ಭಾರತದಲ್ಲಿ ಪೂರ್ವದಿಂದಲೂ ಸಸ್ಯಜನ್ಯವಾದ ಗಿಡಮೂಲಿಕೆಗಳಿಂದ ರೋಗವನ್ನು ನಿವಾರಣೆ ಮಾಡುತ್ತಾ ಬಂದಿದ್ದಾರೆ. ಅಂತಹ ಸಸ್ಯಗಳಲ್ಲಿ ಸರ್ಪಗಂಧವೂ ಒಂದು. ಇದನ್ನು ಸಾಧಾರಣ ತಂಪು ಹವೆಯುಳ್ಳ. ಹೆಚ್ಚು ಮಳೆ ಬೀಳುವ ಹರಿದ್ವರ್ಣದ ಎಲ್ಲಾ ಕಾಡುಗಳಲ್ಲಿಯೂ ಗುಡ್ಡಗಾಡಿನಲ್ಲಿಯೂ ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡುಗು, ಹಾಗೂ ಪಶ್ಚಿಮ ಘಟ್ಟಗಳಲ್ಲಿಯೂ ಹೆಚ್ಚಾಗಿ ಕಾಣಬಹುದು. ಇದು ಮನೆಯ ಅಂಗಳದಲ್ಲೂ ಹಿತ್ತಲಿನಲ್ಲೂ ಯಾವ ಖಚಿಲ್ಲದೆ ಬೆಳೆಯುತ್ತದೆ. ಇದು ಸುಮಾರು ೨ ರಿಂದ ೩ ಅಡಿ ಎತ್ತರ ಬೆಳೆಯಬಹುದು. ಇದರ ಎಳೆ ೪ರಿಂದ ೬ ಅಂಗುಲ ಉದ್ದ ಸುಮಾರು ಒಂದೂವರೆಯಿಂದ ೨ ಅಂಗುಲ ಅಗಲವಿದ್ದು ಹಸಿರು ಹೊಳಪಿನಿಂದ ಇರುತ್ತದೆ. ಹೂಗಳು ಗೊಂಚಲು ಗೊಂಚಲಾಗಿ ಬಿಡುತ್ತಿದ್ದು  ಸುಮಾರು ಅರ್ಧ ಅಂಗುಲ ಉದ್ದವಿದ್ದು ಬಿಳಿಯ ಅಥವಾ ಗುಲಾಬಿ ವರ್ಣದಿಂದಿರುತ್ತವೆ. ಕಾಯಿಗಳು ನಾಟಿ ಬಟಾಣಿಯ ಗಾತ್ರದಲ್ಲಿದ್ದು ಪ್ರಾರಂಭದಲ್ಲಿ ಹಸಿರಾಗಿದ್ದು ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರ ಬೇರು ಸುಮಾರು ಒಂದೂವರೆ ಅಡಿ ಭೂಮಿಯೊಳಗೆ ಹೋಗುತ್ತದೆ. ಇದು ಬಹಳ ಕಹಿಯಾಗಿರುತ್ತದೆ. ಇದು ಅಪ್ರೋಸೈನೇಸಿ’ ಸಸ್ಯ ಕುಟುಂಬಕ್ಕೆ ಸೇರಿದ್ದು, ಇದರಲ್ಲಿ ಸಸ್ಯಶಾಸ್ತ್ರದ ಪ್ರಕಾರ ಐದು ಪ್ರಭೇದಗಳಿವೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ರಾವಲ್ಫಿಯ ಸರ್ಪೆಂಟನಾ ಮತ್ತು ರಾಲ್ಫಿಯ ಕೆನೆಸೆನ್ಸ್‌ಎಂಬ ಎರಡು ಮಾದರಿಗಳು ಕಂಡು ಬರುತ್ತವೆ. ಆದರೆ ಎರಡರ ಔಷಧೀಯ ಗುಣಗಳೂ ಒಂದೇ ಆಗಿರುತ್ತವೆ. ಇದಕ್ಕೆ ಹದಿನಾರನೇ ಶತಮಾನದ ಜರ್ಮನಿಯ ರಾವುಲ್ಫ್‌ಎಂಬ ವೈದ್ಯ ಹಾಗೂ ಸಸ್ಯ ಶಾಸ್ತ್ರಜ್ಞನ ಹೆಸರನ್ನು ಇಡಲಾಗಿದೆ. ಇದಕ್ಕೆ ಕನ್ನಡದಲ್ಲಿ ಸರ್ಪಗಂಧ ಗರುಡಪಾತಾಳ ಎಂಬ ಹೆಸರಿದೆ. ಹಿಂದಿಯಲ್ಲಿ  ಹುಚ್ಚರ ಔಷಧಿ ಎಂಬ ಸ್ವಾರಸ್ಯಕರ ಹೆಸರು ಇದಕ್ಕಿದೆ.

ಆಂಗ್ಲ ಭಾಷೆಯಲ್ಲಿ ಅದನ್ನು ‘ಸರ್ಪೆಂಟ್ ವುಡ್’ ಎನ್ನುತ್ತಾರೆ ಇದರ ಬೇರು ಸರ್ಪದ ಆಕಾರದಲ್ಲಿದ್ದು ಸರ್ಪದ ವಿಷ ಇಳಿಸುವುದರಿಂದ ಆಯುರ್ವೇದದ ಪ್ರಕಾರ ಇದನ್ನು ಸರ್ಪಗಂಧ ಎಂದು ಕರೆಯಲಾಗಿದೆ ನಮ್ಮ ಭಾರತದಲ್ಲಿ ಸುಮಾರು ೩೦೦೦ ವರ್ಷಗಳಿಂದಲೂ ಔಷಧ ರೂಪವಾಗಿಉಪಯೋಗಿಸುತ್ತಿದ್ದುದಾಗಿ ಚರಕ ಸಂಹಿತೆ ನಮೂದಿಸಿದೆ. ಒಳ್ಳೆಯ ಔಷಧ ಗುಣವನ್ನು ಹೊಂದಿದ್ದರೂ ಸಹಾ ೧೯೪೪ರವರೆಗೆಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿರಲಿಲ್ಲ. ಸೇನ್ ಮತ್ತು ಬೋಸ್ ಎಂಬುವರು ೧೯೩೧ರಲ್ಲಿ ಇದನ್ನು ಉಪಯೋಗಿಸಿ ರಕ್ತದ ಒತ್ತಡದ ಉಪಶಾಮಕ ಕಂಡು ಹಿಡಿದ ಮೇಲೆ ಪಾಶ್ಚಿಮಾತ್ಯ ದೇಶದವರು ಅದನ್ನು ಮೆಚ್ಚಿಕೊಂಡರು. ಇದು ಮಾನವನ ಅನೇಕ ಕಾಯಿಲೆಗಳಿಗೆ ಬಹಳ ಉತ್ತಮವಾದ ಒಂದು ಔಷಧ ಎಂದರೆ ಅತಿಶಯೋಕ್ತಿಯಲ್ಲ. ಈ ಬೇರಿನಲ್ಲಿ ೨೦ಕ್ಕೂ ಹೆಚ್ಚು ನಮೂನೆಯ ರಸಾಯನಿಕಗಳ ಕ್ಷಾರ (ಆಲ್ಕಲಾಯಿಡ್ಸ್‌) ಇರುವುದರಿಂದ ಅದು ಬೇರೆ ಬೇರೆ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ. ಪ್ರತಿಯೊಂದು ಕ್ಷಾರವೂ ತನ್ನದೇ ಆದ ಪರಿಣಾಮವನ್ನು ಉಂಟುಮಾಡುತ್ತದೆ. ರಕ್ತದ ಒತ್ತಡ ಕಡಿಮೆ ಮಾಡುತ್ತದೆ ಎಂದು ಸಾಮಾನ್ಯವಾಗಿ ಗೊತ್ತು. ಆದರೆ ಈ ಬೇರಿನಲ್ಲಿ ನಿದ್ದ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅದು ಅಪಸ್ಮಾರ, ರಕ್ತದ ಒತ್ತಡ, ಉನ್ಮಾದ, ಚಿತ್ತಭ್ರಮೆ, ಹಾಗೆಯೇ ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ. ಇದು ಕಹಿ ಗುಣವನ್ನು ಹೊಂದಿದ್ದು ಆಯುರ್ವೇದ ವೈದ್ಯಕೀಯ ದೃಷ್ಟಿಯಲ್ಲಿ ನಂಜು, ಕಜ್ಜಿತುರಿ, ಇಸಬು, ಸರ್ಪಸುತ್ತ ಮತ್ತು ಎಲ್ಲಾ ತರಹದ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದ ರೋಗಗಳ ಮೇಲೆ ಇದು ಅತ್ಯತ್ತಮ ಪರಿಣಾಮ ಬೀರುತ್ತದೆ. ಈ ಬೇರನ್ನು ಕಾಳಿನಷ್ಟು ಮಾತ್ರ ಹೊಟ್ಟೆಗೆ ಕೊಡಬೇಕಲ್ಲದೆ, ಸರ್ಪಸುತ್ತಿನ ಮೇಲೆ ಹಚ್ಚುವುದರಿಂದ ಕಾಯಿಲೆ ಯು ನಿವಾರಣೆಯಾಗುತ್ತದೆ. ಹೊಟ್ಟೆಗೆ ಕೊಡಬೇಕಾದರೆ ಆಹಾರದ ನಂತರವೇ ಕೊಡಬೇಕು. ಮಾನಸಿಕ ಮತ್ತು ನರಮಂಡಲ ರೋಗಗಳನ್ನು ನಿವಾರಿಸುವ ಶಕ್ತಿ ಈ ಔಷಧಕ್ಕಿದೆ. ಹಾವಿನ ಕಡಿತ ಹಾಗೂ ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತಕ್ಕೂ ಇದು ಕೊಡಬಹುದು. ಆದರೆ ಒಂದು ಎಚ್ಚರಿಕೆ. ಹಾವಿನ ಕಡಿತಕ್ಕೆ ಕೊಡುವಾಗ ಕಡಿಮೆ ರಕ್ತದೊತ್ತಡ ಇದ್ರು ಕೊಡಬಹುದು. ಆದರೆ ಒಂದು ಎಚ್ಚರಿಕೆ. ಹಾವಿನ ಕಡಿತಕ್ಕೆ ಕೊಡುವಾಗ ಕಡಿಮೆ ರಕ್ತದೊತ್ತಡ ಇದ್ದವರಿಗೆ ಇದನ್ನು ಕೊಡುವುದು ಸೂಕ್ತವಲ್ಲ. ಕರುಳು ರಿಸರ್‌ಪೈನ್ ಎಂಬ ಕ್ಷಾರವನ್ನು ಹೀರಿಕೊಂಡು ಬೇ ಪರಿಣಾಮ ಬೀರುವುದರಿಂದ ಕೆಲವು ಕರುಳು ರೋಗಗಳು ಮತ್ತು ಜ್ವರಗಳಲ್ಲಿ ಗುನ ಕಂಡುಬಂದಿದೆ. ಸರ್ಪಗಂಧವು ನಿರೋಧಕ, ನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆಂಟಿಬಯಾಟಿಕ್ ಮತ್ತು ಸ್ಟೀರಾಯಿಡ್ಸ್‌ಗಳಂತೆ ಸಹ ಕೆಲಸ ಮಾಡುತ್ತದೆ. ಆದರೆ ಇದು ಇತರೆ ಸ್ಟೀರಾಯಿಡ್ಸ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ. ಇದನ್ನು ಹೋಮಿಯೋಪತಿ ವೈದ್ಯಪದ್ಧತಿ ಪ್ರಕಾರ ಮದರ್ ಟಿಂಚರ್ ಮಾಡಿ ಬಳಸಿದಲ್ಲಿ ಶೀಘ್ರದಲ್ಲಿಯೇ ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ. ನಮ್ಮ ಗುರುಗಳಾದ ಕಾನಲ್ಲೇ ಕೃಷ್ಣಮೂರ್ತಿಯವರು ಈ ಸರ್ಪಗಂಧ ಮೂಲಿಕೆಯನ್ನು ಉಪಯೋಗಿಸಿ ಅನೇಕ ರೋಗಗಳನ್ನೂ ಸರ್ಪಗಳು ಕಡಿದ ನೂರಾರು ಜನರನ್ನೂ ಚಿಕಿತ್ಸೆ ಮಾಡಿ ಗುಣಪಡಿಸಿದ್ದಾರೆ. ಇಂತಹ ಅಮೂಲ್ಯವಾದ ಸಸ್ಯಗಳು ಇಂದಿನ ಸಂದರ್ಭದಲ್ಲಿ ಒಂದು ಕಡೆ ಮರೆತುಹೋಗುತ್ತಿದ್ದರೆ ಇನ್ನೊಂದು ಕಡೆ ನಶಿಸಿಹೋಗುತ್ತಿವೆ. ಇದಕ್ಕೆ ಮೂಲ ಕಾರಣ ಮಾನವ ಹಣದ ದುರಾಶೆಯಿಂದ ಕಾಡನ್ನುಹಾಳು ಮಾಡುವುದೇ ಆಗಿದೆ. ಅಲ್ಲಿ ನೈಸರ್ಗಿಕವಾಗಿ ಬೆಳೆಯುವ ಗಿಡಮೂಲಿಕೆಗಳು ನಾಶವಾಗುತ್ತಿವೆ. ಅದನ್ನು ತಡೆಯಬೇಕಾದ್ದು ತುರ್ತಿನ ಅಗತ್ಯ.

* * *