“ಅಮ್ಮ ನೀನು ಸಾಯಲೇಕೆ, ನನ್ನ ತಬ್ಬಲಿ ಮಾಡಲೇಕೆ?” ಗೋವಿನ ಹಾಡಿನಲ್ಲಿ ಈ ವಾಕ್ಯಗಳನ್ನು ಕೇಳಿ ಹಲವರು ಕಣ್ಣೀರು ಸುರಿಸಿದ್ದುಂಟು. ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ, ‘ಮಾತೃದೇವೋ ಭವ’, ‘ಸ್ತ್ರೀಯರಿಗೆ ಹೆಚ್ಚು ‌ಪ್ರಾತಿನಿಧ್ಯ’, ‘ತಾಯಿ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಹಣ ವಿನಿಯೋಗ’ ಹೀಗೆ ಘೋಷಣೆಗಳನ್ನು ಕೇಳುತ್ತೇವೆ. ಆದರೆ ಸ್ತ್ರೀಯರ ಸ್ಥಿತಿಗತಿಗಳು ಇಂದಿಗೂ ಸಹ ಸಮಾಧಾನಕರವಾಗಿಲ್ಲ. ಕೇಳುತ್ತೇವೆ. ಆದರೆ ಸ್ತ್ರೀಯರ ಸ್ಥಿತಿಗತಿಗಳು ಇಂದಿಗೂ ಸಹ ಸಮಾಧಾನಕರವಾಗಿಲ್ಲ. ಯೂರೋಪ್ ಖಂಡದಲ್ಲಿ ಒಂದು ವರ್ಷದಲ್ಲಿ ಉಂಟಾಗುವಷ್ಟು ತಾಯಂದಿರ ಮರಣ ಸಂಖ್ಯೆ ಭಾರತದಲ್ಲಿ ದೇಶದಲ್ಲಿ ಕೇವಲ ಒಂದು ವಾರದಲ್ಲಿ ಉಂಟಾಗುತ್ತದೆ. ಪ್ರತಿ ತಾಯಿಯ ಮರಣದ ವಾರ್ತೆಯ ಹಿಂದೆ ೧೦ರಿಂದ ೧೫ ಮಂದಿ ತಾಯಿಯರು ಗರ್ಭಕೋಶಕ್ಕೆ ಸಂಬಂಧಿಸಿದ ತೊಂದರೆಗಳಿಂದ ನರಳಿ ಸಂಕಷ್ಟಗೀಡಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ ಹೆಣ್ಣಿನ ಆಕ್ರಂದನ ಹುಟ್ಟುವ ಮೊದಲೇ ಆರಂಭವಾಗುತ್ತದೆ. ತಾಯಿ ಗರ್ಭಿಣಿಯಾಗಿದ್ದಾಗಲೇ ಮುಂದೆ ಹುಟ್ಟುವ ಮಗುವಿನ ಲಿಂಗ ಗುರುತಿಸಿ ಮಗು ಹೆಣ್ಣು ಎಂದು ತಿಳಿದರೆ ಗರ್ಭಪಾತಕ್ಕೆ ಮನಸ್ಸು ಮಾಡುತ್ತಾರೆ. ಈ ಬಗೆಯ ಭ್ರೂಣಹತ್ಯೆ ಹಲವು ನಗರಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ಶೋಚನೀಯ ವಿಚಾರವೆಂದರೆ, ವಿದ್ಯಾವಂತರೂ ಹಾಗೂ ಪ್ರತಿಷ್ಠಿತರೂ ಸಹ ಭ್ರೂಣಹತ್ಯೆಗೆ ಮುಂದಾಗಿದ್ದಾರೆ. ಈ ವ್ಯವಸ್ಥೆಯುಳ್ಳ ವೈದ್ಯರಲ್ಲಿ ‘ಇಂದಾದರೆ ೫೦೦ ರೂಪಾಯಿ, ತಪ್ಪಿದರೆ ಮುಂದೆ ೫ ಲಕ್ಷ ರೂಪಾಯಿ’ ಎಂಬ ಫಲಕ ನೋಡಿದರೆ ನಮ್ಮ ದೇಶದ ಸ್ತ್ರೀ ಜನಾಂಗದ ಶೋಚನೀಯ ಸ್ಥಿತಿಯ ಅರಿವು ಉಂಟಾಗುತ್ತದೆ.

ಸಣ್ಣಪುಟ್ಟ ಊರುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿದ ಹೆಣ್ಣು ಮಗುವಿನ ಸ್ಥಿತಿ ನರಕ ಸದೃಶ. ಅದರಲ್ಲೂ ಮೊದಲ ಮಗು ಹೆಣ್ಣು ಇದ್ದು ಎರಡನೆಯದೂ ಸಹ ಹೆಣ್ಣಾದರೆ ‘ಅಯ್ಯೋ ಇದೂ ಹೆಣ್ಣೇ’ ಎಂಬ ಉದ್ಗಾರ. ಹಲವು ಪ್ರದೇಶಗಳಲ್ಲಿ ಹೆಣ್ಣು ಮಗುವಿನ ಮುಖದ ಮೇಲೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲ್ಲುವ ಪದ್ಧತಿ ಇದ್ದರೆ, ರಾಜಾಸ್ತಾನದ ಕೆಲವು ಹಳ್ಳಿಗಳಲ್ಲಿ ಮಗುವಿನ ಬಾಯಿಗೆ ಬೆಲ್ಲದ ಉಂಡೆ ತುರುಕಿ ಉಸಿರುಗಟ್ಟಿಸಿ ಕೊಲ್ಲುವಾಗ, ಬೆಲ್ಲ ತಿಂದು ನೀನು ಹೋಗಿ ನಿನ್ನ ತಮ್ಮನನ್ನು ಕಳುಹಿಸು ಎಂದು ಹಾಡುವರಂತೆ. ಇಷ್ಟೆಲ್ಲ ಭೀಕರತೆ ಮತ್ತು ನರಕಯಾತನೆಯನ್ನು ತಪ್ಪಿಸಿಕೊಂಡು ಬದುಕಿ ಉಳಿದಹೆಣ್ಣು ಮಗುವಿಗೆ ತಾಯಂದಿರು ಎದೆಹಾಲು ಸಹ ಸರಿಯಾಗಿ ಕುಡಿಸದೆ ಮೊದಲನೆಯ ಗಂಡು ಮಗುವಿಗೆ ಕುಡಿಸುವರಂತೆ. ಕೆಲವು ಪ್ರದೇಶಗಳಲ್ಲಿ ಗಂಡು ಹೆಣ್ಣು ಮಕ್ಕಳಿಗೆ ತಾರತಮ್ಯ. ಗಂಡು ಮಕ್ಕಳು ಉಂಡು ಮಿಕ್ಕಿದ್ದು ಹೆಣ್ಣು ಮಕ್ಕಳಿಗೆ. ಕೊನೆಗೆ ಖಾಲಿ ಪಾತ್ರೆ ತಾಯಿಗೆ. ಇಷ್ಟೆಲ್ಲ ಹಿಂಸೆ ಅನುಭವಿಸಿ ಬೆಳೆಯುತ್ತಿರುವ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತಾರತಮ್ಯತೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಏಕೆ? ಹೇಗಿದ್ದರೂ ಬೇರೆ ಮನೆಗೆ ಹೋಗುವವಳು ಎಂದು ಅಸಡ್ಡೆ. ಸ್ಕೂಲಿಗೆ ಸೇರಿಸಿದರೂ ಸಹ ಮನೆಯಲ್ಲಿ ಹಬ್ಬ ಹರಿದಿನಗಳು, ಯಾರಿಗಾದರೂ ಅನಾರೋಗ್ಯವಿದ್ದರೆ ಸ್ಕೂಲಿಗೆ ಹೋಗಬೇಡ, ಮನೆಗೆಲಸ ಮಾಡು ಎಂದು ಆಜ್ಞೆ. ನೀನು ಎಷ್ಟೇ ಓದಿದರೂ ಮುಸುರೆ ತಿಕ್ಕುವುದು ತಪ್ಪುವುದಿಲ್ಲ ಎಂದು ಅವಹೇಳನ. ಎಷ್ಟೋ ಮನೆಯಲ್ಲಿ ಹುಡುಗಿ ಬೆಳೆದಂತೆಲ್ಲ ಮನೆಯವರಲ್ಲಿ ಆತಂಕವೂ ಬೆಳೆಯುತ್ತದೆ. ಹೇಗಾದರೂ ಮಾಡಿ ಕನ್ಯಾಸೆರೆ ಬಿಡಿಸಿಕೊಂಡರೆ ಸಾಕು ಎಂದು ಗಂಡಿಗಾಗಿ ಹುಡುಕಾಟ.

ದಿನಗಳು ಕಳೆಯುತ್ತಿವೆ. ವರ್ಷಗಳು ಉರುಳುತ್ತಿವೆ. ಅನೇಕ ಹಳ್ಳಿಗಳು ಪಟ್ಟಣಗಳಾಗುತ್ತಿವೆ. ಪಟ್ಟಣಗಳು ನಗರಗಳಾಗುತ್ತಿವೆ. ಆಧುನಿಕ ರೀತಿಯಲ್ಲಿ ಕಟ್ಟಿದ ಮನೆಗಳು, ಮನೆಯಲ್ಲಿ ಟಿ.ವಿ. ಮಿಕ್ಸಿ, ರೆಫ್ರಿಜರೇಟರ್ ಇತ್ಯಾದಿ ಉಪಕರಣಗಳು. ಅಡುಗೆ ಮನೆಯಲ್ಲಿ ಆಧುನಿಕತೆ ಕಾಣುತ್ತಿವೆ. ಆದರೆ, ಈ ರೀತಿಯ ಆಧುನಿಕತೆಯ ಬೆಳವಣಿಗೆಯು ಹೆಣ್ಣಿನ ಸ್ಥಿತಿಯನ್ನು ಇನ್ನೂ ಆಳಕ್ಕೆ ಕೊಂಡೊಯ್ಯುತ್ತಿವೆ. ಯಾವುದೇ ಹೆಣ್ಣು ಕುಟುಂಬದ ಕಣ್ಣು ಎನ್ನುವುದರಲ್ಲಿ ಸಂದೇಹವಿಲ್ಲ. ಅನೇಕ ಕುಟುಂಬಗಳಲ್ಲಿ ಹೆಣ್ಣು ಗಂಡಿನ ಜೊತೆಗೂಡಿ ಹೊಲಗದ್ದೆಯಲ್ಲಿ ದುಡಿಯಬೇಕು. ಒಲೆ ಉರಿಸಲು ಕಡ್ಡಿ ಆರಿಸಿ ತರಬೇಕು. ಹೊರಗೆ ದುಡಿದು ಬಂದು ಮನೆಯಲ್ಲಿ ಬಡಿಸಬೇಕು. ದನಕರುಗಳನ್ನು ನೋಡಿಕೊಳ್ಳಬೇಕು. ಇವೆಲ್ಲ ಕೆಲಸಗಳ ಜೊತೆ ಗರ್ಭಿಣಿಯಾಗಿರಲಿ ಬಾಣಂತಿಯಾಗಿರಲಿ, ಹೊಲಗದ್ದೆಯಲ್ಲಿ ದುಡಿಯುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಆಳವಾಗಿ ಬೇರೂರಲ್ಪಟ್ಟಿರುವ ಮೂಢನಂಬಿಕೆಗಳು. ತನ್ನ ಕಷ್ಟಸುಖಗಳನ್ನು ಇನ್ನೊಬ್ಬರ ಹತ್ತಿರ ಹೇಳಿಕೊಳ್ಳಲಾಗದ ಶೋಚನೀಯ ಸ್ಥಿತಿ. ಚಿಕ್ಕವಯಸ್ಸಿಗೇ ಮದುವೆ. ಚಿಕ್ಕವಯಸ್ಸಿನಲ್ಲಿಯೇ  ಗರ್ಭಿಣಿಯಾಗುವುದು, ಮಕ್ಕಳ ಜನನದ ನಡುವೆ ಕಡಿಮೆ ಅಂತರ. ಗರ್ಭಕೋಶಕ್ಕೆ ನಿರಂತರ ಕೆಲಸ. ಇದರಿಂದಲೇ ಚಿಕ್ಕವಯಸ್ಸಿಗೆ ಹೆಣ್ಣು ಹಣ್ಣು ಮುದುಕಿಯಂತೆ ಕಾಣುತ್ತಾಳೆ. ನಮ್ಮ ದೇಶದ ಸ್ತ್ರೀಯರಲ್ಲಿ ಎದ್ದು ಕಾಣುವುದು ರಕ್ತಹೀನತೆ. ಇದಕ್ಕೆ ಕಾರಣ ಪೌಷ್ಠಿಕ ಆಹಾರದ ಕೊರತೆ. ಜತೆಗೆ ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡುಬರುವ ಕೊಕ್ಕೆ ಹುಳುವಿನ ತೊಂದರೆಗೆ ಈಡಾಗುತ್ತಾರೆ. ಕೊಕ್ಕೆ ಹುಳುವಿಗೆ ಆಹಾರ ರಕ್ತ. ಜತೆಗೆ ಉಸಿರಾಡಲು ರಕ್ತಬೇಕು. ಈಕಾರಣಗಳಿಂದಾಗಿ ಹೆಚ್ಚು ರಕ್ತಹೀನತೆ ಉಂಟಾಗುತ್ತದೆ. ಕುಟುಂಬಯೋಜನೆ ವಿಧಾನಗಳ ಬಗ್ಗೆ ಅರಿವಿಲ್ಲದೆ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಿಕೊಳ್ಳಲು ಕ್ರೂರವಿಧಾನಗಳ ಮೊರೆ ಹೋಗಿ ರಕ್ತಸ್ರಾವ, ಗರ್ಭಕೋಶದ ಸೋಂಕಿಗೆ ತುತ್ತಾಗಿ ಪ್ರಾಣ ತೆತ್ತವರು ಹಲವರು. ಇಂದಿಗೂ ಸಹ ಹಲವು ತಾಯಂದಿರು ಮಗುವಿನ ಜನನದ ಸಮಯದಲ್ಲಿ ಹಲವಾರು ಕಾರಣಗಳಿಂದ ಆಸ್ಪತ್ರೆಗೆ ಹೋಗಲು ಸೌಕರ್ಯವಿಲ್ಲದೆ ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವುದುಂಟು.

ಕೆಲವು ಪ್ರದೇಶಗಳಲ್ಲಿ ಹೆರಿಗೆ ಮಾಡುವವರು ತರಬೇತಿ ಇಲ್ಲದ ನೆರೆಹೊರೆಯ ಹೆಂಗಸರು. ಮಗುವಿನ ಜನನದ ಸಮಯದಲ್ಲಿ ವಿಪರೀತ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿಯೇ ಪ್ರಾಣ ಕಳೆದುಕೊಳ್ಳುವರು. ಸರ್ಕಾರದಿಂದ ಎಷ್ಟೊಂದು ಹಣ ವಿನಿಯೋಗಿಸಿದರೂ ಸೂಕ್ತ ಸೌಕರ್ಯವಿಲ್ಲ. ಸೌಲಭ್ಯವಿದ್ದರೂ ಉಪಯೋಗಿಸಿಕೊಳ್ಳುವವರಿಲ್ಲ. ಆಸ್ಪತ್ರೆಯಿದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ಸೂಕ್ತ ಸೌಲಭ್ಯವಿಲ್ಲ. ಪುರುಷ ವೈದ್ಯರ ಹತ್ತಿರ ತೊಂದರೆ ಹೇಳಿಕೊಳ್ಳಲು ಮುಜುಗರ. ಅದರಲ್ಲೂ ಗರ್ಭಕೋಶ, ಸ್ತನಕ್ಕೆ ಸಂಬಂಧಿಸಿದ ತೊಂದರೆಗಳಾದರೆ ತನಗೆ ತಿಳಿದ ಅಥವಾ ನೆರೆಹೊರೆಯವರು ತಿಳಿಸಿದ ನಾಟಿ ಚಿಕಿತ್ಸೆಗಳನ್ನು ಪ್ರಯತ್ನಿಸಿ ತೊಂದರೆಗೀಡಾಗುವುದು ಸರ್ವೇಸಾಮಾನ್ಯ.

ತಾಯಂದಿರ ಮರಣಕ್ಕೆ ವಿವಿಧ ಕಾರಣಗಳು

ವೈದ್ಯಕೀಯ ಕಾರಣಗಳು: ಹೆರಿಗೆಗೆ ಮುನ್ನ, ಹೆರಿಗೆ ನಂತರದ ರಕ್ತಸ್ರಾವ, ಬಸಿರಿನ ನಂಜು, ಗರ್ಭಕೋಶದ ಸೋಂಕು, ಗರ್ಭಕೋಶ ಹರಿಯುವುದು, ಅಡ್ಡಿ ಉಂಟಾದ ಹೆರಿಗೆ, ತೀವ್ರತರ ರಕ್ತಹೀನತೆ, ದೇಹದ ವಿವಿಧ ಅಂಗಾಂಗಗಳ ತೊಂದರೆ. ಉದಾಹರಣೆಗೆ ಹೃದಯ, ಮೂತ್ರಪಿಂಡ, ಶ್ವಾಸಕೋಶಗಳ ಸೋಂಕು, ಧನುರ್ವಾಯ ಮುಂತಾದ ತೊಂದರೆಗಳು.

ಸಾಮಾಜಿಕ ಕಾರಣಗಳು:

ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮತ್ತು ಗರ್ಭಿಣಿಯಾಗುವುದು, ಮಕ್ಕಳ ಜನನದ ನಡುವೆ ಕಡಿಮೆ ಅಂತರ, ಬಡತನ, ಕುಡಿತದ ಹಾವಳಿಗೆ ಬಲಿಯಾದ ಗಂಡ, ಶುಚಿತ್ವ ಇಲ್ಲದ ಪರಿಸರ, ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳು, ತರಬೇತಿ ಇಲ್ಲದ ಮಹಿಳೆಯರಿಂದ ಹೆರಿಗೆ ಮಾಡಿಸಿಕೊಳ್ಳುವುದು. ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಸೇವೆ ನೀಡಲು ವಾಹನ ಸೌಕರ್ಯ ಸೌಲಭ್ಯಗಳ ಕೊರತೆ. ನೆರೆಹೊರೆಯವರ ಉದಾಸೀನ ಇತ್ಯಾದಿ. ಎಲ್ಲ ಕಷ್ಟಸುಖವನ್ನು ತಾಳಿ ಬಾಳಿಯೇನು ಅಂದರೆ ಮತ್ತೊಂದು ಕ್ರೂರ  ವಿಧಿಯಿಂದ ಹೆಣ್ಣನ್ನು ಕಾಡುವ ಗಂಡನ ಕುಡಿಯುವ ಚಟ, ದುಡಿಯುವ ಗಂಡಸು ನಾನು, ಏನಾದರೂ ಮಾಡಿಯೇನು ಎನ್ನುವ ಪ್ರವೃತ್ತಿ. ಕೊನೆಗೆ ಹಣವಿಲ್ಲದಿದ್ದರೆ ಮನೆಯಲ್ಲಿನ ವಸ್ತುಗಳನ್ನು ಮಾರಿಯಾದರೂ ಕುಡಿದೇನು ಎನ್ನುವ ಹಟ. ಕುಡಿಯಬೇಡ ಎಂದು ಹೇಳಲು ನೀನಾರು? ಹೆಚ್ಚು ಹೇಳಿದರೆ ಮೈ ಮುರಿಯುವಂತೆ ಒದೆತ. ನೆರೆಹೊರೆಯವರೊಂದಿಗೆ ಒಂದುಗೂಡಿ ತಿಳಿವಳಿಕೆ ಹೇಳಲು ಪ್ರಯತ್ನಿಸಿದರೆ ಸಂಶಯ, ಮಾನಗೆಟ್ಟವಳು ಎಂದು ಹೀನಾಯವಾಗಿ ಬೈಗುಳ. ಸ್ವಲ್ಪದಿನ ದೂರವಿದ್ದರೆ ಗಂಡನಿಗೆ ತಿಳಿವಳಿಕೆ ಬಂದೀತು ಎಂದು ಯೋಚಿಸುವುದಕ್ಕೆ ಮೊದಲು ವೇಶ್ಯೆಯ ಸಹವಾಸಕ್ಕೆ ಹೋಗಬಹುದೆಂದು ಹೆದರಿಕೆ. ತೌರುಮನೆಗೆ ಹೋದರೆ ಅಲ್ಲೂ ತಿರಸ್ಕಾರ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಮಾತು. ಅತ್ತಿಗೆ, ನಾದಿನಿಯರಿಂದ ಚುಚ್ಚು ಮಾತುಳು, ಸ್ತ್ರೀಯರಿಗೆ ಮಗ್ಗುಲ ಮುಳ್ಳಾಗುತ್ತವೆ.

ಹಿಂದೆ, ಇಂದು, ನಾಳೆ, ಸ್ತ್ರೀಯರ ಬಾಳು ಬರೀ ಕಣ್ಣೀರೆ? ಸ್ತ್ರೀಯರ ಬಾಳು ಹಸನಾಗಬೇಕಾದರೆ, ಮೊದಲು ಅವರಲ್ಲಿ ಆತ್ಮವಿಶ್ವಾಸ ಬೆಳೆಯಬೇಕು. ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು. ಇದಕ್ಕೆ ಸೂಕ್ತ ಮಾರ್ಗ ವಿದ್ಯಾವಂತರಾಗುವುದು. ಧೈರ್ಯ, ಸೂಕ್ತ ಮಾರ್ಗದರ್ಶನ, ಅಗತ್ಯ. ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಮಹಿಳೆಯರಲ್ಲಿ ಒಗ್ಗಟ್ಟು ಮೂಡಿಸಲು ಮಹಿಳಾ ಮಂಡಳಿ ಮುಖಾಂತರ ವೈದ್ಯರಿಂದ ಆರೋಗ್ಯ ಹಾಗೂ ಸಮಾಜಸೇವಾ ಕಾರ್ಯಕರ್ತರಿಂದ ಸೂಕ್ತ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಆರೋಗ್ಯದ ವಿಷಯದಲ್ಲಿ ಸಂಕಷ್ಟದಲ್ಲಿರುವವರನ್ನು ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಗುರುತಿಸಿ ಅವರಿಗೆ ಸೂಕ್ತ ಸೌಲಭ್ಯ ಏರ್ಪಡಿಸಲು ಪ್ರಯತ್ನಿಸುವುದು ಒಳ್ಳೆಯದು.

ವೈದ್ಯಸಾಹಿತಿಯಾಗಿನನ್ನಅನುಭವ
ತಾಯಂದಿರ ಮರಣಕ್ಕೆ ವಿವಿಧ ಕಾರಣಗಳು
ಡಾ| ಎಂ.ಎಸ್.ರಾಜಣ್ಣ

ವಿದ್ಯಾವಂತರೆಲ್ಲ ಬುದ್ಧಿವಂತರಲ್ಲ
ಬುದ್ಧಿವಂತರೆಲ್ಲ ವಿಚಾರವಂತರಲ್ಲ
ವಿಚಾರವಂತರೆಲ್ಲ ಆಚಾರವಂತರಲ್ಲ

ಆಕಾಶವಾಣಿ ಕಾರ್ಯಕ್ರಮಕ್ಕೆ ಒಂದು ಲೇಖನವನ್ನು ಸಿದ್ಧಪಡಿಸಿದೆ. ಅದನ್ನು ಒಬ್ಬರು ಪ್ರಾಧ್ಯಾಪಕ ಸ್ನೇಹಿತರ ಹತ್ತಿರ ತೋರಿಸಿ “ಈ ಲೇಖನ ಚೆನ್ನಾಗಿದೆಯೆ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಸಮಂಜಸವಾಗಿತ್ತು. “ನನಗೆ ತೋರಿಸುವುದಕ್ಕೆ ಬದಲಾಗಿ ಛೇಂಬರ್ ಹೊರಗೆ ಕುಳಿತಿರುವ ಅಟೆಂಡರ್ ಮುಂದೆ ಓದಿ. ಅವನಿಗೆ ಅರ್ಥವಾದರೆ ಸರಿ! ನಿಮ್ಮ ಆಕಾಶವಾಣಿ ಕಾರ್ಯಕ್ರಮ ಸರಿಯಾಗುತ್ತದೆ.” ಸ್ನೇಹಿತರು ಹೇಳಿದಂತೆ ಮಾಡಿದಾಗ ನನಗೇ ಗೊತ್ತಿಲ್ಲದಂತೆ ಎಷ್ಟೊಂದು ತಾಂತ್ರಿಕ ಪದಗಳನ್ನು ಬಳಲಿಸಿದ್ದೇನೆಂದು ಗೊತ್ತಾಯಿತು.

ಪ್ರತಿ ಮೊದಲ ಭಾನುವಾರ ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್‌ನ ಬೃಂದಾವನದ ಹತ್ತಿರ ಒಂದು ಜ್ಯೂನಿಯರ್ ಕಾಲೇಜಿನಲ್ಲಿ ಹೆಸರಾಂತ ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸಿ, ಉಚಿತ ಚಿಕಿತ್ಸೆ ಕೊಡುತ್ತಿದ್ದಾರೆ. ಶ್ರೀ ಸತ್ಯಸಾಯಿಬಾಬಾ ಶಿಕ್ಷಣ  ಸಂಸ್ಥೆ ಹಳೇ ವಿದ್ಯಾರ್ಥಿಗಳು ಸಂಘದ ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಬೆಳಗ್ಗೆ ೮-೩೦ ಸುಮಾರು ಒಂದು ಘಂಟೆ ಕಾಲ ಪ್ರಸ್ತುತ ಆರೋಗ್ಯ ಸಮಸ್ಯೆ ಬಗ್ಗೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ. ರೋಗಿಗಳ ಮುಂದೆ ನಿಂತು ಅವರೊಂದಿಗೆ ಮಾತನಾಡುತ್ತಿದ್ದೇನೋ ಎಂಬಂತೆ ಸರಳ ಕನ್ನಡ ಭಾಷೆಯಲ್ಲಿ ಆರೋಗ್ಯ ಶಿಕ್ಷಣ ನೀಡುತ್ತಿದ್ದೇನೆ. ಅನೇಕ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಿಸಿ ವಿವಿಧ ಹಳ್ಳಿಗಳಲ್ಲಿ, ಶಾಲೆಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಹೋಗದಿದ್ದರೆ ‘ಆ ಡಾಕ್ಟ್ರ ಬಂದಿಲ್ಲವೆ? ಎಂದು ವಿಚಾರಿಸುತ್ತಾರೆ. ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳಾದ ಡಯಾಬಿಟೀಸ್, ಚಿಕನ್‌ಗುನ್ಯ, ಕ್ಷಯರೋಗ, ಅಸ್ತಮಾ ಮುಂತಾದ ರೋಗಗಳ ಕಾರ್ಯಕ್ರಮ ಚಿತ್ರೀರಿಸಿದ ವೀಡಿಯೋ ಕ್ಯಾಸೆಟ್ ಲಭ್ಯವಿದೆ.

ಒಂದು ಹಳ್ಳಿಯಲ್ಲಿ ಜನ ಸಿಕ್ಕಸಿಕ್ಕಲ್ಲಿ ಮಲವಿಸರ್ಜನೆ ಮಾಡುತ್ತಿದ್ದಾರೆ. ಹಳ್ಳಿಯ ಶೇಕಡಾ ೫೦ರಷ್ಟು ತಾಯಿಯರು ಮಗುವಿಗೆ ಹುಟ್ಟಿದ ಮೂರು ದಿನಗಳು ಎದೆಹಾಲು ಕುಡಿಸುವುದಿಲ್ಲ. ಹರಳೆಣ್ಣೆ, ಸಕ್ಕರೆ ನೀರು ಇತ್ಯಾದಿ ಕುಡಿಸುತ್ತಾರೆ. ಒಂದು ಕೊಳಚೆ ಪ್ರದೇಶದಲ್ಲಿ ಶೇಕಡ ೮೦ರಷ್ಟು ಗಂಡಸರು, ಹೆಂಗಸರು ಮಕ್ಕಳು ಧೂಮಪಾನ ಮದ್ಯಪಾನ, ಮಾಡುತ್ತಿದ್ದಾರೆ. ಆರೋಗ್ಯ ಶಿಕ್ಷಣ ಕಾರ್ಯಕ್ರಮದಿಂದ (ಲೇಖನ, ಭಾಷಣ, ಪುಸ್ತಕ ಇತ್ಯಾದಿಗಳಿಂದ) ಎಷ್ಟರಮಟ್ಟಿಗೆ ಉದ್ದೇಶ ಫಲಕಾರಿಯಾಗಿ ಆರೋಗ್ಯಪಾಲನೆ ಕಂಡುಬಂತು ಎಂದು ಮಾಹಿತಿ ಸಂಗ್ರಹಿಸಬೇಕು.

ಕೇವಲ ನನ್ನ ಭಾಷಣ ಚೆನ್ನಾಗಿತ್ತು. ಲೇಖನ ಪುಸ್ತಕ ಪ್ರಕಟವಾಯಿತು ಎಂದು ಸಂತೋಷಪಡುವುದರಲ್ಲಿಯೇ ಮುಗಿಯುತ್ತದೆ. ಹಾಗೆ ಮುಗಿಯಬಾರದೆಂಬುದೇ ನನ್ನ ಮತ್ತು ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಸದಸ್ಯರ ಆಸೆ, ಅಭಿಲಾಶೆ.

* * *