ಇದುವರೆವಿಗೂ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ನಡೆದ ವಿಚಾರ ಸಂಕಿರಣಗಳಲ್ಲಿ ಮಹಿಳೆಯರ ಕುರಿತಾದ ಭೇದಭಾವ ಮತ್ತು ಇತರೆ ಕ್ರೌರ್ಯಗಳು ವಿಶ್ದ ಎಲ್ಲ ಭಾಗಗಳಲ್ಲಿ ಹುಟ್ಟಿನಿಂದ ಹಿಡಿದು ಬದುಕಿನುದ್ದಕ್ಕೂ ಆಗುತ್ತಿರುವುದಕ್ಕೆ ಸಾಕ್ಷ್ಯಾಧಾರಗಳನ್ನು ತೋರಿದ್ದಾರೆ. ಸಂಯುಕ್ತ ರಾಷ್ಟ್ರಗಳ ವಕ್ತಾರರು ೧೯೯೮ರ ಮಾನವ ಹಕ್ಕುಳಗ ಪ್ರಕಟಣೆಯೊಂದರಲ್ಲಿ ಲಿಂಗ ಆಧಾರಿತ ಕ್ರೌರ್ಯವನ್ನು ಅಳಿಸಿದಾಗ ಮಾತ್ರ ಈ ಸಮಾಜದಲ್ಲಿ ಸಮಾನತೆ, ಅಭಿವೃದ್ಧಿ ಹಾಗೂ ಶಾಂತಿ ನೆಲೆಸಲಿಕ್ಕೆ ಸಾಧ್ಯ ಅನ್ನುವುದನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಬೇಕೆಂದು ಹೇಳಿದ್ದಾರೆ. ೧೯೯೬ರ ವಿಶ್ವ ಆರೋಗ್ಯ ಶಾಸನಸಭೆಯಲ್ಲಿ ಮಹಿಳೆಯರ ವಿರುದ್ಧದ ಕ್ರೌರ್ಯವನ್ನು ಸಮುದಾಯ ಆರೋಗ್ಯದ ಪಿಡುಗುಗಳಲ್ಲೊಂದು’ ಎಂಬುದಾಗಿ ದೃಢಪಡಿಸಲಾಗಿದೆ. ಸಾಂಕ್ರಾಮಿಕ ರೋಗವೆನ್ನುವಷ್ಟು ವ್ಯಾಪಕವಾಗಿರುವಂಥ ‘ಸಾಮಾಜಿಕ ಪಿಡುಗು’ ಹೆಣ್ಣು ಭ್ರೂಣಹತ್ಯೆ.

ಶಾಲೆಗೆ ಹೋಗುವುದಕ್ಕಿಂತ ಮುಂಚಿನ ಹೆಣ್ಣುಮಕ್ಕಳ ಪ್ರಮಾಣ ಕ್ಷೀಣಿಸುತ್ತಿರುವುದನ್ನು ಗಮನಿಸಿದರೆ ಇದು ‘ಸತ್ಯ’ ವೆಂದು ಗೊತ್ತಾಗುತ್ತದೆ. ‘ಲಿಂಗ’ದ ಆಯ್ಕೆಯನ್ನು ಪ್ರಕೃತಿಗೆ ಬಿಡಬೇಕೇ ಹೊರತು, ಇದು ಯಂತ್ರ ತಂತ್ರಗಳ ಮೂಲಕ ಕೃತಕವಾಗಿ ಆಗಬಾರದು. ‘ಅಲ್ಟ್ರಾಸೌಂಡ್’ ಮೂಲಕ ಭ್ರೂಣದ ಲಿಂಗವನ್ನು ಪತ್ತೆಹಚ್ಚಿ ಅದು ಹೆಣ್ಣಾಗಿದ್ದರೆ ಹತ್ಯೆ ಮಾಡುವುದು ಪಾಪಕೃತ್ಯವಷ್ಟೇ ಅಲ್ಲದೆ ಜೀವ ವಿರೋಧಿಯಾದಂಥ ವೈಜ್ಞಾನಿಕ ಬೆಳವಣಿಗೆಯಾಗಿದೆಯೆಂದು ನಾವಿಂದು ತಿಳಿಯಬೇಕಾಗಿದೆ.

ತಾಂತ್ರಿಕತೆಯ ಪರವಾದ; ಕೇವಲ ಲಾಭ ಕೇಂದ್ರೀಕೃತ, ಧನದಾಹೀ ಸಮಾಜ ಧೋರಣೆಗಳೇ ಇದಕ್ಕೆ ಮುಖ್ಯ ಕಾರಣ.

ಹೆಣ್ಣು ಭ್ರೂಣ ಹತ್ಯೆ ಕಣ್ಣು ಕುಕ್ಕುವಂತೆ ಎದ್ದು ಕಾಣುವ ಮಾನವ ಹಕ್ಕುಗಳ ಉಲ್ಲಂಘನೆ. ಇದು ಹೀಗೆಯೇ ಮುಂದುವರೆದಲ್ಲಿ ಮಹಿಳೆಯರ ಕೊರತೆಯಿಂದ ಬಳಲುವಂಥ ಯಾವುದೇ ಸಮಾಜ ಉಗ್ರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಂಬುದನ್ನು ನಾವು ನೆಪಿಡಬೇಕು.

ಹೆಣ್ಣುಮಗುವಿನ ವಿರುದ್ಧದ ವರ್ತನೆಯನ್ನು ಇಲ್ಲವಾಗಿಸುವುದಕ್ಕೆ ಮಹಿಳೆಯರು ತಮ್ಮ ಸ್ವ-ಮೌಲ್ಯವನ್ನು ಅರಿತುಕೊಳ್ಳಬೇಕು. ಕೆಲವರು ಹೆಣ್ಣಾಗಿ ಹುಟ್ಟುವುದೆಂದರೆ ವಿಕಲತೆಯೇನೋ Birth defect ಏನೋ ಎಂಬಂತೆ ಕೀಳರಿಮೆಯನ್ನು ಬೆಳೆಸಿ ಕೊಂಡಿರುತ್ತಾರೆ. ಇಂತಹ ಅಮಾನವೀಯ ಭಾವನೆ ಹತ್ತಿರ ಸುಳಿಯುವುದಕ್ಕೂ ಬಿಡಬಾರದು. ಹೆಣ್ಣು ಭ್ರೂಣಹತ್ಯೆಗೆ ಒಪ್ಪಿಕೊಳ್ಳುವುದೆಂದರೆ ನಿಮ್ಮ ಒಡಲಿನ ಜೀವವನ್ನು ನೀವೇ ಕೊಂದಂತೆ; ಸ್ವ-ಬಲಿಗೆ ಸಿದ್ಧರಾದಂತೆ.

ಮಹಿಳೆಯರು ತಮ್ಮನ್ನು ಎಂದಿಗೂ ದುರ್ಬಲರು ಅಂದುಕೊಳ್ಳಬಾರದು, ತಮ್ಮ ಬದುಕಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ತಮ್ಮದೇ ಆಗಿರುತ್ತದೆ. ಇಂಥ ಸಂದರ್ಭಗಳಲ್ಲಿ ಸ್ವಾಭಿಮಾನಿಯಾಗಿ, ಧೈರ್ಯವಾಗಿ ಎದುರಿಸುವುದು; ಮೃದುವಾಗಿ ನಡೆದುಕೊಂಡು, ಪ್ರೀತಿಯನ್ನು ಧಾರೆಯೆರೆದು ಸಮಾಜ ಪರಿವರ್ತನೆಗೆ ಪ್ರಯತ್ನಿಸುವುದು ಅಗತ್ಯ.

ಹಾಗೆಯೇ ಜನಪ್ರಿಯ ಸಂಸ್ಕೃತಿ ಮತ್ತು ಮಾಧ್ಯಮಗಳಲ್ಲಿ ಹೆಣ್ಣನ್ನು ವ್ಯಾಪಾರದ ದೃಷ್ಟಿಯಿಂದ ತೋರುವುದನ್ನು ವಿರೋಧಿಸಬೇಕಾಗಿದೆ, ನಾವು ಆಡುವ ಭಾಷೆಗೆ ‘ತಾಯ್ನುಡಿ’ಅನ್ನುತ್ತೇವೆ; ಬದುಕುವ ನಾಡಿಗೆ ‘ತಾಯ್ನಾಡು’ ಅನ್ನುತ್ತೇವೆ; ‘ತಾಯಿಯೇ ಮೊದಲ ಗುರು’ ಎಂದು ಗೌರವಿಸುತ್ತೇನೆ.

ಮಹಾಭಾರತದಲ್ಲಿ ಒಂದು ಮಾತಿದೆ. ‘ಹೆಣ್ಣಿನಲ್ಲಿ ಸೌಭಾಗ್ಯ ಹಾಗೂ ಸೊಬಗು ಸದಾ ನೆಲೆಗೊಂಡಿರುತ್ತವೆ’ ಎಂದು. ‘ಹೆಣ್ಣು ಮಗು ಕುಟುಂಬವೊಂದರ ಜೀವಾಳ’ ಎಂಬುದಾಗಿ ‘ಕುಮಾರ ಸಂಭವ’ ದಲ್ಲೂ ಹೇಳಲಾಗಿದೆ. ‘ಹೆಣ್ಣು ಮಕ್ಕಳಿಗಿಂತ ಪ್ರಿಯವಾದದ್ದಿಲ್ಲ’ವೆಂಬ ಅನುಭವ ವೃದ್ಧರಾಗುತ್ತಿರುವ ಬಹಳಷ್ಟು ಅಪ್ಪಂದಿರರಿಗೆ ಆಗಿರಲಿಕ್ಕೆ ಸಾಧ್ಯ; ಆದ್ದರಿಂದ ಈ ಬಗ್ಗೆ ಕಾಳಜಿಯುಳ್ಳಂಥ ಎಲ್ಲ ಜವಾಬ್ದಾರಿಯುತ ವ್ಯಕ್ತಿಗಳು, ಸಮಾಜ ಕಾರ್ಯಕರ್ತರು, ಸಂಘಟನೆಗಳು ಹಾಗೂ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ ಈ ಬರ್ಬರ ಕೃತ್ಯವನ್ನು ಖಂಡಿಸಿ, ಎಲ್ಲರನ್ನೂ ಅರಿವು ಮೂಡುವಂತಾಗಬೇಕು.

‘ಭ್ರೂಣದ ಲಿಂಗವನ್ನು ಬಹಿರಂಗಪಡಿಸುವುದು ಅಪರಾಧ, `It’s a criminal offence’ ಅಲ್ಟ್ರಾಸೌಂಡ್ ಕ್ಲಿನಿಕ್‌ಗಳನ್ನು ಯಾವುದೇ ಕಾರಣಕ್ಕೂ ‘ಲಿಂಗಪರೀಕ್ಷೆ ಮಾಡಲಾಗುವುದಿಲ್ಲ’ ಎನ್ನುವಂಥ ಫಲಕಗಳನ್ನು ಪ್ರದರ್ಶಿಸಬೇಕು ಹಾಗೂ ಯಾವುದೇ ಹಣ ಆಮಿಷಗಳಿಗೆ ಒಳಗಾಗಿ ಮಾಡಲೂ ಬಾರದು.

ತಾಯಂದಿರ ಭೇಟಿಗಳಲ್ಲಿ, ಮಕ್ಕಳ ಪ್ರದರ್ಶನಗಳಲ್ಲಿ, ಆರೋಗ್ಯ ಮೇಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ವಸ್ತುಪ್ರದರ್ಶನಗಳಲ್ಲಿ ಕೌಟುಂಬಿಕ ಜೀವನದ ಕುರಿತಾಗಿ ಸರಿಯಾದ ಮಾರ್ಗದರ್ಶನ ಮಾಡುವಂತಾಗಬೇಕು.

ಆರೋಗ್ಯವಂತ ಸಮಾಜ ಸೃಷ್ಟಿಗೆ ತುಕ್ಕುಹಿಡಿದ, ಹಳಸಿದ ಸಾಮಾಜಿಕ ಮೌಲ್ಯಗಳನ್ನು ಧಿಕ್ಕರಿಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ಕಾರ್ಯಮಗ್ನರಾಗುವುದು ನಮ್ಮೆಲ್ಲರ ಪ್ರಾಥಮಿಕ ಪಾತ್ರವಾಗಬೇಕು.

* * *

ವೈದ್ಯಸಾಹಿತಿಯಾಗಿನನ್ನಅನುಭವ
ವೈದ್ಯರೀಟೈಲರ್ ವೈದ್ಯ ಸಾಹಿತಿ ಹೋಲ್ಸೇಲರ್
– ಡಾ
| ಎಂ.ಬಿ. ರಾಮಮೂರ್ತಿಜೀವನ್ಮುಖಿಯಾಗಿ ಸಮಾಜಮುಖಿಯಾಗಿ ಉತ್ತಮ ಗುಣಮಟ್ಟದ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಅಸಂಖ್ಯ ಓದುಗ ಮಿತ್ರರೊಂದಿಗೆ ಕೆಲವಾದರೂ ಸೂಕ್ತ ಮಾರ್ಗೋಪಾಯಗಳನ್ನು ಹಂಚಿಕೊಳ್ಳುವ ಸದವಕಾಶ ವೈದ್ಯಸಾಹಿತಿಗೆ!

ವೈದ್ಯನೊಬ್ಬ Retailer ತರಹ; ಆದರೆ ವೈದ್ಯಸಾಹಿತಿ Wholesaler ತರಹ ಎಂದೇ ನನ್ನ ಭಾವನೆ. ದೀರ್ಘಾಯುಷಿಗಳಾಗಿ; ಆರೋಗ್ಯವಂತರಾಗಿರುವ ಸಮುದಾಯ ಕಟ್ಟುವ ಪ್ರಕ್ರಿಯೆಯಲ್ಲಿ ಸದಾ ಕ್ರಿಯಾಶೀಲವಾಗಿರುವುದೇ ವೈದ್ಯ ಸಾಹಿತ್ಯದ ಸಿದ್ಧಾಂತವೆಂದು ನಾನು ನಂಬಿದ್ದೇನೆ.

ವೈದ್ಯಕೀಯ ಕ್ಷೇತ್ರಕ್ಕೆ ಕಾಲಿರಿಸಿದಂದಿನಿಂದ ಇಂದಿನ ಈ ಕ್ಷಣದವರೆಗೂ ವಿಭಿನ್ನ ಪಾತ್ರಗಳ ಮೂಲಕ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಿದೆ; ಇದರಿಂದಾಗಿ ಬಹಳಷ್ಟು ಬಾರಿ ಸಾರ್ಥ್ಯಕ್ಯದ, ಧನ್ಯತೆಯ ಮತ್ತು ಕೃತಜ್ಞತೆಯ ಭಾವಪೂರಿತ ಕ್ಷಣಗಳನ್ನು ಅನುಭವಿಸುವುದೂ ಸಾಧ್ಯವಾಗಿದೆ.

ವೈದ್ಯವಿಜ್ಞಾಣದ ಹರಹು; ಆಳ-ವಿಸ್ತಾರಗಳು ಅಳತೆಗೆ ಮೀರಿದ ಸಾಗರದಂತಿದೆ ಎಂಬುದು ನನ್ನ ಅರಿವಿಗೆ ಬಂದಿದೆ. ನಿತ್ಯ ಅರಳುವ ವೈದ್ಯ ವಿಜ್ಞಾನದ ಆವಿಷ್ಕಾರಗಳು ಸದಾ ನನ್ನನ್ನು ಚಕಿತಗೊಳಿಸುತ್ತಿರುತ್ತವೆ; ಮೂಕ ವಿಸ್ಮಿತನನ್ನಾಗಿಸುತ್ತವೆ.

ಜನಾರೋಗ್ಯಕ್ಕಾಗಿ ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಂಡು ದುಡಿವ ತ್ಯಾಗಿಗಳು, ಮೇಧಾವಿಗಳು, ವಿಜ್ಞಾನಿಗಳು, ನಿಜ ಅರ್ಥದಲ್ಲಿ ಸಾರ್ಥಕರಾದವರ ಕುರಿತು ಅಪಾರ ಗೌರವ ಭಾವನೆ ಮೂಡಿದೆ. ನಮ್ಮ ಅರಿವಿಗೆ ಬಂದಿರುವುದು, ನಿಲುಕಿರುವುದು, ತೃಣಮಾತ್ರ; ಕಲಿಯುವುದು ಮಾಡಬೇಕಿರುವ ಕೆಲಸಗಳು, ಅನುಭವಿಸಬೇಕಾಗಿರುವ ಅನರ್ಘ್ಯ ಗಳಿಗೆಗಳು ಅಪಾರ, ಅಸಂಖ್ಯ ಅನ್ನಿಸಿದೆ.

ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದುದರಿಂದ ವೈದ್ಯಸಾಹಿತ್ಯದ ಮೂಲಕ ಬದುಕನ್ನು ನೋಡುವ ನನ್ನ ಕ್ರಮ ಮತ್ತು ಪರಿಭಾಷೆಯೇ ಬಲಾಗಿದೆ.

ಬದುಕಿನುದ್ದಕ್ಕೂ ಸಾಮುದಾಯಿಕ ಪ್ರಜ್ಞೆ ಮತ್ತು ಕರ್ತವ್ಯಗಳ ಪಟ್ಟಿಯೊಂದನ್ನು ಸದಾ ಇರಿಸಿಕೊಂಡ ವೈದ್ಯವಿದ್ಯಾರ್ಥಿಯಾಗಿಯೇ ಉಳಿಯಲು ನಿರ್ಧರಿಸಿದ್ದೇನೆ. ನಮ್ಮ ಕಾಲಘಟ್ಟದ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸೂಕ್ತವಾಗಿ ಸದಾ ಸ್ಪಮದಿಸುತ್ತಿರಬೇಕೆಂದ ಅದಮ್ಯ ಹಂಬಲಮೂಡಿದೆ.

ಆದರೆ Most of us are silent and not registering our protest against pathetic conditions of public health. why? ಎಂಬ ಕಟು ವಾಸ್ತವ ನನ್ನನ್ನು ಹಲವಾರು ಬಾರಿ ಕಂಗೆಡಿಸಿದೆ; ಕಾಡಿದೆ. ಆದರೂ ಸಮುದಾಯ ಆರೋಗ್ಯಕ್ಕಾಗಿ ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಮತ್ತೆ ಮತ್ತು ಪುಟಿಯುವ ಉತ್ಸಾಹ ನನ್ನಲ್ಲಿರಲೆಂಬ ಪ್ರಾರ್ಥನೆಯಿದೆ.

ಇಲ್ಲಿ ಕ್ಷಮೆ, ದಾಕ್ಷಿಣ್ಯ, ದಯೆ, ಕರುಣೆ, ಪ್ರೋತ್ಸಾಹ ಮತ್ತು ಪ್ರೀತಿಗಳೆಂಬ ಮಾನವೀಯ ಮೌಲ್ಯಗಳ ಮಹಾಪೂರವನ್ನೇ ಹರಿಸಿದ ಮಿತ್ರರು ದೊರಕಿದ್ದಾರೆ.

ಇದಕ್ಕೆ ಕಾರಣರಾದ ಎಲ್ಲರಿಗೆ; ಈ ಬದುಕಿಗೆ ನಾನು ಕೃತಜ್ಞ.

* * *