Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವೈ.ಎಂ.ಸಿ.ಎ.

ವೈ.ಎಂ.ಸಿ.ಎ. ಎಂದೇ ಖ್ಯಾತಿ ಪಡೆದಿರುವ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್‌ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜದ ದೀನದಲಿತರ, ಉಪೇಕ್ಷಿತರ, ಬೀದಿ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅಬ್ಬರ ಆಡಂಬರಗಳಿಲ್ಲದೆ ದುಡಿಯುತ್ತಿರುವ ವಿಶಿಷ್ಟ ಸೇವಾ ಸಂಸ್ಥೆ.
೧೮೪೪ರಲ್ಲಿ ಲಂಡನ್‌ನಲ್ಲಿ ಸರ್ ಜಾರ್ಜ್ ವಿಲಿಯಮ್ಸ್ ಮತ್ತು ಸಂಗಡಿಗರಿಂದ ಈ ಸಂಸ್ಥೆ ಸ್ಥಾಪಿತವಾಯಿತು. ಇಂದು ವಿಶ್ವದಾದ್ಯಂತ ೧೨೦ ರಾಷ್ಟ್ರಗಳಲ್ಲಿ ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿ, ಒಟ್ಟು ೩೨೦ ವೈ.ಎಂ.ಸಿ.ಎ. ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
ಕೆಳಸ್ತರದ ಗ್ರಾಮೀಣ ಮಕ್ಕಳ, ಬೀದಿ ಮಕ್ಕಳ, ಕೊಳಚೆ ಪ್ರದೇಶದ ಮಕ್ಕಳ, ಉಪೇಕ್ಷಿತರ, ಮಹಿಳೆಯರ ಕಲ್ಯಾಣಕ್ಕಾಗಿ ತನ್ನನ್ನು ಸದಾ ತೊಡಗಿಸಿಕೊಂಡಿರುವುದರ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆ ಬೆಳೆಸುವುದು, ಪರಿಸರ ರಕ್ಷಣೆ, ಪ್ರಾಣಿ ಹಿಂಸೆ ತಡೆ, ಬೀದಿ ಮಕ್ಕಳ ಪುನರ್ವಸತಿ, ವಯಸ್ಕರ ಶಿಕ್ಷಣ, ಆರೋಗ್ಯ ಹಾಗೂ ಕಾನೂನು ಸಲಹೆ ಹೀಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಏಳಿಗೆಗಾಗಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಸಂಸ್ಥೆಯಾಗಿದೆ.
ಅತ್ಯಂತ ಹಳೆಯ ಕ್ರೀಡಾ ಸಂಸ್ಥೆಯೆನ್ನಿಸಿಕೊಂಡಿರುವ ವೈ.ಎಂ.ಸಿ.ಎ. ಕಾರ್ಯನಿರ್ವಾಹಕ ತಂಡದ ಮೂಲಕ ಮಾದಕ ದ್ರವ್ಯಗಳ ಸೇವನೆ ಬಗ್ಗೆ ವಿಚಾರ ಸಂಕಿರಣ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ, ಪೋಷಕರ ಮಕ್ಕಳ ನಡುವಿನ ಸಂಭಾಷಣಾ ಶಿಬಿರ, ರಾಷ್ಟ್ರೀಯ ಸೈಕಲ್ ರಾಲಿ, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು, ವೃದ್ಧಾಶ್ರಮಗಳಿಗೆ ಭೇಟಿ ಮೊದಲಾದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸರ್ವಧರ್ಮ ಸಮನ್ವಯವನ್ನು ಮುಖ್ಯ ಧೈಯವಾಗಿರಿಸಿಕೊಂಡಿರುವ ಸಂಸ್ಥೆ ವೈ.ಎಂ.ಸಿ.ಎ.
ಯುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಭಾರತ – ಶ್ರೀಲಂಕಾ ನಡುವಿನ ಎಳೆಯರ ಕ್ರಿಕೆಟ್ ಪಂದ್ಯಗಳ ಮೂಲಕ ಖ್ಯಾತಿ ಪಡೆದಿರುವ ಈ ಸಂಸ್ಥೆ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ಅನೇಕ ಸಾಂಸ್ಕೃತಿಕ ಶಿಬಿರಗಳನ್ನು ಏರ್ಪಡಿಸುತ್ತದೆ.
ಜನಾಂಗಗಳ ನಡುವೆ ಶಾಂತಿ, ದಯೆ, ಪ್ರೀತಿ, ಸ್ನೇಹ, ವಿಶ್ವಾಸ, ಕರುಣೆಯ ಸೇತುವೆಯನ್ನು ನಿರ್ಮಿಸುವ ಮೂಲಕ ಮನುಕುಲದ ಸೇವೆಯಲ್ಲಿ ಒಂದು ಶತಮಾನವನ್ನೇ ಕಳೆದಿರುವ ವೈ.ಎಂ.ಸಿ.ಎ. ನಾಡಿನ ಹೆಮ್ಮೆಯ ಸಂಸ್ಥೆ.