿ ದೀರ್ಘವಾಗಿ ಚರ್ಚಿಸಿ, ಸುರೇಶನು ಬ್ಯಾಂಕ್ ಅಧಿಕಾರಿ ಕೆಲಸವನ್ನು ತ್ಯಜಿಸಿ, ಮೊದಲಿನ ಗುಮಾಸ್ತೆ ಉದ್ಯೋಗವನ್ನು ಮಾಡುವುದು ಒಳಿತು ಎಂದೆ. ಸಂಬಂಧಪಟ್ಟವರನ್ನು ಕಂಡು ಸುರೇಶನನ್ನು ಗುಲ್ಬರ್ಗದಿಂದ ದಾವಣಗೆರೆಗೆ ವರ್ಗ ಮಾಡಿಸಿ ಎಂದು ಸಲಹೆ ನೀಡಿದೆ. ನನ್ನ ಸಲಹೆಯನ್ನು ಸುರೇಶ ಹಾಗೂ ಸುಶೀಲರು ಒಪ್ಪಿದರು.

ಸುರೇಶನ ಪ್ರಕರಣ ಬ್‌ಆಂಕ್‌ಹಿರಿಯ ಅಧಿಕಾರಿಗಳ ಬಳಿ ಹೋಯಿತು. ಅವರು ಒಮ್ಮೆಲೆ ಆಫೀಸರ್ ಆಗಿರುವವರನ್ನು ಮತ್ತೆ ಗುಮಾಸ್ತನನ್ನಾಗಿ ಮಾಡಲಾಗುವುದಿಲ್ಲ. ಕೇಡರ್ ರಿವರ್ಶನ್ ಅಸಾಧ್ಯ ಎಂದರು. ಆಗ ನಾನು ಸುರೇಶನ ಆರೋಗ್ಯ ಸ್ಥಿತಿಯನ್ನು ವಿವರಿಸಿ, ಕೇಡರ್ ಬದಲಿಸಿಕೊಂಡುವಂತೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದೆ. ನನ್ನ ಅಹವಾಲಿಗೆ ಬ್ಯಾಂಕ್ ಅಧಿಕಾರಿಗಳು ಜಾಣ ಕಿವುಡನ್ನು ತೋರಿಸಿದರು.

ನಾನು ಸುರೇಶ್ ಹಾಗೂ ಸುಶೀಲರನ್ನು ಕರೆದು ಸಧ್ಯಕ್ಕೆ ಗುಲ್ಬರ್ಗಕ್ಕೆ ಹೋಗಿ ಕೆಲಸ ಮಾಡಿ. ಔಷಧಗಳನ್ನು ನಿತ್ಯ ಸೇವಿಸಿ. ಮೂರು ದಿನಗಳಿಗೊಮ್ಮೆ ಬಂದು ನನ್ನನ್ನು ಕಾಣಿ. ಮುಂದೇನು ಮಾಡೋಣ ಎಂದು ಆಲೋಚಿಸೋಣ ಎಂದೆ. ನನ್ನ ಮಾತಿಗೆ ಇಬ್ಬರೂ ಒಪ್ಪಿ ಮನೆಗೆ ಹೋದರು.

ಒಂದು ವಾರವಾಯಿತು ಸುರೇಶ ಬರಲಿಲ್ಲ. ಎರಡು ವಾರದ ಬಳಿಕ ಸುಶೀಲ ಬಂದಳು. ಕಣ್ಣೀರನ್ನು ಒರೆಸಿಕೊಳ್ಳುತ್ತಾ ಇಲ್ಲಿಂದ ಹೋದ ಮೂರನೇ ದಿನವೇ ವಿಷವನ್ನು ಕುಡಿದು ಸುರೇಶ ಆತ್ಮಹತ್ಯೆ ಮಾಡಿಕೊಂಡರು ಸಾರ್ ಎಂದು ಅಳಹತ್ತಿದಳು…

ಒಂದು ಕ್ಷಣ ಆಘಾತವಾಯಿತು ನನಗೆ. ಓ ದೇವರೇ ! ಈ ಸಾವು ನ್ಯಾಯವೇ ಎಂದು ನನ್ನ ಮನಸ್ಸು ಚೀರಿತು.

ಒಂದು ವಾರದ ನಂತರ ನನ್ನ ಮಿತ್ರ ಕಾರಂತರು ಮನೆಗೆ ಬಂದರು. ಅವರು ರಾಷ್ಟ್ರೀಕೃತ ಬ್ಯಾಂಕೊಂದರ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮುಂದೆ ನಾನು ಸುರೇಶನ ಪ್ರಕರಣವನ್ನು ವಿವರಿಸಿದೆ. ಕರುಣೆಯಿಲ್ಲದ ಕಲ್ಲು ಕಾನೂನು ಸುರೇಶನನ್ನು ಕೊಂದಿತು ಎಂದೆ. ಆಗವರು ಬ್ಯಾಂಕ್ ಕಾನೂನನ್ನು ಸಮರ್ಥಿಸಿಕೊಳ್ಳುತ್ತಾ ಸುರೇಶನನ್ನು ಅಧಿಕಾರಿಯನ್ನಾಗಿ ಮಾಡಲು ಬ್ಯಾಂಕ್ ಎಷ್ಟು ಸಮಯ, ಹಣವನ್ನು ಖರ್ಚು ಮಾಡಿರುತ್ತದೆ ಎಂಬುದನ್ನು ವಿವರಿಸಿದರು. ಸುರೇಶನಿಗೆ ಅಧಿಕಾರಿಯಾಗಲು ಇಷ್ಟವಿರದಿದ್ದರೆ, ಅವನು ಅರ್ಜಿಯನ್ನೇ ಹಾಕಬಾರದಿತ್ತು. ಒಬ್ಬನಿಗಾಗಿ ಬ್ಯಾಂಕ್ ನಿಯಮಗಳನ್ನು ಮುರಿಯಲು ಬರುವುದಿಲ್ಲ ಎಂದರು. ಆಗ ನಾನು ಸುರೇಶನ ಸ್ಥಿತಿಯನ್ನು ವಿವರಿಸುವ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿದುದನ್ನು ಹೇಳಿದೆ. ಆಗ ಕಾರಂತರು ಅಯ್ಯೋ ಬಿಡಿ ಸಾರ್! ಈಗಿನ ಕಾಲದಲ್ಲಿ ಖೊಟ್ಟಿ ಮೆಡಿಕಲ್ ಸರ್ಟಿಫಿಕೇಟ್‌ತರೋದೇನು ಕಷ್ಟವೇ? ಎಂದರು. ಅದು ಸತ್ಯವಿತ್ತು. ಹಣವೊಂದಿದ್ದರೆ, ಬದುಕಿರುವ ಮನುಷ್ಯ ಸತ್ತಿದ್ದಾನೆ ಎಂದೂ ಸರ್ಟಿಫಿಕೇಟ್ ತರಲು ಸಾಧ್ಯವಿರುವ ಕಾಲವಿದು. ಆದರೂ ನಾನು ಸುರೇಶನ ಸ್ಥಿತಿಯನ್ನು ಒಂದು ಅಪರೂಪದ ಪ್ರಕರಣ (ಎಕ್ಸೆಪ್ಶನಲ್ ಕೇಸ್) ಎಂದು ಪರಿಗಣಿಸಬೇಕಾಗಿತ್ತು ಎಂದೆ. ಆಗ ಕಾರಂತರು ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂದರು. ಆಗ ನಾನು ಇರಬಹುದು ಸಾರ್. ಆದರೆ ಸುಶೀಲಳಿಗೆ ಸುರೇಶ್ ಮತ್ತೆಂದೂ ದೊರೆಯದಂತಾದುದಕ್ಕೆ ನಿಮ್ಮ ಬ್ಯಾಂಕ್ ಏನೆಂದು ಉತ್ತರ ಕೊಡುತ್ತದೆ ಎಂದೆ. ಕಾರಂತರ ಬಾಯಿಕಟ್ಟಿತು. ಕಾನೂನನ್ನು ಮಾಡಿರುವುದು ಮನುಷ್ಯ ಎಂದೆ. ಲೆಟರ್ ಆಫ್ ದ ಲಾ ಗಿಂತ ಸ್ಪಿರಿಟ್ ಆಫ್ ದ ಲಾ ಮುಖ್ಯವೆಂದೆ. ಕಾರಂತರು ಮೌನವಾದರು.

  • ಒಬ್ಬನನ್ನು ಅಧಿಕಾರಿಯನ್ನಾಗಿ ಮಾಡಿದ ಬ್ಯಾಂಕ್, ಅವನು ಬಯಸಿದರೆ ಗುಮಾಸ್ತನನ್ನಾಗಿಸಲು ಹಿಂಜರಿಯಬಾರದು. ಒಬ್ಬನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಹಕ್ಕು ಯಾರಿಗೂ ಇರುವುದಿಲ್ಲ.
  • ಒಬ್ಬನನ್ನು ಅಧಿಕಾರಿಯನ್ನಾಗಿ ಮಾಡಲು ಬ್ಯಾಂಕ್ ಎಷ್ಟು ಹಣ ಖರ್ಚು ಮಾಡಿದೆಯೋ, ಅಷ್ಟು ಹಣವನ್ನು ಬೇಕಾದರೆ ವ್ಯಕ್ತಿಯಿಂದ ಮರಳಿ ಪಡೆಯಬಹುದು.
  • ವೈದ್ಯಕೀಯ ಪ್ರಮಾಣ ಪತ್ರಕ್ಕೆ ಬೆಲೆ ಕೊಡಬೇಕು. ಪ್ರಮಾಣ ಪತ್ರದ ಬಗ್ಗೆ ಅನುಮಾನವಿದ್ದರೆ ಮತ್ತೊಬ್ಬ ವೈದ್ಯರಿಂದ ದ್ವಿತೀಯ ಅಭಿಪ್ರಾಯ ಪಡೆಯಬಹುದು, ಇಲ್ಲವೇ ಇಡೀ ಪ್ರಕರಣವನ್ನು ಮೆಡಿಕಲ್ ಬೋರ್ಡ್‌‌ಗೆ ವಹಿಸಬಹುದು.
  • ನಾವು ಕಾನೂನನ್ನು ರಚಿಸುವುದು ನಮ್ಮ ಒಳಿತಿಗಾಗಿ ಮಾತ್ರ. ಎವ್ವೆರಿ ರೂಲ್ ಹ್ಯಾಸ್ ಆನ್ ಎಕ್ಸೆಪ್ಶನ್. ಇಂತಹ ವಿಚಿತ್ರ ನಿಯಮಗಳಲ್ಲಿಯೂ ಅಪವಾದವಿರಬೇಕು.
  • ಕಾನೂನು ಕಾಲಕ್ಕನುಗುಣವಾಗಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬೇಕು ಎಂದೆ. ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ.
  • ಇದು ನನ್ನ ಅನಿಸಿಕೆಯ ಸಾರಾಂಶ. ಓದುಗರೇ ನೀವೇನು ಹೇಳುತ್ತೀರಿ?

* * *

ವೈದ್ಯಸಾಹಿತಿಯಾಗಿನನ್ನಅನುಭವ
ಕಲೆಗಾಗಿ ಕಲೆಯೇ ?
ಡಾ|| ಕೆ. ನಾಗರಾಜ ರಾವ್ ಸಾಹಿತ್ಯದಲ್ಲಿ ಅಭಿರುಚಿ ನನಗೆ ಚಿಕ್ಕಂದಿನಿಂದಲೂ ಇತ್ತು. ಕಥೆ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದ್ದು ನನ್ನ ಸಾಹಿತ್ಯ ಆಸಕ್ತಿಯ ಪ್ರಾಥಮಿಕ ಹೆಜ್ಜೆಗಳು. ಕ್ರಮೇಣ ಈ ಅಭಿರುಚಿ ಸಾಮಾಜಿ, ಸಾಹಿತ್ಯಾತ್ಮಕ ಮತ್ತು ವಿಮರ್ಶಾತ್ಮಕ ಸಾಹಿತ್ಯವನ್ನು ಓದುವ ಹವ್ಯಾಸಕ್ಕೆ ಎಡೆಮಾಡಿಕೊಟ್ಟಿತು. ಶಾಲಾ ದಿನಗಳಲ್ಲಿ ಸ್ವಯಂ ಸಂತೋಷಕ್ಕಾಗಿ ಕವನ ಮತ್ತು ಕಥೆಗಳನ್ನು ರಚಿಸುತ್ತಿದ್ದೆ.

ವೈದ್ಯ ವಿದ್ಯಾರ್ಥಿಯಾದ ಮೇಲೆ ಸಾಹಿತ್ಯದಲ್ಲಿ ಒಲವಿದ್ದರೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗಿದ್ದರಿಂದ ನನ್ನ ಸಾಹಿತ್ಯ ಕೃಷಿ ಕಾಲೇಜಿನ ಮ್ಯಾಗಝಿನ್‌ನಲ್ಲಿ ಪ್ರಕಟಗೊಳ್ಳಲು ಅರ್ಹತೆಯನ್ನು ಹೊಂದಿದ್ದ ಬಿಡಿಕವನ ಮತ್ತು ಸಣ್ಣ ಕತೆಗಳಿಗಷ್ಟೇ ಸೀಮಿತವಾಗಿತ್ತು. ಕೆಲವೊಮ್ಮೆ ನಾನು ಬರೆದ ಕವನ, ಕತೆಗಳನ್ನು ನನ್ನ ಸ್ನೇಹಿತರಿಗೆ ತೋರಿಸಿ ತೃಪ್ತಿ ಪಟ್ಟುಕೊಳ್ಳುತ್ತಿದೆ.

ಮನೋವೈದ್ಯನಾಗಬೇಕೆಂಬ ನನ್ನ ಹಂಬಲ ಫಲಕಾರಿಯಾದ ಮೇಲೆ ಮನೋಲೋಕವನ್ನು ಸಾಹಿತ್ಯಾತ್ಮಕವಾಗಿ ಇಣುಕಿ ನೋಡಬೇಕೆಂಬ ಆಸೆ ಹುಟ್ಟಿತು. ಈ ಸಂದರ್ಭದಲ್ಲಿ ಸಾಹಿತ್ಯವೆಂದರೇನು? ಎಂಬ ಪ್ರಶ್ನೆ ಕಾಡತೊಡಗಿತು. ಇದು ಸಂಗೀತ, ಚಿತ್ರಕಲೆ ಇತ್ಯಾದಿ ಕಲೆಗಳಿಗಿಂತ ಭಿನ್ನವಾದ ಅಕ್ಷರ ಜೋಡಣೆಯ ಕೌಶಲ್ಯತೆ, ಆದರೆ ಸಾಹಿತ್ಯ ಹೇಗಿರಬೇಕೆಂಬ ಪ್ರಶ್ನೆಗೆ ಸಾಹಿತಿಗಳಲ್ಲೇ ಭಿನ್ನಾಭಿಪ್ರಾಯವಿದೆ. ಸಾಹಿತ್ಯ ಒಂದು ಕಲೆ, ಕಲೆಗಾಗಿ ಕಲೆ ಎನ್ನುವವರ ಗುಂಪು ಒಂದು. ಅದೊಂದು ಸಾಮಾಜಿಕ ಸುಧಾಋಣೆಯ ಒಂದು ಸಾಧನ ಎನ್ನುವವರದು ಇನ್ನೊಂದು ಗುಂಪು.

ಮೊದಲ ಗುಂಪಿಗೆ ಸೇರಿದ ಶುದ್ಧ ಸಾಹಿತಿಗಳು ಸೌಂದರ್ಯ ಮತ್ತು ಅನುಭವಗಳ ವರ್ಣನೆಗೆ ಆದ್ಯತೆ ನೀಡುತ್ತಾರೆ. ಸಾಹಿತ್ಯ ಸೃಷ್ಟಿಕರ್ತನಿಗೂ ಹಾಗೂ ಸಾಹಿತ್ಯಾಭಿಮಾನಗಳಿಗೂ ಸಂತಸ, ತೃಪ್ತಿ ಮತ್ತು ಮನರಂಜನೆಯನ್ನು ನೀಡುವುದು ಅವರ ಗುರಿ. ಎರಡನೆ ಗುಂಪಿಗೆ ಸೇರಿದ ಸಾಮಾಜಿಕ ಸಾಹಿತಿಗಳು ತಮ್ಮ ಅನುಭವ, ಅನಿಸಿಕೆಗಳನ್ನು ಸಮಾಜ ಸುಧಾರಣೆ ಮತ್ತು ಶುದ್ದೀಕರಣಕ್ಕಾಗಿ ಬಳಸುತ್ತಾರೆ. ಈ ದ್ವಂದ್ವತೆ ತತ್ವಶಾಸ್ತ್ರದ ಮೂಲಪ್ರಶ್ನೆಯಾದ ಅನುಭವ ಅಥವಾ ವೈಚಾರಿಕತೆ (Empirical or Experiences vs Reasoning) ಮತ್ತು ಸಾಹಿತ್ಯ ಶಾಸ್ತ್ರದ ಪ್ರಾಕಾರಗಳಾದ ಕಾಲ್ಪನಿಕ ಮತ್ತು ವಾಸ್ತವಿಕ (Romanticism vs Realism) ವಿಭಜನೆಗಳನ್ನು ಪ್ರತಿಬಿಂಬಿಸುತ್ತದೆ. ಈ ದೃಷ್ಟಿಯಲ್ಲಿ ಅವಲೋಕಿಸಿದಾಗ ವೈದ್ಯರಾಗಿ ಶುದ್ಧ ಸಾಹಿತಿಗಳಾಗಿರುವವರು ಇದ್ದಾರೆ. ವೈದ್ಯ ವಿಚಾರ ಪ್ರವರ್ತಕರಾದ ವೈದ್ಯ ಸಾಹಿತಿಗಳೂ ಇದ್ದಾರೆ. ಆದರೆ ಆಳವಾಗಿ ನೋಡಿದರೆ ಈ ಎರಡೂ ವಿಭಾಗಗಳು ಒಂದಕ್ಕೊಂದು ಪೂರಕ.

ವೈದ್ಯಸಾಹಿತ್ಯ ರಚನೆಯಿಂದ ಸಾಹಿತ್ಯ ರಚನೆಯ ಗೀಳು ಮತ್ತು ಸಾಮಾಜಿಕ ಸೇವೆಯ ಎರಡೂ ಅವಕಾಶಗಳು ಕೈಗೂಡುತ್ತದೆ ಎಂದು ನನಗೆ ಅನಿಸಿತು. ವಿಷಯ ಪ್ರಧಾನ ಸಾಹಿತ್ಯ ರಚನೆಗೆ ಭಾಷಾಂತರ ಬಹುಮುಖ್ಯ ಸಾಧನವಾಗಿದ್ದರೂ ಸಾಹಿತ್ಯಾಲಂಕಾರಕ್ಕೂ ಎಡೆ ಇದೆ ಎಂದು ಮನಗಂಡೆ, ಕಥಾರೂಪದಲ್ಲಿ ವೈದ್ಯಸಾಹಿತ್ಯ ರಚಿಸಿದರೆ, ಕುತೂಹಲ ಕೆರಳಿ, ಭಾವನೆಗಳು ಪುಟಿದೆದ್ದು ಓದು ಸರಾಗವಾಗಿ ವಾಚಕರ ಮನಸ್ಸನ್ನು ಸುಲಭವಾಗಿ ಮುಟ್ಟಬಹುದೆಂದು ತಿಳಿದು ಅಂತಹ ವೈದ್ಯಸಾಹಿತ್ಯ ರಚಿಸಬೇಕೆಂಬ ತೀರ್ಮಾನಕ್ಕೆ ಬಂದೆ. ಆದರೆ ಕಥೆ ಮತ್ತು ಭಾವನಾ ಪ್ರಧಾನವಿರುವ ಲೇಖನಗಳನ್ನು ಓದಿದ ಹಲವರೊಡನೆ ಚರ್ಚಿಸಿದಾಗ ವೈದ್ಯ ವಿಚಾರ ತಿಳಿದುಕೊಳ್ಳುವುದಕ್ಕಿಂತ ಕಥೆಯ ಹಂದರವನ್ನೇ ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳುವದನ್ನು ಗಮನಿಸಿದೆ. ಇನ್ನೂ ಕೆಲವರು ತಮ್ಮ ವೈದ್ಯಕೀಯ ತೊಂದರೆಗಳನ್ನು ಲೇಖನದಲ್ಲಿನ ಉದಾಹರಣೆಗಳಿಗಷ್ಟೇ ಹೋಲಿಸಿಕೊಳ್ಳುತ್ತಿದ್ದುದನ್ನು ಮನಗಂಡೆ. ಇದರಿಂದಾಗಿ ವೈದ್ಯ ವಿಚಾರವನ್ನು ಜನರಿಗೆ ನೇರವಾಗಿ ಮುಟ್ಟಿಸಿದರೆ ಹೆಚ್ಚು ಉಪಯುಕ್ತವೆನಿಸಿತು.

ಮನೋರೋಗಗಳ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ನಂಬಿಕೆಗಳಿಂದ ಮನೋರೋಗಿಗಳು ಕಳಂಕಿತರಾಗಿರುವುದು ಮನಸ್ಸಿಗೆ ನಾಟಿತು. ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಾಗಿರುವ ಮಹತ್ತರ ಸುಧಾರಣೆಯ ಉಪಯೋಗದಿಂದ ಅವರು ವಂಚಿತರಾಗಿರುವುದು ಗೋಚರವಾಯಿತು. ಆದ್ದರಿಂದ ಮಾನಸಿಕ ಆರೋಗ್ಯ, ಮನಃಶಾಸ್ತ್ರ ಮೂಢನಂಬಿಕೆ ಇವುಗಳ ಬಗ್ಗೆ ಜನರಲ್ಲಿ ವಿಶೇಷವಾಗಿ ಮನೋರೋಗಿಗಳಲ್ಲಿ ಮತ್ತು ಅವರ ಆಪ್ತರಲ್ಲೂ ವೈಜ್ಞಾನಿಕ ಅರಿವು ಮೂಡಿಸಬೇಕೆಂಬ ಉತ್ಕಟ ಆಸೆ ನನ್ನಲ್ಲಿ ಮನೆ ಮಾಡಿತು. ಆ ವೇಳೆಗಾಗಲೇ ಈ ದಿಶೆಯಲ್ಲಿ ವೈದ್ಯ ಸಾಹಿತ್ಯ ರಚಿಸುತ್ತಿದ್ದ ಡಾ|| ಸಿ.ಆರ್. ಚಂದ್ರಶೇಖರ್, ಡಾ|| ಅಶೋಕ ಪೈ, ಡಾ| ಡಿ.ಕೆ. ಮಹಾಬಲರಾಜು ಮತ್ತಿತರರು ನನ್ನ ಪ್ರಯತ್ನಕ್ಕೆ ಪ್ರೇರಕರಾದರು.

ಪ್ರಾರಂಭದಲ್ಲಿ ಸಾಮಾನ್ಯ ಮನೋರೋಗಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಹೊಂದಿದ್ದ ಹಸ್ತಪ್ರತಿಗಳನ್ನು ಬರೆದು ಅಚ್ಚು ಹಾಕಿಸಿ ನನ್ನಲ್ಲಿಗೆ ಬಂದ ರೋಗಿಗಳಿಗೂ ಅವರ ಆಪ್ತರಿಗೂ ಕೊಡುತ್ತಿದ್ದೆ. ಅದನ್ನು ಓದಿದವರು ಮೆಚ್ಚಿಗೆ ಸೂಚಿಸಿದರು. ಒಮ್ಮೆ ಅಲ್ಪ ಮಾನಸಿಕ ಅಸ್ವಸ್ಥತೆಗೆ ಸಾಮಾನ್ಯ ವೈದ್ಯರಿಂದ ಪರಿಹಾರ ದೊರಕದೆ ಢೋಂಗಿ ವೈದ್ಯರ ಬಲೆಗೆ ಸಿಕ್ಕಿ ಸಾವಿರಾಗು ರೂಪಾಯಿಗಳನ್ನು ಕಳೆದುಕೊಂಡು ನನ್ನೆಡೆ ಬಂದ ರೋಗಿಯೊಬ್ಬ ದುಃಖಭರಿತ ರೋಷದಲ್ಲಿ “ನಿಮ್ಮಂತಹ ಸ್ಪೆಶಲಿಷ್ಟ ಡಾಕ್ಟರ್‌ಗಳು ನಿಮ್ಮ ಹತ್ತಿರ ಬಂದ ರೋಗಿಗಳನ್ನು ನೋಡಿದರಷ್ಟೇ ಸಾಲದು, ಸಾಮಾನ್ಯ ಜನರಿಗೆ ತಿಳಿಯುವಂತೆ ರೋಗಗಳ ಬಗ್ಗೆ ಬರೆದು ಅವುಗಳನ್ನು ಸರಿಯಾಗಿ ಪ್ರಚಾರ ಮಾಡಬೇಕು. ಇದು ನಿಮ್ಮ ಡ್ಯೂಟಿ” ಎಂದು ನನ್ನ ಕರ್ತವ್ಯದ ಬಗ್ಗೆ ತಿಳಿಸಿದ. ಈ ಜವಾಬ್ದಾರಿ ಅರಿತು ವೈದ್ಯ ಲೇಖನಗಳನ್ನು ಪತ್ರಿಕೆಗಳಲ್ಲಿ, ನಿಯತಕಾಲಿಕೆಯಲ್ಲಿ ಪ್ರಕಟಿಸಲು ಪ್ರಾರಂಭಿಸಿದೆ.

ಸಾಮಾನ್ಯವಾಗಿ ಕಂಡುಬರುವ ಮನೋರೋಗಗಳ ಬಗ್ಗೆ ಸರಳ ಭಾಷೆಯಲ್ಲಿ ಲೇಖನಗಳನ್ನು ಬರೆದು ‘ಮನೋರೋಗಗಳು ಮತ್ತು ಚಿಕಿತ್ಸೆ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಮೂರು ಮುದ್ರಣ ಕಂಡಿರುವ ಈ ನನ್ನ ಪ್ರಥಮ ಪುಸ್ತಕ ಜನಪ್ರಿಯತೆ ಗಳಿಸಿತು. ನಾನೊಮ್ಮೆ ನನ್ನ ರೋಗಿಗಳನ್ನು ನೋಡುತ್ತಿರುವಾಗ ನನ್ನ ಕ್ಲಿನಿಕಿನ ಮುಂದೆ ಒಂದು ಲಾರಿ ಬಂದು ನಿಂತಿತು. ಸ್ವಲ್ಪ ಸಮಯದ ನಂತರ ನನ್ನ ಕೊಠಡಿಗೆ ಬಂದ ಲಾರಿ ಡ್ರೈವರು, “ದಾವಣಗೆರೆಯಿಂದ ಬೊಂಬಾಯಿಗೆ ಹೋಗುತ್ತಿದ್ದೆ, ದಾರಿಯಲ್ಲಿ ನನ್ನ ಲಾರಿ ಪಂಕ್ಚರ್ ಆಯಿತು, ಪಂಕ್ಚರ್ ಹಾಕಿಸಲು ಲಾರಿಯನ್ನು ಗ್ಯಾರೇಜ್‌ನಲ್ಲಿ ಬಿಟ್ಟು ಕುಳಿತಿದ್ದಾಗ ಅಲ್ಲಿ ನಿಮ್ಮ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದನ್ನು ಸ್ವಲ್ಪ ಓದಿದ ಮೇಲೆ ನನಗೆ ಗಾಬರಿ. ಕಾಯಿಲೆ ಇರಬಹುದು ಎಂದು ಅನಿಸಿದೆ. ಅದಕ್ಕೆ ನಾನು ಈಗ ಸೀದಾ ನಿಮ್ಮ ಬಳಿ ಬಂದಿದ್ದೇನೆ. ಅದಕ್ಕೆ ಸಲಹೆ ಮತ್ತು ಚಿಕಿತ್ಸೆ ಕೊಡಿ” ಎಂದು ಹೇಳಿದ. ಪರವಾಗಿಲ್ಲ, ನನ್ನ ಪುಸ್ತಕ ಇಂತಹ ಸಾಮಾನ್ಯರಿಗೂ ಉಪಯೋಗವಾಗುತ್ತಿದೆ ಎಂದು ಸಂತೋಷವಾಯಿತು.

“ನಿಮ್ಮ ಪುಸ್ತಕ ನಮ್ಮೂರಿನ ಲೈಬ್ರರಿಯಲ್ಲಿ ಓದಿದೆ. ನನಗೆ ಮನೋರೋಗಗಳ ಬಗ್ಗೆ ಸರಿಯಾದ ಅರಿವು  ಮೂಡಿತು” ಎಂದು ಆಗಾಗ ಬರುತ್ತಿರುವ ಕಾಗದಗಳಿಂದ ನನಗೆ ಸಮಾಧಾನ ಉಂಟಾಗಿದೆ.

ಆದರೂ, ಶುದ್ಧ ಸಾಹಿತ್ಯದಲ್ಲಿ ಕೈ ಆಡಿಸಿಲ್ಲ ಎಂಬ ಕೊರತೆ ನನ್ನನ್ನು ಕಾಡಿತು. ಮನಃಶಾಸ್ತ್ರದಲ್ಲಿ ಹೇರಳವಾಗಿರುವ ಸಾಹಿತ್ಯ ಸರಕನ್ನು ಬಳಸಿಕೊಂಡು ಕೆಲವು ಕಥೆಗಳನ್ನು ಬರೆದು ಅವುಗಳಲ್ಲಡಗಿರುವ ಮನೋವಿಚಾರಗಳ ಬಗ್ಗೆ ಚರ್ಚೆ ಟಿಪ್ಪಣಿ ಬರೆಯಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡು ತೃಪ್ತಿಪಡೆದಿದ್ದೇನೆ. ವೈದ್ಯಸಾಹಿತ್ಯ ಸಾಗರದಲ್ಲಿ ನಾನು ಒಂದು ಹನಿ ಮಾತ್ರ. ಆ ಸಾಗರದಲ್ಲಿದ್ದೇನೆ ಎಂಬುದೇ ನನಗೆ ಸಂತೋಷ. ನಾನು ವೈದ್ಯಸಾಹಿತ್ಯದ ಆಯಕಟ್ಟಿನೊಳಗಿರಲು ಕಾರಣವಾದ ಮಿತ್ರರು ಮತ್ತು ಮನೋರೋಗಿಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನನಗೆ ವೈದ್ಯಸಾಹಿತ್ಯ ಅತ್ಯಂತ ಉಪಯುಕ್ತ ಹಾಗೂ ಹೆಚ್ಚು ಬೇಡಿಕೆ ಇರುವ ಸಾಹಿತ್ಯವಾಗಿ ಕಂಡಿದೆ. ಇದು ಇನ್ನೂ ಹುಲುಸಾಗಿ, ಹಸನಾಗಿ, ಆರೋಗ್ಯಕರವಾಗಿ ಬೆಳೆಯಬೇಕೆಂಬುದೇ ನನ್ನ ಆಶಯ.

* * *