ರಂಗದ ಮೇಲಿನ ಈ ಪ್ರಯೋಗ ರಂಗಾಸಕ್ತರಿಗೂ ಮತ್ತು ವೈ. ನಾಗೇಶರಿಗೂ ಉತ್ಸಹ ತಂದಿತ್ತು. ನಾಟಕಕಾರರಾಗಿ ಖ್ಯಾತಿಗೊಳಿಸಿದರು. ಇವರು ಬರೆದ (ಬಹುಶಃ) ಎರಡನೇ ನಾಟಕ ‘ಆಂಜನೇಯ ಲಿಂಗಧಾರಣ’ ನಾಗೇಶರನ್ನು ಕೀರ್ತಿಯಗಗನಕ್ಕೇರಿಸಿತ್ತು. ಆಂಜನೇಯನಿಗೆ ಲಿಂಗಧಾರಣ ಮಾಡುವಂಥ ಶಾಸ್ತ್ರಾಧಾರ ಅಂಶವನ್ನು ಕೇಂದ್ರದಲ್ಲಿರಿಸಿಕೊಂಡು ಬರೆದ ಈ ನಾಟಕವು ರಾಮಭಕ್ತ ವೈಷ್ಣವರ ಕೆಂಗಣ್ಣಿಗೆ ಗುರಿಯಾಗಿ ಈ ನಾಟಕವನ್ನು ಪ್ರದರ್ಶಿಸಿದ ಕಂಪನಿ ಮಾಲೀಕರು ಕೋರ್ಟ್‌ನಿಂದ ಸಮ್ಮತಿ ಪಡೆಯಬೇಕಾಯಿತು. ಇದು ಕಂಪನಿ ಮಾಲೀಕರಿಗೆ ಕೋಡನ್ನು ನಾಗೇಶರಿಗೆ ಪಾಂಡಿತ್ಯ ಹುಮ್ಮಸ್ಸನ್ನೂ ತಂದಿತು.

ನಾಟಕ ರಚನೆ ಎಂಥ ಸರಾಗತೆಯನ್ನು ತಂದಿತ್ತೆಂದರೆ ಹಳ್ಳಿಯ ಜನತೆಗೆ, ಕಂಪನಿಯ ಮಾಲೀಕರಿಗೆ ಒಂದು ನಿರ್ದಿಷ್ಟ ವಿಷಯವನ್ನು ಕುರಿತಂತೆ ನಾಟಕ ಪ್ರದರ್ಶನ ಮಾಡಬೇಕಾದರೆ ನಾಗೇಶರನ್ನು ಬಂದು ಭೇಟಿಯಾಗಿ ಒಂದೆರಡು ದಿನಗಳಲ್ಲಿ ಹಸ್ತ ಪ್ರತಿ ಸಿದ್ಧವಾಗುತ್ತಿತ್ತು. (ದುರಾದೃಷ್ಟವೆಂದರೆ, ಅವರು ಬರೆದ ಒಂದೇ ಒಂದು ನಾಟಕವು ಈಗ ಲಭ್ಯವಾಗುತ್ತಿಲ್ಲ. ಇದಕ್ಕೆ ಕಾರಣ, ನಾಟಕದ ಹಸ್ತಪ್ರತಿಯನ್ನು ಅಪೇಕ್ಷಿಸಿದವರ ಕಡೆಗೆ ಕೊಟ್ಟು ಅದನ್ನು ಹಿಂಪಡೆಯದೇ ಇದ್ದುದು ಮತ್ತು ಅದನ್ನು ಮರುಪ್ರತಿ ಮಾಡದೇ ಇದ್ದುದು ಮತ್ತು ಅದನ್ನು ಮರು ಪ್ರತಿ ಮಾಡದೇ ಇದ್ದುದು) ಅವರು ಬರೆದ. ಏಳು ನಾಟಕಗಳ ಶೀರ್ಷಿಕೆ ಮಾತ್ರ ಇಂದು ನಮಗೆ ಗೊತ್ತಾಗುತ್ತಿದೆ. ಅವು ಶ್ರೀ ಕೊಟ್ಟೂರ ಬಸವೇಶ್ವರ, ಆಂಜನೇಯ ಲಿಂಗಾಧಾರಣ, ವಜ್ರಾಂಗಳೀಕ ವಿಜಯ ನಗರಾಭ್ಯುದಯ, ಮಲ್ಹಣ, ಪಂಪಾಂಬಿಕಾಪರಿಣಯ, ಮೈರಾವಣ ಚರಿತ್ರೆ, ಈ ನಾಟಕ ರಚನೆಯ ನಾಗೇಶರಿಗೆ ಎಂಥ ಹುಮ್ಮಸ್ಸು, ಜನಪ್ರಿಯತೆಯನ್ನು ತಂದಿತೆಂದರೆ ಅವರ ಉಪಾಧ್ಯಾಯ ವೃತ್ತಿಗೆ ಇದರಿಂದ ಧಕ್ಕೆಯಾಗಬಹುದೆಂದು ತಮ್ಮ ವೃತ್ತಿಯ ಕಡೆಗೆ ತಮ್ಮನ್ನು ತೊಡಗಿಸಿಕೊಂಡರು.

ವೈ. ನಾಗೇಶರ ಬದುಕಿನ ಇಲ್ಲಿಯವರೆಗಿನದು ಒಂದು ಹಂತವಾದರೆ, ಮುಂದಿನದು ಅವರ ವ್ಯಕ್ತಿತ್ವವನ್ನು ವಿಸ್ತರಿಸಿದ ಪ್ರಮುಖವಾದ ಹಂತ.

ಸ್ವಯಂಭುವನೆಸಿದ್ದ ತಮ್ಮ ಪ್ರತಿಭೆಯಿಂದ ಪದ್ಯರಚಿಸಿ ಜ್ಯೋತಿಷ ಸಂಸ್ಕೃತ ಕಲಿತು ಉಪಾಧ್ಯಾಯನಾಗಿ, ಕನ್ನಡದ ಅಪ್ಪಟ ಭಕ್ತನಾಗಿ, ನಾಟಕಕಾರನಾಗಿ ಊರಿನಲ್ಲಿ ಪ್ರಮುಖವ್ಯಕ್ತಿ ಎನಿಸಿದ್ದ ನಾಗೇಶನ ಹಂಬಲ ಈಗ ಮತ್ತಷ್ಟು ತೀವ್ರವಾಯಿತು. ಇದಕ್ಕೆ ಕಾಲಕೂಡಿ ಬಂದಿದ್ದು ೧೯೨೫ರಲ್ಲಿ, ೧೯೧೪ರಿಂದ ೧೯೨೫ರವರೆಗಿನ ಅವಧಿ ಅವರನ್ನು ಒಬ್ಬ ಉಪಾಧ್ಯಾನನ್ನಾಗಿಯೂ ಸ್ಥಳೀಯ ಪಂಡಿತ ಲೇಖನನ್ನಾಗಿಯೂ ಮಾಡಿತ್ತು. ಆದೆ ಈ ನೆಪದಲ್ಲಿ ಮಾಡಿದ ವ್ಯಾಪಕ ಅಧ್ಯಯನ ಕಾರಣವಾಗಿ ಹಳಗನ್ನಡ, ಸಂಸ್ಕೃತ ಮತ್ತು ಪ್ರಾಚೀನ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಬೆಳೆದು ಉನ್ನತ ವ್ಯಾಸಂಗ ಮಾಡಬೇಕೆನಿಸಿತು. ಆದ್ದರಿಂದ ದೂರದ ಮದ್ರಾಸ್‌ ಯುನಿವಿರ್ಸಿಟಿಯಲ್ಲಿ (ಆಗಿನ್ನೂ ವಿಶ್ವವಿದ್ಯಾಲಯವೆಂದರೆ ಯಾರಿಗೂ ಅರ್ಥವಾಗುತ್ತಿರಲಿಲ್ಲವಂತೆ!) ಕನ್ನಡ ಸಂಸ್ಕೃತಗಳಿಗೆ ಸಂಬಂಧಿಸಿದ ತುಲನಾತ್ಮಕ ಅಧ್ಯಯನದ ‘ಉಭಯ ಭಾಷಾ ವಿದ್ವಾನ್‌’ ಪರೀಕ್ಷೆ ಬರೆಯಲು ನಿಶ್ಚಯಿಸಿದರು. ಬಳ್ಳಾರಿ ಜಿಲ್ಲೆಯ ಮದ್ರಾಸ್‌ ಪ್ರಾಂತಕ್ಕೆ ಸಂಬಂಧಿಸಿದ್ದರಿಂದ ಮದ್ರಾಸ್‌ನಂಥ ಕೇಂದ್ರ ಸ್ಥಳದ ಯುನಿವರ್ಸಿಟಿಯಲ್ಲಿ ಅಭ್ಯಾಸ ನಡೆಸುವುದು ಆ ಕಾಲದ ಬಹುದೊಡ್ಡ ವಿಷಯವಾಗಿತ್ತು. ೧೯೨೫ರಲ್ಲಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅಂದಿನ ಇವರನ್ನು ವೈ. ನಾಗೇಶಶಾಸ್ತ್ರಿಗಳು ಎಂದೇರ ಕರೆಯಲಾರಂಭವಾಯಿತು. ಉಭಯಭಾಷಾ ವಿದ್ವಾನ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದುದರಿಂದ ವಾರ್ಡ್ಲಾ ಪ್ರೌಢಶಾಲೆಯಲ್ಲಿ ಅವರ ವೇತನವೂ ಹೆಚ್ಚಾಯಿತು.

ಶಾಸ್ತ್ರಿಗಳ ಹಂತ ಹಂಥದ ಬೆಳವಣಿಗೆಯನ್ನು ಗಮನಿಸಿದ್ದ ವಾರ್ಡ್ಲಾ ಪ್ರೌಢಶಾಲೆಯ ತೆಲುಗು ಪಂಡಿತರಾದ ರಾವಾಡ ವೆಂಕಟರಾಮಶಾಸ್ತ್ರಿಗಳು, ಮುನ್ಸಿಪಲ್‌ ಪ್ರೌಢಶಾಲೆಯ ತೆಲುಗು ಪಂಡಿತರಾದ ಸಂಜೀವ ಮೂರ್ತಿಯರಾಯರು ಆಪ್ತರಾದರು. ಇವರೊಂದಿಗೆ ಬಳ್ಳಾರಿಯಲ್ಲಿ ಧಾರ್ಮಿಕ ಜ್ಞಾನ ಹೊಂದಿದ್ದ ಶಾಸ್ತ್ರೀಯ ಸಾಹಿತ್ಯವನ್ನು ಅನೌಪಚಾರಿಕವಾಗಿ ಅಭ್ಯಾಸ ಮಾಡಿದದ ಸೋಮಶೇಖರ ಶಾಸ್ತ್ರಿಗಳು, ಕೆ.ಎಂ. ಕರಿವಸವಶಾಸ್ತ್ರಿಗಳು, ಮತ್ತಿತರರು ಪಂಡಿತ ಕೂಟದಲ್ಲಿ ಬರೆಯುತ್ತಿದ್ದರು. ಬೇಷರತ್ತಾಗಿಯೂ ಲೋಕಾಭಿರಾಮವಾಗಿಯೂ ಮಾಡುತ್ತಿದ್ದ ಇವರ ಹಾಸ್ಯಮಿಶ್ರಿತ ವಿದ್ವತ್ತು ಚರ್ಚೆ ಬಹುಶಃ ಬಳ್ಳಾರಿಯ ಅನೌಪಚಾರಿಕವಾದ ಚಾರಿತ್ರಿಕ ಪ್ರಸಂಗಗಳ್ಲಿ ಒಂದಾಗಿತ್ತು. ಇವರ ಅಭಿಪ್ರಾಯಗಳು ಚರ್ಚಾಸ್ಪದವಾಗಿದ್ದರೂ ಅವು ಎಂದೂ ಭಿನ್ನಮತಕ್ಕೆ ಕಾರಣವಾಗದೇ ಇದ್ದುದು ಅವರ ನಿಜವಿದ್ವತ್ತಿಗೂ ಹೃದಯವಂತಿಕೆಗೂ ಸಾಕ್ಷಿಯಾಗಿತ್ತು.

ಆ ಕಾಲದ ಬಳ್ಳಾರಿಯ ಪ್ರಮುಖ ವ್ಯಾಪಾರ ಕುಟುಂಬಗಳಾದ ಏಚರೆಡ್ಡಿ, ಸಂಗನಕಲ್ಲು ಸಿಂದಗಿ, ಅಲ್ಲಂ, ಗಡಿಗಿ, ಗಾಳಿ, ಮೋದಿ, ಮುಲ್ಲಂಗಿ, ಮುಂಡ್ಲೂರು ಮನೆತನಗಳಲ್ಲಿ ಗೌರವ ಸಂಬಂಧವನ್ನು ಸಂಪಾದಿಸಿದ್ದು ಶಾಸ್ತ್ರಿಗಳ ವಿದ್ವತ್ತಿಗೆ ವಿಶೇಷವೇನೂ ಆಗಿರಲಿಲ್ಲ.

ವಲಯ ಬೆಳೆದುದಷ್ಟೆ ಅಲ್ಲ, ಗೌರವಯುತವಾದ ಪ್ರಭಾವವನ್ನು ಸಂಪಾದಿಸಿದ್ದರಿಂದ ನಾಗೇಶಶಾಸ್ತ್ರಿಗಳು ಕನ್ನಡತನ, ಕನ್ನಡ ಭಾಷೆಯ ಅರಿವು, ಕನ್ನಡ ಸಂಸ್ಕೃತಿ, ಕನ್ನಡ ಪ್ರಜ್ಞೆಯನ್ನು ವಿಸ್ತರಿಸಿ ಗಟ್ಟಿಗೊಳಿಸಿ ಗಂಭೀರವಾದ ಹೆಜ್ಜೆ ಹಾಕಿದರು. ೧೯೨೫ರಲ್ಲಿಯೇ ಅವರು ಇಟ್ಟ ದಿಟ್ಟ ಹೆಜ್ಜೆಯೆಂದರೆ ‘ಕರ್ನಾಟಕ ಬಂಧು’ ಎಂಬ ನಿಯತಕಾಲಿಕೆಯೊಂದನ್ನು ಆರಂಭಿಸಿದ್ದು.

ಸ್ಥಳೀಯ ವ್ಯಕ್ತಿ ಸ್ಥಳಗಳನ್ನು ಕುರಿತು ಲೇಖನಗಳನ್ನು, ನಾಟಕಗಳನ್ನು ಬರೆಯುತ್ತಿದ್ದ ಶಾಸ್ತ್ರಿಗಳು ಕರ್ನಾಟಕ ಬಂಧು ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡದ್ದು ಬಳ್ಳಾರಿ ಮತ್ತು ಸುತ್ತಮುತ್ತಲಿನ ಜನಕ್ಕೆ ಬಂದು ಆದರ್ಶ ಪ್ರೇರಣೆಯೆನಿಸಿತು. ತಮ್ಮ ಪತ್ರಿಕೆಯಲ್ಲಿ ‘ನೀತಿ ಚಿಂತಾಮಣಿ’ ಸ್ಥಿರಶೀರ್ಷಿಕೆಯಲ್ಲಿ ಸ್ವರಚಿತ ನೀತಿಬೋಧಕ ಪದ್ಯಗಳನ್ನು ಮತ್ತು ತಾವು ಬರೆಯುತ್ತಿದ್ದ ಕೆಲವು ನಾಟಕಗಳನ್ನು ಧಾರಾವಾಹಿಗಳ ಮೂಲಕ ಹಾಗೂ ಈ ಅವಧಿಯಲ್ಲಿ ಬರೆಯುತ್ತಿದ್ದ ‘ಅಭಿನವ ಸೀತೆ’ ಎಂಬ ಕಾದಂಬರಿಯನ್ನು ಧಾರಾವಾಹಿ ಮೂಲಕ ಪ್ರಕಟಿಸಿದರು. ಶಾಸ್ತ್ರಿಗಳ ಈ ಕಾರ್ಯ ಸಾಹಸದಾಯಕವೆನಿಸಿದ್ದು ಏಕೆಂದರೆ, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಅಲ್ಪಸಂಖ್ಯಾತ ಓದುಗರು ಇರಿಸಿಕೊಂಡಿರಲಿಲ್ಲ. ಇನ್ನು ಜನಸಾಮಾನ್ಯ ಹೇಗೆ ಮತ್ತು ಏಕೆ ಓದಬೇಕಾಗಿತ್ತು. ಕೈಸುಟ್ಟುಕೊಳ್ಳುವ ಕೆಲಸಕ್ಕೆ ಶಾಸ್ತ್ರಿಗಳು ಕಾಲಿರಿಸಿದ್ದು ಕನ್ನಡ ಸಂಸ್ಕೃತಿಯ ಅರಿವಾಗಲಿ ಎಂಬ ಉದ್ದೇಶ ಇದ್ದುದರಿಂದ ಕಡಿಮೆ ಬೆಲೆಗೆ ಬೀದಿ ಬೀದಿಗೆ ಓಡಾಡಿ ಮಾರಲಾಗುತ್ತಿತು. ಶಾಸ್ತ್ರಿಗಳು ಶಿಷ್ಯಂದಿರೂ ಅಭಿಮಾನಿಗಳೂ ಆಗಿದ್ದ ಯಜಮಾನ್‌ ಶಾಂತರುದ್ರಪ್ಪನವರು ಮತ್ತು ವೀರಭದ್ರಪ್ಪನವರು (ಇವರು ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು). ಕೈಯಲ್ಲಿ ‘ದಿನಪತ್ರಿಕೆಯನ್ನು ಹಿಡಿದುಕೊಂಡು, ಬಳ್ಳಾರಿಯ ಬೀದಿಬೀದಿಗಳಲ್ಲಿ ಓಡಾಡಿ, ‘ಕರ್ನಾಟಕ ಬಂಧು ಒಂದಾಣೆಗೆ ಒಂದು ಕೊಂಡೋದಿರಿ ಇಂದು’ ಎಂದು ಕೂಗುತ್ತ ಮಾರಾಟಮಾಡುತ್ತಿದ್ದರು. ಆರುಪೈಸೆಗೆ ಒಂದು ದಿನದ ಪ್ರತಿ ಸುಮಾರು ಹತ್ತುಪುಟಗಳಿದ್ದ ೧/೪ ಅಳತೆಯ ಪತ್ರಿಕೆಯು ಮಂದಗತಿಯಲ್ಲಿ ಹೆಜ್ಜೆಯಿಡುತ್ತಾ ಕೊನೆಗೆ ಮುಗ್ಗರಿಸಿದಾಗ, ಶಾಸ್ತ್ರಿಗಳು ಅದರ ತಂಟೆಗೇ ಹೋಗಲಿಲ್ಲ!

ಭಾಗ ನಾಲ್ಕು

ಇಲ್ಲಿಂದ ಮುಂದಿನದು ಶಾಸ್ತ್ರಿಗಳು ದೊಡ್ಡವ್ಯಾಪ್ತಿಯಲ್ಲಿ ಅನಾವರಣಗೊಂಡ ಚಿತ್ರವಾಗಿತ್ತು. ಆರಂಭದಿಂದಲೂ ಆಸಕ್ತಿಯಿಂದ ಕಲಿತಿದ್ದ ಸಂಸ್ಕೃತದ ಆಸ್ತಿಭಾರ ಅಲುಗಾಡದಂತೇ ಇದ್ದುದರಿಂದ ತಮ್ಮ ಗುರುಗಳಾದ ಕೊಂಗವಾಡದ ವೀರಭದ್ರಶಾಸ್ತ್ರಿಗಳ ನ್ಯಾಯಶಾಸ್ತ್ರದ ಪ್ರಕಾಂಡ ಪಾಂಡಿತ್ಯದ ನೆರವಿನಿಂದ ತತ್ತ್ವ ಶಾಸ್ತ್ರೀಯ ಅಧ್ಯಯನಗಳ ದಿಕ್ಕನ್ನು ಹಿಡಿಯಿತು. ಇದರ ಪರಿಣಾಮವಾಗಿ ಕಲಕತ್ತೆಯ ಸಂಸ್ಕೃತ ಅಸೋಷಿಯೇಶನ್‌ನಿಂದ ‘ಸಾಂಖ್ಯ ತೀರ್ಥ’ ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿದರು. ಈ ಪದಯು ಮತ್ತೊಂದು ಪದವಿ ಪಡೆಯಲು ಅವರಿಗೆ ಪಂಥಾಹ್ವಾನವನ್ನು ನೀಡಿತು. ‘ಸಾಂಖ್ಯತೀರ್ಥ’ದಂಥ ಜಟಿಲ ವಿಷಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಷಡ್‌ದರ್ಶನಗಳನ್ನೂ, ತತ್ತ್ವಜ್ಞಾನದ ಪಾರಿಭಾಷಿಕವನ್ನೂ, ಆಯಾ ಧರ್ಮದ ಮೂಲ ಸಂಪ್ರದಾಯಾಚಾರ ವಿಭೇಧಗಳನ್ನು, ವಿಷಯಾನ್ವಯಗಳನ್ನೂ, ಖಂಡನೆ ಮಂಡನೆಗಳನ್ನು ಅರಿಯಲು ಪಟ್ಟ ಶ್ರಮದಾಯಕ ಅಭ್ಯಾಸ ವಿವಿಧ ಭಾಷೆಗಳಲ್ಲಿರುವ ವ್ಯಾಖ್ಯೆಗಳನ್ನು ಅವಶ್ಯಕವಾಗಿ ಅರಿಯಬೇಕಾಗಿ ಬಂತು. ಹಿಂದಿ, ಮರಾಠಿ, ಬಂಗಾಲಿ, ಇಂಗ್ಲೀಷ್‌ ಭಾಷೆಗಳನ್ನು ಕಲಿತು ಸೂಕ್ಷ್ಮಗ್ರಾಹ್ಯ ಗುಣ ಸಂಪಾದಿಸಿದರು. ಹೀಗಾಗಿ ‘ಸರ್ವದರ್ಶನ ತೀರ್ಥ’ವೆಂಬ ವಿದ್ವತ್ಪೂರ್ಣವಾದ ಉನ್ನತಪದವಿಯನ್ನು ಸಂಪಾದಿಸಲು ಮನಸ್ಸುಮಾಡಿದರು. ಕೆಚ್ಚು ಹುಟ್ಟಲೂ ಕಾರಣವಾಗಿತ್ತು. ಕೆಲವರಲ್ಲಿ ಪಾಂಡಿತ್ಯ ವಿರುತ್ತದೆ, ಪ್ರತಿಭೆ ಇರುವುದಿಲ್ಲ. ಪ್ರತಿಭೆ ಇದ್ದರೆ ಪಾಂಡಿತ್ಯವಿರುವುದಿಲ್ಲ. ಇವೆರಡು ಇದ್ದರೆ ಕವಿತ್ವದ ಗಂಧವಿರುವುದಿಲ್ಲ. ಇವುಗಳ ಮಿಶ್ರಣ ಹೊಂದಿದ್ದ ನಾಗೇಶಶಾಸ್ತ್ರಿಗಳಿಗೆ ಸರ್ವದರ್ಶನತೀರ್ಥ ಪರೀಕ್ಷೆ ಶ್ರಮದಾಯಕವೆನಿಸಿತ್ತೇ ವಿನಾ ಅಸಾಧ್ಯವಾದುದೇನೂ ಆಗಿರಲಿಲ್ಲ.

೧೯೨೭ರಲ್ಲಿ ‘ಸರ್ವದರ್ಶನ ತೀರ್ಥ’ ಪದವಿಯೂ ಶಾಸ್ತ್ರಿಗಳಿಗೆ ಲಭ್ಯವಾಯಿತು. ವಿಶೇಷವೆಂದರೆ ಈ ಸ್ನಾತಕೋತ್ತರ ವಿದ್ವತ್‌ ಪದವಿಯನ್ನು ಪಡೆದ ದಕ್ಷಿಣ ಭಾರತದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾದರು.

ಈಗ ಶಾಸ್ತ್ರಿಗಳು ಅಕ್ಷರಶಃ ನಾಡಿಗೇ ಸಂದುಹೋದರು. ಕನ್ನಡ ನಾಡು ಸಾಹಿತ್ಯಲೋಕದ ಒಬ್ಬ ಶ್ರೇಷ್ಠ ಕನ್ನಡಿಗನೆಂದು ಭಾವಿಸಿತು.

ಸರ್ವದರ್ಶನ ತೀರ್ಥ ಪದವಿ ಪಡೆದು ಲೋಕಖ್ಯಾತಿಯನ್ನು ಪಡೆದಾನಂತರ ೧೯೨೭ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜ್‌ಗೆ ಕನ್ನಡ ಪ್ರಾಧ್ಯಾಪಕರಾಗಲು ಆಹ್ವಾನದ ಮೇರೆಗೆ ಹೋಗಬೇಕಾಯಿತು. ೧೯೨೮ರಲ್ಲಿ ಮದನಪಲ್ಲಿಯ ಥಿಯೋಸಾಫಿಕಲ್‌ ಕಾಲೇಜಿನಲ್ಲಿ ಸಂಸ್ಕೃತ – ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಏಕಕಾಲದಲ್ಲಿ ಮೂರು ವಿದ್ಯಾಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುವ ಹೊಣೆಗಾರಿಕೆ ಶಾಸ್ತ್ರಿಗಳಿಗೆ ಲಭ್ಯವಾದುದು ನಾಡಿಗಿದ್ದ ಅವರ ಅವಶ್ಯಕತೆಯನ್ನು ಬಹುಶಃ ಸೂಚಿಸುತ್ತದೆ. (೧೯೪೫ರಲ್ಲಿ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘವು ಸ್ಥಾಪಿಸಿದ ವೀರಶೈವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ೧೯೫೫ರಲ್ಲಿ ನಿವೃತ್ತರಾದರು)

ವಿಶೇಷವಾಗಿ ಸಂಸ್ಕೃತ ಕಾವ್ಯಗಳ, ಶಾಸ್ತ್ರೀಯ ಗ್ರಂಥಗಳ ಅಧ್ಯಯನ ಮಾಡಿ ಸಂಪಾದಿಸಿದ್ದ ನಾಗೇಶಶಾಸ್ತ್ರಿಗಳ ವಿದ್ವತ್ತು ಕನ್ನಡಿಗರಿಗೆ ಸದುಪಯೋಗವಾಗಲೆಂದು ಶಾಸ್ತ್ರಿಗಳ ಒಂದು ಕಾಲದ ವಿದ್ಯಾರ್ಥಿಗಳೂ ಆಗ ಜಿಲ್ಲಾ ಬೋರ್ಡ್ ಅಧ್ಯಕ್ಷರೂ ಆಗಿದ್ದ ವೈ.ಮಹಾಬಲೇಶ್ವರಪ್ಪನವರು ಸಂಸ್ಕೃತಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಬಹುದಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಕಾಲದ ಒಪ್ಪಿಗೆಗಾಗಿ ಶಾಸ್ತ್ರಿಗಳು ಅವರ ಬೇಡಿಕೆಯನ್ನು ಕಾಯ್ದಿರಿಸಿದರು. ಇದೇ ಸಂದರ್ಭದಲ್ಲಿ (೧೯೩೦) ಮೈಸೂರು ಒಡೆಯರ ಆಸ್ಥಾನದಲ್ಲಿ ‘ಆಸ್ಥಾನ ವಿದ್ವಾಂಸರಾಗುವ ಅವಕಾಶ ಒದಗಿಬಂತು. ಧರ್ಮ, ಸಂಸ್ಕೃತಿ, ಸಾಹಿತ್ಯಗಳ ಬಗ್ಗೆ ವಿಶೇಷವಾಗಿ ಆಸಕ್ತಿ ಪ್ರೋತ್ಸಾಹ ವಹಿಸುತ್ತಿದ್ದ ನಾಲ್ವಡಿಕೃಷ್ಣರಾಜ ಒಡೆಯರ ಅವರಿಗೆ ‘ಸಾಂಖ್ಯತೀರ್ಥ’, ‘ಸರ್ವದರ್ಶನ ತೀರ್ಥ’ ಪದವಿಗಳನ್ನು ಪಡೆದು ಬಂದಿದ್ದ ಬಳ್ಳಾರಿಯ ವೈ. ನಾಗೇಶಶಾಸ್ತ್ರಿಗಳು ಸಹಜವಾಗಿ ಗಮನಕ್ಕೆ ಬಂದರು. ಅದರ ಪರಿಣಾಮವಾಗಿ ‘ಆಸ್ಥಾನ ವಿದ್ವಾಂಸ’ರಾಗಿ ನಾಡಿನ ಗಮನ ಸೆಳೆದರು. ಮೈಸೂರಿನ ಆಸ್ಥಾನಕ್ಕೆ ಸೇರಿದ ಆರಂಭದಲ್ಲಿಯೇ ಶಾಸ್ತ್ರಿಗಳು ಕಾಳಿದಾಸನ ‘ರಘುವಂಶ ಮಹಾಕಾವ್ಯ’ವನ್ನು ‘ಕರ್ಣಾಟಕ ರಘುವಂಶ’ವೆಂಬ ಹೆಸರಿನಲ್ಲಿ ಅನುವಾದ ಮಾಡಿದರು. ಅದನ್ನು ಪ್ರಕಟಿಸಲು ಸ್ವತಃ ವೈ. ಮಹಾಬಲೇಶ್ವರಪ್ಪನವರು ಮುಂದೆ ಬಂದರು. ಶಾಸ್ತ್ರಿಗಳು ಈ ಕೃತಿಯನ್ನು ಕುರಿತು “ಉದ್ದೇಶ ಪ್ರತಿಯೊಂದು ಭಾಷೆಯ ವಾಙ್ಞಯಾಭಿವೃದ್ಧಿಗೆ ಇತರ ಭಾಷೆಗಳಲ್ಲಿರುವ ಉತ್ತಮಗ್ರಂಥಗಳ ಪರಿವರ್ತನವೂ ಒಂದು ಮುಖ್ಯ ಸಾಧನವಾಗಿರುವುದೆಂದು ತಿಳಿದು, ಅನೇಕ ಪಂಡಿತರು ಸಂಸ್ಕೃತ, ಇಂಗ್ಲೀಷ್‌ ಮೊದಲಾದ ಭಾಷೆಗಳ ಉತ್ತಮ ಗ್ರಂಥಗಳನ್ನು ಕನ್ನಡಕ್ಕೆ ಪರಿವರ್ತಿಸಿ, ಕನ್ನಡ ಸಾಹಿತ್ಯಾಭಿವೃದ್ಧಿಯನ್ನು ಮಾಡಿಯು ಮಾಡುತ್ತಲೂ ಇರುವುದು ಸರ್ವವಿದಿತವಾಗಿರುವುದು. ನಾನಾದರೂ ಸಂಸ್ಕೃತದ ಒಂದೆರಡು ಗ್ರಂಥಗಳನ್ನು ಪರಿವರ್ತಿಸಿ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡಬೇಕೆಂಬುದ್ದೇಶದಿಂದ ಯಾವ ಗ್ರಂಥಗಳನ್ನು ಪರಿವರ್ತಿಸಬೇಕೆಂಬ ಯೋಚನೆಯಲ್ಲಿಯೇ ಕಾಲಕ್ರಮಣ ಮಾಡುತ್ತಿದ್ದೆನು… ಈ ರಘುವಂಶವನ್ನು ಕನ್ನಡಿಸಿರುವೆನು. ಇದರಿಂದ ಕನ್ನಡಿಗರಿಗೆ ಕಿಂಚಿತ್ತಾದರೂ ಪ್ರಯೋಜನವಾದರೆ ನನ್ನ ಉದ್ದೇಶವು ಕೆಲವು ಮಟ್ಟಿಗೆ ಪೂರೈಸಿದಂತೆ ಭಾವಿಸುವೆನು. ಅಭಿಪ್ರಾಯಗಳು ನನ್ನ ವಿಜ್ಞಾಪನೆಯೆಂತೆ ಈ ಕಾವ್ಯದ ವಿಷಯವಾಗಿ ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿದ ಬುದ್ಧಿವೃದ್ಧರ ಉಪಕಾರವು ಚಿರಸ್ಮರಣೀಯವಾಗಿರುವುದು. ಕರ್ನಾಟಕ ಕವಿಚರಿತ್ರೆಕಾರರಾದ ಆರ್. ನರಸಿಂಹಾಚಾರ್ಯರು ತಮ್ಮ ಅಭಿಪ್ರಾಯದ ಲೇಖನದಲ್ಲಿ ಹಳಗನ್ನಡ ದೃಷ್ಟಿಯಿಂದ ಕೆಲವು ಶಬ್ದಗಳ ಸುದ್ಧಾಶುದ್ಧತೆಯನ್ನು ಎಂದರೆ, ಏರಿ ವೊಲ್‌, ಐದಿದ, ಆಗಳ್‌, ಈಗಳ್‌ ಎಂದಿರುವುದಕ್ಕೆ ಪ್ರತಿಯಾಗಿ ಏರ್ದು, ಬಲ್‌, ಐದ, ಆಗಂ, ಈಗಂ ಇತ್ಯಾದಿಯಾಗಿದ್ದ ಶಬ್ದಗಳ ಪ್ರಯೋಗವನ್ನು ತೋರಿಸಿ, ಇವುಗಳು ಇಲ್ಲದಿರುವುದು, ಉತ್ತಮವೆಂದು ಸೂಚಿಸಿರುವರು. ಅವರ ಸೂಚನೆಯ ನನಗೆ ಗ್ರಾಹ್ಯವೇ. ಆದರೆ ನಾನು ಪರಿವರ್ತನದಲ್ಲಿ ಮೇಲೆ ತೋರಿಸಿದ ಎರಡು ವಿಧದ ಶಬ್ದಗಳನ್ನು ಪ್ರಯೋಗಿಸಿರುವೆನು. ಆ ಪ್ರಯೋಗಗಳು ಸಮಗ್ರಗ್ರಂಥಾವಲೋಕನದಿಂದ ಪಾಠಕರಿಗೆ ಗೊತ್ತಾಗಬಹುದೆಂದು ಅವನ್ನು ಇಲ್ಲಿ ಸೂಚಿಸಿಲ್ಲ. ಹೀಗೆ ಪ್ರಯೋಗಿಸಲಿಕ್ಕೆ ನಾನು ತಿಳಿದುಕೊಂಡ ಕಾರಣವು ಕೆಳಗೆ ಬರೆದಂತಿರುವುದು. ಷಟ್ಪದಿಕಾವ್ಯಗಳು ಸುಮಾರು ೧೨ನೆಯ ಶತಮಾನದಿಂದಲೂ ರಾಘವಾಂಕ ಮೊದಲಾದ ಕವಿಗಳಿಂದ ರಚಿಸಲ್ಪಟ್ಟ, ಹೆಚ್ಚಾಗಿ ಪ್ರಚಾರಕ್ಕೆ ಬಂದಿರುವವೆಂಬುದು ಕರ್ನಾಟಕ ಕವಿ ಚರಿತ್ರೆದಿಂದ ತಿಳಿದು ಬರುವುದು. ಷಟ್ಪದಿಕಾವ್ಯಗಳಲ್ಲಿ ಹಳಗನ್ನಡ ಹೊಸಗನ್ನಡದ ಮಿಶ್ರಪ್ರಯೋಗವೇ ಬಹಳವಾಗಿ ಕಂಡುಬರುವುದು. ಚಂಪೂಕಾವ್ಯಗಳನ್ನು ಹಳಗನ್ನಡದಲ್ಲಿಯೂ ಷಟ್ಪದಿಕಾವ್ಯಗಳ ಮಿಶ್ರಮಾರ್ಗದಲ್ಲಿಯೂ ರಚಿಸುವ ರೂಢಿಯೂ ೧೨ನೆಯ ಶತಮಾನದಿಂಧ ಇದುವರೆಗೂ ಇದ್ದಂತೆ ತಿಳಿಯುವುದು. ೧೨ನೆಯ ಶತಮಾನದ ಹರೀಶ್ವರನ ಗಿರಿಜಾಕಲ್ಯಾಣ ಚಂಪೂವೂ, ರಾಘವಾಂಕನ ಷಟ್ಪದಿಕಾವ್ಯಗಳು, ಆಧುನಿಕ ಕವಿಯಾದ ಬಸವಪ್ಪಶಾಸ್ತ್ರಿಯ ದಮಯಂತೀ ಸ್ವಯಂವರ ಚಂಪೂ ಷಟ್ಪದಿರೂಪ ಸಾವಿತ್ರಿ ಚರಿತ್ರೆ ಇವೇ ಮೊದಲಾದ ಗ್ರಂಥಗಳು ಮೇಲಿನ ಮಾತಿಗೆ ನಿದರ್ಶನಗಳಾಗಿರುವವು. ಷಟ್ಪದಿ ಕಾವ್ಯಗಳ ಈ ಮಿಶ್ರಮಾರ್ಗಪದ್ಧತಿಗೆ ದೇಶಕಾಲ ಪರಿಸ್ಥಿತಿಯೇ ಮೊದಲಾದ ಅನೇಕ ಕಾರಣಗಳಿದ್ದಂತೆ ತಿಳಿದು ಬರುವುದು. ಇದನ್ನು ತಿಳಿದೇ ನಾನಾದರೂ ಮಿಶ್ರಮಾರ್ಗದಿಂದಲೇ ಪರಿವರ್ತಿಸಿದೆನು. ಷಟ್ಪದಿಯಿಂದ ರಚಿಸಿದ ಪ್ರಸಿದ್ಧಗ್ರಂಥಗಳ ಲಕ್ಷ್ಯಾನುಸಾರವಾಗಿ ವ್ಯಾಕರಣವೊಂದನ್ನು ರಚಿಸಿ, ಷಟ್ಪದಿಯನ್ನು ಮಿಶ್ರಮಾರ್ಗಪದ್ಧತಿಯನ್ನು ಆಕ್ಷೇಪಗಳು ಹೋಗಲಾರವೆಂದು ನಾನು ಭಾವಿಸಿರುವೆನು. ಕರ್ನಾಟಕ ಸಾಹಿತ್ಯ ಪರಿಷತ್ತಿನಂತಹ ವಾಙ್ಞಯ ಸೇವಾ ಸಂಘಗಳು ಪಂಡಿತರಿಂದ ಮಿಶ್ರಮಾರ್ಗವನ್ನು ಸರಿಗೊಳಿಸುವ ವ್ಯಾಕರಣವನ್ನು ಬರೆಯಿಸುವುದು ಅತ್ಯವಶ್ಯಕವೆಂದು ಹೇಳಿದರೆ ತಪ್ಪಾಗಲಾರದು.” ತಮ್ಮ ಅನುವಾದಿತ ಕೃತಿಯ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು ಅವರ ಅಧ್ಯಯನದ ಆಸಕ್ತಿ ಪ್ರಯೋಗ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಸೂಚಿಸುತ್ತವೆ. ಬಳ್ಳಾರಿ ಭಾಗದ ಈ ವಿದ್ವಾಂಸನ ಈ ಅನುವಾದಿತ ಕೃತಿಯನ್ನು ಮುಂಬಯಿ ಗೌರ್ನಮೆಂಟಿನ ವಿದ್ಯಾ ಶಾಖೆಯವರು ಸೆಕೆಂಡ್ರಿಸ್ಕೂಲುಗಳ ಪಠ್ಯಪುಸ್ತಕವಾಗಿಯೂ, ಲೈಬ್ರರಿ ಪುಸ್ತಕವಾಗಿಯೂ ಪ್ರೈಮರಿಸ್ಕೂಲ್‌ಗಳ ಬಹುಮಾನದ ಪುಸ್ತಕವಾಗಿಯೂ ಇಡುವಂತೆಯೂ ಮತ್ತು ಮೈಸೂರು ಗೌರ್ನಮೆಂಟಿನ ವಿದ್ಯಾಶಾಲೆಯವರು ಹೈಸ್ಕೂಲು ನಾರ್ಮಲ್‌ ಸ್ಕೂಲುಗಳ ಲೈಬ್ರರಿ ಪುಸ್ತಕವಾಗಿಡುವಂತೆಯೂ ಒಪ್ಪಿಗೆಯನ್ನಿತ್ತಿರುವರು. ಮತ್ತು ಮದ್ರಾಸು ಟೆಕ್ಸ್ಟ್‌ಬುಕ್‌ ಕಮಿಟಿಯವರಾದರೂ ಇದನ್ನು ಸ್ಕೂಲುಗಳಿಗಾಗಿ ಅಂಗೀಕರಿಸಿದ್ದು ಶಾಸ್ತ್ರಿಗಳ ಈ ಕೃತಿಯ ಮಹತ್ವವನ್ನು ಹೇಳುತ್ತದೆ. ಈ ಕೃತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವರಾದ ವಿ. ಸುಬ್ರಹ್ಮಣ್ಯ ಅಯ್ಯರ್, ಧಾರವಾಡ ಶಿ.ಶಿ. ಬಸವನಾಳ, ಬೆಂಗಳೂರಿನಲ್ಲಿದ್ದ ಕವಿ ಚರಿತೆಕಾರರಾದ ರಾ. ನರಸಿಂಹಚಾರ್ಯ ಮದ್ರಾಸ್‌ ಪ್ರೆಸಿಡೆನ್ಸಿ ಕಾಲೇಜಿನ ಪಂಡಿತರಾದ ಯಂ.ಡಿ. ಅಳಸಿಂಗರಾಚಾರ್ಯ, ಆಂಧ್ರವಿಶ್ವವಿದ್ಯಾಲಯದ ಕನ್ನಡ ಮತ್ತು ತಮಿಳು ಅಭ್ಯಾಸ ಮಂಡಳಿಯ ಅಧ್ಯಕ್ಷರಾಗಿದ್ದ ಎ. ಭೀಮಾಚಾರ್ ಬಳ್ಳಾರಿಯ ಟಿ.ಎಚ್‌.ಎಂ. ಸದಾ ಶಿವಯ್ಯ ಇವರುಗಳ ವೈ. ನಾಗೇಶಶಾಸ್ತ್ರಿಗಳ ಈ ಕೃತಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಏಕೀಕರಣಪೂರ್ವದ ಬೇರೆ ಬೇರೆ ಪ್ರಾಂತಗಳಲ್ಲಿದ್ದ ಕನ್ನಡ ಪ್ರದೇಶದ ವಿದ್ವಾಂಸರ ಗಮನಕ್ಕೆ ಶಾಸ್ತ್ರಿಗಳು ಬಂದಿದ್ದರು ಎಂಬುದು ಶಾಸ್ತ್ರಿಗಳ ಖ್ಯಾತಿಯ ವಿಸ್ತಾರವನ್ನು ಎತ್ತಿಹೇಳುತ್ತದೆ.

ಈ ಕೃತಿಯ ರಚನೆಯಿಂದ ಲಭಿಸಿದ ಖ್ಯಾತಿಯು ಶಾಸ್ತ್ರಿಗಳಿಂದ ಮತ್ತೊಂದು ಪ್ರಯೋಗತ್ಮಕವಾದ ಅನುವಾದಕ್ಕೆ ಪ್ರೇರಣೆ ನೀಡಿತು. ಭಗವದ್ಗೀತೆಯನ್ನು ಕನ್ನಡಕ್ಕೆ ತರುವುದು ಕರ್ಣಾಟಕ ಭಗವದ್ಗೀತೆ ವಿಜಯ (ಈ ಕೃತಿಗೆ ‘ಶ್ರೀಮತ್ಕರ್ಣಾಟಕ ಭಗವದ್ಗೀತೆ’ ಎಂದೂ, ‘ಶ್ರೀಮದ್ಭಗವದ್ಗೀತೆ’ ಎಂದೂ ಹೆಸರುಗಳಿವೆ) ಎಂಬ ಕೃತಿಯನ್ನು ಶಾಸ್ತ್ರಿಯ ಅನುವಾದ ಮಾಡಲು ಮನಸ್ಸು ಮಾಡಿದಲ್ಲಿ ಇದನ್ನು ವಾಸ್ತವಾಗಿ ಮೈಸೂರು ಸಂಸ್ಥಾನದ ರಾಜಕವಿಭೂಷಣ ಎಚ್‌. ಲಿಂಗರಾಜ ಅರಸು ಇವರ ಅಪೇಕ್ಷೆಯ ಮೇರೆಗೆ ರಚಿಸಿದದ್ದು, ಕೃತಿಗೆ ಮುನ್ನುಡಿ ಬರೆದ ಅರಸು ಶಾಸ್ತ್ರಿಗಳ ಬಗ್ಗೆ ಹೀಗೆ ಹೇಳುತ್ತಾರೆ ‘ಕಾಳಿದಾಸ ಮಹಾಕವಿಯ ಸುಪ್ರಸಿದ್ಧವಾದ ರಘುವಂಶ ಮಹಾಕಾವ್ಯವನ್ನು ಕನ್ನಡದಲ್ಲಿ ಪದ್ಯರೂಪವಾಗಿ ಪರಿವರ್ತನೆ ಮಾಡಿ, ಪ್ರಕಟಿಸಿರುವ ಮೈಸೂರರಮನೆಯ ಆಸ್ಥಾನ ವಿದ್ವಾನ್‌ ವೈ.ನಾಗೇಶಶಾಸ್ತ್ರಿಗಳು ಪಂಡಿತಮಂಡಲಿಗೆ ಪರಿಚಿತರೇ ಆಗಿರುತ್ತಾರೆ. ದುರಂತವೂ ಕ್ಲೇಶಕರವೂ ಆದ ಸಂಸಾರ ಸಾಗರದಲ್ಲಿ ಮಗ್ನರಾಗಿ ಮರುಳರಂತಿರುವ ಜೀವಕೋಟಿಗೆ ಕರ್ಮ, ಭಕ್ತಿ, ಜ್ಞಾನ ರಹಸ್ಯವನ್ನು ಸಾಂಗೋಪಾಂಗವಾಗಿ ಬೋಧಿಸುವುದರ ಮೂಲಕ ಅವರನ್ನು ಪರಮ ಪುರುಷಾರ್ಥವೆನಿಸುವ ಯುಕ್ತಿಯ ನಿಲ್ದಾಣಕ್ಕೆ ಕರೆದೊಯ್ದು ನೆಲೆಗೊಳಿಸಲು ಪ್ರಬಲತರ ಸಾಧನವಾವುವೆಂದರೆ ಭಗವದ್ಗೀತೆಯೆಂಭ ಪ್ರಬಂಧರತ್ನವು. ಇದು ಪಂಚಮವೇದವೆಂದು ವಿದಿತವಾಗಿರುವ ವ್ಯಾಸಮಹರ್ಷಿ ನಿರ್ಮಿತವಾದ ಮಹಾಭಾರತವೆಂಬ ಇತಿಹಾಸ ರತ್ನಾಕರದಲ್ಲಿ ಗರ್ಭಿತವಾಗಿರುವುದು……… ಇಂತಹ ಗ್ರಂಥವನ್ನು ಮೂಲಾರ್ಥಕ್ಕೆ ವಿರೋಧಬಾರದಂತೆ ಪರಿವರ್ತಿಸುವುದೆಂದರೆ ಎಲ್ಲರಿಗೂ ಸುಕರವಾದ ಕಾರ್ಯವಲ್ಲ. ಭಗವದ್ಗೀತೆಯು ಇತರ ಅನೇಕ ಭಾಷೆಗಳಿಗೆ ಪರಿವರ್ತಿತವಾಗಿದ್ದರೂ ಕನ್ನಡದಲ್ಲಿ ಕಂಠಪಾಠ ಮಾಡುವಂತೆ ಪದ್ಯರೂಪದಲ್ಲಿ ಅದರ ಭಾಷಾಂಥರವಿಲ್ಲದೇ ಇದ್ದುದು ಅದೊಂದು ಕೊರತೆಯಾಗಿದ್ದಿತು. ಶ್ರೀಮಾನ್‌ ಶಾಸ್ತ್ರಿಗಳು ಈಗ ಆ ಕೊರತೆಯನ್ನು ತೊಲಗಿಸಿರುತ್ತಾರೆ. ಇವರ ಕವಿತಾಶೈಲಿಯು ಪಂಡಿತಪಾಮರರಿಗೆಲ್ಲ ಸುಭೋಧವಾಗಿರುವುದು……….

ಬಹುಶಃ ನಾಗೇಶಶಾಸ್ತ್ರಿಗಳು ಮೈಸೂರರಸರ ಆಸ್ಥಾನದಲ್ಲಿದ್ದ ಅವಧಿಯಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರರು ಜಯಚಾಮರಾಜ ಒಡೆಯರಿಗೆ ಪಟ್ಟಾಭಿಷೇಕ ನೆರವೇರಿಸಿದಂತೆ ಕಾಣುತ್ತದೆ. ಆ ಸಂದರ್ಭದ ಸ್ಮರಣಾರ್ಥವಾಗಿ ‘ಶ್ರೀಜಯ ಚಾಮರಾಜ ಪಟ್ಟಾಭಿಷೇಕ’ ಎಂಬ ಲಘುಕಾವ್ಯವನ್ನು ರಚಿಸಿದರು. ಶಾಸ್ತ್ರಿಗಳ ಬದುಕಿನ ಕಾಲಾವಧಿಯಲ್ಲಿ ಅದು ಪ್ರಕಟವಾಗದಿದ್ದರೂ ಅವರ ಸಮಗ್ರ ಸಾಹಿತ್ಯದಲ್ಲಿ ಅದು ಲಭ್ಯಗೊಂಡು (೨೦೦೭) ಮುದ್ರಣವಾಗಿದೆ. ಈ ಲಘುಪದ್ಯ ಕಾವ್ಯವು ಸಾಂದರ್ಭಕ ವಿವರವನ್ನು ನೀಡುತ್ತದೆ. ಶಾಸ್ತ್ರಿಗಳೇ ಬರೆದಿಟ್ಟಕೊಂಡಿದ್ದ ಖಾಸಗಿ ಟಿಪ್ಪಣಿಯಲ್ಲಿ ಈ ಪದ್ಯಕಾವ್ಯವನ್ನು ಒಂದೆರೆಡು ಬಾರಿ ಗಮಕ ವಾಚನ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ೧೯೪೦ರಲ್ಲಿ ಜಯಚಾಮರಾಜೇಂದ್ರ ಒಡೆಯರರ ಪಟ್ಟಾಭಿಷೇಕವನ್ನು ಕಾವ್ಯಾತ್ಮಕವಾಗಿ ದಾಖಲಿಸುವ ಈ ಕಾವ್ಯ ಚಾರಿತ್ರಿಕವಾಗಿ ಹೊಸ ಅಂಶಗಳನ್ನು ಹೇಳುತ್ತಿಲ್ಲವಾದರೂ ಶಾಸ್ತ್ರಿಗಳ ಮೈಸೂರು ಸಂಸ್ಥಾನದ ಸಂಬಂಧವನ್ನು ಉಲ್ಲೇಖಿಸುತ್ತದೆ. ಚಾಮರಾಜೇಂದ್ರ ಒಡೆಯರರಿಗೆ ಜಯಲಕ್ಷ್ಮಮ್ಮಣ್ಣಿ, ಕೃಷ್ಣಾಜಮ್ಮಣ್ಣಿ, ಚೆಲುವಾಜಮ್ಮಣ್ಣಿ, (ನಾಲ್ವಡಿ) ಕೃಷ್ಣರಾಜ ಒಡೆಯರ, ಕಂಠೀರವ ನರಸಿಂಹರಾಜ ಒಡೆಯರ, ರಾಜ ಒಡೆಯರ, ದೇವರಾಜ ಒಡೆಯರ ಎಂಬ ಮಕ್ಕಳಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ ಧರ್ಮಪತ್ನಿ ಶಾಸ್ತ್ರಿಗಳೊಂದಿಗೆ ಆಪ್ತವಾದ ವಾತ್ಸಲ್ಯ ಸಂಬಂಧವನ್ನು ಹೊಂದಿದಂತೆ ಈ ಕೃತಿ ಹೇಳುತ್ತದೆ. ವಿಶೇಷವೆಂದರೆ, ೧೯೪೦ ಸುಮಾರಿನಲ್ಲಿ ಬರೆದಿರಬಹುದಾದ ಈ ಕೃತಿಯಲ್ಲಿ ‘ಕನ್ನಡ ಬಳಗ’, ‘ಕನ್ನಡ ರಾಜ’, ಎಂಬ ಪದಗುಚ್ಚಗಳ ಯಥೇಚ್ಚವಾಗಿ ಬಳಸಿರುವುದು ಶಾಸ್ತ್ರಿಗಳ ಕನ್ನಡಾಭಿಮಾನವನ್ನು ತೋರಿಸುತ್ತದೆ.

ಇದೇ ಕಾಲಘಟ್ಟದಲ್ಲಿ ಬಳ್ಳಾರಿಜಿಲ್ಲೆಯ ಅರಸುಮನೆತನ ಘೋರ್ಪಡೆ ರಾಜಾಸ್ಥಾನದಲ್ಲಿಯೂ ಆಸ್ಥಾನ ವಿದ್ವಾಂಸರಾಗುವ ಆಹ್ವನ ನಾಗೇಶಶಾಸ್ತ್ರಿಗಳಿಗೆ ಬಂದಿತು. ೧೯೨೮, ಜೂನ್‌ ೨೦ರಂದು ಸಂಡೂರು ಸಂಸ್ಥಾನದ ವಾರಸುದಾರಿಕೆಯನ್ನು ವಹಿಸಿಕೊಂಡ ಯಶವಂತರಾವ್‌ ಹಿಂದೂರಾವ್‌ ಘೋರ್ಪಡೆಯವರು, ೧೯೩೦, ಫೆಬ್ರವರಿ ೫ರಂದು ಅಧಿಕೃತವಾಗಿ ಸಂಡೂರು ಸಂಸ್ಥಾನದ ಅರಸರಾದರು. ೧೯೨೯, ಡಿಸೆಂಬರ್ ೨೨ರಂಧು ಗ್ವಾಲಿಯರ್ ಸಂಸ್ಥಾನದ ಮುಖ್ಯಸರದಾರರಾದ ಉಮಾ – ಡಟ್‌ – ಉಲ್‌ – ಮುಲ್ಕ ಮೇಜಾ ರಾಜರಾಜೇಂದ್ರ ಮಲೋಜಿರಾವ್‌ ನರಸಿಂಗರಾವ್‌ ಷಿತೋಳೆ ದೇಶಮುಖ ರುಸ್ತುಮ್‌ ಜಿಂಗ್‌ ಬಹಾದ್ದೂರ ಅವರ ಮಗಳು ಸುಶೀಲಾಬಾಯಿಯವರೊಂದಿಗೆ ವಿವಾಹವಾಯಿತು.

೧೯೩೦ರಲ್ಲಿ ಅಧಿಕಾರವಹಿಸಿಕೊಂಡ ಆರಂಭದಲ್ಲಿ ವೈ. ನಾಗೇಶಶಾಸ್ತ್ರಿಗಳ ವಿದ್ವತ್ತಿನ ಮೂಲಲಕ ಪರಿಚಿತರಾಗಿ ಘೋರ್ಪಡೆಯವರು ಆಹ್ವಾನ ನೀಡಿದರು.

ಪಟ್ಟಾಧಿಕಾರವನ್ನು ದಾಖಲಿಸುವ ಲಘುಕಾವ್ಯ ‘ಯಶವಂತರಾಜು ಯಶೋವಿಲಾಸವು’ ಕೃತಿಯನ್ನು ಶಾಸ್ತ್ರಿಗಳು ರಚಿಸಿದರು. ಈ ಕೃತಿಯ ಆಸ್ಥಾನದಲ್ಲಿ ಸಾಕಷ್ಟು ಬಾರಿ ಗಮಕಗಳ ಮೂಲಕ ವಾಚನಗೊಂಡಿದ್ದರು ಪ್ರಕಟಗೊಂಡಿರಲಿಲ್ಲ. (ಅಪ್ರಕಟಿತವಾಗಿದ್ದ ಈ ಕೃತಿಯು ಸಮಗ್ರ ಸಾಹಿತ್ಯದಲ್ಲಿ ಮುದ್ರಣಗೊಂಡಿದೆ)

ಈ ಲಘುಕಾವ್ಯಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಶಾಸ್ತ್ರಿಗಳು ಈ ಕಾವ್ಯವನ್ನು ಬರೆದಾದಾಮೇಲೆ ಎಂದಿನಂತೆ ಅವರ ಕಾವ್ಯಗಳ ಪ್ರಥಮ ಕೇಳುಗರಾದ ವೈ. ಮಹಾಬಲೇಶ್ವರಪ್ಪನವರು ಬಹುವಾಗಿ ಮೆಚ್ಚುಕೊಂಡು ಸಂಡೂರು ಸಂಸ್ಥಾನದ ಆಸ್ಥಾನದಲ್ಲಿ ಈ ಕಾವ್ಯದ ಗಮಕವಾಚನವೂ ಆಗಬೇಕೆಂದು ಏರ್ಪಾಟು ಮಾಡಿಸುತ್ತಾರೆ. ಆದರೆ, ಶಾಸ್ತ್ರಿಗಳ ಕಾವ್ಯವನ್ನು ಗಮಕವಾಚನ ಮಾಡುವ ‘ಕೀರ್ತನರಂಗ’ ವೀರಬಸಯ್ಯನವರು ಆಸ್ಥಾನದ ಕಾರ್ಯಕ್ರಮಕ್ಕೆ ಅನಿವಾರ್ಯಕಾರಣಗಳಿಂದ ಬರುವಂತಿರಲಿಲ್ಲ. ಶಾಸ್ತ್ರಿಗಳು ಜೋಳದ ರಾಶಿ ದೊಡ್ಡಗೌಡರನ್ನು ಒಪ್ಪಿಸಿ ಸಂಡೂರು ಸಂಸ್ಥಾನದ ಆಸ್ಥಾನಕ್ಕೆ ಕರೆದುಕೊಂಡು ಹೋದರು. ಆಸ್ಥಾನದಲ್ಲಿ ಕಾವ್ಯವನ್ನು ವಾಚನ ಮಾಡುವಾಗ ದರಬಾರಿನ ಪದ್ಧತಿಯಂತೆ ದರಬಾರಿನ ಪೋಷಕನ್ನು ಧರಿಸಬೇಕಾಗಿತ್ತು. ದೊಡ್ಡನಗೌಡರು ಒಪ್ಪಲಿಲ್ಲ. ಕೊನೆಗೆ ದೊಡ್ಡನಗೌಡರು ತಮ್ಮ ಸ್ವಂತ ಉಡುಪಿನಲ್ಲಿಯೇ ಕಾವ್ಯವಾಚನ ಮಾಡಿದರು. ಮನಸ್ತಾಪದಿಂದ ಗೊಂದಲವಾಗಿದ್ದ ಸಭೆ ಸಂಪೂರ್ಣವಾಗಿ ತಲೆದೂಗುವಂತೆ ದೊಡ್ಡನಗೌಡರು ಕಾವ್ಯವಾಚನ ಮಾಡಿದರು. ಮಹಾರಾಣಿ ಸುಶೀಲಾದೇವಿ ಘೋರ್ಪಡೆಯವರಿಗೆ ಕನ್ನಡ ಬಾರದಿದ್ದರೂ ಗೌಡರ ಮನನೀಯ ಶೈಲಿಗೆ ತುಂಬುಹೃದಯದಿಂದ ಮೆಚ್ಚುಗೆ ಸೂಚಿಸಿದರು. (ಜೋಳದರಾಶಿ ದೊಡ್ಡನ ಗೌಡರು ‘ಯಶವಂತರಾಯ ಯಶೋವಿಲಾಸವು ತುಂಭಾ ಸೊಗಸಾದ ಕಾವ್ಯ ಅದು ಅಚ್ಚಾಗದೇ ಹಾಗೇ ಉಳಿಯಿತು. ಶಾಸ್ತ್ರಿಗಳ ಹತ್ತಿರವೂ ಅದರ ಮೂಲಪ್ರತಿ ಇರಲಿಲ್ಲ. ಪ್ರಕಟವಾಗಬೇಕಿತ್ತು ಎಂದು ಒಂದೆಡೆ ಬರೆದಿದ್ದಾರೆ. ಅದೃಷ್ಟವಾಶಾತ್‌ ನನ್ನ ಅನ್ವೇಷಣೆಗೆ ಲಭ್ಯವಾಗಿ ಸಮಗ್ರಸಾಹಿತ್ಯ ಸಂಪುಟದಲ್ಲಿ ಪ್ರಕಟವಾಗಿದೆ).

ಸಂಡೂರು ಸಂಸ್ಥಾನವು ಕುಮಾರಸ್ವಾಮಿಯ ನೆಲೆವೀಡು ಸಹಾ ಆಗಿದ್ದರಿಂದ ವೈ. ನಾಗೇಶಶಾಸ್ತ್ರಿಗಳು ತಮ್ಮ ಕ್ರಿಯಾಶೀಲತೆ ಸೃಜನಶೀಲ ಅನುವಾದ ಪ್ರಕ್ರಿಯೆಯನ್ನು ಮೊನಚುಗೊಳಿಸಿಕೊಂಡು ಕವಿಕಾಳಿದಾಸನ ಕುಮಾರಸಂಭವ ಕಾವ್ಯವನ್ನು ಕಾಲೋಚಿತ ಸಮಯೋಚಿತವಾಗಿ ಅನುವಾದ ಮಾಡಿದರು. ೧೯೩೮ರಲ್ಲಿ ಬೆಳಗಾವಿಯ ಸಾತೆಪ್ಪ ಫಾಡೆಪ್ಪ ಚೌಗುಲೆ ಅವರ ಶ್ರೀಮಹಾವೀರ ಮುದ್ರಣಮಂದಿರದಲ್ಲಿ ಆ ಕೃತಿಯನ್ನು ಮುದ್ರಿಸಲಾಯಿತು. ಈ ಕೃತಿಯನ್ನು ಸಂಡೂರು ಸಂಸ್ಥಾನದ ಯಶವಂತರಾಯ್‌ ಹಿಂದೂರಾವ್‌ ಘೋರ್ಪಡೆಯವರಿಗೆ ಸಮರ್ಪಿಸಲಾಗಿತ್ತು. ಈ ಕೃತಿಯ ಪ್ರಕಟಣೆಗೆ ಬಳ್ಳಾರಿಯ ಆನರರಿ ಮೆಜಿಸ್ಟ್ರೇಟ್‌ ಮತ್ತು ಶಾಸ್ತ್ರಿಗಳ ಅಭಿಮಾನಿಗಳಾಗಿದ್ದ ಮೇಟಿ ದೊಡ್ಡಪ್ಪನವರು ಮತ್ತು ವೈ. ಮಹಾಬಲೇಶ್ವರಪ್ಪನವರು ಧನಸಹಾಯ ಮಾಡಿದ್ದರು. ಈ ಕೃತಿಗೆ ಮುನ್ನುಡಿ ಬರೆದ ಬೆಳಗಾವಿಯ ಲಿಂಗರಾಜ ಕಾಲೇಜಿನ ಪ್ರಿನ್ಸಿಪಾಲರಾದ ಶಿ.ಚ. ನಂದೀಮಠ ಅವರು…… ಕುಮಾರ ಸಂಭವವು ಸಂಸ್ಕೃತ ಸಾಹಿತ್ಯದಲ್ಲಿಯ ಮಹಾಕಾವ್ಯಗಳಲ್ಲಿ ಒಂದು ಸಾಹಿತ್ಯದಲ್ಲಿ ಅದರ ಸ್ಥಾನವು ಉನ್ನತವಾದುದು. ಇಂಥ ಆದರಣೀಯವಾದ ಗ್ರಂಥದ ರಸಸ್ವಾದನೆಯನ್ನು ಅನುಭವಿಸುವುದು ಸಂಸ್ಕೃತವನ್ನರಿಯದ ಕನ್ನಡಿಗರಿಗೆ ಶಕ್ಯವಿದ್ದಿಲ್ಲ. ಪಂಡಿತ ವೈ. ನಾಗೇಶಶಾಸ್ತ್ರಿಗಳು ಇದನ್ನು ಕನ್ನಡಿಸಿ ಈ ಕೊರತೆಯನ್ನು ಬಹುಮಟ್ಟಿಗೆ ದೂರಮಾಡಿರುವುದು ಹೆಮ್ಮೆ ಪಡತಕ್ಕ ವಿಷಯ. ಮಹಾಕವಿ ಕಾಳಿದಾಸನ ಎಲ್ಲ ಗ್ರಂಥಗಳನ್ನು ಗದ್ಯ ಮತ್ತು ಪದ್ಯಗಳಲ್ಲಿ ಕನ್ನಡಿಸುವುದು ಕನ್ನಡ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮಹತ್ವವಾದುದು”. ಎಂದು ಪ್ರಶಂಸಿದ್ದಾರೆ. ಶಾಸ್ತ್ರಿಗಳ ಆತ್ಮೀಯ ಸ್ನೇಹಿತರಾಗಿದ್ದ ಬೆಳಗಾವಿಯ ವೆಂಕಟೇಶ ಗೋ. ಕುಲಕರ್ಣಿ ಅವರಿಗೆ ಸುದೀರ್ಘವಾದ ಅಭ್ಯಾಸ ಪೂರ್ಣ ಮುನ್ನುಡಿಯನ್ನು ಬರೆಸಲಾಗಿದೆ.