ಭಾಗ ಐದು

೧೯೩೪ರ ಮಾರ್ಚ್ ತಿಂಗಳಲ್ಲಿ ಮಹಾತ್ಮ ಗಾಂಧೀಜಿ ಹರಿಜನನಿಧಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದರು. ಇದು ಗಾಂಧೀಜಿಯ ಎರಡನೇ ಭೇಟಿ. ೧೯೨೧ರಲ್ಲಿ ಬಳ್ಳಾರಿ ನಗರಕ್ಕಷ್ಟೇ ಪ್ರವೇಶಿಸಿ ಆಂಧ್ರದ ಮೂಲಕ ಹಿಂದಿರುಗಿದ್ದರು. ಹರಿಹರ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಸಂಡೂರು, ತೋರಣಗಲ್ಲು, ಕುಡಿತಿನಿಗಳ ಮೂಲಕ ಬಳ್ಳಾರಿಗೆ ಆಗಮಿಸಿದಾಗ ಹೊರ ಹೊರವಲಯದಲ್ಲಿ ಔಪಚಾರಿಕವಾಗಿ ಮಹಾತ್ಮಾಗಾಂಧೀಜಿಯನ್ನು ಸ್ವಾಗತಿಸಲಾಗಿತ್ತು. ಸ್ವಾಗತದ ನೇತೃತ್ವವನ್ನು ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿದ್ದ ವೈ. ಮಹಾಬಲೇಶ್ವರಪ್ಪನವರು ವಹಿಸಿದ್ದರು. ಜೋಳದರಾಶಿ ದೊಡ್ಡನ ಗೌಡರ ಪ್ರಾರ್ಥನೆಯ ಮೂಲಕ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ವೈ. ನಾಗೇಶಶಾಸ್ತ್ರಿಗಳು ಸಹಜವಾಗಿ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಮಾರುಹೋಗಿದದರು. ತಮ್ಮ ಲೇಖನಿಯ ಮೂಲಕ ಶಾಸ್ತ್ರಿಗಳು ಅದನ್ನು ಸ್ಮರಣೀಯವಾಗಿಸಲಿಚ್ಛಿಸಿ ‘ದಯಾವೀರ ಚರಿತೆ’ ಎಂಭ ಲಘುಕಾವ್ಯವನ್ನೇ ರಚಿಸಿದರು. ಈ ಕಾವ್ಯವೂ” ಅಪ್ರಕಟಿತವಾಗಿದ್ದು ಅದು ಸಮಗ್ರ ಸಾಹಿತ್ಯದಲ್ಲಿ ಪ್ರಕಟಗೊಂಡಿದೆ. ಶಾಸ್ತ್ರಿಗಳು ಗಾಂಧೀಜಿಯನ್ನು ಕಂಡ ಬಗೆ ಹೀಗಿದೆ:

ಕಂ! ನಿತ್ಯ ಸತ್ಯಂ ಚಿನ್ಮಯ
ನತ್ಯಧಿಕಾನಂದ ನಮಪಮ ಪರಮಾತ್ಮಂ
ಚಿತ್ತದ ತಮಮಂ ಕಳೆವಾ
ವಿತ್ಯ ತಾನಾಗಿ ಬೆಳಗುಗೆಮ್ಮೋಳ್ನಿರುತಂ |

ಶಿವನೊಳ್ಶಕ್ತಿಯ ರೂಪದೆ
ಶಿವನವರೊಳ್ಭಕ್ತಿರೂಪದಿಂ ಶೋಭಿಸುವಾ
ಶಿವೆ ನಮ್ಮ ನಾಲಿಗೆಯ ಪೀ
ಠವ ನಲಿದೇರುತ್ತೆ ಮೆರೆಗೆ ಸೂಕ್ತಿಯ ರೂಪಿಂ |

ಭಾರತ ಭೂಮಿಯ ದಾಸ್ಯಂ
ದೂರಮದಾಯ್ತಾವನಾ ಅಹಿಂಸಾವ್ರತದಿಂ |

ರಾಷ್ಟ್ರಪಿತನ ಗಾಂಧಿಯ
ಸಾರತರಂ ಬೋಧಮಿರ್ಕೆ ನಮ್ಮೊಳ್ಸತತಂ |

ಗಾಂಧಿಯ ತತ್ತ್ವಂ ಜನತೆಗೆ
ಬಂಧನಮಂ ಬಿಡಿಸಿ ಜೀವನದ ನಿಜಸುಖಮಂ
ತಂದೀವ ಸತ್ಯಮಾರ್ಗಮ
ದೆಂದಾ ತನ್ಮಹಿಮನಮಳ ಚರಿತಮ ನೊರೆವೇಂ |

ಶಾಸ್ತ್ರಿಗಳು ತಾವೇ ಬರೆದುಕೊಂಡಿದ್ದ ಖಾಸಗಿಟಿಪ್ಪಣಿಯಲ್ಲಿ, ಇದು ‘ಅಪೂರ್ಣವಾಗಿ ಬರೆಯಲ್ಪಟ್ಟು ಮುದ್ರಿತವಾಗದೆ ಉಳಿದಿರುವಂಥದ್ದು’, ಈ ಅಲಭ್ಯ ಮತ್ತು ಅಪೂರ್ಣ ಕಾವ್ಯವಾದರೂ ಕೆಲವು ತುಣುಕುಗಳ ಮಾತ್ರ ಲಭ್ಯವಾಗಿ ಸಮಗ್ರ ಸಾಹಿತ್ಯದಲ್ಲಿ ಲಭ್ಯವಾಗಿದೆ. ಶಾಸ್ತ್ರಿಗಳ ಪ್ರಕಾರ, ಕ್ರೂರತನದಿಂದ ವೀರತನ ಪ್ರಾಪ್ತವಾಗಲಾರದು. ವೀರ ದಯಾಮಯನೂ ಆಗಿರಬಲ್ಲನು! ಕರ್ಮಶೀಲ, ಸತ್ಯಸಂಧ, ‘ಅಜಾತಶತ್ರುವೂ ಆಗಿರಬಲ್ಲನು’ ಎಂದು ಗಾಂಧೀಜಿಯವರ ವ್ಯಕ್ತಿತ್ವನ್ನು ಬಣ್ಣಿಸಲಾಗಿದೆ.

೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಹತ್ತೊಂಭತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯು ವೈ. ನಾಗೇಶಶಾಸ್ತ್ರಿಗಳಿಗೆ ಒದಗಿ ಬಂದದ್ದು, ಅವರ ವಯಸ್ಸಿಗೆ ಮೀರಿದ್ದು ಎಂಬುದನ್ನು ಬಿಟ್ಟರೆ ಪ್ರತಿಭೆ, ತಾದಾತ್ಮ್ಯ, ಕನ್ನಡ ಪರನಿಲುವು, ಜೀವನಶ್ರದ್ದೆ ಇವುಗಳ ಮಾನದಂಡಗಳಲ್ಲಿ ಅದು ಯಥೋಚಿತವಾದುದೇ! ಶಾಸ್ತ್ರಿಗಳಿಗೆ ಈ ಗೌರವ ಸಂದಾಗ ಅವರಿಗೆ ನಲವತ್ತು ವರ್ಷಗಳ ವಯಸ್ಸು. ಹಾಗೇ ನೋಡಿದರೆ ಅವರಿಂದ ಸೃಷ್ಟಿಯಾದ ಸಾಹಿತ್ಯರಾಶಿಯ ಬಹುಪಾಲು ಈ ಅಧ್ಯಕ್ಷ ಗೌರವನಂತರವೇ ಆದುದು. ವಿಶಾಲ ಬಳ್ಳಾರಿ ಜಿಲ್ಲೆಯ ಮೊದಲ ಸಾಹಿತಿಯಾಗಿ ಈ ಗೌರವವನ್ನು ಪಡೆದುದಕ್ಕೆ ಬಳ್ಳಾರಿಜಿಲ್ಲೆ ಹೆಮ್ಮೆಪಟ್ಟಿತೇ ವಿನಾ ಶಾಸ್ತ್ರಿಗಳು ಮಾತ್ರ ಎಂದಿನ ತಮ್ಮ ವಿನಯ ಶೀಲತೆಯಿಂದಲೂ ಸಂಕೋಚದಿಂದಲೂ ಸ್ವೀಕರಿಸಿದ್ದರು. ಅವರ ವಿನಯ ಅದೆಂಥದ್ದಾಗಿತ್ತೆಂದರೆ, ತಮ್ಮ ಅಧ್ಯಕ್ಷಭಾಷಣದ ಆರಂಭದಲ್ಲಿ “ಈ ದಿನದ ಸಮ್ಮೇಳನದ ಅಧ್ಯಕ್ಷಸ್ಥಾನಕ್ಕೆ ನನ್ನನ್ನು ಕರೆದು ಸಾಹಿತ್ಯ ಪರಿಷತ್ತಿನವರು ನನ್ನ ಬಡಜೀವನದಲ್ಲಿ ಒಂದು ಉತ್ಸಾಹವನ್ನು ತುಂಬಿರುವರು. ಆದರೆ ಈ ಅಧ್ಯಕ್ಷ ಸ್ಥಾನವು ಕರ್ಣಾಟಕ ರಾಜಾನ್ವಯ ಭೂಷಣರೂ ಕವಿರಾಜ ಭೂಷಣರೂ ಆದ ಲಿಂಗರಾಜ ಅರಸರಿಂದ ಭೂಷಿತರವಾಗಿದ್ದರೆ ನನ್ನ ಉತ್ಸಾಹವು ದ್ವಿಗುಣಿತವಾಗುತ್ತಿದ್ದಿತು; ಇಷ್ಟೇ ಅಲ್ಲ, ಪರಿಷತ್ತಿಗೊಂದು ನೂತನ ಚೇತನವುಂಟಾಗುತ್ತಿದ್ದಿತು. ಕವಿರಾಜ ಭೂಷಣರ ಅಸ್ವಸ್ಥತೆಯ ಮೂಲಕ ಈ ಸ್ಥಾನವನ್ನು ನಾನು ಸ್ವೀಕರಿಸಬೇಕಾಯಿತು. ಈ ಸ್ಥಾನವನ್ನಲಂಕಾರಿಸುವ ಬುದ್ಧಿವೃದ್ಧರೂ ವಯೋವೃದ್ಧರೂ ಆದ ಮಹನೀಯರು ನಮ್ಮ ನಾಡಿನಲ್ಲಿ ಅನೇಕರಿರುವರು. ಅವರನ್ನುಳಿದು ನನ್ನನ್ನು ಕರೆಯಲು ಪರಿಷತ್ತಿನವರಿಗೊಂದು ಕುತೂಹಲವಿದೆ. ಕರ್ಣಾಟಕದ ಇತರ ಪ್ರಾಂತದವರಿಗಿಂತಲೂ ಬಳ್ಳಾರಿ ಮಂಡಲದ ಕನ್ನಡಿಗರು ಹೆಚ್ಚು ಹಿಂದುಳಿದಿರುವರು. ಅವರೂ ನಮ್ಮಂತೆಯೇ ಕರ್ಣಾಟಕ ವಾಗ್ದೇವಿಯ ಸೇವೆಯಲ್ಲಿ ಮುಂದುವರಿಯಲೆಂಬುದೇ ಆ ಕುತೂಹಲವು. ಈ ಕುತೂಹಲವನ್ನು ಸಫಲಗೊಳಿಸುವ ಯೋಗ್ಯತೆಯು ನನ್ನಲಿಲ್ಲವೆಂಬುದನ್ನು ನಾವು ಬಲ್ಲೆನು. ಆದರೂ ಈ ಸ್ಥಾನವನ್ನು ಸ್ವೀಕರಿಸಲು ಒಪ್ಪಿಕೊಳ್ಳುವ ಸಮಯದಲ್ಲಿ ನಾನು ತಿಳಿದುಕೊಂಡುದಿಷ್ಟೆ; ಪರಿಷತ್ತಿನ ಅಧ್ಯಕ್ಷ ಸ್ಥಾನವೆಂದರೆ ಕರ್ಣಾಟಕ ವಾಗ್ದೇವಿಯ ಸಿಂಹಪೀಠವು. ಯಾವಾಗಲೂ ಈ ಪೀಠವನ್ನುಲಂಕರಿಸತಕ್ಕವಳು ವಾಗ್ದೇವಿಯೇ ನಾನು ದೇವಿಯ ದೂತನಾಗಿ ಆ ಮಾತೆಯ ನುಡಿಸಿದ ಒಂದೆರಡು ಮಾತುಗಳನ್ನು ಹೇಳಿಬಿಟ್ಟರಾಯಿತೆಂದು. ಈ ಮಾತು ಔಪಚಾರಿಕವಲ್ಲ, ಅನ್ವರ್ಥಕವು”. ಇಂಥ ವಿನಯಪೂರ್ವಕವಾದ ಆರಂಭದ ಮೂಲಕ ಕರ್ಣಾಟಕದ ಸಮಗ್ರತೆಯ ಕುರಿತು ಮಾಹಿತಿ ಪೂರ್ಣವಾದ ವಿವರಣೆಯನ್ನು ತಮ್ಮ ಭಾಷಣದುದ್ದಕ್ಕೂ ನೀಡಿದರು. ಭಾಷಣಧ ಕೊನೆಯ ಮಾತು ಕರ್ನಾಟಕದ ಭೌತಿಕರಚನೆಯನ್ನು ಚಾರಿತ್ರಿಕವಾಗಿ ದಾಖಲಿಸುತ್ತದೆ. ಅದು ಹೀಗಿದೆ. “… ಹುಬ್ಬಳ್ಳಿಯ ಮಹಾಜನರೇ! ನಿಮ್ಮ ನಾಡು ಕನ್ನಡದ ನಡು ನಾಡು. ಇದು ಕನ್ನಡಿಗರ ಕೇಂದ್ರಸ್ಥಾನ, ಇಲ್ಲಿ ಕರ್ಣಾಟಕ ಸಾಹಿತ್ಯ ಸಮ್ಮೇಳನವನ್ನು ನಡೆಸಿದುದು ನಿಮಗೆ ಮಾತ್ರವಲ್ಲ. ಸರ್ವಕನ್ನಡಿಗರಿಗೂ ಭೂಷಣವಾಗಿರುವುದು. ಈ ವಿಧದ ನಿಮ್ಮ ಭ್ರಾತೃವಾತ್ಸಲ್ಯಕ್ಕಾಗಿ ಎಲ್ಲಾ ಕನ್ನಡಿಗರ ಪರವಾಗಿ ನಿಮ್ಮನ್ನು ಅಭಿನಂದಿಸುತ್ತೇನೆ….” ಹುಬ್ಬಳ್ಳಿಯನ್ನು ೧೯೩೩ರಲ್ಲಿ ಕನ್ನಡನಾಡಿನ ನಡುಭಾಗವೆಂದಿರುವುದನ್ನು ಗಮನಿಸಿದರೆ ೧೯೫೬ರಲ್ಲಿ ದಾವಣಗೆರೆಯನ್ನು ಕನ್ನಡನಾಡಿನ ನಡುಭಾಗ ಎನ್ನುವಾಗ ಏಕೀಕರಣಗೊಳ್ಳುವಾಗ ಕಳೆದುಕೊಂಡ ಕನ್ನಡದ ಭಾಗಗಳ ಅರಿವಿಗೆ ಬರುತ್ತದೆ. ಸಹಜವಾಗಿ ಹೇಳಿಕೊಂಡ ಅವರ ಮಾತುಗಳು ಚಾರಿತ್ರಿಕ ಗ್ರಹಿಕೆಯಾಗಿ ಗೋಚರಿಸುತ್ತಿರುವುದು ಇಲ್ಲಿ ಗಮನಸೆಳೆಯುತ್ತದೆ.

ಭಾಗ ಆರು

೧೯೪೦ – ೪೫ರ ಅವಧಿಗೆ ನಾಗೇಶಶಾಸ್ತ್ರಿಗಳು ಬೆಳಗಾವಿಯ ಮತ್ತು ಮದನಪಲ್ಲಿಯ ಹುದ್ದೆಗಳಿಂದ ಸ್ವಯಂ ನಿವೃತ್ತಿ ತಂದುಕೊಂಡರು. ಅದಕ್ಕೆ ಸಕಾರಣವಿತ್ತು. ಬೆಳಗಾವಿಯಂಥ ಅಕಿಮಲೆನಾಡು ಮರೆಮ್ಮನವರ ಆರೋಗ್ಯದ ಮೇಲೆಯೂ ಮದನಪಲ್ಲಿಯ ಅತಿಬಿಸಿಲಿನ ಪ್ರದೇಶ ಇಬ್ಬರ ಆರೋಗ್ಯದ ಮೇಲೆ ಪ್ರತಿಕೂಲಪರಿಣಾಮವನ್ನುಂಟು ಮಾಡಿತ್ತು. ಹೀಗಾಗಿ ಬಳ್ಳಾರಿಯ ಹೊರವಲಯದ ಒಂದು ಜಾಗ ಖರೀದಿ ಸ್ವಂತಮನೆ ಕಟ್ಟಿಸಿದರು. ದೇಶ ಸ್ವಾತಂತ್ಯ್ರದ ಕಡೆಗೆ ತಿರುಗುತ್ತಿದ್ದಂತೆ ದೇಶೀಯ ಸಂಸ್ಥಾನಗಳೊಂದಿಗಿನ ಒಡನಾಟವು ಸಾಕೆನಿಸಿತು. ಶಾಸ್ತ್ರಿಗಳು ಸ್ವತಃ ವೃತ್ತಿಯಿಂದ ನಿವೃತ್ತಿಯನ್ನು ಬಯಸಿದ್ದರು. ಆದರೆ ಸಾಹಿತ್ಯದ ಓದು, ರಚನೆಗಳಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿದ್ದರು. ಹೀಗಾಗಿ ಬಳ್ಳಾರಿಯ ಮನೆಯನ್ನು ಬಾಡಿಗೆಗೆ ಕೊಟ್ಟು ತಮ್ಮೂರು ಏಳುಬೆಂಚಿಯಲ್ಲಿ ರಲು ಬಯಸಿದ್ದರು. ಆದರೆ ಕಾಲ ಇದಕ್ಕೆ ಒಪ್ಪಿಗೆ ಕೊಡಲಿಲ್ಲ. ಇಲ್ಲಿಂದ ಅವರ ಬದುಕಿನ ಉತ್ತರಾರ್ಧದ ಮಹತ್ವದ ಘಟ್ಟ ಆರಂಭವಾಯಿತು.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಒಂದು ದೊಡ್ಡ ಹೆಜ್ಜೆಯನ್ನಿಡಲು ಪ್ರಯತ್ನಿಸಿತ್ತು. ಅದಕ್ಕೆ ಕಾರಣೀಭೂತರು ವೈ. ಮಹಾಬಲೇಶ್ವರಪ್ಪನವರು. ಸ್ವತಃ ಸಂಘದ ಅಧ್ಯಕ್ಷರಾಗಿದ್ದ ಅವರು ತಮಗಿದ್ದ ರಾಜಕೀಯ – ಸಾಮಾಜಿಕ ಪ್ರಭಾವಗಳನ್ನು ಬಳಸಿ ಪದವಿ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಿ, ೧೯೪೫ರಲ್ಲಿ ವೀರಶೈವ ಕಾಲೇಜ್‌ನ್ನು ಆರಂಭಿಸಿದರು. ಯಥಾರೀತಿ ವೈ. ನಾಗೇಶಶಾಸ್ತ್ರಿಗಳು ಆ ಕಾಲೇಜಿನ ಸ್ಥಾಪಕ ಕನ್ನಡ ಪ್ರಾಧ್ಯಾಪಕರು.

ಈ ಅವಧಿಯಲ್ಲಿ ಧಾರವಾಡ ಮುರುಘಮಠದ ಶ್ರೀ ಅಖಿಲ ಭಾರತ ಶಿವಾನುಭವ ಮೃತ್ಯುಂಜಯ ಮಹಾಸ್ವಾಮಿಗಳಲ್ಲಿ ಸಂಪರ್ಕ ಬಳ್ಳಾರಿಯೊಂದಿಗೆ ಆತ್ಮೀಯ ಭಕ್ತಿಗಳಿಂದ ಬೆರೆಯಿತು. ವಿಶೇಷವಾಗಿ ವೈ. ನಾಗೇಶಶಾಸ್ತ್ರಿಗಳು, ವೈ. ಮಹಾಬಲೇಶ್ವರಪ್ಪ, ಜೋಳದರಾಶಿ ದೊಡ್ಡನಗೌಡ ಮೊದಲಾದವರು ಮೊದಲ ಬಾಇಗೆ ಮಠದೊಂದಿಗೆ ಧಾರ್ಮಿಕ ಮನೋಭಾವದಿಂದ ಬೆರೆತರು. ವೈ. ನಾಗೇಶಶಾಸ್ತ್ರಿಗಳು ಈ ಕಾಲಾವಧಿಯಲ್ಲಿ ಪೂರ್ಣಪ್ರಮಾಣದಲ್ಲಿ ಧಾರ್ಮಿಕ ಸಾಹಿತ್ಯ ರಚನೆಯ ಕಡೆಗೆ ಹೆಚ್ಚು ಒತ್ತುಕೊಟ್ಟರು. ವಚನ ಸಾಹಿತ್ಯ, ವೀರಶೈವ ಧಾರ್ಮಿಕ ಗ್ರಂಥಗಳ ಅಧ್ಯಯನ ಈ ಕಾಲದಲ್ಲಿ ಅವರಿಂದ ನಡೆಯಿತು.

೧೯೪೨ರಲ್ಲಿ ಧಾರವಾಡದ ತಮ್ಮ ಮುರುಘಾಮಠದಲ್ಲಿ ಆರಂಭಿಸಿದ ಅಖಿಲಭಾರತ ಶಿವಾನುಭವ ಸಂಸ್ಥೆಗೆ ಶ್ರೀಮೃತ್ಯುಂಜಯ ಮಹಾಸ್ವಾಮಿಗಳು ಬಳ್ಳಾರಿಯ ಈ ಮೂರು ಜನ ಮಹನೀಯರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರು. ವೈ. ನಾಗೇಶಶಾಸ್ತ್ರಿಗಳು ಒಂದರ್ಥದಲ್ಲಿ ಮುರುಘಾಮಠಾದ ಶೈಕ್ಷಣಿಕ ಮಾರ್ಗದರ್ಶಕರಂತೇ ಇದ್ದರು. ೧೯೫೨ರಿಂದ ಶಿವಾನುಭವ ಸಂಸ್ಥೆಗೆ ಶಿವಾನುಭ ಪರೀಕ್ಷೆಗಾಗಿ ಪಠ್ಯಮಾದರಿಯ ಪುಸ್ತಕಗಳನ್ನು ಬರೆದುಕೊಡಲಾರಂಭಿಸಿದ್ದರು. ಅಷ್ಟಾವರಣ ವಿವೇಕ, ಪಂಚಾಚಾರ ಪ್ರಕಾಶಿಕೆ, ಷಟ್‌ಸ್ಥಲ ತತ್ತ್ವದರ್ಪಣ, ವೀರಶೈವಧರ್ಮ ಬೋಧಿಸಿ, ಇಷ್ಟಲಿಂಗೋಪಸನಾಕ್ರಮ, ಶಿವಯೋಗ, ಶಕ್ತಿ ವಿಶಿಷ್ಟಾಧ್ವೈತ ಸಿದ್ಧಾಂತ, ಶ್ರೀ ಬಸವಣ್ಣನವರ ವೀರಶೈವ ಸಮಾಜ, ಶ್ರೀ ಮುರುಘೇಂದ್ರ ಶಿವಯೋಗಿಗಳ ಸಹಜಾಚರಣೆ, ಈ ಕೃತಿಗಳನ್ನು ಬರೆದು ಮಠದ ಪ್ರಮುಖ ಸಂಪನ್ಮೂಲ ವ್ಯಕ್ತಿ ಎನಿಸಿದರು.

ಅಷ್ಟಾವರಣವಿವೇಕ ಕೃತಿಯ ಪ್ರಸ್ತಾವನೆಯಲ್ಲಿ “….ವೀರಶೈವ ಸಮಾಜದಲ್ಲಿ ಶುದ್ಧ ಸಂಪ್ರದಾಯಕ್ಕೆ ಷಟ್‌ ಸ್ಥಲಸಿದ್ಧಾಂತದ ಲಿಂಗಾಂಗ ಸಾಮರಸ್ಯಕ್ಕೆ ಪ್ರತಿಕೂಲವಾದ ಆಚಾರ – ವಿಚಾರಗಳು ಇತ್ತೀಚೆಗೆ ಪ್ರಬಲಗೊಳ್ಳುತ್ತಿರುವವು. ಇವುಗಳ ನಿವಾರಣೆಯಾಗಬೇಕು. ಶುದ್ಧ ಸಂಪ್ರದಾಯದ ಅನುಭವವನ್ನು ಸಮಾಜದಲ್ಲಿ ಬೆಳಕಿಗೆ ತರಬೇಕು ಎಂದ ಸದುದ್ದೇಶದಿಂದ ಅಖಿಲಭಾರತ ಶಿವಾನುಭವ ಸಂಸ್ಥೆಯು ಸ್ಥಾಪಿತವಾಗಿದೆ….” ಎಂದು ಕೃತಿರಚನೆಯ ಉದ್ದೇಶ ಮತ್ತು ಗೊಂದಲಗಳ ನಿವಾರಣೆ ಇವು ಶಾಸ್ತ್ರಿಗಳ ಮೇಲಿದ್ದ ಹೊಣೆಗಾರಿಕೆಯಾಗಿರುವುದರಿಂದ ಸಂಸ್ಥೆ ಮತ್ತು ಶಾಸ್ತ್ರಿಗಳ ನಡುವೆ ಒಂದು ಸ್ಪಷ್ಟವಾದ ಆತ್ಮವಿರ್ಶವಾಸ ಮೂಡಿರುವುದನ್ನು ಗಮನಿಸಬೇಕು. ಈ ಸಂಸ್ಥೆಗೆ ಬರೆದ ಶಾಸ್ತ್ರಿಗಳ ಪುಸ್ತಕಗಳನ್ನು ಶರಣತತ್ತ್ವ ಸಮಾಲೋಚನೆ ಬಯಸುವ ಎಲ್ಲರೂ ತತ್ತ್ವಕೃತಿಗಳಾಗಿ ಭಾವಿಸಿದ್ದರು.

ಅಖಿಲ ಭಾರತ ಶಿವಾನುಭವ ಸಂಸ್ಥೆ ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜನಯ ಮಹಾಸ್ವಾಮಿಗಳ ಪರಿಕಲ್ಪನೆ. ಅದು ಧಾರ್ಮಿಕ ತತ್ತ್ವಗಳ ಪ್ರಸಾರವಷ್ಟೇ ಅಲ್ಲ. ಧಾರ್ಮಿಕ ತತ್ವಾನುಷ್ಠಾನಗಳಲ್ಲಿ ಇದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು. ಸ್ವಾಮಿಗಳ ಅರಿಕೆಯಂತೆಯೇ ಅಥವಾ ಶಾಸ್ತ್ರಿಗಳು ಗ್ರಹಿಸಿದ ಸತ್ಯದ ಪ್ರಕಾರದಂತೆಯೇ ಅಷ್ಟಾದರೂ ವಿವೇಕ ಮೊದಲ ಕೃತಿಯಾಗಿ ಸ್ಪಷ್ಟ ತಿಳುವಳಿಕೆಯನ್ನು ಪ್ರಸಾರ ಮಾಡುವ ಕಾರ್ಯವನ್ನು ಮಾಡಿತು.

ವೀರಶೈವ ಸಮಾಜದ ಶುದ್ಧ ಸಂಪ್ರದಾಯ ಹೊರಡಿಸಿರುವುದೇ ಷಟ್‌ಸ್ಥಲ ಸಿದ್ಧಾಂತದಲ್ಲಿ ಈ ಷಟ್‌ಸ್ಥಲ ಸಿದ್ಧಾಂತ ಪ್ರತಿಪಾದಿಸುವ ಲಿಂಗಾಂಗ ಸಾಮರಸ್ಯವು ಶಿವಾರಾಧನೆಯ ಮತ್ತೊಂದು ಪಂಥದ ಭಿನ್ನಗ್ರಹಿಕೆಯ, ಪ್ರಭಾವ ವಿಲೀನಗಳಿಂದ ಆದ ಪ್ರತಿಕೂಲತೆಯನ್ನು ಶಾಸ್ತ್ರಿಗಳು ಗ್ರಹಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಷಟ್‌ಸ್ಥಲತತ್ತ್ವಾನುಭವವು ಸಮಾಜಮುಖಿಯಾದುದು. ಬಸವಾದಿ ಪ್ರಥಮರು ಅದನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ ಫಲವಾಗಿ ಮುಕ್ತಸಮಾಜದ ನಿರ್ಮಾಣಕ್ಕೆ ಅದು ಕಾರಣವಾಗಿದೆ ಎಂಬುದು ಈ ಅಂಶಗಳನ್ನು ಶಾಸ್ತ್ರಿಗಳು ಇಲ್ಲಿ ಗ್ರಹಿಸಿದ್ದಾರೆ.

ವೈ. ನಾಗೇಶ ಶಾಸ್ತ್ರಿಗಳ ಧಾರ್ಮಿಕ ಸಾಹಿತ್ಯರಚನೆಯ ಕಾಲಘಟ್ಟವು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಪ್ರಮುಖ ಗೊಂದಲ ದ್ವಂದ್ವಗಳನ್ನು ಕೈಗೆತ್ತಿಕೊಂಡು ಪರಿಹರಿಸಲು ಯತ್ನಿಸಿತು. ಹಾಗೇ ನೋಡಿದರೆ, ಈ ಕಾಲಘಟ್ಟದ ನಾಗೇಶಶಾಸ್ತ್ರಿಗಳು ತಮ್ಮ ರಚನಾಶೀಲ ವ್ಯಕ್ತಿತ್ವದ ಮತ್ತೊಂದು ಮುಖವನ್ನೇ ದರ್ಶನ ಮಾಡಿಸುತ್ತಾರೆ.

ವೈ. ನಾಗೇಶಶಾಸ್ತ್ರಿಗಳು ಧಾರ್ಮಿಕ ಸಾಹಿತ್ಯ ರಚನೆಗೆ ತಮ್ಮನ್ನು ಒಡ್ಡಿಕೊಳ್ಳುವ ಸಂದರ್ಭದಲ್ಲಿಯೆ ಪುರಾಣ ರಚನೆಗಳಿಗೂ ಕೈಹಾಕಿದರು. ೧೯೪೫ರಿಂದ ೧೯೬೫ರವರೆಗಿನ ಅವರ ಸೃಷ್ಟಿಶೀಲ ಪ್ರಕ್ರಿಯೆಯು ಅವರ ಬದುಕಿನ ಸುವರ್ಣಯುಗಎನ್ನಬೇಕು. ಈ ಅವಧಿಯಲ್ಲಿ ಮುಖ್ಯವಾಗಿ ಹದಿನಾಲ್ಕು ಪುರಾಣಗಳನ್ನು ಬರೆದರು. ತಮ್ಮ ಪರಿಸರದ ಪುಣ್ಯಪುರುಷರನ್ನು ಪೌರಾಣಿಕ ಚೌಕಟ್ಟಿನಲ್ಲಿ ಚಿತ್ರಿಸಿದ್ದು ಕಾಲಧರ್ಮದ ಹಿನ್ನೆಲೆಯಲ್ಲಿ ಯಥೋಚಿತವಾಗಿದೆ.

ಶಾಸ್ತ್ರಿಗಳು ರಚಿಸಿದ ಪುರಾಣಗಳು ‘ಇತಿಹಾಸದ ಪುರುಷರನ್ನು ವೈಭವೀಕರಿಸಿದರು’ ಎಂಬ ಆಧುನಿಕ ಸಾಹಿತ್ಯಕ ಮಾನದಂಡ ಹೇಳುವ ದೋಷಾರೋಪಣೆಯೊಂದನ್ನು ಹೊರತು ಪಡಿಸಿದರೆ, ಈ ಕಾರ್ಯ ಕಾಲಧರ್ಮದ ಅವಶ್ಯಕತೆಯ ಪೂರೈಕೆ ಎಂಬ ಹಿನ್ನೆಲೆಯಲ್ಲಿ ಕ್ರಮಬದ್ಧ ಎನಿಸುತ್ತದೆ. ಇತಿಹಾಸ ಘಟನೆಯೊಂದರ ವಾಸ್ತವಿಕ ಸತ್ಯವನ್ನು ಪ್ರಸ್ತುತ ಪಡಿಸಿದರೆ, ಪುರಾಣ, ಆ ಘಟನೆಯ ಭಾವುಕ ಸತ್ವವನ್ನು ವಿಸ್ತರಿಸುತ್ತದೆ. ಶಾಸ್ತ್ರಿಗಳು ತಮ್ಮ ಮನೋಭಾವಕ್ಕೆ ಮತ್ತು ಕಾಲಗುಣಕ್ಕೆ ಅನುಸರಿಸಿ ಭಾವುಕ ಸತ್ಯವನ್ನು ಪ್ರಕಟಪಡಿಸಿದ್ದರು. ಇಪ್ಪತ್ತನೆಯ ಶತಮಾನದ ಪ್ರಭಾವಿ ಸೃಷ್ಟಿಶೀಲ ಕ್ರಿಯೆಗಳಲ್ಲೊಂದಾದ ಸಾಹಿತ್ಯರಚನಾ ಪರಂಪರೆಯನ್ನು ಅವಲೋಕಿಸುವತ್ತ ಕೆಲಸ ಮಾಡಿದ್ದುದು ಆಧುನಿಕತೆ ಎದುರಾಗಿ ಸ್ಥಿತ್ಯಂತರಗೊಳ್ಳುತ್ತಿದ್ದ ಸಂದರ್ಭದಲ್ಲಿ ಉಚಿತವಾಗಿದೆ. ಶಾಸ್ತ್ರಿಗಳು ಬರೆದ ಪುರಾಣಗಳ ನಾಯಕರು ವೀರಶೈವರಾದ್ದುದು ಒಂದು ನೆಪ ಅಷ್ಟೇ. ಆದರೆ ಅದು ವ್ಯಾವಹಾರಿಕ ಮತ್ತು ಸಾಮಾಜಿಕ ಗ್ರಹಿಕೆಗಾಗಿ ಮಾತ್ರ. ಶಾಸ್ತ್ರಿಗಳು ಚಿತ್ರಿಸಿರುವುದು ಶರಣರ, ಅವಧೂತರ ಬದುಕಿನ ಕಥೆ. ಈ ಕಥೆ ಕಲಾಂತರದಲ್ಲಿ ಭೌತಿಕತೆಯನ್ನು ಲೌಕಿಕತೆಯನ್ನು ನಂಬಿಕೊಂಡು ಬದುಕುತ್ತಿರುವ ಸಾಮಾಜಿಕನಿಗೆ ಅದ್ಭುತ ಎನಿಸದಿರದು. ಅವರ ಬದುಕಿನ ವಿಧಾನವೂ ಹುಚ್ಚುತನವಾಗಿ ಕಾಣುವುದು. ಸಹಜವೇ. ಯಾವುದನ್ನು ಅವಧೂತ ನಂಬಿರುತ್ತಾನೋ ಅದು ಲೌಕಿಕರಿಗೆ ಕಾಣುವುದಿಲ್ಲ. ಅದರ ಸೂಕ್ಷ್ಮಗಳ ಅರ್ಥವೂ ಆಗುವುದಿಲ್ಲ. ಆತನ ಪರಿಭಾವನೆಯೇ ಬೇರೆ ಪರಿಭಾಷೆಯೇ ಬೇರೆ. ಕುತೂಹಲವೆಂದರೆ ಆತ ಸಾಮಾಜಿಕನಾಗಿದ್ದರೂ ಸಾಮಾಜಿಕನೆಂಬಂತೆ ತನ್ನನ್ನು ಗುರುತಿಸಿಕೊಳ್ಳದೇ ಇರುವುದು. ಆತನನ್ನು ಸಮಾಜದ ಯಾವುದೇ ವಾಸ್ತವದೊಂದಿಗೆ ಗುರುತಿಸಲಾಗದೇ ಇರುವುದು. ಸಾಮಾಜಿಕನಾಗುವವನ ಚರಿತ್ರೆ ಒಬ್ಬನಿಂದ ಒಬ್ಬನಿಗೆ ಭಿನ್ನವಾಗಿರುತ್ತದೆ ಅಥವಾ ಭಿನ್ನವಾಗುತ್ತಾ ಹೋಗುತ್ತದೆ. ಆದರೆ ಶರಣರ, ಅವಧೂರ ಚರಿತ್ರೆ ಹಾಗಲ್ಲ. ಬಹುತೇಕ ಅವಧೂತರ ಚರಿತ್ರೆ ಒಂದು ನಿರ್ದಿಷ್ಟ ಸೂತ್ರಕ್ಕೆ ಗೃಹೀತವಾಗಿರುತ್ತದೆ. ಚೇಳಗುರ್ಕಿಯ ಏರಿತಾತ, ಅಲ್ಲೀಪುರದ ಮಹಾದೇವ ತಾತ, ಹಿರೇಹಾಳಿನ ಗವಿಸಿದ್ಧ, ಕೊಪ್ಪಳದ ಗವಿಸಿದ್ಧ, ಇಂಥವರನ್ನು ಕಾಲದೇಶ ಭಾಷೆಗಳಲ್ಲಿ ಔಪಚಾರಿಕವಾಗಿ ಹಿಡಿದಿಡಬಹುದು. ಆದರೆ ಇಂಥವರು ಒಂದೇ ಸೂತ್ರದಲ್ಲಿ ಲಭ್ಯವಾಗುತ್ತಿರುವುದು ಎದ್ದು ಕಾಣುತ್ತದೆ. (ಮರಿಸ್ವಾಮಿಗಳ ಬಗ್ಗೆ ಶಾಸ್ತ್ರಿಗಳು ಬರೆದಿರುವ ಲೇಖನ ಮತ್ತು ಪುರಾಣಗಳಲ್ಲಿ ಇದು ಸ್ಪಷ್ಟವಾಗಿದೆ) ಆದರೆ ಇವರನ್ನು ಕುರಿತ ಸಾಹಿತ್ಯ ಒಂದಷ್ಟು ಅವರ ಬದುಕಿನ ವಿವರ, ಬದುಕಿನ ಸಾರದ ಗ್ರಹಿಕೆ, ಗೂಢವಾಗುತ್ತ ಹೋಗುತ್ತದೆ. ಕಾಲ ಹೆಚ್ಚು ಲೌಕಿಕವಾಗುತ್ತಾ ನಡೆದಿರುವುದು. ಇದಕ್ಕೆ ಒಂದು ಕಾರಣವೂ ಇರಬಹುದು. ಶಾಸ್ತ್ರಿಗಳು ಧಾರ್ಮಿಕತೆಯನ್ನು ಗಾಢವಾಗಿ ನಂಬಿಕೊಂಡ ಈ ದೇಶದಲ್ಲಿ ಆಧುನಿಕತೆಯನ್ನು ಸ್ವೀಕರಿಸುವ ಬಗೆಯಲ್ಲಿ ಅಭಿವೃದ್ಧಿ ಮುಖ್ಯವಾಗಿ ಬದಲಾಗಬಾರದು ಬದುಕಿನ ವಿಧಾನದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಹೀಗಾಗಿ ಅವರು ಪುರಾಣಗಳ ಮೂಲಕ ಇತಿಹಾಸವನ್ನು ಪುರಾಣಗೊಳಿಸುತ್ತಿದ್ದಾರೆ ಎಂಬುದಕ್ಕಿಂತ ಸತ್ಯವನ್ನು ಭಾವುಕ ನೆಲೆಯಲ್ಲಿ ಕಂಡು ಭೂತದ ಸ್ಮರಣೆಯಲ್ಲಿ ವರ್ತಮಾನವನ್ನು ಬದುಕುತ್ತಿರಬೇಕೆಂಬ ಆಶಯ ಹೊಂದಿದ್ದಾರೆ. ಎನ್ನಲೂಬಹುದು.

ಈ ಹಿನ್ನಲೆಯಲ್ಲಿ ಶಾಸ್ತ್ರಿಗಳು ಬರೆದ ಹದಿನಾಲ್ಕು ಪುರಾಣಗಳು ಮಹತ್ವದ ರಚನೆಗಳಾಗುತ್ತವೆ.

ಭಾಗ ಏಳು

ನಿರಂತರವಾದ ಓದುಗಾರಿಕೆ, ಬರವಣಿಗೆ ಇವುಗಳಲ್ಲಿ ತೊಡಗಿಸಿಕೊಂಡಿದ್ದ ನಾಗೇಶಶಾಸ್ತ್ರಿಗಳು ಪೀಳಿಗೆಗಳು ಬದಲಾದರೂ ಕಾಲಬದಲಾಗಿ ತಾವು ನೇಪಥ್ಯದಲ್ಲಿರಬೇಕಾಗಿ ಬಂದರೂ ತಮ್ಮೊಡನಿದ್ದ ಹಿರಿಯರು, ಸ್ನೇಹಿತರು, ಕಿರಿಯರು, ಆಪ್ತರು ಕಣ್ಣ ಮುಂದೆಯೇ ಮರೆಯಾದರೂ ತಾವು ತುಂಬು ನಿರ್ಲಪ್ತತೆಯನ್ನು ತಾಳಿ ಬರೆಯುವ ಓದುವ ಕ್ರಿಯೆಯಲ್ಲಿ ಬದುಕುಸಾಗಿಸಿದರು.

೧೯೫೬ರಲ್ಲಿ ಶಾಸ್ತ್ರಿಗಳಿಗೆ ಬಳ್ಳಾರಿಯ ಸಮಸ್ತ ಜನತೆಯ ಪರವಾಗಿ ಷಷ್ದ್ಯಬ್ದ ಕಾರ್ಯಕ್ರಮದಲ್ಲಿ ‘ನಾಗೇಶ ಕವಿ ಪ್ರಶಸ್ತಿ’ ಎಂಬ ಅಭಿನಂದನಾ ಗ್ರಂಥ ಸಲ್ಲಿಸಿದ್ದು ನಾಡಿಗಾಗಿ ದುಡಿದ ಕವಿಗೆ ಸಲ್ಲಿಸಿದ ಸಾಂಕೇತಿಕ ಋಣಸಂದಾಯ..‘ನಾಗೇಶ ಕವಿ ಪ್ರಶಸ್ತಿ’ ಗ್ರಂಥ ಕಾರ್ಯದಲ್ಲಿ ಶಿ.ವ.ಚನ್ನಬಸವೇಶ್ವರ, ಭಾಸ್ಕರಾಚಾರ್ಯ ರಾಮಚಂದ್ರಸ್ವಾಮಿ, ಜೋಳದರಾಶಿ ದೊಡ್ಡನಗೌಡ ದುಡಿದಿದ್ದರು. ೧೨.೦೯.೧೯೫೬ರಲ್ಲಿ ಪ್ರಭಾತ ಚಿತ್ರಮಂದಿರದಲ್ಲಿ ನಡೆದ ಸಮಾರಂಭದ ದಿವ್ಯಸಾನಿಧ್ಯವನ್ನು ಧಾರವಾಡ ಮುರುಘಾಮಠದ ಶ್ರೀಮೃತ್ಯಂಜಯ ಮಹಾಸ್ವಾಮಿಗಳು ವಹಿಸಿದ್ದರು. ಜಿಲ್ಲಾ ನ್ಯಾಯಾಧೀಶರಾದ ಕೆ. ಗುಬ್ಬಯ್ಯನವರು ಅಧ್ಯಕ್ಷತೆಯಲ್ಲಿ ನಾಡಿನ ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಂಜೆಯ ಕಾರ್ಯಕ್ರಮವು ಮೈಸೂರು ರಾಜ್ಯದ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಜಿ. ಪರಮಶಿವಯ್ಯನವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು. ಅಭಿನಂದನಗ್ರಂಥದ ಧನ ಸಹಾಯವನ್ನು ವೈ. ಮಹಾಬಲೇಶ್ವರನವರು ವಹಿಸಿದ್ದರು.

೧೯೬೪ರಲ್ಲಿ ಚಿತ್ರದುರ್ಗ ಚಿನ್ಮೂಲಾದ್ರಿ ಬ್ರಹನ್ಮಠದ ಶ್ರೀ ಜಯವಿಭವ ಮಹಾಸ್ವಾಮಿಗಳು ಮತ್ತು ಕೆಲವೇ ತಿಂಗಳುಗಳ ಅಂತರದಲ್ಲಿ ಧಾರವಾಡ ಮುರುಘಾಮಠದ ಶ್ರೀಮೃತ್ಯಂಜಯ ಮಹಾಸ್ವಾಮಿಗಳು ಲಿಂಗೈಕ್ಯರಾದರು. ಎರಡನೇ ಶಿವಾನುಭವ ಕೇಂದ್ರದಂತಿದ್ದ ಬಳ್ಳಾರಿ ಮತ್ತು ಬಳ್ಳಾರಿಯ ವೈ. ನಾಗೇಶಶಾಸ್ತ್ರಿ ವೈ. ಮಹಾಬಲೇಶ್ವರಪ್ಪ, ಜೋಳದ ರಾಶಿ ದೊಡ್ಡನಗೌಡ ತಮ್ಮ ಅಂತಃಶಕ್ತಿಯನ್ನು ಕಳೆದುಕೊಂಡಂತಾದರು.

ಶಾಸ್ತ್ರಿಗಳ ಬದುಕಿನ ಮಧ್ಯದಲ್ಲಿ ಆಗಮಿಸಿದ ಧಾರವಾಡದ ಶ್ರೀ ಮೃತ್ಯಂಜಯ ಮಹಾಸ್ವಾಮಿಗಳು ‘ಜೀವಧಾತು’ವಿನಂತೆ ಶಾಸ್ತ್ರಿಗಳಲ್ಲಿ ಬೇರೂರಿದ್ದರು. ಶಾಸ್ತ್ರಿಗಳಿಗೆ ದೈವಿಕ ಗುಣ, ಧಾರ್ಮಿಕ ವ್ಯಕ್ತಿತ್ವವನ್ನು ಸಾರ್ವಜನಿಕರು ಕಂಡುಕೊಂಡಿದ್ದೇ ಬಹುಶಃ ಈ ಕಾರಣದಿಂದ.

ಪತ್ನಿ ಅವರ ಕಣ್ಣುದುರಿಗೆ ತೀರಿಕೊಂಡದ್ದು ಸಂತಾನವಿರದ ಶಾಸ್ತ್ರಿಗಳಿಗೆ ಅಂತರ್ಮುಖಿಯಾಗಿ ತುಂಬು ನಿರ್ಲಿಪ್ತತೆಯಲ್ಲಿರಬೇಕಾದೊಂದೇ ಮಾರ್ಗವೆನಿಸಿತು. ‘ನೀವೇನೂ ಬಹುದಿವಸ ಬದುಕೋದಿಲ್ಲ. ನಾನು ಹೋದ ಮೇಲೆ ಎರಡು ವರುಷದಲ್ಲಿ ಬರುತ್ತೀರಿ’ ಎಂದು ತಮ್ಮ ಪತ್ನಿ ಮರೆಮ್ಮನವರು ಹೇಳಿದ ಮಾತು ಅವರ ಮನಸ್ಸಿನಲ್ಲಿ ಸದಾ ಅನುರಣಿಸಿದಂತಿತ್ತು.

ವೈ. ನಾಗೇಶಾಸ್ತ್ರಿಗಳ ಮೂಲಸ್ಥಾಯಿಯಾಗಿದ್ದ ಮುಗ್ಧತೆಯು ಮತ್ತು ನಿರ್ಲಿಪ್ತೆಯು ಅವರ ಬದುಕಿನ ಕೊನೆಯದಿನಗಳಲ್ಲಿ ಘನೀಕೃತಗೊಂಡದ್ದು ಅಚ್ಚರಿಯೇನೂ ಹೀಗಾಗಿ ತಮ್ಮ ಅಂತಿಮ ದಿನಗಳಲ್ಲಿ ಯಥೋಚಿತವಾಗಿ ೧೯೭೪ (ಮಾರ್ಚ ೧೮)ನಲ್ಲಿ ಅಂತಿಮ ಉಯಿಲನ್ನು ಬರೆದು ತಮ್ಮ ಮನೆ ‘ಶ್ರೀಮೃತ್ಯಂಜಯ ಶಿವಾನುಭವ ಕುಟೀರ’ವನ್ನು ಮುಖ್ಯ ಹೊಣೆಗಾರಿಕೆಗೆ ಶ್ರೀಮುರುಘಾಮಠಕ್ಕೆ ವಹಿಸಿಕೊಟ್ಟರು.

ಅಂತಿಮವಾಗಿ ಮೇ ತಿಂಗಳ ಹದಿನಾಲ್ಕನೇ ದಿನದ ೧೯೭೫ರಂದು ವೈ.ನಾಗೇಶ ಶಾಸ್ತ್ರಿಗಳು ಮರೆಯಾದರು. ಉಯಿಲಿನಂತೆ ಅಚ್ಚುಪ್ಪ, ಸೋಮಪ್ಪ, ಅಯ್ಯಪ್ಪಶಾಸ್ತ್ರಿ, ಸಂಡೂರಿನ ಗೊಗ್ಗಬಸಯ್ಯ, ಜೋಳದರಾಶಿ ದೊಡ್ಡನಗೌಡ, ತೊಗರಿ ವೀರಭದ್ರಪ್ಪ, ರಾಯದುರ್ಗ ಭದ್ರಪ್ಪ, ಜೆ.ಎಂ. ಪಂಪಾವತಿ, ಬಿ. ದೊಡ್ಡ ಎರ್ರಪ್ಪ ಮೃತ್ಯುಂಜಯ ಶಿವಾನುಭವ ಕುಟೀರವನ್ನು ಸಾಂಸ್ಕೃತಿಕ – ಧಾರ್ಮಿಕ ಚಟುವಟಿಕೆಗಳ ಸುಪ್ತಕೇಂದ್ರವಾಗಿರಿಸಿದರು.

ಅಲ್ಲಿಗೆ ವೈ. ನಾಗೇಶಶಾಸ್ತ್ರಿಗಳು ಇತಿಹಾಸ ಸೇರಿಹೋದರು. ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದೇ, ಶಿಕ್ಷಕರಾಗಿ, ಅಧ್ಯಾಪಕರಾಗಿ, ಉನ್ನತ ಪದವೀಧರರಾಗಿ, ಎರಡು ರಾಜಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಬಳ್ಳಾರಿಯಂಥ ಭಾಷಿಕ ಗೊಂದಲ ಉದ್ವಿಗ್ನಗಳ ಸ್ಥಳದಲ್ಲಿದ್ದೂ ಕನ್ನಡ ಪ್ರಜ್ಞೆಯ ಸಾಂಕೇತಿಕ ಮಾನದಂಡವಾಗಿ ಮೆರೆದದ್ದು ಮಾತ್ರ ಕವಿ – ಸಾಹಿತ್ಯ – ನಾಡು ಇವುಗಳಿಗೆ ಸಂಬಂಧಿಸಿದಂತೆ ಮಹತ್ವದ ವಿಚಾರವೂ ಆಗಿದೆ.