ನಾಗಯ್ಯ ತನ್ನ ವಿದ್ಯಾಭ್ಯಾಸದ ಆರಂಭಿಕ ದಿನಗಳಲ್ಲಿ ಜ್ಯೋತಿಷ್ಯದ ಕಡೆಗೆ ಒಲವು, ಆಸಕ್ತಿ ತೋರಿಸಿದಂತೆ ಕಾಣುತ್ತದೆ. ಇದಕ್ಕ ಮುಖ್ಯಕಾರಣಗಳನ್ನು ಆ ಕಾಲದ ಧಾರ್ಮಿಕ – ಸಾಮಾಜಿಕ ಸಂದರ್ಭಗಳಲ್ಲಿಯೇ ಹುಡುಕಬೇಕಾಗುತ್ತದೆ. ಆ ಕಾಲದ ಹಳ್ಳಿಗಳಲ್ಲಿ ನಾಲ್ಕುಮಾತುಗಳನ್ನು ಬಹಿರಂಗವಾಗಿ, ಸಾರ್ವಜನಿಕವಾಗಿ, ಸ್ಪಷ್ಟವಾಗಿ ಮಾತನಾಡುವವನು ‘ಬಹುದೊಡ್ಡ ವಿದ್ವಾಂಸ’ನೆನೆಸಿಕೊಳ್ಳುತ್ತಿದ್ದ. ನಾಗಯ್ಯ ಈ ವಿಷಯದಲ್ಲೂ ಜನ್ಮತಃ ಪ್ರತಿಭಾವಂತನಾಗಿದ್ದ! ಹೀಗಾಗಿ ಊರ ಗಮನ ಸೆಳೆದದ್ದು ವಿಶೇಷವಾಗಿತ್ತು. ಕಳೆದ ಹತ್ತೊಂಭತ್ತನೆಯ ಶತಮಾನದ ವೀರಶೈವ – ಲಿಂಗಾಯತರ ವಿಧಿವಿಧಾನಗಳೆಲ್ಲಾ ಬ್ರಾಹ್ಮಣರ ಪೌರೋಹಿತ್ಯದಲ್ಲಿಯೇ ನಡೆಯುತ್ತಿದ್ದವು. ಅಷ್ಟೇ ಅಲ್ಲ; ಬ್ರಾಹ್ಮಣ್ಯದ ಪೌರೋಹಿತ್ಯದಲ್ಲಿಯೂ ನಡೆಯುತ್ತಿದ್ದವು. ನಾಗಯ್ಯನ ಪ್ರತಿಭೆಯಾದರೂ ಶಾಸ್ತ್ರೀಯ ಜ್ಞಾನಕ್ಕೆ ವಿಸ್ತರಿಸಲ್ಪಟ್ಟಿದ್ದಿಲ್ಲ. ಜಾತಿಯಿಂದ ಜಂಗಮನಾಗಿದ್ದರೂ ಅದು ಪದ್ಯರಚನೆ, ಪಾಠಬೋಧನೆ, ವಿಚಾರ ಪ್ರವಚನಕ್ಕೆ ಮಾತ್ರ ಸೀಮಿತವಾಗಿತ್ತು. ಜ್ಯೋತಿಷ್ಯ, ಗಿಡಮೂಲಿಕೆಯ ವೈದ್ಯವಿಜ್ಞಾನದ ತಿಳುವಳಿಕೆ, ಲೆಕ್ಕಚಾರ, ವ್ಯವಹಾರದ ಕಾಗದಪತ್ರಗಳನ್ನು ಓದಿ ಹೇಳುವುದು. ಇಂಥ ವಿದ್ಯೆಯು ನಾಗಯ್ಯನಿಗೆ ಆಗ ಇನ್ನೂ ಸಲ್ಲವು. ಇದನ್ನು ಅರಿತ ನಾಗಯ್ಯ ಬಳ್ಳಾತಿ ತಾಲೂಕಿನ ಕಪ್ಪಗಲ್ಲು ಎಂಬ ಊರಿನಲ್ಲಿದ್ದ ಬ್ರಾಹ್ಮಣರಲ್ಲಿಗೆ ಹೋಗಿ ಜ್ಯೋತಿಷ್ಯ ಕಲಿಯಲು ಅಪೇಕ್ಷಿಸಿದರೂ ಒಂದೇ ಒಂದು ಶ್ಲೋಕವನ್ನು ಕಲಿಸದೆ ನಿರಾಸೆಗೊಳಿಸಿದರು. ಆ ಕಾಲದ ವೀರಶೈವ ಸಮಾಜವಾದರೂ ಜಂಗಮ ಪೌರೋಹಿತ್ಯದ ನೆರವನ್ನು ಪಡೆದಿರಲಿಲ್ಲ. ಅದು ಬಳಕೆಗೂ ಬಂದಿರಲಿಲ್ಲ. ಒಂದರ್ಥದಲ್ಲಿ ಅದು ‘ಜೋಷಿವೃತ್ತಿ’ ಎಂಬಂತಾಗಿ ಬ್ರಾಹ್ಮಣರಿಗೆ ಮೀಸಲಾಗಿತ್ತು. ಈ ಬ್ರಾಹ್ಮಣವಾದರೂ ‘ಸಮಸ್ತ ಸಮಾಜ’ವನ್ನು ಆಳುತ್ತಿತ್ತು. ಇನಾಮು ಜಮೀನು, ದಕ್ಷಿಣೆ – ದಾನ, ಪೌರೋಹಿತ್ಯದ ಕಟ್ಟಳೆಗಳ ಮೂಲಲಕ ಈ ‘ಆಳ್ವಿಕೆ’ಯು ಬಿಸಿಯಾಗಿಯೇ ಇತ್ತು! ಲಿಂಗಾಯತ, ಜಂಗಮರ ಮನೆಯ ಮದುವೆ ಮೊದಲಾದ ಆಚರಣೆಗಳಲ್ಲಿ ಬ್ರಾಹ್ಮಣರ ಪೌರೋಹಿತ್ಯವಿತ್ತು. ಇಂಥ ಸಂದರ್ಭದಲ್ಲಿ ಜಂಗಮರಿಗೆ ಪೌರೋಹಿತ್ಯ ಸಿಗುವುದರಿಲಿ, ಜ್ಯೋತಿಷ್ಯ ಕಲಿಕೆಗೆ ಸೂಕ್ತ ಪ್ರವೇಶವೂ ಲಭ್ಯವಾಗುತ್ತಿರಲಿಲ್ಲ. ಆದರೆ ನಾಗಯ್ಯನಿಗೆ ಕಲಿಕೆಯ ವಯಸ್ಸಿನ ಇಂಥ ಬಹು ದೊಡ್ಡ ಶೈಕ್ಷಣಿಕ ಅರಾಜಕತೆಯು ಪರಿಣಾಮವನ್ನುಂಟುಮಾಡಿತ್ತು. ನಾಗಯ್ಯ ‘ಕನ್ನಡಸಾಲಿ’ಯ ಅವಧಿಕೃತ ಮತ್ತು ಸ್ವಘೋಷಿತ ‘ಶಿಕ್ಷಕ’ನಾಗಿದ್ದುದು ಮತ್ತು ಕ್ರಮೇಣ ಶಾಸ್ತ್ರೀಯ ಜ್ಞಾನ ಸಂಪಾದಿಸುವ ಕಡೆಗೆ ಹೆಜ್ಜೆ ಹಾಕುತ್ತಿದ್ದುದು ಆ ಕಾಲದ ಬಹುದೊಡ್ಡ ಪರಿವರ್ತನೆಯ ಆಕಾಂಕ್ಷೆಯಾಗಿತ್ತು.

ಎರಡು – ಮೂರು ವರ್ಷಗಳವರೆಗೂ ಏಳುಬೆಂಚಿಯ ‘ಸಾಲಿ ಅಯ್ಯ’ನಾಗಿ ಮನೆಗೆ ಹೆಚ್ಚು ಭಾರವಾಗದ ಸಂಪನ್ಮೂಲವನ್ನು ಒದಗಿಸಿಕೊಂಡ. ಊರವರ ನೀಡಿದ ದಕ್ಷಿಣೆದ ಮಹಾನವಮಿಗೆ ಬಂದ, ಊರವರ ಸಹಕಾರದಿಂಧ ಬಂದ ಆದಾಯದಿಂದ ಮಾಡಿದ ಅಣ್ಣನ ಮದುವೆಯ ಮೂಲಕ ತನ್ನ ಕುಟುಂಬದ ಹೊಣೆಗಾರಿಕೆಯನ್ನು ತನ್ನ ಮುಂದಿನ ಅಭ್ಯಾಸಕ್ಕೆ ಇದ್ದ ತೊಡಕನ್ನು ಸರಿಪಡಿಸಿಕೊಂಡ.

ಕಪ್ಪಗಲ್ಲು ಬ್ರಾಹ್ಮಣರ ಪೌರೋಹಿತ್ಯ ನಿರಂತರವಾದ ಮಾನಸಿಕ ಹಿಂಸೆಯು ನಾಗಯ್ಯನ ಕಲಿಕೆಯನ್ನು ನಿರಾಸೆಯನ್ನೂ, ಚುರುತನವನ್ನು ಉಂಟುಮಾಡಿತ್ತು. ‘ಏನಾದರೂ ಮಾಡಿ ಜ್ಯೋತಿಷ್ಯವನ್ನು ಕಲಿಯಲೇಬೇಕು’ ಎಂದು ನಾಗಯ್ಯ ನಿರ್ಧಾರ ಮಾಡಿಕೊಂಡಿದ್ದ. ಆಗ ಆತನಿಗೆ ಕಂಪ್ಲಿಯ ಕಡೆಯ ದಾರಿ ಕಂಡಿತು. ಕಂಪ್ಲಿಯು ಬಳ್ಳಾರಿಯ ಹೊಸಪೇಟೆ ತಾಲೂಕಿನ ಹೋಬಳಿ ಧಾರ್ಮಿಕವಾಗಿ, ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಹೊಸಪೇಟೆಗಿಂತಲೂ ಒಂದು ಕೈಮೇಲಾಗಿಯೇ ಇತ್ತು.

ಲೋಕ ಸಂಚಾರಿಯಾಗಿದ್ದ ಬೊಚ್ಚಯಸ್ವಾಮಿಗಳು (ಬಹುಶಃ ಇದು ಅವರ ರೂಢನಾಮವಾಗಿರಬೇಕು) ಕಂಪ್ಲಿಗೆ ಬಂದು ನೆಲೆಸಿ ೧೯೯೧ರಲ್ಲಿ ತಮ್ಮ ಗುರುಗಳ ಸ್ಮರಣಾರ್ಥ ‘ಶ್ರೀಗುರು ಸಿದ್ಧ ಮರಿದೇವರ ಸಾಂಗತ್ರಯ ಪಾಠಶಾಲೆ’ಯನ್ನು ಸ್ಥಾಪಿಸಿದ್ದರು. ಇದಕ್ಕೂ ಪೂರ್ವದಲ್ಲಿ ಬೊಚ್ಚಯ್ಯಸ್ವಾಮಿಗಳೇ ಕಂಪ್ಲಿಯ ಉತ್ತರ ಹೊರವಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಶಿವಯೋಗಿ ಅನುಷ್ಠಾನ ಮಂದಿರವನ್ನು ಸ್ಥಾಪಿಸಿದ್ದರಂತೆ.. ಜ್ಯೋತಿಷ್ಯ, ವೇದ, ಸಂಸ್ಕೃತ ಈ ಮೂರು ಜ್ಞಾನ ಶಾಖೆಗಳಲ್ಲಿ (ಸಾಂಗತ್ರಯ) ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟು ಆಧುನಿಕ ಯುಗದಲ್ಲಿ ಕಂಪ್ಲಿಯಂಥ ಒಳಪ್ರದೇಶದಲ್ಲಿ ಧಾರ್ಮಿಕ ಶಿಕ್ಷಣದ ಪರಿಸರವನ್ನುಂಟು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೮೬೯ರಲ್ಲಿ ಬಳ್ಳಾರಿಯಲ್ಲಿಯೇ ಸಕ್ಕರಿ ಕರಡೆಪ್ಪನವರು ಸ್ಥಾಪಿಸಿದ್ದ ‘ಶ್ರೀಗುರುನಿವಾಸ ಸಂಸ್ಕೃತ ಪಾಠಶಾಲೆ’ಯು ೧೮೧೫ರಲ್ಲಿ ಕರಡೆಪ್ಪನವರು ನಿಧನದೊಂದಿಗೆ ಪಾಠಶಾಲೆಯೂ ಸ್ಥಗಿತಗೊಂಡಿತ್ತು. ಇದನ್ನು ಮುಂದುವರಿಸಲು ೧೮೭೮ರಲ್ಲಿ ವಾಋದ ಮಲ್ಲಪ್ಪನವರು ಸೋಲಾಪುರದಲ್ಲಿ ‘ಧರ್ಮಾರ್ಥ ಪಾಠಶಾಲೆ’ಯನ್ನು ಸ್ಥಾಪಿಸಿ ಬಳ್ಳಾರಿ ಪಾಠಶಾಲೆಯ ವಿದ್ಯಾರ್ಥಿಗಳನ್ನು ಗುರುಗಳನ್ನು ಅಲ್ಲಿಗೆ ಕರೆಸಿಕೊಂಡಿದ್ದರು. ಅನಂತರ ೧೮೮೧ರಲ್ಲಿ ಬೊಚ್ಚಯ್ಯಸ್ವಾಮಿಗಳ ನೇತೃತ್ವದಲ್ಲಿ ಪಾಠಶಾಲೆ ಆರಂಭವಾಗಿತ್ತು. ಪಾಠಶಾಲೆಗಳ ಚರಿತ್ರೆಯಲ್ಲಿ ಇದು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ (ಅದು ಈವರೆಗೂ ತನ್ನ ಕಾರ್ಯ ನಿರ್ವಹಿಸುತ್ತ ಬಂದಿರುವುದೊಂದು ವಿಶೇಷ).

೧೯೧೦ರ ಸುಮಾರಿಗೆ ನಾಗಯ್ಯನು ಕಂಪ್ಲಿಯ ಸಾಂಗತ್ರಯ ಪಾಠಶಾಲೆಗೆ ಬಂದು ಸೇರಿದ ಅಲ್ಲಿ ಅವರಿಗೆ ವಿದ್ಯಾಗುರುಗಳಾಗಿದ್ದವರು. ಪಗಡದಿನ್ನಿ ಚನ್ನಬಸವ ಶಾಸ್ತ್ರಿಗಳು. ಪಗಡದಿನ್ನಿ ಚನ್ನಬಸವಶಾಸ್ತ್ರಿಗಳು. ಪಾಠಶಾಲೆಯಲ್ಲಿ ವಾಸ. ವಾರದಮನೆಯಲ್ಲಿ ಊಟ. ಎರಡು ಮೂರು ವರ್ಷ ಅಭ್ಯಾಸ ಮಾಡುವುದರಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಕೊರೆತೆಯಿಂದ ಸಾಂಗತ್ರಯ ಪಾಠಶಾಲೆಯ ರೂಪರೇಷೆಯನ್ನು ಬದಲಾಯಿಸಬೇಕಾಗಿದ್ದರಿಂದ ನಾಗಯ್ಯನ ಜ್ಯೋತಿಷ್ಯ ಕಲಿಯಬೇಕೆಂಬ ಆಸೆ ಪುನಃ ಕುಂಠಿತವಾಯಿತು. ಪುನಃ ಜಾಲಿಬೆಂಚೆಗೆ ಹಿಂದಿರುಗಿದ.

ಅದೇ ವರ್ಷದಲ್ಲಿ ಕೊಪ್ಪಳದ ಗವಿಮಠದಲ್ಲಿ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಡವಿದ್ಯಾರ್ಥಿಗಳಿಗಾಗಿ ಪಾಠಶಾಲೆ ಆರಂಭಿಸಿದ್ದಾಗ ತಿಳಿದು, ರೈಲುಚಾರ್ಚಿಗೆ ಹಣ ಹೊಂದಿಸಿಕೊಂಡು ಒಂದು ದಿನ ಕೊಪ್ಪಳ ಗವಿಮಠಕ್ಕೆ ನಾಗಯ್ಯ ಬಂದು ಸೇರಿದ. ಗವಿ ಮಠದ ಪೂಜ್ಯರ ದರ್ಶನ, ಅಪ್ಪಣೆ ಪಡೆದು ಪಾಠಶಾಲೆಯ ಪ್ರಾಧ್ಯಾಪಕರಾಗಿದ್ದ ಕೊಂಗವಾಡದ ವೀರಭದ್ರಶಾಸ್ತ್ರಿಗಳನ್ನು ಕಂಡ.

ಯಾರ ಅಂಕುಶಕ್ಕೂ ಸಿಕ್ಕದ ನಿರಂಕುಶ ವ್ಯಕ್ತಿತ್ವದ, ಸಾಧಾರಣ ವೇಷ – ಭೂಷಣದ ಅಪಾರ ವಿದ್ವತ್ತಿನ ಕೊಂಗವಾಡದ ವೀರಭದ್ರಶಾಸ್ತ್ರಿಗಳಿಗೆ ನಿಶಿತಮತಿ ಮತ್ತು ಚಿಕಿತ್ಸಕ ದೃಷ್ಟಿಯಿತ್ತು. ನಾಗಯ್ಯನ ಆಸಕ್ತಿಯನ್ನು ಮೊಟಕುಗೊಳಿಸಿ ಆತನ ನಿಜ ವ್ಯಕ್ತಿತ್ವಕ್ಕೆ ಒಂದು ದಿಕ್ಕು ತೋರಿಸಿದರು. ವೀರಭದ್ರಶಾಸ್ತ್ರಿಗಳು, ಬಹುಶಃ ನಾಗಯ್ಯನ ಬದುಕಿನಲ್ಲಿ ಕೊಂಗವಾಡದ ವೀರಭದ್ರಶಾಸ್ತ್ರಿಗಳ ಬಾರದೇ ಇದ್ದರೆ, ಸರಿಯಾದ ಮಾರ್ಗದರ್ಶನ ಮಾಡಿ ವಿಷಯದ ಆಯ್ಕೆಗೆ ಸ್ಪಷ್ಟತೆಯನ್ನು ನೀಡದಿದ್ದರೆ, ನಾಗಯ್ಯ ಒಬ್ಬ ಶ್ರೇಷ್ಠ ಜ್ಯೋತಿಷ್ಯಿಯಾಗಿರುತ್ತಿದ್ದ. ಕನ್ನಡನಾಡಿಗೆ ಒಬ್ಬ ಕವಿಯನ್ನು ಕೊಡಿಸಿದ ಕೀರ್ತಿ ಕೊಪ್ಪಳ ಗವಿಮಠದ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ಕೊಂಗವಾಡ ವೀರಭದ್ರಶಾಸ್ತ್ರಿಗಳಿಗೇ ಸಲ್ಲುತ್ತದೆ.

ನಾಗಯ್ಯನ ಅದೆಷ್ಟು ಗಾಢವಾದ ಆಸಕ್ತಿಯಿಂದ ಜ್ಯೋತಿಷ್ಯವನ್ನು ಕಲಿಯಬೇಕೆಂಧು ಬಂದಿದ್ದನೋ ಅಷ್ಟೆ ನಿರ್ಲಕ್ಷ್ಯ, ನಿರಾಸಕ್ತಿಯಿಂದ ಕೊಂಗವಾಡದ ವೀರಭದ್ರಶಾಸ್ತ್ರಿಗಳು ಜ್ಯೋತಿಷ್ಯದ ಗೀಳನ್ನು ಬಿಡಿಸಿ ಸಂಸ್ಕೃತ ಭಾಷೆ ಸಾಹಿತ್ಯಗಳ ಅಧ್ಯಯನದ ಕಡೆಗೆ ಮನಪರಿವರ್ತನೆ ಮಾಡಿದರು. ನಾಗಯ್ಯನಿಗೇನೋ ಒಳ್ಳೆಯ ಗುರುಗಳು ಶಾಸ್ತ್ರಿಗಳೇನೋ ಒಳ್ಳೆಯ ಶಿಷ್ಯ ಲಭ್ಯವಾದರು. ಆದರೆ ವಿದ್ಯೆಗೆ ಸಂಬಂಧಿಸಿದ ಸಂವಹನದ ಸಮಸ್ಯೆಯೇ ಈಗ ದೊಡ್ಡ ವಿಷಯವಾಯಿತು.

ಸ್ಪಷ್ಟವಿದ್ವತ್ತಿನ, ನಿಷ್ಠುರ ವ್ಯಕ್ತಿತ್ವದ ವೀರಭದ್ರಶಾಸ್ತ್ರಿಗಳಿಗೆ ನಾಗಯ್ಯನಂಥ ಶಿಷ್ಯಲಭ್ಯವಾದುದ ಒಂದು ಯೋಗಾಯೋಗವೇ!

ಉದ್ಧಂಡ ಪಾಂಡಿತ್ಯ ಪ್ರತಿಭೆಯಲ್ಲಿ ಶಾಸ್ತ್ರಿಗಳು ತಮ್ಮ ಶಿಷ್ಯಂದಿರುಗಳಿಗೆ ಅತ್ಯಂತ ಸುಲಭ ವಿಧಾನದಲ್ಲಿ ಪಾಠಹೇಳುತ್ತಿದ್ದ ಕ್ರಮ ನಾಗಯ್ಯನಂಥವರಿಗೆ ಮೇಲೆರುವ ಏಣಿಯಂಥಾಗಿತ್ತು. ಯಾವುದೇ ವಿಷಯವನ್ನು ಅದೆಷ್ಟೇ ಜಟಿಲವಾದುದಾರೂ ತಮ್ಮ ಅನುಭವದಿಂದ ಶಿಷ್ಯದಿಂರಿಗೆ ಸಹಜವೆನಿಸುವಂತೆ ಆಸಕ್ತಿನೆಲೆಗೊಳ್ಳುವಂತೆ ಹೇಳುತ್ತಾ ಸಂದೇಹಬಾರದಂತೆ ಹೇಳುತ್ತಿದ್ದುದು ಸಂಸ್ಕೃತದಂಥ ಪ್ರಾಚೀನ ಭಾಷೆಗಂಭೀರ ವಿದ್ವತ್ತನ್ನು ಸರಳವಿಧಾನದಲ್ಲಿ ಅರಿಯುವ ವಿಧಾನವನ್ನು ನಾಗಯ್ಯನಂಥವರು ಕಂಡುಕೊಂಢರು. ಕೊಂಡವಾಡದ ವೀರಭದ್ರಶಾಸ್ತ್ರಿಗಳಿಂದ ನಾಗಯ್ಯನು ವಿದ್ಯೆಗಿಂತಲೂ ವಿದ್ಯೆಯನ್ನು ಅರಿತುಕೊಳ್ಳುವ ವಿಧಾನವನ್ನು ಕಲಿತಿದ್ದುದು ಮುಖ್ಯವಾಗಿತ್ತು. ಉದಾಹರಣೆಗೆ, ಸಂಸ್ಕೃತ ಕಾವ್ಯಗಳು ವಿವರಿಸುವ ಲಾಕ್ಷಣ್ಯಕ್ಕೆ ಸಂಬಂಧಿಸಿದಂಥೆ ವೀರಭದ್ರ ಶಾಸ್ತ್ರಿಗಳು ಹಿಂದೆ ಹೇಳಿರುವುದಕ್ಕಿಂತಲೂ ಭಿನ್ನವಾದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾಗ, ಒಂದು ಕೃತಿಯನ್ನು ಅರಿಯುವಾಗ ಮತ್ತು ಗ್ರಹಿಸುವಾಗ ಸೋಪಜ್ಞವಾಗಿ ಆಲೋಚಿಸಬೇಕಾಗುತ್ತದೆ. ನಾವು ನಮ್ಮ ಸ್ವಯಂ ಪ್ರತಿಭೆಯನ್ನು ನಂಬಬೇಕೇ ವಿನಾ ಸಿದ್ಧಮಾದರಿಯನ್ನೊ ಅಥವಾ ಪೂರ್ವಾಗ್ರಹ ದೃಷ್ಟಿಯನ್ನೋ ಅನುಸರಿಸುವ ಅಗತ್ಯವೇನಿಲ್ಲ ಎಂದು ತಮ್ಮ ವಿದ್ಯಾರ್ಥಿಗಳಿಗೆ ಸ್ವಾತಂತ್ಯ್ರ ಕೊಡುತ್ತಿದ್ದರು. ವೀರಭದ್ರಶಾಸ್ತ್ರಿಗಳ ಇಂಥ ಧೈರ್ಯವಾದ ನಿರ್ಣಯಾತ್ಮಕ ವಿಚಾರಗಳು ಶಿಷ್ಯಂದಿರುಗಳಿಗೆ ವಿಶೇಷವಾಗಿ ನಾಗಯ್ಯನಂಥವರಿಗೆ ದಾರಿ ತೋರಿಸುವ ದಿಕ್ಕುಗಳಾದವು. ಹೀಗಾಗಿ ನಾಗಯ್ಯನಿಗೆ ಶಾಸ್ತ್ರಿಗಳ ಪಠ್ಯಕ್ಕಿಂತಲೂ ತಮ್ಮ ಗುರುಗಳಾದ ಶಾಸ್ತ್ರಿಗಳ ಪ್ರಾಮಾಣ್ಯವೇ ಜೀವನದ ಪಾಠವಾಗಿ ತಾನು ಕಲಿಯುತ್ತಿರುವ ವಿದ್ಯೆಯಲ್ಲಿ ನಿಶ್ಚಲತೆ, ಧೀರತೆ, ಸ್ವತಂತ್ರ ವೈಚಾರಿಕ ಪ್ರಜ್ಞೆಗಳನ್ನು ಆ ವಯಸ್ಸಿನಲ್ಲಿ ತಂದುಕೊಂಡರು. ಬಹುಶಃ ಈ ಕಾಲಘಟ್ಟ ನಾಗೇಶಶಾಸ್ತ್ರಿಗಳ ಒಟ್ಟಾರೆ ಬದುಕಿನ ಅಸ್ತಿಭಾರವೇ ಆಯಿತು. ನಾಗಯ್ಯನ ವಿದ್ಯಾ ತನ್ಮಯತೆ ಮತ್ತು ಅಭ್ಯಾಸದೊಂದಿಗಿನ ತಾದಾತ್ಮ್ಯವು ವೀರಭದ್ರಶಾಸ್ತ್ರಿಗಳು ಆಪ್ತವಲಯಕ್ಕೆ ಸೇರಿಕೊಳ್ಳುವಂತೆ ಮಾಡಿತು.

ಕೊಂಗವಾಡದ ವೀರಭದ್ರಶಾಸ್ತ್ರಿಗಳ ಧರ್ಮಪತ್ನಿ ರಾಚಮ್ಮನವರಿಗೆ ನಾಗಯ್ಯ ಪುತ್ರ ಸಮಾನ ಶಿಷ್ಯನಾಗಿದ್ದದರೂ ಈ ಕಾರಣದಿಂದಲೇ! ಬಡತನದಿಂದ ಬೆಂದು ಹೋಗುತ್ತಿದ್ದ ನಾಗಯ್ಯನಿಗಾದರೂ ರಾಚಮ್ಮ ಮಾತೃಸ್ವರೂಪಿಯೇ ಆಗಿದ್ದರು. ಮಾನಾಭಿಮಾನವನ್ನು ತೊರೆದು ಗುರುಸೇವಾಭಾವನೆಯನ್ನಿಟ್ಟುಕೊಂಡಿದ್ದನು. ಗುರುಸೇವಾಫಲವಾಗಿ ನಾಗಯ್ಯನು ತನ್ನ ಜೀವನದ ಸಾರ್ಥಕತೆಯ ಮುಂದಿನ ಬಾಳಿನ ಓದನ್ನು ಕಲಿಯುತ್ತಿದ್ದ. ಕ್ರಮೇಣ ರಾಚಮ್ಮನವರು ತವರೂರಿಗೆ ಕರೆದುಕೊಂಡು ಹೋಗುವ ಅಲ್ಲಿ ತಮ್ಮೊಂದಿಗೆ ಕೆಲಕಾಲ ಇರಿಸಿಕೊಳ್ಳುವ ಅಲ್ಲಿಂದ ತಮ್ಮೊಂದಿಗೆ ಕರೆದುಕೊಂಡು ಬರುವ ನಂಬಿಕೆ, ಸ್ವಾತಂತ್ಯ್ರ ದೊರೆಯಿತು. ವೀರಭದ್ರಶಾಸ್ತ್ರಿಗಳ ವಿಷಯಗೊತ್ತಿರುವ ಆಪ್ತವರ್ಗದವರಿಗೆ ನಾಗಯ್ಯನನ್ನು ಮನೆಯ ಅಂತರ್ವಲಯದ ಕರೆದುಕೊಂಡದ್ದು ಮಾತ್ರ ಸಾಹಸದಾಯಕವಾದ ಕೆಲಸವಾಗಿತ್ತು. ಈ ಮುಖ್ಯಕಾರಣದಿಂದ ಕೊಪ್ಪಳ ಗವಿಮಠದ ಶ್ರೀಶಿವಶಾಂತವೀರ ಮಹಾಸ್ವಾಮಿಗಳಿಗೂ ನಾಗಯ್ಯ ಆಪ್ತನಾದ! ಅದೆಷ್ಟು ಆಪ್ತನಾದನೆಂದರೆ, ಸ್ವಾಮಿಗಳ ತಮ್ಮ ನಂತರದಲ್ಲಿ ಈ ಮಠದ ಉಸ್ತುವಾರಿ ಹೊರುವ ಪ್ರಸ್ತಾವನೆಯನ್ನೇ ನಾಗಯ್ಯನ ಮುಂದಿರಿಸಿದರು. ನಾಗಯ್ಯನಿಗಾದರೂ ಅದು ಇಷ್ಟವಿದ್ದರದಿದ್ದರಿಂದ “ನಾನು ‘ಮಾಡಿದ ಸ್ವಾಮಿಯಾಗಲು ಬಯಸುವುದಿಲ್ಲ. ಮಾಡಿದ ಸ್ವಾಮಿಯಾಗಲೂ ಇಚ್ಛೆಯಿಲ್ಲ. ಆಗುವ ಸ್ವಾಮಿಯಾಗಲು ಉದ್ದೇಶವೂ ಇಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ. ಆತನ ಈ ಚತುರತೆಯನ್ನು ಸ್ವಾಮಿಗಳು ಮೆಚ್ಚಿಕೊಂಡರು. ನಾಗಯ್ಯ ನೀಡಿದ ಉತ್ತರ ಸ್ವಾಮಿಗಳಿಗೆ ಸಮ್ಮತಿಸುವಂಥದ್ದಾಗಿರಲಿಲ್ಲ. ಆದರೆ ಆತನ ಚಾತುರ್ಯ ಅವರಿಗೆ ಒಪ್ಪಿಗೆಯಾಗಿತ್ತು. ಈ ಅವಧಿಯಲ್ಲಿಯೆ ನಾಗಯ್ಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪಾಶೀರ್ವಾದದಲ್ಲಿ ಬೆಳೆದ. ಹೀಘಾಘಿ ಅವರ ಬಯಕೆಯಂತೆ ‘ನಾಗಯ್ಯ ನಾಗೇಶ’ನಾಗಿ ನಾಮಾಂತರಗೊಂಡ.

ಜ್ಯೋತಿಷ್ಯ ಕಲಿಯಲು ಬಂದಿದ್ದ ನಾಗಯ್ಯನು ಸಂಸ್ಕೃತ ಪಂಡಿತನಾಗಬೇಕೆಂದು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಬಯಸಿದ್ದು, ಆ ಪ್ರಕಾರ ನಾಗಯ್ಯ ನಾಗೇಶನಾಗಿ ಅವರ ಯೋಚನೆಯನ್ನು ಸಾಕಾರಗೊಳಿಸಿದ.

ಈ ಅವಧಿಯಲ್ಲಿ ನಾಗೇಶ ತನ್ನ ತಾಯಿ ನೀಲಮ್ಮನನ್ನು ಕಳೆದುಕೊಂಡ ಕಾಲರಾ ರೋಗಕ್ಕೆ ತುತ್ತಾಗಿ ಸರಿಯಾ ಆರೈಕೆಗಳಿಲ್ಲದೆ ಅಸುನೀಗಿದಳು. ನೀಲಮ್ಮ ಮಾತೃ ಸ್ವರೂಪಿಯಾಗಿದ್ದ ರಾಚಮ್ಮನ ಕಣ್ಣಳತೆಯಲ್ಲಿ ನಾಗೇಶ ಬೆಳೆದ. ತನ್ನ ತಾಯಿಯ ಶೋಕದಲ್ಲಿ ಮುಳುಗಿ ವಿದ್ಯೆಯಲ್ಲಿ ನಿರಾಸಕ್ತಿ ತಾಳಿ ನಾಗೇಶನ ವ್ಯಕ್ತಿತ್ವ ಕುಂಠಿತಗೊಳ್ಳಬಾರದೆಂದು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳೂ ನಿರ್ಧರಿಸಿದರು. ನಾಗೇಶನ ಬದುಕಿನ ಗತಿಗೆ ಒಂದು ದಿಕ್ಕು ತೋರಿಸುವುದಕ್ಕಾಗಿ ಯೋಚಿಸಿದರು. ಶಿವಶಾಂತವೀರಸ್ವಾಮಿಗಳು ತಮ್ಮ ಮಠದ ಭಕ್ತರ ಸಮಾಲೋಚನೆಗಾಗಿ ಬಳ್ಳಾರಿಗೆ ಆಗಾಗ ಹೋಗಿಬರುತ್ತಿದ್ದರು. ತಮ್ಮ ಸೇವೆಗಾಗಿ ನಾಗೇಶನನ್ನು ನಿಯಮಿತ ಕಾಲದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಶ್ರೀಮಂತಿಕೆ, ಪ್ರತಿಷ್ಠೆಗಳೊಂದಿಗೆ ದಾನ ಧರ್ಮಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಹೀರದ ಮನೆತನಕ್ಕೂ ಹೋಗುತ್ತಿದ್ದರು. ಸಾಕಷ್ಟು ವರ್ಷಗಳಿಂದ ಆ ಮನೆತನವು ಕೊಪ್ಪಳ ಮಠದೊಂದಿಗೆ ಭಕ್ತಿಸಂಬಂಧವನ್ನರಿಸಿಕೊಂಡಿದ್ದರು. ಇದು ಕ್ರಮೇಣ ನಾಗೇಶನಿಗೆ ಬಳ್ಳಾರಿಯಲ್ಲಿ ಒಂದು ನೌಕರಿ ಕೊಡಿಸುವುದರವರೆಗೂ ಹೋದ ಪರಿಣಾಮವಾಗಿ ೧೯೧೪ರಲ್ಲಿ ನಾಗೇಶ ಬಳ್ಳಾರಿಯ ವಾರ್ಡ್ಲಾ ಹೈಸ್ಕೂಲಿನಲ್ಲಿ ಕನ್ನಡ ಮಾಸ್ತರರಾಗಿ ಸೇರಿದರು.

೧೯೧೪ರ ಸುಮಾರಿಗೆ ಬಳ್ಳಾರಿಯಲ್ಲಿ ವಾಡ್ಲಾ ಹೈಸ್ಕೂಲ್‌ ಪ್ರತಿಷ್ಠಿತ ವಿದ್ಯಾಲಯವಾಗಿತ್ತು ಅಲ್ಲಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆಯುವುದಕ್ಕೆ ಹತ್ತಾರು ನಿಯಮ – ವಿಧಾನಗಳಿದ್ದವು. ಅಂಥ ಸ್ಥಿತಿಯಲ್ಲಿದ್ದಾಗ, ನಾಗೇಶನಿಗೆ ಕನ್ನಡ ಮಾಸ್ತರರ ಹುದ್ದೆಸಿಕ್ಕಿದ್ದು ಬದುಕಿನ ಉಪಜೀವನಕ್ಕಿಂತಲೂ ಸಾಮಾಜಿಕ ಸ್ಥಾನ ಲಭ್ಯವಾದ ಸಂತೋಷವಿತ್ತು. ಆದರೆ ತೆಲುಗು ಪ್ರಧಾನವಾಗಿದ್ದ ಬಳ್ಳಾರಿಯಲ್ಲಿ, ತಮಿಳು ಪ್ರಧಾನವಾಗಿದ್ದ ಮದ್ರಾಸ್‌ ಪ್ರಾಂತದಲ್ಲಿ, ಆಂಗ್ಲ ಶೈಕ್ಷಣಿಕ ವಿಧಾನಗಳೇ ತುಂಬಿದ್ದ ಕ್ರೈಸ್ತ ಮಿಶನರಿಗಳಂಥ ಶಿಕ್ಷಣಸಂಸ್ಥೆಗಳಲ್ಲಿ ಕನ್ನಡ ಮಾಸ್ತರರಾಗಿ ನಾಗೇಶ ನೌಕರಿಗೆ ಸೇರಿದ್ದರಿಂದ ಭಾಗಶಃ ಕೀಳರಿಮೆಯನ್ನು ಅನುಭವಿಸಿದ. ಇದೊಂದು ‘ಮೇಷ್ಟ್ರು’ ಎಂಬ ನೌಕರಿಯಾಗಿತ್ತೇ ವಿನಾ ‘ಗುರುಗಳು’ ಎಂಬ ಗೌರವದ ಸ್ಥಾನವಾಗಿರಲಿಲ್ಲ. ಆಗ ಇನ್ನೂ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಯಿನ್ನೂ ಆಗಿರಲಿಲ್ಲ. ೧೯೧೬ರಲ್ಲಿ ಸಂಘಸ್ಥಾಪನೆಯಾದರೂ ಒಂದು ಶಾಲೆಯನ್ನು ನಡೆಸುವ ಪ್ರಯತ್ನವಾಗಲೀ, ಧೈರ್ಯವಾಗಲೀ ಇರಲಿಲ್ಲ. ಬಡ ಮತ್ತು ಹಳ್ಳಿಯ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ, ವಸತಿ ವ್ಯವಸ್ಥೆ ಮಾಡುವುದಕ್ಕೆ ಮಾತ್ರ ಸಾಧ್ಯವಾಗಿತ್ತು. ಮದ್ರಾಸ್‌ ಪ್ರಾಂತದಲ್ಲಿಯೇ ಬಹುಮುಖ್ಯ ಸ್ಥಾನ ಪಡೆದಿದ್ದ ಬಳ್ಳಾರಿಯು ಕನ್ನಡಿಗರ ನೆಲೆಯದೇ ಆಗಿದ್ದರೂ ಕನ್ನಡದ ಬಗ್ಗೆ ಶೈಕ್ಷಣಿಕವಾಗಿ ಕನ್ನಡಿಗರಿಗೇ ಆಸಕ್ತಿ ಇರಲಿಲ್ಲ. ವಿಶೇಷವಾಗಿ ಲಿಂಗಾಯತರ ಮತ್ತು ಮಾಧ್ವಬ್ರಾಹ್ಮಣರ ನೆಲೆಯಾಗಿದ್ದ ಬಳ್ಳಾರಿಯಲ್ಲಿ ಮಾತೃಭಾಷೆ ಕನ್ನಡವೇ ಆಗಿದ್ದರೂ ಬಳ್ಳಾರಿ ಜಿಲ್ಲೆಗೆ ಸೇರಿದ ತಾಲೂಕುಗಳು ಕನ್ನಡಿಗರವೇ ಆಗಿದ್ದರೂ ಕಲಿಯುವ ಭಾಷೆ ಮತ್ತು ಕಲಿಯುವ ವಿಧಾನ ತೆಲುಗಿನದೇ ಆಗಿತ್ತು. ಈ ವಿಪರ್ಯಾಸದ, ದುರಾದೃಷ್ಟದ ಸ್ಥಿತಿ ನಾಗೇಶನ ಗಮನಕ್ಕೆ ಬಂದು, ಪರಿಹಾರಾತ್ಮಕವಾಗಿ ಕಾರ್ಯೋನ್ಮುಖಗೊಂಡದ್ದು ಮಾತ್ರ. ಆ ಕಾಲದ ವಾತಾವರಣಕ್ಕೆ ಸಂಬಂಧಿಸಿದಂತೆ ಸಾಹಸದ ಕಾರ್ಯವೇ ಆಗಿತ್ತು. ಬಳ್ಳಾರಿ ಕೇಂದ್ರಿತವಾದ ಕನ್ನಡ ಪ್ರದೇಶ ಎಷ್ಟು ಮುಗ್ಧವಾಗಿಯೂ ನಿರುಮ್ಮಳವಾಗಿಯೂ ಲೋಕಪ್ರಜ್ಞೆಗೆ ತನ್ನನ್ನು ಒಡ್ಡಿಕೊಳ್ಳದಂತೆಯೂ ಇತ್ತೆಂದರೆ, ಭಾಷಾವೈಷಮ್ಯವನ್ನು ತನ್ನ ಮೇಲೆ ತಂದುಕೊಳ್ಳದಂತೆಯೂ ಲಿಂಗಾಯತ ಬ್ರಾಹ್ಮಣ, ತೆಲುಗು ಕನ್ನಡ ಎಂಬ ಭಿನ್ನತೆಗಳನ್ನಾಗಲೀ ಬಳ್ಳಾರಿ ಸಮಾಜ ತನ್ನ ಮೇಲೆ ಒಂದು ಅಪಾಯವನ್ನು ಅನಾಥತೆಯನ್ನು ತಂದೊಡ್ಡಬಹುದೆಂದು ನಾಗೇಶನಂಥ ಒಬ್ಬ ಪ್ರಜ್ಞಾಪೂರ್ವಕ ಮನೋಭಾವದ ಕನ್ನಡ ಮಾಸ್ತರರಿಗೆ ಅನ್ನಿಸಿದ್ದು ಚಾರಿತ್ರಿಕವಾಗಿ ದೊಡ್ಡ ಸಂಗತಿಯಾಗಿದೆ.

ಹಾಗೇ ನೋಡಿದರೆ ನಾಗೇಶನೆಂಬ ಕನ್ನಡ ಮಾಸ್ತರರ ಬಳ್ಳಾರಿಯ ಆಗಮನವು ಕನ್ನಡ ಪರ ಮತ್ತು ಕನ್ನಡ ಪ್ರೇಮದ ಕ್ರಿಯಾಶೀಲತೆಯು ಹಲವು ಒತ್ತಡ ಆತಂಕಗಳನ್ನು ಎದುರು ಹಾಕಿಕೊಂಡ ಸಂದರ್ಭವಾಗಿತ್ತು. ಸುಮ್ಮನೆ ಒಂದು ನೌಕರಿಯನ್ನಷ್ಟೆ ಮಾಡಿಕೊಂಡು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಯಾವುದೇ ಪ್ರಜ್ಞಾವಂತ ನಾಗರಿಕ, ನೌಕರಿದಾರ ಇರುವಂಥ ಸ್ಥಿತಿ ಅದಾಗಿರಲಿಲ್ಲ! ಇಂಥ ದುರ್ಭರ ಸಂದರ್ಭದಲ್ಲಿ ಮತ್ತು ತುಂಬು ಹೊಣೆಗಾರಿಕೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಪ್ರಸಂಗ ನಾಗೇಶರಿಗೆ ಬಂದಿತ್ತು.

ಔಪಚಾರಿಕವಾಗಿ ಶಿಕ್ಷಣವನ್ನು ಕಲಿಯದೇ ಇದ್ದರೂ ಸ್ವಯಂಭೂವಾಗಿದ್ದ ತನ್ನ ಬೋಧನಾ ಸಾಮರ್ಥ್ಯದಿಂದ ಕೊಪ್ಪಳಗವಿಮಠದ ಶಿವಶಾಂತವೀರ ಮಹಾಸ್ವಾಮಿಗಳ ಆಶೀರ್ವಾದ, ಬಳ್ಳಾರಿಯ ಹೀರದ ಕರಿಬಸಪ್ಪನವರ ಪ್ರಯತ್ನದಿಂದಾಗಿ ೧೯೧೪ರಲ್ಲಿ ಹದಿನೈದು ರೂಪಾಯಿಗಳ ವೇತನದ ಉಪಧ್ಯಾಯನಾಗಿದ್ದು ನಾಗೇಶರಿಗೆ ಹೆಮ್ಮೆಯ ಮತ್ತು ಸವಾಲಿನ ವಿಷಯವಾಗಿತ್ತು. ಔದ್ಯೋಗಿಕ ಬದುಕು ಆರಂಭವಾದುದು ಹೇಗೆಂದರೆ, ತನ್ನ ಪಾಲಿಗೆ ಮತ್ತು ತನ್ನಪಾಡಿಗೆ ಬಂದಿದ್ದ ಕನ್ನಡ ಮತ್ತು ಕನ್ನಡ ವಿದ್ಯಾರ್ಥಿಗಳು ತರಗತಿಗೆ ಹೆಚ್ಚು ಸಂಖ್ಯೆಯಲ್ಲಿಯೂ ಶಾಲೆಯಲ್ಲಿಯೂ ನಡೆದೇ ಇತ್ತು. ಅದಕ್ಕಿದ್ದ ಹಲವು ಮುಖ್ಯಕಾರಣಗಳಲ್ಲಿ ಪ್ರಧಾನವಾಗಿದ್ದ ಕಾರಣವೆಂದರೆ, ಬಳ್ಳಾರಿಯಲ್ಲಿ ಸರಕಾರದ ಭಾಷೆ ತೆಲುಗು ಎಂದೇ ಬಿಂಬಿಸಿದ್ದು ಮತ್ತು ಅದನ್ನು ಕಲಿತರೇ ಮಾತ್ರ ಸರಕಾರದ ಉದ್ಯೋಗಗಳು ಲಭ್ಯವಾಗುತ್ತವೆಯೇ ವಿನಾ ಕನ್ನಡದಲ್ಲಿ ಕಲಿತರೆ ಸಾಧ್ಯವಾಗದು ಎಂಬುದು. ಇದನ್ನು ಅರ್ಥಮಾಡಿಕೊಂಡ ನಾಗೇಶರು ವಾರ್ಡ್ಲಾ ಶಿಕ್ಷಣ ಸಂಸ್ಥೆಗೆ ಕನ್ನಡ ಆದ್ಯತೆಯನ್ನು ಮನವರಿಕೆ ಮಾಡಿಕೊಡಲು ಕನ್ನಡ ಮಕ್ಕಳನ್ನು ಸೆಳೆಯಲು ಪೋಷಕರಲ್ಲಿಗೆ ಹೋಗಿ ಶತಾಯಗತಾಯ ಯತ್ನಿಸಿದರು. ಒಂದರ್ಥದಲ್ಲಿ ಬಳ್ಳಾರಿ ಮತ್ತು ವಾಡ್ಲಾ ಪ್ರೌಢಶಾಲೆಯು ಇಂಥ ಕನ್ನಡ ಉಪಧ್ಯಾಯರನ್ನು ನಿರೀಕ್ಷಿಸುತ್ತಿತ್ತು. ವಾರ್ಡ್ಲಾ ಪ್ರೌಢಶಾಲೆಯ ಹೆಡ್‌ಮಾಸ್ಟರ್ ಆಗಿದ್ದ ಕೋಟಿಲಿಂಗಂ ನಾಗೇಶರ ಪ್ರಯತ್ನಕ್ಕೆ ತುಂಬುಹೃದಯದಿಂದ ಬೆಂಬಲವನ್ನು ವ್ಯಕ್ತಪಡಿಸಿದರು.

ಕೋಟಿಲಿಂಗಂ ಆರಂಭದಲ್ಲಿ ನಾಗೇಶರು ಮಾಡುತ್ತಿದ್ದ ಕನ್ನಡ ಭಾಷೆಗೆ ಸಂಬಂಧಿಸಿದ ತಾದಾತ್ಯದ ಕಾರ್ಯದಿಂದ ಸುಮ್ಮನೇ ಇದ್ದು ಗಮನಿಸುತ್ತಿದ್ದವರು ಕ್ರಮೇಣ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಆಗುತ್ತಿದ್ದ ಬದಲಾವಣೆಯಿಂದ ನಾಗೇಶರಿಗೆ ಪ್ರೋತ್ಸಾಹ ನೀಡುವಷ್ಟು ಬೆಳೆದದ್ದು ಬಳ್ಳಾರಿಯಂಥ ಗಡಿಜಿಲ್ಲೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಮಹತ್ವದ ಬದಲಾವಣೆಯೇ ಆಗಿತ್ತು. ನಾಗೇಶರ ಈ ಪ್ರಯತ್ನದಿಂದ ವಾರ್ಡ್ಲಾ ಪ್ರೌಢಶಾಲೆಯು ಕನ್ನಡಿಗರಿಂದಲೂ ಕನ್ನಡ ವಿದ್ಯಾರ್ಥಿಗಳಿಂದಲೂ ಗಮನೀಯವಾಗಿ ತುಂಬಲಾರಂಭಿಸಿದುದು ಆ ಕಾಲದ ದೊಡ್ಡ ವಿಷಯವಾಗಿತ್ತು. ನಾಗೇಶರು ಅವಕಾಶಸಿಕ್ಕಾಗಲೆಲ್ಲಾ, ಬಳ್ಳಾರಿಯ ಮತ್ತು ಸುತ್ತಲಿನ ಹಳ್ಳಿಗಳ ಮನೆಮನೆಗೆ ಹೋಗಿ ಹುಡುಗರನ್ನು ಕನ್ನಡ ತರಗತಿಗಳಿಗೆ ತರುತ್ತಿದ್ದುದು ಬಳ್ಳಾರಿಯನ್ನು ವಿದ್ಯೆಗೊಳಿಸುವುದಷ್ಟೆ ಅಲ್ಲದೇ ಕನ್ನಡ ಮಯಗೊಳಿಸಿತ್ತಿದ್ದುದು ವಿಶೇಷವಾಗಿತ್ತು. ತೆಲುಗು ವಿದ್ಯಾರ್ಥಿಗಳು ಸಹಾ ಕನ್ನಡಕ್ಕೆ ಬದಲಾಗುತ್ತಿದ್ದುದರಲ್ಲಿ ನಾಗೇಶರ ಯಶಸ್ವಿ ಪ್ರಯತ್ನದ ಒಂದು ಉದಾಹರಣೆ. ಈ ಕಾಲಾವಧಿಯ ಬಹುಮಹತ್ವದ ವಿಚಾರವೆಂದರೆ, ನಾಗೇಶರಿಗೆ ವಿದ್ಯಾರ್ಥಿಗಳಾಗಿದ್ದ ವೈ. ಮಹಾಬಲೇಶ್ವರಪ್ಪನವರು ೧೯೩೨ರಲ್ಲಿ ಬಳ್ಳಾರಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ತರುವಾಯದಲ್ಲಿ ಜಿಲ್ಲೆಯಾದ್ಯಂತ ನೂರಾರು ಕನ್ನಡಶಾಲೆಗಳನ್ನು ತೆರೆದು ಕನ್ನಡ ಪಂಡಿತರನ್ನು ಅಧಿಕೃತ ಅನುದಾನದ ಮೂಲಕ ನೇಮಕಮಾಡಿದರು. ಇದು ಮುಂದೆ (೧೯೫೩) ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸುವಾಗ ಪ್ರಮುಖ ಮಾನದಂಡವಾಗಿ ಪರಿಗಣಿತವಾಯಿತು. ಆರಂಭದಲ್ಲಿ ತೆಲುಗು ಅಭ್ಯಾಸಿಯಾಗಿದ್ದ ವೈ. ಮಹಾಬಲೇಶ್ವರಪ್ಪನವರು ನಂತರ ಕನ್ನಡ ಅಭ್ಯಾಸಿಯಾದುದಷ್ಟೇ ಅಲ್ಲದೇ, ಕನ್ನಡ ಪ್ರೇಮ – ಭಕ್ತಿಯನ್ನು ಸ್ಥಾಪಿಸಿಕೊಂಡುದ್ದರ ಮೂಲದಲ್ಲಿ ವೈ. ನಾಗೇಶರ ಪ್ರಭಾವವಿರುವುದನ್ನು ಗಮನಿಸಬೇಕು. ಅದೇ ರೀತಿಯಾಗಿ ನಾಗೇಶರ ಮತ್ತೊಬ್ಬ ವಿದ್ಯಾರ್ಥಿ ಅಲ್ಲಂ ಕರಿಬಸಪ್ಪನವರು. ೧೯೫೩ರಿಂದ ೧೯೫೬ರವರೆಗೆ ಬಳ್ಳಾರಿಯ ಉಳಿವು, ಅಳಿವಿನ ಅಂಚಿನಲ್ಲಿದ್ದಾಗ, ಪಾರುಮಾಡಿದ್ದು. ೧೯೫೩ರಲ್ಲಿ ಬಳ್ಳಾರಿಯನ್ನು ಮೈಸೂರು ರಾಜ್ಯವು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ವಿಧಾನ ಸಭೆಯ ಒಪ್ಪಿಗೆ ಪಡೆಯಬೇಕಾಗಿತ್ತು. ಆದರೆ ಬಳ್ಳಾರಿಯನ್ನು ಸೇರಿಸಿಕೊಂಡು ದೇಶದಲ್ಲಿಯೇ ಆದರ್ಶರಾಜ್ಯವೆಂದು ಗುರುತಿಸಿಕೊಂಡಿದ್ದ ಮೈಸೂರು ರಾಜ್ಯ ಮೈಮೇಲೆ ಹಾಕಿಕೊಳ್ಳಲು ಕೆಲವು ಶಾಸಕರು ನಿರಾಕರಿಸಿದ್ದರಿಂದ ಅವರ ಮನಸ್ಸನ್ನು ಒಲಿಸಿ ಬಳ್ಳಾರಿ ಜಿಲ್ಲೆಯನ್ನು ಸೇರಿಸಿಕೊಳ್ಳಲು ಪ್ರಯತ್ನಿಸಬೇಕಾಗಿತ್ತು. ಅಂದಿನ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರ ಸೂಚನೆಯ ಮೇರೆಗೆ ಮೈಸೂರು ರಾಜ್ಯದ ಎಲ್ಲಾ ವಿಧಾನ ಸಭಾ ಸದಸ್ಯರುಗಳಿಗೆ ಇದನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ಆಗ ಬಳ್ಳಾರಿಯಿಂದ ಅಲ್ಲಂ ಕರಿಬಸಪ್ಪ, ಕೋ, ಚೆನ್ನಬಸಪ್ಪ, ಗಡಿಗಿ ಮರಿಸ್ವಾಮಪ್ಪ, ಸೌದಾಗರ್ ರಜಾಕ್‌ಸಾಹೇಬ್‌, ಅಂಗಡಿಚನ್ನಬಸಪ್ಪ ಇವರುಗಳು ಖಾಸಗಿ ಆಸಕ್ತಿಯಿಂದ ಸಾವಿರಾರು ಕಿಲೋಮೀಟರ್ ಮೈಸೂರು ರಾಜ್ಯದಲ್ಲಿ ಓಡಾಡಿ ವಿಧಾನ ಸಭಾಸದಸ್ಯರುಗಳಿದ್ದ ಊರುಗಳಿಗೆ ಹೋಗಿ ಅವರ ಮನವೊಲಿಸಿ ವಿಧಾನ ಸಭೆಯಲ್ಲಿ ಬಳ್ಳಾರಿಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲು ತೀರ್ಮಾನಿಸಲು ಕೋರಲಾಯಿತು. ಇದರಲ್ಲಿ ಯಶಸ್ವಿಯಾದ ಪರಿಣಾಮವಾಗಿ ಅಳಿದುಳಿದ ಬಳ್ಳಾರಿ ಜಿಲ್ಲೆ ಅಕ್ಟೋಬರ್ ೩೧ರ ೧೯೫೩ರಲ್ಲಿ ಮೈಸೂರು ರಾಜ್ಯ ಸೇರಿತು. ಈ ಕಾರ್ಯಚಟುವಟಿಕೆಯ ಮೂಲದಲ್ಲಿದ್ದ ಹಲವು ಪ್ರೇರಣೆಗಳಲ್ಲಿ ವೈ. ನಾಗೇಶರ ವಾಡ್ಲಾ ಪ್ರೌಢಶಾಲೆಯ ಕಾಲಾವಧಿಯ ಪ್ರಯತ್ನವೂ ಒಂದಾಗಿತ್ತು.

ಭಾಗ ಮೂರು

ವೈ. ನಾಗೇಶರ ಪ್ರಯತ್ನ ಕೆಲವು ವರ್ಷಗಳಲ್ಲಿ ಗಮನಾರ್ಹವಾದ ವೇಗ ಕಂಡುಕೊಂಡದ್ದು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಬಳ್ಳಾರಿಗೆ ಕನ್ನಡ ಪ್ರಜ್ಞೆಯನ್ನು ಗಟ್ಟಿಗೊಳಿಸುವುದೂ ಆಯಿತು; ತಮ್ಮ ಅಧ್ಯಯನದ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುವುದೂ ಆಯಿತು ಎಂದು ನಾಗೇಶರು ಪ್ರಾಚೀನ ಕಾವ್ಯಗಳನ್ನು ಪುರಾಣಗಳನ್ನು ಆಳವಾಗಿ ಅಭ್ಯಾಸಮಾಡಿದರು. ಸಾಹಿತ್ಯದ ರಸ ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿಯೂ ಸಾರ್ವಜನಿಕರಿಗೆ ಸಮಾರಂಭಗಳಲ್ಲಿಯೂ ವಿವರಿಸುತ್ತ ಕನ್ನಡತನವನ್ನು ಬದುಕಿನೊಂದಿಗೆ ಪ್ರಜ್ಞಾಪೂರ್ವಕವಾಗಿ ಸಂಬಂಧವಾಗಿರಸುವಲ್ಲಿ ಯಶಸ್ವಿಯಾದರು. ರಾಜಶೇಖರ ವಿಳಾಸ, ವೃಷಭೇಂದ್ರ ವಿಜಯ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ಯಶೋಧರ ಚರಿತ್ರೆ, ಪಂಪಭಾರತ, ಗಿರಿಜಾಕಲ್ಯಾಣಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ರಸಾಸ್ವಾದನೆಯ ವಿಭಿನ್ನ ವಾತಾವರಣವನ್ನೇ ತಂದುಕೊಟ್ಟರು. ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವ ಅದರಲ್ಲಿ ವಿದ್ಯಾರ್ಥಿಗಳ ಸರಳವಾಗಿ ಉತ್ತೀರ್ಣರಾಗುವ ಭರವಸೆಯನ್ನು ತಂದರು. ನಾಗೇಶರ ಈ ಪಾಠಬೋಧನೆಯ ವಿಧಾನವು ಎಷ್ಟು ಅತಿರೇಖಕ್ಕೆ ಹೋಗಿತ್ತೆಂದರೆ ವಾರ್ಡ್ಲಾ ಪ್ರೌಢಶಾಲೆಯ ಹೆಡ್‌ಮಾಸ್ಟರ್ ಕೋಟಿಲಿಂಗಂ ಇವರ ಪಾಠ ಬೋಧನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಎತ್ತಿದ್ದರು. ಆದರೆ ನಾಗೇಶರ ವಿದ್ವತ್ತು, ಪ್ರಭಾವಗಳಿಗೆ ಮಾರುಹೋಗಿದ್ದ ಅವರು ಹೆಚ್ಚು ಬಲವಂತ ಮಾಡಿರಲಿಲ್ಲ.

ನಾಗೇಶರು ಮಾಡುತ್ತಿದ್ದ ಉಪಾಧ್ಯಾಯ ವೃತ್ತಿ ಮತ್ತು ಕನ್ನಡದ ಕೆಲಸ ತಮ್ಮ ವ್ಯಾಪ್ತಿಗಳನ್ನು ವಿಸ್ತರಿಸಿಕೊಂಡಷ್ಟು ಶಾಲೆಗೆ ಮಾತ್ರ ಸೀಮಿತವಾಗದೇ ಬಳ್ಳಾರಿ ಎಂಬ ದೊಡ್ಡ ಊರಿಗೆ ಒಬ್ಬ ಗೌರವಾನ್ವಿತ ವ್ಯಕ್ತಿಯಾಗಲಾರಂಭಿಸಿದರು. ಕುತೂಹಲ ಮತ್ತು ಹೆಮ್ಮೆಯ ವಿಷಯವೆಂದರೆ ಕನ್ನಡಿಗರಲ್ಲದೇ ಕನ್ನಡೇತರರು ಅದರಲ್ಲೂ ವಿಶೇಷವಾಗಿ ಕನ್ನಡ ವಿರೋಧಗಳು ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಯೂ.ವೈ. ನಾಗೇಶರ ಕನ್ನಡ ವಿದ್ವತ್ತನ್ನು ಪ್ರಶ್ನಿಸದೇ ಗೌರವಿಸುತ್ತಿದ್ದರು.

ಈ ಮಧ್ಯ ಹೀರದ ಕರಿಬಸಪ್ಪನವರ ವ್ಯಾಪಾರದಲ್ಲಿ ಗುಮಾಸ್ತರಾಗಿದ್ದ ಕಂಪ್ಲಿಯ ಶಾಂತವೀರಯ್ಯನವರ ತಂಗಿ ಮರೆಮ್ಮನೊಂದಿಗೆ ವೈ. ನಾಗೇಶರ ಮದುವೆಯಾಯಿತು. ಹೀರದ ಕರಿಬಸಪ್ಪ ನೇತೃತ್ವದಲ್ಲಿ ನಡೆದ ಮದುವೆಗೆ ನಾಗೇಶರ ವಿದ್ಯಾಗುರುಗಳಾದ ಕೊಂಗವಾಡದ ವೀರಭದ್ರಶಾಸ್ತ್ರಿಗಳೇ ಪೌರೋಹಿತ್ಯವಾಯಿತು. ವಿದ್ಯಾಗುರುಗಳ, ಧಾರ್ಮಿಕ ಗುರುಗಳ, ಆಶ್ರಯದಾತರ ಸಮ್ಮುಖದಲ್ಲಿ ನಾಗೇಶರಿಗೆ ಸಂಸಾರದ ಹೊಣೆ ಹೊರಿಸಲಾಯಿತು.

ಸಂಸಾರೋತ್ತರ ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ನಾಗೇಶರು ತಮ್ಮ ಪತ್ನಿ ಮರೆಮ್ಮನವರ ಬಳಗದ ಸಂಬಂಧಿಕರಾದ ಕುಡಿತಿನಿ ಕಟ್ಟೆಯ್ಯನವರ ಮಗ ವೀರಬಸಯ್ಯನೊಂದಿಗೆ ಸೇರಿ ಕೀರ್ತನ ಶೈಲಿಯ ಪ್ರಭಾವಿ ಪುರಾಣಪ್ರವಚಕನಾಗಿದ್ದ. ಗೇಯಾಂಶ ಸಹಿತವಾಗಿದ್ದ ಆತನ ಈ ಕಲೆಯು ಜಿಲ್ಲೆಯಾದ್ಯಂತ ಗೌರವದ ಸ್ಥಾನ ತಂದುಕೊಟ್ಟಿತ್ತು.

ನಾಗೇಶರಿಗೆ ಇದ್ದುದು ಸಾಹಿತ್ಯಜ್ಞಾನವೇ ಹೊರತು ಕೀರ್ತನೆ, ಪುರಾಣ ಪ್ರವಚನ ಗಮಕವಲ್ಲ. ವೀರಬಸಯ್ಯನವರ ಸಂಪೂರ್ಣ ಪ್ರಭುತ್ವವಿದ್ದುದು ಗಮಕದಲ್ಲಿ ಬಹಳಷ್ಟು ವಿಷಯಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆಯಾಗಲಿಲ್ಲ. ಜನಕ್ಕೆ ಸಂವಹನವಾಗುವ ಹಿನ್ನೆಲೆಯಲ್ಲಿ ಸಂಗೀತ ಮತ್ತು ಸಾಹಿತ್ಯಗಳು ಹೊಂದಿಕೊಂಡೇ ಹೋಗಬೇಕಾಗಿತ್ತು. ಆದರೆ ಇದು ನಾಗೇಶ ಮತ್ತು ವೀರಬಸಯ್ಯನವರ ವಿಚಾರದಲ್ಲಿ ಸರಿಯಾಗಲಿಲ್ಲ. ಹೀಗಾಗಿ ಈ ಸಂಗದಿಂದ ನಾಗೇಶರು ನೇಪಥ್ಯಕ್ಕೆ ಸರಿದು ಸಾಹಿತ್ಯಕ ಸಲಹೆಗಾರರಾಗಿ ಮಾತ್ರ ಉಳಿದುಕೊಂಡರು.

ಈ ಕಾಲಘಟ್ಟದಲ್ಲಿ ನಾಟಕ ಬಳ್ಳಾರಿಯಲ್ಲಿ ಉನ್ನತ ಮಟ್ಟದಲ್ಲಿ ಮಿಂಚುತ್ತಿತ್ತು. ನಾಟಕ ರಚನೆ, ನಾಟಕ ಪ್ರಯೋಗ ಪ್ರದರ್ಶನಗಳಿಗೆ ದಕ್ಷಿಣ ಭಾರತದಲ್ಲಿಯೇ ಪ್ರಮುಖ ವೇದಿಕೆಗಳಲ್ಲಿ ಬಳ್ಳಾರಿಯಲ್ಲಿ ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಧರ್ಮಾವರಂ ಕೃಷ್ಣ ಮಾಚಾರ್ಯರು, ಕೋಲಾಚಲಂ ಶ್ರೀನಿವಾಸರಾಯರು ಮೊದಲಾದವರು ನಾಟಕಕ್ಕೆ ಖಾಸಗಿ ಬದುಕಿಗಿಂತಲೂ ಹೆಚ್ಚು ಪ್ರಾಶಸ್ತ್ಯಕೊಟ್ಟರು. ಈ ಗರಡಿಯಲ್ಲಿ ಬೆಳೆದಿದ್ದ ರಾಘವಾಚಾರ್ಯರು ತಮ್ಮ ಅಭಿನಯ ಕಲೆಯಿಂದ ಅಂತರಾಷ್ಟ್ರೀಯ ಖ್ಯಾತಿ ಪಡೆದಿದ್ದರು. ತೋರಣಗಲ್ಲು ರಾಜಾರಾಯ, ಚಿತ್ತವಾಡಿಗಿ ಹನುಮಂತಗೌಡ ನಾಟಕ ರಂಗಭೂಮಿ ಅಪಾರ ಸೇವೆ ಸಲ್ಲಿಸಿದರು. ಕೊಟ್ಟೂರಿನ ಜಾಗಟವೇರಿ ದೊಡ್ಡ ವೀರಪ್ಪನವರು ನಾಟಕ ಕಂಪನಿಗೆ ಆಶ್ರಯನೀಡಿ ಆನಂದಿಸುವ, ಅದನ್ನು ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವ ಶ್ರೀಮಂತಿಕೆಯುಳ್ಳವರು. ಅವರು ಸಹಾ ನಾಟಕ ಸಂಸ್ಥೆಯನ್ನು ಕಟ್ಟಿ ಅದರ ಯಜಮಾನರಾಗಿ, ಒಳ್ಳೆಯ ಪ್ರಸಿದ್ಧ ನಟರನ್ನು ಕೂಡಿಸಿಕೊಂಡು, ನಾನಾ ಭಾಗಗಳಲ್ಲಿ ಪ್ರದರ್ಶನಗಳನ್ನು ಯಶಸ್ವಿಗೊಳಿಸಿದ್ದರು. ನಾಟಕವನ್ನೊಳಗೊಂಡಂತೆ ಒಟ್ಟಾರೆ ರಂಗ ಚಟುವಟಿಕೆಗಳಿಗೆ ಬಳ್ಳಾರಿಗೆ ಸಮೀಪದ ಹಿರೇಹಾಳು ರಂಗಾಸಕ್ತರ ಪೋಷಣೆಯಿಂದ ಬಹುಶಃ ಕರ್ನಾಟಕ ಆಂಧ್ರ ಪ್ರದೇಶಗಳಿಗೆ ಸಂಬಂಧಿಸಿದಂತೆ ಪ್ರಾಚೀನ ದಾಖಲೆಯಾಗಿ ಮಹತ್ವ ಪಡೆದಿದೆ. ಹತ್ತೊಂಭತ್ತನೆಯ ಶತಮಾನದ ಮಧ್ಯಕಾಲದಲ್ಲಿ ಗೊಂಬೆಯಾಟ, ಬಯಲಾಟ, ನಾಟಕಗಳ ಪ್ರದರ್ಶನಗಳ ಆಸಕ್ತಿ ತೋರಿಸಿದ ಈ ಊರಿನ ಹವ್ಯಾಸಿಗಳು ೧೮೩೨ರಲ್ಲಿ ‘ಶ್ರೀ ಬಾಲಲೀಲಾ ವಿನೋದ ಸಂಗೀತ ಮಂಡಳಿ’ಯನ್ನು ಸ್ಥಾಪಿಸಿದ್ದರು.

ಹೀಗಿದ್ದಾಗ ೧೯೧೪ರಂಥ ಸರಿಯಾದ ಸಂದರ್ಭದಲ್ಲಿ ಬಳ್ಳಾರಿಗೆ ಸೇರಿದ್ದ ವೈ. ನಾಗೇಶರ ಅಭಿರುಚಿ ಎರಡನೇ ಹಂತದಲ್ಲಿ ನಾಟಕಕ್ಷೇತ್ರಕ್ಕೆ ವಿಸ್ತಾರವಾಯಿತು.

ಹಳೆಯ ನಾಟಕಗಳಿಗಿಂತ ಕೆಲವು ಹೊಸ ನಾಟಕ ಬರೆಯಿಸಲು, ನಾಟಕ ಬರೆಯುವವರನ್ನು ರಂಗಾಸಕ್ತರು ಹುಡುಕುತ್ತಿದ್ದರು. ನಾಗೇಶರ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಸುತ್ತಮುತ್ತಲಿನ ಹಳ್ಳಿಯವರು. ಅವರೊಂದಿಗೆ ಮಾತನಾಡಿ ರಜಾದಿನಗಳಲ್ಲಿ ನಾಗೇಶರನ್ನು ತಮ್ಮೂರಿಗೆ ಕರೆದುಕೊಂಡು ಹೋಗಿ ತಮ್ಮ ಚಟುವಟಿಕೆಗಳನ್ನು ಪರಿಚಯಿಸಿ ಕೊಡುತ್ತಿದ್ದರು. ಈ ಕಾಲಘಟ್ಟದಲ್ಲಿ ನಾಗೇಶರಿಗೆ ನಾಟಕಗಳನ್ನು ಬರೆಯಬೇಕೆಂಬ ಜಾಡು ಸಿಕ್ಕಿತು.

ನಾಟಕಕ್ಕೆ ಪ್ರದರ್ಶನ ಆ ಕಾಲದ ಬಳ್ಳಾರಿಯಲ್ಲಿ ಪ್ರಮುಖ ಮನರಂಜನೆಯ ಮಾಧ್ಯಮವಾಗಿತ್ತು. ಬಳ್ಳಾರಿಯ ಒಟ್ಟಾರೆ ಉದ್ಯಮವು ಇದಕ್ಕೆ ಸಹಕಾರಿಯಾಗಿತ್ತು. ಕೊಟ್ಟೂರಿನ ಜಾಟಗೇರಿ ವೀರಪ್ಪನವರ ಅಪೇಕ್ಷೆಯ ಮೇರೆಗೆ ಕೊಟ್ಟೂರೇಶ್ವರನನ್ನು ಕುರಿತ ನಾಟಕ ಬರೆಯಲು ನಾಗೇಶರ ಆರಂಭಿಕ ಹಂತದಲ್ಲಿ ಮನಸ್ಸು ಮಾಡಿದರು. ಬಹುಶಃ ಸಾಹಿತ್ಯ ರಚನೆಗೆ ಸಂಬಂಧಿಸಿದಂತೆ ಮೊದಲ ರಚನೆ ಲೇಖನ ರೂಪದಲ್ಲಿದ್ದರೂ ನಾಟಕಗಳಿಗೆ ಸಂಬಂಧಿಸಿದಂತೆ ಬಹುಶಃ ಕೊಟ್ಟೂರಿನ ಗುರುಬಸವರನ್ನು ಕುರಿತ ಬರೆದ ನಾಟಕವೇ ಮೊದಲ ನಾಟಕವಿರಬೇಕು. ಗುರುಬಸವರನ್ನು ಕುರಿತಂತೆ ಚಾರಿತ್ರಿಕ ಅಂಶಗಳನ್ನು ಸಂಗ್ರಹಿಸಿ ನಾಟಕವನ್ನು ಬರೆದು ಕೊಟ್ಟೂರಿನ ಜಾಗಟವೇರಿ ವೀರಪ್ಪನವರ ಕಂಪನಿ ಮನೆಯಲ್ಲಿ ಓದಿ ಅವರ ಒಪ್ಪಿಗೆಯನ್ನು ಪಡೆದ ನಂತರ ಅದನ್ನು ರಂಗಕ್ಕೇರಿಸಿದರು. ವೀರಪ್ಪನವರಿಗೆ ಅದೆಂಥ ಹುಮ್ಮಸ್ಸಿತ್ತೆಂದರೆ ನಾಟಕದಲ್ಲಿ ಕೊಟ್ಟೂರು ರಥೋತ್ವವವನ್ನು ಕಲ್ಪಿಸಿ ರಂಗದ ಮೇಲೆ ರಥವನ್ನೆಳೆಯುವಂತೆ ಸೂಚಿಸಿ ರಥವನ್ನು ರಂಗದ ಮೇಲೆ ತಂದು ರಂಗಾಸಕ್ತರಿಗೂ ಮತ್ತು ಹೊಸ ಉತ್ಸಹವನ್ನು ತಂದಿದ್ದರು.