ಜನಸಾಮಾನ್ಯರ ಆರೋಗ್ಯ ರಕ್ಷಣೆಯಲ್ಲಿ ಆರೋಗ್ಯ ಶಿಕ್ಷಣದ ಪಾತ್ರ ಬಹಳ ಮಹತ್ವದ್ದು. ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ವೈದ್ಯ ಬರಹಗಾರರು ಮತ್ತು ಜನಸಾಮಾನ್ಯರ ನಡುವೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವ ಈ ಸಂದರ್ಭದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಪುಸ್ತಕ ವೈದ್ಯ ಸಾಹಿತ್ಯಸಮೃದ್ಧ ಆರೋಗ್ಯ ಕೃತಿಯ ಎರಡು ಭಾಗಗಳನ್ನು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಸಂತೋಷದಿಂದ ಕನ್ನಡಿಗರ ಮಡಿಲಲ್ಲಿಡುತ್ತಿದೆ. ಉನ್ನತ ಧ್ಯೇಯದ ವಿಶಿಷ್ಟ ವ್ಯಕ್ತಿಗಳ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ನಮ್ಮ ಆದ್ಯಕರ್ತವ್ಯ.

ಅನೇಕ ವರ್ಷಗಳ ನಂತರ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಕಟಣೆಗೆ ಮುಂದಾಗಿದೆಯಲ್ಲದೇ, ಪುಸ್ತಕಗಳ ಪ್ರಕಟಣೆ ನಿರಂತರವಾಗಿ ಸಾಗಲಿ ಎಂಬ ಎಂಬ ಉದ್ದೇಶದಿಂದ ‘ಪುಸ್ತಕ ನಿಧಿ’ ಸ್ಥಾಪಿಸಿದೆ. ಸಹೃದಯ ಲೇಖಕರು, ವೈದ್ಯ ಸಾಹಿತ್ಯಾಭಿಮಾನಿಗಳು ಉದಾರವಾಗಿ ದೇಣಿಗೆ ನೀಡಿದಲ್ಲಿ ಪ್ರಕಟಣೆಯ ಕಾರ್ಯ ಚುರುಕಾಗಲು ಸಾಧ್ಯ. ಕನ್ನಡದಲ್ಲಿ ವೈದ್ಯ ಸಾಹಿತ್ಯದ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿರುವುದು ಹೆಮ್ಮೆಯೆನಿಸಿದರೂ ಕೆಲವು ಬಾರಿ ಉದಯೋನ್ಮುಖ ಲೇಖಕರ ಕೃತಿಗಳನ್ನು ಪ್ರಕಟಿಸಲು ಪ್ರಕಾಶಕರು ಮುಂದಾಗದಿರುವುದೂ ಸತ್ಯ ಸಂಗತಿ. ಈ ಕೊರತೆಯನ್ನು ನೀಗಿಸಲು ಮತ್ತು ಉದಯೋನ್ಮುಖ ವೈದ್ಯಸಾಹಿತಿಗಳಿಗೆ ವೇದಿಕೆಯಾಗಿ ಪರಿಷತ್ತಿನ ಕಾರ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಪರಿಷತ್ತಿನ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕಿದೆ. ಪರಿಷತ್ತಿನ ಉನ್ನತ ಧ್ಯೇಯ ಮತ್ತು ಉದ್ದೇಶಗಳು ಈಡೇರಲು ಎಲ್ಲರ ಸಹಕಾರವೂ ಬಹಳ ಮುಖ್ಯ.

ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಅನೇಕ ವ್ಯಕ್ತಿಗಳ, ಸಂಸ್ಥೆಗಳ ಕೊಡುಗೆಗಳು ಸೇರಿವೆ. ಅವರೆಲ್ಲರನ್ನು ಪರಿಷತ್ತು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತದೆ.

ಮನೋವೈದ್ಯಕೀಯದ ಬಗೆಗೆ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಗಳಾಗಿ ಸಾಮಾಜಿಕ ಬದ್ಧತೆಯಿಂದ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಡಾ| ಸಿ.ಆರ್.ಚಂದ್ರಶೇಖರ್‌ರವರು ಮುಂಚೂಣಿಯಲ್ಲಿದ್ದಾರೆ. ಲಕ್ಷಾಂತರ ಜನರ ಮನಸ್ಸಿನ ಸ್ವಾಸ್ಥ್ಯ ಕಾಪಾಡುವಲ್ಲಿ ಅವರ ಪುಸ್ತಕಗಳು, ಭಾಷಣಗಳು ಮತ್ತು ಆಪ್ತ ಸಲಹೆ ಜನಜನಿತವಾಗಿವೆ. ಉದಾತ್ತ ಚಿಂತನೆಯ ಸರಳಜೀವಿ ಮತ್ತು ಇತರರಿಗೆ ಆದರ್ಶಪ್ರಾಯವಾಗಿರುವ ಡಾ| ಸಿ.ಆರ್. ಚಂದ್ರಶೇಖರ್‌ರವರು ೬೦ನೇ ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಕನ್ನಡ ವೈದ್ಯಸಾಹಿತ್ಯ ಪರಿಷತ್ತು ಅವರನ್ನು ಹೃದಯ ತುಂಬಿ ಅಭಿನಂದಿಸುತ್ತದೆ.

‘ವೈದ್ಯ ಸಾಹಿತ್ಯ-ಸಮೃದ್ಧ ಆರೋಗ್ಯ’ ಕೃತಿಗೆ ಅನೇಕ ಹಿರಿಯ ಹಾಗೂ ಹಿರಿಯ ವೈದ್ಯ ಸಾಹಿತಿಗಳೂ ಆರೋಗ್ಯದ ಕುರಿತ ವಿವಿಧ ಲೇಖನಗಳನ್ನು ಬರೆದುಕೊಟ್ಟಿದ್ದಾರೆ. ಅಲ್ಲದೆ ‘ವೈದ್ಯ ಸಾಹಿತಿಯಾಗಿ ನನ್ನ ಅನುಭವ’ ಎಂಬ ವಿಷಯಕ್ಕೆ ಸ್ಪಂದಿಸಿ ಹಲವಾರು ತೆರೆದಿಟ್ಟಿದ್ದಾರೆ. ‘ವೈದ್ಯ ಸಾಹಿತ್ಯ-ಸಂಋದ್ಧ ಆರೋಗ್ಯ’ ಪುಸ್ತಕಕ್ಕೆ ವೈದ್ಯ ಬರಹಗಾರರ ಲೇಖನಗಳ ಮಹಾಪೂರವೇ ಹರಿದುಬಂದಿದ್ದು ಅತ್ಯಂತ ಸಂತೋಷದ ಸಂಗತಿ. ಎಲ್ಲವನ್ನೂ ಸೇರಿಸಿ ಒಂದೇ ಪುಸ್ತಕ ಪ್ರಕಟಿಸಬೇಕೆಂದಾಗ ಬೃಹತ್ ಗಾತ್ರದ ಪುಸ್ತಕವಾಗುತ್ತದೆಂಬುದು ಮತ್ತು ಬೆಲೆಯೂ ಹೆಚ್ಚಾಗುತ್ತದೆಂಬ ಕಾರಣದಿಂದ ಎರಡು ಭಾಗಗಳಾಗಿ ಪ್ರಕಟಿಸಬೇಕಾಯಿತು. ಲೇಖನಗಳನ್ನು ಬರೆದುಕೊಟ್ಟ ವೈದ್ಯರು ಹಾಗೂ ವೈದ್ಯೇತರರಿಗೆ ಕೃತಜ್ಞತೆಗಳು. ಎಲ್ಲ ಲೇಖಕ/ಲೇಖಕಿಯರು ಹೆಚ್ಚು ಪ್ರತಿಗಳನ್ನು ಕೊಂಡು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತನ್ನು ಬಲಪಡಿಸಬೇಕೆಂಬುದು ಪರಿಷತ್ತಿನ ಬಯಕೆ. ಕನ್ನಡ ವೈದ್ಯ ಸಾಹಿತ್ಯಕ್ಕೆ ಹೊಸ ಆಯಾಮ ತಂದುಕೊಟ್ಟ ದಿವಗಂತ ಡಾ| ಡಿ.ಎಸ್.ಶಿವಪ್ಪ,ದಿವಂಗತ ಡಾ| ಅನುಪಮಾ ನಿರಂಜನ್, ದಿವಂಗತ ರಾಶಿ (ಡಾ|ಎಂ.ಶಿವರಾಂ) ದಿವಂಗತ ಡಾ| ಎಸ್.ಜೆ. ನಾಗಲೋಟಿಮಠ, ದಿವಂಗತ ಡಾ| ಅಶ್ವತ್ ಮುಂತಾದ ಹಿರಿಯ ಚೇತನಗಳ ಪುಸ್ತಕಗಳಿಂದ ಲೇಖನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ‘ವೈದ್ಯಸಾಹಿತ್ಯ-ಸಮೃದ್ಧ ಆರೋಗ್ಯ’ ಕೃತಿಯ ಎರಡು ಭಾಗಗಳನ್ನು ಅತ್ಯಂತ ಪ್ರೀತಿಯಿಂದ ಶ್ರಮವಹಿಸಿ ಸಂಪಾದನೆ ಮಾಡಿಕೊಟ್ಟ ಡಾ| ನಾ. ಸೋಮೇಶ್ವರರಿಗೆ ಕೃತಜ್ಞತೆಗಳು. ಈ ಗ್ರಂಥದ ಪ್ರಕಟಣೆಯಲ್ಲಿ ನೆರವುನೀಡಿದ ಶ್ರಿ ಎನ್. ಗೋಪಾಲಕೃಷ್ಣರವರಿಗೆ ಹಾಗೂ ಶ್ರೀ ಎನ್. ವಿಶ್ವರೂಪಾಚಾರ್‌ರವರಿಗೆ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಡಿ.ಟಿ.ಪಿ. ಕಾರ್ಯವನ್ನು ಮಾಡಿಕೊಟ್ಟ ಸಹನಾ ಗ್ರಾಫಿಕ್ಸ್‌ನ ಮಾಲೀಕರಾದ ಶ್ರೀ ಆನಂದ್‌ರವರಿಗೆ ಹಾಗೂ ಗ್ರಂಥವನ್ನು ಮುದ್ರಿಸಿಕೊಟ್ಟ ನವಕರ್ನಾಟಕ ಪಬ್ಲಿಕೇಷನ್ಸ್ ಸಂಸ್ಥೆಯ ಶ್ರೀ ಆರ್.ಎಸ್.ರಾಜಾರಾಮ್‌ರವರಿಗೂ ಪರಿಷತ್ತಿನ ಗೌರವದ ವಂದನೆಗಳು. ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಭಾಗಿಗಳಾಗಿರುವ ಕಾರ್ಯದರ್ಶಿಗಳಾದ ಡಾ| ಪ್ರಕಾಶ್ ಸಿ.ರಾವ್, ಉಪಾಧ್ಯಕ್ಷರಾದ ಡಾ| ಬಿ.ಜಿ. ಚಂದ್ರಶೇಖರ್, ಖಜಾಂಚಿ, ಆರ್.ಬಾಲಕೃಷ್ಣರವರಿಗೂ ನನ್ನ ಆತ್ಮೀಯ ಧನ್ಯವಾದಗಳು.

ಕನ್ನಡ ನಾಡಿನ ಪ್ರತಿ ಮನೆಯಲ್ಲಿ ‘ವೈದ್ಯ ಸಾಹಿತ್ಯ-ಸಮೃದ್ಧ ಆರೋಗ್ಯ’ ಕೃತಿಯ ಎರಡೂ ಭಾಗಗಳು ಇರಲಿ, ಪ್ರತಿಯೊಬ್ಬರೂ ಕೊಂಡು ಓದಲಿ ಹಾಗೂ ಇತರರಿಗೆ ಉಡುಗೊರೆಯಾಗಿ ನೀಡಲಿ ಎಂಬ ಆಶಯ ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನದು.

ಡಾ| ವಸುಂಧರಾ ಭೂಪತಿ

* * *