೨-೮-೧೯೨೧ರಲ್ಲಿ ಜನಿಸಿದ ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ಅಭಿರುಚಿಗಳನ್ನು ಬೆಳೆಸಿಕೊಂಡರು. ಚಿಕ್ಕಂದಿನಿಂದಲೂ ತಳೆದಿದ್ದ ಈ ಆಸಕ್ತಿ ಶ್ರೀಯುತರನ್ನು ವೃತ್ತಿಯಿಂದ ಚಿತ್ರಕಲಾಕಾರನನ್ನಾಗಿಯೂ, ಪ್ರವೃತ್ತಿಯಿಂದ ಸಂಗೀತಜ್ಞನನ್ನಾಗಿಯೂ ರೂಪಿಸಿತು.

ನಾಲ್ಕು ದಶಕಗಳು ಅಸಂಖ್ಯಾತ ಕಛೇರಿಗಳನ್ನು ಕೇಳಿ ಪ್ರಭಾವಿತರಾಗಿ ಹಿರಿಯ ವಿದ್ವಾಂಸರ ಸ್ನೇಹ ಒಡನಾಟ ಮಾರ್ಗದರ್ಶನಗಳನ್ನು ಗಳಿಸಿ ಶಾಸ್ತ್ರೀಯ ಚೌಕಟ್ಟಿನಲ್ಲಿ ನೂರಾರು ಕೃತಿಗಳನ್ನು ರಚಿಸಿದರು.

ಶೃಂಗೇರಿ ಜಗದ್ಗುರುಗಳ ಹಾಗೂ ಹಲವಾರು ಹಿರಿಯ ವಿದ್ವಾಂಸರ ಆಶಿಕ್ಷ ಸೌಹಾರ್ದಗಳಿಂದ ಇವರ ರಚನೆಗಳು ಜನಪ್ರಿಯವಾಗಿವೆ.

ಮಂಗಳಂಪಲ್ಲಿ ಬಾಲಮುರಳಿ ಕೃಷ್ಣರವರು ಇವರ ಏಳು ರಚನೆಗಳನ್ನು ‘ಶೃಂಗೇರಿ ಶಾರದೆ’ ಎಂಬ ಶೀರ್ಷಿಕೆಯ ಧ್ವನಿ ಸುರುಳಿಯಲ್ಲಿ ಹಾಡಿ ಪ್ರಸಿದ್ಧ ಪಡಿಸಿದ್ದಾರೆ. ಸಾಹಿತ್ಯ ವಿದ್ವಾಂಸರಿಂದ ಸಾಹಿತ್ಯದ ಪರಿಶೋಧನೆ ಮಾಡಿಸಿ ತಾವೇ ರಾಗ ತಾಳಗಳನ್ನೆಳವಡಿಸಿದ್ದಾರೆ. ಇವರ ಪ್ರತಿಭೆಗಾಗಿ ಅನೇಕ ಸಂಘ ಸಂಸ್ಥೆಗಳ ಸನ್ಮಾನಗಳು ದೊರಕಿವೆ. ಹಾಗೆಯೇ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯೂ ಸಹ ೧೯೯೪-೯೫ರ ಸಾಲಿನಲ್ಲಿ ‘ಕರ್ನಾಟಕ ಕಲಾ ತಿಲಕ’ ಬಿರುದನ್ನಿತ್ತು ಗೌರವಿಸಿದೆ.

ಶ್ರೀಯುತರು ಇಹದಿಂದ ಕಣ್ಮರೆಯಾದರೂ ಅವರು ಸಲ್ಲಿಸಿದ ಸೇವೆಯ ಕುರುಹುಗಳು ಶ್ರೀಮಂತವಾಗಿ ಉಳಿದಿವೆ.