ಮಾನವನ ಜೀವನಶೈಲಿಯಿಂದ ಬರುವ ರೋಗಗಳು ಹಲವು, ಉದಾ: ಮಧುಮೇಹ, ಬೊಜ್ಜುತನ, ರಕ್ತದ ಒತ್ತಡ, ಇದರಲ್ಲಿ ಮೂಲವ್ಯಾಧಿ ಹಾಗೂ ಫಿಷ್ಸರ್ ಒಂದು ಮೂಲವ್ಯಾಧಿ. ಅಂದರೆ ಗುದದ್ವಾರದಲ್ಲಿ ಆಗುವಂತಹ ರೋಗ, ಇದರಲ್ಲಿ ಮೂರುವಿಧಗಳಿವೆ. ಫೈಲ್ಸ್, ಫಿಷರ್, ಮತ್ತು ಫಿಸ್ತುಲಾ. ಆದರೆ ಸಾಮಾನ್ಯವಾಗಿ ಜನರು ಗುದದ್ವಾರದಲ್ಲಿ ಆಗುವ ಯಾವುದೇ ರೀತಿಯ ತೊಂದರೆಗೆ ಫೈಲ್ಸ್ ಎಂದು ಭಾವಿಸುತ್ತಾರೆ.

ಫೈಲ್ಸ್‌ನಲ್ಲಿ-ಗುದದ್ವಾರದಲ್ಲಿ ಇರುವ ರಕ್ತನಾಳಗಳು ಊದಿಕೊಂಡಿರುತ್ತವೆ. ರಕ್ತನಾಳಗಳು ಊದಿಕೊಳ್ಳಲು ಮುಖ್ಯವಾದ ಕಾರಣ-ಮಲಬದ್ಧತೆ. ಮಲಬದ್ಧತೆ ಆದಾಗ ವ್ಯಕ್ತಿ ಮಲವನ್ನು ತ್ಯಜಿಸಲು ಸ್ವಲ್ಪ ಒತ್ತಡ ಹಾಕಬೇಕಾಗುತ್ತದೆ. ಒತ್ತಡ ಹಾಕಿದಾಗ ರಕ್ತನಾಳಗಳ ಮೇಲೂ ಒತ್ತಡ ಬೀಳುತ್ತದೆ. ಇದನ್ನು ಕಡೆಗಣಿಸಿ, ವ್ಯಕ್ತಿಯು ಮಲಬದ್ಧತೆಯನ್ನು ನಿವಾರಿಸದಿದ್ದರೆ, ಕ್ರಮೇಣ ರಕ್ತನಾಳಗಳು ಊದಿ, ಅತಿಯಾದ ಒತ್ತಡ ತಡೆಯಲಾಗದೆ ರಕ್ತ ಮಾತ್ರ ಹೋಗುತ್ತದೆ. ಆದರೆ ಯಾವುದೇ ರೀತಿಯ ನೋವು ಇರುವುದಿಲ್ಲ.

ಫಿಷರ್-ಗುದದ್ವಾರದಲ್ಲಿ ಗಾಯ ಆಗಿ ತುಂಬ ಉರಿ ಮತ್ತು ನೋವು ಇರುತ್ತದೆ. ಇದಕ್ಕೆ ಸಹ ಮಲಬದ್ಧತೆಯೇ ಮುಖ್ಯವಾದ ಕಾರಣ. ಮೊದಲು ಹೇಳಿದಂತೆ ಮಲಬದ್ಧತೆ ಇದ್ದಾಗ, ವ್ಯಕ್ತಿ ಒತ್ತಡ ಹಾಕುತ್ತಾನೆ. ಒತ್ತಡ ಹಾಕಿದಾನ ಗುದದ್ವಾರದ ಚರ್ಮದಲ್ಲಿ ಚಿಕ್ಕ ಗಾಯವಾಗುತ್ತದೆ. ಈ ಗಾಯವನ್ನೇ ಫಿಷರ್ ಎಂದು ಹೇಳುತ್ತಾರೆ. ಮಲಬದ್ಧತೆ ಹಾಗೆ ಮುಂದುವರೆದರೆ ಪುನಃ ಗಾಯವಾಗಿ ಅಲ್ಲಿ ಒಂದು ಚಿಕ್ಕ ಚರ್ಮದ ಮೊಳಕೆ ಬೆಳೆಯುತ್ತದೆ ಇದಕ್ಕೆ ಟ್ಯಾಗ್ ಎಂದು ಕರೆಯುತ್ತಾರೆ. ಮಲಬದ್ದತೆಯನ್ನು ನಿವಾರಣೆಗೊಳಿಸಿದಿದ್ದರೆ ಚರ್ಮದ ಮೊಳಕೆ ಬೆಳೆಯುತ್ತಾ ಹೋಗಿ ಅದರಿಂದ ವಿಪರೀತ ನೋವು ಅನುಭವಿಸಬೇಕಾಗುತ್ತದೆ. ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ ಫಿಸ್ತೂಲಾಗೆ ಕಾರಣವಾಗುತ್ತದೆ.

ಈ ಮೇಲಿನ ರೋಗಗಳು ಅಂದರೆ ಪೈಲ್ಸ್ ಮತ್ತು ಫಿಷರ್ ಹೆಂಗಸರು ಮತ್ತು ಗಂಡಸರಲ್ಲಿ ಇಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಆದರೆ ಹೆಂಗಸರಲ್ಲಿ ಇವೆರಡೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಲವಾದ ಕಾರಣವೇನೆಂದರೆ ಹೆಂಗಸರು ಈ ಕಾಯಿಲೆಯನ್ನು ವಿಪರೀತವಾಗಿ ತೊಂದರೆಯಾದ ಮೇಲೆ ವೈದ್ಯರ ಬಳಿ ಖಂಡಿತ ಹೋಗಬೇಕಾಗುತ್ತದೆ. ಅದಕ್ಕಿಂತ ಪ್ರಾರಂಭದಲ್ಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.

ಗುದದ್ವಾರದ ಫಿಸ್ತುಲಾ ಎಂದರೇನು?

ಈ ರೋಗದಲ್ಲಿ ಗುದದ್ವಾರ ಪಕ್ಕದಲ್ಲಿ ಊತ ಅಥವಾ ಕುರು ಕಾಣಿಸಿಕೊಂಡು, ಆದರಿಂದ ಕೀವು ಅಥವಾ ರಕ್ತ ಅಥವಾ ಎರಡೂ ಬರುವ ಸಾಧ್ಯತೆ ಇದೆ. ಈ ಎಲ್ಲಾ ಲಕ್ಷಣಗಳು ಕೆಲವು ತಿಂಗಳು ಅಥವಾ ವರ್ಷಗಳಲ್ಲಿ ಆಗಬಹುದು. ಇದರಿಂದ ರೋಗಿಗೆ ಬಹಳ ತೊಂದರೆ ಉಂಟಾಗಬಹುದು.  ಸಾಮಾನ್ಯವಾಗಿ ಜನರು ಈ ರೀತಿಯ ಕುರು ಅಥವಾ ಊತಕ್ಕೆ ಗಮನ ಕೊಡದೆ ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಈ ರೋಗವು ಸ್ವಚಿಕಿತ್ಸೆಯಿಂದ ಗುಣವಾಗುವುದಿಲ್ಲ. ಏಕೆಂದರೆ ಇದರಲ್ಲಿ ಗುದದ್ವಾರದ ಒಳಗಿನಿಂದ ಹೊರಗಿನ ತ್ವಚೆ ತನಕ ಒಂದು ಅಸಹಜವಾದ ಮಾರ್ಗವಿರುತ್ತದೆ.

ಈ ರೋಗಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ ನಿರಂತರ ಕೀವು ಸೋರುವಿಕೆಯಿಂದ ಒಳವಸ್ತ್ರಗಳಿಗೆ ಕಲೆಯಾಗಬಹುದು ಹಾಗೂ ಪುನಃ ಪುನಃ ಈರೋಗವು ಬರುವುದು. ಇದಲ್ಲದೆ ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಆಗುವ ಸಂಭವವಿದೆ.

ಫಿಸ್ತುಲಾ ಯಾರಿಗೆ ಬರುವುದು?

ಯಾರಿಗೆ ಹಲವು ವರ್ಷಗಳಿಂದ ಮಲಬದ್ಧತೆ ಇದೆಯೋ ಅಥವಾ ಯಾರು ತುಂಬಾ ಸಮಯ ಟಾಯ್ಲೆಟ್‌ನಲ್ಲಿ ಕುಳಿತು ದಿನಪತ್ರಿಕೆ ಓದುತ್ತಾ ಇರುತ್ತಾರೊ ಯಾರು ದಿನವೂ ಮಾಂಸಾಹಾರ ಸೇವಿಸುತ್ತಾರೆಯೋ, ದಿನವಿಡೀ ಕುಳಿತುಕೊಂಡೇ ಇರುತ್ತಾರೆಯೋ, ಯಾವುದೇ ರೀತಿಯ ಶಾರೀರಿಕ ಶ್ರಮವಿಲ್ಲದೆ ಕುಳಿತಿರುತ್ತಾರೆಯೋ ಅವರಿಗೆ ಈ ರೋಗವು ಬರುವುದು. ದ್ವಿಚಕ್ರವಾಹನದಲ್ಲಿ ಬಹಳ ದೂರ ಹಾಗೂ ಬಹಳ ದಿನಗಳು ಪ್ರಯಾಣ ಮಾಡುವವರಿಗೂ ಈ ರೋಗವು ಬರುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಜನರು ಗುದದ್ವಾರದ ಸುತ್ತ ಊತವಿದ್ದರೆ ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ಒಂದು ಬಾರಿ ಕೀವು ಹೊರಗೆ ಬಂದರೆ, ರೋಗವು ಗುಣಮುಖವಾಯಿತು ಎಂದು ತಪ್ಪುಕಲ್ಪನೆಯಲ್ಲಿರುತ್ತಾರೆ. ಇದಕ್ಕೆ ತಮ್ಮದೇ ಚಿಕಿತ್ಸೆ ಮಾಡಿ, ಸರಿಯಾದ ಚಿಕಿತ್ಸೆಯನ್ನು ಮುಂದೂಡುವುದಕ್ಕಿಂತ ಒಬ್ಬ (ಪ್ರಾಕ್ಟೋಲೋಜಿಸ್ಟ್)ನ ಬಳಿ ತೋರಿಸಿ, ರೋಗವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ.

ಫೈಲ್ಸ್ಮತ್ತು ಫಿಷರ್ಗೆ ಮುಖ್ಯವಾದ ಕಾರಣಗಳು:-

  • ಮಲಬದ್ಧತೆ
  • ನಮ್ಮ ದಿನನಿತ್ಯದ ಆಹಾರದಲ್ಲಿ ನಾರಿನ ಅಂಶವನ್ನು ಕಡಿಮೆ ಸೇವಿಸುವುದು.
  • ಸರಿಯಾಗಿ ನೀರು ಕುಡಿಯದಿದ್ದರೆ ಅಂದರೆ ಆರೋಗ್ಯವಾಗಿ ಇರಲು ಮನುಷ್ಯನಿಗೆ ಕನಿಷ್ಠ ೨-೩ ಲೀಟರ್ ನೀರನ್ನು ಕುಡಿಯಬೇಕು.
  • ಯಾವುದೇ ರೀತಿಯ ಶಾರೀರಿಕ ಪರಿಶ್ರಮ ಇಲ್ಲದಿರುವುದು.
  • ಮಲವನ್ನು ತ್ಯಜಿಸಲು ಅನಾವಶ್ಯಕವಾಗಿ ಒತ್ತಡ ಹಾಕುವುದು ಹಾಗೂ ತುಂಬಾ ಹೊತ್ತು ಕುಳಿತುಕೊಳ್ಳುವುದು.

ಚಿಕಿತ್ಸೆ ಏನು?

೧. ಇದಕ್ಕೆ ಮುಖ್ಯವಾದ ಚಿಕಿತ್ಸೆ ಮಲಬದ್ಧತೆ ನಿವಾರಿಸುವುದು ಮಲಬದ್ಧತೆಯನ್ನು ತಡಗಟ್ಟುವುದು ನಮ್ಮ ಕೈಯಲ್ಲಿದೆ.

ಅ. ಇತಿ ಮಿತಿಯಾದ ಆಹಾರ ಸೇವನೆ ಮಾಡುವುದು.

ಆ. ದಿನಕ್ಕೆ ಎಂಟು ಲೋಟ ನೀರನ್ನು ಕುಡಿಯುವುದು.

ಇ. ಹೆಚ್ಚಿನ ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು.

ಈ. ರಾತ್ರಿ ೯ ಗಂಟೆಯ ನಂತರ ಏನೂ ಆಹಾರ ಸ್ವೀಕರಿಸದೇ ಇರುವುದು.

ಉ. ರಾತ್ರಿ ಊಟವಾದ ನಂತರ ಕನಿಷ್ಠ ಒಂದು ಗಂಟೆ ನಂತರ ನಿದ್ದೆ ಮಾಡುವುದು.

ಊ. ಮಲವನ್ನು ತ್ಯಜಿಸಲು ೫ ನಿಮಿಷಕ್ಕಿಂತ ಜಾಸ್ತಿ ಟಾಯ್ಲೆಟ್‌ನಲ್ಲಿ ಕೂರದೇ ಇರುವುದು.

ಇವುಗಳಿಂದ ಕಾಯಿಲೆಗಳನ್ನು ತಡೆಗಟ್ಟಬಹುದು.

ಆದರೆ ಪೈಲ್ಸ್ ಮತ್ತು ಫಿಷರ್ ಒಂದು ಹಂತ ದಾಟಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಆಗಲೇಬೇಕು. ಇದಕ್ಕೆ ಆಯುರ್ವೇದದಲ್ಲಿ ‘ಕ್ಷಾರಸೂತ್ರ’ ಎಂಬ ವಿಶೇಷ ಪರಿಣಾಮಕಾರಿ ಚಿಕಿತ್ಸೆ ಇದೆ. ಕ್ಷಾರಸೂತ್ರವೆಂದರೆ ವಿವಿಧ ಆಯುರ್ವೇದಿಯ ಔಷಧಿಗಳಿಂದ ತಯಾರಿಸಿದಂತಹ ಒಂದು ದಾರ. ಇದೇ ಆಯುರ್ವೇದೀಯ ಔಷಧಿಗಳನ್ನು ಉಪಯೋಗಿಸಿ ಮಾಡುವ ಕ್ಷಾರಲೇಪ ಅಂದರೆ ಕ್ಷಾರದ ಮುಲಾಮನ್ನು ತಯಾರಿಸುತ್ತಾರೆ. ರೋಗವು ಯಾವ ಹಂತದಲ್ಲಿ ಇದೆ ಇದಕ್ಕೆ ಅನುಸಾರವಾಗಿ ಕ್ಷಾರಸೂತ್ರ ಅಥವಾ ಕ್ಷಾರಲೇಪವನ್ನು ಉಪಯೋಗಿಸುತ್ತೇವೆ.

ಬೇರೆ ಆಧುನಿಕ ಚಿಕಿತ್ಸೆಗೆ ಹೋಲಿಸಿದರೆ

೧. ಕ್ಷಾರ ಸೂತ್ರದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬರುವುದಿಲ್ಲ.

೨. ಕ್ಷಾರ ಸೂತ್ರ ಚಿಕಿತ್ಸೆಯ ನಂತರ ರೋಗ ಪುನಃ ಮರುಕಳಿಸುವುದಿಲ್ಲ.

೩. ಹಾಗೂ ಕ್ಷಾರಸೂತ್ರ ಚಿಕಿತ್ಸೆ ಆದ ನಂತರ ವ್ಯಕ್ತಿ ಆಸ್ಪತ್ರೆಯಲ್ಲಿ ಇರುವ ಅವಶ್ಯಕತೆಯಿಲ್ಲ. ಚಿಕಿತ್ಸೆ ಮಾಡಿಸಿ ಒಂದು ಗಂಟೆಯಲ್ಲಿ ಮನೆಗೆ ಹೋಗಬಹುದು.

Anal Stenosis (ಅಂದರೆ ಗುದದ್ವಾರ ಸಣ್ಣದಾಗುವುದು ಅಥವಾ ಸಂಕುಚಿತವಾಗುವುದು) Anal Incontinence ಅಥವಾ (ಮಲವನ್ನು ತಡೆಗಟ್ಟುವ ಶಕ್ತಿಕೊಳೆದುಕೊಳ್ಳುವುದು) ಇಂತಹ ಯಾವುದೇ ತರಹದ  Complications ಇರುವುದಿಲ್ಲ. ಹಾಗಾಗಿ ಕ್ಷಾರಸೂತ್ರವು ಶಸ್ತಚಿಕಿತ್ಸೆಗೆ ಒಂದು ಪರ್ಯಾಯ ಚಿಕಿತ್ಸೆ.

ಕ್ಷಾರ ಸೂತ್ರ ಚಿಕಿತ್ಸೆಯಲ್ಲಿ ಪೈಲ್ಸ್‌ನ ಬುಡದಲ್ಲಿ ಈ ದಾರವನ್ನು ಗಟ್ಟಿಯಾಗಿ ಕಟ್ಟುತ್ತಾರೆ. ಇದರಿಂದ ಪೈಲ್ಸ್ ಬುಡದಿಂದ ಕಿತ್ತು ಹೋಗಿ ರೋಗವು ಪುನಃ ಮರುಕಳಿಸುವುದಿಲ್ಲ. ಕ್ಷಾರಲೇಪದಲ್ಲಿ ಔಷಧವನ್ನು ಪೈಲ್ಸ್ ಮತ್ತು ಫಿಷರ್‌ನ ಗಾಯಕ್ಕೆ ಹಚ್ಚಲಾಗುವುದು. ಇದರಿಂದ ಅಲ್ಲಿ ಇರುವ ದುರ್ಮಾಂಸವು ನಶಿಸಿ (Chemical Cauterization) ವ್ಯಾಧಿಯು ಸಂಪೂರ್ಣವಾಗಿ ಗುಣವಾಗುತ್ತದೆ. ಇದೇ ಕ್ಷಾರಸೂತ್ರವನ್ನು ಫಿಸ್ತುಲಾದ ಅಸಹಜ ಮಾರ್ಗದಲ್ಲಿ ಕಟ್ಟಲಾಗುವುದು. ಈ ದಾರದಲ್ಲಿರುವ ಔಷಧಗಳು ಫಿಸ್ತುಲಾದಲ್ಲಿರುವ ಕೀವನ್ನು ಹೊರಹಾಕುತ್ತದೆ ಮತ್ತು ಸೋಂಕನ್ನು ತಡೆಗಟ್ಟಿ ಈ ಜಾಗವನ್ನು ವಾಸಿ ಮಾಡುತ್ತದೆ.

ಶಸ್ತ್ರಚಿಕಿತ್ಸೆಗೆ ಹೋಲಿಸಿದಾಗ, ಕ್ಷಾರಸೂತ್ರದಲ್ಲಿ ರೋಗ ಪುನಃ ಮರುಕಳಿಸುವ ಸಾಧ್ಯತೆ ಬಹಳ ಕಡಿಮೆ ಹಾಗೂ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ಸಮಸ್ಯೆಗಳು ಬರುವುದಿಲ್ಲ.

ವೈದ್ಯಸಾಹಿತಿಯಾಗಿನನ್ನಅನುಭವ
ಕನ್ನಡದಲ್ಲಿ ಲೇಖನ ಬರೆಯಲು ಪ್ರಾಶಸ್ತ್ಯ ಕೊಡುವೆ
– ಡಾ| ರಜನೀಶ್ ವಿ.ಗಿರಿನಾನು ಈ ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟಾಗಿನಿಂದ, ತಮ್ಮ ಶರೀರದ ಸ್ವಚ್ಛತೆಯ ಬಗ್ಗೆ ಒಂದು ಮೂಲಭೂತಗಳ ಅರಿವಿಲ್ಲದ ಸುಮಾರು ರೋಗಿಗಳು ಹಾಗೂ ಸಾಮಾನ್ಯ ಜನರನ್ನು ನೋಡಿದ್ದೇನೆ. ಅಜ್ಞಾನ ಅಥವಾ ಸ್ವಚ್ಛತೆಯ ಬಗ್ಗೆ ಇರುವ ನಿರ್ಲಕ್ಷ್ಯದಿಂದ ಹಲವಾರು ರೋಗಗಳು ಹಾಗೂ ಶರೀರದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಆದ್ದರಿಂದ ಒಬ್ಬ ವೈದ್ಯನಾಗಿ ನನ್ನ ಕರ್ತವ್ಯ ರೋಗಿಯ ಕಾಯಿಲೆ ವಾಸಿಮಾಡುವುದಲ್ಲದೆ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಆಗಿದೆ.

ನಾನು ಹಲವಾರು ದಿನಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಆಂಗ್ಲ ಮತ್ತು ಕನ್ನಡದಲ್ಲಿ ಲೇಖನಗಳನ್ನು ಬರೆದಿದ್ದೇನೆ. ಈ ಎಲ್ಲಾ ಲೇಖನಗಳ ಉದ್ದೇಶವೇನೆಂದರೆ ಜನರಲ್ಲಿ ಹಲವು ರೋಗಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದು, ಅವುಗಳನ್ನು ತಡೆಗಟ್ಟುವ ಉಪಾಯಗಳು ರೋಗಗಳ ದುಷ್ಪರಿಣಾಮಗಳು ಹಾಗೂ ಜನರಲ್ಲಿ ಇರುವ ತಪ್ಪು ಮಾಹಿತಿಗಳನ್ನು ಸರಿಪಡಿಸುವುದು.

ಕನ್ನಡದಲ್ಲಿ ಲೇಖನಗಳನ್ನು ಬರೆಯಲು ನಾನು ಜಾಸ್ತಿ ಪ್ರಾಶಸ್ತ್ಯ ಕೊಡುವೆ. ಏಕೆಂದರೆ ಕನ್ನಡ ಎಲ್ಲಾ ತರಹದ ಜನರನ್ನು ತಲುಪುತ್ತದೆ.

ಆದ್ದರಿಂದ ಸಾಮಾನ್ಯ ಜನರಿಗೆ, ಸಾಮಾನ್ಯ ರೀತಿಯಲ್ಲಿ ಸರಿಯಾದ ಮಾಹಿತಿಯನ್ನು ಕೊಡುವುದು ನನ್ನ ಪ್ರಥಮ ಆದ್ಯತೆಯಾಗಿದೆ. ಈ ಮಾರ್ಗದಲ್ಲಿ ನನಗೆ ಜನರ ಪ್ರೋತ್ಸಾಹ ಹಾಗೂ ಯಶಸ್ಸು ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

* * *