ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಕ್ಕಾಗಿ ಇರುವ ಸಂಸ್ಥೆ. ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಅದರ ಪ್ರಾಥಮಿಕ ಉದ್ದೇಶವಾಗಿದೆ. ಆದರೆ, ಈ ಸಂಸ್ಥೆಯು ವಿಜ್ಞಾನ ಹಾಗೂ ವೈದ್ಯಕೀಯ ಸಾಹಿತ್ಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಭಾವನೆ ಕೆಲವು ವೈದ್ಯರಲ್ಲಿದೆ. ಕೆಲವು ಕನ್ನಡ ಸಾಹಿತಿಗಳಂತೂ, ವೈದ್ಯಸಾಹಿತ್ಯವನ್ನು ಪರಿಷತ್ತು ಅಸ್ತಿತ್ವಕ್ಕೆ ಬರಬೇಕಾಯಿತು. ಪರಿಷತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಅವುಗಳಲ್ಲಿ ಕನ್ನಡ ವೈದ್ಯ ಪುಸ್ತಕ ಪ್ರಕಟಣೆಯೂ ಒಂದು.

ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಹಲವು ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದೆ. ಈ ಪುಸ್ತಕಗಳಿಗೆ ಅತ್ಯಂತ ಕಡಿಮೆ ಬೆಲೆಯನ್ನು ಇಟ್ಟಿತು. ಅವೆಲ್ಲವು ಮಾರಾಟವಾದವು. ಆನಂತರ ನಾನಾಕಾರಣಗಳಿಂದ ಪುಸ್ತಕ ಪ್ರಕಟಣೆಯು ನಿಂತಿತು. ಪರಿಷತ್ತು ಈಗ ಆ ಕೆಲಸವನ್ನು ಮತ್ತೆ ಆರಂಭಿಸಿದೆ. ಈ ಕೆಲಸ ಇನ್ನು ಮುಂದೆ ನಿರಂತರವಾಗಿ ಮುಂದುವರೆಯಲಿ ಎಂದುನಾವು ಆಶಿಸೋಣ.

ಕರ್ನಾಟಕದಲ್ಲಿ ಇಂದು ಸುಮಾರು ೧ ಲಕ್ಷದಷ್ಟು ಆಧುನಿಕ ವೈದ್ಯ ಪದವೀಧರರು ಇದ್ದರೂ, ಇವರಲ್ಲಿ ವೈದ್ಯ ಸಾಹಿತ್ಯ ರಚಿಸುತ್ತಿರುವವರ ಸಂಖ್ಯೆ ತೀರಾ ಗೌಣ. ೫೦ ಜನರಿಗಿಂತ ಹೆಚ್ಚಿಲ್ಲ. ಇವರಲ್ಲಿಯೂ ವೈದ್ಯಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿ ಬರೆಯುತ್ತಿರುವವರ ಪ್ರಮಾಣ ಕೇವಲ ಬೆರಳೆಣಿಕೆಯಷ್ಟು ಎಲ್ಲೋ ಒಂದು ಕಡೆ ಇವರಿಗೆ ವೈದ್ಯಲೇಖನ ರಚನೆಯ ಸ್ಪೂರ್ತಿ ತುಂಬುವ ಕೆಲಸವನ್ನು ಪರಿಷತ್ತು ಮಾಡಬೇಕಿದೆ. ಹಾಗಾಗಿ ಇಂದು ಕನ್ನಡದಲ್ಲಿ ವೈದ್ಯಲೇಖನ ಬರೆಯುತ್ತಿರುವ ಎಲ್ಲ ವೈದ್ಯರ ಒಂದು ಪ್ರಾತಿನಿಧಿಕ ಲೇಖನವನ್ನು ಒಳಗೊಂಡ ಒಂದು ಸಂಪುಟವನ್ನು ತರುವುದು ಸೂಕ್ತ ಎಂದು ಪರಿಷತ್ತು ಭಾವಿಸಿತು. ಹಾಗಾಗಿ ಕರ್ನಾಟಕದ ಎಲ್ಲ ಹಿರಿಯ-ಕಿರಿಯ ಲೇಖಕರಿಗೆ ಒಂದು ಲೇಖನವನ್ನು ಬರೆದು ಕೊಡಲು ಪ್ರಾರ್ಥಿಸಿತು. ಕೆಲವರು ಈ ಸಂಕಲನಕ್ಕಾಗಿ ಹೊಸ ಲೇಖನವನ್ನು ಬರೆದುಕೊಟ್ಟರು. ಉಳಿದವರು ಈ ಹಿಂದೆ ಪ್ರಕಟವಾದ ಲೇಖನಗಳಲ್ಲಿ ಉತ್ತಮವಾದ ಒಂದು ಲೇಖನವನ್ನು ಆಯ್ದು ಕಳುಹಿಸಿಕೊಟ್ಟರು.

ಪರಿಷತ್ತು ಹೊಸ ವೈದ್ಯ ಲೇಖಕರನ್ನು ಆಕರ್ಷಿಸುವ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದರಲ್ಲಿ ಲೇಖನ ಬರೆಯಲು ಅವರಲ್ಲಿ ಸ್ಪೂರ್ತಿ ತುಂಬುವುದೂ ಒಂದಾಗಿದೆ. ಹಾಗಾಗಿ ಈಗಾಗಲೇ ಲೇಖನ ಬರೆಯುತ್ತಿರುವ ವೈದ್ಯರನ್ನು ಸಂಪರ್ಕಿಸಿದೆವು. ‘ವೈದ್ಯ ಲೇಖಕನಾಗಿ ನನ್ನ ಅನುಭವ’ ಎಂಬ ವಿಯದ ಬಗ್ಗೆ ಒಂದು ಪುಟದ ಅನುಭವವನ್ನು ಬರೆಯುವಂತೆ ಸೂಚಿಸಿದೆವು. ಪರಿಷತ್ತಿನ ಈ ಎರಡು ಬೇಡಿಕೆಗಳಿಗೆ ನಮ್ಮ ವೈದ್ಯ ಲೇಖಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಬಂದಿತು. ಅದು ನಮ್ಮ ನಿರೀಕ್ಷೆಯನ್ನು ಮೀರಿತು.

ಮೊದಲು ನಮ್ಮ ವೈದ್ಯಲೇಖಕರ ಹೆಸರನ್ನು ಇಂಗ್ಲಿಷ್ ವರ್ಣಮಾಲಾದಿಯಾಗಿ ಜೋಡಿಸಿದೆವು. ನಂತರ ಅದರ ಪಕ್ಕದಲ್ಲಿ ಅವರು ಬರೆದ ಲೇಖನಗಳ ಶೀರ್ಷಿಕೆಗಳನ್ನು ಬರೆದವು. ಅದರ ಪಕ್ಕದಲ್ಲಿ ಪುಟ ಸಂಖ್ಯೆಯನ್ನು ಬರೆದೆವು. ಪುಟಸಂಖ್ಯೆಯನ್ನು ಕೂಡಿಸಿದರೆ ಅದು ಸುಮಾರು ೪೫೦ ಪುಟಗಳನ್ನು ಮೀರಿತು. ಆಗ ಪರಿಷತ್ತಿನ ಪದಾಧಿಕಾರಿಗಳು ಚರ್ಚಿಸಿದೆವು. ೪೫೦ ಪುಟಗಳ ಬೃಹತ್ ಹೊತ್ತಿಗೆಯನ್ನು, ಲಾಭದ ಆಮಿಷವಿಲ್ಲದೆ ಮುದ್ರಿಸಬೇಕಾದರೆ, ಅದಕ್ಕೆ ಕನಿಷ್ಟ ರೂ. ೨೦೦ರಷ್ಟಾದರೂ ಮುಖಬೆಲೆ ಇಡಬೇಕಾಗುತ್ತದೆ. ಇದು ಶ್ರೀಸಾಮಾನ್ಯನ ಜೇಬಿಗೆ ತುಸು ದುಬಾರಿ ಎಂದು ನಮ್ಮಲ್ಲಿ ಕೆಲವರು ಹಿತವಚನವನ್ನು ಹೇಳಿದರು. ಹಾಗಾಗಿ ಈ ಎಲ್ಲ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸುವುದು ಸೂಕ್ತ ಎಂದು ತೀರ್ಮಾನಿಸಿದೆವು.

ಮೊದಲ ಸಂಪುಟಕ್ಕೆ ಲೇಖನಗಳನ್ನು ಜೋಡಿಸುವ ಕೆಲಸವನ್ನು ಆರಂಭಿಸಿದೆವು. ಆಗ ನಮ್ಮ ಮನಸ್ಸಿಗೆ ಕೆಲವು ಹೊಸ ವಿಚಾರಗಳು ಬಂದವು.

  • ಕನ್ನಡ ವೈದ್ಯಸಾಹಿತ್ಯದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವೈದ್ಯಲೇಖಕರ ಪ್ರಾತಿನಿಧಿಕ ಲೇಖನಗಳ ಸಂಕಲನ ಪ್ರಕಟವಾಗುತ್ತಿದೆ.
  • ಈ ಸಂಕಲನದಲ್ಲಿ ಕನ್ನಡ ವೈದ್ಯಸಾಹಿತ್ಯಕ್ಕೆ ಮಾರ್ಗದರ್ಶಿಗಳಾಗಿ ದುಡಿದ ಹಿರಿಯ ವೈದ್ಯಲೇಖಕರನ್ನು ಸ್ಮರಿಸಬೇಕೆನಿಸಿತು. ಅವರನ್ನು, ಅವರ ಒಂದು ಪ್ರಾತಿನಿಧಿಕ ಲೇಖನವನ್ನು ಪ್ರಕಟಿಸುವುದರ ಮೂಲಕ ಸ್ಮರಿಸುವುದೇ ಹೆಚ್ಚು ಸೂಕ್ತವೆನಿಸಿತು. ಇಲ್ಲಿ ಸ್ಮರಣೆ ಹಾಗೂ ಗೌರವ ಸೂಚಿಸುವುದರ ಜೊತೆಗೆ, ಅವರ ಶೈಲಿಯ ಪರಿಚಯವನ್ನು ಹೊಸ ವೈದ್ಯ ಲೇಖಕರಿಗೆ ಹಾಗೂ ಹೊಸ ಓದುಗರಿಗೆ ಪರಿಚಯ ಮಾಡಿಕೊಡುವ ಉದ್ದೇಶವೂ ಇದೆ. ಹಾಗಾಗಿ ಈ ಅಧ್ಯಾಯವನ್ನು ‘ವೈದ್ಯಸಾಹಿತ್ಯ ಮಾರ್ಗದರ್ಶಿಗಳ ಲೇಖನಗಳು’ ಎಂದು ಕರೆದೆವು. ವೈದ್ಯರಾದ ಎಂ.ಶಿವರಾಂ, ಅನುಪಮಾ ನಿರಂಜನ, ನಾರಾಯಣಪ್ಪ, ಡಿ.ಎಸ್.ಶಿವಪ್ಪ, ಸಿ.ಅಶ್ವಥ್ ಹಾಗೂ ಸ.ಜ. ನಾಗಲೋಟಿಮಠ ಅವರ ಲೇಖನಗಳನ್ನು ಸೇರಿಸಿದೆವು. ಈ ಪಟ್ಟಿ ಅಪೂರ್ಣ ಎಂಬ ಅರಿವು ನಮಗಿದೆ. ದೊಡ್ಡೇರಿ ವೆಂಕಟಗಿರಿ ರಾವ್, ಎಂ.ಗೋಪಾಲಕೃಷ್ಣ, ಡಾ| ಶಾಂತಾ ಪ್ರಭುಶಂಕರ್, ಡಾ| ಕೆ.ಕೃಷ್ಣಮೂರ್ತಿ, ಡಾ| ಎನ್.ಕೃಷ್ಣಮೂರ್ತಿ, ಡಾ| ಎಂ.ಬಸವರಾಜೇ ಅರಸ್, ಡಾ| ಎಂ.ದಯಾಕರ, ಡಾ| ಡಿ.ಶಂಕರರಾಜು, ಡಾ| ಶಿವರತ್ನ ಸಿ ಸವದಿ, ಡಾ| ವೈ.ರಾಜಶೇಖರ್, ಡಾ| ಎಂ. ಬಸವರಾಜು, ಡಾ|ವಿ.ಜಿ. ಸಿಡೇನೂರು, ಮುಂತಾದವರ ಲೇಖನಗಳ ಮಾದರಿ ನಮಗೆ ಸಕಾಲದಲ್ಲಿ ದೊರೆಯಲಿಲ್ಲ. ಹೀಗೆಯೇ ಇನ್ನೂ ಹಲವು ವೈದ್ಯರ ಲೇಖನಗಳು ಬಿಟ್ಟುಹೋಗಿವೆ. ಇದಕ್ಕಾಗಿ ನಮಗೆ ಖೇದವಿದೆ.
  • ಈ ಸಂಕಲನದಲ್ಲಿ ಇಂದು ಬರೆಯುತ್ತಿರುವ ಎಲ್ಲ ವೈದ್ಯರ ಲೇಖನಗಳು ಇರಬೇಕು ಎಂದು ಪರಿಷತ್ತು ಭಾವಿಸಿತು. ಕೆಲವು ವೈದ್ಯರು ಈ ಸಂಕಲನಕ್ಕಾಗಿ ತಮ್ಮ ಲೇಖನಗಳನ್ನು ಕಳುಹಿಸಿರಲಿಲ್ಲ. ಆದರೆ ಅವರ ಪ್ರಕಟಿತ ಲೇಖನದ ಒಂದು ಮಾದರಿಯನ್ನು ಸೇರಿಸಿಕೊಳ್ಳುವುದು ಸೂಕ್ತ ಎಂದು ಭಾವಿಸಿತು. ಹಾಗಾಗಿ ವೈದ್ಯರಾದ ಅನ್ನಪೂರ್ಣಮ್ಮ, ಸಿ.ಎಂ. ಗುರುಮೂರ್ತಿ, ಬಿ.ಎಂ.ಹೆಗ್ಡೆ, ಪರಮೇಶ್ವರ ವಿ, ರೇಣುಕಾರ್ಯ ಎಂ.ಬಿ. ಅವರ ಲೇಖನಗಳನ್ನು ಸೇರಿಸಿಕೊಂಡೆವು. ಅಮೆರಿಕದಲ್ಲಿರುವ ಗುರುಪ್ರಸಾದ್ ಕಾಗಿನೆಲೆ ಅವರ ಒಂದು ಲೇಖನವನ್ನೂ ಸೇರಿಸಿದ್ದೇವೆ. ಈ ಎಲ್ಲ ಲೇಖನಗಳನ್ನು ‘ವಿಶೇಷ ಲೇಖನಗಳು’ ಎಂದು ಪ್ರಕಟಿಸಿದ್ದೇವೆ.
  • ಮೂರನೆಯ ಭಾಗದಲ್ಲಿ ಆಹ್ವಾನಿತ ಲೇಖನಗಳನ್ನು ಪ್ರಕಟಿಸಿದೆವು. ಇದರಲ್ಲಿ ಮೊದಲು ಲೇಖಕರ ಲೇಖನಗಳನ್ನು ಪ್ರಕಟಿಸಬೇಕು; ನಂತರ ಅವರ ‘ವೈದ್ಯಸಾಹಿತಿಯಾಗಿ ನನ್ನ ಅನುಭವ’ ಲೇಖನವನ್ನು ಪ್ರಕಟಿಸಬೇಕು ಎಂದು ನಿರ್ಣಯಿಸಿದೆವು. ಹಾಗೆಯೇ ಪ್ರಕಟಿಸಿದ್ದೇವೆ. ವೈದ್ಯರ ಹೆಸರನ್ನು ಅಕಾರಾದಿಯಾಗಿ ಬರೆದು, ಪುಟ ಮಿತಿಯನ್ನು ಲೆಕ್ಕಕ್ಕೆ ತೆಗೆದುಕೊಂಡಾಗ, ಅದು ‘ಪಿ’ ಅಕ್ಷರದವರಿಗೆ ಬಂದಿತು. ಹಾಗಾಗಿ ಎ ಇಂದ ಪಿ ವರೆಗಿನ ಎಲ್ಲ ವೈದ್ಯರ ಲೇಖನಗಳನ್ನು ಸಂಪುಟ-೧ ರಲ್ಲಿ ಸೇರಿಸಿದ್ದೇವೆ. ಉಳಿದ ವೈದ್ಯರ ಲೇಖನಗಳು ಸಂಪುಟ-೨ರಲ್ಲಿ ಪ್ರಕಟವಾಗಿವೆ.
  • ಅನೇಕ ವೈದ್ಯ ಲೇಖಕರು ತಮ್ಮ ಪರಿಚಯವನ್ನು ಸುದೀರ್ಘವಾಗಿ ಬರೆದು ಕಳುಹಿಸಿದ್ದರು. ಪುಟಮಿತಿಯ ಕಾರಣ. ವೈದ್ಯರ ಪರಿಚಯವನ್ನು ಬೇಸರದಿಂದ ಸಂಕ್ಷಿಪ್ತಗೊಳಿಸಬೇಕಾಯಿತು. ವೈದ್ಯರ ಹೆಸರು, ಪ್ರಕಟಿತ ಲೇಖನಗಳ ಸಂಖ್ಯೆ, ಅವರ ಸ್ವಂತ ಹಾಗೂ ಅನುವಾದಿತ ಕೃತಿಗಳ ಸಂಖ್ಯೆ ಹಾಗೂ ಲೇಖಕರ ವಿಳಾಸವನ್ನು ಮಾತ್ರ ಪ್ರಕಟಿಸಲು ನಿರ್ಧರಿಸಿದೆವು. ವೈದ್ಯರು ಲೇಖನದ ಜೊತೆಯಲ್ಲಿ ತಮ್ಮ ಭಾವಚಿತ್ರ ಕಳುಹಿಸಿದ್ದರೆ, ಅದನ್ನು ಸೇರಿಸಿದ್ದೇವೆ. ಈ ಒಂದು ಸಂದರ್ಭದಲ್ಲಿ ಕನ್ನಡ ವೈದ್ಯಲೇಖಕರ ಪರಿಚಯವನ್ನು ಮಾಡಿಕೊಡುವ ಒಂದು ಪುಸ್ತಕವನ್ನು ಪ್ರಕಟಿಸುವ ಕೆಲಸವನ್ನು ಪರಿಷತ್ತು ಮಾಡಬೇಕಿದೆ. ಬಹುಶಃ ಅಲ್ಲಿ ನಮ್ಮ ಲೇಖಕರ ವಿಸ್ತೃತ ಪರಿಚಯ ಹಾಗೂ ಅವರ ಕೃತಿ ಪರಿಚಯವನ್ನು ಮಾಡಿಕೊಡಬಹುದು. ಹಾಗೆಯೇ ಪರಿಷತ್ತಿನ ಸದಸ್ಯರ ವಿಳಾಸ ಪುಸ್ತಕವನ್ನೂ ಪ್ರಕಟಿಸಬೇಕಿದೆ.
  • ಅಖಿಲ ಕರ್ನಾಟಕ ವೈದ್ಯ ಲೇಖಕರ ಪ್ರಾತಿನಿಧಿಕ ಲೇಖನಗಳ ಸಂಕಲನವನ್ನು ‘ವೈದ್ಯಸಾಹಿತ್ಯ-ಸಮೃದ್ಧ ಆರೋಗ್ಯ’ ಎಂದು ಕರೆದಿದ್ದೇವೆ. ವೈವಿಧ್ಯಮಯ ಲೇಖನಗಳಿರುವ ಈ ಸಂಕಲನವು ಜನಸಾಮಾನ್ಯರಿಗೆ ಉಪಯುಕ್ತವಾದೀತು ಎಂದು ಪರಿಷತ್ತು ಭಾವಿಸಿದೆ.

ಪರಿಷತ್ತು ‘ವೈದ್ಯಸಾಹಿತ್ಯ-ಸಮೃದ್ಧ ಆರೋಗ್ಯ ಗ್ರಂಥ ಸಂಪಾದನೆಯನ್ನು ಮಾಡಲು ನಾನು ಅರ್ಹ ಎಂದು ಭಾವಿಸಿ, ಈ ಗುರುತರ ಕೆಲಸವನ್ನು ನನಗೆ ವಹಿಸಿದೆ. ಪರಿಷತ್ತಿಗೆ ನಾನು ಕೃತಜ್ಞ. ಈ ಗ್ರಂಥ ಸಂಪಾದನೆ ನನ್ನೊಬ್ಬನ ಸಾಧನೆ ಎಂಬ ಹಮ್ಮು ನನಗಿಲ್ಲ. ಈ ಪುಸ್ತಕ ನಿಮ್ಮ ಕೈಯಲ್ಲಿ ಇರಲು ಅನೇಕ ಮಹನೀಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿ. ಈ ಪುಸ್ತಕದ ಮುದ್ರಣ ಕಾರ್ಯವನ್ನು ಉಚಿತವಾಗಿ ಮಾಡಿಕೊಡುತ್ತಿರುವ ನವಕರ್ನಾಟಕದ ಶ್ರೀ ಆರ್.ಎಸ್. ರಾಜಾರಾಂ, ಶ್ರೀ ಉಡುಪ, ಶ್ರೀ ಸ್ವಾಮಿ ಅವರಿಗೆ ಪರಿಷತ್ತು ಹಾಗೂ ನಾನು ಕೃತಜ್ಞತೆಯನ್ನು ಸೂಚಿಸುತ್ತಿದ್ದೇವೆ. ಈ ಗ್ರಂಥಕ್ಕೆ ಹೆಸರು ಕೊಟ್ಟು ಸಂಕಲದ ವಿವಿಧ ಹಂತಗಳಲ್ಲಿ ಡಾ| ಸಿ.ಆರ್.ಚಂದ್ರಶೇಖರ್ ಅವರು ಸಲಹೆಗಳನ್ನು ನೀಡಿದ್ದಾರೆ. ಪರಿಷತ್ತಿನ ಪದಾಧಿಕಾರಿಗಳಾದ ಡಾ. ವಸುಂಧರಾ ಭೂಪತಿ, ಡಾ| ಪ್ರಕಾಶ್ ಸಿ ರಾವ್, ಶ್ರೀ ಎನ್. ವಿಶ್ವರೂಪಾಚಾರ್, ಡಾ.ಎನ್. ಗೋಪಾಲಕೃಷ್ಣ, ಶ್ರಿ ಆರ್. ಬಾಲಕೃಷ್ಣ ಮುಂತಾದವರು ಎಲ್ಲ ರೀತಿಯಿಂದ ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆಯನ್ನು ಸೂಚಿಸುತ್ತಿದ್ದೇನೆ.

ಪರಿಷತ್ತು ಈ ಪುಸ್ತಕವನ್ನು ಲಾಭ-ನಷ್ಟಗಳಿಲ್ಲದೆ ಪ್ರಕಟಿಸುತ್ತಿದೆ. ಹಾಗಾಗಿ ಈ ಪುಸ್ತಕವನ್ನು ಕೊಂಡು ಓದುತ್ತಿರುವ ನಿಮಗೆ ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಡಾ| ನಾ. ಸೋಮೇಶ್ವರ
nasomeswar@gmail.com
ಬೆಂಗಳೂರು
೨೩ ನವೆಂಬರ್ ೨೦೦೮.

* * *