ಉಭಯ ಸಾಮಾನ್ಯವಾದ ಕಥೆ, ಸಂದೇಶ, ಪಾತ್ರನಿರೂಪಣೆಗಳನ್ನು ಅವಲೋಕಿಸಿದ ನಂತರ ಈಗ ಕೃಷ್ಣಪಾರಿಜಾತ ಮತ್ತು ಭಾಮಾ ಕಲಾಪಗಳಲ್ಲಿಯ ಭಿನ್ನತೆಗಳನ್ನು ವೈವಿಧ್ಯತೆಗಳನ್ನು ಅವಲೋಕಿಸೋಣ.

ನೃತ್ಯ : ಶ್ರೀಕೃಷ್ಣ ಪಾರಿಜಾತದಲ್ಲಿ ನೃತ್ಯ ನೆಪಕ್ಕೆ ಮಾತ್ರವಿದ್ದು ನೃತ್ಯದ ಅವಿಸ್ಕಾರವಾಗಲಿ ಭವ್ಯತೆಯಾಗಲಿ ಕಂಡುಬರುವುದಿಲ್ಲ. ಸ್ರೀ ಪಾತ್ರಗಳು ಹಾಡುತ್ತ ಸುತ್ತಹಾಕಿ ಕೈ, ಕಾಲು ಕೊಡುವುದನ್ನು ಬಿಟ್ಟು ಅಂಗ ಜಲನೆಯಾಗಲಿ, ಇತರ ನೃತ್ಯದ ಲಕ್ಷಣಗಳಾಗಲಿ ಇಲ್ಲಿ ಇಲ್ಲ. ಹೆಪ್ಪು ಮುರಿಯದ ಮೊಸರು, ಇತ್ಯಾದಿ ಜನಪ್ರಿಯ ಹಾಡುಗಳೊಂದಿಗೆ ಗೌಳಗಿತ್ತಿಯು ಬಾಗಿ ಸ್ವರವೇರಿಸಿ ಹಾಡುವುದನ್ನು ಆಗಾಗ್ಗೆ ಸತ್ಯಭಾಮೆ ಜಾನಪದ ರೀತಿಯಲ್ಲಿ ಕುಣಿಯುವ ಕೆಲವು ಭಂಗಿಗಳು ಮಾತ್ರ ಕಂಡುಬರುತ್ತವೆ.

ಭಾಮಾಕಲಾಪದಲ್ಲಿ ನೃತ್ಯದ ವೈವಿಧ್ಯತೆಯನ್ನೇ ಹಾಸುಹೊಕ್ಕಾಗೆ ಪಡೆದ ಆಟ, ಕೃಷ್ಣನು ಕುಣಿದರೂ ಭಾಮೆಯು ನೃತ್ಯವೇ ಪ್ರಧಾನ ಸ್ಥನವನ್ನು ಅಲಂಕರಿಸುತ್ತದೆ. ಭಾಮೆಯ ವಿರಹವನ್ನು ಹೊರಸೂಸುವ ಅಥವಾ ತನ್ನ ಸವತಿಯನ್ನು ನೆನೆದು, ತನ್ನ ಹಿಂದಿನ ವರ್ತನೆಯನ್ನು ಚಿತ್ರಿಸುವ ನೃತ್ಯಗಳು ಶಾಸ್ತ್ರೀಯವಾಗಿ ಅಭ್ಯಾಸ ಅರ್ಹವಾಗಿವೆ. ಭಾಮೆಯು ಕಾಗದ ಬರೆಯುವ ಪದ್ಯ ಅವಳ ಅಭಿನಯ ಅತ್ಯಂತ ನಯನ ಮನೋಹರ ಕರ್ಣಕ್ಕೆ ನಾದ ಹಬ್ಬ, ಹಾಸ್ಯಂ ಅಣಕ ಮಾಡಿದರೂ ಆತನ ಪ್ರತಿ ಕುಣಿತವೂ ಶಾಸ್ತ್ರೀಯ ಜಾಡಿನಲ್ಲೇ ಸಾಗುತ್ತದೆ.

ಸಂಗೀತ : ಕೃಷ್ಣ ಪಾರಿಜಾತದ ಸಂಗೀತದ ಬಗ್ಗೆ ಹೇಳುವುದಾದರೆ ಇಲ್ಲಿ ಭಾಗವತನು ಗುರುಮುಖದಿಂದ ಅಷ್ಟಿಷ್ಟು ಹಾಡುಗಳನ್ನು ಕಲಿತು ಹಾರ್ಮೋನಿಯಂದೊಂದಿಗೆ ಕೆಲವು ಬಾರಿ ಚಲನಚಿತ್ರ ಹಾಡುಗಳ ದಾಟಿಯಲ್ಲಿ ಹಾಡಿ ತೃಪ್ತಿಪಡುತ್ತಾನೆ. ಯಾವುದೇ ರೀತಿಯ ನಿಕರವಾದ ಸಂಪ್ರದಾಯವಾಗಲಿ ಗುರುಕುಲ ಅಭ್ಯಾಸವಾಗಲಿ ಕಂಡುಬಾರದ್ದರಿಂದ ಒಬ್ಬರಿಂದ ಎನ್ನೊಬ್ಬರಿಗೆ ಹಾಡು, ಗತ್ತು, ಬರುವಾಗ್ಗೆ ಅನೇಕ ಲೋಪಗಳುಂಟಾಗಿವೆ, ಉಂಟಾಗುತಾವೆ. ಕೆಲವು ಹಾಡುಗಳನ್ನು ಶಾಸ್ತ್ರೀಯವಾಗಿ ರಾಗವಾಗಿ ಗುರುತಿಸಿ ಇತ್ತೀಚೆಗೆ ಹಾಡುತ್ತಿದ್ದರೂ ಅವರನ್ನೇ ಕೇಳಿದರೆ “ಇಂಥ ಚಲನ ಚಿತ್ರದ ಈ ಹಾಡಿನ ದರ್ತಿ” ಎನ್ನುತ್ತಾರೆ. ಅನುಪಲ್ಲವಿಯಲ್ಲಿಯ ವಿಸ್ತಾರವಾಗಲಿ, ಭಾವರೂಪತಾಳಿ ಹೊರ ಬರಬೇಕಾದ ಸ್ವರಗಳ ಅನೇಕ ಸಂಯೋಜನೆಗಳು ಇಲ್ಲಿ ಇಲ್ಲದಾಗಿವೆ.

ಭಾಮಾಕಲಾಪದ ಕಲಾವಿದರು ಪ್ರಾಚೀನ ಸಂಪ್ರದಾಯದ ಗುರುಕುಲ ಅಭ್ಯಾಸವನ್ನು ಹೊಂದಿದವರಿದ್ದು ಸಂಗೀತದ ವಿವಿಧ ಭಾಗಗಳ ಪರಿಣತೆಯನ್ನು ಅಲ್ಲದಿದ್ದರೂ ಅದರ ಬಗ್ಗೆ ಸಾಕಷ್ಟು ವಿಷಯ ತಿಳಿದು ರೂಢಿಯಿಂದ ಹೊರಹೊಮ್ಮಿಸಲು ಸಮರ್ಥರಾಗಿದ್ದಾರೆ. ರಾಗ, ತಾನ, ಪಲ್ಲವಿಗಳಾಗಲಿ, ಅಲರಿಪು ಇತ್ಯಾದಿ ನೃತ್ಯಗಳನ್ನಾಗಲೀ ಇವರು ಹತ್ತಾರು ವರ್ಷಗಳ ಅಧ್ಯಯನದಿಂದ ಕಲಿತಿರುವುದು ಇವರಿಗೆ ಕಲಪ್ರದರ್ಶನಕ್ಕೆ ಅತ್ಯಂತ ಸಹಕಾರಿಯಾಗಿದೆ. ನೃತ್ಯ ಮತ್ತು ಸಂಗೀತದ ಶಾಸ್ತ್ರೀಯತೆಯನ್ನು ಬೇರೂಂದು ಅಧ್ಯಾಯದಲ್ಲಿ ಬಂದಿರುವುದರಿಂದ ಅದರ ಅಧ್ಯಯನ ಮತ್ತು ಈ ಎರಡೂ ಆಟಗಳನ್ನು ನೋಡಿದಲ್ಲಿ ಈ ಮಾತು ಮನದಟ್ಟಾಗುತ್ತವೆ.

ವೇಷಭೂಷಣಗಳು : ಕೃಷ್ಣ ಪಾರಿಜಾತದ ವೇಷಭೂಷಣಗಳು ಅತ್ಯಲ್ಪ. ಕೃಷ್ಣನೆ ಪಾತ್ರಧಾರಿ ಕೆಂಪು ರೇಶ್ಮೆ ಪಟಗಾ ಸುತ್ತಿ ಸಿರಿಪೇಚು ಚುಚ್ಚಿಕೊಂಡು ಧೋತರ ಮತ್ತು ಅಂಗಿಯನ್ನು ತೊಟ್ಟು ಎರಡೋ ಮೂರು ಹಾಗಗಳನ್ನು ಹಾಕಿಕೊಂಡಿರುತ್ತಾನೆ. ಕಿವಿಗಳಲ್ಲಿ ಕೈಗಳಲ್ಲಿ  ಯಾವ ವಿಧವಾದ ಆಭರಣಗಳಿಲ್ಲ, ನಾರದರು ಮಾಮೂಲಿ ನಾಟಕದಲ್ಲಿ ಕಂಡು ಬರುವಂತಹ ಜಟಾಜೂಟಧಾರಿ ಒಂದು ಕೈಯಲ್ಲಿ ಏಕದಾರಿ, ಇನ್ನೂಂದು ಕೈಯಲ್ಲಿ ಚಿಟಿಕೆಗಳು. ರುಕ್ಮಿಣಿ ಸತ್ಯಭಾಮೆಯರು ಸಾಧಾರಣ ಬಾಗಿ ಎರಡು ಮುರು ಬಾರಿ ರೇಶ್ಮೆ ಪೀತಾಂಬರಗಳನ್ನು ಬದಲಾಯಿಸಿ ಕೆಲವೂಂದು ಆಭರಣಗಳನ್ನು ಹಾಕಿಕೊಂಡಿರುತ್ತಾರೆ. ಜಡೆ ಮುಡಿಯಲ್ಲಿ ಹೇಳಿಕೊಳ್ಳುವಂತಹ ತಯಾರಿಕೆಯಿಲ್ಲ. ಆದರೆ ಸತ್ಯಭಾಮೆ, ರುಕ್ಮಿಣಿಯರು ಇಂದು ರಂಗದಲ್ಲ್ಲಿ ಹೆಚ್ಚಾಗಿ ಸ್ತ್ರೀಯರೇ ನಿರ್ವಹಿಸುವ ಪಾತ್ರಗಳು, ದೂತಿ, ಸಾಮಾನ್ಯ ಮಾನವ, ಕೈಯಲ್ಲಿ ತಾಳ ಬಟ್ಟಲು, ಹಾಡಿನೊಂದಿಗೆ ಕಟಿಯಲು, ಸಾಧಾರಣವಾಗಿ ದಿನನಿತ್ಯದ ಉಡುಪು ಹೊಂದಿರುತ್ತಾನೆ. ಗಣೇಶನು ಮುಖವಾಡ ಹೊತ್ತು ಯಾವ ಮುಖವರ್ಣಾಲಂಕಾರದ ಅವಶ್ಯಕತೆ ಇತನಿಗೆ ಇಲ್ಲ. ಎಲ್ಲ ಪಾತ್ರಗಳೂ, ದೂತಿಯನ್ನುಳಿದು ಉಳಿದವರು ಮುಖಕ್ಕೆ ಬಣ್ಣ ಹಾಕಿಕೊಳ್ಳುತ್ತಾರೆ.

ಭಾಮಾಕಲಾಪದಲ್ಲಿ, ನಾರದ ನಾಟಕದ ನಾರದನೇ; ವಿಶೇಷವೇನಿಲ್ಲ. ಆದರೆ, ಕೃಷ್ಣನು ದೊಡ್ಡಾಟಗಳಲ್ಲಿ ಕಂಡು ಬರುವಂತಹ ಎಲ್ಲಾ ಆಭರಣಗಳನ್ನೂ ಅಂದರೆ ಕೈಕಟ್ಟು, ಕಿರೀಟ, ಕೊಳಲು, ಸಿರಿಪೇಚು, ಕೊರಳಲ್ಲಿ ಹಾರಗಳು, ಕಾಲಲ್ಲಿ ಗೆಜ್ಜೆಗಳು ಇತ್ಯಾದಿಯಾಗಿ ಧರಿಸುತಾನೆ. ಭಾಮೆಯ ವೇಷಭೂಷಣ ಮಾತ್ರ ವೈಶಿಷ್ಟ್ಯತೆಯಿಂದ ಕೊಡಿದ್ದು ಜಡೆಯ ತಯಾರಿಕೆ ವಸ್ತ್ರವಿನ್ಯಾಸ, ಮುಖವರ್ಣಾಲಂಕಾರ ಇತ್ಯಾದಿಯಲ್ಲಿ ಕಲಾತ್ಮಕ ಮತ್ತು ದೀರ್ಘ ತಯಾರಿಕೆ ಕಂಡುಬರುತ್ತದೆ. ಜಡೆಯ ವರ್ಣನೆಯಲ್ಲಿ ಇಡೀ ಬ್ರಹ್ಮಾಂಡವೇ ಅಡಗಿರುವಂತೆ ಜಡೆಯನ್ನು ಸಿಂಗರಿಸುವುದನ್ನೇ ಬೇರೊಂದೆಡೆ ಹೇಳಿದುದಾಗಿದೆ. ಹಾಸ್ಯಂ ಕೂಡ, ಕೃಷ್ಣ ಪಾರಿಜಾತದ ಭಾಗವತನಾದರೂ ಈತನೂ ಬಣ್ಣ ಬಳೆದುಕೊಂಡು ಪಾತ್ರ ವಹಿಸುವವನಾಗಿದ್ದಾನೆ.

ಅಭಿನಯ : ಕೃಷ್ಣಪಾರಿಜಾತವನ್ನು ಹಾಡು, ಗದ್ಯಗಳಿಂದ ಕೂಡಿದ ಆಟವೆಂದರೆ ಭಾಮಾಕಲಾಪವನ್ನು ನೃತ್ಯ ಹಾಡುಗಳಿಂದ ಗೇಯವೆನ್ನಬಹುದು. ನೃತ್ಯ ಪ್ರಾಧಾನ್ಯ ತದ್ಯ ಕೇವಲ ಕೊಂಡಿಗಳಿದ್ದಂತೆ. ಕೃಷ್ಣಪಾರಿಜಾತದ ಕಲಾವಿದರು ಬಹುಶಃ ಅಭಿನಯವನ್ನು ಗುರುಮುಖಕ್ಕಿಂತ ಹೆಚ್ಚಾಗಿ ಪಾರಿಜಾತ ಆಟ ನೋಡಿಯೇ ಕಲಿತವರಾಗಿರುತ್ತಾರೆ. ಆದರೆ ಭಾಮಾಕಲಾಪದ ಕಲಾವಿದ ಅಭಿನಯವೆಂದರೇನು, ಎಂಬ ಅಂಶದಿಂದ ಪ್ರಾರಂಭಿಸಿ ಅದರ ಉದ್ದ ಅಗಲಗಳ ಶಾಸ್ತ್ರವನ್ನು ಗುರುಕುಲದಲ್ಲಿ ಓದಿರುತ್ತಾರೆ. ಅಭಿನಯಿಸಿರುತ್ತಾರೆ. ಕೃಷ್ಣ ಪಾರಿಜಾತದ ತಂಡಗಳಲ್ಲಿ ಆನುವಂಶಿಕವಾಗಿ ಪಾತ್ರಗಳನ್ನು ವಿರ್ವಹಿಸುವವರನ್ನು ನಾನು ಕಂಡಿಲ್ಲ. ನಮ್ಮಲ್ಲಿ ಈ ಪದ್ದತಿಯೇ ಇಲ್ಲ, ಆದರೆ ಭಾಮಾಕಲಾಪದ ಬಹಳಷ್ಟು ಕಲವಿದರು ತಮ್ಮ ತಂದೆ ಮಾಡಿದ ಪಾತ್ರವನ್ನೇ ಚಿಕ್ಕಂದಿನಿಂದ ಕಲಿತು ಪ್ರೌಢರಾದಾಗ್ಗೆ ತಾವು ನಿರ್ವಹಿಸುತ್ತಾರೆ. ಹೀಗಾಗಿ ಒಂದು ರೀತಿಯ ಸಂಪ್ರದಾಯವು ಹರಿಯುವುದು ಇಲ್ಲಿ ಕಂಡು ಬರುತ್ತದೆ.

ಇನ್ನು ಎರಡೂ ಆಟಗಳ ಹರವಿನಲ್ಲಿ ಕಂಡು ಬರುವ ಕೆಲವು ವೈವಿಧ್ಯತೆಗಳನ್ನು ಅವಲೋಕಿಸೋಣ.

ಪೂರ್ವ ರಂಗದಲ್ಲಿ ಗಣೇಶನ ಆಹ್ವಾನ, ಆತಾನ ಪೂಜೆ ಅತ್ಯಂತ ಸಂಕ್ಷಿಪ್ತವಾಗಿ ಮುಗಿಯುತ್ತದೆ. ಆದರೆ ಕೃಷ್ಣಪಾರಿಜಾತದಲ್ಲಿ ಗಣೇಶನು ತೃಪ್ತಿಹೊಂದಿ ಆನಂದದಿಂದ ನೃತ್ಯಮಾಡಿ ಭಾಗವತ ಮತ್ತು ಪ್ರೇಕ್ಷಕರನ್ನು ಹರಿಸುತ್ತಾನೆ. ಭಾಮಾಕಲಾಪದಲ್ಲಿ ಪೂರ್ವದ ಭಾಮಾಕಲಾಪದಲ್ಲಿ ಗೌಳಿಗಿತ್ತಿಯ ಪಾತ್ರ ಬಂದರೂ ಇಂದಿನ ಆಟಗಳಲ್ಲಿ ಇಲ್ಲ. ಆದರೆ ಕೃಷ್ಣಪಾರಿಜಾತದಲ್ಲಿ ಇದರ ಸವಿಸ್ತಾರ ದೃಶ್ಯವಿದೆ. ಕೃಷ್ಣ ಪಾರಿಜಾತದಲ್ಲಿ ರುಕ್ಮಿಣಿ ಸತ್ಯಭಾಮೆಯರು ತಮ್ಮ ಸವತಿ ಮತ್ಸರವನ್ನು ಹಾಡಿ, ಅಭಿನಯದ ಮೂಲಕ ನಟಿಕೆ ಮುರಿದೋ, ಅವಹೇಳನ ಮಾಡಿಯೋ ತೋರಿಸುತ್ತಾರೆ. ತಮ್ಮ ಪೂರ್ವದ ವೃತ್ತಂತವನ್ನು ಪರಸ್ಪರರು ಬಿಚ್ಚ ದೂತಿಯ ಮೂಲಕ ಹಿಂದಿನ ಕಥೆಗಳನ್ನು ಪ್ರೇಕ್ಷಕರಿಗೆ ಜ್ಞಾಪಿಸುತ್ತಾರೆ. ಆದರೆ ಭಾಮಾಕಲಾಪದಲ್ಲಿ ರುಕ್ಮಿಣಿಯ ಪಾತ್ರವೇ ಕಂಡು ಬರುವುದಿಲ್ಲ. ಹೀಗೆಂದ ಮಾತ್ರಕ್ಕೆ ಸವತಿ ಮತ್ಸರ ಹೊರಹೊಮ್ಮಿಲ್ಲವೆಂದಲ್ಲ. ಭಾಮೆಯು ಹಾಡಿ, ರುಕ್ಮಿಣಿಯೇ ಕೃಷ್ಣನು ಬಾರದಂತೆ ‘ ಮಾಟಮಾಡಿ ’ ಮದ್ದು ಹಾಕಿದ್ದಾಳೆ ಇದಕ್ಕೆ ಪ್ರತಿ ಮದ್ದು ಉಂಟಾ ಹಾಸ್ಯಂ ? ಎಂದು ಕೇಳುವ ಮಟ್ಟಕ್ಕೂ ಹೋಗಿದ್ದಾಳೆ.

ಕೃಷ್ಣಪಾರಿಜಾತದಲ್ಲಿ ಸತ್ಯಭಾಮೆಯು, ದೂತೆ ನನ್ನ ಸವತಿ ಹ್ಯಾಂಗ ಕಣ್ಣಿಗೆ ಕಣ್ಣು ಹಾರಸತಾಳ, ಹುಬ್ಬಿಗೆ ಹುಬ್ಬು ಹಾರಸತಾಳ, ನನ್ನ ನೋಡಿ ನಗತಾಳ ಹೇಗಿದೆ ನೋಡ ನನ್ನ ಸವತೀ ಗುಣ. ತಾನೇ ಪಟ್ಟದರಸಿ ಅಂತ ಕೃಷ್ಣ ಪರಮಾತ್ಮರನ್ನು ತನ್ನ ಅರಮನೆಯಲ್ಲಿ ಇಟಗೊಂಡು ಕೂತಾಳ ಎಂಡು ಆಪಾದಿಸಿದರೆ, ರುಕ್ಮಿಣಿಯು ‘ ತಾ ಸಣ್ಣಾಕಿ ಆಗಿ ಡೌಲಮಾಡತಾ ಬಂದಾಳ ಪರಮಾತ್ಮರನ್ನು ಕರಿಯಾಕss, ಸಮಂತಕ ಮಣಿ ಅಪವಾದ ಬರದಿದ್ದರೆ ಈ ಸತ್ಯಭಾನೆಯನ್ನು ಯಾರು ಲಗ್ನ ಆಗುತ್ತಿದರು. ಸತ್ಯಭಾಮೆಯು – ಅಯ್ಯಾ ಮೊದಲು ಅವಳನ್ನು ಒಬ್ಬರಿಗೆ ಕೊಟ್ಟಿತ್ತು ಶಿಶುಪಾಲಗ, ಒಳಗಿಂದೊಳಗ ಪತ್ರ ಬರೆದ ಪರಮಾತ್ಮರನ್ನ ಲಗ್ನ ಆಗ್ಯಳ, ಇರದಿದ್ದರ ಈ ನನ್ನ ಸರಿಸರಿ ಸವತೀನ ಯಾರ ಕೇಳತಿದ್ರ ನನ್ನ ತಾಯಿ; ಇತ್ಯಾದಿ.

ಭಾಮಾಕಲಾಪದಲ್ಲಿ ಭಾಮೆಯು ಮದ್ದು ಪ್ರತಿಮದ್ದಿನ ವಿಚಾರ ಹೇಳಿ; ರುಕ್ಮಿಣಿಯಂತವರು ಪ್ರಪಂಚದಲ್ಲಿ ಇದ್ದರೆ ನನೆಂತು ಬದುಕಲೀ ಎಂದು ಹತಾಶಳಾಗಿದ್ದಾಳೆ.

ಕೃಷ್ಣಪಾರಿಜಾತದಲ್ಲಿ ಭಗವಂತನು ಅಲ್ಲಲ್ಲಿ ಶ್ಲೋಕಗಳನ್ನು, ಸುಭಾಷಿತಗಳನ್ನು ಹೇಳಿ ತನ್ನ ಪಾಂಡಿತ್ಯ ಪ್ರದರ್ಶನ ಮಾಡಿದ್ದಾನೆ. ಬಹುಶಃ ಆಟದ ಕತೃ ಹೇಳಬೇಕಾದ ಜನನೀತಿಯನ್ನು ಪಾತ್ರಗಳಿಂದ ಹೇಳಿಸುವ ಸಂದರ್ಭದ ರಚನೆ ಕಷ್ಟಕರವಾಗಿ ದೂತಿಯ ಬಾಯಿಯಿಂದ ಹೇಳಿಸಿದರಾಯಿತು ಎಂದಿರಬಹುದು. ಅವೂ ಸಂಸ್ಕೃತ ಸುಭಾಷಿತಗಳು, ನಂತಾರ ತಾನೇ ಅವುಗಳ ಕನ್ನಡ ಗದ್ಯನುವಾದವನ್ನು ಪಾತ್ರಗಳಿಗೆ ಪ್ರೇಕ್ಷಕರಿಗೆ ತಿಳಿಸಿ ಹೇಳುತ್ತಾನೆ. ಭಾಮಾಕಲಾಪದಲ್ಲಿ ಹಾಸ್ಯಂ ಕೇವಲ ಸಾಮಾನ್ಯ ನಾಗರಿಕನ ಪ್ರತಿನಿಧಿಯಾಗಿದ್ದು, ಎಲ್ಲೂ ಪಾಂಡಿತ್ಯ ಪ್ರದರ್ಶನ ಮಾಡಿಲ್ಲ.

ಕೃಷ್ಣಪಾರಿಜಾತದಲ್ಲಿ ಕೃಷ್ಣನು ಪಾರಿಜಾತ ಮರವನ್ನು ಸ್ವರ್ಗದಿಂದ ತಂದು ಭಾಮೆಯ ಅರವನೆಗೆ ಬಂದು, ತನ್ನ ದಶಾವತಾರವ ವರ್ಣಿಸಿ, ಬೇಸತ್ತು ಜನಸಮೂಹದಲ್ಲಿ ಕುಳಿತು ಭಾಮೆಯು ತಪ್ಪಾಯಿತು ಎಂದು ಬೇಡಿಕೊಳ್ಳುವಲ್ಲಿಗೆ ಮಂಗಳವಾದರೆ, ಭಾಮಾಕಲಾಪುವು ಕೃಷ್ಣನು ಪಾರಿಜಾತ ವೃಕ್ಷವನ್ನು ತಂದು ಕೊಡುವ ಪ್ರತಿಜ್ಞೆಯನ್ನು ಮಾಡುವಲ್ಲಿಗೆ ಮಂಗಳವಾಗುತ್ತದೆ.

ಕೃಷ್ಣಪಾರಿಜಾತದ ದೂತಿ-ಅಂದಿನ ಜನಜೀವನದಲ್ಲಿ ಕಂಡುಬಂದ ಶಕುನ, ಮೂಢನಂಬಿಕೆ-ಇತ್ಯಾದಿಗಳನ್ನು ಪ್ರದರ್ಶಿಸಿಲ್ಲ. ಆದರೆ ಭಾಮಾಕಲಾಪದಲ್ಲಿ ಕಾಗದ ಬರೆಯಲು ಕುಳಿತುಕೊಳ್ಳಲು ಯಾವ ದಿಕ್ಕಿಗೆ ಮುಖ ಮಾಡಬೇಕು, ದಾರಿಯಲ್ಲಿಯ ಶಕುನ ಇತ್ಯಾದಿಗಳನ್ನು ಹೇಳಿದ್ದಾನೆ ಹಾಸ್ಯಂ. ಕೃಷ್ಣ ಪಾರಿಜಾತದ ಅತ್ಯಂತ ರಂಜನೀಯ ಪಾತ್ರ ಸೃಷ್ಟಿಯಾದ ಕೊರವಂಜಿಯು ಭಾಮಾಕಲಾಪದಲ್ಲಿ ಕಂಡುಬಂದಿಲ್ಲ. ಮೂಲದ ಆಟದ ಭಾಗದಲ್ಲಿ ಇದ್ದಿರಭುದಾದರೂ ಇಂದು ಪ್ರಚುರದಲ್ಲಿ ಇಲ್ಲ. ಬಹುಶಃ ಅಭಿಜಾತಕ ಜಾಡಿನಲ್ಲಿ ನಡೆದ ಇಂಥ ಆಟದಲ್ಲಿ ಕಡಿಮೆ ಜಾತಿಯ ಅಲೆಮಾರಿ ಪ್ರತೀಕವಾದ ಕೊರವಂಜಿಯ ಪಾತ್ರ ಬೇಡವೆಂದಿರಬಹುದು; ಭಾಮಾಕಲಾಪದ ಕತೃ ಎಲ್ಲಾ ಪ್ರಾದೇಶಿಕ ಭಾಷೆಯ ನೃತ್ಯಗಳಲ್ಲಿಯೂ ಕೊರವಂಜಿ ನೃತ್ಯ ನೋಡಲು ಮೊದಲಿನಿಂದಲೂ ಲಭ್ಯವಿದ್ದೂ ಈ ಪಾತ್ರವನ್ನು ಭಾಮಾಕಲಾಪದಲ್ಲಿ ಅಳವಡಿಸದಿರಲು ಮೇಲೆ ಹೇಳಿದ್ದಕ್ಕಿಂತ ಬೇರೂಂದು ಕಾರಣವಿರಲಾರದು. ಅಥವಾ ಕೊರವಂಜಿ ಪಾತ್ರದ ಔಚಿತ್ಯವನ್ನೇ ಸಿದ್ದೇಂದ್ರಯೋಗಿಗಳು ಪ್ರಶ್ನಿಸಿಕೊಂಡು ಕೊರವಂಜಿಯಂತಹ ಅಲೆಮಾಡಿ ಸ್ತ್ರೀ ಕಾಣಿಸಿಕೊಳ್ಳುವುದು ಅಸಂಗತವಾಗುತ್ತದೆ ಎಂದು ಎಣಿಸಿರಬಹುದು.

ಕೃಷ್ಣಪಾರಿಜಾತ ಗದ್ಯ, ಗ್ರಾಮಿಣ ಆಟ,
ಭಾಮಾಕಲಾಪ ನೃತ್ಯ ಅಭಿಜಾತ ಆಟ,