ಪ್ರವೇಶ

ಏಕೀಕರಣೋತ್ತರ ಬಳ್ಳಾರಿ ಜಿಲ್ಲೆ ಏಕೀಕರಣಪೂರ್ವ ಬಳ್ಳಾರಿ ಜಿಲ್ಲೆಯ ಒಂದು ಭಾಗವಾಗಿತ್ತು. ಟಿಪ್ಪುವಿನ ಮರಣಾನಂತರ (೦೪.೦೫.೧೭೯೯) ಕನ್ನಡದ ಈ ಭಾಗವನ್ನು ಬ್ರಿಟೀಷ್‌ ಸರಕಾರ ಮದ್ರಾಸ್‌ ಪ್ರಾಂತ್ಯಕ್ಕೆ (೧೮೦೦) ಸೇರಿಸಿತು. ಆಂಧ್ರರಾಜ್ಯ ಸ್ಥಾಪನೆಯಾಗುವವರೆಗೂ ೦೧.೧೦.೧೯೫೩ ವಿಶಾಲ ಬಳ್ಳಾರಿ ಜಿಲ್ಲೆಯು ಮದ್ರಾಸ್‌ ಪ್ರಾಂತ್ಯದ ಒಂದು ಪ್ರಮುಖ ಆಡಳಿತ ವಿಭಾಗೀಯ ಪ್ರಾಂತ್ಯವಾಗಿ ಗಮನಸೆಳೆದಿತ್ತು. ಈ ಜಿಲ್ಲೆಯ ಮೊದಲ ಪ್ರಧಾನ ಜಿಲ್ಲಾಧಿಕಾರಿಯಾಗಿದ್ದ (Principal Collector) ಮೇಜರ್ (ಸರ್) ಥಾಮಸ್‌ ಮನ್ರೋ ಒಂದು ವಿಭಾಗೀಯ ಪ್ರಾಂತ್ಯವಾಗಿಸುವ ಕಾರಣದಿಂದ ಜಿಲ್ಲೆಯ ಆಡಳಿತವನ್ನು ಉಪವಿಭಾಗೀಕರಣಗೊಳಿಸಿದ. ಮುಂದೆ ವಿಲಿಯಂ ಥ್ಯಾಕರೆ, ಜೇಮ್ಸ್‌ಕೊಕೊರೆನ್‌ ಮೊದಲಾದವರ ಆಡಳಿತದಲ್ಲಿ ತಾಲೂಕುಗಳ ವಿಂಗಡಣೆ, ಜೋಡಣೆಗಳಿಂದ ಬಳ್ಳಾರಿ ಜಿಲ್ಲೆ, ಈ ಅವಧಿಯಲ್ಲಿ (೧೮೦೦ – ೧೯೫೩) ಒಂದು ಖಚಿತ ಮತ್ತು ನಿರ್ದಿಷ್ಟವಾದ ನಕ್ಷೆಯನ್ನೇ ಕಾಣಲಿಲ್ಲ! ಕುತೂಹಲವೆಂದರೆ ಕನ್ನಡಿಗರ ಈ ಜಿಲ್ಲೆ ‘ಆಂಧ್ರರಾಜ್ಯ’ ಎಂದು ಸ್ವತಂತ್ರ ಭಾರತದ ಮೊದಲ ಭಾಷಾಧಾರಿತ ರಾಜ್ಯವಾಗಿ ಘೋಷಣೇಯಾಗುವ ಸಂದರ್ಭದಲ್ಲಿ ಆ ರಾಜ್ಯದ ರಾಜಧಾನಿಯನ್ನಾಗಿ ಮಾಡುವ ಐಚ್ಛಿಕ ನಗರಗಳ ಮೊದಲ ಹೆಸರುಗಳಲ್ಲಿ ಬಳ್ಳಾರಿ ಹೆಸರು ಇದ್ದದ್ದು! ಕನ್ನಡಿಗರು ಪ್ರಧಾನವಾಗಿದ್ದ, ವಿಶಾಲ ಜಿಲ್ಲೆಯ ಕೇಂದ್ರವಾದ ಬಳ್ಳಾರಿಗೆ ಮದ್ರಾಸ್‌ ಪ್ರಾಂತ್ಯಾಡಳಿತವು ಯಾವುದೇ ರೀತಿಯ ಶೈಕ್ಷಣಿಕ, ಆಡಳಿತಾತ್ಮಕ ನಾಗರಿಕ ಸೌಕರ್ಯಗಳ ವ್ಯವಸ್ಥೆಯನ್ನು ನೀಡದೇ ನಿರಂತರವಾದ ಆತಂಕದಲ್ಲಿಟ್ಟಿದ್ದೂ ಅಲ್ಲದೇ, ಭಾಷೆಯ ಉದ್ವಿಗ್ನತೆಯನ್ನೂ ಇರಿಸಿತ್ತು. ಇದು ಭಾಷೆಯನ್ನು ಪ್ರಧಾನ ವಿದ್ಯಮಾನವಾಗಿಸಿಕೊಂಡು ೧೯೨೧ರಲ್ಲಿ ಮಹಾತ್ಮಗಾಂಧಿ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿದಾಗ ಸಮಸ್ಯೆ ಉಲ್ಬಣಗೊಂಡು ಬಹಿರಂಗವಾಗಿ ಪ್ರಕಟವೂ ಆಗಿತ್ತು.

ಕ್ರಮೇಣ ಬಳ್ಳಾರಿಯನ್ನು ಕನ್ನಡನಾಡಿಗೆ ಸೇರಿಸಿ ಕನ್ನಡಿಗರ ಹಿತರಕ್ಷಣೆ ಮಾಡಬೇಕೆಂಬ ಸಂಘಟನಾತ್ಮಕ ಹೋರಾಟಗಳು ಸ್ಥಳೀಯ ಸಂಘಟನೆಗಳಿಂದ ನಡೆದವು.

೧೯೨೧ರಲ್ಲಿ ಎನ್‌.ಸಿ. ಕೇಳ್ಕರ್ ತೀರ್ಪು, (೭ನೇ ಫೆಬ್ರವರಿ) ೧೯೫೩ರಲ್ಲಿ ನ್ಯಾಯಾಧೀಶ ಕೆ.ಎನ್‌. ವಾಂಛೂ ವರದಿ, (೧೫ನೇ ಮೇ) ೧೯೫೩ರಲ್ಲಿ ನ್ಯಾಯಾಧೀಶ ಎಲ್‌.ಎಸ್‌. ವಿಶ್ರಾವರದಿ, (ವಿಭಜಿತವಾಗಿದ್ದ ಬಳ್ಳಾರಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದ ಮೇಲೂ ಬಂದ) ೧೯೫೬ರ ಫಜಲ್‌ ಆಲಿ ಕಮಿಷನ್‌ ವರದಿಗಳು ಬಳ್ಳಾರಿಯ ಕನ್ನಡಿಗರಿಗೆ ಆತಂಕವನ್ನೊಡ್ಡಿದ್ದವು.

ಇಂಥ ಸಂದರ್ಭದಲ್ಲಿ ಸ್ಥಳೀಯ ಕನ್ನಡಪರ ಚಿಂತಕರು, ಹೋರಾಟಗಾರರು, ಸಂಘಟನೆಗಳು, ಸರಕಾರವನ್ನು ನ್ಯಾಯಕ್ಕಾಗಿ ನಿರಂತರವಾಗಿ ಒತ್ತಾಯಿಸುತ್ತಿದ್ದವು. ಹೀಗೆ ಒತ್ತಾಯಿಸುವಾಗ ಬಳಸಿದ ಮಾನದಂಡಗಳಲ್ಲಿ ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಒಂದಾಗಿತ್ತು. ಅಧ್ಯಕ್ಷತೆ ವಹಿಸಿದ್ದವರು ಬಳ್ಳಾರಿಯ ಸರ್ವದರ್ಶನ ತೀರ್ಥ ಪಂಡಿತ ವೈ. ನಾಗೇಶ ಶಾಸ್ತ್ರಿಗಳು. ಬಳ್ಳಾರಿಯಂಥ ದ್ವಿಭಾಷಾ ವಾತಾವರಣದ ಜಿಲ್ಲೆಯಲ್ಲಿ ಹುಟ್ಟಿ, ಶೈಕ್ಷಣಿಕ ಪ್ರತಿಕೂಲ ವಾತಾವರಣದಲ್ಲಿ ಬೆಳೆದು, ತಮ್ಮ ಬದುಕಿನ ಬಹುಕಾಲವನ್ನು ಅಲ್ಲಿಯೇ ಕಳೆದು ಸರ್ವದರ್ಶನತೀರ್ಥ, ಸಾಂಖ್ಯತೀರ್ಥಗಳಂಥ ವಿದ್ವತ್ಪದವಿಗಳನ್ನು ಸಂಪಾದಿಸಿ, ಕನ್ನಡದ ಎರಡು ಅರಸು ಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಸಂಸ್ಕೃತ ಸಾವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡ ಕಲಿಯುವವರಿಗೆ ಕಲಿಸುವವರಾಗಿ ಕಲಿತವರಿಗೆ ಸಂಘಟಕರಾಗಿ, ಸಂಘಟಕರಿಗೆ ಮಾರ್ಗದರ್ಶಕರಾಗಿ ತಮ್ಮ ನಲವತ್ತನೇ ವಯಸ್ಸಿನಲ್ಲಿಯೇ ಒಂದು ನಾಡಿನ ಸಂಸ್ಕೃತಿಯ ಪ್ರಮುಖ ವಿದ್ಯಮಾನವಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವನ್ನು ಪಡೆದಿದ್ದಾರೆಂದರೆ ಆ ಜಿಲ್ಲೆ ಯಾವ ರಾಜ್ಯದ ಪರವಾಗಿರಬೇಕು? ಎಂಬುದು ಬೇಡಿಕೆಯ ಮುಖ್ಯಧೋರಣೆಯಾಗಿತ್ತು. ವೈ. ನಾಗೇಶಶಾಸ್ತ್ರಿಗಳ ಸಮ್ಮೇಳನಾಧ್ಯಕ್ಷತೆಯ ಗೌರವು ಅದರಾಚೆಯ ಮಹತ್ವವನ್ನು ಪಡೆದಿತ್ತು.

ಬಳ್ಳಾರಿ – ತಮಿಳು ಮತ್ತು ತೆಲುಗು (ಮಾತೃ) ಭಾಷೆಯ ಆಡಳಿತ ಪ್ರದೇಶದ ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಮದ್ರಾಸ್‌ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಮದ್ರಾಸ್ ಪ್ರಾಂತ ದೇಶದ ದೊಡ್ಡ ಪ್ರಾವೆನ್ಸಿ ಎಂದು ಹೆಸರಾಗಿದ್ದರೆ, ಬಳ್ಳಾರಿ ಜಿಲ್ಲೆಯ, ಮದ್ರಾಸ್ ಪ್ರಾಂತದ ವಿಶಾಲ ಜಿಲ್ಲೆಯಿಂದು ಹೆಸರು ಪಡೆದಿತ್ತು. ಇದು ಏಕಿಕರಣಪೂರ್ವದಲ್ಲಿ ಹನ್ನೊಂದು ತಾಲೂಕುಗಳನ್ನೂ ಸ್ವಾತಂತ್ಯ್ರ ಪೂರ್ವದಲ್ಲಿ ಇಪ್ಪತ್ತು ತಾಲೂಕುಗಳನ್ನೊಳಗೊಂಡ ವಿಶಾಲ ಜಿಲ್ಲೆಯಾಗಿತ್ತು. ಹೀಗಾಗಿ ಸಹಜವಾಗಿ ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಈ ಜಿಲ್ಲೆಯನ್ನು ವಿಂಗಡಿಸಿ ವಿಭಜಿಸಲೇಬೇಕಾಗಿತ್ತು. ಎರಡು ರಾಜ್ಯಭಾಷೆಗಳ ಮಧ್ಯೆ ಬಳ್ಳಾರಿಯ ಕನ್ನಡವು ಶೈಕ್ಷಣಿಕವಾಗಿ ಭಾಗಶಃ ಅರಾಜಕವಾಗಿತ್ತು. ಇಂಥ ಗಡಿ ಜಿಲ್ಲೆಯು ಶಾಸ್ತ್ರಿಗಳ ಸಮ್ಮೇಳನಾಧ್ಯಕ್ಷತೆಯನ್ನು ಹೆಮ್ಮ ಪಟ್ಟುಕೊಂಡಿರುವುದರಲ್ಲಿ ಮತ್ತು ಶಾಸ್ತ್ರಿಗಳಂಥ ಸಾಹಿತಿಗಳು ಗಡಿಜಿಲ್ಲೆಯಲ್ಲಿ ಬಹುಮುಖಿ ಸಾಂಸ್ಕೃತಿಕ ವ್ಯಕ್ತಿತ್ವ ರೂಪಿಸಿಕೊಳ್ಳುವುದರಲ್ಲಿ ಇರುವ ಔಚಿತ್ಯ ಗಮನಾರ್ಹವಾದುದು. ವ್ಯಕ್ತಿಯೊಬ್ಬ ನಾಡಿನ ಭಾಷೆ, ಸಾಹಿತ್ಯಗಳೊಂದಿಗೆ ಏಕೀಕರಣ ಸಂದರ್ಭದಲ್ಲಿ ಅಭೀಜ್ಞಾ ಸೂತ್ರವಾಗಿ ಪರಿಗಣನೆಯಾಗಿರುವುದು ಒಂದು ಅಪರೂಪದ ದಾಖಲೆಯಾಗಿದೆ. (ಇದೇ ರೀತಿಯಾಗಿ ೧೯೪೦ ರಲ್ಲಿ ಧಾರವಾಡದಲ್ಲಿ ನಡೆದ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ‘ವ್ಯಾಕರಣತೀರ್ಥ’ ಚಂದ್ರಶೇಖರ ಶಾಸ್ತ್ರಿಗಳನ್ನು ಏಕೀಕರಣಶಾಸ್ತ್ರೀಗಳೆಂದೇ ಗುರುತಿಸುತ್ತಿದ್ದುದು ಕೇವಲ ಔಪಚಾರಿಕವಾದುದಲ್ಲ!) ಏಕೀಕರಣಪೂರ್ವದಲ್ಲಿಯೇ ಅಂಧರೆ ೧೯೫೧ರಲ್ಲಿ ಬೆಂಗಳೂರಿನ ವಿದ್ವಜ್ಜನ ಮಂಡಳಿ ಪಂಡಿತ ವೈ.ನಾಗೇಶ ಶಾಸ್ತ್ರಿಗಳಿಗೆ ‘ಇಪ್ಪತ್ತನೇ ಶತಮಾನದ ಮಹಾಕವಿ’ ಎಂದು ಮಾನಪತ್ರದ ಜೊತೆಗೆ ಮಾಡಿದ ಸನ್ಮಾನವೂ ಕೇವಲ ಔಪಚಾರಿಕ ಮತ್ತು ಅಲಂಕಾರಿಕವಾದುದಲ್ಲ!

ಭಾಗ ಒಂದು

ವೈ. (ಏಳುಬೆಂಚೆ) ನಾಗೇಶಶಾಸ್ತ್ರಿಗಳು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಏಳುಬೆಂಚೆ ಎಂಬ ಗ್ರಾಮದಲ್ಲಿ. ೧೮೯೩ರಲ್ಲಿ (ದಿನಾಂಕ ತಿಳಿದಿಲ್ಲ). ಜನ್ಮ ನಾಮ – ನಾಗಯ್ಯ ಪ್ರಾಥಮಿಕಪೂರ್ವ ವಿದ್ಯಾಭ್ಯಾಸವನ್ನು ಹುಟ್ಟಿದೂರಿನಲ್ಲಿಯೇ ಪೂರೈಸಿ, ಆನಂತರ ಬಳ್ಳಾರಿ, ಕಂಪ್ಲಿ, ಹೊಸಪೇಟೆ, ಕೊಪ್ಪಳಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯವನ್ನು ಸ್ವಾಪೇಕ್ಷೆಯಿಂದ ಅಭ್ಯಾಸ ಮಾಡಿದರು. ನಾಗೇಶಶಾಸ್ತ್ರಿಗಳ ವಿದ್ಯಾಭ್ಯಾಸದ ಕುತೂಹಲದ ಅಂಶವೆಂದರೆ, ತಮ್ಮ ಬದುಕಿನುದ್ದಕ್ಕೂ ಅವರು ಶಿಕ್ಷಕ, ಗುರು, ವಿದ್ವಾಂಸ, ಸಂಘಟಕನಾಗಿದ್ದರೂ ವಿದ್ಯಾರ್ಥಿಯಂತೆ ಅಭ್ಯಾಸ ಮಾಡುತ್ತಾ ಕೊನೆಯವರೆಗೂ ಲೇಖನಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದುದು. ಶಾಲೆಗಳಿಗೆ ಹೋಗಿ ಔಪಚಾರಿಕ ಶಿಕ್ಷಣ ಪಡೆಯದೇ ಶಾಲೆಗಳಿಗೆ ಶಿಕ್ಷಕರಾಗಿ, ಕಾಲೇಜುಗಳಿಗೆ ಅಧ್ಯಾಪಕರಾಗಿ, ಅರಸುಮನೆತನಗಳಿಗೆ ಆಸ್ಥಾನವಿದ್ವಾಂಸರಾಗಿ ಬೆಳೆದದ್ದು ಮಾತ್ರ ವೈ. ನಾಗೇಶಶಾಸ್ತ್ರಿಗಳ ಶೈಕ್ಷಣಿಕ ವ್ಯಕ್ತಿತ್ವಕ್ಕೆ ಮಹತ್ವವನ್ನು ತರುತ್ತದೆ.

ತಾವು ಹುಟ್ಟಿದ ಊರಿನಲ್ಲಿಯೇ ಅವರು ವಿದ್ಯಾರ್ಥಿಯಾಗಿಯೂ ಶಿಕ್ಷಕರಾಗಿಯೂ ಏಕಕಾಲದಲ್ಲಿ ಎರಡು ಜ್ಞಾನ ಕ್ಷೇತ್ರಗಳಲ್ಲಿ ಬೆಳೆದರು. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು, ಜಾತಿಯಿಂದ ಜಂಗಮರಾಗಿದ್ದ ಅವರು ಪಾರಂಪರಿಕವಾದ ಶಾಸ್ತ್ರೀಯಜ್ಞಾನದ ತಿಳುವಳಿಕೆ ಹೊಂದಿದ್ದು. ಎರಡು, ಆ ಕಾರಣದಿಂದ ಬಾಲ್ಯಾವಸ್ಥೆಯಲ್ಲಿಯೇ ಹುಡುಗ ತುಂಬಿ ಚುರುಕಾಗಿ ಅಕ್ಷರ ಜ್ಞಾನ ಹೊಂದಿದ್ದು.

ಜಾಣಹುಡುಗನಾಗಿದ್ದರಿಂದ ತನ್ನೂರಿನ ಕನ್ನಡ ಶಾಲೆಯಲ್ಲಿ ‘ಮೇಷ್ಟ್ರಾಗಿ’ ನಂತರ ಬಳ್ಳಾರಿಯ ವಾರ್ಡ್ಲಾ ಪ್ರೌಢಶಾಲೆಯಲ್ಲಿ ೧೯೧೪ರಲ್ಲಿ ಕನ್ನಡ ಸಂಸ್ಕೃತ ಭಾಷೆಯ ಬೋಧನೆಯ ಅಧ್ಯಾಪಕರಾದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಶಾಸ್ತ್ರಿಗಳು, ಕನ್ನಡದ ಬಗ್ಗೆ ಇದ್ದ ಪ್ರೇಮ ಮತ್ತು ಭಕ್ತಿಕಾರಣವಾಗಿ ಕನ್ನಡ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದುದಲ್ಲದೇ, ವಿಶಾಲ ಓದುಗಾರಿಕೆ ಮತ್ತು ವ್ಯಾಪಕ ವ್ಯಾಸಂಗಗಳಿಂದ ಬರವಣಿಗೆಗೂ ತೊಡಗಿಸಿಕೊಂಡರು. ತೆಲುಗು ಭಾಷಾ ತರಗತಿಗಳಿಂದಲೇ ತುಂಬಿದ್ದ ವಾರ್ಡ್ಲಾ ಪ್ರೌಢಶಾಲೆಯಲ್ಲಿ ಕನ್ನಡ ತರಗತಿಗಳನ್ನು ಪ್ರಥಮ ಬಾರಿಗೆ ತೆರೆಯಲು ಆಂಗ್ಲ ಭಾಷೆಯ ಮೇಲೆ ಪ್ರಧಾನ ಆಸಕ್ತಿಯಿರಿಸಿಕೊಂಡಿದ್ದ ಯುರೋಪಿಯನ್‌ ಮುಖ್ಯೋಪಾಧ್ಯಾಯರ ಮನ ಒಲಿಸಿದರು. ಇಲ್ಲಿ (ವಾರ್ಡ್ಲಾ ಪ್ರೌಢಶಾಲೆಯಲ್ಲಿ) ವೃತ್ತಿಯಲ್ಲಿದ್ದಾಗಲೇ ಮದ್ರಾಸ್‌ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿಶೇಷ ಆಸಕ್ತಿವಹಿಸಿ ಮಾಡಿದ ಸಮಾನಾಧಿಕಾರದ ಅಭ್ಯಾಸದಿಂದ ‘ಉಭಯ ಭಾಷಾ ವಿದ್ವಾನ್‌’ ಪರೀಕ್ಷೆ ಬರೆದು ಉತ್ತೀರ್ಣರಾದರು. ಔಪಚಾರಿಕ ವಾದ ಯಾವುದೇ ಶಿಕ್ಷಣವನ್ನು ಕಲಿಯದೇ ಜ್ಞಾನ – ತಿಳುವಳಿಕೆ ಮತ್ತು ಮನನ ಮಾಡುವ ಪರಿಣಾಮಕಾರಿ ಪಾಠಬೋಧನೆಯಿಂದ ವಾರ್ಡ್ಲಾ ಪ್ರೌಢಶಾಲೆಯಲ್ಲಿ ಶಿಕ್ಷಕವೃತ್ತಿಯನ್ನು ಆರಂಭಮಾಡಿದ್ದ ನಾಗೇಶಶಾಸ್ತ್ರಿಗಳು ಸ್ವಂತ ಆಸಕ್ತಿ ಮತ್ತು ಸ್ವಂತ ಬಲದಿಂದ ‘ಉಭಯ ಭಾಷಾ ವಿದ್ವಾನ್‌’ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದುದು ಅಂದು ವಿಶಾಲ ಬಳ್ಳಾರಿ ಜಿಲ್ಲೆಯಲ್ಲಿ ದೊಡ್ಡ ಸುದ್ದಿಯಾಗಿತ್ತು. ಕನ್ನಡ ನಾಡಿನ ಗಡಿ ಜಿಲ್ಲೆಯಾದ ಬಳ್ಳಾರಿಯಲ್ಲಿ ತೆಲುಗು – ತಮಿಳು ಭಾಷೆಯ ಪ್ರಾಧಾನ್ಯದ, ಬ್ರಿಟೀಶ್‌ ಆಡಳಿತದ ಸಂದಿಗ್ಧ ಸಂದರ್ಭದಲ್ಲಿ ಕನ್ನಡಿಗನೊಬ್ಬ ಮಾಡಿದ ಈ ಪರೀಕ್ಷೆ, ಉತ್ತೀರ್ಣತೆ ಕೇವಲ ಔಪಚಾರಿಕ ವಿದ್ಯಾಭ್ಯಾಸವಾಗಿದ್ದಿಲ್ಲ. ಅದೊಂದು ನಾಡಿನ ಹೆಮ್ಮೆಯ ಸಾಧನೆಯೆನಿಸಿತ್ತು! ಕನ್ನಡವನ್ನು ಸಂಸ್ಕೃತದೊಂದಿಗೆ ತುಲನಾತ್ಮಕ ಸಮಾನಾಧಿಕಾರದಲ್ಲಿ ಅಭ್ಯಾಸ – ಅಧ್ಯಯನ ಮಾಡಲು ತೆಗೆದುಕೊಂಡಿದ್ದ ಆಯ್ಕೆಯೇ ಒಂದು ಸಾಹಸದಾಯಕ ವಿಷಯವಾಗಿತ್ತು!. ನಾಗೇಶಶಾಸ್ತ್ರಿಗಳಂಥವರಿಂದ ಸ್ವಾಭಾವಿಕವಾದ ಆಸಕ್ತಿ – ಅಧ್ಯಯನದ ವಿಚಾರವಾಗಿದ್ದರಿಬಹುದಾದರೂ ಅದು ಅವರಿಗೆ ತಿಳಿಯದಂತೆ ದೊಡ್ಡ ಸಾಧನೆಯ ಸ್ವರೂಪವನ್ನು ಪಡೆದಿತ್ತು. ಅಲ್ಲದೇ ಇದರ ಮುಂದುವರಿಕೆಯೆಂಬಂಥೆ, ಕನ್ನಡ – ತೆಲುಗು – ಸಂಸ್ಕೃತ ಭಾಷೆಗಳಲ್ಲಿ ಪ್ರೌಢ ಹಿಡಿತ ಪಡೆದು ಇಂಗ್ಲಿಷ್‌, ಹಿಂದಿ, ಬಂಗಾಳಿ ಭಾಷೆಗಳನ್ನು ಸ್ವ ಇಚ್ಛೆಯಿಂಧ ಕಲಿತರು. ಕಲಕತ್ತಾಕ್ಕೆ ಹೋಗಿ ಸಂಸ್ಕೃತ ಅಸೋಸಿಯೇಷನ್‌ನಿಂದ ‘ಸಾಂಖ್ಯತೀರ್ಥ’, ‘ಸರ್ವದರ್ಶನ ತೀರ್ಥ ಸ್ನಾತಕೋತ್ತರ ಪದವಿಗಳನ್ನು (೧೯೨೫) ಪಡೆದರು. ಸರ್ವದರ್ಶನ ತೀರ್ಥ ಪದವಿಯನ್ನು ಪಡೆದ ಮೊದಲ ಕನ್ನಡಿಗನಷ್ಟೇ ಅಲ್ಲ; ಮೊದಲ ದಕ್ಷಿಣಭಾರತದ ವ್ಯಕ್ತಿ ಹಾಗೂ ಬ್ರಾಹ್ಮಣೇತರ ವ್ಯಕ್ತಿಯೆನಿಸಿದ್ದು ಆ ಕಾಲದ ಮಹತ್ವದ ವಿಷಯವಾಗಿತ್ತು. ವೈ. ನಾಗೇಶಶಾಸ್ತ್ರಿಗಳ ಈ ಮೂರು ಮುಖ್ಯ ಪದವಿಗಳು ಸ್ವ ಇಚ್ಛೆಯಿಂದಲೂ ಜ್ಞಾನಾಕಾಂಕ್ಷಿಯಾಗಿ ಪಡೆದವಗಳಾಗಿದ್ದವೇ ವಿನಾ ಪದವಿ ಸಂಪಾದನೆಯ ಆಕಾಂಕ್ಷೆಯಾಗಿ ಅಲ್ಲ. ವಿಶೇಷವೆಂದರೆ ಯಾವುದೇ ವೃತ್ತಿಪರವಾದ ನಿಲುವಿನಿಂದ ಈ ಪದವಿಯನ್ನು ಅವರು ಪಡೆಯಲಿಲ್ಲ.

ಮೂರು ಮುಖ್ಯ ಪದವಿಗಳು ಇಪ್ಪತ್ತನೇ ಶತಮಾನದ ಆರಂಭ ಕಾಲದ ಸಾಂಪ್ರದಾಯಿಕ ಶಿಕ್ಷಣ ಕ್ಷೇತ್ರದ ಮಹತ್ವದ ಪದವಿಗಳು. ಇವುಗಳನ್ನು ಪಡೆದ ಸಿದ್ಧ ವಿದ್ವಾಂಸರಾಗಿದ್ದ ನಾಗೇಶಶಾಸ್ತ್ರಿಗಳು ಸಹಜವಾಗಿ ಕನ್ನಡ ನಾಡಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿಂದ ಆಹ್ವಾನಿತರಾದರು.

೧೯೧೬ರಲ್ಲಿ ಬೆಳಗಾವಿಯಲ್ಲಿ ಲಿಂಗಾಯತ ಮುಖಂಡರಿಂದ ಸ್ಥಾಪಿತವಾದ ಕರ್ಣಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಪದವಿ ಕಾಲೇಜ್‌ ‘ಲಿಂಗರಾಜ ಕಾಲೇಜ್‌’ಗೆ ೧೯೨೭ರಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಂಡರು. ೧೯೨೮ರಲ್ಲಿ ಆಂಧ್ರರಾಜ್ಯದ ಮದನ ಪಲ್ಲಿಯ ಥಿಯೋಸಾಫಿಕಲ್‌ ಕಾಲೇಜಿನಲ್ಲಿ ಸಂಸ್ಕೃತ – ಕನ್ನಡ ಪ್ರಾಧ್ಯಾಪಕರಾಗಿ ನೇಮಕ ಆ ನಂತರ ಬಳ್ಳಾರಿಯಲ್ಲಿ ೧೯೪೫ರಲ್ಲಿ ಸ್ಥಾಪನೆಯಾದ ವೀರಶೈವ ವಿದ್ಯಾವರ್ಧಕ ಸಂಘದ ಮೊದಲ ಪದವಿ ಕಾಲೇಜ್‌ ವೀರಶೈವ ಕಾಲೇಜಿನಲ್ಲಿ ಮೊದಲ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ೧೯೫೫ರವರೆಗೆ ಸೇವೆಸಲ್ಲಿಸಿದರು.

ಮದ್ರಾಸ್‌ ಪ್ರಾಂತ್ಯದ ಪ್ರಮುಖ ಕನ್ನಡ ಘಟಕವಾಗಿದ್ದ ಬಳ್ಳಾರಿಕೇಂದ್ರಿತ ಸುತ್ತಮುತ್ತಲಿನ ಪ್ರಾಥಮಿಕ ಹಾಗೂ (ಕೆಲವು) ಪ್ರೌಢಶಾಲೆಗಳಲ್ಲಿ ಇಂಗ್ಲಿಷ್‌ ಜೊತೆ ತೆಲುಗನ್ನು ಕಡ್ಡಾಯವಾಗಿ ಕಲೆಯಬೇಕಾಗಿದ್ದ ಸಂದರ್ಭದಲ್ಲಿ, ಈ ದುಸ್ಥಿತಿಯಲ್ಲಿದ್ದ ಕನ್ನಡಕ್ಕೆ ಒಂದು ಸ್ಥಾನಿಕ ಪ್ರಾಧಾನ್ಯತೆ ತರಬೇಕೆಂದು ಶಾಸ್ತ್ರಿಗಳು ಮುಖ್ಯೋಪಧ್ಯಾಯರ ಮನವೊಲಿಸಿ ಕನ್ನಡ ತರಗತಿಗಳನ್ನು ತೆರೆಯಲು ಸೂಚಿಸಿದರು. ಇಂದು ಬಳ್ಳಾರಿ ಜಿಲ್ಲೆಯಲ್ಲಿ ಸೇರದ ಅಂದರೆ ಕನ್ನಡ ನಾಡಿನ ಕೈತಪ್ಪಿ ಹೋದ ಸುಮಾರು ೪ – ೫ ತಾಲೂಕುಗಳಲ್ಲಿದ್ದ ಶಾಲೆಗಳಲ್ಲಿಯೂ ಕನ್ನಡ ತರಗತಿಗಳನ್ನು ತೆರೆಯಲು ಯತ್ನಿಸಿ ಯಶಸ್ವಿಯಾಗಿದ್ದರು. ಇದು ಎಂಥ ಮಹತ್ವದ ಪಾತ್ರ ನಿರ್ವಹಿಸಿತೆಂದರೆ ೧೯೪೭ರಿಂದ ೧೯೫೩ರವರೆಗೆ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕೋ? ಆಂಧ್ರರಾಜ್ಯಕ್ಕೆ ಸೇರಿಸಬೇಕೋ? ಎಂಬ ಭಾಷಾವಾರು ಪ್ರಾಂಥ ರಚನೆಯ ಪ್ರಮುಖ ಆಯೋಗಗಳಿಗೆ ಒಂದು ಪ್ರಮುಖ ಮಾನದಂಡವಾಗಿ ಪರಿಣಮಿಸಿತ್ತು. ಇಷ್ಟಾಗಿಯೂ ಕೆಲವು ತಾಲೂಕುಗಳು ಕೈತಪ್ಪಿಹೋದವಾದರೂ ಕೆಲವು ತಾಲೂಕುಗಳ ಮುಖ್ಯ ಗ್ರಾಮಗಳು ಬಳ್ಳಾರಿ ಜಿಲ್ಲೆಗೆ ಅಂದರೆ ಕನ್ನಡ ನಾಡಿಗೆ ಸಂದವು ಎಂಬುದು ಮುಖ್ಯವಿಷಯ. ಶಾಸ್ತ್ರಿಗಳು ಮಾಡಿದ ಮತ್ತೊಂದು ಶ್ರಮದಾಯಕ ಹಾಗೂ ತಮ್ಮದಲ್ಲದ, ತಮ್ಮ ವೃತ್ತಿಯ ವ್ಯಾಪ್ತಿಗೆ ಬಾರದ ಆದರೆ ಅವಶ್ಯ ಕಾರ್ಯವಾಗಿ ಪರಿಣಮಿಸಿದ ಕಾರ್ಯವೆಂದರೆ, ಹಳ್ಳಿಹಳ್ಳಿಯ ಮನೆಮನೆಗಳಿಗೆ ಹೋಗಿ ‘ಕನ್ನಡ ಕಲಿಯಲು ಮಕ್ಕಳನ್ನು ಅಣಿಗೊಳಿಸಿರಿ’ ಎಂದು ಪೋಷಕರಿಗೆ ಸಲಹೆ ನೀಡಿದರು. (ದೂರದ ಮಂಗಳೂರು ಜಿಲ್ಲೆಯೂ ಸಹಾ ಮದ್ರಾಸ್‌ ಪ್ರಾಂತ್ಯಕ್ಕೆ ಸಂಬಂಧಿಸಿತ್ತಾದರೂ ಭಾಷೆಗೆ ಸಂಬಂಧಿಸಿದಂತೆ ಬಹುಶಃ ಇಂಥ ಸಮಸ್ಯೆ ಅಲ್ಲಿರಲಿಲ್ಲ)

ಕವಿಯೊಬ್ಬ ತನ್ನ ಸಾಹಿತ್ಯ ರಚನಾಗುಣವನ್ನು ಸಾರ್ವತ್ರಿಕಗೊಳಿಸುವ ಒಂದು ಪ್ರಮುಖ ಬಗೆಯನ್ನು ನಾಗೇಶಶಾಸ್ತ್ರಿಗಳಿಗೆ ಸಂಬಂಧಿಸಿದಂತೆ ಗಮನಿಸಬಹುದು. ಇದು ಕವಿಯ ಕವಿತ್ವಕ್ಕೆ, ಕಾವ್ಯಮಿಮಾಂಸಾತ್ಮಕ ಪರಿಧಿಯ ಆಚೆಯ ಮಹತ್ವದ ಗುಣವನ್ನು ಕೊಟ್ಟಿರುವುದನ್ನು ತೋರಿಸುತ್ತದೆ.

ಬಳ್ಳಾರಿಯ ವಾರ್ಡ್ಲಾ ಪ್ರೌಢಶಾಲೆಯಲ್ಲಿ ನಾಗೇಶಶಾಸ್ತ್ರಿಗಳಿಗೆ ವಿದ್ಯಾರ್ಥಿಯಾಗಿದ್ದ, ಸುಸಂಸ್ಕೃತ ಹಿನ್ನೆಲೆಯಲ್ಲಿಯೂ, ದಕ್ಷ ವಾತಾವರಣದಲ್ಲಿಯೂ, ಶಿಸ್ತುಬದ್ಧವಾದ ಬದುಕಿನ ವೈಖರಿಯಲ್ಲಿಯೂ ಹುಟ್ಟಿ – ಬೆಳೆದು ಬಂದಿದ್ದ ಪ್ರತಿಷ್ಠಿತ ಏಚರೆಡ್ಡಿ ಚೆಂಗಳಪ್ಪನವರ ಏಕೈಕ ಪುತ್ರ ಏಚರೆಡ್ಡಿ (ವೈ) ಮಹಾಬಲೇಶ್ವರಪ್ಪನವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದಿತ್ತು. ಅದಕ್ಕೆ ಮುಖ್ಯಕಾರಣವೆಂದರೆ ತಮ್ಮ ತಂದೆ ವೈ. ಚೆಂಗಳಪ್ಪನವರ ಅಕಾಲಿಕ ಮರಣ, ವ್ಯಾಪಾರವಹಿವಾಟಿನ ಜೊತೆಗೆ ಊರಿನಲ್ಲಿ ‘ಯಜಮಾನಿಕೆ’ಯನ್ನು ನಡೆಸುತ್ತಿದ್ದುದರಿಂದ ಕುಟುಂಬದ ಸಂಪೂರ್ಣ ಹೊಣೆಹೊರುವ ಕಾರಣಕ್ಕಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಗಿ ಬಂದುದು ಅನಿವಾರ್ಯವಾಗಿತ್ತು. ಆದರೆ ಇಲ್ಲಿ, ಅವರ ಬದುಕಿನ ಈ ಕಾಲಘಟ್ಟದ ಅವಧಿಯ ಮುಖ್ಯವಿಚಾರವೆಂದರೆ, ಅವರು ನಾಗೇಶಶಾಸ್ತ್ರಿಗಳಂಥವರ ಶಿಷ್ಯರಾಗಿದ್ದುದು. ಬಹುಶಃ ಐದಾರು ವರ್ಷಗಳ ಅವರ ಶಿಷ್ಯವೃತ್ತಿಯಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಬಹುಮುಖ್ಯ ಪ್ರಭಾವ – ಪರಿಣಾಮ – ಹತಾಶೆಗಳನ್ನು ವೈ. ಮಹಾಬಲೇಶ್ವರಪ್ಪ ಅನುಭವಿಸಿದರು.

ವಿಶಾಲ ಬಳ್ಳಾರಿ ಜಿಲ್ಲೆಯ ಏಕೀಕರಣ ಪೂರ್ವದಲ್ಲಿ ಮದ್ರಾಸ್‌ ಪ್ರಾಂತ್ಯದ ಪ್ರಮುಖ ಜಿಲ್ಲೆಯಾಗಿದ್ದಷ್ಟೇ ಅಲ್ಲ; ಪ್ರಭಾವೀ ವಿಭಾಗೀಯ ಪ್ರಾಂತ್ಯವೂ ಆಗಿತ್ತು. ತಮಿಳು ಆಡಳಿತ ಭಾಷೆಯ, ತೆಲುಗು ಮಾತೃಭಾಷೆಯ, ಕನ್ನಡ ಸ್ಥಳೀಯ ಭಾಷೆಯ ಭಾಷಿಕ ಹಂತದ ಪರಿಣಾಮಗಳನ್ನು ಅನುಭವಿಸುತ್ತಿದ್ದ ಪ್ರಾಂತ್ಯದಲ್ಲಿ ಬಳ್ಳಾರಿ ಜಿಲ್ಲೆಯು ಇತ್ತು. ಪಶ್ಚಿಮ ತಾಲೂಕುಗಳೂ ಸೇರಿದಂತೆ, ಹರಪನಹಳ್ಳಿಯಂಥ ಗಡಿ ತಾಲೂಕಿನಲ್ಲಿಯೂ ತೆಲುಗು ಪ್ರಧಾನ ಭಾಷೆಯಾಗಿ ಶಿಕ್ಷಣದಲ್ಲಿ ಮಾಧ್ಯಮವಾಗಿ ಇದ್ದುದು ಕನ್ನಡಿಗರಿಗೆ ಆತಂಕದ ಮತ್ತು ಮುಜುಗರದ ಸಂಗತಿಯಾಗಿತ್ತುಎ. ಸಾಮಾಜಿಕವಾಗಿ ಕನ್ನಡದಲ್ಲಿ ಬದುಕುತ್ತಿದ್ದು, ಶೈಕ್ಷಣಿಕವಾಗಿ ತೆಲುಗಿನಲ್ಲಿ ಬದುಕಬೇಕಾಗಿದ್ದ ದ್ವಿಭಾಷಿಕ ವಾತಾವರಣದಲ್ಲಿ ಕನ್ನಡಿಗರು ಸ್ವಾಭಿಮಾನವನ್ನು ತೋರಬೇಕಾಗಿದ್ದುದು ನಾಡಿನ ಅವಶ್ಯಕತೆಯಾಗಿತ್ತು.

ವಾರ್ಡ್ಲಾ ಪ್ರೌಢಶಾಲೆಯಲ್ಲಿ ವೈ. ಮಹಾಬಲೇಶ್ವರಪ್ಪನ ಒಟ್ಟು ಶಿಕ್ಷಣ ನಡೆದದ್ದು ತೆಲುಗು ಮಾಧ್ಯಮದಲ್ಲಿಯೇ. ಕ್ರೈಸ್ತ ಮಿಶನರಿ ಶಿಕ್ಷಣ ಸಂಸ್ಥೆಯಲ್ಲಿ ಪಕ್ಕದ ಮತ್ತೊಂದು ಭಾಷೆಯ ಮಾದ್ಯಮದಲ್ಲಿ ಶಿಕ್ಷಣ ಕಲಿಯುತ್ತಿದ್ದುದರ ಅರಿವೇ ಇಲ್ಲದೇ ವೈ. ಮಹಾಬಲೇಶ್ವರಪ್ಪ ತೆಲುಗಿನ ಪ್ರೀತಿ ಪ್ರೇಮದಲ್ಲಿಯೇ ಶೈಕ್ಷಣಿಕವಾಗಿ ಬದುಕುತ್ತಿದ್ದರು. ಇದು ಇವರಿಗಷ್ಟೇ ಅಲ್ಲ; ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆ ಕಾಲದ ವಿದ್ಯಾರ್ಥಿಗಳ ಸ್ಥಿತಿಯೇ ಹಾಗಿತ್ತು. ಇಂಥ ದ್ವಿಭಾಷಿಕ ಶೈಕ್ಷಣಿಕ ಸಂದರ್ಭದಲ್ಲಿ ‘ನಮ್ಮ ನೆಲದ ಭಾಷೆ’ಯಾದ ಕನ್ನಡವನ್ನು ಎತ್ತಿ ನಿಲ್ಲಿಸಿ, ಉಳಿಸುವ ಅರ್ಥಪೂರ್ಣವಾದ ಹೊಣೆಗಾರಿಕೆಯನ್ನು ವಿಶೇಷವಾಗಿ ನಾಗೇಶ ಶಾಸ್ತ್ರಿಗಳು ಹೊತ್ತುಕೊಂಡರು. ವಾರ್ಡ್ಲಾ ಶಾಲೆಯಲ್ಲಿ ಕನ್ನಡ ಭಾಷಾ ಭೋಧನೆಯ ಪಂಡಿತರಾಗಿ ನಾಗೇಶಶಾಸ್ತ್ರಿಗಳು ಕನ್ನಡ ಭಾಷೆಯನ್ನು ಕಲಿಯಲು ವಿದ್ಯಾರ್ಥಿಗಳನ್ನು, ಪೋಷಕರನ್ನು ಹುರಿದುಂಬಿಸುತ್ತಿದ್ದರು. ಬಳ್ಳಾರಿಯಲ್ಲಿ ತಮ್ಮ ಜೊತೆಗೆ ಮಂಗಾಪುರದ ಚನ್ನಬಸಯ್ಯನಂಥ ಕಿರಿಯ ಉತ್ಸಾಹಿ ಕನ್ನಡಾಭಿಮಾನಿಗಳನ್ನು ಹಳ್ಳಿಹಳ್ಳಿಗೆ, ಮನೆಮನೆಗೆ ಕರೆದುಕೊಂಡು ಹೋಗಿ ಬಳ್ಳಾರಿಯಲ್ಲಿದ್ದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯಭಾಷೆಯಾಗಿ ತೆಗೆದುಕೊಂಡು ಅಭ್ಯಾಸಮಾಡಲು ಪ್ರೋತ್ಸಾಹಿಸಿ ಯಶಸ್ವಿಯಾದರು. ಕ್ರಮೇಣ ಶಾಲೆಗಳಲ್ಲಿ ಕನ್ನಡ ಕಲಿಯಲು ಬರುವ ಮತ್ತು ಇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕನ್ನಡ ಶಿಕ್ಷಕರ ಅವಶ್ಯಕತೆ ಮತ್ತು ಕನ್ನಡ ತರಗತಿಗಳ ಹೆಚ್ಚುವರಿ ಸ್ಥಾಪನೆ – ಶೈಕ್ಷಣಿಕ ಅನಿವಾರ್ಯವಾಗಿ ಕಂಡುಬಂದಿತು. ಜಿಲ್ಲಾ ಬೋರ್ಡ್ ಇದರ ಕಾರ್ಯವನ್ನು ಪೂರೈಸಬೇಕಾಗಿತ್ತು. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ವೈ. ಮಹಾಬಲೇಶ್ವರಪ್ಪನನ್ನು ಸಾಂಸ್ಕೃತಿಕ ಆಸಕ್ತಿಯು ತೆಲುಗು ಭಾಷೆ ಮತ್ತು ಮಾಧ್ಯಮಗಳಿಂದ ಕನ್ನಡದ ಕಡೆಗೆ ಪರಿವರ್ತನೆಗೊಂಡಿತು. ವೈ. ಮಹಾಬಲೇಶ್ವರಪ್ಪನವರಂಥವರ ಮೇಲೆ ಉಂಟಾದ ಈ ಸಾಂಸ್ಕೃತಿಕ ಪರಿವರ್ತನೆಯ ದೊಡ್ಡ ಲಾಭವೆಂದರೆ ಮತ್ತು ಅದರ ಸಂಪೂರ್ಣ ಯಶಸ್ಸು ನಾಗೇಶಶಾಸ್ತ್ರಿಗಳಂಥವರಿಗೆ ಸಲ್ಲುತ್ತಿದೆ ಎಂಬ ಮುಖ್ಯ ಅಂಶವೆಂದರೆ ಬಳ್ಳಾರಿಯಂಥ ಗಡಿಜಿಲ್ಲೆಯು ಭಾಷಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಬಹುದೊಡ್ಡ ಉನ್ನತಿಯನ್ನು ಕಂಡಿದ್ದು.

ಕೌಟುಂಬಿಕ ವ್ಯತ್ಯಯದ ಕಾರಣವಾಗಿ ವೈ.ಮಹಾಬಲೇಶ್ವರಪ್ಪನವರು ವಿದ್ಯಾಭ್ಯಾಸವನ್ನು ಮೊಟುಕಗೊಳಿಸಿ ಸಾರ್ವತ್ರಿಕವಾಗಿ ತೊಡಗಿಸಿಕೊಳ್ಳಲು ಒಂದು ಆನುಷಂಗಿಕ ಕಾರಣ. ಒದಗಿಬಂದಿತು. ಇವರ ಶಿಸ್ತುಬದ್ಧ ವ್ಯಕ್ತಿತ್ವದಿಂದ ತಮ್ಮ ಉತ್ತರಾಧಿಕಾರಿಯೂ, ಶಿಷ್ಯನೂ ಆಗಬಹುದು ಎಂದು ಬಯಸಿದ್ದ ಬಳ್ಳಾರಿ ಜಿಲ್ಲಾ ಬೋರ್ಡ್‌ನ ಅಧ್ಯಕ್ಷರಾಗಿದ್ದ ಗೋಪಾಲ ಸ್ವಾಮಿ ಮೊದಲಿಯಾರರು ವೈ. ಮಹಾಬಲೇಶ್ವರಪ್ಪನವರನ್ನು ಸ್ಥಳೀಯ ರಾಜಕಾರಣಕ್ಕೆ ತಂದರು. ತಾಲೂಕು ಬೋರ್ಡ್ ಸದಸ್ಯರನ್ನಾಗಿಸಿದರು. ಬಳ್ಳಾರಿಯ ಜಿಲ್ಲಾ ಬೋರ್ಡ್ ಇತಿಹಾಸದಲ್ಲಿ ಅಘೋಷಿತ ಅಧ್ಯಕ್ಷರಂತೆ ಕಾರ್ಯನಿರ್ವಹಿಸಿದ್ದರೂ ಗೋಪಾಲಸ್ವಾಮಿ ಮೊದಲಿಯಾರರು ಕನ್ನಡ ಭಾಷಾಭಿವೃದ್ಧಿ, ಕನ್ನಡತನ, ಕನ್ನಡ ಶಿಕ್ಷಣಕ್ಕೆ ಸಂಬಂಧಿಸಿದಂತೆ ಏನೂ ಮಾಡದೇ ಇದ್ದುದು ವೈ. ಮಹಾಬಲೇಶ್ವರಪ್ಪನವರ ಗಮನಕ್ಕೆ ಬಂತು. ತಾಲೂಕು ಬೋರ್ಡ್ ಸದಸ್ಯನಾಗಿ ಆಯ್ಕೆಗೊಂಡನಂತರ ಬೋರ್ಡ್‌ನ ಮೊದಲ ಸಭೆಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪ ಮಾಡಿ ಅಧ್ಯಕ್ಷರ (ಗೋಪಾಲಸ್ವಾಮಿ ಮೊದಲಿಯಾರರ)ನ್ನು ಎದುರು ಹಾಕಿಕೊಂಡರು. ಬಹುಶಃ ಇಂಥ ಅಸಮಾಧಾನದ ಕಾರಣಗಳ ಸಂದರ್ಭದಲ್ಲಿ ಜಿಲ್ಲಾ ಬೋರ್ಡ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ತಮ್ಮ ರಾಜಕೀಯ ಗುರುಗಳಿಗೆ ಪ್ರತಿಸ್ಪರ್ಧಿಯಾಗಬೇಕಾಗಿ ಬಂದಿತು! ಇದರಲ್ಲಿ ಕನ್ನಡದ ವಿಷಯವಿರುವುದು ಇಲ್ಲಿ ಮುಖ್ಯವಾದ ಅಂಶ. ಇಂಥ ಕನ್ನಡದ ವಿಷಯವು ಮುಖ್ಯವಾಗುವುದಕ್ಕೆ ಅವರಿಗಿದ್ದ ಪ್ರಭಾವಿ ಹಿನ್ನೆಲೆಯೆಂದರೆ ನಾಗೇಶಶಾಸ್ತ್ರಿಗಳಂಥ ಕನ್ನಡ ಪ್ರೇಮಿ ವಿದ್ಯಾಗುರುಗಳ ತುಂಬು ಪ್ರಭಾವ. ಹೀಗಾಗಿ ೧೯೩೨ರಲ್ಲಿ (ಆಗ ವೈ. ಮಹಾಬಲೇಶ್ವರಪ್ಪನವರಿಗೆ ಇಪ್ಪತ್ತಾರು ವರ್ಷ ವಯಸ್ಸು) ಬಳ್ಳಾರಿ ಜಿಲ್ಲೆಯ ಜಿಲ್ಲಾ ಬೋರ್ಡ್‌ನ ಅಧ್ಯಾಕ್ಷರಾಗಿ ವೈ. ಮಹಾಬಲೇಶ್ವರಪ್ಪ ಅಧಿಕಾರವಹಿಸಿಕೊಂಡರು.

ಅಧಿಕಾರ ವಹಿಸಿಕೊಂಡದಿನದಿಂದ ನಾಗೇಶಶಾಸ್ತ್ರಿಗಳು ಶೈಕ್ಷಣಿಕ – ಧಾರ್ಮಿಕ – ಸಾಂಸ್ಕೃತಿಕ ಸಲಹೆಗಾರರಂತೆ ಇದ್ದರು; ಅಧ್ಯಕ್ಷರ ಮೊದಲ ಬಹುಮುಖ್ಯ ಯೋಜನೆ ಏನಾಗಿತ್ತೆಂದರೆ, ನಾಗೇಶಶಾಸ್ತ್ರಿಗಳ ಆಣತಿಯ ಮೇರೆಗೆ ಜಿಲ್ಲೆಯಾದ್ಯಂತ ಕನ್ನಡ ಶಾಲೆಗಳನ್ನು ಸ್ಥಾಪಿಸುವುದು. ಕನ್ನಡ ಶಾಲೆಗಳಿಗೆ ಕನ್ನಡ ವಿದ್ಯಾರ್ಥಿಗಳನ್ನು ಉದಾರವಾಗಿ ನೋಂದಾಣಿ ಮಾಡಿಸುವುದು. ಕನ್ನಡ ಶಾಲೆಗಳಿಗೆ ಕನ್ನಡ ಪಂಡಿತರನ್ನು ನೇಮಿಸುವುದು ಅವರ ಉನ್ನತ ಮಟ್ಟದ ಕನ್ನಡಾಭಿಮಾನ ಕನ್ನಡದ ಅಸ್ತಿತ್ವಕ್ಕೆ ಎಂಥ ಅಸ್ತಿಭಾರವನ್ನು ಹಾಕಿತೆಂದರೆ, ೧೯೪೭ರ ನಂತರ ಮುಖ್ಯವಾಗಿ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಕನ್ನಡನಾಡಿನಲ್ಲಿ ಉಳಿಸಬೇಕೋ? ಆಂಧ್ರ ರಾಜ್ಯದಲ್ಲಿ ಸೇರಿಸಬೇಕೋ? ಎಂಬ ಗೊಂದಲ ದ್ವಂದ್ವಗಳ ಸಂದರ್ಭದಲ್ಲಿ ೧೯೩೨ರ ನಂತರದಲ್ಲಿ ಬಳ್ಳಾರಿ ಜಿಲ್ಲೆಯ ತುಂಬಾ ಇದ್ದ ಸುಮಾರು ಒಂದು ನೂರೈವತ್ತಕ್ಕೂ ಹೆಚ್ಚಿನ ಸಂಖ್ಯೆಯ ಕನ್ನಡ ಶಾಲೆಗಳು ಮೂರು ಮುಖ್ಯ ಆಯೋಗಗಳ ಪರಿಶೀಲನೆಯ ಸಂದರ್ಭದಲ್ಲಿ ಕನ್ನಡಪರವಾದ ಮಾನದಂಡಗಳಾಗಿ ಪರಿಗಣಿಸಲ್ಪಟ್ಟವು. ಅಷ್ಟೇ ಅಲ್ಲ; ಇದು ಆಯೋಗಗಳ ವರದಿಯಲ್ಲಿ ಯಶಸ್ವಿ ಮಾನದಂಡಗಳಾಗಿಯೂ ಕಾರ್ಯನಿರ್ವಹಿಸಿದ್ದವು.

ಗುರು – ಶಿಷ್ಯರಿಬ್ಬರು (ವೈ.ನಾಗೇಶಶಾಸ್ತ್ರಿಗಳು ಮತ್ತು ವೈ. ಮಹಾಬಲೇಶ್ವರಪ್ಪನವರು) ತಮ್ಮ ಪ್ರಜ್ಞಾಪೂರ್ವಕ ಪ್ರಯೋಗದಿಂದ ಕನ್ನಡನಾಡಿಗೆ ಸಲ್ಲಿಸಿದ ಅನುಪಮ ಸೇವೆಯಿದು. ಈ ಕಾಲಘಟ್ಟದಲ್ಲಿ ಈರ್ವರನ್ನು ‘ವೈಯಮಳರು’ ಎಂದೇ ಕರೆಯಲಾಗುತ್ತಿತ್ತು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ನಾಗೇಶಶಾಸ್ತ್ರಿಗಳು ಕನ್ನಡ ಕವಿಗಳಾಗಿ, ಕನ್ನಡ ಪಂಡಿತರಾಗಿ ಕನ್ನಡನಾಡಿನ ‘ನಿಜವಾದ ಆಸ್ತಿ’ಯಾಗಿದ್ದು, ಕವಿ ಮತ್ತು ಶಿಕ್ಷಕ ನಾಡಿನಿಂದ ಪಡೆದುಕೊಂಡಂತೆಯೇ ನಾಡಿಗೆ ನೀಡುವ ಅಪರೂಪ ಕಾಣಿಕೆಯೂ ಇಲ್ಲಿ ಗಮನಸೆಳೆಯುತ್ತದೆ.

೧೯೩೦ರಿಂದ ಅಧಿಕೃತವೆಂಬಂತೆ ನಾಗೇಶಶಾಸ್ತ್ರಿಗಳು ಕನ್ನಡನಾಡಿಗೆ ತಮಗೆ ತಿಳಿಯದಂತೆ ಸಮರ್ಪಿಸಿಕೊಂಡರು. ನಾಗೇಶಶಾಸ್ತ್ರಿಗಳು ಕನ್ನಡದ ಕಡೆಗೆ ವಿದ್ಯಾರ್ಥಿಗಳನ್ನು, ಯುವಕರನ್ನು ಅಣಿಗೊಳಿಸುತ್ತಿದ್ದರೆ, ವೈ. ಮಹಾಬಲೇಶ್ವರಪ್ಪನವರು ಅವರಿಗಾಗಿ ಕನ್ನಡ ಶಾಲೆಗಳ ಸ್ಥಾಪನೆ, ಕನ್ನಡ ಶಿಕ್ಷಕರ ನೇಮಕಾತಿಗಳ ಮೂಲಕ ಕನ್ನಡಕ್ಕೆ ಒಂದು ನೆಲೆ ನೀಡುತ್ತಿದ್ದರು.

ಸಾಹಿತ್ಯಕ ಹಿನ್ನೆಲೆಗೆ ಪಾರಂಪರಿಕವಾದ ಜ್ಞಾನವೂ ಪ್ರಮುಖವಾದುದೇ ತಮ್ಮೂರು ಏಳು ಬೆಂಚೆಯಲ್ಲಿ ಬಾಲಕನಾಗಿದ್ದಾಗ, ಊರು ಮತ್ತು ಊರ ಸುತ್ತಲಿನ ಹಳ್ಳಿಗಳಲ್ಲಿ ಹವ್ಯಾಸದಿಂದ ಆಡುತ್ತಿದ್ದ ನಾಟಕ – ಬಯಲಾಟಗಳಿಗೆ ಎರಡೋ ಮೂರೋ ಪದ್ಯಗಳನ್ನು ಬರೆದುಕೊಡುವುದರ ಮೂಲಕ ಪ್ರಾರಂಭವಾದ ಸಾಹಿತ್ಯರಚನೆಯು ರಾಜಾಶ್ರಮವನ್ನು ಪಡೆದು ಸಂಸ್ಕೃತ ಕಾವ್ಯಗಳ ವಿಶಾಲ ಓದುಗಾರಿಕೆ ಮತ್ತು ಸಂಸ್ಕೃತ ಕಾವ್ಯಗಳ ಕನ್ನಡಾನುವಾದ ಮಾಡುವವರೆಗೂ ವಿಸ್ತಾರವಾಗಿದ್ದು ಮಾತ್ರ ಸಾಹಸದಾಯಕವಾದ ಅಚ್ಚರಿಯೇ! ಬಾಲಕನಾಗಿದ್ದಾಗ, ತಮ್ಮೂರಿನ ಸರಿವಯಸ್ಸಿನ ಬಾಲಕರಿಗೆ ಅಕ್ಷರಾಭ್ಯಾಸ ಮಾಡಿಸುವುದರಿಂದ ಪ್ರಾರಂಭವಾದ ಶಾಸ್ತ್ರಿಗಳ ಪಾಠ ಬೋಧನೆ ನಾಡಿನ ಪ್ರಮುಖ ಮಹಾವಿದ್ಯಾಲಯಗಳಲ್ಲಿ ಸಂಸ್ಕೃತ – ಕನ್ನಡ ಪ್ರಾಧ್ಯಾಪಕರಾಗುವವರೆಗೂ ಬೆಳೆಯಿತು. ತಮ್ಮೂರಿನ ‘ಸಾಲಿ’ಗಳಲ್ಲಿ ಕನ್ನಡದ ಬಗ್ಗೆ ತಿಳುವಳಿಕೆ ಮೂಡಿಸುವುದರಿಂದ ಪ್ರಾರಂಭವಾದ ಶಾಸ್ತ್ರಿಗಳ ಕನ್ನಡ ಪ್ರೇಮ – ಕನ್ನಡ ಭಕ್ತಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡುವವರೆಗೂ ಘನಗೊಂಡಿತು.

ಬಳ್ಳಾರಿಗೆ ಸಮೀಪದ ಏಳುಬೆಂಚೆಯಲ್ಲಿ ಇದ್ದ ಕೆಲವೇ ಜಂಗಮ ಕುಟುಂಬಗಳಲ್ಲಿ ಅತ್ಯಂತ ಬಡತನದ ಕುಟುಂಬದಲ್ಲಿ ನಾಗಯ್ಯ ಜನಿಸಿದ. ಈ ಕುಟುಂಬದ ಬಡತನ ಎಂಥ ಸ್ಥಿತಿಯಲ್ಲಿತ್ತೆಂದರೆ, ಜೋಳಿಗೆಯ ಮೇಲೆ ಅವಲಂಬಿಸಿತ್ತು! ನೀಲಮ್ಮ ಮತ್ತು ನಯನಯ್ಯ ಎಂಬ ದಂಪತಿಗಳಿಗೆ ಏಳನೆಯ ಮಗನಾಗಿ ಹುಟ್ಟಿದ ನಾಗಯ್ಯ (ಹುಟ್ಟಿದಾಗಿನ ಹೆಸರು ನಾಗಯ್ಯ)’ ಕುಟುಂಬದಲ್ಲಿಯೇ ದೀರ್ಘಾಯುಗಳು (ಜನನ – ೧೮೯೩, ಮರಣ – ೧೯೭೫).

ನಾಗಯ್ಯನು ತನ್ನ ಊರಿನ ‘ಏಕೋಪಾಧ್ಯಾಯ ಶಾಲೆ’ಯಲ್ಲಿ ಏನು ಕಲಿತನೋ ಏನು ಕಲಿಯಲಿಲ್ಲವೋ? ಆದರೆ, ತನ್ನ ಓರಿಗೆಯ ಹುಡುಗರೊಂದಿಗೆ ಸೇರಿಕೊಂಡು ನಾಟಕ, ಬಯಲಾಟ, ಭಜನೆಗಳಲ್ಲಿ ಕ್ರಿಯಾಶೀಲವಾಗಿ ಬೆರೆಯುತ್ತಿದ್ದ! ಕ್ರಮೇಣ ತನ್ನೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕೋಲಾಟ – ಬಯಲಾಟಗಳಿಗೆ ಪದಗಳನ್ನು ಕೂಡಿಸಿ ಪದ್ಯಗಳನ್ನು ಬರೆದುಕೊಡುತ್ತಿದ್ದ. ಆ ಕಾಲದಲ್ಲಿಯೇ ‘ಜನಖ್ಯಾತಿ ಪಡೆದಿದ್ದ ಈ ಜಂಗಮರ ಹುಡುಗ ‘ಕವಿ’ಯೆಂಬಂತೆ ಗಮನಸೆಳೆದಿದ್ದ. ತಮ್ಮೊಡನೆ ಇರುವ ಈ ಹುಡುಗ ಆಶುಸಾಹಿತ್ಯ ರಚನೆ ಹೇಗೆ ಸಾಧ್ಯವಾಗುತ್ತಿದೆ!? ಎಂಬುದು ಓರಿಗೆಯವರಿಗೆ ಸೋಜಿಗವಾಗುತ್ತಿತ್ತು. ಎರಡು – ಮೂರು ಪದ್ಯಗಳನ್ನು ಗತಿ ಮತ್ತು ಲಯಕ್ಕೆ ತಕ್ಕಂತೆ ಸಿದ್ಧಪಡಿಸುತ್ತಿದ್ದ, ಛಂದಸ್ಸಿಗೆ ತಕ್ಕಂತೆ ರಚಿಸುತ್ತಿದ್ದ ನಾಗಯ್ಯನ ಪ್ರತಿಭೆಯ ವಯಸ್ಸಿಗೆ ಮೀರಿದುದು! ಒಂದೊಂದು ಸಲ ನಾಗಯ್ಯ ಕಾಗದದ ಗೊಂಬೆಗಳನ್ನು ಬಟ್ಟೆಯ ಮೇಲೆ ಕುಣಿಸುವ ಆಟ ಎಲ್ಲರಿಗೂ ವಿನೋದ ಮಯವಾದ ಆನಂದವನ್ನುಂಟು ಮಾಡುತ್ತಿತ್ತು. ಇದು ಶೈಶವದಲ್ಲಿಯೇ ಸೃಜನಶೀಲವಾಗಿ ಚಿಂತಿಸುತ್ತಿದ್ದುದಕ್ಕೆ ಉತ್ತಮ ನಿದರ್ಶನವಾಗಿತ್ತು. ತನ್ನ ಚೂಟಿಮಗನಿಂದಾಗಿ ನೀಲಮ್ಮ ತನ್ನ ಮನೆಯ ಬಡತನವನ್ನು ಮರೆತಿದ್ದಳು! ಆರ್ಥಿಕ ಬಡತನದ ಕುಟುಂಬದಲ್ಲಿ ಪ್ರತಿಭೆಯ ಶ್ರೀಮಂತಿಕೆಯ ಮಗ ಹುಟ್ಟಿದ್ದು ಊರಿಗೇ ಊರು ಹೆಮ್ಮೆಪಟ್ಟಿತ್ತು. ಬಡಕುಟುಂಬದಲ್ಲಿ ಒಬ್ಬ ಮಗ ದಾಕ್ಷಿಣ್ಯಕ್ಕೂ ಒಳಗಾಗದೇ ಪಾರಂಪರಿಕವಾದ ಜಂಗಮದ ಜೋಳಿಗೆಯನ್ನು ನಂಬಿಕೊಂಡಿದ್ದರು. ತಂದೆ – ನಯನಯ್ಯನವರು. ಇಂಥ ಸ್ಥಿತಿಯಲ್ಲಿ ನಾಗಯ್ಯನ ಬದುಕು ರೂಪುಗೊಳ್ಳುತ್ತಿತ್ತು. ವಯಸ್ಸಿಗೆ ಮೀರಿದ ತಿಳುವಳಿಕೆ, ವಿದ್ಯೆನೂ ಮೀರಿದ ಜ್ಞಾನ ಇವುಗಳು ನಾಗಯ್ಯನಿಗೆ ಜಾಲಿಬೆಂಚಿಯಂಥ ಊರಿನಲ್ಲಿಯೇ ಲಭ್ಯವಾಗುತ್ತಿತ್ತು. ಅಥವಾ ನಾಗಯ್ಯ ಸಂಪಾದಿಸುತ್ತಿದ್ದ.

ನಯನಯ್ಯ – ನೀಲಮ್ಮ ದಂಪತಿಗಳಿಗೆ ವಯಸ್ಸಿಗೆ ಬಂದ ಹಿರಿಯಮಗ ದೊಡ್ಡ ನಾಗಯ್ಯನಿಗೆ ಮದುವೆ ಮಾಡಬೇಕಾಗಿತ್ತು. ಆದರೆ ಮನೆಯ ದುರ್ಬಲವಾದ ಆರ್ಥಿಕ ಮತ್ತು ಇತರ ಸ್ಥಿತಿಗಳು ಒಪ್ಪಿಗೆ ನೀಡಲಿಲ್ಲ ಊರವರ ಸಹಕಾರ ಪಡೆದು ಹಣಸಂಗ್ರಹಿಸಿ ತಮ್ಮ ಮಗನ ಮದುವೆ ಮಾಡಬೇಕು ಎಂದು ನಯನಯ್ಯ ನಿರ್ಧರಿಸಿದರಾದರೂ ನೀಲಮ್ಮನ ಅಭಿಮಾನ ಒಪ್ಪಲಿಲ್ಲ. ಆಗ ಹದಿಮೂರು ವರ್ಷಗಳ ವಯಸ್ಸಿನ ನಾಗಯ್ಯನು, ‘ನಾನು ದುಡಿದು ಅಣ್ಣನ ಮದುವೆ ಮಾಡುತ್ತೇನೆ’ ಎಂದು ನುಡಿದು ತಂದೆ – ತಾಯಿಯರನ್ನು ಚಕಿತಗೊಳಿಸಿದ. ಕಲಿಕೆಯಲ್ಲಿ ಗಳಿಕೆಯ ಯೋಜನೆಯನ್ನು ಮಾಡಿ ಹೊಣೆ ಹೊರುವ ಮನಸ್ಸು ಮಾಡಿದ್ದು ಒಂದರ್ಥದಲ್ಲಿ ನಾಗಯ್ಯನ ಸಂಪೂರ್ಣ ವ್ಯಕ್ತಿತ್ವದ ಮುನ್ಸೂಚನೆಯನ್ನು ತೋರಿಸುತ್ತಿತ್ತು. ವಯಸ್ಸಿಗೆ ಮೀರಿದ ಹೊಣೆಗಾರಿಕೆಯ ಮಾತನ್ನು ಕೇಳಿದ ಮಗನ ಭವಿಷ್ಯಕ್ಕೆ ಒಂದು ಹೊಳಪು ನೀಡಲು ಆಲೋಚಿಸಿದ ನೀಲಮ್ಮ ತನ್ನ ಗಂಡನೊಂದಿಗೆ ಸಮಾಲೋಚಿಸಿ ಜಾಲಿಬೆಂಚಿಯಲ್ಲಿಯೇ ನಾಗಯ್ಯನಿಂದ ಒಂದು ಸಾಲಿ (ಶಾಲೆ) ತೆರೆಯಲು ಏರ್ಪಾಡು ಮಾಡಿದರು. ನಾಗಯ್ಯನಿಗಾಗಿ ಆಗ ಹದಿಮೂರು ವರ್ಷ (ವರ್ಷ – ೧೯೦೬). ಊರ ಜನರಿಗಾದರೂ ಈ ವ್ಯವಸ್ಥೆ ಆಶ್ಚರ್ಯವನ್ನು, ಅಲಕ್ಷ್ಯವನ್ನೂ, ಹೆಮ್ಮೆಯನ್ನು ಉಂಟುಮಾಡಿತು. ಶಾಲೆಯಂಥ ಯಾವುದೇ ಶೈಕ್ಷಣಿಕ ಅನುಕೂಲವಾಗಲೀ, ಅಂಥ ಒಂದು ಪ್ರಯತ್ನವಾಗಲೀ ಇರದ ಸಂದರ್ಭದಲ್ಲಿ ಜಾಲಿಬೆಂಚೆಯಂಥ ಕುಗ್ರಾಮದಲ್ಲಿ ನೀಲಮ್ಮ ಶಾಲೆಯನ್ನು ಸ್ಥಾಪಿಸುವ ಯೋಚನೆ ಮಾಡಿದ್ದು, ನಯನಯ್ಯನವರು ಸ್ಥಾಪಿಸಲು ಯತ್ನಿಸಿದ್ದು ಅವರ ಮಗ ನಾಗಯ್ಯ ಯಾವುದೇ ಔಪಚಾರಿಕ ಶಿಕ್ಷಣವನ್ನಾಗಲೀ, ಶೈಕ್ಷಣಿಕ ತರಬೇತಿಯನ್ನಾಗಲೀ ಪಡೆಯದಿದ್ದರೂ ಸ್ವಯಂಭುವಾಗಿದ್ದ ಪ್ರತಿಭೆಯಿಂದ ‘ಶಿಕ್ಷಕ’ನಾಗಿ ಹರ್ಳಳಿಯ ‘ಓಚಯ್ಯ’ನೆನಿಸಿಕೊಂಡಿದ್ದು ಗ್ರಾಮೀಣ ಶಿಕ್ಷಣದ ಬಹುದೊಡ್ಡ ಸಾಧನೆಯೆನಿಸುತ್ತದೆ. ಆಗಿನ ಹಳ್ಳಿಗಳ ಶೈಕ್ಷಣಿಕ ಪರಿಸ್ಥಿತಿ ಹೇಗಿತು? ಮತ್ತು ಏನಾಗಿತ್ತು? ಎಂದರೆ, ಜನರ ಬಲಾಚಾರ, ವ್ಯವಹಾರದ ಕಾಗದ ಪತ್ರ ಓದುವ – ಬರೆಯುವ, ಗಿಡಮೂಲಿಕೆಗಳ ಹೆಸರುಗಳನ್ನು ಬರೆದಿಡುವ ನಾಲ್ಕು ಮಂದಿಯ ಮುಂದೆ ನಾಲ್ಕೇನಾಲ್ಕು ಅಕ್ಷರಗಳನ್ನು ಓದುವ ಯಾವುದೇ ಮನುಷ್ಯ ದೊಡ್ಡಮನುಷ್ಯನಂತೆ ಬಾಳುತ್ತಿದ್ದ. ಹೀಗಿದ್ದಾಗ, ನಾಗಯ್ಯ ಚಿಕ್ಕವಯಸ್ಸಿನಲ್ಲಿ ತನ್ನ ಈ ಪ್ರತಿಭೆಯಿಂದ ಇದ್ದುದರಲ್ಲಿ ಅನುಕೂಲವಾಗಿ ತನ್ನ ಕುಟುಂಬ ಬದುಕು ಸಾಗುವಂತೆ ಮಾಡಿದ.