ನಮಗೆಲ್ಲ ಒಂದಲ್ಲ ಒಂದು ಸಲ ರೋಗಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಕಾಯಿಲೆಯಿಂದ ನರಳುತ್ತಿರುವ ನಮ್ಮ ಸಂಬಂಧಿಕರಿಗೋ, ನಿಕಟವರ್ತಿಗಳಿಗೋ ಸಾಂತ್ವನ ನೀಡಿ, ಉತ್ತೇಜನ ಕೊಡುವುದೇ ಎಲ್ಲ ಸಜ್ಜನರ ಸದುದ್ದೇಶ. ಆದರೆ ನಮ್ಮ ಸಮಾಜದಲ್ಲಿ ಈ ಬಗ್ಗೆ ತಿಳಿವಳಿಕೆ ಮತ್ತು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬ ಅರಿವು ಇರುವಂತೆ ಕಾಣಬರುವುದಿಲ್ಲ. ಈ ಮುಖ್ಯ ವಿಷಯದ ಬಗ್ಗೆ ವಿಷದೀಕರಿಸುವುದೇ ಈ ಲೇಖನದ ಉದ್ದೇಶ.

ಆಸ್ಪತ್ರೆ ಅಥವಾ ನರ್ಸಿಂಗ್ ಹೋಂನಲ್ಲಿ ದಾಖಲಾಗಿರುವ ರೋಗಿಗಳಿಗೆ, ಆತಂಕ ಇರುವುದು ಸಹಜ. ಚಿಕಿತ್ಸೆ ಹಾಗೂ ಪರೀಕ್ಷಾ ವಿಧಾನಗಳು ನಡೆಯುತ್ತಿರುವಾಗ, ರೋಗಿಗೆ ವಿಶ್ರಾಂತಿಯ ಅವಶ್ಯಕತೆಗಳ ಅವಶ್ಯ. ಇದರಿಂದಲೇ ಭೇಟಿಯ ವೇಳೆ ನಿಗದಿತವಾಗಿರುವುದು. ತುರ್ತು ಚಿಕಿತ್ಸಾ ವಿಭಾಗದಲ್ಲಂತೂ ಇದು ಬಹು ನಿಷ್ಠೆಯಿಂದ ಪಾಲಿಸಬೇಕಾದ ನಿಯಮ. ನಮ್ಮ ಆತಂಕದಿಂದಾಗಿ, ಗಂಟೆ ಗಂಟೆಗೂ ರೋಗಿಗಳನ್ನು ನೋಡಬಯಸಿ, ನಸುಗಳು ಹಾಗೂ ವೈದ್ಯರ ಸಹನೆಯನ್ನು ಪರೀಕ್ಷೆ ಮಾಡುವುದು ತರವಲ್ಲ. ಇನ್ನೊಂದು ಮುಖ್ಯ ವಿಷಯವೆಂದರೆ ಯಾವುದೇ ಸಂಸಾರದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದರೆ ಅವನ ಬಗ್ಗೆ ಮಾಹಿತಿ ಪಡೆಯಲು ಹಲವಾರು ಜನ ಬರುವುದರ ಔಚಿತ್ಯ. ದಿನಕ್ಕೆ ನಾಲ್ಕು, ಐದು ಜನ ಬಂದು ವೈದ್ಯರ ಸಮಯವನ್ನು ಹಾಳುಮಾಡುವುದರ ಬದಲು, ಒಬ್ಬರು ಅಥವಾ ಇಬ್ಬರು ಹಿರಿಯರನ್ನು ಪ್ರತಿನಿಧಿಯಾಗಿ ಇರುವಂತೆ ಹಾಗೂ ಅವರು ನಿಗದಿತ ವೇಳೆಯಲ್ಲಿ ವೈದ್ಯರನ್ನು ಭೇಟಿ ಮಾಡುವಂತೆ ಮಾಡುವುದು ಅತ್ಯವಶ್ಯಕ. ರೋಗಿಗಳ ನಿಕಟ ಸಂಬಂಧಿಗಳು ಮಾತ್ರ ವೈದ್ಯರೊಡನೆ ಸಮಾಲೋಚನೆ ಮಾಡಬೇಕು. ಸ್ನೇಹಿತರು ಸಹೋದ್ಯೋಗಿಗಳು, ಮತ್ತಿತರ ವ್ಯಕ್ತಿಗಳೆಲ್ಲ ಬಂದು ಆಸ್ಪತ್ರೆಯಲ್ಲೇ ಬಹುಕಾಲ ವ್ಯಯಮಾಡುವುದು ಅಗತ್ಯವಿಲ್ಲ.

ಯಾವುದೇ ರೋಗಿಯನ್ನು ಸಾಂತ್ವನಗೊಳಿಸಲು ಅವನೊಡನೆ ಬಹುಕಾಲ ಕಳೆಯಬೇಕಾಗಿಲ್ಲ. ನಮ್ಮ ಸಮಾಜದಲ್ಲಂತೂ, ರೋಗ ವೈಯಕ್ತಿಕ ಸಂಗತಿ ಅಲ್ಲದೇ ಹಲವಾರು ಜನ ಚರ್ಚಿಸುವ ವ್ಯಾಖ್ಯಾನ ಮಾಡುವ ಸನ್ನಿವೇಶಗಳು ಸಾಮಾನ್ಯ. ನಿಮಗೇಕೆ ಈ ಕಾಯಿಲೆ ಬಂತು? ಹೇಗೆ ಶುರುವಾಯಿತು, ಮೊದಲೇ ವೈದ್ಯರಿಗೆ ತೋರಿಸಲಿಲ್ಲವೆ? ಇತ್ಯಾದಿ. ರೋಗಿಗೆ ಕಿರಿಕಿರಿ ಮಾಡುವಂತೆ ಪ್ರಶ್ನಾವಳಿಯನ್ನು ಆರಂಭಿಸುವುದು ಅಸಮಂಜಸ. ರೋಗಿಗಳಿಗೆ ನಿದ್ರೆ ಹಾಗೂ ವಿಶ್ರಾಂತಿಯ ಅಗತ್ಯತೆಯನ್ನು ಅರಿತು ಭೇಟಿಯ ಕಾಲವನ್ನು ಮೊಟಕುಗೊಳಿಸುವುದು ಬಹು ಸೂಕ್ತ. “ನಿಮ್ಮ ಅನಾರೋಗ್ಯದ ಬಗ್ಗೆ ತಿಳಿದು ಬೇಸರವಾಯಿತು, ಒಳ್ಳೆಯ ವೈದ್ಯರು ಹಾಗೂ ಆಸ್ಪತ್ರೆಯ ಚಿಕಿತ್ಸೆಯಿಂದ ಬೇಗ ಗುಣಮುಖರಾಗಿ! ನಮ್ಮೆಲ್ಲರ ಶುಭಾಶಯ ಮತ್ತು ಭಗವಂತನ ಕೃಪೆಯಿಂದ ಎಲ್ಲ ಸರಿಹೋಗುತ್ತದೆ. ನಮ್ಮಿಂದ ಏನಾದರೂ ಸಹಾಯ ಬೇಕಿದ್ದರೆ ಹಿಂಜರಿಯಬೇಡಿ” ಎಂದಷ್ಟು ಹೇಳಿ ಉತ್ತೇಜನ ನೀಡುವುದು ಸಜ್ಜನಿಕೆ ಹಾಗೂ ಸಾಂತ್ವನ ನೀಡುವ ರೀತಿ. ಇದು ಜನಸಾಮಾನ್ಯರಿಗೆ ಮನದಟ್ಟಾಗುವುದು ಮುಖ್ಯ.

ರೋಗಿಯ ಕಾಯಿಲೆಯ ಬಗ್ಗೆ ತಿಳಿದಾಗ, ಯಾವ ಆಸ್ಪತ್ರೆಗೆ ಹೋಗಬೇಕೆಂಬ ಯಾವ ವೈದ್ಯಕೀಯ ತಜ್ಞರು ಸೂಕ್ತ ಎಂಬ ನಿರ್ಧಾರಗಳನ್ನು ರೋಗಿ ಹಾಗೂ ಅವನ ಆಪ್ತರು ಸಾಧಾರಣವಾಗಿ ತೆಗೆದುಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿ ಇತರರು ತಲೆ ಹಾಕಿ ತಮ್ಮ ಅನುಭವ, ಅನಿಸಿಕೆಗಳನ್ನು ವಿವರಿಸುವುದರಿಂದ ಸಹಾಯಕ್ಕಿಂತ ಹಾನಿಯ ಸಾಧ್ಯತೆಗಳೇ ಹೆಚ್ಚು. ಹಲವಾರು ತುರ್ತು ಸಂದರ್ಭಗಳಲ್ಲಿ ಈ ದೆಸೆಯಿಂದ ಕಾಲಹರಣವಾಗಿ, ಕಾಯಿಲೆಗಳು ಉಲ್ಬಣಗೊಳ್ಳುವುದನ್ನು ವೈದ್ಯರೆಲ್ಲರೂ ನಿಸ್ಸಹಾಯಕವಾಗಿ ನೋಡುತ್ತಿರುತ್ತಾರೆ. ಈ ಮೇಲೆ ಹೇಳಿದ ಇತರರು ರೋಗಿಯ ಪರವಾಗಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಥವಾ ಆರ್ಥಿಕವಾಗಿ ಸಹಾಯ ಮಾಡಲು ಹಿಂಜರಿಯುತ್ತಾರೆ. ಕೆಲವೊಮ್ಮೆ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಬೇರೆ ಕೇಂದ್ರಕ್ಕೆ ರೋಗಿಗಳನ್ನು ಚಿಕಿತ್ಸೆಗಾಗಿ ಕಳಿಸಬೇಕಾಗುತ್ತದೆ. ಈ ಸನ್ನಿವೇಶಗಳಲ್ಲಿ ರೋಗಿ ಹಾಗೂ ಅವನ ನಿಕಟ ಸಂಬಂಧಿಗಳು ಮಾತ್ರ ನಿರ್ಧಾರ ಮಾಡುವುದರಿಂದ ವೈದ್ಯರು ವಿಳಂಬವಿಲ್ಲದೆ ಕಾರ್ಯಗತರಾಗಲು ಸಾಧ್ಯವಾಗುತ್ತದೆ.

ಆಧುನಿಕ ವೈದ್ಯವಿಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ, ವಿಶೇಷ ವಿಭಾಗಗಳು ಮತ್ತು ತಜ್ಞರು ಲಭ್ಯ. ಆದರೆ ಇರುವ ಸಂದರ್ಭದಲ್ಲಿ ರೋಗಿಗೆ ಸಾಂತ್ವನ ನೀಡಿ ವೈದ್ಯರ ಕಾರ್ಯವನ್ನು ಸುಲಭಗೊಳಿಸುವುದು ಎಲ್ಲ ನಾಗರೀಕರ ಕರ್ತವ್ಯ.

ವೈದ್ಯಸಾಹಿತಿಯಾಗಿನನ್ನಅನುಭವ
ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಸಾಹಿತ್ಯ ಶಿಕ್ಷಣ
– ಡಾ| ಓಂ ಪ್ರಕಾಶ್ವೈದ್ಯಸಾಹಿತ್ಯದ ಮೂಲ ಉದ್ದೇಶ ಜನಸಾಮಾನ್ಯರಿಗೆ ಸುಲಭವಾಗಿ ಮನದಟ್ಟಾಗುವ ರೀತಿಯಲ್ಲಿ ಮಾಹಿತಿ ಒದಗಿಸುವುದು. ಇಂತಹ ಸಾಹಿತ್ಯವನ್ನು ವೈದ್ಯ ಸ್ವಯಂ ಪ್ರೇರಣೆಯಿಂದ ಮಾಡುತ್ತಾನೆ. ರೋಗಿಗಳ ಬವಣೆ ಅರಿತು, ಅನುಕಂಪಿತನಾಗಿ, ರೋಗಿಯ ವೇದನೆಯನ್ನು ಕಡಿಮೆ ಮಾಡುವುದು, ಯಾವುದೇ ವೈದ್ಯನ ಆದ್ಯ ಧ್ಯೇಯ, ಈ ದಿಶೆಯಲ್ಲಿ ನಾನು, ಅಲರ್ಜಿ, ಆಸ್ತಮಾ ಮತ್ತಿತರ ಶ್ವಾಸಕೋಶಗಳ ಕಾಯಿಲೆಗಳ ಬಗ್ಗೆ ಸರಳವಾಗಿ ಬರೆದಿದ್ದೇನೆ. ದಿನಪತ್ರಿಕೆಗಳು, ರೇಡಿಯೋ ಹಾಗೂ ದೂರದರ್ಶನಗಳ ಮೂಲಕ ಜನರನ್ನು ತಲುಪಲು ಯತ್ನಿಸುತ್ತಿದ್ದೇನೆ. ನ್ಯಾಷನಲ್ ಬುಕ್ ಟ್ರಸ್ಟ್‌ನ ಮೂರು ಪುಸ್ತಕಗಳನ್ನು ಏಡ್ಸ್, ಹೃದ್ರೋಗಗಳು ಹಾಗೂ ಡಯಾಬಿಟೀಸ್ – ಕನ್ನಡಕ್ಕೆ ಅನುವಾದ ಮಾಡಿದ್ದೇನೆ.

ಈ ಬಗೆಯ ಪ್ರಯತ್ನಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದು ಸಂತಸದ ವಿಷಯ. ಆದರೆ, ನನ್ನ ವೈಯಕ್ತಿಕ ಅನುಭವದಲ್ಲಿ, ನಮ್ಮ ರೋಗಿಗಳಿಗೆ ತಮ್ಮ ಕಾಯಿಲೆಗಳ ಬಗ್ಗೆ ವಸ್ತು ನಿಷ್ಠ (Objective) ಜ್ಞಾನದ ಬಗ್ಗೆ ಕುತೂಹಲ ಮತ್ತು ಕಾಳಜಿ ಇರುವಂತೆ ಕಂಡುಬರುವುದಿಲ್ಲ. ಇದು ವೈದ್ಯ ಸಾಹಿತ್ಯದ ನದಿ ರಭಸವಾಗಿ ಹರಿಯುವುದಕ್ಕೆ ಮುಖ್ಯ ಹಾಗೂ ಮಾರಕ ಅಡಚಣೆ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ಬರುವ ವರ್ಷಗಳಲ್ಲಿ ರೋಗಗಳ ನಿಧಾನ ಹಾಗೂ ಚಿಕಿತ್ಸೆಗಳಲ್ಲಿ ಅಸಾಧಾರಣ ಪ್ರಗತಿಗಳಾಗುತ್ತದೆ. ಇವುಗಳ ಬಗ್ಗೆ ಸರಳವಾಗಿ ವಿಷದೀಕರಿಸುವುದು ತಜ್ಞವೈದ್ಯರಿಗೆ ಹಿರಿಯ ಸವಾಲಾಗುವುದರಲ್ಲಿ ಸಂಶಯವಿಲ್ಲ.

ಮುಂಬರುವ ವರ್ಷಗಳಲ್ಲಿ ಜಟಿಲ ವೈದ್ಯಕೀಯ ವಿಷಯಗಳನ್ನು ಸಮರ್ಪಕ ರೀತಿಯಲ್ಲಿ ವಿವರಿಸಲು ಎಂಥ ಭಾಷೆಗಳಲ್ಲಿ ಪರಿಣಿತ ತಜ್ಞವೈದ್ಯರ ಅಗತ್ಯತೆಯನ್ನು ಹೇಗೆ ನಿಭಾಯಿಸಬಹುದು? ವೈದ್ಯಕೀಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಹಂತದಲ್ಲಿಯೇ ಈ ಕಾರ‍್ಯ ಆರಂಭವಾಗಬೇಕು ಎಂಬುದು ನನ್ನ ಅನಿಸಿಕೆ ಆಸಕ್ತ ವಿದ್ಯಾರ್ಥಿಗಳನ್ನು ವೈದ್ಯಸಾಹಿತ್ಯದ ಬಗ್ಗೆ ಒಲವು ತೋರುವಂತೆ ಮಾಡಿದಲ್ಲಿ, ಸಾಹಿತಿಗಳ ಸಂಖ್ಯೆ ನಿಧಾನವಾಗಿ ಏರುತ್ತ ಹೋಗುವ ಸಾಧ್ಯತೆ ಇರುತ್ತದೆ. ವೈದ್ಯ ಸಾಹಿತ್ಯದ ಬಗ್ಗೆ ಕಾಳಜಿ ಇರುವವರೆಲ್ಲ ಈ ದಿಶೆಯಲ್ಲಿ ಒಂದುಗೂಡಿ ಕಾರ‍್ಯಗತರಾಗುವುದು, ಮುಂದಿನ ಜನಾಂಗಕ್ಕೆ ಆಶಾಕಿರಣ.

* * *