ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿರುವ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ಕುರಿತಂತೆ ಜನ ಸಮುದಾಯದಲ್ಲಿ ಅನೇಕ ಮೂಢನಂಬಿಕೆಗಳು, ತಪ್ಪು ಗ್ರಹಿಕೆಗಳು, ಮನೆ ಮಾಡಿಕೊಂಡಿವೆ. ಇವು ಆಯುರ್ವೇದದ ಅಭಿವೃದ್ಧಿಗೆ ತೊಡಕು ಎಂಬುದರಲ್ಲಿ ಎರಡು ಮಾತಿಲ್ಲ. ಇವುಗಳಿಗೆ ಇರಬಹುದಾದ ಪ್ರಬಲ ಕಾರಣಗಳೆಂದರೆ :

 • ಜನಸಾಮಾನ್ಯರಲ್ಲಿ ಆಯುರ್ವೇದ ಕುರಿತಂತೆ ವಿವರವಾದ ಸ್ಪಷ್ಟಮಾಹಿತಿಯ ಕೊರತೆ.
 • ಜನಸಾಮಾನ್ಯರಿಗೆ ಆಯುರ್ವೇದ ಚಿಕಿತ್ಸೆಯ ಲಾಭ ತಲುಪಿಸುವ ಪ್ರಾಮಾಣಿಕ ಆಯುರ್ವೇದ ವೈದ್ಯರ ಕೊರತೆ.
 • ಆಯುರ್ವೇದದ ಅರೆಬರೆ ಜ್ಞಾನವಿರುವವರೆಲ್ಲ ಸರಿಯಾದ ಶಿಕ್ಷಣವಿಲ್ಲದೆ ಆಯುರ್ವೇದ ವೈದ್ಯ ವೃತ್ತಿಗೆ ಇಳಿದಿರುವುದು.
 • ಆಯುರ್ವೇದದ ಆಳ ವಿಸ್ತಾರಗಳ ಪರಿಚಯ ವಿಲ್ಲದೆ ‘ಕುಲ ಕಸುಬು’ ಆಗಿ ಯಾವುದೋ ಒಂದು ಕಾಯಿಲೆಗೆ ಆಯುರ್ವೇದದ ಔಷಧಿಯನ್ನು ತಲೆತಲಾಂತರದಿಂದ ವಿವೇಚನಾರಹಿತವಾಗಿ ನೀಡುತ್ತಿರುವುದು.
 • ಪದವೀಧರರೆನಿಸಿಕೊಂಡ ಆಯುರ್ವೇದ ವೈದ್ಯರು ಇತರೆ (ಆಧುನಿಕ) ವೈದ್ಯವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಿರುವುದು.
 • ಜನಸಾಮಾನ್ಯರಿಗೆ ಬೇಕಾದ ಆಯುರ್ವೇದದ ಸಂಪೂರ್ಣ ಪರಿಚಯ, ಮಾಡಿಸುವ ಹಾಗೂ ಪ್ರೋತ್ಸಾಹಿಸುವ ಸರ್ಕಾರದ, ಪತ್ರಿಕೆ, ಬಾನುಲಿ, ದೂರದರ್ಶನ ಕಾರ್ಯಕ್ರಮಗಳ, ಸಭೆ ಸಮಾರಂಭಗಳ ಕೊರತೆ.

ಇಂದಿನ ದಿನಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಜನಪ್ರಿಯತೆ ಗಳಿಸುತ್ತಿರುವಾಗ ಪ್ರಚಲಿತ ಮೂಢನಂಬಿಕೆಗಳ ವಿಶ್ಲೇಷಣೆ ವಾಸ್ತವಿಕ ವಿಚಾರಗಳ ಚರ್ಚೆ ಆಗಿ ಮೋಡ ಮುಸುಕಿದ ಸೂರ್ಯನು ಮೋಡ ಸರಿದ ನಂತರ ಪ್ರಕಾಶಿಸುವಂತೆ ಆಯುರ್ವೇದವು ತನಗೆ ಅಂಟಿರುವ ಈ ಮೂಢ ನಂಬಿಕೆಗಳಿಂದ ದೂರವಾಗಿ ಬೆಳಗಬೇಕಾಗಿದೆ.

ಆಯುರ್ವೇದ ಕುರಿತಂತೆ ಜನಸಾಮಾನ್ಯರಲ್ಲಿ ಬೇರೂರಿರುವ ಹಲವು ಮೂಢನಂಬಿಕೆಗಳು ಹೀಗಿವೆ:

 • ಆಯುರ್ವೇದ ಔಷಧಿಗಳಿಗೆ ತುಂಬ ಪಥ್ಯ ಇರುತ್ತದೆ.
 • ಆಯುರ್ವೇದ ಔಷಧಿಗಳು ತುಂಬ ನಿಧಾನವಾಗಿ ಕೆಲಸ ಮಾಡುತ್ತವೆ.
 • ಆಯುರ್ವೇದ ಔಷಧಿಗಳಿಗೆ ಹಾಳಾಗುವ ಸಮಯ ಇಲ್ಲ. (Expairy)
 • ಆಯುರ್ವೇದ ವೈದ್ಯರಲ್ಲಿ ಶಸ್ತ್ರಿಕ್ರಿಯೆ ಇಲ್ಲ.
 • ಆಯುರ್ವೇದವು ಅವೈಜ್ಞಾನಿಕ ಪದ್ಧತಿ.
 • ಆಯುರ್ವೇದ ಔಷಧಿಗಳಲ್ಲಿ ಪ್ರಾಣಿಗಳ ಅಂಗಾಂಶಗಳಿರುವುದಿಲ್ಲ.
 • ಆಯುರ್ವೇದವು ಹಲವರಿಗೆ ಒಗ್ಗುವುದಿಲ್ಲ.
 • ಆಯುರ್ವೇದ ಔಷಧಿಗಳು ಮೂತ್ರಿಪಿಂಡ, ಯಕೃತ್ತು ಮುಂತಾದವನ್ನು ಹಾಳು ಮಾಡುತ್ತವೆ.
 • ಆಯುರ್ವೇದ ಔಷಧಿಗಳು ಕೆಲವು ಕಾಯಿಲೆಗಳಿಗೆ ಮಾತ್ರ ಪರಿಣಾಮಕಾರಿ ಉದಾ: ಜಾಂಡೀಸ್
 • ಆಯುರ್ವೇದ ಔಷಧಿಗಳು ದುಬಾರಿ.
 • ಆಯುರ್ವೇದ ಔಷಧಿಗಳನ್ನು ಆಧುನಿಕ ಔಷಧಿಗಳೊಂದಿಗೆ ಬಳಸುವಂತಿಲ್ಲ.
 • ಆಯುರ್ವೇದ ವೈದ್ಯರಿಗೆ ರಕ್ತಪರೀಕ್ಷೆ ಮುಂತಾದ ಪ್ರಯೋಗಾಲಯಗಳ ಪರೀಕ್ಷೆಗಳ ಅವಶ್ಯಕತೆ ಇರುವುದಿಲ್ಲ.
 • ಆಯುರ್ವೇದ ವೈದ್ಯವು ಕಾಯಿಲೆಯನ್ನು ಹೆಚ್ಚು ಮಾಡಿ ಕಡಿಮೆ ಮಾಡುತ್ತದೆ.

ಈ ಮೇಲಿನ ತಪ್ಪುಗ್ರಹಿಕೆಗಳಿಗೆ ಸಮಾಧಾನ ಉತ್ತರವೂ ಇಂತಿದೆ.

ಆಯುರ್ವೇದ ಔಷಧಿಗಳಿಗೆ ತುಂಬ ಪಥ್ಯ ಇರುತ್ತದೆ.

‘ಪಥ್ಯ’ ಪದದ ಅರ್ಥವೇ ಸರಿಯಾದ ಪಥದಲ್ಲಿ (ಮಾರ್ಗದಲ್ಲಿ) ನಡೆಯುವುದು ಎಂದರ್ಥ. ಅಂದರೆ ಅನಾರೋಗ್ಯಕರ ಚಟುವಟಿಕೆಗಳನ್ನು ಬಿಟ್ಟು ಆರೋಗ್ಯಕರ ಆಹಾರ, ವಿಹಾರ, ವಿಚಾರಗಳಲ್ಲಿ ತೊಡಗುವುದು ಎಂದು.

ಜನಸಾಮಾನ್ಯರು ಸಾಮಾನ್ಯವಾಗಿ ಪಥ್ಯದ ಅರ್ಥವನ್ನು ‘ಆಹಾರ ನಿರ್ಬಂಧ’ ಎಂದು ಅರ್ಥೈಸುತ್ತಾರೆ. ವೈದ್ಯನಾದವನು ಯಾವುದೇ ಕಾಯಿಲೆಗೆ ಔಷಧಿಯನ್ನು ನೀಡಿದಾಗ ಅವನು ಆ ಕಾಯಿಲೆ ಗುಣಪಡಿಸಲು ಪೂರಕವಾದ ಆಹಾರ ವಿಹಾರ ವಿಧಾನವನ್ನು ಸೂಚಿಸುತ್ತಾನೆ. ಇದಕ್ಕೆ ‘ರೋಗಪಥ್ಯ’ ಎನ್ನುತ್ತಾರೆ. ಇದನ್ನು ಎಲ್ಲ ವೈದ್ಯ ಪದ್ಧತಿಯವರೂ ಅನುಸರಿಸುತ್ತಾರೆ. ಉದಾ : ಹೊಟ್ಟೆ ಉರಿ ಇದ್ದರೆ ಖಾರ, ಹುಳಿ ತಿನ್ನಬೇಡಿ. ಆಸ್ತಮಾ ಇದ್ದರೆ ಮೊಸರು, ಬಾಳೆಹಣ್ಣು, ತಿನ್ನಬೇಡಿ ಎನ್ನುವುದು, ಹಾಗೆಯೇ ಕೆಲವೊಮ್ಮೆ ನೀಡಿದ ಔಷಧಿಯ ಚಟುವಟಿಕೆಯನ್ನು ಪ್ರೋತ್ಸಾಹಿಸಲು ಆಹಾರ. ವಿಹಾರಗಳನ್ನು ತಿಳಿಸುತ್ತಾರೆ. ಇದಕ್ಕೆ ‘ಔಷಧಿಪಥ್ಯ’ ಎನ್ನುತ್ತಾರೆ. ಉದಾ : ಕೆಲವು ನಿರ್ದಿಷ್ಟ ಔಷಧಿಗಳನ್ನು ಬಿಸಿ ನೀರಿನಲ್ಲೂ ಕೆಲವನ್ನು ಹೊಟ್ಟೆ ಉರಿ ಆಗದಿರುವಂತೆ ಊಟದ ನಂತರವೂ ಕೆಲವನ್ನು ಬೇಗ ರಕ್ತಸೇರಲಿ ಎಂದು ಊಟಕ್ಕೆ ಮೊದಲು ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ.

ಈ ರೀತಿಯ ಪಥ್ಯ ವೈಖರಿಯನ್ನು ಎಲ್ಲ ಪದ್ಧತಿಯವರು ಅನುಸರಿಸುವುದು ಕಂಡು ಬರುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಕೇವಲ ಆಯುರ್ವೇದದವರಿಗೆ ಮಾತ್ರ ‘ಪಥ್ಯದ ವೈದ್ಯ’ ರೆಂಬ ಬಿರುದು ನೀಡಿ ಪ್ರತ್ಯೇಕಿಸುವುದು ಎಷ್ಟು ಸರಿ?

ಆಯುರ್ವೇದ ಔಷಧಿಗಳು ತುಂಬ ನಿಧಾನವಾಗಿ ಕೆಲಸ ಮಾಡುತ್ತವೆ

ಈ ರೀತಿಯ ಅನಿಸಿಕೆ ಇರುವವರು ತಿಳಿಯಬೇಕಾದ ಒಂದು ಬಹುಮುಖ್ಯ ಅಂಶವೆಂದರೆ ಆಯುರ್ವೇದ ವೈದ್ಯರಲ್ಲಿ ರಸೌಷಧಿಗಳೆಂಬ ವಿಭಾಗವಿದೆ. ಇವು ಪ್ರಕೃತಿಯಲ್ಲಿ ಲಭ್ಯವಾಗುವ ಎಲ್ಲ ವರ್ಗಗಳ ಅಂದರೆ ಖನಿಜ, ಸಸ್ಯಜ ಹಾಗೂ ಪ್ರಾಣಿಜ ದ್ರವ್ಯಗಳ ಸಮ್ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಖನಿಜ ಪದಾರ್ಥಗಳ ಬಳಕೆ ಹೆಚ್ಚಾಗಿರುತ್ತದೆ. ಇವುಗಳಿಂದ ಕಾಯಿಲೆಗಳನ್ನು ಶೀಘ್ರವಾಗಿ ಅಲ್ಪ ಪ್ರಮಾಣದ ಔಷಧಿಯಿಂದ ಗುಣಪಡಿಸಲಾಗುವುದು. ಅಷ್ಟೇ ಅಲ್ಲ ಆಯಾ ವೈದ್ಯನ ಅನುಭವ, ಚಿಕಿತ್ಸಾ ಜ್ಞಾನ, ಕುಶಲತೆಯ ಮೇಲೆ ಆಧಾರಿತವಾದುದರಿಂದ ಆಯುರ್ವೇದ ಔಷಧಿಗಳು ನಿಧಾನವಾಗಿ ವಾಸಿ ಮಾಡುವುದೆಂಬ ಅಪವಾದ ಸೂಕ್ತವಲ್ಲ.

ಆಯುರ್ವೇದ ಔಷಧಿಗಳು ಉಷ್ಣ ಮಾಡುತ್ತವೆ.

ಆಯುರ್ವೇದ ವೈದ್ಯರು ಶಿಫಾರಸು ಮಾಡಿದ ಅಥವಾ ತಯಾರಿಸಿ ವಿತರಿಸಿದ ಯಾವುದೇ ಔಷಧಿಯ ‘ಉಷ್ಣ’ ಅಥವಾ ‘ಶೀತ’ದ ವಿಪರೀತ  ಲಕ್ಷಣಗಳನ್ನುಂಟು ಮಾಡುವುದಿಲ್ಲ ಏಕೆಂದರೆ ಆಯುರ್ವೇದ ವೈದ್ಯರು ಒಬ್ಬ ರೋಗಿಗೆ ಔಷಧಿಯನ್ನು ನೀಡಬೇಕಾದರೆ ರೋಗಿಯ ಪ್ರಕೃತಿ, ದೂಷ್ಯ, ಬಲ, ಕಾಲ ಮುಂತಾದವರನ್ನು ಕೂಲಂಕೂಷವಾಗಿ ಪರೀಕ್ಷಿಸಿಯೇ ಔಷಧಿ ನೀಡುತ್ತಾನೆ. ಹೀಗಾಗಿ ಅಂತಹ ಔಷಧಿ ಸೇವನೆಯಿಂದ ಉಷ್ಣ ಅಥವಾ ಶೀತದ ದುಷ್ಪರಿಣಾಮ ಉಂಟಾಗುವುದು ಅಸಾಧ್ಯ, ಅಸಂಭವ. ಹಲವು ರೋಗಿಗಳು ಆಯುರ್ವೇದ ಔಷಧಿಗಳನ್ನು ವೈದ್ಯರ ಸಲಹೆ, ಸೂಚನೆಗಳಿಲ್ಲದೆಯೇ ಸ್ವಯಂ ವೈದ್ಯರಾಗಿ ಅಥವಾ ಅರೆಬರೆ ಜ್ಞಾನದಿಂದ ಸಾಮಾನ್ಯ ಜನರ (ಬಂಧುಮಿತ್ರರು ಇತ್ಯಾದಿ) ಅಭಿಪ್ರಾಯದ ಮೇರೆಗೆ ಸೇವಿಸಿದಾಗ ಅಂತಹವರಲ್ಲಿ ಔಷಧಿ ವಿವೇಚನಾರಹಿತ ಸೇವನೆಯಿಂದ ವಿಪರೀತ ಲಕ್ಷಣಗಳು ಕಾಣಬಹುದು. ಇದಕ್ಕೆ ದೂಷಿಸಬೇಕಾದದ್ದು ರೋಗಿಯ ಕ್ರಮವಲ್ಲದ ಔಷಧಿ ಸೇವನೆಯನ್ನೇ ಹೊರತು ಔಷಧಿಯನ್ನಲ್ಲ.

ಆಯುರ್ವೇದ ಔಷಧಿಗಳಿಗೆ ಹಾಳಾಗುವ ಸಮಯವಿಲ್ಲ

ಇದೊಂದು ಬಲವಾಗಿ ಬೇರೂರಿರುವ ತಪ್ಪುಗ್ರಹಿಕೆ ಆಯುರ್ವೇದ ಶಾಸ್ತ್ರಗಳು ಔಷಧಿಗಳಿಗೆ ಇರುವ ಕಾರ್ಯಾವಧಿಯ ಮಿತಿಯನ್ನು ಈ ರೀತಿ ಹೇಳಲಾಗಿದೆ :

ಚೂರ್ಣಗಳು – (ಪುಡಿಗಳು) ತಯಾರಿಸಿದ ೨ ವರ್ಷಗಳ ಒಳಗೆ; ಗುಟಿಕಗಳು – (ಮಾತ್ರೆಗಳು) ಮತ್ತು ಲೇಹ್ಯಗಳು ಒಂದು ವರ್ಷದ ಒಳಗೆ; ಘೃತಗಳು (ತುಪ್ಪದ ತರಹೆಯ ಔಷಧಿಗಳು) ಮತ್ತು ತೈಲಗಳು ನಾಲ್ಕು ತಿಂಗಳ ಒಳಗೆ; ಅಸವಾರಿಷ್ಟಗಳು ಹಾಗೂ ರಸೌಷಧಿಗಳು (ಖನಿಜ ದ್ರವ್ಯಗಳಿಂದ ತಯಾರಿಸಿದ ಔಷಧಿಗಳು) ಎಷ್ಟು ವರ್ಷಗಳು ಬೇಕಾದರೂ ಇಟ್ಟುಕೊಂಡು ಬಳಸಬಹುದು.

ಆಯುರ್ವೇದ ಔಷಧಿಗಳು ಸುಮಾರು ಹಾಳಾಗುವ ಮಾಹಿತಿ ಇಷ್ಟೊಂದು ಸ್ಪಷ್ಟವಾಗಿ ಇದ್ದರೂ ಸರ್ಕಾರವು ಇಂದಿಗೂ ಔಷಧಿ ತಯಾರಿಸುವ ಕಂಪನಿಗಳಿಗೆ ಹಾಳಾಗುವ ಸಮಯ ಔಷಧಿಯ ಮೇಲೆ ನಮೂದಿಸುವಂತೆ ಕಡ್ಡಾಯಗೊಳಿಸದೆ ಇರುವುದು ಅಚ್ಚರಿಯನ್ನುಂಟು ಮಾಡುತ್ತದೆ.

ಆಯುರ್ವೇದ ವೈದ್ಯರಲ್ಲಿ ಶಸ್ತ್ರಿಕ್ರಿಯೆ ಇಲ್ಲ

ಈ ಅಭಿಪ್ರಾಯವಿರುವವರು ಆಯುರ್ವೇದ ಶಸ್ತ್ರಿಕ್ರಿಯೆ ಕುರಿತಂತೆ ವಿಶ್ವದಾದ್ಯಂತ ಎಲ್ಲ ವೈದ್ಯ ವಿಜ್ಞಾನಿಗಳು ಯಾವು ಭಿನ್ನಾಭಿಪ್ರಾಯವಿದೆ ಒಕ್ಕೂರಲಿನಿಂದ ಒಪ್ಪಿರುವ ಈ ಅಂಶಗಳನ್ನು ಗಮನಿಸಬೇಕು.

– ಆಯುರ್ವೇದ ಸುಶ್ರುತಾಚಾರ್ಯರು ಶಸ್ತ್ರಕ್ರಿಯೆಯ ಪಿತಾಮಹ.

– ಇವರು ರಚಿಸಿರುವ ಸುಶ್ರುತ ಸಂಹಿತೆಯ ಶಸ್ತ್ರಕ್ರಿಯೆಗೆ ಸಂಬಂಧಿಸಿದ ಪ್ರಪ್ರಥಮ ಗ್ರಂಥ.

– ಇಂದು ಬಹು ಮಾನ್ಯವಾಗಿ ಬೆಳೆದಿರುವ ಪ್ಲಾಸ್ಟಿಕ್ ಸರ್ಜರಿಯು (ಸುರೂಪಿ ಶಸ್ತ್ರಕ್ರಿಯೆ) ಆಯುರ್ವೇದದ ಅಪೂರ್ವ ಕೊಡುಗೆ.

– ಆಯುರ್ವೇದ ಶಸ್ತ್ರಕ್ರಿಯೆಯಾದ ‘ಕ್ಷಾರ’ ಕರ್ಮವು ಮೂಲವ್ಯಾದಿಗೆ ಅತ್ಯುತ್ತಮವಾದ ಚಿಕಿತ್ಸೆ.

– ಮುಂಬರುವ ದಿನಗಳಲ್ಲಿ ಆಯುರ್ವೇದ ಶಸ್ತ್ರಚಿಕಿತ್ಸೆಯ ಉಳಿದ ಮಜಲುಗಳಾದ ಅಗ್ನಿಕರ್ಮ, ಕ್ಷಾರಕರ್ಮ, ಹಾಗೂ ಇನ್ನಿತರೆ ಶಸ್ತ್ರಿಕ್ರಿಯಾ ವಿಧಾನಗಳು ಮಹತ್ವ ಪಡೆಯುವುದರಲ್ಲಿ ಯಾವ ಸಂಶಯವೂ ಇಲ್ಲ.

ಆಯುರ್ವೇದವು ಅವೈಜ್ಞಾನಿಕ ಪದ್ಧತಿ:

ಪ್ರಯೋಗ ಪ್ರತ್ಯಕ್ಷ, ಪ್ರಮಾಣಗಳಿಂದ ಸ್ಥಿರವಾದ ವ್ಯವಸ್ಥಿತವಾದ ಸಾಮಾನ್ಯವಾಗಿ ಅನ್ವಯಿಸುವ ಜ್ಞಾನಕ್ಕೆ ‘ವಿಜ್ಞಾನ’ ಎನ್ನುತ್ತಾರೆ. ಈ ಅರ್ಥದ ಮೂಲಕ ಆಯುರ್ವೇದವನ್ನು ನೋಡಿದಾಗ ಇದರ ವಿಚಾರಗಳು ಹಾಗೂ ಚಿಕಿತ್ಸಾಕ್ರಮಗಳು ಅನೇಕ ಶತಮಾನಗಳಿಂದಲೂ ಕಾಲದಿಂದ ಕಾಲಕ್ಕೆ ಅನೇಕ ಪೀಳಿಗೆಯ ವೈದ್ಯ ಸಮೂಹದಿಂದ ಸಂಶ್ಲೇಷಿಸಿ, ಸಂಶೋಧಿಸಿ, ಸಂಸ್ಕರಿಸಿ, ಸಂರಕ್ಷಿಸಲ್ಪಟ್ಟ ಅನುಭವ ಗ್ರಾಹಿಯಾದ ವೈದ್ ವಿಜ್ಞಾನವಾಗಿದೆ. ಪರಂಪರಾನುಗತವಾಗಿ ಅನಾದಿಕಾಲದಿಂದಲೂ ಹರಿದುಬಂದಿರುವ ಈ ಅಮೋಘ ಅಪೂರ್ವ ವೈದ್ಯ ಸಂಪತ್ತನ್ನು ಸಂಕುಚಿತ ದೃಷ್ಟಿಯಿಂದ ಅವೈಜ್ಞಾನಿಕವೆಂದು ಮೂದಲಿಸುವುದು ರೋಗಿಷ್ಟ ಮನಸ್ಥಿತಿಯ ಅನಿಸಿಕೆ ಎಂದೆನ್ನದೆ ಬೇರೇನೂ ಹೇಳಲಾದೀತು?

ವೈಜ್ಞಾನಿಕ ಚೌಕಟ್ಟಿಗೆ ಒಳಪಟ್ಟ ಜ್ಞಾನವು ನಿಖರವಾದ ಸಮರ್ಥ ವಿವರಣೆ ಹೊಂದಿದ ತಿಳಿವಳಿಕೆಯಾದವರೂ ಅದರ ಬಾಹುಗಳು ತುಂಬಾ ಸೀಮಿತವಾದುದರಿಂದ ಇಡೀ ಜ್ಞಾನವೃಕ್ಷವನ್ನು ಹಿಡಿದಿಟ್ಟುಕೊಳ್ಳಲು ಅದಕ್ಕೆ ಶಕ್ಯವಿಲ್ಲ. ಹಾಗಾಗಿ ಅದರ ಚೌಕಟ್ಟಿಗೆ ನಿಲುಕದ ವಿಷಯಗಳನ್ನು ತ್ಯಾಜ್ಯವೆಂದು ತಿರಸ್ಕರಿಸುವುದು, ದಿಕ್ಕರಿಸುವುದು, ದಾಷ್ಟ್ರತನದ ಸಂಕೇತವಾಗಿ ಬಹುದೊಡ್ಡ ಜ್ಞಾನದ ಸಂಪತ್ತಿನ ಅವನತಿಗೆ ದಾರಿ ಮಾಡಿಕೊಡುತ್ತದೆ. ಇದನ್ನರಿತೇ ಚರಕಾಚಾರ್ಯರು ತಮ್ಮ ಗ್ರಂಥದಲ್ಲಿ ‘ಪ್ರತ್ಯಕ್ಷಂ ಅಲ್ಪಂ ಅಪ್ರತ್ಯಕ್ಷಂ ಅನಲ್ಪಂ’ ಎಂದಿದ್ದಾರೆ. ಅಂದರೆ ‘‌ಪ್ರತ್ಯಕ್ಷ ತಿಳಿವಳಿಕೆ ಬರುವ ಜ್ಞಾನವು ಸೀಮಿತವಾಗಿದ್ದ ಅಪ್ರತ್ಯಕ್ಷ ಜ್ಞಾನವು ಅಪರಿಮಿತವಾಗಿದೆ’ ಎಂದಿದ್ದಾರೆ.

ಆಯುರ್ವೇದ ಔಷಧಿಗಳಲ್ಲಿ ಪ್ರಾಣಿಗಳ ಅಂಗಾಂಶಗಳಿರುವುದಿಲ್ಲ:

ಆಯುರ್ವೇದ ಔಷಧಿಗಳ ತಯಾರಿಕೆಗೆ ಪ್ರಕೃತಿಯಲ್ಲಿ ಸಿಗುವ ಮೂರು ವರ್ಗದ ದ್ರವ್ಯಗಳನ್ನು ಬಳಸಲಾಗುತ್ತದೆ. ಅವು ಯಾವುವೆಂದರೆ ಸಸ್ಯಜ-ಗಿಡಮೂಲಿಕೆಗಳು, ಖನಿಜ-ಬೆಳ್ಳಿ ಬಂಗಾರ ಮುಂತಾದ ಲೋಹಗಳು ಮತ್ತು ಪ್ರಾಣಿಜ- ಪ್ರಾಣಿಗಳ ಉತ್ಪನ್ನಗಳಾದ ಹಾಲು-ತುಪ್ಪ, ಜೇನುತುಪ್ಪ, ಮೂತ್ರ-ರಕ್ತ (ಆಧುನಿಕ ವೈದ್ಯದಲ್ಲೂ ರಕ್ತದ ಪೂರೈಕೆಗಾಗಿ ರಕ್ತದ ಬಳಕೆಯಾಗುತ್ತದೆ ಎಂಬುದು ನೆನಪಿಡಿ)

ಪ್ರಾಣಿಗಳ ಮಾಂಸವನ್ನು ಅತಿ ವಿರಳವಾಗಿ ಹಲವು ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಹೊಟ್ಟೆಗೆ ಸೇವಿಸುವ ಔಷಧಿಗಳಲ್ಲಿ ಪ್ರಾಣಿಗಳ ಮೂಳೆಗಳನ್ನು ಸೇರಿಸುವುದು ಎಲ್ಲೂ ಕಂಡುಬಂದಿಲ್ಲ. ಆದರೆ ಹೊರಲೇಪನಕ್ಕೆ ಅಪರೂಪವಾಗಿ ಒಂದು ಕಡೆ ಮಾತ್ರ ಸೂಚಿಸಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಈಗ ಬಳಕೆಯಲ್ಲಿರುವ ಆಯುರ್ವೇದ ಔಷಧಿಗಳಲ್ಲಿ  ಪ್ರಾಣಿಗಳ ಭಾಗಗಳಾದ ಮೂಳೆ ಮುಂತಾದವುಗಳ ಔಷಧಿಗಳು ಇಲ್ಲವೇ ಇಲ್ಲವೆಂದು ಹೇಳಬಹುದು.

ಆಯುರ್ವೇದವು ಹಲವರಿಗೆ ಒಗ್ಗುವುದಿಲ್ಲ:

ಒಮ್ಮೊಮ್ಮೆ ಕೆಲವು ರೋಗಿಗಳು ನನ್ನ ಚಿಕಿತ್ಸಾಲಯಕ್ಕೆ ಬಂದು, “ಸಾರ್, ನನಗೆ ಆಯುರ್ವೇದ ಔಷಧಿಗಳೇ ಆಗುವುದಿಲ್ಲ. ತೆಗೆದುಕೊಂಡರೆ ನನಗೆ ಕೂಡಲೇ ಹೊಟ್ಟೆ ನೋವು ಬರುತ್ತದೆ”, ಎಂದಾಗ ನನಗೆ ತಮಾಷೆ ಎನಿಸುತ್ತದೆ. ಏಕೆಂದರೆ ಎಷ್ಟೋ ವೇಳೆ ನಮಗೆ ತಿಳಿದೋ ತಿಳಿಯದೆಯೋ ಪ್ರತಿಕ್ಷಣ, ಪ್ರತಿದಿನ ನಾವು ಒಂದಲ್ಲ ಒಂದು ರೀತಿಯಲ್ಲಿ ಆಯುರ್ವೇದವನ್ನು ಅನುಸರಿಸುತ್ತಲೇ ಇರುತ್ತೇವೆ. ಉದಾ: ಬೆಳಗ್ಗೆ ಬೇಗ ಏಳಬೇಕೆಂಬುದು, ಎದ್ದ ಕೂಡಲೇ ಹಲ್ಲು, ನಾಲಿಗೆ ತಿಕ್ಕಬೇಕೆಂಬುದು, ವ್ಯಾಯಾಮ ಮಾಡಬೇಕೆಂಬುದು, ಆಹಾರ ಸೇವಿಸುವ ಕ್ರಮ ನಾವು ಆಯುರ್ವೇದ ಶಾಸ್ತ್ರಗಳಲ್ಲಿ ತಿಳಿಸಿರುವಂತೆಯೇ ಆಚರಿಸುತ್ತೇವೆ. ಹಾಗೆಯೇ ನಾವು ಆಚರಿಸುವ ಹಬ್ಬ, ಹರಿದಿನಗಳು, ಪೂಜಾ ವಿಧಾನಗಳು, ಆಹಾರ ವೈವಿಧ್ಯತೆಯು ನಾವು ಈ ಋತುಗಳಲ್ಲಿ ಆಯುರ್ವೇದಕ್ಕನುಗುಣವಾಗಿ ತಿನ್ನಬೇಕಾದ ಆಚರಿಸಬೇಕಾದ ಆಹಾರ ವಿಹಾರಗಳ ಪರಿಕಲ್ಪನೆಯೇ ಆಗಿದೆ. ಸರಳವಾಗಿ ಹೇಳಬೇಕೆಂದರೆ ಪ್ರತಿಯೊಬ್ಬನ ಅಡುಗೆ ಮನೆಯು ಒಂದು ಆಯುರ್ವೇದ ಔಷಧಾಗಾರವಾಗಿದೆ. ನಾವು ಅಡುಗೆಗೆಂದು ಬಳಸುವ ಸಾಮಗ್ರಿಗಳಾದ ಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಧನಿಯ ಮುಂತಾದವುಗಳೆಲ್ಲ ಆಯುರ್ವೇದ ಔಷಧಿ ಪದಾರ್ಥಗಳೇ ಆಗಿವೆ. ವಸ್ತುಸ್ಥಿತಿ ಹೀಗಿರುವಾಗ ಆಯುರ್ವೇದ ಔಷಧಿಗಳು ನನಗೆ ಒಗ್ಗುವುದಿಲ್ಲ ಎಂದು ಹೇಳುವುದು ಎಷ್ಟು ಸಮಂಜಸ ಎಂಬುದನ್ನು ಓದುಗರೇ ನಿರ್ಣಯಿಸಬೇಕು.

ಆಯುರ್ವೇದ ಔಷಧಿಗಳು ಮೂತ್ರಿಪಿಂಡ, ಯಕೃತ್ತು ಮುಂತಾದವನ್ನು ಹಾಳು ಮಾಡುತ್ತವೆ

ಈ ಅಭಿಪ್ರಾಯವು ಜನಸಾಮಾನ್ಯರಿಗೆ ಬರುವಂತೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವವರು ಆಯುರ್ವೇದದ ಏಳಿಗೆಯನ್ನು ಸಹಿಸದ ಸಂಕುಚಿತ ಭಾವನೆಯ ವೃತ್ತಿ ಬಂಧುಗಳು ತಾವು ಕಲಿತಿರುವ ವೃತ್ತಿವಿದ್ಯೆಯೇ ಶ್ರೇಷ್ಠ, ಮಿಕ್ಕಿದ್ದೆಲ್ಲ ನಿಕೃಷ್ಟ ಹಾಗೂ ಅಪಾಯಕಾರಿ ಎಂಬ ಭಾವನೆಯನ್ನು ಸಾಕ್ಷಾಧಾರಗಳಿಲ್ಲದೆ ಈ ರೀತಿಯ ಬೇಜವಾಬ್ದಾರಿ ಅಭಿಪ್ರಾಯಗಳನ್ನು ವ್ಯವಸ್ಥಿತವಾಗಿ ಜನ ಸಾಮಾನ್ಯರಲ್ಲಿ ತೇಲಿಬಿಡುವ ಕೆಲಸ ನಿಗದಿತ ಕಾರ್ಯಕ್ರಮದಂತೆ ನಡೆಸುತ್ತಿರುವುದು ಮುಖ್ಯ ಕಾರಣವಾಗಿದೆ.

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಬಳಸುವ ಖನಿಜ ಪದಾರ್ಥಗಳಿಂದ ತಯಾರಿಸಿದ ಔಷಧಿಗಳು ಈ ರೀತಿ ಕಾರ್ಯವೆಸಗುತ್ತವೆ ಎಂಬುದು ಅವರ ಗ್ರಹಿಕೆ. ಆದರೆ ಇಲ್ಲಿ ಮನಗಾಣಬೇಕಾದ ಅಂಶವೆಂದರೆ, ಆಯುರ್ವೇದ ಔಷಧಿಗಳನ್ನು ಅದರಲ್ಲೂ ಖನಿಜ ದ್ರವ್ಯಗಳನ್ನು ಔಷಧಿಗಳಾಗಿ ರೂಪಾಂತರಿಸಿ ಕೊಡುವುದಕ್ಕೆ ಮೊದಲು ಅವುಗಳನ್ನು ಕಟ್ಟು ನಿಟ್ಟಿನ ಶುದ್ಧೀಕರಣಕ್ಕೆ (ಇದಕ್ಕೆ ಆಯುರ್ವೇದ ಪಾರಿಭಾಷಿಕೆಯಲ್ಲಿ ‘ಶೋಧನ’ ವೆನ್ನುತ್ತಾರೆ) ಒಳಪಡಿಸಿ ನಂತರ ಭಸ್ಮ ಮಾಡುವ ‘ಮಾರಣ’ ಕ್ರಮಕ್ಕೆ ಒಳಪಡಿಸಿದಾಗ ಅದು ನಿರ್ದಿಷ್ಟ ಪ್ರಮಾಣದಲ್ಲಿ ಯಾವುದೇ ತೊಂದರೆಯನ್ನುಂಟು ಮಾಡದೆ ದೈಹಿಕವಾಗಿ ಬಳಸಲು ಯೋಗ್ಯವಾದ ಅಮೃತಸಮಾನವಾದ ಔಷಧಿಯಾಗಿ ಪರಿವರ್ತನೆಯಾಗುತ್ತದೆ.

ಇಂತಹ ಔಷಧಿಯನ್ನು ಸೂಕ್ತ ವೈದ್ಯರು ಚಿಕಿತ್ಸೆಗೆ ಬಳಸಿದಾಗ ಇದರಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ. ಎಷ್ಟೋ ವೇಳೆ ಇತರೆ ವೈದ್ಯ ಪದ್ಧತಿಯ ಔಷಧಿಗಳಿಂದ ಹಾಳಾದ ವೃಕ್ಕ, ಯಕೃತ್ತುಗಳು ಸಹ ಆಯುರ್ವೇದ ಔಷಧಿಗಳಿಂದ ಪುನಃ ಸಹಜ ಸ್ಥಿತಿಗೆ ಬಂದಿರುವ ನಿದರ್ಶನಗಳು ಬೇಕಾದಷ್ಟಿದೆ.

ಆಯುರ್ವೇದ ಔಷಧಿಗಳು ಕೆಲವು ಕಾಯಿಲೆಗಳಿಗೆ ಮಾತ್ರ ಪರಿಣಾಮಕಾರಿ ಉದಾ: ಜಾಂಡೀಸ್

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಎಲ್ಲ ಕಾಯಿಲೆಗಳಿಗೂ ವಿಶೇಷ ಪರಿಣಾಮಕಾರಿ ಚಿಕಿತ್ಸೆಗಳ ಪಟ್ಟಿಗಳನ್ನೇ ನೀಡಿದ್ದಾರೆ. ಬಹಳಷ್ಟು ವೈದ್ಯರು ಇವುಗಳನ್ನು ತಮ್ಮ ಚಿಕಿತ್ಸೆಯಲ್ಲಿ ಅಳವಡಿಸಿ ಅವುಗಳ ಸತ್ಪರಿಣಾಮಗಳ ಲಾಭಗಳನ್ನು ರೋಗಿ ಸಮುದಾಯಕ್ಕೆ ತಲುಪಿಸುವಂತೆ ಮಾಡುವ ಕೆಲಸವು ಇಂದಿನ ಆಯುರ್ವೇದ ವೈದ್ಯ ಸಮುದಾಯದ ಮೇಲಿದೆ. ಅದ್ಭುತ ಪ್ರಗತಿಯನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ಆಯುರ್ವೇದ ವೈದ್ಯಶಾಸ್ತ್ರವು ಕೇವಲ ಜಾಂಡೀಸ್ ಮುಂತಾದ ಕಾಯಿಲೆಗಳಿಗೆ ಮಾತ್ರವಲ್ಲದೆ ಬಂಜೆತನ, ಕೀಲುನೋವು, ಅಶಕ್ತತೆ, ಮಾನಸಿಕ ವ್ಯಾಧಿಗಳು ಮುಂತಾದವುಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ಹೊಂದಿ ಜನಪ್ರಿಯತೆ ಗಳಿಸುತ್ತಿರುವುದು ಅದರ ಯಶಸ್ಸನ್ನು ಸಾದರಪಡಿಸುತ್ತದೆ.

ಆಯುರ್ವೇದಕ್ಕೆ ಮತ್ತೊಂದು ಹೆಸರು ‘ಅಷ್ಟಾಂಗ ಆಯುರ್ವೇದ’ ಎಂದು. ಅಂದರೆ ಇದು ಎಂಟು ಅಂಗಗಳನ್ನೊಳಗೊಂಡಿದೆ ಎಂದು ಅವು ಯಾವುವೆಂದರೆ :

ಕಾಯಚಿಕಿತ್ಸೆ :ಶರೀರ ವ್ಯಾಧಿಗಳ ಚಿಕಿತ್ಸೆ (General medicine)

ಬಾಲ ಚಿಕಿತ್ಸೆ : ಮಕ್ಕಳ ವ್ಯಾದಿಗಳ ಚಿಕಿತ್ಸೆ (Paediatrics)

ಗ್ರಹ ಚಿಕಿತ್ಸೆ : ಮಾನಸಿಕ ವ್ಯಾದಿಗಳ ಚಿಕಿತ್ಸೆ (Pshy chiatry)

ಊರ್ಧ್ವಾಂಗ : ಕತ್ತಿನ ಮೇಲ್ಭಾಗದ ಅಂಗಗಳಾದ ಕಣ್ಣು, ಮೂಗು, ಕಿವಿ, ಬಾಯಿ, ಹಲ್ಲು, ವ್ಯಾಧಿಗಳ ಚಿಕಿತ್ಸೆ (ENT, Eyes, Dentistyry)

ಶಲ್ಯ ಚಿಕಿತ್ಸೆ : ಶಸ್ತ್ರಕ್ರಿಯೆಗೆ ಅಗತ್ಯವಿರುವ ವ್ಯಾಧಿಗಳ ಚಿಕಿತ್ಸೆ (Surgery)

ದಂಷ್ಟ್ರ : ವಿಷ ಚಿಕಿತ್ಸೆ (Toxicology)

ಜರಾ ಚಿಕಿತ್ಸೆ : ವೃದ್ಧರ ಆರೋಗ್ಯ ರಕ್ಷಣೆಗೆ ಬೇಕಾದ ಚಿಕಿತ್ಸೆ (Geriatrics)

ವೃಷ : ಆರೋಗ್ಯಕರ ಲೈಂಗಿಕ ಜೀವನಕ್ಕೆ ಬೇಕಾದ ಚಿಕಿತ್ಸೆ (Sexual medicine)

ಇಷ್ಟೆಲ್ಲ ವಿಭಾಗಗಳನ್ನು ಹೊಂದಿರುವ ಆಯುರ್ವೇದವನ್ನು ಒಂದು ಸಂಪೂರ್ಣ ವೈದ್ಯಪದ್ಧತಿ’ ಯೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಕೇವಲ ಕೆಲವೇ ವ್ಯಾಧಿಗಳಿಗಲ್ಲದೆ ಎಲ್ಲ ಕಾಯಿಲೆಗಳಿಗೂ ವಿಶಿಷ್ಟವಾದ ಯಶಸ್ವಿ ಚಿಕಿತ್ಸೆಗಳಿದ್ದು ಅವುಗಳನ್ನು ಜನಪ್ರಿಯಗೊಳಿಸುವ ಜವಾಬ್ದರಿ ವೈದ್ಯ ಸಮುದಾಯದ ಮೇಲಿದೆ.

ಆಯುರ್ವೇದ ಔಷಧಿಗಳು ದುಬಾರಿ:

ಇದು ಪೂರ್ತಿ ನಿಜವಲ್ಲ. ಆಯುರ್ವೇದ ಔಷಧಿಗಳ ಮೇಲೆ ಅವುಗಳನ್ನು ತಯಾರಿಸಲು ಬಳಸಿರುವ ಔಷಧಿ ದ್ರವ್ಯಗಳ ಮೇಲೆ ನಿರ್ಧಾರವಾಗುತ್ತದೆ. ಆಯುರ್ವೇದದಲ್ಲಿ ಹುಲ್ಲಿನಿಂದ ಹಿಡಿದು ಚಿನ್ನದವರೆಗೂ (ವಜ್ರವೂ ಸೇರಿದಂತೆ) ಔಷಧಿಯಾಗಿ ಬಳಸುತ್ತಾರೆ. ಹಾಗಾಗಿ ಔಷಧಿ ತಯಾರಿಸಲು ಬಳಸುವ ವಸ್ತು ದುಬಾರಿಯಾದಷ್ಟು ಔಷಧಿಯು ದುಬಾರಿಯಾಗುತ್ತದೆ. ವೈದ್ಯನಾದವನು ರೋಗಿಗೆ ಶೀಘ್ರ ಹಾಗೂ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುವ ಉದ್ದೇಶದಿಂದ ಸರಿಯಾದ ಔಷಧಿಯನ್ನು ನೀಡುವಾಗ ಅವನು ಔಷಧಿಯ ಬೆಲೆ ಹಾಗೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಹಲವು ವ್ಯಾಧಿಗಳಲ್ಲಿ ಅಂದರೆ ನಿಸ್ಸಂತಾನತೆ, ದಾರುಣವಾದ ಆಮವಾತ, ಶ್ವಾಸ, ವಾತರೋಗಗಳು ಮುಂತಾದವುಗಳಲ್ಲಿ ಚಿನ್ನದ ಭಸ್ಮದ ಬಳಕೆ ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಚಿಕಿತ್ಸೆಯ ಬೆಲೆಯೂ ಜಾಸ್ತಿಯಾಗುತ್ತದೆ.

ಆಯುರ್ವೇದ ಔಷಧಿಗಳನ್ನು ಆಧುನಿಕ ಔಷಧಿಗಳೊಂದಿಗೆ ಬಳಸುವಂತಿಲ್ಲ:

ಆಯುರ್ವೇದ ಔಷಧಿಗಳು ಪ್ರಕೃತಿಯಲ್ಲಿ ದೊರಕುವ ಸಹಜ ದ್ರವ್ಯಗಳಿಂದ ನಿರ್ಮಿತವಾಗುತ್ತವೆ. ಹಾಗಾಗಿ ಅವು ಶರೀರಕ್ಕೆ ಸೇರುವ ಕ್ರಮ, ಕಾರ್ಯವಿಧಾನ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಂತೆಯೇ ಸಹಜವಾಗಿ ಇರುತ್ತವೆ. ನಮ್ಮಲ್ಲಿ ಅಡುಗೆ ಮನೆಯ ಪದಾರ್ಥಗಳಾದ ಶುಂಠಿ, ಮೆಣಸು, ಜೀರಿಗೆ, ಸಾಸುವೆ, ಮೆಂತ್ಯ ಇತ್ಯಾದಿಗಳು ಆಯುರ್ವೇದ ಔಷಧಿಗಳೇ. ಈ ವಸ್ತುಗಳನ್ನು ದಿನನಿತ್ಯವೂ ನಾವು ಆಹಾರ ಪದಾರ್ಥಗಳಾದ ಸಾರು, ಹುಳಿ, ಪಲ್ಯ, ಬಿಸಿಬೇಳೆ ಬಾತ್, ಪಲಾವ್, ಪಾಯಸ ಮುಂತಾದವುಗಳಲ್ಲಿ ಬಳಸುತ್ತಾ ಅವಶ್ಯಕತೆ, ಇದ್ದಾಗ ಆಧುನಿಕ ಅಥವಾ ಇತರೆ ವೈದ್ಯ ಪದ್ಧತಿಗಳ ಔಷಧಿಗಳನ್ನು ಬಳಸುವುದಿಲ್ಲವೇ? ಹಾಗೆಯೇ ಆಯುರ್ವೇದ ವೈದ್ಯರು ಶಿಫಾರಸ್ಸು ಮಾಡಿದ ನಿರುಪಾಯಕಾರಿ ಆಯುರ್ವೇದ ಔಷಧಿಗಳನ್ನು ಇತರೆ ವೈದ್ಯ ಪದ್ಧತಿಗಳ ವೈದ್ಯರು ಸೂಚಿಸಿರುವ ಔಷಧಿಗಳೊಡನೆ ಬಳಸುವುದು ಆಕ್ಷೇಪಾರ್ಹವಲ್ಲ.

ಆದರೆ ಯಾವುದೇ ಕಾಯಿಲೆಗೆ ಕೇವಲ ಆಯುರ್ವೇದ ಔಷಧಿಗಳೇ ನಿರೀಕ್ಷಿತ ಫಲಿತಾಂಶವನ್ನು ನೀಡುತ್ತವೆ. ಎಂದಾಗ ಬೇರೆ ವೈದ್ಯ ಪದ್ಧತಿಗಳ ಔಷಧಿಗಳನ್ನು ಜೊತೆಯಲ್ಲಿ ತೆಗೆದುಕೊಳ್ಳುವುದು ಅನಗತ್ಯ ಹಾಗೂ ಅನಾವಶ್ಯಕ. ಆದರೆ ಉತ್ತಮ ಫಲಿತಾಂಶವು ಎರಡನ್ನೂ ಜೊತೆಯಲ್ಲಿ ತೆಗೆದುಕೊಂಡಾಗ ಮಾತ್ರ ಬರುತ್ತದೆ ಎನ್ನುವ ಸಂದರ್ಭದಲ್ಲಿ ನಿರಪಾಯಕಾರಿ ಔಷಧಿಗಳನ್ನು ಜೊತೆಯಲ್ಲಿ ಬಳಸುವುದು ಚಾಲ್ತಿಯಲ್ಲಿದ್ದ ಉಪಕಾರಿಯಾಗಿದೆ.

ಆಯುರ್ವೇದ ವೈದ್ಯರಿಗೆ ರಕ್ತಪರೀಕ್ಷೆ ಮುಂತಾದ ಪ್ರಯೋಗಾಲಯಗಳ ಪರೀಕ್ಷೆಗಳ ಅವಶ್ಯಕತೆ ಇರುವುದಿಲ್ಲ:

ಇಂದಿನ ದಿನಗಳಲ್ಲಿ ರೋಗಿಗಳು ಯಾವುದೇ ವೈದ್ಯಪದ್ಧತಿಯ ವೈದ್ಯನ ಬಳಿಗೆ ಚಿಕಿತ್ಸೆಗೆ ಹೋದಾಗ ತಮ್ಮ ಕಾಯಿಲೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಮುಖ್ಯವಾಗಿ ತಮಗೆ ಈಗಿನವರೆಗೂ ವೈದ್ಯರು ಮಾಡಿಸಿರುವ ಪ್ರಯೋಗಾಲಯಗಳ ಫಲಿತಾಂಶಗಳನ್ನು ತೋರಿಸಲು ಮರೆಯುವುದಿಲ್ಲ. ಹಾಗೆಯೇ ಯಾವುದೇ ವೈದ್ಯ ಪದ್ಧತಿಯ ಚಿಕಿತ್ಸೆಯ ನಂತರ ಮತ್ತೆ ಪ್ರಯೋಗಾಲಯದಿಂದ ಸಹಜ ಫಲಿತಾಂಶಗಳು ಬಂದ ನಂತರವೇ ಅವರಿಗೆ ಸಮಾಧಾನ. ಹಾಗಾಗಿ ಇಂದು ಯಾವುದೇ ವೈದ್ಯ ಪದ್ಧತಿಯ ವೈದ್ಯನಿಗೆ ಪ್ರಯೋಗಾಲಯದ ಪರೀಕ್ಷೆಗಳು ಅನಿವಾರ್ಯ ಹಾಗೂ ಅವಶ್ಯಕವಾಗಿವೆ. ಇದು ಆಯುರ್ವೇದ ವೈದ್ಯ ಪದ್ಧತಿಗೂ ಅನ್ವಯಿಸುತ್ತದೆ. ಹಾಗಾಗಿ ಇಂದು ವೈದ್ಯನಾದವನಿಗೆ ಚಿಕಿತ್ಸೆಯ ಪರಿಣಾಮ ಅರಿಯಲು ಎರಡು ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಒಂದು ಆಯುರ್ವೇದದ ತ್ರಿದೋಷ ಲಕ್ಷಣಗಳು, ಮಾನದಂಡ, ಎರಡನೆಯದು ಪ್ರಯೋಗಾಲಯದ ಫಲಿತಾಂಶಗಳ ಮಾನದಂಡ, ಇದು ಚಿಕಿತ್ಸೆಯ ಪರಿಣಾಮ ತಿಳಿಯಲು ಹಾಗೂ ರೋಗಿಯ ಸಮಾಧಾನಕ್ಕೂ ಅಗತ್ಯವಾಗಿರುವುದರಿಂದ ಇದನ್ನು ಆಯುರ್ವೇದ ವೈದ್ಯರು ಮಾತ್ರವಲ್ಲದೆ ಎಲ್ಲ ವೈದ್ಯಪದ್ಧತಿಯವರು ಅನುಸರಿಸಬೇಕಾಗಿದೆ.

ಆಯುರ್ವೇದ ವೈದ್ಯವು ಕಾಯಿಲೆಯನ್ನು ಹೆಚ್ಚು ಮಾಡಿ ಕಡಿಮೆ ಮಾಡುತ್ತದೆ.

ಜನಸಾಮಾನ್ಯರ ಮನದಲ್ಲಿ ಅನೇಕ ವರ್ಷಗಳಿಂದ ಮನೆ ಮಾಡಿರುವ ತಪ್ಪು ಗ್ರಹಿಕೆ ಇದು. ಆಯುರ್ವೇದದಲ್ಲಿ ಎರಡು ರೀತಿಯ ಚಿಕಿತ್ಸಾ ಕ್ರಮಗಳಿವೆ. ಒಂದು ‘ಶೋಧನೆ’ ಮತ್ತೊಂದು ‘ಶಮನ’.

ಶೋಧನದಲ್ಲಿ ದೇಹದಲ್ಲಿ ವ್ಯಾಪಿಸಿರುವ ರೋಗಕಾರಕ ದೋಷಗಳನ್ನು ಮೊದಲು ಸ್ನೇಹನ, ಸ್ವೇದನಗಳ ಮೂಲಕ ಅವುಗಳ ಆಶ್ರಯ ಪಡೆದಿರುವ ಜಾಗಗಳಿಂದ ಬೇರ್ಪಡಿಸಿ ನಂತರ ಹೊರಡಿಸಿ ಕೋಷ್ಠಕ್ಕೆ ತಂದು ವಮನ, ವಿರೇಚನ, ಬಸ್ತಿ, ನಸ್ಯ, ರಕ್ತಮೋಕ್ಷಣ ಮುಂತಾದ ‘ಪಂಚಕರ್ಮಗಳ’ ಮೂಲಕ ಹೊರಹಾಕಬೇಕಾಗುತ್ತದೆ. ಆಗ ರೋಗಿಗೆ ಸ್ವಲ್ಪ ಶ್ರಮವಾಗುವ ಸಾಧ್ಯತೆ ಇರುತ್ತದೆ. ಆಗ ಪ್ರಾಯಶಃ ರೋಗಿಗೆ ಕಾಯಿಲೆಯನ್ನು ಹೆಚ್ಚು ಮಾಡಿದ್ದಾರೆ ಎಂಬ ಭಾವನೆ ಬರುವುದಕ್ಕೂ ಸಾಧ್ಯವಿದೆ. ಆದರೆ ಇಲ್ಲಿ ವಾಸ್ತವವಾಗಿ ಶರೀರದ ದೋಷಗಳನ್ನು ಹೊರಕ್ಕೆ ಹಾಕುವಾಗ ಆಗುವ ಶರೀರ ಆಯಾಸವೇ ಹೊರತು ಕಾಯಿಲೆಯ ಹೆಚ್ಚಾಯಿತೆಂದಲ್ಲ.

ಎರಡನೆಯದಾಗಿ ಕೆಲವು ಚರ್ಮವ್ಯಾಧಿಗಳು ಅದರಲ್ಲೂ ಕಾಲಿನಲ್ಲಿ ಆಗುವ ಇಸುಬು, ಇದು ಯಾವುದೇ ಚಿಕಿತ್ಸೆಗೂ ಬಗ್ಗುವ ಕಾಯಿಲೆಯಲ್ಲ. ಹಲವರು ಇದರಿಂದ ಜೀವನವಿಡೀ ನರಳುತ್ತಾರೆ. ಇಂತಹ ಕಾಯಿಲೆಗಳಲ್ಲಿ ಅದರಲ್ಲಿರುವ ದೋಷವನ್ನು ಹೊರಹಾಕಲು ಅದು ಗಾಯವಾಗಿ ಕೀವು ಕಟ್ಟುವಂತೆ ಔಷಧಿ ನೀಡುತ್ತಾರೆ. ಇದರಿಂದ ಕೀವಿನೊಡನೆ ಅದರ ದೋಷಗಳು ಹೊರಬಂದು ಕಾಯಿಲೆ ವಾಸಿಯಾಗುತ್ತಿದ್ದಂತೆಯೇ ಇಸುಬು ವಾಸಿಯಾತ್ತದೆ. ಇದಕ್ಕೆ ವ್ಯಂಗ್ಯದಿಂದ ‘ರಣವೈದ್ಯ’ ಎನ್ನುತ್ತಾರೆ. ಈ ಕಳಂಕ ತಟ್ಟಿರಬೇಕೆಂದು ತೋರುತ್ತದೆ. ಆದರೆ ಜನಸಾಮಾನ್ಯರು ತಿಳಿಯಬೇಕಾದ ವಿಚಾರವೆಂದರೆ ಇಂತಹ ಚಿಕಿತ್ಸೆಗಳು ಹೆಚ್ಚಾಗಿ ಜಾನಪದ ಹಾಗೂ ನಾಟಿ ವೈದ್ಯದಲ್ಲಿದ್ದು ಶಾಸ್ತ್ರೀಯ ಆಯುರ್ವೇದದಲ್ಲಿ ಅದಕ್ಕೆ ಸ್ಥಾನವಿಲ್ಲ ಎಂಬುದು.

ಯಾವುದೇ ಒಂದು ವಿಜ್ಞಾನದ ಪ್ರಗತಿಗೆ ಅಂಧಶ್ರದ್ಧೆಗಳು ಹಾಗೂ ಮೂಢನಂಬಿಕೆಗಳು ಬಹು ದೊಡ್ಡ ತೊಡಕುಗಳಾಗುತ್ತವೆ. ಹೆಚ್ಚು ಸಂದರ್ಭದಲ್ಲಿ ಅವುಗಳು ಯಾವುದೇ ಆಧಾರವಿಲ್ಲದೆ ಇರುವುದರಿಂದ ಅವುಗಳನ್ನು ತೊಡೆದು ಹಾಕುವ ಪ್ರಯತ್ನ ನಿಜಕ್ಕೂ ಅವಶ್ಯಕ. ಇಂದಿನ ಪರಿಸ್ಥಿತಿಯಲ್ಲಿ ಆಯುರ್ವೇದಕ್ಕೆ ಅಂಟಿರುವ ಅಪವಾದ ರೂಪದ ಈ ಮೂಢನಂಬಿಕೆಗಳು ದೂರವಾದಲ್ಲಿ ಆಯುರ್ವೇದದ ಕ್ಷಿಪ್ರ ಬೆಳವಣಿಗೆ ಸೂಕ್ತ ಬಳಕೆ ಸಾಧ್ಯವಾದೀತು.

ವೈದ್ಯಸಾಹಿತಿಯಾಗಿನನ್ನಅನುಭವ
ಜನಪ್ರಿಯತೆ, ವರ್ಚಸ್ಸು, ಮನ್ನಣೆ, ಹಣ ಎಲ್ಲವನ್ನು ತಂದುಕೊಟ್ಟಿದೆ
ಡಾ|| ವಿ.ಆರ್.ಪದ್ಮನಾಭರಾವ್ ಕನ್ನಡ ಭಾಷೆಯಲ್ಲಿ ನಾನು ವೈದ್ಯ ಸಾಹಿತ್ಯ ಕೃಷಿ ಆರಂಭಿಸಿ ಮೂರು ದಶಕಗಳು ಕಳೆದಿವೆ. ಈ ದೀರ್ಘಾವಧಿಯಲ್ಲಿ ಸಾಹಿತ್ಯದ ಇತರೆ ವಿಭಾಗಗಳಾದ ಕಥೆ, ಕವನ, ನಾಟಕ, ಹನಿಗವನ ಮುಂತಾದವುಗಳಲ್ಲಿ ಅಷ್ಟಿಷ್ಟು ಕೈಯಾಡಿಸಿದ್ದರೂ ಪ್ರಮುಖವಾಗಿ ನಾನು ಆಯ್ದುಕೊಂಡಿದ್ದು ಆಯುರ್ವೇದ ವೈದ್ಯಸಾಹಿತ್ಯ ಕ್ಷೇತ್ರ. ಈವರೆವಿಗೂ ಆಯುರ್ವೇದ ವೈದ್ಯ ಕುರಿತಂತೆ ಐನೂರಕ್ಕೂ ಮೇಲ್ಪಟ್ಟ ಲೇಖನಗಳು ರಾಜ್ಯದ ಸುಪ್ರಸಿದ್ಧ ದಿನ-ವಾರ-ಮಾಸಪತ್ರಿಕೆಗಳು ಹಾಗೂ ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಪತ್ರಿಕೆಗಳಿಗೆ ಅಂಕಣಕಾರನಾಗಿ ಹಲವಾರು ವರ್ಷ ಲೇಖನಗಳನ್ನು ಬರೆದಿದ್ದೇನೆ. ‘ಜನಪ್ರಿಯ ಆಯುರ್ವೇದ’, ಆಯುರ್ವೇದದ ಆರೋಗ್ಯ ಸೂತ್ರಗಳು’, ‘ಆಸ್ತಮಾ ರೋಗಿಗಳಿಗೆ ಆಯುರ್ವೇದ’ ‘ಆರೋಗ್ಯ ಸೂತ್ರಗಳು’ ನಾನು ಬರೆದಿರುವ ಪುಸ್ತಕಗಳು. ಇವುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಆಯುರ್ವೇದದ ಆರೋಗ್ಯ ಸೂತ್ರಗಳು’ ಈವರೆಗೂ ಹತ್ತು ಸಾವಿರಕ್ಕೂ ಮೇಲ್ಪಟ್ಟು ಪ್ರತಿಗಳು ಖರ್ಚಾಗಿವೆ. ಓದುಗರಿಂದ ಇದು ‘ಆರೋಗ್ಯದ ಭಗವದ್ಗೀತೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನನ್ನ ವೈದ್ಯಕೀಯ ಲೇಖನಗಳು ನನಗೆ ಜನಪ್ರಿಯತೆ, ವರ್ಚಸ್ಸು, ಮನ್ನಣೆ ಹಣ ಎಲ್ಲವನ್ನು ತಂದುಕೊಟ್ಟಿದೆ. ನಾನೇನಾದರೂ ವೈದ್ಯಕೀಯ ಲೇಖನಗಳನ್ನು ಬರೆಯದೆ ಹೋಗಿದ್ದರೆ ನನ್ನ ಇವತ್ತಿನ ಮಟ್ಟ ಮುಟ್ಟಲು ಸಾಧ್ಯವಾಗುತ್ತಿರಲಿಲ್ಲವೆಂಬುದು ನನ್ನ ಬಲವಾದ ಊಹೆ. ಎಷ್ಟೋ ಜನ ರೋಗಿಗಳು ನನ್ನ ಲೇಖನಗಳಿಂದ ಪ್ರಭಾವಿತರಾಗಿ ಚಿಕಿತ್ಸೆಗಾಗಿ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ. ಹಾಗಾಗಿ ನನ್ನ ಆಯುರ್ವೇದ ವೈದ್ಯವೃತ್ತಿಯ ಬೆಳವಣಿಗೆಯಲ್ಲಿ ನನ್ನ ಲೇಖನಗಳ ಪಾತ್ರ ತುಂಬಾ ಮಹತ್ವದ್ದಾಗಿದೆ.

ವೈದ್ಯರ ಸಾಹಿತಿಯಾಗಿ ನನಗಾದ ಎರಡು ವಿಶಿಷ್ಟ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತೇವೆ.

ಮೊದಲನೆಯದಾಗಿ ನನ್ನ ಪರಮಪೂಜ್ಯ ಗುರುಗಳಾದ ಡಾ|| ಎಂ.ಗೋಪಾಲಕೃಷ್ಣರಾಯರ ಕುರಿತಂತೆ ‘ಪ್ರಜಾವಾಣಿ’ ದಿನಪತ್ರಿಕೆಯ ‘ಸಾಪ್ತಾಹಿಕ ಪುರವಣಿ’ಗೆ ಬರೆದ ಲೇಖನಕ್ಕೆ ಸಂಬಂಧಿಸಿದ್ದು.

ಆಗ ಅವರು ದಿವಂಗತರಾಗಿ ಒಂದು ವಾರವಾಗಿತ್ತಷ್ಟೆ. ಅವರ ಜೀವನ ಪರಿಚಯ ಮೂಡಿಸುವ ಲೇಖನವೊಂದನ್ನು ಬರೆಯಲು ನಿರ್ಧರಿಸಿದೆ. ಲೇಖನ ಪೂರೈಸಲು ತೆಗೆದುಕೊಂಡ ಕಾಲ ಹದಿನೈದು ದಿವಸಗಳು. ಪ್ರಕಟವಾದ ಈ ಲೇಖನವನ್ನು ಓದಿದ ನಂತರ ಇದು ನಿಜವಾಗಿಯೂ ನಾನು ಬರೆದ ಲೇಖನವೇ? ಎಂಬ ಅನುಮಾನ ಬಂತು. ಅಷ್ಟು ಅದ್ಭುತವಾಗಿ ಮೂಡಿಬಂದಿತ್ತು. ಲೇಖನ ಅದರ ಪದಸಂಯೋಜನೆ, ವಾಕ್ಯ ರಚನೆ, ವಿಷಯ ಪ್ರಸ್ತಾವನೆ ಎಲ್ಲ ಶ್ರೇಷ್ಠವಾಗಿತ್ತು. ಈಗಲೂ ನನ್ನ ಆಪ್ತಮಿತ್ರರಾದ ಸುಪ್ರಸಿದ್ಧ ವೈದ್ಯ ಸಾಹಿತಿ ಡಾ|| ಅನಂತರಾಮನ್‌ರವರು ‘ಇನ್ನೊಮ್ಮೆ ಅಂತ ಲೇಖನ ನೀವು ಯಾವಾಗ ಬರೆಯುವುದು?’ ಎಂದು ಕೇಳುತ್ತಿರುತ್ತಾರೆ.

ವೈದ್ಯ ಸಾಹಿತಿಯಾಗಿ ನನ್ನ ಮನದಲ್ಲಿ ಅಚ್ಚಳಿಯದೇ ಉಳಿಯುವ ಮತ್ತೊಂದು ಅನುಭವವೆಂದರೆ : ಆಗ ಆಯುರ್ವೇದದ ಪತ್ರಿಕೆಯಿಂದ ‘ಆಯುರ್ವಿಜ್ಞಾನಕ್ಕೆ’ ಔಷಧಿ ಸಸ್ಯಗಳ ಕುರಿತಂತೆ ಸರಣಿ ಲೇಖನಗಳನ್ನು ಬರೆಯುತ್ತಿದ್ದೆ. ಲೇಖನದ ಶೈಲಿಯು ‘ಪ್ರತಿಯೊಂದು ಔಷಧೀ ಸಸ್ಯವೂ ತನ್ನ ವೈದ್ಯಕೀಯ ಗುಣ-ಧರ್ಮ ಕರ್ಮಗಳನ್ನು ತನ್ನ ಆತ್ಮಚರಿತ್ರೆಯಲ್ಲಿ ರೂಪದಲ್ಲಿ ಹೇಳುವಂತೆ ಇತ್ತು. ಅರಳಿ ಮರದ ಔಷಧೀ ಗುಣಗಳಿಗೆ ಸಂಬಂಧಿಸಿದ ಆ ಲೇಖನಕ್ಕೆ ಪೀಠಿಕೆಯಾಗಿ ಭಗವಾನ್ ಬುದ್ದ ಅದರಡಿಯಲ್ಲಿ ಕುಳಿತು ತಪಸ್ಸು ಮಾಡಿದುದನ್ನು ವಿವರಿಸಿ ಲೇಖನದ ಕೊನೆಯ ಪ್ಯಾರಾಕ್ಕಾಗಿ ಬುದ್ದನು ತಪಸ್ಸು ಮುಗಿಸಿ ಲೋಕಕ್ಕೆ ತಾನು ಕಂಡ ಸತ್ಯವನ್ನು ಸಾರಲು ಹೊರಟು ನಿಂತಾಗ, ಇಷ್ಟು ದಿನವಿದ್ದ ಅವನ ದಿವ್ಯ ಸಾನಿಧ್ಯ ಇನ್ನು ಮುಂದೆ ಇರುವುದಿಲ್ಲವೆಂಬ ವೇದನೆಯನ್ನು ಅರಳೀಮರವು ವ್ಯಕ್ತಪಡಿಸುವ ನಾಟಕೀಯ ಸನ್ನಿವೇಶದೊಂದಿಗೆ ಲೇಖನಕ್ಕೆ ಮುಕ್ತಾಯ ನೀಡಿದ್ದೆ. ಅದನ್ನು ಓದಿದ ಮಹಿಳಾ ಓದುಗರೊಬ್ಬರು ‘ಲೇಖನವು ತುಂಬಾ ಸೊಗಸಾಗಿ ಮೂಡಿಬಂದಿದೆ. ಕೊನೆಯ ಸಾಲುಗಳನ್ನು ಓದಿದ ನಂತರ ಕೆಲಕಾಲ ಅತ್ತುಬಿಟ್ಟೆ. ಅಷ್ಟು ಹೃದಯಸ್ಪರ್ಶಿಯಾಗಿತ್ತು. ಅರಳೀಮರದ ಆಶ್ರಯದಿಂದ ಬುದ್ಧನ ನಿರ್ಗಮನ’ ಎಂದರು. ಇಷ್ಟೊಂದು ಗಾಢಪ್ರಭಾವ ಬೀರುವಷ್ಟು ಪರಿಣಾಮಕಾರಿಯಾಗಿದೆಯಲ್ಲಾ ನನ್ನ ಬರವಣಿಗೆ ಎಂದು ಸಂತೋಷವಾಯಿತು.

ಎಷ್ಟೋ ವೇಳೆ ಸಾಹಿತ್ಯ ರಚನೆಯಂಥ ಕಷ್ಟಕರವಾದಂತಹ ಕೆಲವು ನನ್ನಿಂದ ಹೇಗಾಗುತ್ತಿದೆ? ಎಂಬ ಸಂಶಯ ಕಾಡುತ್ತದೆ. ಜೊತೆಯಲ್ಲೇ ಯಾವುದೋ ಅದ್ಭುತ ಶಕ್ತಿ ನನ್ನ ಮೂಲಕ ಈ ಕೆಲಸ ಮಾಡಿಸುತ್ತಿರಬೇಕೆಂಬ ಗುಮಾನಿ ಮನದಾಳದಲ್ಲಿ ಏಳುತ್ತದೆ. ಪ್ರಾಯಶಃ ಇದೇ ಎಲ್ಲಾ ಸಾಹಿತಿಗಳ ರಚನೆಯ ಹಿಂದಿರುವ ರಹಸ್ಯ ಸತ್ಯವಿರಬೇಕಲ್ಲವೇ?

 * * *