Categories
ಬಯಲಾಟ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವೈ. ಮಲ್ಲಪ್ಪ ಗವಾಯಿ

ಜಾನಪದ ದೊಡ್ಡಾಟದ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿ ಹಿರಿಮೆ ಮೆರೆದವರು ವೈ. ಮಲ್ಲಪ್ಪ ಗವಾಯಿ, ಗಾಯಕರು, ಪಕ್ಕವಾದ್ಯಗಾರರಾಗಿ ಅವರದ್ದು ಮಾದರಿ ಕಲಾಸೇವೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತಿಪ್ಪೆಗುಂಡಿಯವರ ಓಣಿಯಲ್ಲಿ ೧೯೫೫ರ ಜನವರಿ ಒಂದರಂದು ಜನಿಸಿದ ವೈ.ಮಲ್ಲಪ್ಪ ಗವಾಯಿ ಅವರಿಗೆ ಕಲೆ ಪರಂಪಾರಗತ. ತಂದೆ ರುದ್ರಪ್ಪ ಬಾಲ್ಯದಲ್ಲೇ ಬಯಲಾಟ ಕಲೆಯ ಮೋಹಿತರಾದ ಮಲ್ಲಪ್ಪ ಅದನ್ನೇ ಬದುಕಿನ ಬುತ್ತಿ, ಸಾಧನೆಯ ಪ್ರವೃತ್ತಿಯಾಗಿಸಿಕೊಂಡವರು. ಬಯಲಾಟದ ಕಲಾವಿದರಾಗಿ, ದೊಡ್ಡಾಟದ ಗಾಯಕರಾಗಿ ಅವರದ್ದು ಅನುಪಮ ಸೇವೆ. ಎರಡೂವರೆ ದಶಕಕ್ಕೂ ಮೀರಿದ ಅವಧಿಯಿಂದಲೂ ಬಯಲಾಟದ ಪ್ರದರ್ಶನವನ್ನು ನೀಡುತ್ತಾ ಆ ಕಲಾಪ್ರಕಾರದ ಏಳೆಗೆ ಶ್ರಮಿಸುತ್ತಿರುವ ಕಲಾವಿದರು. ಹಂಪಿ ಉತ್ಸವ, ಮೈಸೂರು ದಸರಾ, ಹೊಸಪೇಟೆಯ ಆಕಾಶವಾಣಿಯಲ್ಲಿ ಜಾನಪದ ಸಿರಿ, ದೊಡ್ಡಾಟದ ಹಾಡುಗಳು, ರಂಗಗೀತೆಗಳನ್ನು ಪ್ರಸ್ತುತಪಡಿಸುತ್ತಾ ಬಂದಿರುವುದು ಕಲಾಪಯಣದ ಹೆಗ್ಗುರುತು. ಹಾರೋನಿಯಂ, ತಬಲ ಮತ್ತು ಮೃದುಂಗ ನುಡಿಸುವಲ್ಲಿಯೂ ನಿಷ್ಣಾತರು. ಸೋಗಿಯ ಶ್ರೀ ವೀರೇಶ್ವರ ಜಾನಪದ ದೊಡ್ಡಾಟ ಸಂಘದ ಸದಸ್ಯ ಕಾರ್ಯದರ್ಶಿ, ಇದೀಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಪ್ಪ ಗವಾಯಿ ಬಯಲಾಟ ಕ್ಷೇತ್ರವನ್ನು ಸಂಪನ್ನಗೊಳಿಸಿದ ಕಲಾಚೇತನ.