ಭಾರತ ದೇಶದ ಸುಂದರ ನಿರ್ಮಲ ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅದರದ್ದೇ ವಿಶಿಷ್ಟವಾದ ಸ್ಥಾನ ಪ್ರಾಪ್ತವಾಗಿದೆ. ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಜನರು ನೀಡಿದ ದೇಣಿಗೆ ಬಹಳಷ್ಟಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಜಿಲ್ಲೆಯ ಮಹಿಳೆಯರು, ಪುರುಷರು ವಿವಿಧ ಸೇವೆಗಳನ್ನು ಕಾಯಾ ವಾಚಾ ಮನಸಾ ನೀಡಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಅದು ಸಹಕಾರ ಕ್ಷೇತ್ರವೇ ಇರಲಿ ಅಥವಾ ದಲಿತರ ದೇವಳ ಪ್ರವೇಶ ಚಳವಳವೇ ಇರಲಿ, ಸರ್ವ ಚಳವಳಗಳಲ್ಲಿಯೂ ಜಿಲ್ಲೆಯ ನೇತಾರರು ಮುಂಚೂಣಿಯಲ್ಲಿದ್ದು ತಮ್ಮ ಶಕ್ತಿ ಸರ್ವಸ್ವಗಳನ್ನು ತಾವು ನಂಬಿದ ತತ್ವಾದರ್ಶಗಳಿಗೆ ಅರ್ಪಿಸಿ, ಮಹಾತ್ಮಾ ಗಾಂಧೀ, ಪಂಡಿತ ಜವಾಹರಲಾಲ ನೆಹರೂ, ಸರದಾರ ವಲ್ಲಭಬಾಯಿ ಪಟೇಲರಂತಹ ಮಹಾನ್ ನಾಯಕರ ದೃಷ್ಟಿಯಲ್ಲಿ ಉತ್ತಮ ಕ್ರಿಯಾಶೀಲ ನಾಯಕರಾಗಿಯೇ ಉಳಿದಿದ್ದರು ಮತ್ತು ದೇಶದ ಚರಿತ್ರೆಯಲ್ಲಿ ಅವರ ಹೆಸರುಗಳು ಅಜರಾಮವಾಗಿ ಇರುವಂತಾಗಿದೆ.

ಭಾರತ ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ದೊರೆತ ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತ ದೇಶ ವನ್ನು ಬಲಿಷ್ಠವಾಗಿ ಕಟ್ಟುವ ದಿಶೆಯಲ್ಲಿ ಮಹತ್ತರವಾದ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕಿಳಿಸಿದವರು ಮಹಾನ್ ರಾಜಕೀಯ ಪುಢಾರಿ ದಿ. ಉಳ್ಳಾಲ ಶ್ರೀನಿವಾಸ ಮಲ್ಯರು. ಉತ್ತರ ಹಿಂದೂಸ್ಥಾನದ ಮುಖಂಡರು ಅವರನ್ನು ಮಲ್ಲಯ್ಯ ಅಂತ ಕರೆಯುತ್ತಿದ್ದರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನ ಅವರನ್ನು ಶೀನಪ್ಪ ಮಲ್ಯಾ ಅಥವಾ ಶೀನಪ್ಪ ಮಲ್ಯೆರ ಎಂದೇ ಗುರುತಿಸುತ್ತಿದ್ದರು.

ಶ್ರೀನಿವಾಸ ಮಲ್ಯರು 1902 ಇಸವಿ ನವಂಬರ 21ರಂದು ಜಿಲ್ಲೆಯ ಹೆಸರಾಂತ ಉಳ್ಳಾಲ ಮಲ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ ಉಳ್ಳಾಲ ಮಂಜುನಾಥ ಮಲ್ಯ ಮತ್ತು ತಾಯಿ ಸರಸ್ವತಿ ಯಾನೆ ರುಕ್ಮಾಬಾಯಿ. ಹಿರಿಯ ಅಣ್ಣ ಮಾಧವ ಮಲ್ಯ, ಇನ್ನೊಬ್ಬ ತಮ್ಮ ಜಿಲ್ಲೆಯ ಹೆಸರಾಂತ ಸಾಮಾಜಿಕ ಮುಂದಾಳು ಡಾ. ಉಳ್ಳಾಲ ಪದ್ಮನಾಭ ಮಲ್ಯ (ಮಂಗಳೂರಿನ ರಥಬೀದಿಯ ಒಂದು ರಸ್ತೆಗೆ ಇವರ ಹೆಸರನ್ನು ಇಟ್ಟಿದ್ದಾರೆ). ಶ್ರೀಮತಿ ಭಾಮಿ ಸಂಜೀವಿ ಪಾಂಡುರಂಗ ಶೆಣೈ ಮತ್ತು ಉಪ್ಪಿನಂಗಡಿ ಶ್ರೀಮತಿ ಲಕ್ಷ್ಮೀ ನರಸಿಂಹ ಭಟ್ಟ ಇವರ ತಂಗಿಯರು.

ಸಾತ್ವಿಕ ಮತ್ತು ಸಂಪ್ರದಾಯ ಬದ್ಧ ವ್ಯಾಪಾರೀ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಮಲ್ಯರು, ಹಿರಿಯರ ಮಾರ್ಗದರ್ಶನದಲ್ಲಿ ಓರ್ವ ದೈವಭಕ್ತ ಮತ್ತು ದೇಶಭಕ್ತರಾಗಿ ಬೆಳೆದು ಬಂದರು. ತ್ಯಾಗ ಬುದ್ಧಿ, ನಿಸ್ವಾರ್ಥ ಭಾವನೆಗಳ ಸಮ್ಮಿಲನ ಇವರಲ್ಲಿ ಎಳೆಯ ಪ್ರಾಯ ದಿಂದಲೇ ಬೆಳೆದು ಬಂದವೆಂದು ಹೇಳಬಹುದು. ಮಲ್ಯರು ಇನ್ನೂ ಯುವಕರಿರುವಾಗಿ ನಿಂದಲೇ ಮಹಾತ್ಮ ಗಾಂಧೀಜಿಯವರ ಪ್ರಭಾವಲಯದಲ್ಲಿ ಬಂದು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳತೊಡಗಿದರೆಂದು ಕಾಣುತ್ತದೆ. ಅವರು ಮುಂದೆ ತಮ್ಮ ಜೀವನದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ತತ್ವ ಮತ್ತು ಆದರ್ಶಗಳ ನೆರಳಿನಲ್ಲಿ ಮುನ್ನಡೆದರು.

ಶಿಕ್ಷಣ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿವರೆಗೆ ಕಲಿತು, ಮುಂದಿನ ದರ್ಜೆಗಳನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿ ಮೆಟ್ರಿಕ್ ಪರೀಕ್ಷೆ ಪಾಸಾದರು. ಮತ್ತೆ ಮುಂದಿನ ಉಚ್ಚ ಶಿಕ್ಷಣಕ್ಕಾಗಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ (ಈಗ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು) ಅಂದಿನ ಇಂಟರ ಮಿಡಿಯಟ್ ಕ್ಲಾಸಿಗೆ ಸೇರ್ಪಡೆಗೊಂಡರು.

ಆದರೆ, ಕಾಲೇಜಿನ ಸಾಂಪ್ರದಾಯಿಕ ಶಿಕ್ಷಣಕ್ಕಿಂತಲೂ ಅವರ ಮನಸ್ಸು ರಾಷ್ಟ್ರದ ರಾಜಕೀಯ ಸ್ಥಿತಿಗತಿ ಅರ್ಥಾತ್ ಭಾರತ ಸ್ವಾತಂತ್ರ್ಯ ಚಳವಳಿಯತ್ತ ವಾಲಿತು ಮತ್ತು ಅವರ ಹೃದಯಕ್ಕೂ ಅದು ಹೆಚ್ಚೆಹೆಚ್ಚು ಹತ್ತಿರವಾಯಿತು.

ಬಾಲ್ಯ

ಶ್ರೀನಿವಾಸ ಮಲ್ಯರ ಕುಟುಂಬ ಅಂದರೆ ಮಲ್ಯರ ಕುಟುಂಬ, ಮಂಗಳೂರು ಆಸುಪಾಸುಗಳಲ್ಲಿ ದೈವಭಕ್ತಿ, ಗುರುಸೇವೆ ಮತ್ತು ದಾನಧರ್ಮಗಳಿಗೆ ಹೆಸರುವಾಸಿಯಾದ ಕುಟುಂಬ. ಮಂಗಳೂರು ಹಳೇ ಬಂದರಿನ ವ್ಯಾಪಾರ ವಹಿವಾಟುಗಳಲ್ಲಿ ಆ ಕಾಲದಲ್ಲಿ ಗೌಡ ಸಾರಸ್ವತರದ್ದೇ ಹೆಚ್ಚಿನ ಕಾರುಬಾರು. ಅಲ್ಲಿ ಉಳ್ಳಾಲ ಮಲ್ಯ ಕುಟುಂಬದವರ ಭಂಡಸಾಲೆಗಳೂ ಇದ್ದವು. ವ್ಯಾಪಾರ ವಹಿವಾಟುಗಳಿಂದ ಬಂದ ಶ್ರೀಮಂತಿಕೆಯಲ್ಲಿ ದಾನ ಧರ್ಮಗಳ ಪಾತ್ರವೂ ಇತ್ತು ಎಂದರೆ ಸುಳ್ಳಾಗಲಾರದು. ಅಂತಹ ಘನವಂತ ಕುಟುಂಬದಲ್ಲಿ ಹುಟ್ಟಿದ ಶ್ರೀನಿವಾಸ ಮಲ್ಯರು ಬಾಲ್ಯದಿಂದಲೇ ಜನಸಾಮಾನ್ಯರ ಬಗ್ಗೆ, ಬಡವರು ಭಿಕ್ಷುಕರ ಬಗ್ಗೆ ಕನಿಕರ ಕಾಳಜಿ ಬೆಳೆಸಿಕೊಂಡು ಬಂದಿದ್ದರೆಂದು ಕಾಣುತ್ತದೆ. ಇಂತಹ ಒಂದು ಉದಾಹರಣೆ ಇಲ್ಲಿ ಕೊಡಲಾಗಿದೆ.

ಶ್ರೀನಿವಾಸ ಮಲ್ಯರಿಗೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹೋಗುವಾಗ, ಚಿಲ್ಲರೆ ಖರ್ಚು ಗಳಿಗಾಗಿ ಪಾಕೇಟ ಮನಿಯಾಗಿ ಎರಡು ರೂಪಾಯಿ (ಆಗಿನ ಕಾಲದಲ್ಲಿ ಅದು ಅತೀ ದೊಡ್ಡ ಹಣವೇ ಸರಿ) ತಂದೆ ತಾಯಿಗಳಿಂದ ಸಿಗುತ್ತಲಿತ್ತು. ಅವರೊಟ್ಟಿಗೆ ಶಾಲೆಗೆ ಹೋಗುತ್ತಿದ್ದ ಇತರ ಶ್ರೀಮಂತ ವಿದ್ಯಾರ್ಥಿಗಳು ತಮಗೆ ಸಿಕ್ಕಿದ ಪಾಕೇಟ ಮನಿಯನ್ನು ಸ್ವಂತಕ್ಕೇ ಖರ್ಚು ಮಾಡುತ್ತಿದ್ದರು. ಆದರೆ ಶ್ರೀನಿವಾಸ ಮಲ್ಯರು ತನಗೆ ಪ್ರತೀ ತಿಂಗಳು ಸಿಗುತ್ತಲಿದ್ದ ಎರಡು ರೂಪಾಯಿಗಳಲ್ಲಿ ಒಂದು ರೂಪಾಯಿಯನ್ನು ಶಾಲೆಗೆ ಹೋಗುವ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಲಿದ್ದ ಬಡ ಕುರುಡನೊಬ್ಬನಿಗೆ ಪ್ರತೀ ತಿಂಗಳ ಐದನೇ ತಾರೀಕಿನಂದು ತಪ್ಪದೇ ಕೊಡುತ್ತಿದ್ದರಂತೆ. ಆ ಭಿಕ್ಷುಕ ತನ್ನ ಎದುರಿಗೆ ಇಟ್ಟಿದ್ದ ಡಬ್ಬಿಗೆ ಮಲ್ಯರು ಹಾಕುತ್ತಿದ್ದ ರೂಪಾಯಿಯ ಶಬ್ದ ಕೇಳುವಾಗ ಪಡುತ್ತಿದ್ದ ಸಂತೋಷ ಕಂಡು ಮಲ್ಯರು ತುಂಬಾ ಆನಂದಿಸುತ್ತಿದ್ದುದು ಅವರ ಸಹಪಾಠಿಗಳಿಂದ ತಿಳಿದುಬಂದಿದೆ. ಅಲ್ಲದೇ ಬಡಬಗ್ಗರ ಬಗ್ಗೆ, ಸಮಾಜದಲ್ಲಿ ನಿಕೃಷ್ಟ ಸ್ಥಿತಿಯಲ್ಲಿದ್ದ ಜನರ ಬಗ್ಗೆ ಅವರಲ್ಲಿ ವಿಶೇಷವಾದ ಕಾಳಜಿ ಇದ್ದುದು, ಮುಂದೆ ಅವರು ಗಾಂಧೀಜಿಯ ಹರಿಜನ ಉದ್ಧಾರದ ಯೋಜನೆಗಳಲ್ಲಿ ತೊಡಗಿಸಿ ಕೊಂಡದ್ದನ್ನು ನೋಡುವಾಗ ತಿಳಿದುಬರುತ್ತದೆ.

ಶ್ರೀನಿವಾಸ ಮಲ್ಯರು ತಮ್ಮ ಕಾಲೇಜು ವಿದ್ಯಾಭ್ಯಾಸದ ದಿವಸಗಳಲ್ಲೇ ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಸ್ಥೆ ಬೆಳೆಸಿಕೊಂಡರು. 1920ರಲ್ಲಿ ಮಹಾತ್ಮಾ ಗಾಂಧೀಜಿಯವರು ಮಂಗಳೂರಿಗೆ ಬಂದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಂಗಳೂರಿನ ಜನತೆಯ ಮುಂದೆ, ಸ್ವಾತಂತ್ರ್ಯ ಚಳವಳಿಯಲ್ಲಿ ದೇಶದ ಜನತೆ ವಹಿಸಬೇಕಾದ ಪಾತ್ರ, ಅಹಿಂಸಾತ್ಮಕ ಚಳವಳಿ, ಹರಿಜನೋದ್ಧಾರ, ಹರಿಜನರಿಗೆ ದೇವಳಗಳಲ್ಲಿ ಪ್ರವೇಶ, ಖಾದಿ – ಚರಕಗಳ ಬಗ್ಗೆ ಕೊಟ್ಟ ಸಂದೇಶಗಳಿಂದ ಶ್ರೀನಿವಾಸ ಮಲ್ಯರು ಪ್ರಭಾವಿತರಾದರು. ತನ್ನ 18ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಓರ್ವ ಸ್ವಯಂಸೇವಕನಾಗಿ ಧುಮುಕುವ ನಿರ್ಧಾರವನ್ನು ಅವರು ಮಾಡಿಬಿಟ್ಟಿದ್ದರು.

ಮಂಗಳೂರಿನ ಹಳೇ ಬಂದರಿನಲ್ಲಿದ್ದ ತನ್ನ ಹಿರಿಯರ ವ್ಯಾಪಾರದ ಭಂಡಸಾಲೆಯಲ್ಲಿ ತಾನಿದ್ದು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿ, ಹಣ ಗಳಿಸಿ ಅವರು ಶ್ರೀಮಂತರಾಗಿ ಮೆರೆಯಬಹುದಿತ್ತು ಮತ್ತು ಸುಖಸಂಪತ್ತಿನ ಜೀವನವನ್ನು ನಡೆಸಬಹುದಿತ್ತು. ಆದರೆ  ಹೃದಯ ಮತ್ತು ಮನಸ್ಸುಗಳಲ್ಲಿ ಸುಪ್ತವಾಗಿದ್ದ ದೇಶಭಕ್ತಿ, ಕ್ರಾಂತಿಕಾರಿ ವಿಚಾರಗಳು, ದೀನದಲಿತರ ಬಗ್ಗೆ ಕಾಳಜಿ ಇವುಗಳು ರಾಷ್ಟ್ರೀಯ ಚಳವಳದ ಪ್ರವಾಹದಲ್ಲಿ ಮಲ್ಯರನ್ನು ದೂರ ಅತೀ ದೂರ ಕೊಂಡುಹೋದವು. ಭಾರತ ಮಾತೆಯನ್ನು ಪರದೇಶಗಳವರ ಮುಷ್ಟಿಯಿಂದ ಬಿಡಿಸಿಕೊಂಡು ಸ್ವತಂತ್ರಗೊಳಿಸುವ ಕನಸನ್ನು ಅವರು ತನ್ನದಾಗಿಸಿಕೊಂಡರು.

ಮಂಗಳೂರಿನಲ್ಲಿ ಏಕೆ? ಇಡೀ ಕರ್ನಾಟಕದಲ್ಲಿ 1920ರ ಮತ್ತು 30 ದಶಕಗಳಲ್ಲಿ ದೇಶಭಕ್ತರೂ, ತ್ಯಾಗಿಗಳೂ ಆಗಿದ್ದ ಕಾರ್ನಾಡು ಸದಾಶಿವ ರಾಯರದ್ದೇ ಮುಖಂಡತ್ವ. ಅವರ ಆಮಂತ್ರಣ ಸ್ವೀಕರಿಸಿದ್ದ ಮಹಾತ್ಮ ಗಾಂಧೀಜಿಯವರು 1920ನೇ ಇಸವಿ ಅಗೋಸ್ತ 19ರಂದು, ಮೊದಲ ಬಾರಿಗೆ ಜಿಲ್ಲೆಗೆ ಬಂದು ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿಯವರ ಭಾಷಣಗಳಿಂದ; ಅವರ ವಿಚಾರಗಳು, ಅವರ ದೃಷ್ಟಿಕೋನ, ಸತ್ವಯುತ ಬೋಧನೆಗಳಿಂದ ಶ್ರೀನಿವಾಸ ಮಲ್ಯ ಆಗಿನ ಕಾಲದ ಸಾವಿರಾರು ಯುವಕರಂತೆ ತುಂಬಾ ಪ್ರಭಾವಿತರಾದರು. ದೇಶಕ್ಕಾಗಿ ತಮ್ಮ ಜೀವಿತವನ್ನೇ ಮುಡಿಪಾಗಿ ಇಡುವ ನಿರ್ಧಾರ ಕೈಗೊಂಡರು.

ಅಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಸ್ಥೆಯಲ್ಲಿ ಓರ್ವ ಸ್ವಯಂಸೇವಕನಾಗಿ ಕಾರ್ಯಕ್ಕಿಳಿದ ಶ್ರೀನಿವಾಸ ಮಲ್ಯರು ಮುಂದೆ ಸ್ವಸಾಮರ್ಥ್ಯದಿಂದ, ಸ್ವಶಕ್ತಿಯಿಂದ, ಚತುರ ಬುದ್ಧಿಯಿಂದ ನಿಷ್ಠಾವಂತ ಕಾರ್ಯಗಳಿಂದ ರಾಜಕೀಯ ಕ್ಷೇತ್ರದಲ್ಲಿ ಬಹುಬೇಗನೆ ಗುರುತಿಸಲ್ಪಟ್ಟರು. ಮೊದಲಿಗೆ ಆಗಿನ ಹಿರಿಯ ನಾಯಕರಿಂದ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಯಾಗಿ ನೇಮಿಸಲ್ಪಟ್ಟರು. ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಒಬ್ಬ ಸದಸ್ಯನಾಗಿ ಚುನಾಯಿತರಾದರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಇತ್ತು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಮುಂದಕ್ಕೆ ಮುಂದಕ್ಕೆ ಹೋಗಲು, ಆಗಿನ ದಿನಗಳಲ್ಲಿ ದೇಶದ ಉನ್ನತ ನಾಯಕರುಗಳಾದ ಪಂಡಿತ ಜವಾಹರಲಾಲ ನೆಹರೂ, ಸುಭಾಸಚಂದ್ರ ಬೋಸ ಮುಂತಾದವರ ಸಮೀಪದ ವಲಯದಲ್ಲಿದ್ದ, ಮಂಗಳೂರಿನವರೇ ಆಗಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರು ನೀಡಿದ ಸಹಾಯ ಹಸ್ತವೂ ಕಾರಣವಾಯಿತು. ಅದರಿಂದಾಗಿ ಅಧಿಕಾರ ಶ್ರೇಣಿಯ (Hierachy) ವ್ಯವಸ್ಥೆಯಲ್ಲಿ ಅವರಿಗೆ ಮೇಲೆ ಮೇಲಕ್ಕೆ ಏರಲು ದಾರಿ ಸುಲಭವಾಯಿತು. ತಮ್ಮ ಚಾಣಾಕ್ಷ ಬುದ್ಧಿ, ಸಂಘಟನಾ ಚಾತುರ್ಯ, ಸುಸಂಸ್ಕೃತ ನಡವಳಿಕೆ, ಹಾಸ್ಯ ಚಟಾಕಿಗಳಿಂದ ಅವರು ಕಾಂಗ್ರೆಸ್ ನಾಯಕರ ಮತ್ತು ಸಾಮಾನ್ಯ ಸ್ವಯಂಸೇವಕ ರವರೆಗಿನ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ, ಓರ್ವ ನಾಯಕರಾಗಿ ಸ್ವೀಕರಿಸಲ್ಪಟ್ಟರು.

1930 ಇಸವಿಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ನಾಯಕರಾಗಿದ್ದ ಶ್ರೀನಿವಾಸ ಮಲ್ಯರು ನಂತರ ಹಿಂದಕ್ಕೆ ನೋಡಲೇ ಇಲ್ಲ. ಮುಂದೆ ಮುಂದೆ ಕ್ರಮಿಸಿ ಮುಂಚೂಣಿಯ ನಾಯಕರಾದರು. ಅದರಿಂದಾಗಿಯೇ ಹಲವು ಬಾರಿ ಅವರು ಭೂಗತ (underground)ರಾಗಿಯೂ ಕಾರ್ಯ ನಿರ್ವಹಿಸಬೇಕಾಗಿತ್ತು. ತಾನು ಭೂಗತನಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ದಿನಗಳಲ್ಲಿ ಚತುರಮತಿಯಾಗಿದ್ದ ಮಲ್ಯರು ಯಾವುದೇ ವೇಷ ಧರಿಸಿ, ಎಲ್ಲಿ ಯಾವ ಊರಿನಲ್ಲಿ ಶಹರಿನಲ್ಲಿ ಇರುತ್ತಿದ್ದರೋ ದೇವರೇ ಬಲ್ಲ. ಅವರನ್ನು ಹಿಡಿದು ಜೈಲಿಗೆ ತಳ್ಳಲು ಸಹಜವಾಗಿ ಪೋಲಿಸ್ ಅಧಿಕಾರಿಗಳು ಕಟ್ಟೆಚ್ಚರ ವಹಿಸುತ್ತಿದ್ದರು. ಆದರೂ ಅವರೆಲ್ಲರ ಕಣ್ಣಿಗೆ ಮಣ್ಣೆರಚಿ ನುಸುಳಿ ಪಾರಾಗುತ್ತಿದ್ದರು ಮಲ್ಯರು.

ಹೀಗೆ ಒಮ್ಮೆ ಮಲ್ಯರು ಭೂಗತರಾಗಿ, ಮುಂಬಯಿಯಲ್ಲಿರುವ ತಮ್ಮ ಸಂಬಂಧಿಕರೇ ಆಗಿದ್ದ ಸರ್ಕಾರಿ ಅಧಿಕಾರಿಗಳೋರ್ವರ ಮನೆಯಲ್ಲಿ ಇದ್ದರು. ಆ ಸಂಬಂಧಿಕರು ಸರಕಾರ ದಲ್ಲಿ ವರಿಷ್ಠ ಅಧಿಕಾರಿಯಾಗಿದ್ದುದರಿಂದ, ಮಲ್ಯರಿಗೆ ಅವರ ಮನೆಯಲ್ಲಿ ಸುಖವಾಗಿ ಶಾಂತವಾಗಿ ಇರಲು ಅನುವಾಯಿತು. ಆದರೂ ಪೋಲಿಸ್ ಸಿ.ಐ.ಡಿ.ಗಳಿಗೆ ಶೀನಪ್ಪ ಮಲ್ಯರು ಅಲ್ಲಿ ಇರುವುದು ಗೂಢಚಾರಿಕೆಯಿಂದ ತಿಳಿದುಬಂತು. ಆದರೆ ಮಲ್ಯರನ್ನು ಸರಿಯಾಗಿ ನೋಡಿ ತಿಳಿಯದ ಪೋಲಿಸ್ ಅಧಿಕಾರಿಗಳು ಅವರಿದ್ದ ಮನೆಗೆ ನುಗ್ಗಿದಾಗ, ಮಲ್ಯರು ಓರ್ವ ಮನೆಯಾಳಿನ ಕೊಳೆ ಬಟ್ಟೆಗಳನ್ನು ಧರಿಸಿ, ಕೈಯಲ್ಲಿ ಒಂದು ಕಸಬರಿಕೆಯಿಂದ ನೆಲವನ್ನು ಝಾಡಿಸುತ್ತಾ ಬಂದರು. ಪೋಲಿಸರು ಕೇಳಿದಾಗ ಏನೋ ಒಂದು ಹಾರಿಕೆಯ ಉತ್ತರವನ್ನು ಇತ್ತು, ಅಲ್ಲಿ ಇದ್ದ ಆಸನಗಳಲ್ಲಿ ಅವರನ್ನು ಕುಳಿತುಕೊಳ್ಳಲು ತಿಳಿಸಿ ಧನಿಗಳು ಈಗ ಬರುತ್ತಾರೆ ಎಂದು ಹೇಳಿ ನೆಲದಲ್ಲಿದ್ದ ಕಸವನ್ನು ಝಾಡಿಸುತ್ತಾ ಮುಂದೆ ಮುಂದೆ ಹೋಗಿ ಪೋಲಿಸರ ಎದುರಿಗೇನೇ ಮನೆಯಿಂದ ಹೊರ ಹೋಗಿಯೇ ಬಿಟ್ಟರು. ಹೀಗೆ ಮನೆಯೊಳಗೆ ಕುಳಿತಿದ್ದ ಪೋಲಿಸರ ಕಣ್ಣಿಗೆ ಮಣ್ಣೆರಚಿ ಅಲ್ಲಿಂದಲೇ ಇಲ್ಲವಾದರು. ಹೀಗೆ ಹಲವಾರು ಪ್ರಸಂಗಗಳಲ್ಲಿ ಮಲ್ಯರು ತಮ್ಮ ಸೂಕ್ಷ್ಮ ಬುದ್ಧಿಯಿಂದ ಪೋಲಿಸರ ದೃಷ್ಟಿಗೆ ಬಿದ್ದೂ ತಪ್ಪಿಸಿಕೊಳ್ಳುತ್ತಿದ್ದರೆಂದು ತಿಳಿದುಬರುತ್ತದೆ.

ಇನ್ನೊಮ್ಮೆ ಮುಂಬಯಿಯ ಮೆರಿನ್ ಡ್ರೈವನಲ್ಲಿದ್ದ ಸುಜೀರ ಪುಂಡಳೀಕ ನಾಯಕರ ಮನೆಯಲ್ಲಿ ಅಜ್ಞಾತರಾಗಿ ಇದ್ದಾಗಲೂ, ಪೋಲಿಸರು ಇನ್ನೇನು? ಕ್ಷಣಗಳಲ್ಲಿ ಬರಲಿದ್ದಾರೆಂದು ಸೂಕ್ಷ್ಮವಾಗಿ ತಿಳಿದುಕೊಂಡು ಮೀಸೆಯನ್ನು ಬೋಳಿಸಿ, ಗೋಪಿಚಂದನದ ನಾಮಗಳನ್ನು ಎಳೆದು ಅಲ್ಲಿಂದ ಪರಾರಿಯಾಗಿ ಮುಂಬಯಿಯನ್ನು ಬಿಟ್ಟು, ಮಂಗಳೂರಿಗೆ ಬಂದರೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ. ಆ ಕಾಲದಲ್ಲಿಯೂ ನಂತರ ಹಲವು ವರ್ಷಗಳವರೆಗೆ ಪೋಲಿಸ್ ಇಲಾಖೆಯೊಡನೆ ಮಲ್ಯರ ಕಣ್ಣಮುಚ್ಚಾಲೆ ಆಟ ಸಾಗುತ್ತಿದ್ದುದನ್ನು ಹಿರಿಯರು ಮುಖ್ಯವಾಗಿ ರಾಜಕೀಯ ನೇತಾರರು ನೆನಪಿಸಿಕೊಳ್ಳುತ್ತಿದ್ದುದಿತ್ತು.

ಅಂದರೆ ಶ್ರೀನಿವಾಸ ಮಲ್ಯರು ರಾಷ್ಟ್ರೀಯ ಸ್ವಾತಂತ್ರ್ಯದ ಸಂಘರ್ಷದ ದಿನಗಳಲ್ಲಿ ಜವಾಬ್ದಾರಿಯನ್ನು ತಪ್ಪಿಸಿ, ಬರೇ ಅಜ್ಞಾತ ವಾಸವನ್ನು ಮಾಡುತ್ತಾ ಪೋಲಿಸರೊಡನೆ ಕಣ್ಣಮುಚ್ಚಾಲೆ ಆಟದಲ್ಲಿಯೇ ನಿರತರಾಗಿ ಜೈಲುವಾಸದಿಂದ ತಪ್ಪಿಸಿಕೊಳ್ಳುತ್ತಲಿದ್ದರು ಎಂದು ಯಾರೂ ತಪ್ಪಾಗಿ ಅರ್ಥೈಸಬಾರದು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಆಗ ಹುಬ್ಬಳ್ಳಿಯಲ್ಲಿತ್ತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮತ್ತು ತದನಂತರದ ಒಂದೆರಡು ವರ್ಷಗಳ ನಂತರವೂ ಮೈಸೂರ ರಾಜ್ಯ ಮಹಾರಾಜರ ಆಳ್ವಿಕೆಯಲ್ಲಿದ್ದುದರಿಂದ ಕಾಂಗ್ರೆಸ್ ಸಮಿತಿ ಮೈಸೂರಿನಲ್ಲಿ ಇತ್ತು. ಮೈಸೂರು ರಾಜ್ಯದಲ್ಲಿ ಮಹಾರಾಜರ ಆಳ್ವಿಕೆ ಕೊನೆಗೊಂಡ ಬಳಿಕ ಮೈಸೂರ ಕಾಂಗ್ರೆಸ್ ಸಮಿತಿ ಕೆ.ಪಿ.ಸಿ.ಸಿ.ಯೊಡನೆ ಸಮ್ಮಿಳಿತಗೊಂಡು ಒಂದೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಂದು ಘೋಷಣೆಯಾಯಿತು. ಆವಾಗ ಶ್ರೀನಿವಾಸ ಮಲ್ಯರು ದೇಶದ ರಾಜಧಾನಿ ದಿಲ್ಲಿಗೆ ಘಟನಾ ಸಮಿತಿಯ (Constituent assembly) ಸದಸ್ಯರಾಗಿ ಚೀಪ್ವ್ಹಿಪ್ (Chief Whip) ಆಗಿ ನೇಮಿಸಲ್ಪಟ್ಟಿದ್ದರು.

ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಹಾಗೂ 1942ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’(Quit India) ಚಳವಳಿಯ ಕಾಲದಲ್ಲಿಯೂ ಮಹಾತ್ಮರ ಕರೆಗೆ ಓಗೊಟ್ಟು ಮಲ್ಯರು ಜೈಲುವಾಸಕ್ಕೂ ಒಳಗಾಗಿದ್ದರು. ಜೈಲಿನಲ್ಲಿರುವಾಗಲೂ ಅವರು ಬರೇ ಧ್ಯಾನ ಮಾಡುತ್ತಲೂ, ತನ್ನ ಚುರುಕು ಚಟುವಟಿಕೆಗಳಿಂದ, ಲಘು ಹಾಸ್ಯದಿಂದಲೂ ಕೂಡಿದ ಮಾತುಗಳಿಂದಲೂ ಜೈಲು ವಾಸಿಗಳಾದ ತನ್ನ ಒಡನಾಡಿಗಳನ್ನು ಶ್ರೀನಿವಾಸ ಮಲ್ಯರು ರಂಜಿಸುತ್ತಲೇ ಇರುತ್ತಿದ್ದರು. ಇದರಿಂದಾಗಿ ಜೈಲಿನಲ್ಲಿದ್ದ ರಾಷ್ಟ್ರೀಯ ನಾಯಕರ ಮತ್ತು ಬೇರೆ ರಾಜ್ಯಗಳ ಹಲವು ಪುಢಾರಿಗಳ ಮೆಚ್ಚುಗೆಗೆ ಪಾತ್ರರಾದರು. ಒಮ್ಮೆ ಮಾತಿನ ಮಲ್ಲ ಮಲ್ಯರ ಮಾತು ಮತ್ತು ಚಟುವಟಿಕೆಗಳಿಗೆ ಆಕರ್ಷಿತರಾದವರು ಅವರನ್ನೆಂದೂ ಮರೆಯುತ್ತಿರಲಿಲ್ಲ. ಅಂತಹ ಛಾಪನ್ನು ಅವರು ಒತ್ತುತ್ತಿದ್ದರೆಂದು ಹೇಳಬಹುದು. ಅವರ ಮಾತುಗಳಲ್ಲಿ ಕೇಳುಗರನ್ನು ಮೋಡಿ ಮಾಡುವ ಆಕರ್ಷಣೆಯಿತ್ತು.

ಶ್ರೀನಿವಾಸ ಮಲ್ಯರು 1937-46ರ ತನಕ ಅಂದರೆ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದ ಆ ಸಂಕ್ರಮಣ ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಲಿಗೆ ಹೋಗುತ್ತಿದ್ದಾಗ ಅವರ ಕುಟುಂಬಗಳಿಗೆ ಉಪವಾಸ ಬೀಳದಂತೆ ಆರ್ಥಿಕ ನೆರವನ್ನು ಮತ್ತು ಇತರ ಸಹಾಯಗಳನ್ನು ಕಾಲಕಾಲಕ್ಕೆ ಒದಗಿಸುವ ವ್ಯವಸ್ಥೆಯೊಂದನ್ನು ರೂಪಿಸಿದ್ದರು. ಅಂತೆಯೇ ಕಾಂಗ್ರೆಸ್ ಪಕ್ಷದ ಕಛೇರಿಗಳು, ಕೆಲಸ ಮಾಡುವ ಸಿಬ್ಬಂದಿಗಳಿಗೂ ಹಣದ ನೆರವನ್ನು ಈಯುವ ವ್ಯವಸ್ಥೆಗಳನ್ನೂ ಮಾಡಿಯೇ ಇದ್ದರು. ಹೀಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅವರ ಕುಟುಂಬಗಳು ಹಣದ ಅಡಚಣೆಗೆ ಒಳಗಾಗದಂತೆ ಮಲ್ಯರು ಜವಾಬ್ದಾರಿ ವಹಿಸಿದ್ದರು. ಕೆಲವೊಮ್ಮೆ ಹಿರಿಯ ಪುಢಾರಿಗಳೆನ್ನಿಸಿದವರೂ ಕೂಡಾ ಮಲ್ಯರ ಸಹಾಯವನ್ನು ಪಡೆಯುತ್ತಲಿದ್ದರೆಂದು ನಾನು ಕೇಳಿದ್ದೇನೆ.

ಮುಖ್ಯವಾಗಿ, 1937ರಲ್ಲಿ ಬ್ರಿಟಿಷ ಶಿಷ್ಟ ಮಂಡಲ ಒಂದು ಲಂಡನಿನಿಂದ ಬಂದು ಕಾಂಗ್ರೆಸ್ ಪಕ್ಷದ ನಾಯಕರ ಮನ ಒಲಿಸಿ, ರಾಜ್ಯಗಳಲ್ಲಿ ಜನರ ಸರಕಾರವನ್ನು ರಚಿಸುವಂತೆ ಮನವೊಲಿಸುವುದರಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಜನಪ್ರತಿನಿಧಿಗಳನ್ನು ಆರಿಸಲು ಚುನಾವಣೆಗಳು ನಡೆದವು. ಬ್ರಿಟಿಷರ ಪರರಾಗಿದ್ದ ಭೂಮಾಲಿಕರ ಮತ್ತು ಶ್ರೀಮಂತರ ಪಕ್ಷದ ಅಭ್ಯರ್ಥಿಗಳೊಡನೆ ಚುನಾವಣಾ ಕಣಕ್ಕೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳನ್ನು ಹೋರಾಟಕ್ಕೆ ಇಳಿಸಬೇಕಾಗಿತ್ತು. ಕಾಂಗ್ರೆಸ್ ಪಕ್ಷದ ಹುರಿಯಾಳುಗಳಲ್ಲಿ ಹೆಚ್ಚಿನವರು ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಆಗಿದ್ದುದರಿಂದ ಅವರಿಗೆ ಆರ್ಥಿಕ ಬೆಂಬಲವನ್ನು ನೀಡುವ ಅವಶ್ಯಕತೆಯೂ ಇತ್ತು. ಚುನಾವಣಾ ಕಾರ್ಯದ ಜವಾಬ್ದಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮೇಲಿತ್ತು. ಅಲ್ಲದೇ ಇತರ ಪ್ರಚಾರ ಕಾರ್ಯ, ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯಕ್ಕಾಗಿ ಕಾರ್ಯಕರ್ತರನ್ನು ನೇಮಿಸುವುದು ಭಾಷಣಕಾರರನ್ನು ಒದಗಿಸುವಂತಹ ಅನೇಕ ಕಾರ್ಯಗಳಿಗೂ ಹಣದ ಅವಶ್ಯಕತೆಯಿತ್ತು. ಅದಕ್ಕಾಗಿ ಶ್ರೀನಿವಾಸ ಮಲ್ಯರು ದುಡಿಯಬೇಕಾಯಿತು. ಆದರೆ ಅವರ ಶ್ರಮ ನಿರರ್ಥಕ ವಾಗಲಿಲ್ಲ. ಕಾಂಗ್ರೆಸ್ ಹುರಿಯಾಳುಗಳು ಚುನಾವಣಾ ಕಣದಲ್ಲಿ ಬಹುಸಂಖ್ಯೆಯಲ್ಲಿ ಗೆದ್ದು ಬಂದರು. ಇದರಿಂದಾಗಿ ಶ್ರೀ ಮಲ್ಯರು ಹಳ್ಳಿ ಪಟ್ಟಣಗಳ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಮುಂಚೂಣಿಯ ನಾಯಕರವರೆಗೆ ಎಲ್ಲರ ಸಂಪರ್ಕಕ್ಕೆ ಬಂದರು ಮತ್ತು ಮುಕ್ತ ಶ್ಲಾಘನೆಗೂ ಪಾತ್ರರಾದರು.

ಮುಂದೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿಯೂ ಶ್ರೀನಿವಾಸ ಮಲ್ಯರು ಗಣನೀಯ ನಾಯಕರಾಗಿಯೂ ಗುರುತಿಸಲ್ಪಡುವಂತಾದರು. ಮಹಾತ್ಮಾ ಗಾಂಧೀಜಿಯವರ ಕಾರ್ಯಕ್ರಮ ಗಳಿಂದ ಖಾದಿ ಪ್ರಚಾರ, ಹರಿಜನರಿಗೆ ದೇವಳಗಳಲ್ಲಿ ಪ್ರವೇಶ, ರಾಷ್ಟ್ರ ಭಾಷೆಯಾಗಿ ಹಿಂದಿ, ಗ್ರಾಮೋದ್ಯೋಗ, ಜಾತೀಯತೆ ನಿರ್ಮೂಲನ ಇತ್ಯಾದಿ ಕಾರ್ಯಕ್ರಮಗಳಿಗೆ ಮಲ್ಯರು ಯಾವಾಗಲೂ ಬೆಲೆ ಕೊಡುತ್ತಿದ್ದರಲ್ಲದೇ, ಆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಾಯಕರ ಸ್ಥಾನದಲ್ಲಿ ಇದ್ದರು. ಅವರು ಆ ಕಾರ್ಯಕ್ರಮಗಳನ್ನು ಹೃದಯಪೂರ್ವಕವಾಗಿ, ಪೂರ್ಣ ಮನಸ್ಸಿನಿಂದ ಕಾರ್ಯರೂಪಕ್ಕಿಳಿಸಲು ಕಾರ್ಯ ಪ್ರವೃತ್ತರಾಗುತ್ತಿದ್ದರು. ಈ ವಿಷಯಗಳನ್ನು ಅನುಷ್ಠಾನಿಸುವಾಗ ಅವರು ಜೈಲಿಗೂ ಹೋಗಬೇಕಾಗಿ ಬರುತ್ತಿತ್ತು. ಇಂತಹ ಮನೋಭಾವನೆ ಮತ್ತು ಶ್ರದ್ಧೆಯಿಂದಾಗಿ ಅವರು ಸರ್ವ ಜನಾದರಣೀಯರಾಗಿದ್ದರು.

ಮದುವೆ

ಶ್ರೀನಿವಾಸ ಮಲ್ಯರು ರಾಜಕೀಯದಲ್ಲಿ ಮತ್ತು ಸ್ವಾತಂತ್ರ್ಯ ಚಳವಳದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ದಿನಗಳಲ್ಲೇ ಅವರ ಮದುವೆಯ ಪ್ರಸ್ತಾಪವೂ ಮುಂದೆ ಬಂದಿತ್ತು. ಬಂಟವಾಳದ ಶ್ರೀಮಂತ ಮತ್ತು ಪ್ರತಿಷ್ಠಿತ ಹೆಸರಾಂತ ‘ಕನ್ನಡಿ ಬಾಗಿಲು ಮನೆ’ಯ ಪ್ರಭುಗಳ ಮನೆತನದ ಸಾಹುಕಾರ ದಾಮೋದರ ಪ್ರಭುಗಳ ಮಗಳು ಇಂದಿರಾ ಬಾಯಿ ಯವರೊಡನೆ ಶ್ರೀನಿವಾಸ ಮಲ್ಯರ ಮದುವೆ ಬಂಟವಾಳದಲ್ಲಿ ನೆರವೇರಿತು. ಮದುವೆಯಾದ ಮೇಲೆಯೂ ಅವರು ಸ್ವಾತಂತ್ರ್ಯ ಚಳವಳದ ಗುರುತರದ ಹೊಣೆಗಾರಿಕೆಯಿಂದ ಹಿಂದೆ ಸರಿಯಲೇ ಇಲ್ಲ. ಇದು ಅವರ ವೈಶಿಷ್ಟ್ಯವೆನ್ನಬೇಕು.

ದೇಶ ಸ್ವಾತಂತ್ರ್ಯವಾದ ಬಳಿಕ

ಕಾಂಗ್ರೆಸಿನ ರಾಜಕೀಯ ಅಖಾಡದಲ್ಲಿ ತನ್ನದೇ ಆದ ವರಸೆಗಳನ್ನು ಪ್ರಯೋಗಿಸುತ್ತಾ, ಇದರಿಂದಾಗಿ ಮಿತ್ರರನ್ನೂ ವಿರೋಧಿಗಳನ್ನೂ ಕಟ್ಟಿಕೊಳ್ಳುತ್ತ ಮಲ್ಯರು ತನ್ನದೇ ಹಾದಿಯನ್ನು ಅನುಸರಿಸಿ, ರಾಜಕೀಯದಲ್ಲಿ ಮುಂದಕ್ಕೆ ಮುಂದಕ್ಕೆ ಹೋಗುತ್ತಲೇ ಇದ್ದರು. ಅವರು ಮಿತ್ರರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಬೆಂಬಲಿಸುತ್ತ ಅವರನ್ನೂ ತನ್ನೊಂದಿಗೆ ಕೊಂಡು ಹೋಗುತ್ತಲೂ ಇದ್ದರು. ರಾಜಕೀಯದಲ್ಲಿ ತಮ್ಮ ವಿರೋಧಿಗಳನ್ನು ದ್ವೇಷಿಸದೇ, ವಿರೋಧಿಗಳೂ ಕೂಡಾ ಕಷ್ಟಕಾಲದಲ್ಲಿ ಸಹಾಯ ಬೇಡಿ ಬಂದಾಗ, ತುಚ್ಛವಾಗಿ ಕಾಣದೇ ಅವರಿಗೂ ತನ್ನಿಂದಾದ ಸಹಾಯ ಮಾಡುತ್ತಲೂ, ಅಗತ್ಯ ಬಿದ್ದಲ್ಲಿ ತನ್ನ ಮಿತ್ರರಿಂದಲೂ ಅಂಥವರಿಗೆ ಬೇಕಾದಷ್ಟು ಸಹಾಯ ದೊರಕಿಸಿಕೊಡುತ್ತಲೂ ಇದ್ದರು. ಇದರಿಂದಾಗಿ ರಾಜಕೀಯದಲ್ಲಿ ಬೇಕಾದಷ್ಟು ಕಚ್ಚಾಡಿಕೊಂಡಿದ್ದರೂ, ವೈಯುಕ್ತಿಕ ನೆಲೆಯಲ್ಲಿ ಅವರಿಗೆ ಎಲ್ಲೆಲ್ಲಿಯೂ ಮಿತ್ರರೇ ಇದ್ದರು ಎಂದು ಹೇಳಬಹುದು. ಈ ಎಲ್ಲಾ ವಿಶಿಷ್ಟ ಗುಣಗಳಿಂದಾಗಿ ಶ್ರೀನಿವಾಸ ಮಲ್ಯರು ಅಜಾತ ಶತ್ರುವಾಗಿ ಎಲ್ಲರ ಗೌರವಕ್ಕೂ ಪಾತ್ರರಾದರು.

ಅದರಂತೆಯೇ ರಾಜಕೀಯದಲ್ಲಿ ತನ್ನ ಕಡು ವಿರೋಧಿಗಳನ್ನು ಮಣ್ಣು ಮುಕ್ಕಿಸುವುದರಲ್ಲಿಯೂ ಅವರು ಹಿಂದೆ ಮುಂದೆ ನೋಡಿದವರಲ್ಲ. ಹಾಗಾಗಿ ಅವರನ್ನು ಪ್ರೀತಿಸುವವರು, ಗೌರವಿಸುವವರು ಹಾಗೂ ವಿರೋಧಿಸುವವರೂ ಕೂಡಾ ಅವರ ಬಗ್ಗೆ ಹೃದಯದಲ್ಲಿ ಒಂದು ತರಹದ ಭಯವನ್ನು ಇಟ್ಟುಕೊಂಡವರೇ ಆಗಿದ್ದರೆಂದು ಆ ಕಾಲದ ರಾಜಕೀಯ ವಲಯದಲ್ಲಿದ್ದವರ ಮಾತುಗಳಿಂದ ವ್ಯಕ್ತವಾಗುತ್ತದೆ.

ರಾಜಕೀಯದಲ್ಲಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳುತ್ತಿರುವಾಗ ಅವರ ಮೇಲೆ ದೇವರ ದಯೆಯೂ ಇತ್ತು ಎಂದು ಹೇಳಬಹುದು. 1946ರಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಕೊಡುವುದೆಂಬ ನಿರ್ಧಾರಕ್ಕೆ ಬ್ರಿಟಿಷರು ಬಂದಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ ನಾಯಕರುಳ್ಳ ಒಂದು ಸಮ್ಮಿಶ್ರ ಸರಕಾರವನ್ನು ಕೂಡಾ ನೇಮಿಸಲು ಅವರು ಒಪ್ಪಿಕೊಂಡರು. ಇದರಿಂದಾಗಿ ಪಂಡಿತ ಜವಾಹರಲಾಲ ನೆಹರೂರವರನ್ನು ಪ್ರಧಾನ ಮಂತ್ರಿ ಗಳನ್ನಾಗಿ, ಮುಸ್ಲಿಂ ಲೀಗಿನ ಲಿಯಾಕತ ಅಲಿ ಖಾನರವರನ್ನು ಉಪಪ್ರಧಾನರನ್ನಾಗಿ ಹಾಗೂ ಸರದಾರ ಪಠೇಲರಾದಿ ಹಿರಿಯ ನಾಯಕರುಗಳನ್ನು ಮಂತ್ರಿಗಳನ್ನಾಗಿ ಬ್ರಿಟಿಷರು ನೇಮಿಸಿದರು. ಅಂತೆಯೇ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿ ಸಭೆಯನ್ನು ಕೂಡಾ ನೇಮಿಸುವ ಘೋಷಣೆಯಾಗಿತ್ತು. ಅದರಲ್ಲಿ ಆಗಿನ ಕಾಲದಲ್ಲಿ ಹೆಸರಾಂತ ಸಮಾಜವಾದಿ ನಾಯಕಿ, ಸಾಮಾಜಿಕ ರಾಜಕೀಯ ಪುಢಾರಿ, ಮಹಾನ್ ಕಲಾ ಪ್ರತಿಭೆಯನ್ನೂ ಹೊಂದಿದ್ದ ಹಾಗೂ ಪಂಡಿತ ಜವಾಹರಲಾಲ ನೆಹರೂ, ಜಯಪ್ರಕಾಶ ನಾರಾಯಣರವರ ಆಪ್ತ ವಲಯದಲ್ಲಿದ್ದ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರನ್ನು ಪ್ರತಿನಿಧಿ ಸಭಾದ ಸದಸ್ಯೆಯಾಗಿ ಕಾಂಗ್ರೆಸ್ ಪಕ್ಷ ಆರಿಸಿತ್ತು. ಆದರೆ ಅಂತಹ ಹುದ್ದೆಗಳಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲದ ಕಮಲಾದೇವಿಯವರು ತನ್ನ ಊರಿನವರೇ ಆದ ಹಾಗೂ ಹತ್ತಿರದ ನಂಟನ್ನು ಬೆಳೆಸಿಕೊಂಡಿದ್ದ ಶ್ರೀನಿವಾಸ ಮಲ್ಯರ ಹೆಸರನ್ನು ಸೂಚಿಸಿದರು. ಅಷ್ಟೇ ಅಲ್ಲ ಪಂಡಿತ ಜವಾಹರಲಾಲರ ಮನಸ್ಸಿಗೆ ಮನವರಿಕೆ ಮಾಡಿಕೊಳ್ಳಲು, ಶ್ರೀನಿವಾಸ ಮಲ್ಯರು ಪ್ರತಿನಿಧಿ ಸಭೆಯ ಹಾಗೂ ಮುಂದೆ ಘಟನಾ ಸಭೆಯ ಸದಸ್ಯರಾಗುವಂತೆ ಮಾಡಿದರು. ಅಂದಿನ ದಿನಗಳಲ್ಲಿ ಕಮಲಾ ದೇವಿಯವರಂತೆಯೇ ಹಲವಾರು ಜನನಾಯಕರು ಅಥವಾ ಸ್ವಾತಂತ್ರ್ಯ ಹೋರಾಟಗಾರ ರಾಗಿದ್ದವರು ಸ್ಥಾನಾಪೇಕ್ಷಿಗಳಾಗಿರಲಿಲ್ಲ. ಇಂತಹ ಉದಾಹರಣೆಗಳು ಸಾಕಷ್ಟಿವೆ. ಮುಂದೆ ಶ್ರೀನಿವಾಸ ಮಲ್ಯರು ಪಂಡಿತ ಜವಾಹರಲಾಲರಿಗೆ ಹತ್ತಿರದವರಾಗಿ ಬೆಳೆದರೂ, ಯಾವುದೇ ಮಂತ್ರಿ ಪದ ಸ್ಥಾನಕ್ಕಾಗಿ ವಶೀಲಿಬಾಜಿ ಮಾಡದೇ, ಯೋಗ್ಯರಾದವರನ್ನು ಪ್ರೋತ್ಸಾಹಿಸಿ, ಅವರ ಹೆಸರನ್ನು ಮಂತ್ರಿ ಸ್ಥಾನಕ್ಕೋ ಅಥವಾ ಬೇರೆ ಬೇರೆ ಹುದ್ದೆಗಳಿಗೋ ಶಿಫಾರಸು ಮಾಡುತ್ತಲಿದ್ದರು.

1947ರಲ್ಲಿ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟು ಬ್ರಿಟನ್ನಿಗೆ ವಾಪಸಾದರು. ಆದರೆ ತಮ್ಮ ಬಳುವಳಿಗಳಾಗಿ ಬ್ರಿಟಿಷ್ ಪಾರ್ಲಿಮೆಂಟರಿ ಪದ್ಧತಿ, ಸರಕಾರಿ ಅಧಿಕಾರಿಗಳಿಗಾಗಿ ಭಾರತೀಯ ಆಡಳಿತ ಸೇವೆ (ಆಯ್.ಸಿ.ಎಸ್.); ರಕ್ಷಣಾ ಪಡೆಗಳಲ್ಲಿ ಆಡಳಿತ ಪದ್ಧತಿ ಮುಂತಾದ ಉತ್ತಮ ಆಡಳಿತ ವ್ಯವಸ್ಥೆಗಳನ್ನು ಸ್ವತಂತ್ರ ಭಾರತದಲ್ಲಿ ಬಿಟ್ಟು ಹೋದರು. ಹೀಗೆ ಅನ್ನುವುದಕ್ಕಿಂತಲೂ ಸ್ವತಂತ್ರ ಭಾರತದ ನಾಯಕರು ಬ್ರಿಟಿಷರ ಪದ್ಧತಿಗಳನ್ನು ಅವುಗಳ ಉಪಯುಕ್ತತೆಯನ್ನು ಗ್ರಹಿಸಿಕೊಂಡು ಸ್ವಯಂ ಸ್ಫೂರ್ತಿಯಿಂದ ಸ್ವೀಕರಿಸಿದರು ಎಂದು ಹೇಳಬಹುದು. ಭಾರತದ ಪಾರ್ಲಿಮೆಂಟಿನಲ್ಲಿ ಶ್ರೀನಿವಾಸ ಮಲ್ಯರು, 1947ರಿಂದ ತಮ್ಮ ಜೀವಿತದ ಕೊನೆಯವರೆಗೆ ಚೀಫ್ ವ್ಹಿಪ್ ಆಗಿ ಜವಾಬ್ದಾರಿ ಸ್ಥಾನದಲ್ಲಿದ್ದರು. ಅದರಿಂದಾಗಿ ಲೋಕಸಭೆಯಲ್ಲಿ ಮಲ್ಯರಿಗೆ, ತಮ್ಮ ಪಕ್ಷದ ಮಂತ್ರಿಗಳಿಂದ ಹಿಡಿದು ಸಾಮಾನ್ಯ ಲೋಕಸಭಾ ಸದಸ್ಯರನ್ನು ಕೂಡಾ ಪುರಸ್ಕರಿಸುವ ಅಥವಾ ನಿರ್ಬಂಧಿಸುವ ಅವಕಾಶಗಳು ಸಿಕ್ಕಂತೆ ಆಯಿತು. ಭಾರತದಾದ್ಯಂತದಿಂದ ಲೋಕಸಭೆಗೆ ಆರಿಸಿ ಬಂದ ಹಿರಿಯ ಕಿರಿಯ ನಾಯಕರೊಡನೆ ಹತ್ತಿರದ ಸಂಬಂಧ ಸಂಪರ್ಕಗಳು ಬಂದವು. ಸದಸ್ಯರ ಉತ್ತಮ ಯೋಜನೆಗಳನ್ನು, ಕಾರ್ಯ ಪದ್ಧತಿಗಳನ್ನು, ಅವರಲ್ಲಿರುವ ಶಿಸ್ತು ಮತ್ತು ಅರ್ಪಣಾ ಭಾವಗಳನ್ನು ಹತ್ತಿರದಿಂದ ನೋಡುವ ಮತ್ತು ಅವರ ಸಾಮಾನ್ಯ ಆಸೆ-ಆಕಾಂಕ್ಷೆಗಳನ್ನು ತಿಳಿದುಕೊಳ್ಳುವ, ಸಮರ್ಥರನ್ನು ಪ್ರಧಾನ ಮಂತ್ರಿ ಅಥವಾ ಪಕ್ಷದ ಹಿರಿಯರಿಗೆ ಶಿಫಾರಸು ಮಾಡಿ ಅಂತಹ ಸದಸ್ಯರ ಮೆಚ್ಚುಗೆಗೆ ಪಾತ್ರರಾಗುವ ಸುಸಂಧಿಗಳೂ ಮಲ್ಯರ ಪಾಲಿಗೆ ಬಂದವು. ಯಾವುದೇ ಅಧಿಕಾರ ಸ್ಥಾನಕ್ಕಾಗಿ ಹಂಬಲಿಸದಿರುವ ಮನೋವೈಶಾಲ್ಯದ ಮಲ್ಯರ ಕೂಡೆ, ಸಾಮಾನ್ಯ ಸದಸ್ಯರಿಗೆ ತಮ್ಮ ಮನಸ್ಸಿನಲ್ಲಿರುವ ಸ್ಥಾನಮಾನಗಳ ಅಪೇಕ್ಷೆಗಳನ್ನು ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳುವ ಅವಕಾಶ ಸಿಗುತ್ತಿತ್ತು. ಹೀಗಾಗಿ ಮಲ್ಯರು ಎಲ್ಲ ಸ್ತರದ ಲೋಕಸಭಾ ಸದಸ್ಯರ, ಅಧಿಕಾರ ರೂಢ ಪಕ್ಷದವರು ಮಾತ್ರವಲ್ಲ ವಿರೋಧ ಪಕ್ಷದ ಸದಸ್ಯರ ಗೌರವ ವಿಶ್ವಾಸಗಳಿಗೂ ಪಾತ್ರರಾಗಿದ್ದರು.

ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ದೊಡ್ಡ ಪ್ರಮಾಣದ ಮತಭೇದಗಳು ಬಹಿರಂಗಕ್ಕೆ ಬಂದು, ಪಕ್ಷದ ಸಂಘಟನೆಗೆ ತೊಂದರೆಗಳು ಕಂಡು ಬರುತ್ತಿದ್ದವು. ಆಗ ಸಮಸ್ಯೆಗಳನ್ನು ಬಗೆಹರಿಸಿ, ಪಕ್ಷದ ನಾಯಕರನ್ನು ಒಪ್ಪಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರಲಿಕ್ಕಾಗಿ ಪಂ. ನೆಹರೂರವರು ಶ್ರೀ ಮಲ್ಯರನ್ನು ಕಳುಹಿಸಿಕೊಡುವುದು ಸಾಮಾನ್ಯವಾಗಿತ್ತು. ಮಲ್ಯರು ಆಯಾ ರಾಜ್ಯದ ಸರಕಾರದಲ್ಲಿರುವ ನಾಯಕರನ್ನು ಮತ್ತು ಪಕ್ಷದ ನಾಯಕರನ್ನು ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ಸಂಪರ್ಕಿಸಿ, ಅಗತ್ಯವಾದ ಪರಿಹಾರವನ್ನು ಸೂಚಿಸುತ್ತಿದ್ದರು. ಅವರೆಲ್ಲರೂ ಒಂದೇ ಮೇಜಿನ ಮೇಲೆ ಕೂತು ಮಲ್ಯರು ಸೂಚಿಸಿದ ಪರಿಹಾರವನ್ನು ಒಪ್ಪಿಕೊಳ್ಳುತ್ತಿದ್ದರು. ಮುಂದೆ ಪಕ್ಷದ ಮತ್ತು ಸರಕಾರದ ಕಾರ್ಯಗಳನ್ನು ಒಮ್ಮನಸ್ಸಿನಿಂದ, ಎಲ್ಲರೂ ಕೈ ಕೈ ಜೋಡಿಸಿಕೊಂಡು ನಿರ್ವಹಿಸುತ್ತಿದ್ದರು. ಇದರಿಂದಾಗಿ ಕೇಂದ್ರೀಯ ನಾಯಕರು ಮಾತ್ರವಲ್ಲ ಪ್ರಾಂತೀಯ ನಾಯಕರ ಪ್ರೀತಿ ವಿಶ್ವಾಸ ಗೌರವಗಳಿಗೆ ಕೂಡ ಮಲ್ಯರು ಪಾತ್ರರಾಗಿದ್ದರು.

ಪಟ್ಟಂ ತಾನು ಪಿಳ್ಳೆ ಕೇರಳ ರಾಜ್ಯದ ಹಿರಿಯ ನಾಯಕರು. ಅವರು ಸ್ವಾತಂತ್ರ್ಯ ಚಳವಳದಲ್ಲಿ ನಿಷ್ಠೆಯಿಂದ ಭಾಗವಹಿಸಿ ಹಲವು ಬಾರಿ ಜೈಲುವಾಸವನ್ನು ಅನುಭವಿಸಿದವರು. ತಮ್ಮ ಜಾಣ್ಮೆ ಮತ್ತು ಕರ್ತೃತ್ವ ಶಕ್ತಿಯಿಂದ ಕೇರಳ ರಾಜ್ಯದಲ್ಲಿ ಬಹು ಎತ್ತರದ ನಾಯಕರಾಗಿ ಮುಂದೆ ಬಂದವರು. ಆದರೆ ಆ ರಾಜ್ಯದ ಕಾಂಗ್ರೆಸ್ಸಿನ ಇತರ ನಾಯಕರೊಡನೆ ಬೆಳೆದು ಬಂದ ಮತಭೇದದಿಂದಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೊರಬಂದರು. ಆಗ ಪ್ರಜಾ ಸೋಶಲಿಷ್ಟ ಪಾರ್ಟಿ ವರ್ಧಮಾನಕ್ಕೆ ಬರುತ್ತಿತ್ತು. ಆ ಪಕ್ಷವನ್ನು ಸೇರಿದರು. ಅಲ್ಲದೇ ಕೇರಳ ರಾಜ್ಯದಲ್ಲಿ ಕಮೂನಿಸ್ಟ್ ಪಕ್ಷದ ಹುರಿಯಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದು ಎಂ.ಎಸ್. ನಂಬೂದರಿಪಾಡರವರು ದೇಶದಲ್ಲಿಯೇ ಪ್ರಥಮ ಕಮ್ಯೂನಿಷ್ಟ ಪಕ್ಷದ ಸರಕಾರವನ್ನು ರಚಿಸಿದ್ದರು ಮತ್ತು ಕೇಂದ್ರ ಸರಕಾರಕ್ಕೆ ಅಲ್ಪಕಾಲದಲ್ಲಿಯೇ ತಲೆಬೇನೆ ತರುವ ಮಟ್ಟಕ್ಕೆ ರಾಜ್ಯಾಡಳಿತವನ್ನು ತಂದಿದ್ದರು. ಅಂತಹ ಸಮಯದಲ್ಲಿ ಕಮ್ಯೂನಿಷ್ಟ ಸರಕಾರವನ್ನು ಉರುಳಿಸಿ, ಕಾಂಗ್ರೆಸ್ ಪಕ್ಷದ ಸರಕಾರವನ್ನು ರಾಷ್ಟ್ರಪತಿಯವರ ಅಂಕಿತದೊಡನೆ ತರುವುದು ಅತ್ಯಗತ್ಯವಾಗಿತ್ತು. ಅದಕ್ಕೋಸ್ಕರ ಶ್ರೀನಿವಾಸ ಮಲ್ಯರನ್ನು ಅಲ್ಲಿಗೆ ಕಳುಹಿಸಿದರು. ಶ್ರೀ ಮಲ್ಯರು ಒಂದು ಹೊಸ ಸೂತ್ರವನ್ನು ಹೆಣೆದರು. ಅದಕ್ಕೆ ಕೇಂದ್ರ ನಾಯಕರ ಮನ್ನಣೆಯು ದೊರಕಿತು. ಈ ಸೂತ್ರ ಇಡೀ ದೇಶದ ಕಣ್ಣುಗಳನ್ನು ಇವರೆಡೆ ಸೆಳೆಯಿತು. ಮರುದಿನ ಪಟ್ಟಂ ತಾನು ಪಿಳ್ಳೆ ಪಿ.ಎಸ್.ಪಿ. ಪಕ್ಷಕ್ಕೆ ರಾಜೀನಾಮೆಯಿತ್ತರು. ಕಾಂಗ್ರೆಸ್ ವಿಧಾನಸಭಾ ಸದಸ್ಯರು ಪಿಳ್ಳೆಯವರನ್ನು ನಾಯಕರನ್ನಾಗಿ ಆರಿಸಿದರು ಮತ್ತು ಶ್ರೀ ಪಟ್ಟಂ ತಾನು ಪಿಳ್ಳೆ ಕೇರಳ ರಾಜ್ಯದ ಮುಖ್ಯಮಂತ್ರಿಗಳಾದರು. ಇಂತಹ ಹಲವಾರು ಸೂಕ್ಷ್ಮ ಪರಿಸ್ಥಿತಿಯನ್ನು ಮಲ್ಯರು ತಮ್ಮ ಚಾಕಚಕ್ಯತೆಯಿಂದ ಸಮರ್ಥವಾಗಿ ನಿಭಾಯಿಸಿದರು ಎಂದು ಹೇಳಬಹುದು. ಅದರಿಂದಾಗಿ ಮಲ್ಯರನ್ನು Trouble Shooter(ಆತಂಕ ನಿವಾರಕ) ಎಂದು ಕರೆಯುವಂತಾಯಿತು.

1950 ಮತ್ತು 1960ರ ದಶಕಗಳಲ್ಲಿ ಸ್ವಾತಂತ್ರ್ಯ ಸಿಕ್ಕಿ ಕಾಂಗ್ರೆಸ್ ಪಕ್ಷ ಕೇಂದ್ರ ಸರಕಾರದಲ್ಲಿ ಆಡಳಿತವನ್ನು ಕೈಯಲ್ಲಿ ತೆಗೆದುಕೊಂಡಿತು. ದೇಶದ ಕಣ್ಮಣಿ, ಗಾಂಧೀಜಿಯವರ ಉತ್ತರಾಧಿಕಾರಿಯೆಂದು ಬಣ್ಣಿಸಲ್ಪಡುತ್ತಿದ್ದ ಪಂ. ಜವಾಹರಲಾಲ ನೆಹರೂರವರು ಪಂತ ಪ್ರಧಾನರಾದರು. ಉಪಪ್ರಧಾನಿಯಾಗಿ ಸರದಾರ ವಲ್ಲಭಬಾಯಿ ಪಟೇಲರು ಆಯ್ಕೆ ಯಾದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಉನ್ನತ ಮಟ್ಟದ ನಾಯಕರಾಗಿ ಮೂಡಿ ಬಂದ ಪಂ. ಗೋವಿಂದ ವಲ್ಲಭ ಪಂತ, ವೌಲನಾ ಅಬ್ದುಲ್ಲ ಕಲಂ ಅಜಾದ ಕೇಂದ್ರ ಸರಕಾರದಲ್ಲಿ ಮಂತ್ರಿಗಳಾದರು. ಇನ್ನೊಬ್ಬ ಅಗ್ರಗಣ್ಯ ನಾಯಕ ಡಾ. ಬಾಬು ರಾಜೇಂದ್ರ ಪ್ರಸಾದರವರು ಘಟನಾ ಸಭೆಯ (Constituent Assembly) ಅಧ್ಯಕ್ಷರಾಗಿದ್ದರು. ಗವರ್ನರ್ ಜನರಲ ರಾಗಿದ್ದ ವೌಂಟ ಬ್ಯಾಟನರವರು ಭಾರತದಿಂದ ನಿರ್ಗಮಿಸಿದ ಮೇಲೆ, ಮಹಾಚಾಣಾಕ್ಷ ನೆಂದು ಖ್ಯಾತಿವೆತ್ತ ಚಕ್ರವರ್ತಿ ರಾಜಗೋಪಾಲಾಚಾರ್ಯರವರು ಪ್ರಥಮ ಭಾರತೀಯ ಗವರ್ನರ್ ಜನರಲ್ ಆಗಿ ನೇಮಿಸಲ್ಪಟ್ಟರು.

ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರದಾರ ಪಟೇಲರು ಭಾರತದ 560 ಸಣ್ಣ ದೊಡ್ಡ ರಾಜ್ಯಗಳನ್ನು ತಮ್ಮ ಉಕ್ಕಿನ ಹಿಡಿತದಿಂದ ಭಾರತದಲ್ಲಿ ವಿಲಿನೀಕರಿಸಿ, ರಾಜ ಮಹಾರಾಜರುಗಳ ಆಡಳಿತವನ್ನು ಕೊನೆಗೊಳಿಸಿದರು. ಧೀಮಂತರೂ, ಸಮರ್ಥರೂ ಆದ  ಡಾ. ಬಿ.ಆರ್. ಅಂಬೇಡ್ಕರ ಅವರ ನೇತೃತ್ವದಲ್ಲಿ ಜಗದ್ವಿಖ್ಯಾತ ನ್ಯಾಯವಾದಿಗಳೆನಿಸಿದ್ದ ಬೆನೆಗಲ್ ನರಸಿಂಗರಾವ್ ಹಾಗೂ ಅನಂತಶಯನಂ ಅಯ್ಯಂಗಾರ್ ಮುಂತಾದವರು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದರು. ಇಂತಹ ಮೇಧಾವಿಗಳ ಸಲಹೆ ಸೂಚನೆಗಳನ್ನು ಅಂಗೀಕರಿಸಿ ಸ್ವತಂತ್ರ ಭಾರತಕ್ಕೆ ಹೊಸ ಸಂವಿಧಾನವನ್ನು ರಚಿಸಿ ಡಾ. ಅಂಬೇಡ್ಕರರವರು ಸರಕಾರಕ್ಕೆ ಒಪ್ಪಿಸಿದರು. ಇದನ್ನು 1951ರಲ್ಲಿ ಘಟನಾ ಸಭೆ ಅಂಗೀಕರಿಸಿತು ಮತ್ತು ಭಾರತ ಪ್ರಜಾಪ್ರಭುತ್ವವಾದಿ ರಾಷ್ಟ್ರವೆಂದು ಘೋಷಿತವಾಯಿತು. 1952ರಲ್ಲಿ ಪ್ರಥಮ ಚುನಾವಣೆ ದೇಶದಲ್ಲಿ ನಡೆಯಿತು.

1952ರ ಮಹಾ ಚುನಾವಣೆ ಸಂದರ್ಭ. ಆಗ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ಡಾ. ಪುರುಷೋತ್ತಮ ದಾಸ ಟಂಡನರು, ಪಂ. ನೆಹರೂರವರ ಮುಖಂಡತ್ವ ದಲ್ಲಿ ಚುನಾವಣೆ ಎದುರಿಸುವುದೆಂದು ಕಾಂಗ್ರೆಸ್ ಪಕ್ಷ ನಿರ್ಣಯಿಸಿತು. ಅಂತಹ ಸಂಧಿಗ್ಧ ಕಾಲದಲ್ಲಿ ಲಾಲ ಬಹದ್ದೂರ ಶಾಸ್ತ್ರಿ ಹಾಗೂ ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳೆಂದು ಪಂ. ನೆಹರೂ ಘೋಷಿಸಿದರು. ಮಲ್ಯರು ಅದಾಗ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಜಾಣ್ಮೆ, ಸಂಘಟನಾ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆಂದು ಹೇಳಬಹುದು.

1952ರಲ್ಲಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಲೋಕಸಭಾ ಸ್ಪರ್ಧಿಯಾಗಿ ಖ್ಯಾತ ಪತ್ರಕರ್ತ ಬೆನಗಲ ಶಿವರಾಮರವರು ಹಾಗೂ ಉಡುಪಿ (Mangalore North) ಸ್ಥಾನಕ್ಕಾಗಿ ಉಳ್ಳಾಲ ಶ್ರೀನಿವಾಸ ಮಲ್ಯರು ಕಾಂಗ್ರೆಸ್ ಹುರಿಯಾಳುಗಳೆಂದು ಆಯ್ಕೆಗೊಂಡರು. ಕಾಂಗ್ರೆಸ್ ಪಕ್ಷದ ಈ ಇಬ್ಬರೂ ಹುರಿಯಾಳುಗಳು ಅತ್ಯಧಿಕ ಮತಗಳಿಂದ ಲೋಕಸಭೆಗೆ ಗೆದ್ದು ಬಂದರು. ಲೋಕಸಭೆಯಲ್ಲಿ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದಲ್ಲಿ ಶ್ರೀನಿವಾಸ ಮಲ್ಯರು ಚೀಫ್ ವ್ಹಿಪ್ ಆಗಿ ಆರಿಸಲ್ಪಟ್ಟರು. ನಂತರ ಜರುಗಿದ 1957, 1962ರ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ವತಿಯಿಂದ ಉಡುಪಿ ಕ್ಷೇತ್ರದಿಂದ ಉಳ್ಳಾಲ ಶ್ರೀನಿವಾಸ ಮಲ್ಯ ಅವರೇ ಬಹುಮತ ಪಡೆಯುತ್ತಿದ್ದರು. ಮತ್ತು 1965ರ ತನಕ – ನಿಧನರಾಗುವರೆಗೆ ಮಲ್ಯರೇ ಚೀಫ್ ವ್ಹಿಪ್ ಆಗಿ ಕಾರ್ಯ ನಿರ್ವಹಿಸಿದರು. ಆಶ್ಚರ್ಯ ವೆಂದರೆ ಮಲ್ಯರು ಈ 17 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಮಂತ್ರಿ ಸ್ಥಾನಕ್ಕಾಗಿ ಅಪೇಕ್ಷೆ ಪಡದೇ ಇದ್ದುದು! ಅವರಿಗೆ ತಮ್ಮ ಮತ ಕ್ಷೇತ್ರದ ಪ್ರಗತಿ, ದೇಶೋದ್ಧಾರ ಮಾತ್ರವೇ ಪ್ರಧಾನವಾಗಿತ್ತು.

1947ರಿಂದ 1965ರ ವರೆಗೆ ಸುಮಾರು 17 ವರ್ಷಗಳ ಕಾಲ ಘಟನಾ ಸಭೆಯಲ್ಲಿ, ನಂತರ ಲೋಕಸಭೆಯಲ್ಲಿ ಸದಸ್ಯರೂ ಆಗಿದ್ದ ಶ್ರೀನಿವಾಸ ಮಲ್ಯರು ಒಮ್ಮೆಯಾದರೂ ಲೋಕಸಭೆಯಲ್ಲಿ ಧ್ವನಿ ಹೊರಡಿಸಿದವರಲ್ಲ. ಲೋಕಸಭೆಯಲ್ಲಿ ಹಿಂದಿನ ಬೆಂಚಿನಲ್ಲಿ ಕೂತು ಸದಸ್ಯರು ಮತ್ತು ಮಂತ್ರಿಗಳ ವರ್ತನೆ, ಅವರುಗಳು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸುವ ರೀತಿ ನೀತಿಗಳನ್ನು, ಅವರುಗಳ ನಡವಳಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು. ಅಂತಹ ಸದಸ್ಯರಿಗೆ ತಮ್ಮ ಮನಸ್ಸಿನಲ್ಲಿಯೇ ಅಂಕ(Mark)ಗಳನ್ನು ಕೊಡುತ್ತಲಿದ್ದರು. ಅದರ ಫಲಿತಾಂಶವೇ ಲೋಕಸಭೆಯ ಕಾರ್ಯಕಲಾಪಗಳಲ್ಲಿ ಉತ್ಸುಕತೆ ಯಿಂದ ಭಾಗವಹಿಸುತ್ತಿದ್ದ ಸದಸ್ಯರನ್ನು ವಿವಿಧ ಉಪಸಮಿತಿಗಳಿಗೆ ಸದಸ್ಯರನ್ನಾಗಿ ನೇಮಿಸಲು, ವರಿಷ್ಠರಿಗೆ, ಸಂಬಂಧಪಟ್ಟ ಮಂತ್ರಿಗಳಿಗೆ ಶಿಫಾರಸು ಮಾಡಲು ಅವರು ಅತ್ಯಂತ ಅರ್ಹರಾಗಿದ್ದರು. ಅವರು ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಮಾತ್ರವಲ್ಲ ವಿರೋಧ ಪಕ್ಷಗಳ ಸದಸ್ಯರುಗಳಿಗೂ ವಿವಿಧ ಸಮಿತಿಗಳಲ್ಲಿ ಸದಸ್ಯತ್ವ ಕೊಡಿಸಲು ಪ್ರಯತ್ನಿಸುತ್ತಿದ್ದರು. ಅದರಿಂದಾಗಿ ಸ್ವಪಕ್ಷದ ಸದಸ್ಯರಲ್ಲಿ ಮಾತ್ರವಲ್ಲದೇ ವಿರೋಧ ಪಕ್ಷದ ಸದಸ್ಯರಲ್ಲಿಯೂ ಮಲ್ಯರ ಬಗ್ಗೆ ಗೌರವಾದರಗಳಿದ್ದವು.

ಶ್ರೀ ಮಲ್ಯರಂತೆಯೇ ಮಂಗಳೂರಿನವರೇ ಆದ ಹುಂಡಿ ವಿಷ್ಣು ಕಾಮತ (ಉತ್ತರ ಹಿಂದೂಸ್ಥಾನದವರಿಗೆ ಹರಿ ವಿಷ್ಣು ಕಾಮತ) ಅವರು ಕೂಡಾ 1947ರಿಂದ ಘಟನಾ ಸಭೆ ನಂತರ ಲೋಕಸಭೆಯ ಸದಸ್ಯರಾಗಿದ್ದವರು. ಮಂಗಳೂರಲ್ಲಿ ಶಾಲೆ ಕಾಲೇಜು ಶಿಕ್ಷಣವನ್ನು ಪೂರೈಸುತ್ತಾ ನಂತರ ಬ್ರಿಟನಿನಲ್ಲಿದ್ದು ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವೀಸ್ ಈಗ ಇಂಡಿಯನ್ ಎಂಡ್ಮಿನಿಸ್ಟ್ರೇಟಿವ್ ಸರ್ವೀಸ್) ಪರೀಕ್ಷೆ ಪಾಸಾದರು. ಸಣ್ಣ ಪ್ರಾಯದಿಂದಲೇ ಕ್ರಾಂತಿಕಾರಿ ಮನೋಭಾವ ಹೊಂದಿದ್ದ ಕಾಮತರು ಐ.ಸಿ.ಎಸ್. ಪಾಸಾಗಿ ಮಧ್ಯಪ್ರದೇಶದಲ್ಲಿ ಬ್ರಿಟಿಷ್ ಸರಕಾರದ ಅಧಿಕಾರಿಯಾಗಿ ಕೆಲವು ಕಾಲ ಕೆಲಸ ಮಾಡಿದ್ದರು. ಅಷ್ಟೊಂದು ಸ್ವಲ್ಪ ಸಮಯದಲ್ಲಿಯೇ ಆಡಳಿತದಲ್ಲಿ ತಂದ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ಅವರು ಅತ್ಯಂತ ಜನಪ್ರಿಯರಾಗಿದ್ದರು. ಆದರೆ ಅವರು ಹೆಚ್ಚು ಕಾಲ ಬ್ರಿಟಿಷರ ಸೇವೆಯಲ್ಲಿ ಇರಲಿಲ್ಲ.

ನೇತಾಜಿ ಸುಭಾಸಚಂದ್ರ ಬೋಸರ ಸಂಗಾತಿಗಳಾಗಿದ್ದ ಶ್ರೀ ಎಚ್.ವಿ. ಕಾಮತರು ಅವರಂತೆಯೇ ಸರಕಾರದ ಐ.ಸಿ.ಎಸ್. ಹುದ್ದೆ ತೊರೆದು, ಅವರೊಂದಿಗೆ ರಾಷ್ಟ್ರೀಯ ಚಳವಳದಲ್ಲಿ ಕೆಲಸ ಮಾಡಿದರು. ಮುಂದೆ ಅವರು ಹಲವು ಬಾರಿ ಮಧ್ಯಪ್ರದೇಶದಿಂದಲೇ ಲೋಕಸಭೆಗೆ ಕಾಂಗ್ರೆಸ್ ಪಕ್ಷದ ಹುರಿಯಾಳಾಗಿ ನಂತರ ಪ್ರಜಾ ಸೋಶಲಿಷ್ಟ ಪಕ್ಷದ ವತಿಯಿಂದ ಸ್ಪರ್ಧಿಸಿ ಆರಿಸಿ ಬಂದರು. ಅವರು ನೆಹರೂರವರ ಸರಕಾರದ ಧೋರಣೆಗಳನ್ನು ತೀವ್ರವಾಗಿ ಖಂಡಿಸುತ್ತಾ ಕೇಂದ್ರ ಸರಕಾರದ ಮಂತ್ರಿಗಳಿಗೆ, ಪಂ. ನೆಹರೂರವರಿಗೆ ಕೂಡಾ ತಲೆನೋವು ತರಿಸುತ್ತಿದ್ದರು. ಅವರಂತೆಯೇ ಮಹಾವೀರ ತ್ಯಾಗಿ, ರಾಮ ಮನೋಹರ ರಾವ್ ಲೋಹಿಯಾ, ಬ್ಯಾರಿಸ್ಟರ ನಾಥ ಪೈ, ಹೃದಯನಾಥ ಕುಂಜ್ರುರವರು ಕೂಡಾ ವಿರೋಧ ಪಕ್ಷದ ಬೆಂಚಿನಲ್ಲಿ ಕೂತು ಸರಕಾರಕ್ಕೆ ‘ಹರಹರಾ’ ಎನ್ನಿಸುವಂತೆ ಪ್ರಶ್ನೆಗಳನ್ನು ಹಾಕುತ್ತಲಿದ್ದರು. ಆದರೆ ಇವರೆಲ್ಲರಿಗೂ ವೈಯುಕ್ತಿಕವಾಗಿ ಶ್ರೀ ಮಲ್ಯರೊಂದಿಗೆ ನಿಕಟ ಸಂಪರ್ಕವಿತ್ತು, ಸ್ನೇಹವಿತ್ತು. ಆದರೂ ಲೋಕಸಭೆಯಲ್ಲಿ ಸರಕಾರಕ್ಕೆ ಇಕ್ಕಟ್ಟು ತರಲಿಕ್ಕಾಗಿ ಇವರಿಂದ ಮಂಡಿಸಲ್ಪಡುವ ವಿಧೇಯಕಗಳನ್ನು ಶ್ರೀ ಮಲ್ಯರು ತಪ್ಪಿಸುತ್ತಿದ್ದರು.

ಹಿಂದೂಸ್ಥಾನದಾದ್ಯಂತದಿಂದ, ಕೇಂದ್ರ ಸರಕಾರದಿಂದ ತಮ್ಮ ರಾಜ್ಯದ ಹಿತಕ್ಕಾಗಿ ಬೇಕಾಗುವ ಸಹಾಯ ಮತ್ತು ವಿತ್ತ ಯೋಜನೆಗಳಿಗೆ ಅನುಮತಿ ಗಳಿಸಲಿಕ್ಕಾಗಿ ದಿಲ್ಲಿಗೆ ಬರುತ್ತಿದ್ದ, ಮುಖ್ಯಮಂತ್ರಿಗಳಾಗಲಿ ಬೇರೆ ಮಂತ್ರಿಗಳಾಗಲಿ ದಿಲ್ಲಿಗೆ ಬಂದಾಗ ಮೊದಲು ಶ್ರೀ ಮಲ್ಯರನ್ನು ಭೇಟಿಯಾಗುತ್ತಿದ್ದರು. ಅವರಿಗೆ ತಮ್ಮ ಕಾರ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರಿಂದ ಸಂಬಂಧಿತ ಕೇಂದ್ರ ಸರಕಾರದ ಮಂತ್ರಿಗಳಿಗೆ ಶಿಫಾರಸು ಮಾಡಿಸಿಕೊಳ್ಳುತ್ತಿದ್ದರು. ಆ ಬಳಿಕವೇ ಕೇಂದ್ರ ಸರಕಾರದ ಮಂತ್ರಾಲಯಗಳಿಗೆ ತೆರಳಿ ಮಂತ್ರಿಗಳನ್ನು ಭೇಟಿ ಮಾಡಿ, ತಮ್ಮ ಕೆಲಸ ಮಾಡಿಸಿಕೊಳ್ಳುತ್ತಲಿದ್ದರು. ಇದಕ್ಕಾಗಿ ಅವರು ಮಲ್ಯರಿಗೆ ಯಾವಾಗಲೂ ಕೃತಜ್ಞರಾಗಿದ್ದು, ತಮ್ಮ ಸ್ನೇಹ-ಸಹಕಾರಗಳನ್ನು ಕೊಡುತ್ತಲಿದ್ದರು. ಈ ವಿಷಯವನ್ನು ಕರ್ನಾಟಕದ ಮಂತ್ರಿಗಳಾಗಿದ್ದ, ಮುಂದೆ ಮುಖ್ಯಮಂತ್ರಿಗಳಾದ ಶ್ರೀ ವೀರೇಂದ್ರ ಪಾಟೀಲರು 1972ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಂಟವಾಳಕ್ಕೆ ಬಂದಾಗ ತುಂಬಿದ್ದ ಸಭೆಯಲ್ಲಿ ಪ್ರಸ್ತಾವಿಸಿ ಮಲ್ಯರನ್ನು ಕೊಂಡಾಡಿದ್ದರು.

ಶ್ರೀನಿವಾಸ ಮಲ್ಯ ಮತ್ತು ದ.ಕ. ಜಿಲ್ಲೆ

ಇಂದು ಎಲ್ಲೆಲ್ಲಿಯೂ, ಎಲ್ಲರ ಬಾಯಿಯಲ್ಲೂ ಕೇಳಿ ಬರುತ್ತಲಿರುವುದು ‘Infrastructure’ಗಳ ಬಗ್ಗೆಯೇ ಮಾತು. ಅದಕ್ಕಾಗಿ ಇಷ್ಟು ಸಾವಿರ ಕೋಟಿ ಖರ್ಚು ಎಂಬ ಗುಲ್ಲು. ಅದಕ್ಕಾಗಿ ಕೇಂದ್ರ ಸರಕಾರದ ವತಿಯಿಂದ, ರಾಜ್ಯ ಸರಕಾರಗಳ ವತಿಯಿಂದ ನೇಮಿಸಲ್ಪಡುವ ಉನ್ನತ ಮಟ್ಟದ ಸಮಿತಿಗಳ ನೇಮಕ (High level committee). ಯೋಜನೆಯ ಅಂತಿಮ ದಿನಗಳ ಘೋಷಣೆ. ಅದರ ಬಳಿಕ ಹಲವಾರು ಬಾರಿ ಅಂತಿಮ ದಿನಗಳ ಮುಂದೂಡಿಕೆ. ಮಧ್ಯದಲ್ಲಿ ಇಷ್ಟು ಸಾವಿರ ಕೋಟಿ ಗುಳುಂ ಮಾಡಿದ ಬಗ್ಗೆ ಆರೋಪ, ಪ್ರತ್ಯಾರೋಪಗಳ ಸುರಿಮಳೆ.

ಆದರೆ 1950ರ ದಶಕದ ಮೊದಲಲ್ಲಿ ಪಂ. ಜವಾಹರಲಾಲ ನೆಹರೂರವರು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಥಮ ಪಂಚವಾರ್ಷಿಕ ಯೋಜನೆಗಳಿಗೆ ನಾಂದಿ ಹಾಡಿದರು. ಅಂದು ದೇಶ ಬಡತನ, ನಿರಕ್ಷರತೆ, ನಿರುದ್ಯೋಗ, ರೋಗರುಜಿನಗಳ ಬೇಗುದಿಯಲ್ಲಿ ತೊಳಲಾಡುತ್ತಿತ್ತು. ಅಂತಹ ದೀನ ಪರಿಸ್ಥಿತಿಯಿಂದ ದೇಶವನ್ನು, ದೇಶದ ಜನತೆಯನ್ನು ವ್ಯವಸ್ಥಿತವಾಗಿ ಪಾರು ಮಾಡುವುದಕ್ಕೆ ಪಂಚವಾರ್ಷಿಕ ಯೋಜನೆಯೊಂದೇ ಹಾದಿ ಎಂದು ಪಂ. ನೆಹರೂ ಘೋಷಿಸಿದರು. ಅದರ ಪೂರ್ಣ ಪ್ರಯೋಜನವನ್ನು ಪಡೆದ ಭಾಗ್ಯವಂತರು ನಾವು ದಕ್ಷಿಣ ಕನ್ನಡ ಜಿಲ್ಲೆಯವರು. ಅದರ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯರು. ದೇಶದ ಪಂತ ಪ್ರಧಾನ ಪಂ. ನೆಹರೂರವರ ಬಲಗೈ ಬಂಟನಾಗಿ ಮತ್ತು ಲಾಲ ಬಹದ್ದೂರ ಶಾಸ್ತ್ರೀಜಿಗಳಂತಹ ನಿಷ್ಕಾಮಕರ್ಮಿ ನಾಯಕರ ವಿಶ್ವಾಸಿಗನಾಗಿ, ಮಲ್ಯರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲೆಗೆ ತಂದ ಯೋಜನೆಗಳು ಇತರ ಪ್ರದೇಶಗಳ ನಾಯಕರ ಕಣ್ಣು ತೆರೆಸುವಂತಹವು. ರಾಜಕೀಯವಾಗಿ ಮಲ್ಯರನ್ನು ತೆಗಳುವವರೂ ಕೂಡಾ ಅವರ ಸಾಧನೆಗಳನ್ನು ಮೆಚ್ಚುವವರೇ ಆಗಿದ್ದರು. ಇತ್ತೀಚೆಗೆ ಮಂಗಳೂರಿಗೆ ಬಂದಾಗ ಕಾರ್ಮಿಕ ನಾಯಕರಾಗಿ ಮೂಡಿ ಬಂದು ಬಳಿಕ ಭಾರತದ ರಾಜಕೀಯ ಆಗಸದಲ್ಲಿ ಭವ್ಯ ತಾರೆಯಾಗಿ ಪ್ರಜ್ವಲಿಸುತ್ತಿರುವ ಜೋರ್ಜ್ ಫೆನಾಂಡೀಸ್ ಮಾಡಿದ ಒಂದು ಭಾಷಣದಲ್ಲಿ “ಜಿಲ್ಲೆಯ ಪ್ರಗತಿ ಮಲ್ಯರಿಂದಲೇ ಆಯಿತು. ಬಳಿಕ ಬಂದ ಪುಢಾರಿಗಳು ಭಾಷಣ ಗಳಲ್ಲಿಯೇ ಅಂಗೈ ಮೇಲೆ ಜಗತ್ತನ್ನು ತೋರಿಸಿದವರು” ಎಂದು ಮಲ್ಯರನ್ನು ಪ್ರಾಂಜಲವಾಗಿ ಹೊಗಳಿದರು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದ.ಕ. ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಂಚರಿಸಿ, ಜಿಲ್ಲೆಯ ಹಳ್ಳಿ ಪಟ್ಟಣಗಳ ಭೂ ನಕಾಶೆಯನ್ನು ತನ್ನ ಮನಸ್ಸಿನಲ್ಲಿಯೇ ತೆರೆದಿಟ್ಟಿದ್ದ ಮಲ್ಯರು ಸಾಮಾನ್ಯ ಜನರ ಆಶೆ ಆಕಾಂಕ್ಷೆಗಳನ್ನು ನರ ನಾಡಿಗಳನ್ನು ಸಂಪೂರ್ಣವಾಗಿ ಅರಿತು ಮನನ ಮಾಡಿಕೊಂಡಿದ್ದರು ಮತ್ತು ಬಹುಶಃ ಆಗಲೇ ಈ ನಾಡಿನ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮದೇ ಆದ ಯೋಜನೆಗಳನ್ನು ಮನಸ್ಸಿನಲ್ಲಿ ಹಾಕಿ ಕೊಂಡಿದ್ದರು ಎಂದು ಕಾಣುತ್ತದೆ. ಮುಂದೆ ಸ್ವಾತಂತ್ರ್ಯ ಬಂದ ಬಳಿಕ ಕೇಂದ್ರ ಸರಕಾರದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಸಂದ ಸ್ಥಾನಮಾನಗಳ ಬಲದಿಂದ, ತನ್ನದೇ ಆದ ಯುಕ್ತಿ ಮಾರ್ಗದಿಂದ, ಪಂಚವಾರ್ಷಿಕ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಬಿಡದೇ ಪ್ರಯತ್ನಿಸಿದರು.

1952-57ರ ಅವಧಿಯಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆ, 1952-62ರ ಅವಧಿಯಲ್ಲಿ ದ್ವಿತೀಯ ಪಂಚವಾರ್ಷಿಕ ಯೋಜನೆಗಳಲ್ಲಿ ಮಲ್ಯರು ತನ್ನ ಲೋಕಸಭಾ ಸದಸ್ಯನ ನೆಲೆಯಲ್ಲಿ, ಆಡಳಿತ ಪಕ್ಷವಾದ ಕಾಂಗ್ರೆಸಿನ ಕಾರ್ಯಕಾರಿಣಿಯ ಸದಸ್ಯನ ನೆಲೆಯಲ್ಲಿ ಹಾಗೆಯೇ ಲೋಕಸಭಾದಲ್ಲಿ ಚೀಫ್ ವ್ಹಿಪ್ ಸ್ಥಾನದ ಬಲದಿಂದ ತನ್ನ ಸಮಸ್ತ ಪ್ರಭಾವ ಮತ್ತು ಸ್ಥಾನಬಲಗಳನ್ನು ಕೇಂದ್ರೀಕರಿಸಿ ದ.ಕ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ, ಅದಕ್ಕೆ ತಗಲುವ ಧನ ವಿನಿಯೋಗಗಳಿಗೆ ಅನುಮತಿಯನ್ನು ದೊರಕಿಸಿಕೊಂಡು ಒಂದೊಂದಾಗಿ ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕಿಳಿಸಿದರು.

ತಾನು ಮನಸ್ಸಿನಲ್ಲಿಯೇ ಹಾಕಿಕೊಂಡ ಯೊಜನೆಗಳನ್ನು ಮಲ್ಯರು ಜಿಲ್ಲೆಯ ಶಾಸಕರ, ಜನನಾಯಕರ ಮುಂದಿಟ್ಟಾಗ ಅವರುಗಳು ದಿಙ್ಮೂಢರಾಗಿ ಕೇಳಿಕೊಳ್ಳುತ್ತಿದ್ದುದನ್ನು ನಾನು ಕಂಡಿದ್ದೇನೆ. ಯಾಕೆಂದರೆ ಈ ಯೋಜನೆಗಳ ವ್ಯಾಪ್ತಿ ಇಲ್ಲಿಯವರ ಮಾನಸಿಕ ಸ್ಥಿತಿಗಿಂತ ಎಷ್ಟೋ ಉನ್ನತ ಮಟ್ಟದಲ್ಲಿದ್ದವು. ಬಂಟವಾಳಕ್ಕೊಮ್ಮೆ ಬಂದು ಕಾಂಗ್ರೆಸ್ ಕಾರ್ಯಕರ್ತರ, ಜಿಲ್ಲಾ ಬೋರ್ಡ್, ಪಂಚಾಯತ್ ಬೋರ್ಡ್ ಸದಸ್ಯರ ಸಭೆಯಲ್ಲಿ ಬಂಟವಾಳ ತಾಲೂಕಿನಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಮತ್ತು ಅದರ ಸಾಧನೆಗಾಗಿ ತಾನು ಹಾಕಿದ ಯೋಜನೆ ಗಳನ್ನು ಮುಂದಿಟ್ಟಾಗ, ಎಲ್ಲರೂ ತೆರೆದ ಬಾಯಿಂದ ಆಲಿಸುವವರೇ ಆಗಿದ್ದನ್ನು ನಾನು ಸ್ವಂತ ಕಣ್ಣಾರೆ ಕಂಡವನು. “ನಿಮ್ಮ ತಾಲೂಕಿನ ಅಥವಾ ಊರಿನ ಅಭಿವೃದ್ಧಿಗಾಗಿ ನನ್ನಿಂದ ಇನ್ನೇನಾಗ ಬೇಕು?” ಎಂದು ಕೇಳಿದಾಗ ನೆರೆದವರಲ್ಲಿ ಯಾರೂ ಏನೂ ಹೇಳಲಾಗದವರಾಗಿದ್ದರು. ಮುಂದೆ ಅವರಾಗಿಯೇ ನಿಮಗೆ ಇನ್ನೇನಾದರೂ ಅಭಿವೃದ್ಧಿ ಆಗಬೇಕಾದರೆ ತಿಳಿಸುತ್ತಲಿರಿ. ನಾನು ಅದನ್ನು ಕಾರ್ಯರೂಪಕ್ಕಿಳಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟರು.

ಮಲ್ಯರಿಗೆ ಯಾವುದೇ ಜಿಲ್ಲಾ ಬೋರ್ಡು ಸದಸ್ಯನಾಗಲೀ ಅಥವಾ ಶಾಸಕನಾಗಲೀ ಅಥವಾ ಕಾಂಗ್ರೆಸ್ ನೇತಾರರೇ ಆಗಲೀ, ಸರಕಾರದ ನೌಕರರನ್ನು ದೂರಿದರೆ ಆಗುತ್ತಿರಲಿಲ್ಲ. ನಾವು ಸರಕಾರದ ನೌಕರ ಶಾಹಿಯವರನ್ನು ದೂರದೇ, ಅಂತಹರನ್ನು ಸಮಜಾಯಿಸಿಕೊಂಡು ಕೆಲಸಗಳನ್ನು ಮಾಡಿಸುತ್ತಲಿರಬೇಕು. ಇದರಿಂದಾಗಿ ಅಭಿವೃದ್ಧಿ ಸಾಧ್ಯ ಎಂದು ಅವರು ಎಚ್ಚರಿಸುತ್ತಿದ್ದುದನ್ನು ನಾನು ಸಭೆಗಳಲ್ಲಿ ಕೇಳಿರುತ್ತೇನೆ. ಮಲ್ಯರ ಜಾಣ್ಮೆಯ ನುಡಿಗಳು ಇಂದಿಗೂ ಸರ್ವಮಾನ್ಯ. ಇಂತಹ ವಿಧಾನಗಳಿಂದಲೇ ಅವರು ಜಿಲ್ಲೆಯಲ್ಲಿ ಸರಕಾರೀ ಅಧಿಕಾರಿಗಳಿಂದ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುತ್ತಿದ್ದರು ಎಂದು ಸ್ಪಷ್ಟವಾಗುತ್ತದೆ. ಮಲ್ಯರಿಗೆ ಜಿಲ್ಲೆಯ ಅಂಗುಲ ಅಂಗುಲ ನೆಲದ ಮತ್ತು ಅಲ್ಲಿನ ವ್ಯಕ್ತಿಗಳ ಪರಿಚಯ, ಅನುಭವಗಳು ಇದ್ದವು.

ಶ್ರೀನಿವಾಸ ಮಲ್ಯರು ತಾನು ಸಾಂಸದಿಕನಾಗಿದ್ದ ಕಾಲಾವಧಿಯಲ್ಲಿ ಮಾಡಿದ ಕೆಲಸಗಳು ಯಾದಿ ಈ ಕೆಳಗಿನಂತಿವೆ.

ಮಂಗಳೂರು ಆಕಾಶವಾಣಿ (ಮಂಗಳೂರು)

ಮಂಗಳೂರು ವಿಮಾನ ನಿಲ್ದಾಣ (ಬಜ್ಪೆ)

ಮಂಗಳೂರು – ಹಾಸನ ರೈಲ್ವೇ ಯೋಜನೆ

ರಾಷ್ಟ್ರೀಯ ಹೆದ್ದಾರಿ – 17

ರಾಷ್ಟ್ರೀಯ ಹೆದ್ದಾರಿ – 42

ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ (ಈಗ ಎನ್.ಐ.ಟಿ.ಕೆ.)

ಸುರತ್ಕಲ್ ಮಂಗಳೂರು ಸರ್ವಋತು ಬಂದರು (ಪಣಂಬೂರು)

ಮಂಗಳೂರು ರಾಸಾಯನಿಕ ಗೊಬ್ಬರ ಕಾರ್ಖಾನೆ (ಪಣಂಬೂರು)

ಇಡೀ ದೇಶದಲ್ಲಿಯೇ ಕೈ ಬೆರಳಿನಷ್ಟು ಮಾತ್ರ ಆಕಾಶವಾಣಿ ಕೇಂದ್ರಗಳು ಚಾಲ್ತಿ ಯಲ್ಲಿದ್ದಾಗ ಮಂಗಳೂರಿನಲ್ಲಿ ಪ್ರತ್ಯೇಕ ಆಕಾಶವಾಣಿ ನಿಲಯ ಬಂದದ್ದು, ಆ ಕಾಲದಲ್ಲಿ ನಮ್ಮ ಜಿಲ್ಲೆಯ ಜನರ ಕಲ್ಪನೆಗೆ ಮೀರಿದ್ದಾಗಿತ್ತು.

ಹಾಗೆಯೇ ದೇಶದಲ್ಲಿ ಅತ್ಯಲ್ಪ ಸಂಖ್ಯೆಯ ವಿಮಾನ ನಿಲ್ದಾಣಗಳು ಮತ್ತು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಒಂದು ವಿಮಾನ ನಿಲ್ದಾಣವಿದ್ದಾಗ ಮಂಗಳೂರಿ ನಲ್ಲಿಯೂ ಇನ್ನೊಂದು ವಿಮಾನ ನಿಲ್ದಾಣವೆಂಬುದು ಆ ದಿನಗಳಲ್ಲಿ ದಕ್ಷಿಣ ಹಿಂದೂಸ್ತಾನ ದಲ್ಲಿಯೇ ವಿಶೇಷವಾಗಿತ್ತು.

ತೃತೀಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿಯೇ ಮಂಗಳೂರು-ಹಾಸನ ರೈಲ್ವೆ ಯೋಜನೆಯ ಪರಿಕಲ್ಪನೆ ಮಲ್ಯರ ದೂರಗಾಮಿ ದೃಷ್ಟಿಗೆ ಸಾಕ್ಷಿಯಾಗಿದೆ. ಮುಂದೆ ಶ್ರೀ ಟಿ.ಎ. ಪೈಗಳವರು ಕೇಂದ್ರ ಸರಕಾರದಲ್ಲಿ ರೈಲ್ವೇ ಮಂತ್ರಿಗಳಾಗಿದ್ದಾಗ ಯೋಜನೆಯ ಉದ್ಘಾಟನೆಯಾಗಿತ್ತು. ಈಗಿನ ತಲೆಮಾರಿಗೆ ಗೊತ್ತಿರುವಂತೆ, ಮಂಗಳೂರು-ಹಾಸನ ರೈಲ್ವೇ ಮಾರ್ಗವನ್ನು ಬ್ರಾಡಗೇಜ್ ಹಳಿಗಳಿಗೆ ವರ್ಗಾಯಿಸುವುದಕ್ಕೆ ಸುಮಾರು 14 ವರ್ಷಗಳಷ್ಟು ದೀರ್ಘಾವಧಿ ತಗಲಿದ್ದು, ನಮ್ಮ ರಾಜಕೀಯ ಪುಢಾರಿಗಳ ಕಾರ್ಯಕ್ಷಮತೆಗೆ ಸಾಕ್ಷಿ.

ಐವತ್ತು ವರ್ಷಗಳ ಹಿಂದೆ ಮಂಗಳೂರಿನಿಂದ ಕುಂದಾಪುರಕ್ಕೆ ಪ್ರಯಾಣಿಸಲು ಒಂದುವರೆ ದಿನಗಳು ತಗಲುತ್ತಿದ್ದವು. ಅಲ್ಲಲ್ಲಿ ನದಿಗಳಿಗೆ ಕಡವುಗಳು ಇದ್ದವು. ಬಸ್ಸು ಪ್ರಯಾಣ, ಪುನಃ ನದಿ ಮತ್ತು ಕಡವುಗಳನ್ನು ದೋಣಿಯಲ್ಲಿ ದಾಟಿ ಮುಂದಿನ ಪ್ರಯಾಣಕ್ಕೆ ಬಸ್ಸುಗಳನ್ನು ಹತ್ತಬೇಕಾಗಿತ್ತು. ದ್ವಿತೀಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಕಾಶ್ಮೀರದಿಂದ ಕನ್ಯಾಕುಮಾರಿಗೆ ರಾಷ್ಟ್ರೀಯ ನೇರಮಾರ್ಗ ಯೋಜನೆ ಕೈಗೊಂಡಾಗ ಮಲ್ಯರು ತಮ್ಮ ಪ್ರಭಾವವನ್ನು ಉಪಯೋಗಿಸಿ ಈ ಯೋಜನೆಯಡಿಯಲ್ಲಿ ಮುಂಬಯಿ ಯಿಂದ ಕಾರವಾರ, ಕುಮಟಾ, ಹೊನ್ನಾವರ ಮಾರ್ಗವಾಗಿ, ಕುಂದಾಪುರ, ಉಡುಪಿ, ಮಂಗಳೂರು, ಕೇರಳ ರಾಜ್ಯದಿಂದ ಈ ರಾಷ್ಟ್ರೀಯ ಹೆದ್ದಾರಿ – 17 (N.H. – 17) ಹಾದು ಹೋಗುವಂತೆ ಮಾಡಿದರು.

ಅದರಂತೆಯೇ ಮಂಗಳೂರು-ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕೂಡಾ ಮಲ್ಯರು ಅಸ್ತಿಭಾರ ಹಾಕಿದ್ದರು. ಈ ಎಲ್ಲಾ ಯೋಜನೆ-ಯೋಚನೆಗಳಿಂದಾಗಿ ನಾವು ಬಾಯಲ್ಲಿ ಕೊಚ್ಚಿಕೊಳ್ಳುತ್ತಿರುವ Infrastructure ಯೋಜನೆಗಳನ್ನು ಮಲ್ಯರು ಸದ್ದು ಗದ್ದಲಗಳಿಲ್ಲದೇ ಜಿಲ್ಲೆಗೆ, ರಾಜ್ಯಕ್ಕೆ ತಂದುಕೊಟ್ಟರು.

ಲಾಲ ಬಹುದ್ದೂರ ಶಾಸ್ತ್ರಿಗಳವರು ಕೇಂದ್ರ ಸರಕಾರದಲ್ಲಿ ವಿದ್ಯಾಮಂತ್ರಿಗಳಾಗಿದ್ದ ಸಮಯದಲ್ಲಿ ದೇಶದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವೀಯುವುದಕ್ಕಾಗಿ ನಾಲ್ಕು ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ (Regional) ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಯೋಜನೆಯನ್ನು ಮಾಡಿದ್ದರು. ಇದರ ವಾಸನೆ ಮೂಗಿಗೆ ಬಡಿದ ಶ್ರೀನಿವಾಸ ಮಲ್ಯರು ತನ್ನ ಆಪ್ತರಾದ ಲಾಲ ಬಹದ್ದೂರ ಶಾಸ್ತ್ರಿಗಳವರಲ್ಲಿಗೆ ಸೀದಾ ಹೋಗಿ, ಒಂದು ಪ್ರಾದೇಶಿಕ ತಾಂತ್ರಿಕ ಕಾಲೇಜನ್ನು ಮಂಗಳೂರಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿದರು. ಮಲ್ಯರು ಮುಂದಿಟ್ಟ ವಾದ ಗಳನ್ನು ಆಲಿಸಿದ ಶಾಸ್ತ್ರಿಗಳು ಮಲ್ಯರ ಸೂಚನೆಗೆ ಒಪ್ಪಿಗೆ ಕೊಟ್ಟರೆಂದು ಕಾಣುತ್ತದೆ. ಅದೇ ರಾತ್ರಿ ಶ್ರೀನಿವಾಸ ಮಲ್ಯರು ಆಗ ಮಂಗಳೂರಿನಲ್ಲಿ ಜಿಲ್ಲಾ ಪಿ.ಡಬ್ಲ್ಯು.ಡಿ. ಅಭಿಯಂತರ (ಇಂಜಿನಿಯರ)ರಾಗಿದ್ದ ಶ್ರೀ ಎಂ.ಎಲ್. ಶ್ರೇಷ್ಠ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಸುರತ್ಕಲ್ನಲ್ಲಿ ಇರುವ ಖಾಲಿ ಪ್ರದೇಶದಲ್ಲಿ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿಗಾಗಿ ತಪಾಸಣೆ ನಡೆಸಿ, ಸಿ.ಪಿ.ಸಿ. ಕಂಪೆನಿಯ ಮೆನೆಜಿಂಗ್ ಡೈರೆಕ್ಟರ್ ಶ್ರೀ ವ್ಹಿ.ಎಸ್. ಕುಡ್ವಾರ ಸಹಾಯವನ್ನು ಪಡೆದು ಕೂಡಲೇ ಅಲ್ಲಿ ಒಂದು ತಾತ್ಪೂರ್ತಿಕ ಶೆಡ್ (Shed) ಕಟ್ಟಿಸಿ ತಯಾರಿ ಮಾಡಿಕೊಳ್ಳಬೇಕು. ತಾನು ಇನ್ನು 15 ದಿನಗಳ ಒಳಗೆ ಶ್ರೀ ಲಾಲ ಬಹದ್ದೂರ ಶಾಸ್ತ್ರಿ ಗಳವರನ್ನು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜನ್ನು ಉದ್ಘಾಟಿಸಲು ಜಿಲ್ಲೆಗೆ ಕರಕೊಂಡು ಬರುತ್ತೇನಾಗಿ ಹೇಳಿದರಂತೆ. ಹಾಗೆಯೇ ಶ್ರೀ ಕುಡ್ವರಿಗೂ ವಿಷಯ ತಿಳಿಸಿ, ಶ್ರೀ ಎಂ.ಎಲ್. ಶ್ರೇಷ್ಠರು ಕೇಳಿದ ಎಲ್ಲಾ ಸವಲತ್ತುಗಳನ್ನು ಅವರಿಗೆ ತಕ್ಷಣ ಒದಗಿಸಲು ಹೇಳಿದರಂತೆ. ಶ್ರೀ ಕುಡ್ವ ಮತ್ತು ಶ್ರೀ ಶ್ರೇಷ್ಠರ ಕಾರ್ಯತತ್ಪರತೆಯಿಂದ ಶೀಘ್ರಾನುಶೀಘ್ರವಾಗಿ ಸುರತ್ಕಲ್ನಲ್ಲಿ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ಕಟ್ಟಡ ತಾತ್ಪೂರ್ತಿಕ ವಾಗಿಯಾದರೂ ಸಿದ್ಧವಾಗಿ, ಶ್ರೀ ಲಾಲ ಬಹದ್ದೂರ ಶಾಸ್ತ್ರಿಗಳವರಿಂದಲೇ ಅದರ ಉದ್ಘಾಟನೆ ಯಾಯಿತು. ಇದರಿಂದಾಗಿ ದ.ಕ. ಜಿಲ್ಲೆಯ ಸಾವಿರಾರು ಯುವಕರಿಗೆ ತಾಂತ್ರಿಕ ಶಿಕ್ಷಣದ ಸೌಲಭ್ಯ ಅತೀ ಕಡಿಮೆ ವೆಚ್ಚದಲ್ಲಿ ಕೈಗೆಟಕುವಂತಾಯಿತು. ಶ್ರೀನಿವಾಸ ಮಲ್ಯರ ಚಾಕಚಕ್ಯತೆ ಮತ್ತು ಎಂ.ಎಲ್. ಶ್ರೇಷ್ಠರ ಕಾರ್ಯಕ್ಷಮತೆಯಿಂದ ಸುರತ್ಕಲ್ ಎಂಜಿನಿಯರಿಂಗ್ ಕಾಲೇಜು ಅತೀ ಶೀಘ್ರ ಕಾಲದಲ್ಲಿ ಪ್ರಾರಂಭಿಸಲ್ಪಟ್ಟಿತು. ಇಲ್ಲವಾದಲ್ಲಿ ಅದು ಬೇರೆ ರಾಜ್ಯಗಳ ಪಾಲಾಗುತ್ತಿತ್ತು ಎಂದು ಖಂಡಿತವಾಗಿ ಹೇಳಬಹುದು.

ಇಲ್ಲಿ ಶ್ರೀ ಎಂ.ಎಲ್. ಶ್ರೇಷ್ಠರ ಬಗ್ಗೆ ಒಂದು ಮಾತನ್ನು ಹೇಳಬೇಕು. ಅವರೊಬ್ಬ ನಮ್ಮ ಜಿಲ್ಲೆ ಕಂಡ ಅತ್ಯುತ್ತಮ ಶ್ರೇಣಿಯ ಇಂಜಿನಿಯರ್ ಆಗಿದ್ದರು. ಕರ್ತವ್ಯನಿಷ್ಠರಾದ ಶ್ರೇಷ್ಠರು, ತಮ್ಮ ಕೈಕೆಳಗಿನವರನ್ನು ತಮ್ಮಂತೆಯೇ ಯಾವುದೇ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮಾಡಿ, ತಮ್ಮಡನೆ ಒಯ್ಯಬಲ್ಲವರಾಗಿದ್ದರು. ಒಂದು ಚಿಕ್ಕಾಸಿನ ಅಪೇಕ್ಷೆ ಇಲ್ಲದೇ, ಕೈಹಿಡಿದ ಕಾರ್ಯಗಳನ್ನು ನಿರ್ದಿಷ್ಟ ಅವಧಿಯೊಳಗೆ ಮಾಡಿ ಮುಗಿಸಬೇಕೆಂಬ ಛಲವಾದಿ. ಅಂತೆಯೇ ರಸ್ತೆ, ಕಟ್ಟಡಗಳ ನಿರ್ಮಾಣ ಕಾರ್ಯಗಳಿಗಾಗಿ ಟೆಂಡರು ಮರು ಟೆಂಡರುಗಳ ಯಾವುದೇ ಗೊಂದಲಗಳಿಲ್ಲದೇ, ನಿಷ್ಠಾವಂತ ಕಂಟ್ರಾಕ್ಟರುಗಳನ್ನು ಅವರೇ ಕರೆದು, ಕಾರ್ಯಗಳನ್ನು ನಮೂದಿಸಿ ಕೆಲಸ ಪ್ರಾರಂಭಿಸುವಂತೆ ಮಾಡಿ ಪ್ರೋತ್ಸಾಹಿಸುತ್ತಿದ್ದರು. ಮಲ್ಯರ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಅಷ್ಟು ವೇಗದಲ್ಲಿ ಈಡೇರುವಲ್ಲಿ ಶ್ರೇಷ್ಠರು ವಹಿಸಿದ ಪಾತ್ರ ಉಲ್ಲೇಖಿಸಲು ಅರ್ಹವಾಗಿದೆ. ಅಂತಹ ನಿಷ್ಕಾಮಕರ್ಮಿ ಅಧಿಕಾರಿಗಳ ಕೊರತೆ ಇಂದು ಅಧಿಕವಾಗಿದೆಯೆಂದು ವ್ಯಥೆಯಿಂದ ಹೇಳಲೇಬೇಕಾಗುತ್ತದೆ.

ಮಳೆಗಾಲದಲ್ಲಿ ದಕ್ಷಿಣ ಕನ್ನಡ (ಕುಂದಾಪುರದಿಂದ ಕಾಸರಗೋಡು ತನಕ)ದ ಉದ್ದಗಲಗಳಲ್ಲಿ ಹರಿಯುವ ನದಿಗಳು ನೆರೆಯ ನೀರಿನಿಂದ ತುಂಬಿ, ರಸ್ತೆಗಳೇ ಕಾಣದಾಗಿ ಪ್ರಯಾಣಿಕರು ಕಂಗಾಲು ಪರಿಸ್ಥಿತಿ ಅನುಭವಿಸಬೇಕಾಗಿ ಬರುತ್ತಿತ್ತು. ಜನತೆಯ ಕಷ್ಟ ಕಾರ್ಪಣ್ಯಗಳ ಅನುಭವ ಶ್ರೀನಿವಾಸ ಮಲ್ಯರಿಗೂ ಇತ್ತು. ಅದಕ್ಕಾಗಿಯೇ ಮೊದಲ ಮತ್ತು ದ್ವಿತೀಯ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ನದಿಗಳ ಮೇಲಿರುವ ಸೇತುವೆಗಳನ್ನು ಎತ್ತರಿಸುವತ್ತ ಕಾರ್ಯೋನ್ಮುಖರಾದರು. ಅದರಿಂದಾಗಿ ಬಹುತೇಕ ಎಲ್ಲಾ ಸಂಕ ಮೋರಿಗಳು ಎತ್ತರಕ್ಕೇರುವಂತಾದವು. ಮಲ್ಯರು ಯಾವುದೇ ಒಂದು ಯೋಜನೆ ಅಥವಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರೆ, ಅದು ಪೂರ್ತಿಯಾಗುವ ತನಕ ಅದರ ಹಿಂದು-ಮುಂದೆಯೇ ಇದ್ದು ಬಿಡುತ್ತಿದ್ದರು. ಅದಕ್ಕಾಗಿ ಅವರು ಸರಕಾರದ ಸಂಬಂಧಿತ ಅಧಿಕಾರಿಗಳ, ಮಂತ್ರಿಗಳ ಬೆನ್ನು ಹತ್ತಿ, ಅದು ಶೀಘ್ರದಲ್ಲಿ ಉತ್ತಮ ದರ್ಜೆಯಲ್ಲಿ ಆಗುವಂತೆ ನೋಡಿಕೊಳ್ಳುತ್ತಿದ್ದರು.

1962ರಲ್ಲಿ ಮಂಗಳೂರು ನಗರಕ್ಕೊಂದು ‘ಪುರಭವನ’ ಬೇಕೆಂದು ನಿರ್ಧಾರ ವಾಗಿತ್ತು. ಅಂತಹ ಪುರಭವನ ಸುಂದರವಾಗಿರಬೇಕು ಮತ್ತು ದೀರ್ಘಕಾಲದ ಬಾಳ್ವಿಕೆ ಯುಳ್ಳದ್ದಾಗಿರಬೇಕೆಂಬುದು ಮಲ್ಯರ ಒತ್ತಾಸೆಯಾಗಿತ್ತು. ಅಂತಹ ಮಾದರಿ ಪುರಭವನದ ನಿರ್ಮಾಣ ಕಾರ್ಯವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಗ್ಯಾನನ ಡಂಕರ್ಲಿ ಎಂಬ ಕಂಪೆನಿಗೆ ವಹಿಸಿಕೊಡಲಾಯಿತು. ಅದರ ನಿರ್ಮಾಣ ಕಾರ್ಯ ಮಲ್ಯರು ಆಶಿಸಿದಂತೆಯೇ ಉತ್ತಮವಾಗಿ ಆಯಿತು. ಮಲ್ಯರಿಗೆ ಮಹದಾನಂದವಾಯಿತು.

ಅದೇ ಸಮಯದಲ್ಲಿ ಮಂಗಳೂರಿನ ಕದ್ರಿಗುಡ್ಡೆಯಲ್ಲಿ ಸರ್ಕಿಟ ಹೌಸ್ ನಿರ್ಮಿಸಲು ಕರ್ನಾಟಕ ಸರಕಾರ (ಆಗ ಮೈಸೂರು) ನೀಲಿ ನಕ್ಷೆ ತಯಾರಿಸಿ ಇಟ್ಟಿತ್ತು. ಒಮ್ಮೆ ಆ ಯೋಜನೆಯ ನೀಲಿ ನಕಾಶೆಯನ್ನು ಶ್ರೀನಿವಾಸ ಮಲ್ಯರು ಪರಿಶೀಲನೆಗಾಗಿ ತರಿಸಿಕೊಂಡು ನೋಡುತ್ತಲಿದ್ದರು. ಅದರಲ್ಲಿ ಮಂತ್ರಿ ಮಾಗಧರಿಗೆ ಉಳಕೊಳ್ಳಲು ಮಾತ್ರ ವ್ಯವಸ್ಥೆಯಿತ್ತಲ್ಲದೇ, ಅಂತಹವರ ಭೇಟಿಗಾಗಿ ಸಂದರ್ಶನಕ್ಕಾಗಿ ಬರುವ ಜನರಿಗೆ ಕೂತುಕೊಳ್ಳಲು ಅವಕಾಶವಿರಲಿಲ್ಲ. ವರಾಂಡಾದಲ್ಲಿ (Verenda) ಬೇಕಾದಷ್ಟು ಸ್ಥಳದ ಕೊರತೆಯಿತ್ತು. ಈ ವಿಷಯ ಮಲ್ಯರ ಲಕ್ಷಕ್ಕೆ ಬಂದು ಕೂಡಲೇ ಕಟ್ಟಡ ನಿರ್ಮಾಣ ಕಾರ್ಯದ ಅಭಿಯಂತರುಗಳನ್ನು ಕರೆದು ‘ಈ ಸರ್ಕಿಟ ಹೌಸಿನಲ್ಲಿ ಬರೇ ಮಂತ್ರಿಗಳು ಮಾತ್ರ ಬರುವುದಲ್ಲ. ಅವರನ್ನು ಭೇಟಿಯಾಗಲು ಸರಕಾರದ ಇತರ ಅಧಿಕಾರಿಗಳೂ ಜನಸಾಮಾನ್ಯರೂ ಬರುತ್ತಾರೆ. ಅವರಿಗೆ ಕೂತುಕೊಳ್ಳಲು ಜಾಗ ಬೇಡವೇ?’ ಎಂದು ಹೇಳಿ ವರಾಂಡಾದಲ್ಲಿ ಸಾಕಾಗುವಷ್ಟು ಜಾಗವಿಟ್ಟುಕೊಳ್ಳಲು ನೀಲಿ ನಕಾಶೆಯಲ್ಲಿ ಬದಲಾವಣೆ ಮಾಡಿ ಎಂದು ತಿಳಿಸಿದರು. ಅಲ್ಲಿದ್ದ ಅಭಿಯಂತರುಗಳಿಂದ ಈಗ ನೀಲಿ ನಕಾಶೆಯಲ್ಲಿ ಬದಲಾವಣೆ ಮಾಡಿದರೆ, ಅದಕ್ಕೆ ಪುನರ್ ಮಂಜೂರಾತಿ, ಆರ್ಥಿಕ ಮಂಜೂರಾತಿಗಳ ಬಗ್ಗೆ ಸರಕಾರಕ್ಕೆ ಪರಿಶೀಲನೆಗೆ ಕಳುಹಿಸ ಬೇಕಾಗುತ್ತದೆ ಎಂದು ಉತ್ತರ ಬಂತು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮಲ್ಯರು, ನೀವು ಬದಲಿ ಮಾಡಿದ ನೀಲಿ ನಕಾಶೆಯ ಪ್ರತಿ ಮತ್ತು ಹೆಚ್ಚಿನ ಅನುದಾನದ ಬೇಡಿಕೆಯ ಪತ್ರಗಳನ್ನು ನನಗೆ ಇವತ್ತೇ ಕೊಡಿ. ನಾನು ಈ ರಾತ್ರಿಯೇ ಬೆಂಗಳೂರಿಗೆ ಹೋಗಿ ಸಾರ್ವಜನಿಕ ಕಾಮಗಾರಿ ಇಲಾಖೆಯ ಮಂತ್ರಿಯವರೊಡನೆ ಮಾತನಾಡುತ್ತೇನೆ ಮತ್ತು ಮಂಜೂರಾತಿ ಪತ್ರವನ್ನೂ ತಮಗೆ ನಾನೇ ತಂದು ಕೊಡುತ್ತೇನೆ ಎಂದು ಹೇಳಿದರು. ಅದರಂತೆಯೇ ಬದಲಾವಣೆ ಮಾಡಿದ ನೀಲಿ ನಕಾಶೆಯನ್ನು ಬೆಂಗಳೂರಿಗೆ ಕೊಂಡು ಹೋಗಿ, ತಾನು ಹೇಳಿದಂತೆ ‘ಪ್ಲಾನ್’ ಮಂಜೂರಾತಿ ಮಾಡಿಸಿಯೇ ತಂದರು. ಅಧಿಕಾರಿಗಳು ‘ಅಜಾಪ್’ ಆದರೆಂದು ಬೇರೆ ಹೇಳಬೇಕಾಗಿಲ್ಲ. ಹೀಗಿತ್ತು ಮಲ್ಯರ ಕಾರ್ಯ ವೈಖರಿ.

ಉಳ್ಳಾಲದ ನೇತ್ರಾವತಿ ನದಿಯ ಮೇಲೆ ಕಟ್ಟುತ್ತಲಿದ್ದ ನೂತನ ಸೇತುವೆಗೆ ಸಿಮೆಂಟ್ ಸಿಗುವುದು ಕಷ್ಟವಿತ್ತು. ದೇಶದಲ್ಲಿಯೇ ದೊಡ್ಡ ಪ್ರಮಾಣದ ಸಿಮೆಂಟ ಕೊರತೆ ಇತ್ತು. ಇದರಿಂದಾಗಿ ಸೇತುವೆ ನಿರ್ಮಾಣದ ಕಂಟ್ರಾಕ್ಟರುಗಳು ಸೇತುವೆ ಕಟ್ಟುವ ಕೆಲಸ ನಿಲ್ಲಿಸಿದ್ದರು ಮತ್ತು ಜಲ್ಲಿ ತಯಾರು ಮಾಡುವ ಕ್ರಶಿಂಗ ಯಂತ್ರವನ್ನು ಬೇರೆ ಕಡೆಗೆ ಸಾಗಾಟ ಮಾಡುವ ತಯಾರಿಯಲ್ಲಿದ್ದರು. ಅದರಿಂದಾಗಿ ಸೇತುವೆ ಕಾಮಗಾರಿ ಕೆಲಸವು ತಾತ್ಕಾಲಿಕವಾಗಿ ನಿಂತು ಹೋಗುವಂತಾಗುತ್ತಿತ್ತು. ದಿಲ್ಲಿಯಿಂದ ಜಿಲ್ಲೆಗೆ ಬಂದಿದ್ದ ಮಲ್ಯರಿಗೆ ಈ ವಿಷಯ ತಿಳಿಯಿತು. ಅವರು ಅಭಿಯಂತರುಗಳನ್ನು ಕರೆಸಿ ವಿಷಯದ ಬಗ್ಗೆ ಕೇಳಿದಾಗ ಅವರುಗಳು ಸಿಮೆಂಟ್ ಪೂರೈಕೆಯಲ್ಲಿ ಕೊರತೆ ಬಂದಿರುವುದರಿಂದ ಕೆಲಸದ ಪ್ರಗತಿ ಕುಂಠಿತವಾಗುತ್ತಿದೆ ಎಂಬ ವಿಷಯವನ್ನು ವಿಷದಪಡಿಸಿದರು. ಮಲ್ಯರು ದಿಲ್ಲಿಗೆ ಪರತ್ತು ಹೋಗುವಾಗ ಈ ವಿಷಯಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿದರು. ಮೊದಲಾಗಿ ಆರ್ಥಿಕ ಇಲಾಖಾ ಕಾರ್ಯದರ್ಶಿಯವರನ್ನು ಭೇಟಿ ಮಾಡಿದರು. ಅವರಿಗೆ ವಿಷಯವನ್ನು ಮನಗಾಣಿಸಿ ಸಾಕಾಗುವಷ್ಟು ಹಣವನ್ನು ಬಿಡುಗಡೆ ಮಾಡಿಸಿಕೊಂಡರು. ಎರಡು ವೇಗನ ಸಿಮೆಂಟನ್ನು ಆದ್ಯತೆಯ ಮೇರೆಗೆ ಮಂಗಳೂರಿಗೆ ಕೂಡಲೇ ತಲುಪುವಂತೆ ಮಾಡಿದರು ಮತ್ತು ಉಳ್ಳಾಲ ಸಂಕದ ಕೆಲಸ ಮುಂದುವರೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅದರಿಂದ ನಿಗದಿತ ವೇಳೆಗೆ ಉಳ್ಳಾಲ ಸೇತುವೆಯ ಕಾಮಗಾರಿ ಗಳು ಮುಗಿಯುವಂತೆ ಆಯಿತು.

ರಾಷ್ಟ್ರೀಯ ಕಾಂಗ್ರೆಸ್ಸಿನ ಅಂದಿನ ಕಾರ್ಯಕ್ರಮಗಳಾದ ಭಾರತ ದೇಶದ ಸ್ವಾತಂತ್ರ್ಯ ಹೋರಾಟ, ಖಾದಿ ಪ್ರಚಾರ, ಹರಿಜನರ ಉದ್ಧಾರ ಇವುಗಳಿಗಾಗಿ ಜಿಲ್ಲೆಯಾದ್ಯಂತ ಓಡಾಡಿ ಕೊಂಡಿದ್ದ ಶ್ರೀನಿವಾಸ ಮಲ್ಯರಿಗೆ ದ.ಕ. ಜಿಲ್ಲೆಯ ಎಲ್ಲಾ ಪೇಟೆ, ಪಟ್ಟಣ, ಹಳ್ಳಿಪಳ್ಳಿ ಗಳ ಭೌಗೋಳಿಕ ಚಿತ್ರಣ ಮನದಟ್ಟಾಗಿತ್ತು. ಇದರಿಂದಾಗಿ ಅವರು ಸಂಸದೀಯ ವರ್ಷ ಗಳಲ್ಲಿ ಜಿಲ್ಲೆಯ ಪ್ರಗತಿಗೆ, ಅಭಿವೃದ್ಧಿಗೆ ಬೇಕಾದ ರಸ್ತೆಗಳು, ನದಿಗಳ ಮೇಲಣ ಸೇತುವೆಗಳು ಎಲ್ಲಿ ಅವಶ್ಯವೆಂಬುದನ್ನು ಅರಿತಿದ್ದರು. ಹಾಗಾಗಿ ಅವರಿಗೆ ಭೌಗೋಳಿಕ ನಕಾಶೆಯನ್ನು ಪರಿಶೀಲಿಸುತ್ತಾ ಇರುವ ಅಗತ್ಯವಿರಲಿಲ್ಲ.

ಮಂಗಳೂರು – ಬಂಟವಾಳ ಕೂಡು ರಸ್ತೆ (ಬಿ.ಸಿ.ರೋಡು)ವರೆಗಿನ ವಾಹನ ಸಂಚಾರ, ದೇಶದಲ್ಲಿಯೇ ದಿಲ್ಲಿ -ಆಗ್ರಾ ನಂತರ ಹೆಚ್ಚು ದಟ್ಟಣೆ ಉಳ್ಳದ್ದಾಗಿತ್ತು. ಇದಕ್ಕೆ ಮಂಗಳೂರು – ಪುತ್ತೂರು – ಮಡಿಕೇರಿ – ಮೈಸೂರು ರಸ್ತೆ, ಬೆಂಗಳೂರು – ಮಂಗಳೂರು ರಸ್ತೆ, ಹಾಸನ – ಬೆಂಗಳೂರು ರಸ್ತೆ, ಮಂಗಳೂರು ಚಾರ್ಮಾಡಿ ಘಾಟಿಯಾಗಿ ಚಿಕ್ಕಮಗಳೂರು, ಕಡೂರುವರೆಗೆ ಹೋಗಿ ಬರುವ ವಾಹನಗಳ ಓಡಾಟ ಕಾರಣವಾಗಿತ್ತು. ಅದಕ್ಕಾಗಿ ಮಂಗಳೂರು – ಹಾಸನ ರಾ.ಹೆ. 42ರ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ಮಂಗಳೂರು – ಬಂಟವಾಳ ಕೂಡು ರಸ್ತೆಯ ಸಮಾನಂತರವಾಗಿ ಮಾಣಿ-ಉಳ್ಳಾಲ ರಸ್ತೆ (ಪಾಣೆಮಂಗಳೂರಿನ ಮೆಲ್ಕಾರಿನಿಂದ) ಮಂಚಿ, ದೇರಳಕಟ್ಟೆ, ಕೋಟೆಕಾರು ವರೆಗೆ ರಸ್ತೆಯನ್ನು ಅಗಲ ಮಾಡಿ ಡಾಮಾರು ಬಳಸಿ ಉತ್ತಮ ದರ್ಜೆಯ ರಸ್ತೆಯನ್ನಾಗಿ ರಚಿಸಬೇಕೆಂದು ಅವರು ಮಾಸ್ಟರ್ ಪ್ಲಾನಿನಲ್ಲಿ ಸೇರಿದ್ದರು. ಆದರೆ ಅವರ ನಿಧನದ ಬಳಿಕ, ರಾಜಕೀಯ ಮುಖಂಡರ ನಿರ್ಲಕ್ಷ್ಯ, ಅಧಿಕಾರಿಗಳ ಅವಗಣನೆಯಿಂದ ಈ ರಸ್ತೆಯ ಕಾಮಗಾರಿ ನೆನೆಗುದಿಗೆ ಬಿದ್ದಿತು. ಆ ರಸ್ತೆಯನ್ನು ಸರಿಯಾಗಿ ನಿರ್ಮಿಸಿದ್ದರೆ, ಮಂಗಳೂರು-ಬಿ.ಸಿ.ರೋಡು ವರೆಗಿನ ವಾಹನಗಳ ದಟ್ಟಣೆ ಕಡಿಮೆಯಾಗಿ ಪ್ರವಾಸಿಗರಿಗೆ, ಚಲಿಸುವ ವಾಹನಗಳಿಗೆ, ನಿರಂತರ ಸಂಚಾರ ಸುಲಭವಾಗುತ್ತಿತ್ತು. ಆದರೆ ಆ ಯೋಜನೆ ಕೈಗೂಡಲಿಲ್ಲ. ಇದು ಯಾರ ದೌರ್ಭಾಗ್ಯವೋ ಹೇಳಲಾಗದು.

ರಾಜಕೀಯ ಜೀವನ

ರಾಜಕೀಯ ಕ್ಷೇತ್ರದಲ್ಲಿ ಶ್ರೀನಿವಾಸ ಮಲ್ಯರು ಅತೀ ಎತ್ತರದ ಸ್ಥಾನಕ್ಕೆ ತಲುಪಿದವರು. ಆದರೆ ಈ ಸ್ಥಾನಕ್ಕಾಗಿ ಅವರು ಆಶೆ ಪಟ್ಟವರಲ್ಲ. ತನ್ನ ಬುದ್ಧಿ ಬಲದಿಂದ, ಕಾರ್ಯಕ್ಷಮತೆ ಗಳಿಂದ ಮತ್ತು ಶ್ರದ್ಧೆಯಿಂದ, ವೈಯಕ್ತಿಕ ಕಷ್ಟಕಾರ್ಪಣ್ಯಗಳನ್ನು ಲೆಕ್ಕಿಸದೇ ಗುರಿಮುಟ್ಟುವ ತನಕ ವಿಶ್ರಮಿಸದಿರುವ ಮಾನಸಿಕ ತಯಾರಿ ಮಾಡಿ, ಮುನ್ನುಗ್ಗುವ ಗುಣಗಳಿಂದ ಅವರು ಈ ಸ್ಥಾನಕ್ಕೆ ಏರಿದವರು. ಅಂತಹ ಉದ್ದವಾದ ನಿರಂತರದ ದಾರಿಯಲ್ಲಿ ಅವರು ಕಲ್ಲುಮುಳ್ಳುಗಳ ಚುಚ್ಚುವಿಕೆಯ ನೋವನ್ನು ಎಣಿಸದೇ, ಕೈಗೆತ್ತಿಕೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಯುವ ತನಕ ವಿಶ್ರಮಿಸದೇ, ತನ್ನ ಒಟ್ಟಿಗೆ ಇದ್ದವರನ್ನು ಕೊನೆಯ ತನಕ ಮರೆಯದೇ, ತನ್ನೊಂದಿಗೇನೇ ತೆಗೆದುಕೊಂಡು ಹೋಗುವ ಉದಾರತೆ, ಸಹೃದಯತೆ ಅವರದ್ದಾಗಿತ್ತು.

1952ರ ಪ್ರಥಮ ಮಹಾ ಚುನಾವಣೆಯಲ್ಲಿ ಶ್ರೀ ಎನ್.ಎಸ್. ಕಿಲ್ಲೆ ಅವರನ್ನು, ಹಿಂದುಳಿದ ಬಿಲ್ಲವರ ಸಮಾಜದ ಮುಂದಾಳು ಕ್ರಿಯಾಶೀಲ ವಕೀಲ ಶ್ರೀ ಏಲ್ಯಣ್ಣ ಪೂಜಾರಿ ಗಳವರನ್ನು ಕರೆದು ಚುನಾವಣೆಗೆ ನಿಲ್ಲಲು ಪಕ್ಷದ ಟಿಕೇಟಿಗೆ ಅರ್ಜಿ ಮಾಡಿ ಎಂದು ಕರೆಕೊಟ್ಟವರು ಮಲ್ಯರು. ಆದರೆ ಈ ಇಬ್ಬರು ನಿಸ್ವಾರ್ಥಿಗಳೂ ಅಂದಿನ ಕಾಲದಲ್ಲಿ ಅಸೆಂಬ್ಲಿಯಲ್ಲಿ ಶಾಸಕರಾಗುವ ಮನಸ್ಸು ಮಾಡಿದವರಲ್ಲ. ಅದು ಬೇರೆ ವಿಷಯ. ಯುವ ಕಾಂಗ್ರೆಸ್ ನೇತಾರ ಸ್ವಾತಂತ್ರ್ಯವೀರ ಶ್ರೀ ಲೋಕಯ್ಯ ಶೆಟ್ಟರನ್ನು ಎಲ್.ಐ.ಸಿ. ಯಿಂದ ಬಿಡಿಸಿ ಚುನಾವಣೆಗೆ ನಿಲ್ಲಿಸಿ, ಶಾಸಕರನ್ನಾಗಿ ಮಾಡಿದವರು ಶ್ರೀನಿವಾಸ ಮಲ್ಯರು. ಪಕ್ಷಕ್ಕಾಗಿ, ದೇಶಕ್ಕಾಗಿ ಸ್ವಾರ್ಥರಹಿತರಾಗಿ ತನ್ನೊಡನೆ ಕೆಲಸ ಮಾಡಿದವರನ್ನು ಮಲ್ಯರು ಮೆರೆತವರಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಮುಂದೆ ಮಲ್ಯರು ದಿಲ್ಲಿಗೆ ಹೋಗಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿದಾಗಲೂ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳದ ಕಾಲದಲ್ಲು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಯಂ ಸೇವಕರಾಗಿ ಜೈಲಿಗೆ ಹೋದವರ ಅಥವಾ ಭೂಗತರಾಗಿದ್ದುಕೊಂಡು ಚಳವಳದಲ್ಲಿ ಭಾಗವಹಿಸಿದ ಅನೇಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂದು ತಿಳಿದು ಬಂದಾಗ ಅಂತಹವರಿಗೆ ಪ್ರತಿ ತಿಂಗಳು ದಿಲ್ಲಿಯಿಂದ ತಪ್ಪದೇ ಹಣ ಕಳುಹಿಸಿ ಕೊಡುತ್ತಲಿದ್ದರು. ತನ್ನಲ್ಲಿ ಹಣವಿಲ್ಲದಿದ್ದಾಗಲೂ ಅನಾರೋಗ್ಯದಿಂದ ಬಳಲುತ್ತಲಿದ್ದವರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ತನ್ನ ಶ್ರೀಮಂತ ಮಿತ್ರರಿಂದ ಹಣ ಸಂದಾಯವಾಗುವಂತೆ ಮುತುವರ್ಜಿ ವಹಿಸುತ್ತಿದ್ದರು. ಈ ಬಗ್ಗೆ ಹಲವಾರು ಸ್ವಾತಂತ್ರ್ಯ ಸೈನಿಕರು ನನ್ನಲ್ಲಿ ಹೇಳಿದ್ದಿದೆ.

ಕನ್ನಡ ನಾಡಿನ ಮಹಾ ವಾಗ್ಮಿ, ಯಕ್ಷಗಾನ ಅರ್ಥಧಾರಿ, ಗಾಂಧೀಜಿಯ ಅನುಯಾಯಿ, ಶ್ರೀ ಎನ್.ಎಸ್. ಕಿಲ್ಲೆಯವರು ತಮ್ಮ ದಿನವಹಿ (Dairy)ಯಲ್ಲಿ ತನಗೆ ಪ್ರತೀ ತಿಂಗಳು ಮಲ್ಯರಿಂದ ಬಂದ ಮನಿ ಆರ್ಡರಿನ ಹಣದ ಬಗ್ಗೆ ಲೆಕ್ಕ ಬರೆದಿಟ್ಟ ವಿಚಾರ ಕಿಲ್ಲೆ ಶತಾಬ್ದ ಸ್ಮರಣಿಕೆಯಿಂದ ತಿಳಿದುಬರುತ್ತದೆ.

ಅಲ್ಲದೇ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಿಸ್ವಾರ್ಥ ಮನಸ್ಸಿನಲ್ಲಿ ದುಡಿದ ಎಷ್ಟೋ ಮಹನೀಯರ ಮಕ್ಕಳಿಗೆ ಬೇಂಕುಗಳಲ್ಲಿ, ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಕೊಡಿಸಲು ಅಥವಾ ಸರಕಾರೀ ನೌಕರಿ ಕೊಡಿಸಲು ಮಲ್ಯರು ಪ್ರಯತ್ನಿಸುತ್ತಿದ್ದರು. ಶಿಫಾರಸ್ಸು ಮಾಡಿ ನೌಕರಿ ಕೊಡಿಸುತ್ತಿದ್ದರು. ಇದು ಕೂಡ ಅವರ ಮಾನವಿಯ ದೃಷ್ಟಿಗೆ ಸಾಕ್ಷಿಯಾದ ಕಾರಣ ಇಲ್ಲಿ ಉಲ್ಲೇಖಗೊಂಡಿದೆ.

ಶ್ರೀನಿವಾಸ ಮಲ್ಯರು ದ.ಕ. ಜಿಲ್ಲಾ ಮೂಲದ ಕೆನರಾ ಬ್ಯಾಂಕ್, ಕೆನರಾ ಪಬ್ಲಿಕ್ ಕನ್ವೆಯೆನ್ಸ ಕಂಪೆನಿ (ಸಿ.ಪಿ.ಸಿ. ಬಸ್ ಕಂಪೆನಿ) ಕೆನರಾ ವರ್ಕ್ಶೋಪ್ಸ್ ಲಿಮಿಟೆಡ್ ಮುಂತಾದ ವಾಣಿಜ್ಯ ಸಂಸ್ಥೆಗಳಲ್ಲಿ ಡೈರೆಕ್ಟರ್ ಆಗಿದ್ದರು. ಆದರೆ ಸರಕಾರದಿಂದ ಈ ಸಂಸ್ಥೆಗಳಿಗೆ ಸಹಾಯ ಕೊಡಿಸಲು ಅವರು ಎಂದೂ ವರ್ಚಸ್ಸು ಉಪಯೋಗಿಸಲಿಲ್ಲ. ಕೆನರಾ ವರ್ಕ್ಶೋಪ್ನ ಉತ್ಪನ್ನಗಳಾದ ಬಸ್ಸು, ಲಾರಿ ವಾಹನಗಳ ಸ್ಪ್ರಿಂಗ್ ತಯಾರಿಗಾಗಿ ಉಕ್ಕು ಆಯಾತಕ್ಕಾಗಿ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಲಾಯಸೆನ್ಸ್ ಅಗತ್ಯವಿತ್ತು. ಕಂಪೆನಿಯ ಅಧ್ಯಕ್ಷ ಶ್ರೀ ವಿ.ಎಸ್. ಕುಡ್ವರು ಹಲವು ಬಾರಿ ದಿಲ್ಲಿಗೆ ಎಡತಾಕಿದರೂ ಕ್ಲಪ್ತಕಾಲಕ್ಕೆ ಆಯಾತ ಲಾಯಸೆನ್ಸ್ ಸಿಗಲಿಲ್ಲವೆಂದು ದಿಲ್ಲಿಗೆ ಹೋಗಿ ಸಂಬಂಧಿತ ಮಂತ್ರಿಗಳ ಕಚೇರಿಯ ಮುಂದೆ ಸತ್ಯಾಗ್ರಹ ಮಾಡಿದರು. ಆ ಬಳಿಕವೇ ಮಲ್ಯರು ಮಂತ್ರಿಗಳಿಗೆ ವಿಷಯ ತಿಳಿಸಿದ್ದರಿಂದ ಕುಡ್ವರಿಗೆ ಲಾಯಸೆನ್ಸ ಸಿಗುವಂತಾಯಿತೆಂಬ ಸಂಗತಿ ಕುಡ್ವರ ನವಭಾರತ ಪತ್ರಿಕೆಯಲ್ಲಿ ಪ್ರಕಟ ವಾಯಿತು. ಇದು ಮಲ್ಯರ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಇನ್ನೊಂದು ಪುರಾವೆ.

ರಾಜಕೀಯದಲ್ಲಿ ಎಲ್ಲರಿಂದಲೂ ಗೌರವಕ್ಕೆ ವಿಶ್ವಾಸಗಳಿಗೆ ಶ್ರೀನಿವಾಸ ಮಲ್ಯರು ಪಾತ್ರರಾಗಿದ್ದರು ಎಂದು ಹೇಳಬಹುದಾದರೂ ಅವರಿಗೆ ರಾಜಕೀಯದಲ್ಲಿ ವೈರಿಗಳೇ ಇರಲಿಲ್ಲವೆಂದು ಹೇಳಲಿಕ್ಕಾಗದು. ಅವರ ಚಾಣಾಕ್ಷ ಬುದ್ಧಿಗೆ ಹೆದರುತ್ತಿದ್ದವರೇ ಹೆಚ್ಚು. 20ನೇ ಶತಮಾನದ ನರಿ (Twentyeth century fox) ಯೆಂದು ಬ್ರಿಟಿಷರಿಂದ ಕರೆಯಲ್ಪಡುತ್ತಿದ್ದ ಮಹಾನ್ ಮುತ್ಸದ್ದಿ, ಗಾಂಧೀವಾದಿ, ದೇಶದ ಪ್ರಥಮ ಭಾರತೀಯ ಗವರ್ನರ ಜನರಲ್, ಚಕ್ರವರ್ತಿ ರಾಜಗೋಪಾಲಾಚಾರ್ಯರು ಕೂಡಾ ಮಲ್ಯರನ್ನು ಕುರಿತು ‘most dangerous man’ ಎಂದು ಹೇಳುತ್ತಿದ್ದರಂತೆ. ಅಂತಹ ಒಂದು ವಿಶಿಷ್ಟ ವ್ಯಕ್ತಿತ್ವ ಮಲ್ಯರದ್ದು.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಎಲ್ಲವನ್ನು ಕಳೆದುಕೊಂಡವರು ಮತ್ತು ಕರ್ನಾಟಕ ರಾಜ್ಯವಾಗಬೇಕೆಂದು ಹೋರಾಟ ಮಾಡಿದವರು ಸಿದ್ದವನಹಳ್ಳಿ ನಿಜಲಿಂಗಪ್ಪ ನವರು. ಮುಂದೆ 1956ರಲ್ಲಿ ಭಾಷಾವಾರು ಪ್ರಾಂತಗಳ ನಿರ್ಮಾಣವಾಗಿ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ರಾಜ್ಯದಲ್ಲಿ ಸೇರ್ಪಡೆಗೊಂಡು ಮಹಾ ಮೈಸೂರು ರಾಜ್ಯ ಏರ್ಪಟ್ಟಾಗ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾಗಿ ಆರಿಸಲ್ಪಟ್ಟವರು ಮಾನ್ಯ ನಿಜಲಿಂಗಪ್ಪನವರು.

ಮೈಸೂರು ರಾಜ್ಯ ನಿರ್ಮಾಣವಾಗುವ ಮೊದಲು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿ ಹುಬ್ಬಳ್ಳಿಯಲ್ಲಿತ್ತು ಮತ್ತು ಹಲವಾರು ವರ್ಷಗಳಿಂದ ನಿಜಲಿಂಗಪ್ಪನವರೇ ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾಗಿದ್ದರು. ಗುದ್ಲೆಪ್ಪ ಹಳ್ಳಿಕೇರಿಯೆಂಬ ಹಿರಿಯ ನಾಯಕರು ಕಾರ್ಯದರ್ಶಿಗಳಾಗಿದ್ದರು. ಯಾವುದೋ ಒಂದು ರಾಜಕೀಯ ವಿಷಯದಲ್ಲಿ ನಿಜಲಿಂಗಪ್ಪನವರಿಗೂ ಶ್ರೀನಿವಾಸ ಮಲ್ಯರಿಗೂ ಮನಸ್ತಾಪ ಉಂಟಾಗಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ 1955ರಲ್ಲಿ ಚುನಾವಣೆ ನಡೆಯಬೇಕಾಗಿತ್ತು ಮತ್ತು ಎಂದಿನಂತೆಯೇ ನಿಜಲಿಂಗಪ್ಪನವರೇ ಅಧ್ಯಕ್ಷರಾಗುವರೆಂದು ಸಹಜವಾಗಿ ಎಲ್ಲರ ಅಭಿಪ್ರಾಯವಾಗಿತ್ತು. ಅದಕ್ಕಾಗಿ ನಿಜಲಿಂಗಪ್ಪನವರು ನಾಮಪತ್ರವನ್ನು ಯಥವತ್ತಾಗಿ ಸಲ್ಲಿಸಿಯೂ ಆಗಿತ್ತು.

ಆದರೆ ಚುನಾವಣಾ ದಿನಾಂಕದ 3 ದಿನಗಳ ಹಿಂದೆ ಶ್ರೀನಿವಾಸ ಮಲ್ಯರು ಹುಬ್ಬಳ್ಳಿಗೆ ತಮ್ಮ ಯೋಜನೆಗೆ ಪೂರ್ವ ಪೀಠಿಕೆ ಹಾಕಿಯೇ ಬಂದು ಬಿಡಾರ ಹೂಡಿದರು ಮತ್ತು ಫೋನಿನ ಮೇಲೆ ಫೋನು ಮಾಡಿ ಪ್ರತಿನಿಧಿಗಳನ್ನು ಇತರ ಮುಖಂಡರನ್ನೂ ಸಂಪರ್ಕಿಸಿದರು. ದ.ಕ. ಜಿಲ್ಲೆಯಿಂದ ಬರುವ ಪ್ರತಿನಿಧಿಗಳಿಗಾಗಿ ಸಿ.ಪಿ.ಸಿ. ಕಂಪೆನಿಯಿಂದಲೇ ಸ್ಪೆಶಲ್ ಬಸ್ಸು ಬರುವುದು ಎಂದಿನಂತೆಯೇ ನಿರ್ಧಾರವಾಗಿತ್ತು. ಬಂದವರನ್ನು ಸೀದಾ ಹುಬ್ಬಳ್ಳಿಗೆ ಕರೆಯಿಸಿದೇ ಹೊರಗೆ ಹತ್ತಿರದ ಊರಿನ ಲಾಡ್ಜಿನಲ್ಲಿ ಉಳಿಸಿಕೊಳ್ಳುವ ಏರ್ಪಾಡಾಗಿತ್ತು. ಅವರೆಲ್ಲರೂ ಹುಬ್ಬಳ್ಳಿಗೆ ಬಂದರೆ ನಿಜಲಿಂಗಪ್ಪನವರೂ ಅವರುಗಳನ್ನು ಸಂಪರ್ಕಿಸಿ ತಮ್ಮೆಡೆಗೆ ಎಳೆಯುವ ಸಾಧ್ಯತೆ ಇತ್ತಲ್ಲ. ಅದಕ್ಕಾಗಿ ಹೊರಗೇನೆ ಅವರುಗಳಿಗೆ ಉಳಕೊಳ್ಳುವ ವ್ಯವಸ್ಥೆ ಮಾಡಿ ಮತದಾನದ ಸಮಯಕ್ಕೆ ಸರಿಯಾಗಿ ಅವರೆಲ್ಲ ಹುಬ್ಬಳ್ಳಿಗೆ ಬಂದು ಮತದಾನ ಚಲಾಯಿಸುವಂತೆ ವ್ಯವಸ್ಥೆಯನ್ನು ಮಲ್ಯರು ಮಾಡಿದ್ದರು. ನಿಜಲಿಂಗಪ್ಪನವರು ಚುನಾವಣೆ ಯಲ್ಲಿ ಸೋತರೆಂದು ಹೇಳಬೇಕಾಗಿಲ್ಲ. ಆದರೆ ನಿಜಲಿಂಗಪ್ಪನವರು ಸೋಲುವುದು ಅಂದಿನ ದಿನಗಳಲ್ಲಿ ಯಾರೂ ಊಹಿಸದಂತಹ ವಿಷಯವಾಗಿತ್ತು. ಮಲ್ಯರು ಕೇವಲ ಮೂರು ದಿನಗಳಲ್ಲಿ ಈ ಪವಾಡ ನಡೆಯುವಂತೆ ಮಾಡಿ ಬಿಟ್ಟಿದ್ದರು.

ಅಂದಿನ ದಿನಗಳಲ್ಲಿ ಮನೆಮಾತಾಗಿದ್ದ, ಹುಬ್ಬಳ್ಳಿಯಿಂದ ಹೊರಡುತ್ತಲಿದ್ದ ಕನ್ನಡ ವಾರಪತ್ರಿಕೆ ‘ಪ್ರಪಂಚ’ದ ಸಂಪಾದಕ ಪಾಟೀಲ ಪುಟ್ಟಪ್ಪನವರು ಮಲ್ಯರ ಈ ವ್ಯೆಹ ತಂತ್ರವನ್ನು “ಮಲ್ಯರು ಹುಬ್ಬಳ್ಳಿಗೆ ಬಂದರು. ದಾಳಗಳನ್ನು ಉರುಳಿಸಿದರು ಮತ್ತು ಗೆದ್ದರು” ಎಂದು ಬಣ್ಣಿಸಿದರು. ನಿಜಲಿಂಗಪ್ಪನವರನ್ನು ತನ್ನ ತಂತ್ರಗಳಿಂದ ಸೋಲಿಸಿದ ಶ್ರೀನಿವಾಸ ಮಲ್ಯರನ್ನು ಕುರಿತು ಮುಂದೆ ‘ಪ್ರಪಂಚ’ ಪತ್ರಿಕೆಯ ಸಂಚಿಕೆಗಳಲ್ಲಿ ಟೀಕೆಗಳ ಸುರಿಮಳೆಗೈದೇ ಬರೆಯುತ್ತಿದ್ದರು. ಅದು ಬಹಳ ಖಾರವಾಗೇ ಇರುತ್ತಿತ್ತು. “ಮಲ್ಯರು ಪಂದ್ಯಗಟ್ಟಿದ ಕುದುರೆ ಗೆಲ್ಲುತ್ತದೆ ಅಥವಾ ಗೆಲ್ಲುವ ಕುದುರೆಗೆ ಮಲ್ಯರು ಪಂದ್ಯ ಕಟ್ಟುತ್ತಾರೆ” ಎಂದು ಮಲ್ಯರನ್ನೊಮ್ಮೆ ಪುಟ್ಟಪ್ಪನವರು ಹೊಗಳಿಯೊ ಟೀಕಿಸಿಯೊ ಬರೆದಿದ್ದರು. ಅದು ಸಹಜವೂ ಆಗಿ ಕಾಣುತ್ತಿತ್ತು.

ಉಪವಾಸ ಸತ್ಯಾಗ್ರಹ

ಕೇಂದ್ರ ಸರಕಾರದಲ್ಲಿ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿ ರೈಲ್ವೆ ಖಾತೆಯ ಮಂತ್ರಿ ಗಳಾಗಿದ್ದರು. ಆಗಾಗ್ಗೆ ಮಂಗಳೂರು-ಹಾಸನ ರೈಲ್ವೆ ಯೋಜನೆಯ ಫಾಯ್ಲ (File) ಅವರ ಕಡೆ ಹೋಗಿ ಅನುಮತಿಗಾಗಿ ಕಾಯುತ್ತಿತ್ತು. ಅದಕ್ಕೆ ಮಂಜೂರಾತಿ ನೀಡಬೇಕೆಂದು ಮಲ್ಯರು ಶ್ರೀ ಶಾಸ್ತ್ರಿಗಳವರೊಡನೆ 3-4 ಬಾರಿ ವಿನಂತಿ ಮಾಡಿ ನೆನಪಿಸುತ್ತಿದ್ದರು. ಆದರೆ ರೈಲ್ವೆ ಇಲಾಖೆಯ ವರಿಷ್ಠ ಅಧಿಕಾರಿಗಳ ನಕಾರಾತ್ಮಕ ಷರಾ (notes)ಗಳಿಂದಾಗಿ ಯೋಜನೆಯ ಮಂಜೂರಾತಿಗೆ ಶಾಸ್ತ್ರಿಗಳು ಸಮಯ ತೆಗೆದುಕೊಂಡರೆಂದು ಕಾಣುತ್ತದೆ. ಆದರೆ ಮಲ್ಯರು ಬಿಡಬೇಕಲ್ಲ.?

ಶ್ರೀನಿವಾಸ ಮಲ್ಯರು ತನ್ನ ಕೊನೆಯ ಅಸ್ತ್ರವಾಗಿ, ದಿಲ್ಲಿಯಿಂದ ಮಂಗಳೂರಿಗೆ ಬಂದು ಹಾಸನ ಮಂಗಳೂರು ರೈಲ್ವೆ ಯೋಜನೆ ಮಂಜೂರಿಯಾಗದಿದ್ದಲ್ಲಿ ತಾನು ಪಾರ್ಲಿಮೆಂಟ್ ಭವನದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡು ಸಾಯಲಿದ್ದೇನೆ ಎಂದು ಧಮಕಿ ಕೊಟ್ಟು ಮಂಗಳೂರಿನಿಂದ ಕೊಟ್ಟ ತಂತಿ ಶಾಸ್ತ್ರಿಗಳಿಗೆ ಮುಟ್ಟಿತು. ತಂತಿ (Telegram) ತಲುಪಿದ ಕ್ಷಣಕ್ಕೆ, ಮಲ್ಯರ ಹಟ ಸ್ವಭಾವ ತಿಳಿದೇ ಇದ್ದ ಶಾಸ್ತ್ರಿಗಳು “ನೀವು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದು ಬೇಡ. ಹಾಸನ-ಮಂಗಳೂರು ಯೋಜನೆಯನ್ನು ನಾನು ಮಂಜೂರು ಮಾಡಿದ್ದೇನೆ” ಎಂದು ಮಲ್ಯರಿಗೆ ಪರತ್ ತಂತಿ ಮೂಲಕ ತಿಳಿಸಿದರು.

ಮಲ್ಯರು ತಾನು ಕೈಗೆ ತೆಗೆದುಕೊಂಡ ಸಾರ್ವಜನಿಕ ವಿಷಯಗಳಲ್ಲಿ ಸಮಯಪ್ರಜ್ಞೆ ಯಿಂದ ಕೆಲಸ ಸಾಗಿಸುತ್ತಿದ್ದರು, ಸಾಧಿಸುತ್ತಿದ್ದರು. ಈಗಿನ ದಿನಗಳಲ್ಲಿ ಹಾಸನ ಮಂಗಳೂರು ಬ್ರಾಡಗೇಜ ಪರಿವರ್ತನೆ ಮಾಡುವ ಯೋಜನೆ ಪೂರೈಸಲು 12-13 ವರ್ಷಗಳಷ್ಟು ದೀರ್ಘಕಾಲ ತೆಗೆದುಕೊಂಡಿದ್ದನ್ನು ನೋಡಿದಾಗ ಮಲ್ಯರ ಮಹತ್ವ ಮತ್ತು ಹಿಡಿತಗಳ ಅರಿವಾಗಬಹುದು. ಮಲ್ಯರ ಖಡಾಖಡಿ ವಿರೋಧಿಯಾಗಿದ್ದರೂ ಕೂಡಾ ಪಾಟೀಲ ಪುಟ್ಟಪ್ಪನವರು ತನ್ನ ‘ಪ್ರಪಂಚ’ ಪತ್ರಿಕೆಯಲ್ಲಿ ಮಲ್ಯರ ಬಗ್ಗೆ ಬರೆಯುವಾಗ ಇಂತಹ ವಿಷಯಗಳನ್ನು ಕೂಡಾ ಕೊಡುತ್ತಿದ್ದರು.

ಶ್ರೀನಿವಾಸ ಮಲ್ಯರು, ತಾನು ಜನತಾ ಜನಾರ್ದನನ ಪ್ರತಿನಿಧಿ ಎಂದೇ ತಿಳಿದು ಕೊಂಡು ಪ್ರಸಿದ್ಧಿಯಿಂದ ದೂರವಿರುತ್ತಿದ್ದರು. ಪತ್ರಿಕೆಗಳಿಗೆ ಹೇಳಿಕೆಯನ್ನು ನೀಡುವುದ ರಲ್ಲಿಯೇ ಆಸಕ್ತಿ ಇಟ್ಟುಕೊಂಡಿರಲಿಲ್ಲ. ಅವರದ್ದು ಯಾವಾಗಲೂ ನೇಪಥ್ಯದ್ದೇ ಕಾರುಬಾರು. ಕೆಲಸಗಳು ಗುಣಮಟ್ಟದಲ್ಲಿ ಶ್ರೇಷ್ಠ ತರಗತಿಯಲ್ಲಿ, ನಿಗದಿತ ವೇಳೆಯಲ್ಲಿ ಮುಗಿದು, ಇನ್ನಿತರರು ಮಲ್ಯರ ಗುಣಗಾನ ಮಾಡಿದಾಗಲೇ ಜನಸಾಮಾನ್ಯರಿಂದ ಪುಢಾರಿ ಗಳವರೆಗೆ ಈ ಕೆಲಸ ಯಾರಿಂದ ಆಯಿತು ಎಂಬುದಾಗಿ ತಿಳಿಯುತ್ತಿತ್ತು. ಇದು ಮಲ್ಯರ ಕಾರ್ಯ ವೈಖರಿ. ಜನರ ಸುಖ, ದುಃಖಗಳಿಗೆ ನೇರವಾಗಿ ಸ್ಪಂದಿಸಿ, ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಲೇ, ಅಲ್ಲೆಲ್ಲ ಅಭಿವೃದ್ಧಿ ಕಾಣುತ್ತ ಸಂತೋಷ ತರುವುದು ಮಲ್ಯರ ಸ್ವಭಾವವಾಗಿತ್ತು.

ಅವರಲ್ಲಿ ಇದು ತನ್ನ ಜಾತಿ, ಬಂಧುಬಳಗ ಅದು ಇನ್ನೊಂದು ಜಾತಿ, ಮತ, ಬಳಗ ಎಂಬ ಭೇದಭಾವವೇ ಇರಲಿಲ್ಲ. ಎಲ್ಲರೂ ತನ್ನವರೇ ಎಂಬ ಉದಾತ್ತ ದೃಷ್ಟಿಯಿಂದ ಅವರು ನಡೆದುಕೊಳ್ಳುತ್ತಿದ್ದರು. ಕೆಲಸ-ಕಾರ್ಯ ನಿರ್ವಹಿಸುತ್ತಿದ್ದರು. ಸ್ವಾರ್ಥ ಅವರಲ್ಲಿ ಲವಲೇಶವೂ ಇರಲಿಲ್ಲ. ನವಮಂಗಳೂರು ಬಂದರು ಯೋಜನೆಯ ರೂವಾರಿಯಾದ ಮಲ್ಯರು, ಅಂದು ನವಮಂಗಳೂರು ಬಂದರು ಕಾಮಗಾರಿಗಳಿಗೆ ಶಿಲಾನ್ಯಾಸ ಸಮಾರಂಭ ವೇರ್ಪಟ್ಟಾಗ ಅಲ್ಲಿ ಇರಲೇ ಇಲ್ಲ. ಅವರು ದೇಶದ ಯಾವುದೋ ಭಾಗಕ್ಕೆ ಪಕ್ಷದ ಕೆಲಸಕ್ಕಾಗಿ ಹೋಗಿದ್ದರಂತೆ. ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಮಂತ್ರಿಗಳು ಇದ್ದ ಈ ಸಮಾರಂಭದಲ್ಲಿ ಮಲ್ಯರ ಅನುಪಸ್ಥಿತಿ ಎದ್ದು ಕಾಣುತ್ತಲಿತ್ತು. ಅವರು ಸ್ವ ಪ್ರಚಾರಕ್ಕಾಗಿ ಎಂದೂ ಹಂಬಲಿಸಿದವರಲ್ಲ.

ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಅವರೊಡನಿದ್ದ ಹಲವಾರು ಮುತ್ಸದ್ದಿಗಳಲ್ಲಿ, ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರಲ್ಲಿ ಕೆಲವರನ್ನಾದರೂ ಇಲ್ಲಿ ಹೆಸರಿಸುವುದು ಅಗತ್ಯವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹುಂಡಿ ವಿಷ್ಣು ಕಾಮತ, ಬ್ಯಾರಿಸ್ಟರ ನಾಥ ಪೈ, ರಾಜ್ಯ ಮಟ್ಟದಲ್ಲಿ ಶ್ರೀ ಕಾರ್ನಾಡು ಸದಾಶಿವ ರಾವ, ಕೆಂಗಲ ಹನುಮಂತಯ್ಯ, ಸಿದ್ಧವನಹಳ್ಳಿ ನಿಜಲಿಂಗಪ್ಪ, ರಂಗನಾಥರಾವ ದಿವಾಕರ, ಗುದ್ಲಪ್ಪ ಹಳ್ಳಿಕೇರಿ, ಕಾಂಗ್ರೆಸ್ ಸೇವಾದಳದಲ್ಲಿ ಸ್ವಯಂಸೇವಕರಾಗಿದ್ದ ಮಾರಪ್ಪ ಪಕ್ಕಳ, ಗುರ್ಪುರ ಮುಕುಂದ ಪ್ರಭು (ಖಾದಿ ಭಂಡಾರ), ಎಂ. ರಾಮರಾಜ ಕಿಣಿ, ಜಿ. ಶೇಷಗಿರಿ ಪೈ, ಸುಕ್ರುಂಡೆ ವಿಠಲ ಶೆಣೈ, ಕೆ.ಕೆ. ಶೆಟ್ಟಿ, ಎನ್.ಎಸ್. ಕಿಲ್ಲೆ, ಡಾ.ಕೆ. ನಾಗಪ್ಪ ಆಳ್ವಾ, ಕುಡ್ಪಿ ಶ್ರೀನಿವಾಸ ಶೆಣೈ, ಪಂಚಮಾಲ ನರಸಿಂಗ ರಾವ, ವಿ.ಎಸ್. ಕುಡ್ವಾ, ಜಸ್ಟಿಸ್ ಕೆ.ಎಸ್. ಹೆಗ್ಡೆ, ಹಿರಿಯಡ್ಕ ರಾಮರಾಯ ಮಲ್ಯ, ಬಂಟವಾಳದಲ್ಲಿ ಬಸ್ತಿ ಮಾಧವ ಶೆಣೈ, ಬಿ. ಕೇಶವ ಬಾಳಿಗಾ, ಉಡುಪಿಯ ಶ್ರೀ ಪಾಂಗಾಳ ಉಪೇಂದ್ರ ಎಸ್. ನಾಯಕ, ಪಾಂಗಾಳ ಲಕ್ಷ್ಮೀನಾರಾಯಣ ನಾಯಕ ಮತ್ತು ಅವರ ಬಂಧು, ದ.ಕ. ಜಿಲ್ಲಾ ಕಾಂಗ್ರೆಸ ಸಮಿತಿಯ ಅಧ್ಯಕ್ಷರೂ ಆಗಿದ್ದ ಡಾ.ಯು. ಪದ್ಮನಾಭ ಮಲ್ಯ ಇವರಂತಹ ನಿಸ್ವಾರ್ಥ ಗಣ್ಯರು ಇದ್ದರು. ತನ್ನ ತಮ್ಮನೇ ಆಗಿದ್ದರೂ ಮಲ್ಯರು ಡಾ. ಪದ್ಮನಾಭ ಮಲ್ಯರಿಗೆ ಶಾಸಕರಾಗಲು ಶಿಫಾರಸು ಮಾಡಿಲ್ಲವೆಂಬುದನ್ನೂ ನಾವಿಲ್ಲಿ ನೆನಪಿಸಿ ಕೊಳ್ಳಬಹುದು.

ಶ್ರೀಮತಿ ಇಂದಿರಾ ಮಲ್ಯ

ಇವೆಲ್ಲಾ ವಿಷಯಗಳನ್ನು ಬರೆಯುವಾಗ ಶ್ರೀನಿವಾಸ ಮಲ್ಯರ ಪತ್ನಿ ಶ್ರೀಮತಿ ಇಂದಿರಾ ಮಲ್ಯರ ಬಗ್ಗೆಯೂ ಬರೆಯಬೇಕಾಗುತ್ತದೆ. ಇಂದಿರಾರವರು ಬಂಟವಾಳ ಗೌಡ ಸಾರಸ್ವತ ಸಮಾಜದ ಅತ್ಯಂತ ಗೌರವದ ಮತ್ತು ದಾನಧರ್ಮಗಳಿಗೆ ಹೆಸರಾದ, ‘ಕನ್ನಡಿ ಬಾಗಿಲು ಮನೆ’ (Glass House)ಯ ಶ್ರೀಮಂತ ಬಂಟವಾಳ ದಾಮೋದರ ಪ್ರಭುಗಳ ಮಗಳು. ಮಲ್ಯರು ಕಾಂಗ್ರೆಸ ಪಕ್ಷದ ರಾಷ್ಟ್ರೀಯ ಚಳುವಳಕ್ಕಾಗಿ ಕೆಲಸ ಮಾಡುತ್ತಲಿದ್ದ ದಿನಗಳಲ್ಲಿಯೇ ಶ್ರೀನಿವಾಸ ಮಲ್ಯ ಮತ್ತು ಇಂದಿರಾರ ಮದುವೆ ಬಂಟವಾಳದಲ್ಲಿ ವೈಭವದಿಂದ ಜರುಗಿತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶ್ರೀನಿವಾಸ ಮಲ್ಯರು ಆಗಿಂದಾಗ್ಗೆ ಭೂಗತರಾಗಿ, ಕೆಲವು ಬಾರಿ ಜೈಲುವಾಸಕ್ಕೂ ತೆರಳಿದಾಗ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಗಳಿಗಾಗಿ ಪ್ರವಾಸ ಮಾಡುತ್ತಲೇ ಇದ್ದಾಗಲೂ, ಇಂದಿರಾಬಾಯಿ ನೊಂದುಕೊಂಡವರಲ್ಲ. ಮಲ್ಯರ ಜೀವನ ಕ್ರಮಗಳಿಗೆ, ರಾಜಕೀಯ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿದವರಲ್ಲ. ಬೇಸರ ಪಟ್ಟವರೂ ಅಲ್ಲ. ಪತಿಯ ಕಾರ್ಯಗಳಿಗೆ ತಮ್ಮ ವೌನ ಸಮ್ಮತಿಯನ್ನು ಈಯುತ್ತಾ ಪ್ರೋತ್ಸಾಹ ಕೊಡುತ್ತಲಿದ್ದ ಮಹಿಳೆ ಇಂದಿರಾಬಾಯಿ.

ಮುಂದೆ ಸಂಸದರಾಗಿ ಮಲ್ಯರು ದಿಲ್ಲಿಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿಕೊಂಡು ಅಲ್ಲಿಯೇ ಮನೆ ಮಾಡಿದಾಗ, ಓರ್ವ ಭಾರತೀಯ ನಾರಿಯಂತೆ ಸಾಂಪ್ರದಾಯಿಕ ಗೃಹಿಣಿ ಯಾಗಿ, ತಮ್ಮ ಕರ್ತವ್ಯವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಿದರು. ಕೇಂದ್ರ ಮತ್ತು ರಾಜ್ಯ ಗಳಿಂದ ದಿಲ್ಲಿಗೆ ಬರುತ್ತಲಿದ್ದ ಮಂತ್ರಿಗಳಿಗೆ, ರಾಜಕೀಯ ಮುಖಂಡರಿಗೆ, ಸಾಮಾನ್ಯ ಕಾರ್ಯಕರ್ತರುಗಳಿಗೂ ಮಲ್ಯರ ಮನೆ ಯಾವಾಗಲೂ ತೆರೆದ ಬಾಗಿಲು. ಅವರೆಲ್ಲರ ಊಟ, ತಿಂಡಿ, ಕಾಫಿ ಫಳಾರಗಳ ವ್ಯವಸ್ಥೆಯನ್ನು ನಗುಮೊಗದಿಂದ ಮಾಡುತ್ತಲಿದ್ದರು. ಮಂಗಳೂರು, ಉಡುಪಿಗಳಿಂದ ಬಂದವರಿಗಾಗಿ ದಿಲ್ಲಿಯಲ್ಲಿ ವಸತಿ ಸೌಕರ್ಯಗಳ ವ್ಯವಸ್ಥೆ, ಮಾತ್ರವಲ್ಲ ದೂರದ ಕರ್ನಾಟಕದಿಂದ ಬರುತ್ತಲಿದ್ದ ಪ್ರವಾಸಿಗಳ ವಾಸ್ತವ್ಯ ಮತ್ತು ದಿಲ್ಲಿಯ ಪ್ರೇಕ್ಷಣೀಯ ಸ್ಥಳಗಳ ಭೇಟಿಗಾಗಿ ಸಾರಿಗೆ ವ್ಯವಸ್ಥೆಯನ್ನು ಕೂಡಾ ಇಂದಿರಾ ಮಲ್ಯರೇ ಸ್ವತಃ ನೋಡಿಕೊಳ್ಳುತ್ತಲಿದ್ದರು. ಆಗಿನ ದಿನಗಳಲ್ಲಿ ಕರ್ನಾಟಕ ಭವನಗಳಾಗಲೀ, ಹೋಟೆಲು ಗಳಾಗಲೀ ಹೆಚ್ಚಿನ ಸಂಖ್ಯೆಯಲ್ಲಿ ಇರದೇ ಮಲ್ಯರ ಮನೆಯೇ ಅತಿಥಿ ಗೃಹವಾಗಿ ಕಾರ್ಯ ನಿರ್ವಹಿಸುತ್ತಲಿತ್ತು. ಅದರ ಮ್ಹಾಲಕರಾಗಿ ಇಂದಿರಾ ಮಲ್ಯ ಓರ್ವ ಆದರ್ಶ ಭಾರತೀಯ ಗೃಹಿಣಿಯಾಗಿ ತಮ್ಮ ಕರ್ತವ್ಯವೆಂಬಂತೆ ಸೇವೆ ಸಲ್ಲಿಸಿದರು. ಶ್ರೀ ಮಲ್ಯರ ರಾಜಕೀಯದ ತಂತ್ರಗಾರಿಕೆ ಬಗ್ಗೆ ಆಕ್ಷೇಪಿಸುವವರು ಇರಬಹುದು. ಆದರೆ ಇಂದಿರಾ ಮಲ್ಯರ ಬಗ್ಗೆ, ಅವರೋರ್ವ ‘ದೇವತೆ’ಯೆಂದೇ ‘ಅಮ್ಮ’ನೆಂದೇ ಎಲ್ಲರೂ ಭಾವಿಸುವವರೇ. ಅದು ಅವರ ತ್ಯಾಗಕ್ಕೆ, ಮನೆಗೆ ಬಂದ ಎಲ್ಲರನ್ನೂ ತನ್ನವರೆಂದೇ ಬಗೆದು ಸಲ್ಲಿಸಿದ ನಿರ್ಮಲ ಸೇವೆಗೆ ಸಂದ ಬಿರುದು.

ಒಂದು ಕಾಲದಲ್ಲಿ ಸುಪ್ರೀಂಕೋರ್ಟ್ ಜಡ್ಜರಾಗಿದ್ದು ನಂತರ ಲೋಕಸಭಾಪತಿ ಯಾಗಿ ಆಯ್ಕೆಯಾದ ಜಸ್ಟೀಸ್ ಕೆ.ಎಸ್. ಹೆಗ್ಡೆ ಹಾಗೂ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಶ್ರೀ ಟಿ.ಎ. ಪೈ ಇವರುಗಳಿಗೆ ಕಾಂಗ್ರೆಸ್ ಪಾರ್ಟಿಯಿಂದ ಟಿಕೇಟು ಕೊಡಿಸಿ, ರಾಜಕೀಯಕ್ಕೆ ತಂದವರು ಶ್ರೀನಿವಾಸ ಮಲ್ಯರು. ಅಲ್ಲದೇ ಕೃಷಿ ಕ್ಷೇತ್ರದಲ್ಲಿಯೇ ಇದ್ದ ಮೂಡಬಿದಿರೆಯ ಶಿರ್ತಾಡಿ ಧರ್ಮ ಸಾಮ್ರಾಜ್ಯ, ಕ್ರೈಸ್ತ ಸಮಾಜದ ಮುಂದಾಳು ಎಫ್. ಎಕ್ಸ್.ಡಿ. ಪಿಂಟೋ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಮುಂತಾದವರನ್ನು ರಾಜಕೀಯ ಕ್ಷೇತ್ರಕ್ಕೆ ಎಳೆದು ತಂದವರು ಕೂಡಾ ಶ್ರೀನಿವಾಸ ಮಲ್ಯರೇ.

ದಿಲ್ಲಿಗೆ ಬಂದ ದಕ್ಷಿಣ ಕನ್ನಡಿಗರನ್ನು ಮಲ್ಯರು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು, ಅವರಿಗೆ ರುಚಿಕರವಾದ ಊಟ, ಫಲಾಹಾರಗಳಿಂದ ತೃಪ್ತಿಪಡಿಸುತ್ತಲಿದ್ದ ರಲ್ಲದೇ ಅವರಿಗೆ ದಿಲ್ಲಿಯ ಪ್ರಮುಖ ಸ್ಥಳಗಳನ್ನು ‘ಪಾರ್ಲಿಮೆಂಟ ಭವನ, ರಾಷ್ಟ್ರಪತಿ ಭವನ, ಮಹಾತ್ಮಾ ಗಾಂಧೀಜಿಯವರ ಸಮಾಧಿ, ಕೆಂಪು ಕೋಟೆ, ಕುತುಬ ಮಿನಾರ, ಜಂತರ ಮಂತರ’ದಂತಹ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸುವ ವ್ಯವಸ್ಥೆಯನ್ನೂ ಮಾಡುತ್ತಿದ್ದರು.

ಅಂದಿನ ದಿನಗಳಲ್ಲಿ ಉತ್ತರ ಹಿಂದೂಸ್ಥಾನದ ಯಾತ್ರಾಸ್ಥಳಗಳಾದ ಕಾಶಿ, ಮಥುರಾ, ಹರಿದ್ವಾರ, ಹೃಷಿಕೇಶಕ್ಕೆ ಹೋಗುವ ಯಾತ್ರಾರ್ಥಿಗಳು, ದಿಲ್ಲಿಯಲ್ಲಿ ಮಲ್ಯರ ಮನೆಯಲ್ಲಿದ್ದು, ತಮ್ಮ ದಿಲ್ಲಿ ಪ್ರವಾಸದ ಬಳಿಕ ವಿವಿಧ ಯಾತ್ರಾ ಸ್ಥಳಗಳಿಗೂ ಭೇಟಿಕೊಟ್ಟು ಪುಣ್ಯ ಗಳಿಸಿ ಬರಲಿಕ್ಕೂ ಸಾಧ್ಯವಾಗುತ್ತಿತ್ತು ಮತ್ತು ಅಂತಹವರಿಗೆ ಆರ್ಥಿಕವಾಗಿಯೂ ಮಲ್ಯರು ತಮ್ಮಿಂದಾದಷ್ಟು ಸಹಾಯ ಮಾಡುತ್ತಿದ್ದುದನ್ನು ಕೇಳಿರುತ್ತೇನೆ.

ಅಂದ ಹಾಗೇ, ಬಂಟವಾಳದವರೊಬ್ಬರು ದೆಹಲಿಗೆ ಹೋಗಿದ್ದರು. ಅವರೊಬ್ಬ ಸನ್ಯಾಸಿ ತರಹದ ಜೀವನ ಪದ್ಧತಿಯವರು. ಯಾವಾಗಲೂ ಬಾಯಲ್ಲಿ ಮಂತ್ರಗಳನ್ನು ಹೇಳುತ್ತ ಅಥವಾ ದೇವರ ನಾಮಗಳನ್ನು ಸ್ಮರಿಸುತ್ತಾ, ಬಂಟವಾಳದಲ್ಲಿ ಶ್ರೀ ವೆಂಕಟರಮಣ ದೇವರಿಗೆ ಆಗುವ ತ್ರಿಕಾಲ ಪೂಜೆಗಳ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದರು. ಒಂದು ಸಣ್ಣ ಪಂಚೆ, ಭುಜದ ಮೇಲೊಂದು ಕೈವಸ್ತ್ರ. ಮುಖ ಭುಜಗಳು ಎದೆ ಹೊಟ್ಟೆಗಳಿಗೆ ಗೋಪಿ ಚಂದನದ ನಾಮ, ಶ್ರೀ ಮುದ್ರೆಗಳು. ಇವಿಷ್ಟು ಅವರ ವೇಷಭೂಷಣ. ಮಳೆಗಾಲ, ಚಳಿಗಾಲ ವೇನಿದ್ದರೂ ಅವರ ಸ್ವರೂಪದಲ್ಲಿ ಬದಲಾವಣೆ ಕಾಣ ಸಿಗುತ್ತಿರಲಿಲ್ಲ. ಅವರು ಬ್ರಹ್ಮಚಾರಿ ಯಾಗಿಯೇ ಉಳಿದಿದ್ದರು. ಬೆಳಿಗ್ಗೆ ಮತ್ತು ಸಂಧ್ಯಾಕಾಲದಲ್ಲಿ ಜಪತಪಗಳಿಗೆ ಕೂತರೆ ಅವರಿಗೆ ಸಮಯದ ಅಥವಾ ಬಾಹ್ಯ ಪ್ರಪಂಚದ ಅರಿವೇ ಇರುತ್ತಿರಲಿಲ್ಲ. ಇಂತಹ ಒಂದು ಸನ್ಯಾಸ ಜೀವನವನ್ನು ಹೊಂದಿದ್ದರು.

ಅವರೊಮ್ಮೆ ದಿಲ್ಲಿಗೆ ಹೋದಾಗ ಮಲ್ಯರಲ್ಲಿ ಅದೂ ತನ್ನದೇ ಊರಿನ ಮಗಳಾದ ಇಂದಿರಾ ಮಲ್ಯರ ಮನೆಯಲ್ಲಿ ಉಳಿದುಕೊಂಡರು. ಇವರ ಮಿತ ಆಹಾರ ಪದ್ಧತಿ ಅರಿತಿದ್ದ ಶ್ರೀಮತಿ ಮಲ್ಯರು ಸ್ವಾಮೀಜಿಗಳು ಮನೆಗೆ ಬಂದಾಗ ಉಪಚರಿಸುವ ರೀತಿಯಲ್ಲೇ ಸಾತ್ವಿಕ ಕೊಂಕಣಿ ಅಡುಗೆ ಮಾಡಿ ಉಣಿಸಿ, ದಿಲ್ಲಿಯ ಪ್ರವಾಸೀ ಸ್ಥಳಗಳನ್ನು ತೋರಿಸಿ ಸಂತೃಪ್ತಿ ಪಡಿಸಿದರು. ಅಲ್ಲಿಂದ ಈ ಮಹಾನುಭಾವರು ಕಾಶಿ, ಮಥುರಾ, ಹರಿದ್ವಾರಗಳನ್ನು ಸಂದರ್ಶಿಸಿ ಪರತ್ ದಿಲ್ಲಿಗೆ ಬಂದು ಮಲ್ಯರ ಮನೆ ಸೇರಿದಾಗ ಕೈಯಲ್ಲಿ ಕಾಸಿರಲಿಲ್ಲ. ಇದನ್ನು ತಿಳಿದ ಇಂದಿರಮ್ಮ ಮಲ್ಯರಿಗೆ ಈ ವಿಷಯ ತಿಳಿಸಿದರೆಂದು ಕಾಣುತ್ತದೆ.

ಮರುದಿನ ಸನ್ಯಾಸಿ ನಾಮಗಳನ್ನು ಎಳೆದು ಶ್ರೀ ಮುದ್ರೆಯೊಂದಿಗೆ ಸಂಧ್ಯಾವಂದನೆ ಗಾಗಿ, ಮಂತ್ರ ಸ್ಮರಣೆ ಮಾಡುತ್ತ ಏಕಾಗ್ರತೆಯಿಂದ ಜಪತಪಗಳಲ್ಲಿ ತೊಡಗಿ ದೇವರ ಎದುರು ಕಣ್ಣು ಮುಚ್ಚಿ ಕುಳಿತಿದ್ದರು. ಇದನ್ನು ನೋಡಿದ ಮಲ್ಯರು ಹೊರಗೆ ಪಡಸಾಲೆಯಲ್ಲಿ ಕೂತಿದ್ದ ಬೇರೆ ಬೇರೆ ರಾಜ್ಯದ ಮಂತ್ರಿಗಳು, ರಾಜಕೀಯ ಪುಢಾರಿಗಳಿಗೆ ‘ಹಮಾರೆ ಗಾವಂಸೇ ಏಕ ಬಹುತ್ ಬಡಾ ಸನ್ಯಾಸಿ ಸ್ವಾಮೀಜಿ ಆಯೇಹೆ, ಉನಕಾ ಆಶೀರ್ವಾದ ಲೇನಾ’ ಎಂದು ಹೇಳಿ ಅವರನ್ನು ಒಳಗೆ ಧ್ಯಾನದಲ್ಲಿ ನಿರತರಾಗಿದ್ದ ಸನ್ಯಾಸಿಯ ಬಳಿಗೆ ಕರೆದುಕೊಂಡು ಬಂದು ತಾನು ಉದ್ದಂಡ ನಮಸ್ಕಾರ ಹಾಕಿ ನೂರು ರೂಪಾಯಿಯ ಒಂದು ನೋಟನ್ನು ಎದುರಿನ ಹರಿವಾಣದಲ್ಲಿ ಹಾಕಿ ನಿಂತರಂತೆ. ಹೊರಗಿನ ಚಾವಡಿಯಿಂದ ಒಳಗೆ ಬಂದವರೆಲ್ಲರೂ ಮಲ್ಯರು ಮಾಡಿದ ಹಾಗೆಯೇ ಭಯಭಕ್ತಿಗಳಿಂದ ಸಾಷ್ಟಾಂಗ ನಮಸ್ಕಾರ ಮಾಡಿ ನೂರು, ಇನ್ನೂರು ರೂಪಾಯಿಗಳನ್ನು ಹರಿವಾಣದಲ್ಲಿ ಹಾಕಿ ಕೃತಾರ್ಥ ಭಾವದಿಂದ ಹೊರಗೆ ಬಂದರಂತೆ. ಇದ್ಯಾವುದನ್ನು ತಿಳಿಯದ ನಮ್ಮೂರಿನ ಸನ್ಯಾಸಿಗಳು ಕಣ್ದೆರೆದಾಗ ಸಾವಿರಾರು ರೂಪಾಯಿ ಹರಿವಾಣದಲ್ಲಿ ಇದ್ದುದನ್ನು ನೋಡಿ ಅವರಿಗೆ ಆಶ್ಚರ್ಯವೂ ಆನಂದವೂ ಏಕಕಾಲದಲ್ಲಿ ಉಂಟಾಗಿತ್ತು. ಊರಿಗೆ ಬಂದ ಮೇಲೆ ಮಲ್ಯರನ್ನೂ ಇಂದಿರಾರವರನ್ನೂ ಅದೆಷ್ಟೋ ಕಾಲ ನೆನಪಿಸುತ್ತಿದ್ದರಂತೆ. ಊರವರಲ್ಲಿ ಹೇಳಿ ಮಲ್ಯ ದಂಪತಿಯನ್ನು ಕೊಂಡಾಡುತ್ತಿದ್ದರಂತೆ. ನಮಗೆ ಇದೊಂದು ಕುಶಾಲಿನ ಸಂಗತಿಯಾಗಿತ್ತು. ಇದು ಮಲ್ಯರ ಚಮತ್ಕಾರಗಳಲ್ಲಿ ಒಂದು.

ಹಲವಾರು ಸಂದರ್ಭಗಳಲ್ಲಿ ತಮ್ಮ ಪ್ರತ್ಯುತ್ಪನ್ನ ಮತಿಯಿಂದ, ಚತುರೋಕ್ತಿಗಳಿಂದ ರಾಜಕೀಯದಲ್ಲಿ, ಪಕ್ಷದಲ್ಲಿ, ಸರಕಾರದಲ್ಲಿ ಉಂಟಾಗುವ ಸಮಸ್ಯೆಗಳಿಗೆ, ಗೊಂದಲಗಳಿಗೆ, ಅವು ದೊಡ್ಡ ಸ್ವರೂಪಕ್ಕೆ ಹೋಗಿ ಗಂಡಾಂತರ ಪರಿಸ್ಥಿತಿಗೆ ತಿರುಗುವ ಮುಂಚೆಯೇ ನಿವಾರಣೆಗೊಳ್ಳುವಂತೆ ಮಲ್ಯರು ಪರಿಹಾರಗಳನ್ನು ನೀಡುತ್ತಿದ್ದರು. ಅದರಿಂದಾಗಿಯೇ ಹಲವಾರು ರಾಜ್ಯಗಳಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾದಾಗ ಪಂ. ನೆಹರೂ ಮತ್ತಿತರ ನಾಯಕರು ಶ್ರೀನಿವಾಸ ಮಲ್ಯರನ್ನು ಪರಿಸ್ಥಿತಿಯನ್ನು ತಿಳಿಗೊಳಿಸಿ ಬರಲು ಕಳುಹಿಸುತ್ತಿದ್ದರಂತೆ. ಮಲ್ಯರು ಎಲ್ಲರನ್ನೂ ಸಮಾಧಾನಗೊಳಿಸಿ ಬರುತ್ತಿದ್ದರಂತೆ. ಇಂತಹ ಸಂದರ್ಭಗಳು ಆಗಿಂದಾಗೆ ಪತ್ರಿಕೆಗಳನ್ನು ಓದಿದಾಗ ನಮಗೆ ತಿಳಿದು ಬರುತ್ತಿದ್ದವು.

ಷಷ್ಟ್ಯಬ್ದ ಸಮಾರಂಭ

1961ರಲ್ಲಿ ಮಲ್ಯರ ಸಹಸ್ರಾರು ಅಭಿಮಾನಿಗಳು ಒತ್ತಾಯ ಮಾಡಿ, ಶ್ರೀನಿವಾಸ ಮಲ್ಯರನ್ನು ಒಪ್ಪಿಸಿ ಅವರ ಷಷ್ಟ್ಯಬ್ದ ಸಮಾರಂಭವನ್ನು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕಟ್ಟಡದ ಸಭಾಭವನದಲ್ಲಿ, ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಏರ್ಪಾಡು ಮಾಡಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಟಿ.ಎ. ಪೈಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಕೆ.ಕೆ. ಶೆಟ್ಟಿ,
ಡಾ. ಕೆ. ನಾಗಪ್ಪ ಆಳ್ವಾ, ಎಸ್.ಡಿ. ಸಾಮ್ರಾಜ್ಯ, ಶ್ರೀ ಎ. ಶಂಕರ ಆಳ್ವಾ ಮುಂತಾದ ನಾಯಕರು ಅಂದಿನ ಸಮಾರಂಭದ ಭಾಷಣಕಾರರಾಗಿದ್ದರು. ಕುಂದಾಪುರದಿಂದ ಕಾಸರಗೋಡುವರೆಗಿನ ಎಲ್ಲಾ ಊರುಗಳಿಂದ ಮಲ್ಯರ ಅಭಿಮಾನಿಗಳು ಬಂದಿದ್ದರು. ಭಾಷಣಕಾರರೆಲ್ಲರೂ ಮಲ್ಯರ ಅನುಯಾಯಿಗಳೇ ಆಗಿದ್ದುದರಿಂದ ಮಲ್ಯರು ದ.ಕ. ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳು, ಅವರ ಮುತ್ಸದ್ದಿತನ ಮೊದಲಾವುಗಳ ಬಗ್ಗೆ ಪ್ರಶಂಸೆಗಳ ಸುರಿಮಳೆಯನ್ನೇ ಸುರಿದರು. ಆದರೆ ಸಭೆಗೆ ಬಂದವರು ಎಲ್ಲಿಯೂ ಸಭೆ ಸಮಾರಂಭಗಳಲ್ಲಿ ಭಾಷಣವನ್ನೇ ಮಾಡದ ಮಲ್ಯರು ಇವತ್ತು ತಮ್ಮ ಭಾಷಣದಲ್ಲಿ ಏನು ಹೇಳುತ್ತಾರೋ? ಎಂದು ಕೇಳಲು ತವಕಿಸುತ್ತಿದ್ದರು. ಕೊನೆಗೆ ಎಲ್ಲರ ಭಾಷಣಗಳು ಮುಗಿದ ಮೇಲೆ ಶ್ರೀನಿವಾಸ ಮಲ್ಯರು ಸಾವಕಾಶವಾಗಿ ಕುರ್ಚಿಯಿಂದ ಎದ್ದರು. ತಮ್ಮ ಕುಡಿಮೀಸೆಯ ಅಂಚಿನಿಂದ ನಗಾಡಿದರು. ಬಳಿಕ, “ನೀವು ನನಗೆ ಮಾತನಾಡಲಿಕ್ಕೆ ಯಾವಾಗಲೂ ಹೇಳಬೇಡಿ. ನಿಮ್ಮ ಊರಿನ ಅಥವಾ ಪ್ರದೇಶದ ಅಭಿವೃದ್ಧಿಗಾಗಿ ನಾನು ಕೆಲಸ ಮಾಡಬೇಕಾದರೆ ಅದನ್ನು ಹೇಳಿ. ನಿಮಗೆಲ್ಲಾ ನನ್ನ ನಮಸ್ಕಾರ” ಎಂದು ಎರಡೇ ಮಾತುಗಳನ್ನಾಡಿ ಕೂತೇ ಬಿಟ್ಟರು. ಇದನ್ನು ನೋಡಿದ ಎಲ್ಲರೂ ಅವಾಕ್ಕಾದರು.

ಶ್ರೀನಿವಾಸ ಮಲ್ಯ ದಂಪತಿಗೆ ಮಕ್ಕಳಿರಲಿಲ್ಲ. ಅದಕ್ಕಾಗಿ ಅವರು ಬೇಸರ ಅಥವಾ ದುಃಖವನ್ನು ವ್ಯಕ್ತಪಡಿಸಿದವರಲ್ಲ. ಆದರೆ ಅವರ ಷಷ್ಟ್ಯಬ್ದ ಸಮಾರಂಭದ ದಿನಗಳಲ್ಲಿ ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ಸ್ವಾಮೀ ದೇವಳದ ಮುಂಭಾಗದಲ್ಲಿ ಅವರಿಂದ ಒಂದು ಅಶ್ವತ್ಥ ವೃಕ್ಷದ ಸಸಿಯನ್ನು ನೆಡಿಸಲಾಯಿತು. ಈಗ ಅದು ಬೆಳೆದು ಹೆಮ್ಮರವಾಗಿದೆ. ಅದಕ್ಕೆ ಜನರೇ ಕೂಡಿ ಒಂದು ಕಟ್ಟೆಯನ್ನು ಕಟ್ಟಿಸಿದ್ದಾರೆ ಮತ್ತು ಈ ಅಶ್ವತ್ಥ ಮರ ಶ್ರೀನಿವಾಸ ಮಲ್ಯರ ಉದಾರ ಜೀವಿತಕ್ಕೆ ಸಂಕೇತವೆಂಬಂತೆ ಜನಸಾಮಾನ್ಯರಿಗೆ ತಂಪು ನೆರಳನ್ನು ನೀಡುತ್ತಲಿದೆ.

ಸಿಂಡಿಕೇಟಿನ ಜನ್ಮ

1964ರ ಫೆಬ್ರವರಿಯಲ್ಲಿ ಅಖಿಲ ಭಾರತ ಕಾಂಗ್ರೆಸ ಅಧಿವೇಶನ ನಡೆಯುತ್ತಿರುವಾಗಲೇ ಪ್ರಧಾನಿ ಪಂ. ಜವಾಹರಲಾಲ ನೆಹರೂರವರಿಗೆ ಹೃದಯಾಘಾತವಾಯಿತು. ಅಧಿವೇಶನವನ್ನು ಅದೇ ಸಮಯದಲ್ಲಿ ಅಂತ್ಯಗೊಳಿಸಿ ಪಂ. ನೆಹರೂರವರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ತರಲಾಯಿತು. ವೈದ್ಯರು ಕೊಟ್ಟ ಅವಶ್ಯಕ ಚಿಕಿತ್ಸೆಗಳಿಗೆ ಸ್ಪಂದಿಸಿದ ನೆಹರೂಜಿ ಸಾವಕಾಶವಾಗಿ ಚೇತರಿಸಿಕೊಂಡರು. ಆದರೂ ಅವರು ಇನ್ನೇನು ಹೆಚ್ಚು ಕಾಲ ಬದುಕಿ ಉಳಿಯುವವರಲ್ಲ ಎಂದು ಎಲ್ಲರಿಗೂ ಅನಿಸಲು ಪ್ರಾರಂಭವಾಗಿತ್ತು.

ಪಂ. ನೆಹರೂ ಕಾಲವಶವಾದರೆ ಮುಂದೇನು ಎಂಬ ಪ್ರಶ್ನೆ ಹಿರಿಯ ರಾಜಕಾರಣಿ ಗಳ, ದೇಶದ ನಾಯಕರ ಮುಂದಿತ್ತು. ಕಾಂಗ್ರೆಸ ಪಕ್ಷಕ್ಕೆ, ಕೇಂದ್ರ ಸರಕಾರಕ್ಕೆ ಮುಂದೆ ಯಾರು ನಾಯಕರಾಗಬಹುದು ಎಂಬ ಬಹುದೊಡ್ಡ ಪ್ರಶ್ನೆ ದೇಶದ ರಾಜಕೀಯ ನಾಯಕರ ಮುಂದೆ ಬರುತ್ತಿದ್ದಾಗ, ನೆಹರೂ ಸರಕಾರದಲ್ಲಿ ಮಂತ್ರಿಗಳಾಗಿದ್ದ ಹಿರಿಯ ರಾಜಕಾರಣಿ, ಮುತ್ಸದ್ದಿ, ಆಡಳಿತಗಾರ ಶ್ರೀ ಮೊರಾರ್ಜಿ ದೇಸಾಯಿಯವರ ಹೆಸರು ಸಹಜವಾಗಿ ಆಗ ಮುಂದೆ ಬರುತ್ತಿತ್ತು. ಆದರೆ ಮೊರಾರ್ಜಿಭಾಯಿ ಕಠಿಣ ಹಾಗೂ ನಿಷ್ಠುರವಾದಿ ಮನುಷ್ಯರಾಗಿದ್ದರು. ಅವರು ಯಾರ ಮಾತನ್ನು ಕೇಳುವವರಲ್ಲ. ಯಾರ ಹಿಡಿತಕ್ಕೂ ಸಿಗುವವರಲ್ಲವೆಂಬುದೂ ಕೂಡಾ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅದರಿಂದಾಗಿ ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕಾಮರಾಜ ನಾಡಾರ, ಆಂಧ್ರ ಪ್ರದೇಶದಿಂದ ಬಂದ ನೀಲಂ ಸಂಜೀವ ರೆಡ್ಡಿ, ಕಾಂಗ್ರೆಸ್ ಪಕ್ಷದ ಖಜಾಂಚಿ ಬಂಗಾಳದ ಅತ್ಯುಲ್ಯಾ ಘೋಷ, ಕರ್ನಾಟಕದ ನಿಜಲಿಂಗಪ್ಪ ಮುಂತಾದವರಿಗೆ ಮೊರಾರ್ಜಿಯವರು ನೆಹರು ಬಳಿಕ ದೇಶದ ಪಂತ ಪ್ರಧಾನರಾಗುವುದು ಬೇಡವಾಗಿತ್ತು. ಶ್ರೀನಿವಾಸ ಮಲ್ಯರಿಗೂ ಮೊರಾರ್ಜಿಯವರ ಮೊಂಡುತನದ ಅರಿವಿತ್ತು. ಹೀಗಾಗಿ ಈ ಐವರು ಹಿರಿಯ ನಾಯಕರು 1964 ಮಾರ್ಚ್ ತಿಂಗಳಲ್ಲಿ ತಿರುಪತಿಯಲ್ಲಿ ಒಟ್ಟು ಸೇರಿ “ಇನ್ನು ನೆಹರೂಜೀ ಹೆಚ್ಚು ದಿನ ಬದುಕುವವರಲ್ಲ. ಅವರ ಬಳಿಕ ಮೊರಾರ್ಜಿ ದೇಸಾಯಿ ಪ್ರಧಾನಿ ಪಟ್ಟಕ್ಕೆ ಬರಬಾರದು. ನಮ್ಮ ಮಾತಿಗೆ ಬೆಲೆ ಕೊಡುವ ಮತ್ತು ನಮ್ಮ ಹಿಡಿತದಲ್ಲಿಯೇ ಇರಬಹುದಾದ  ವ್ಯಕ್ತಿಯೇ ದೇಶದ ಪಂತ ಪ್ರಧಾನಿಯಾಗತಕ್ಕದ್ದು. ಅದಕ್ಕೆ ಸೂಕ್ತರಾದವರು ಶ್ರೀ ಲಾಲಬಹಾದ್ದೂರ ಶಾಸ್ತ್ರೀಯವರೇ. ಆದುದರಿಂದ ದೇಶದ ಮುಂದಿನ ಪ್ರಧಾನಿಯ ಆಯ್ಕೆಯ ಸಂದರ್ಭದಲ್ಲಿ ಲಾಲಬಹಾದ್ದೂರ ಶಾಸ್ತ್ರಿಯವರೇ ಕಾಂಗ್ರೆಸ್ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ಆರಿಸಿ ಬರುವಂತೆ ಕಾರ್ಯತಂತ್ರವನ್ನು, ವ್ಯೆಹವನ್ನು ರಚಿಸಬೇಕು” ಎಂದು ತಿರುಪತಿ ತಿಮ್ಮಪ್ಪನ ಸ್ಥಳದಲ್ಲಿ ನಿರ್ಣಯಕ್ಕೆ ಬಂದರು.

ಪಂ. ಜವಾಹರಲಾಲ ನೆಹರೂರವರು ನಿಧನರಾದ ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದ ಕಾಲದಲ್ಲಿ ಈ ಸಿಂಡಿಕೇಟ ತಂಡ ತಮ್ಮ ದಾಳಗಳನ್ನು ಬುದ್ಧಿವಂತಿಕೆಯಿಂದ ಚಲಾಯಿಸಿ, ಲಾಲ ಬಹಾದ್ದೂರ ಶಾಸ್ತ್ರಿಯವರೇ ದೇಶದ ಪ್ರಧಾನಿಯಾಗಿ ಆರಿಸಿ ಬರುವಂತೆ ನೋಡಿಕೊಂಡರು. ಮುಂದೆ ಈ ತಂಡಕ್ಕೆ ‘ಸಿಂಡಿಕೇಟ’ ಎಂದೇ ಹೆಸರು ಬಂತು ಮತ್ತು ಮುಂದಿನ ಹಲವಾರು ವರ್ಷಗಳ ಕಾಲ ಈ ಸಿಂಡಿಕೇಟ ತಂಡ ದೇಶದ ರಾಜಕೀಯದಲ್ಲಿ ಹಲವಾರು ವ್ಯಕ್ತಿಗಳ, ಸರಕಾರಗಳ ಏಳುಬೀಳುಗಳಿಗೆ ಜವಾಬ್ದಾರಿಯಾಯಿತು ಮತ್ತು ದಿಲ್ಲಿಯ ಹಿರಿಯ ರಾಜಕಾರಣಿಗಳಿಂದ ಹಿಡಿದು ಭಾರತದ ಹಳ್ಳಿಪಳ್ಳಿಗಳಲ್ಲಿಯೂ ಜನಸಾಮಾನ್ಯರ ನಾಲಗೆಯಲ್ಲಿ ‘ಸಿಂಡಿಕೇಟ’ ಎಂಬ ಶಬ್ದ ನಿರಂತರ ಹೊರಳಾಡಿತು. ಆದರೆ ಈ ಸಿಂಡಿಕೇಟಿನ ಜನ್ಮದಾತರು ಉಳ್ಳಾಲ ಶ್ರೀನಿವಾಸ ಮಲ್ಯರೇ ಆಗಿದ್ದರು!

ಶ್ರೀನಿವಾಸ ಮಲ್ಯ ಅಮರ ರಹೇ

ಜೀವಂತ ಇರುವಾಗ, ತಾನು ಹದಿನೇಳು ವರ್ಷಗಳ ಕಾಲ ದಿಲ್ಲಿಯಲ್ಲಿ ಸಾಂಸದಿಕ ನಾಗಿ, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ, ಪಂತ ಪ್ರಧಾನ ಪಂ. ಜವಾಹರಲಾಲ ನೆಹರೂ, ಲಾಲ ಬಹದ್ದೂರ ಶಾಸ್ತ್ರಿಗಳ ಬಲಗೈ ಬಂಟನಂತಿದ್ದ, ಕಾಂಗ್ರೆಸ್ ಲೋಕಸಭಾ ಪಕ್ಷದ ಮುಖ್ಯ ಪ್ರಚೋದಕನಾಗಿ, ರಾಜಕೀಯ ಮುತ್ಸದ್ದಿಯಾಗಿ, ಕೇಂದ್ರ ಸರಕಾರದಲ್ಲಿ ಅಂತೆಯೇ ದೇಶದ ಹಲವು ರಾಜ್ಯಗಳ ಸರಕಾರದ ಮಂತ್ರಿಮಂಡಲಗಳ ಮೇಲೆ ಹತೋಟಿ ಇಟ್ಟುಕೊಂಡಿದ್ದವ ರಾಗಿ, ಅದಕ್ಕಿಂಲೂ ಹೆಚ್ಚಾಗಿ ಎಲ್ಲರ ಸಖನಂತಿದ್ದು, ಆಪದ್ಭಾಂಧವನೆಂಬ ಕೀರ್ತಿಯನ್ನು ಹೊಂದಿದವರಾಗಿ ದೇಶದುದ್ದಗಲಗಳಲ್ಲಿ ಜನಪ್ರಿಯರಾಗಿದ್ದ, ವಿಶ್ವಾಸಿಗರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರು, ತನ್ನ ಸುಖಗೋಸ್ಕರ ಅಥವಾ ತಮ್ಮ ಕುಟುಂಬದವರ ಉದ್ಧಾರಕ್ಕಾಗಿ ಅಥವಾ ತನ್ನ ಮೇಲ್ಮೆಯ ಪ್ರದರ್ಶನಕ್ಕಾಗಿ ಕಿಂಚಿತ್ತೂ ಸ್ವಾರ್ಥದಿಂದ ಕೆಲಸ ಮಾಡಿದವರಲ್ಲ. ತನ್ನ ಯಾ ಕುಟುಂಬದವರ ಹೆಸರಲ್ಲಿ ಆಸ್ತಿಪಾಸ್ತಿ ಮಾಡಿದವರಲ್ಲ. ಕೆನರಾ ಬ್ಯಾಂಕ್ ಅಥವಾ ಇತರ ಹಲವಾರು ವಾಣಿಜ್ಯ ಸಂಸ್ಥೆಗಳವರು ಅವರನ್ನು ಕರೆದು ನಿರ್ದೇಶಕ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದರು. ತನ್ನ ರಾಜಕೀಯ ಜೀವನದಲ್ಲಿಯಾಗಲೀ ಅಥವಾ ಅಧಿಕಾರ ಚಲಾಯಿಸುವ ಸ್ಥಾನದಲ್ಲಿದ್ದಾಗಲೂ, ತನ್ನ ಅಥವಾ ಹೆಂಡತಿಯ ಹೆಸರಿನಲ್ಲಿ ಹಣ ಮಾಡಿ ಇಟ್ಟವರಲ್ಲ. ಅವರ ಹೆಸರಿನಲ್ಲಿ ಇದ್ದುದು – ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ರಾಜಕೀಯ ಸಂತ್ರಸ್ತನಿಗೆ ಎಂದು ಮಂಗಳೂರು ಹರಿಪದವಿನಲ್ಲಿ ಸರಕಾರ ಕೊಟ್ಟ 10 ಎಕರೆ ಜಾಗ ಮತ್ತು ಉಳಿತಾಯದ ಹಣದಿಂದ ಪಡೆದ ಶೇರುಗಳು ಮಾತ್ರ.

ಆದರೆ ಜನಕಲ್ಯಾಣಕ್ಕಾಗಿ, ರಾಜ್ಯದ, ಜಿಲ್ಲೆಯ ಅಭಿವೃದ್ಧಿಗಾಗಿ ಅವರು ಅಸ್ತಿಭಾರದ ಕಲ್ಲನ್ನು ನೆಟ್ಟ ಕಾರಣಕ್ಕಾಗಿ ಜನತೆ ಅವರಿಗೆ ಪ್ರೀತಿ ವಿಶ್ವಾಸಗಳಿಂದ ‘ದ.ಕ. ಜಿಲ್ಲೆಯ ಅಭಿವೃದ್ಧಿಯ ಪಿತ’ ಎಂಬ ಬಿರುದನ್ನಿತ್ತು ಗೌರವಿಸಿದೆ. ಸಂಪನ್ಮೂಲ (Infrastructure)ಗಳ ಮಂತ್ರ ಜಪಿಸುತ್ತಲಿರುವ ಇಂದಿನ ರಾಜಕಾರಣಿಗಳಂತೆ, ಎಂದೂ ಯಾವ ಘೋಷಣೆಗಳನ್ನೂ ಮಾಡದೇ ತನ್ನದೇ ಕಾರ್ಯತಂತ್ರಗಳಿಂದ ವೌನವಾಗಿ, ಜಿಲ್ಲೆಯ ಸಂಪನ್ಮೂಲಗಳ ಅಭಿವೃದ್ಧಿ ಮಾಡಿದರು. ಇದಕ್ಕಾಗಿ ‘ಕೆನರಾ ಜಿಲ್ಲೆಯ ನವ ನಿರ್ಮಾಣದ ಶಿಲ್ಪಿ’ ಇದು ಜಿಲ್ಲೆಯ ಜನತೆ ತನ್ನ ಹೃದಯಾಂತರಾಳದಿಂದ ಕೊಟ್ಟ ಬಿರುದು.

ಅಂತಹ ಮಹಾನ್ ವ್ಯಕ್ತಿತ್ವವನ್ನು ರೂಪಿಸಿಕೊಂಡ ಉಳ್ಳಾಲ ಶ್ರೀನಿವಾಸ ಮಲ್ಯರು 1965ನೇ ಇಸವಿ ಜನವರಿ ತಿಂಗಳ 19ನೇ ತಾರೀಕಿನಂದು ಬೆಳಿಗ್ಗೆ ದಿಲ್ಲಿಯಿಂದ ಮಂಗಳೂರಿಗೆ ಬರಲು ಮನೆಯಿಂದ ಹೊರಟಿದ್ದರು. ಆದರೆ ವಿಮಾನ ನಿಲ್ದಾಣಕ್ಕೆ ತಲುಪುವ ಮೊದಲೇ ಹಾದಿಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿತು. ಅವರೊಡನಿದ್ದವರು ಕೂಡಲೇ ಕಾರನ್ನು ತಿರುಗಿಸಿ ಅವರ ಮನೆಗೆ ಕರೆದೊಯ್ದರು. ಆ ಕೂಡಲೇ ವೈದ್ಯರು ಬಂದು ಚಿಕಿತ್ಸೆ ಶುರು ಮಾಡಿದರೂ ಏನೂ ಪರಿಣಾಮವಾಗಲಿಲ್ಲ. ಶ್ರೀನಿವಾಸ ಮಲ್ಯರ ದಿವ್ಯ ಚೇತನ ಪರಮಾತ್ಮನಲ್ಲಿ ಲೀನವಾಯಿತು. ನವದೆಹಲಿಯಲ್ಲಿದ್ದ ಕೇಂದ್ರ ಸರಕಾರದ ಮಂತ್ರಿಗಳು, ಕಾಂಗ್ರೆಸ್ ಪಕ್ಷದ ನಾಯಕರು, ವಿರೋಧ ಪಕ್ಷಗಳ ವಕ್ತಾರರು ಕೂಡಾ ಮಲ್ಯರ ಮನೆಗೆ ಬಂದು ಅಗಲಿದ ದಿವ್ಯ ಚೇತನಕ್ಕೆ ತಮ್ಮ ಅಂತಿಮ ನಮನ ಸಲ್ಲಿಸಿದರು. ಭಾರತದ ಆಗಿನ ಪ್ರಧಾನಿ ಮತ್ತು ಮಲ್ಯರ ಖಾಸಾ ಮಿತ್ರರಾಗಿದ್ದ ಶ್ರೀ ಲಾಲಬಹಾದ್ದೂರ ಶಾಸ್ತ್ರೀಜಿಯವರು ಉತ್ತರ ಪ್ರದೇಶದಲ್ಲಿದ್ದರೂ, ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ದಿಲ್ಲಿಗೆ ವಾಪಸಾದರು ಮತ್ತು ಮಲ್ಯರ ಮನೆಗೆ ಬಂದು ಗೌರವ ಸಲ್ಲಿಸಿ, ಶ್ರೀಮತಿ ಇಂದಿರಾ ಮಲ್ಯರಿಗೆ ತಮ್ಮ ಸಂತಾಪ ತಿಳಿಸಿದರು ಅಲ್ಲದೇ ವಾಯುಪಡೆಯ ವಿಶೇಷ ವಿಮಾನದಲ್ಲಿ ಶ್ರೀನಿವಾಸ ಮಲ್ಯರ ಮೃತ ದೇಹವನ್ನು ಮಂಗಳೂರಿಗೆ ಕಳುಹಿಸಿಕೊಟ್ಟರು.

ಶ್ರೀನಿವಾಸ ಮಲ್ಯರ ಮರಣದ ವಾರ್ತೆಯು ಆಕಾಶವಾಣಿಯಿಂದ ಬಿತ್ತರಗೊಂಡಿತು. ಊರಿಂದ ಊರಿಗೆ ದೂರವಾಣಿ ಮೂಲಕವೂ ತಿಳಿಯಿತು. ಕೇಳಿಸಿಕೊಂಡ ಅವರ ಮಿತ್ರರು, ಸಾವಿರಾರು ಅಭಿಮಾನಿಗಳು ಮಂಗಳೂರಿಗೆ ಧಾವಿಸಿ ಬರುತ್ತಿದ್ದುದು ಕಾಣುತ್ತಿತ್ತು. ಮಲ್ಯರ ಜಡ ದೇಹವನ್ನು ಬಜ್ಪೆ ವಿಮಾನ ನಿಲ್ದಾಣದಿಂದ ಮಂಗಳೂರು ಊರ್ವದಲ್ಲಿರುವ ಅವರ ತಮ್ಮ ಉಳ್ಳಾಲ ಅನ್ನು ಮಲ್ಯರ ಮನೆಗೆ ಕರತಂದು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಯಿತು. ಮರುದಿನ ಮಧ್ಯಾಹ್ನ ಶವಯಾತ್ರೆ ಹೊರಡುತ್ತದೆ ಎಂದು ನೆರೆದ ನಾಯಕರು ಘೋಷಿಸಿದರು.

ಮಲ್ಯರ ಮರಣದ ವಾರ್ತೆ ತಿಳಿದ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪನವರು ಮತ್ತು ಇತರ ಮಂತ್ರಿಗಳು, ರಾಜ್ಯದ ಕಾಂಗ್ರೆಸ ಮತ್ತು ವಿರೋಧ ಪಕ್ಷದ ನಾಯಕರು ಕೂಡಾ ಬೆಂಗಳೂರಿನಿಂದ ಮತ್ತು ಇತರ ಜಿಲ್ಲೆಗಳಿಂದ ಬಂದು ನೆರೆದರು. ಕಾರ್ಮಿಕ ಸಂಘಗಳಲ್ಲದೇ ಬೇರೆ ಬೇರೆ ಸಂಘ ಸಂಸ್ಥೆಗಳ ಮುಖ್ಯಸ್ಥರೂ ಬಂದು ಮಲ್ಯರಿಗೆ ತಮ್ಮ ಅಂತಿಮ ಗೌರವವನ್ನು ಸಲ್ಲಿಸಿದರು. ಮಲ್ಯರ ನಿಧನದ ವಾರ್ತೆಯನ್ನು ಮರುದಿನ ಜಿಲ್ಲೆಯ ಹೆಸರಾಂತ ‘ನವಭಾರತ’ ಪತ್ರಿಕೆಯಿಂದ ತಿಳಿದ ಜನಸಾಮಾನ್ಯರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರುಗಳಲ್ಲಿ, ಬಸ್ಸುಗಳಲ್ಲಿ ಬಂದು ತಲುಪಿದರು.

ಅಂತಹ ಜನಸಾಗರದ ಮಧ್ಯದಿಂದ ‘ಶ್ರೀನಿವಾಸ ಮಲ್ಯ ಅಮರ ರಹೇ’ ಎಂಬ ಘೋಷ ಅನುರಣವಾಗುತ್ತಲೇ ಇತ್ತು. ಮಧ್ಯಾಹ್ನ 3.00 ಗಂಟೆಗೆ ಶೃಂಗರಿಸಿದ ತೆರೆದ ವಾಹನದಲ್ಲಿ ಮಲ್ಯರ ಮೃತದೇಹವನ್ನು ಇಡಲಾಗಿತ್ತು ಮತ್ತು ಅನ್ನು ಮಲ್ಯರ ಮನೆಯಿಂದ ಅಂತಿಮ ಯಾತ್ರೆ ಹೊರಟಿತು. ಊರ್ವದಿಂದ ಲಾಲಬಾಗ, ಕಾರ್ನಾಡ ಸದಾಶಿವರಾವ ರಸ್ತೆ, ಲೈಟಹೌಸ್, ಮಾರ್ಕೆಟ್ ರಸ್ತೆ, ರಥಬೀದಿ, ನ್ಯೂಚಿತ್ರಾ, ಲೇಡಿಹಿಲ್, ಟಾಕೀಸ, ಅಳಕೆ ರಸ್ತೆಯಾಗಿ ಸುಮಾರು 6-7 ಮೈಲು ಸಾಗಿ ಬೋಳಾರ ಸ್ಮಶಾನಕ್ಕೆ ಮುಟ್ಟಿತ್ತು. ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಪತಿ ಶ್ರೀ ಬಂಟವಾಳ ವೈಕುಂಠ ಬಾಳಿಗಾರವರು ಮಾತಾಡಿದ ಬಳಿಕ ಮಂತ್ರಿಗಳು, ವಿವಿಧ ಪಕ್ಷಗಳ ನಾಯಕರು ತಮ್ಮ ತಮ್ಮ ಶ್ರದ್ಧಾಂಜಲಿಯನ್ನಿತ್ತು ಭಾಷಣ ಮಾಡಿದರು. ಶ್ರೀನಿವಾಸ ಮಲ್ಯರ ಅಣ್ಣನ ಮಗ ಪ್ರಭಾಕರ ಮಲ್ಯರು ಶವ ದಹನ ಸಂಸ್ಕಾರ ಗಳನ್ನು ವಿದ್ಯುಕ್ತವಾಗಿ (ಶ್ರೀನಿವಾಸ ಮಲ್ಯರಿಗೆ ಸ್ವಂತ ಮಕ್ಕಳು ಇಲ್ಲದ್ದರಿಂದ) ನೆರವೇರಿಸಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ‘ಶ್ರೀನಿವಾಸ ಮಲ್ಯ ಅಮರ ರಹೇ’ ಎಂಬ ಜನಸಾಗರದಿಂದ ಬಂದ ಘೋಷಣೆ ಮುಗಿಲು ಮುಟ್ಟಿತ್ತು. ಸ್ವಲ್ಪ ಸಮಯದಲ್ಲಿಯೇ ಆ ಮಹಾನ್ ವ್ಯಕ್ತಿಯ ದಿವ್ಯಾತ್ಮ ಪರಮಾತ್ಮನಲ್ಲಿ ಐಕ್ಯವಾಯಿತು. ದ.ಕ. ಜಿಲ್ಲೆಗೆ ಉನ್ನತ ಭಾರತದ ನಕಾಶೆಯಲ್ಲಿ ಸ್ಥಾನ ದೊರಕಿಸಿಕೊಡಲು ಕಾರಣರಾದ ಶ್ರೀನಿವಾಸ ಮಲ್ಯರ ಬಗ್ಗೆ ಸಹಸ್ರ ಸಹಸ್ರ ಜನರು ತಮ್ಮ ಚರಮಾಂಜಲಿಯನ್ನು ಅರ್ಪಿಸಿ ದುಃಖಾಶ್ರುಗಳಿಂದ ತೆರಳಿದರು.

ದಿ. ಉಳ್ಳಾಲ ಶ್ರೀನಿವಾಸ ಮಲ್ಯರ ರಾಜಕೀಯ ಅಥವಾ ಸಾಮಾಜಿಕ ಜೀವನ ಅತ್ಯಂತ ಪಾರದರ್ಶಕವಾಗಿತ್ತು. ಅವರ ಹಾಗೆಯೇ ಅಥವಾ ಅವರು ಹಾಕಿಕೊಟ್ಟ ಹಾದಿ ಯಲ್ಲಿ ಮುಂದಿನ ರಾಜಕಾರಣಿಗಳು ಕೆಲಸಗಳನ್ನು ಕೈಗೊಂಡಿದ್ದರೆ ಪ್ರಾಯಶಃ ಮಹಾತ್ಮಾ ಗಾಂಧೀಜಿಯವರ ಕನಸಿನ ರಾಮರಾಜ್ಯ ಇವತ್ತು ಕಣ್ಣಿಗೆ ಕಾಣಿಸುತ್ತಲಿತ್ತು. ಅಂತಹ ಧೀಮಂತ ರಾಜಕಾರಣಿ, ದೂರದೃಷ್ಟಿಯ ನಾಯಕ, ದ.ಕ. ಜಿಲ್ಲೆಯ ಅಭಿವೃದ್ಧಿಯ ಶಿಲ್ಪಿ ಉಳ್ಳಾಲ ಶ್ರೀನಿವಾಸ ಮಲ್ಯರ ಜೀವನದ ಕೆಲವು ಚಿತ್ರಣಗಳನ್ನು ಇಲ್ಲಿ ಕೊಡಲಾಗಿದೆ.

ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಜೀವಂತವಾಗಿದ್ದಾಗಲೇ ಒಂದು ದಂತಕತೆಯಾದವರು. ಪರಲೋಕಕ್ಕೆ ಸಂದಾಗ, ಒಬ್ಬ ಆದರ್ಶ ರಾಜಕಾರಣಿ ಹೇಗಿರಬೇಕು? ಅವರ ತತ್ವಾದರ್ಶಗಳು ಏನು? ತನ್ನ ಸ್ಥಾನಮಾನಗಳ ಅವಧಿಯಲ್ಲಿ ತನ್ನ ನಾಡಿನ, ಜನರ ಸ್ಥಿತಿಗತಿಗಳ ಏಳ್ಗೆಗೆ ಮಾಡಬೇಕಾದ ಕಾರ್ಯ ಯೋಜನೆಗಳೇನು? ಅವನ್ನು ಕಾರ್ಯರೂಪಕ್ಕೆ ಇಳಿಸಬೇಕಾದಾಗ ಇರಬೇಕಾದ ಛಲ, ಸಾಧಿಸಲು ಹುಡುಕಬೇಕಾದ ದಾರಿಗಳು ಇವೆಲ್ಲವು ಗಳಿಗಾಗಿ ಬೇಕಾದ ದೂರದೃಷ್ಟಿ (VISION) ಏನು, ಎಂಥವು? ಇವೆಲ್ಲವುಗಳಿಗೆ  ತಾನೇ ಮಾದರಿಯಾದವರು ದಿ. ಮಲ್ಯರು. ಅಂದಿನ, ಇಂದಿನ, ಮುಂದಿನ ರಾಜಕಾರಣಿಗಳಿಗೆ, ಅಧಿಕಾರ ಸ್ಥಾನ ಅಪೇಕ್ಷಿಗಳಿಗೆ, ಅಧಿಕಾರಸ್ಥರಿಗೆ ಅದಕ್ಕಾಗಿ ಹಂಬಲಿಸುವವರಿಗೆ ಮಲ್ಯರ ತ್ಯಾಗ, ಹೋರಾಟ, ಸರಳ ಜೀವನ ಒಂದು ದಿಕ್ಸೂಚಿ. ಸಮೃದ್ಧವಾದ ಜಿಲ್ಲೆಯನ್ನು, ನಾಡನ್ನು ಕಟ್ಟಿ ಬೆಳೆಸಿ ದೇಶದ ನಕ್ಷೆಯಲ್ಲಿ ಅದನ್ನು ಮೂಡಿಸಿ, ಬಳಿಕ ಜೀವನ ನಕ್ಷೆಯಿಂದ ನಿರ್ಗಮಿಸಿದ ಶ್ರೀನಿವಾಸ ಮಲ್ಯರು ಸಾರ್ಥಕತೆಗೆ ಇನ್ನೊಂದು ದೊಡ್ಡ ಹೆಸರು; ಒಂದು ದಿವ್ಯ ಆದರ್ಶ.

 

* * *

ಅನುಬಂಧ

ಯು.ಎಸ್. ಮಲ್ಯರ ನೆನಪು

* ವಿಜು ಪೂಣಚ್ಚ

ಮೊನ್ನೆ ಮಂಗಳೂರಿಗೆ ಸಮೀಪದ ಪೆರ್ಮುದೆ ಬಳಿ ಎಂ.ಆರ್.ಪಿ.ಎಲ್. ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಒ.ಎನ್.ಜಿ.ಸಿ. ಘಟಕಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಗೊಂದಲ ಬಲು ದೊಡ್ಡ ಸುದ್ದಿ ಯಾಗಿದೆ. ಅಂದು ಮುಂಜಾನೆಯಿಂದಲೇ ವಿಪರೀತ ಮಳೆ. ಶಂಕುಸ್ಥಾಪನೆ ನೆರವೇರಿಸಬೇಕಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ದೆಹಲಿಯಿಂದ ಕರೆತಂದ ವಾಯುಪಡೆಯ ವಿಮಾನವು ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಹರಸಾಹಸ ನಡೆಸಿ, ಪ್ರತಿಕೂಲ ಹವಾಮಾನ ದಿಂದಾಗಿ ಹಿಂತೆರಳಿತು. ಮುಂಬೈನಿಂದ ಬಂದ ವಿಮಾನ ಕೂಡಾ ಹೀಗೆಯೇ ವಾಪಸಾಯಿತು. ಇದರಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವರಾ ಇದ್ದರು. ಅದೇ ಹೊತ್ತಲ್ಲಿ ಬೆಳಿಗ್ಗೆಯಿಂದಲೇ ಪೆರ್ಮುದೆ ಬಳಿ ಈ ಉದ್ಘಾಟನಾ ಸಮಾರಂಭಕ್ಕೆ ವೈಭವೋಪೇತ ಸಿದ್ಧತೆ ನಡೆದಿತ್ತು.

ಸಂಸತ್ ಸದಸ್ಯ ಡಿ.ವಿ. ಸದಾನಂದ ಗೌಡರು ಅದೇ ಸಂದರ್ಭ ದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಈ ಸಮಾರಂಭಕ್ಕೆ ಏನಿಲ್ಲ ವೆಂದರೂ ಐದು ಕೋಟಿ ರೂಪಾಯಿ ವೆಚ್ಚವಾಗಿರಬಹುದು ಎಂದರು. ತಮ್ಮ ಪಕ್ಷದ ಸಂಸತ್ ಸದಸ್ಯರ ನಿಯೋಗದೊಂದಿಗೆ ತಾವು ಹಿಂದೆ ಪ್ರಧಾನಿ ಯವರನ್ನು ಭೇಟಿಯಾಗಿ ಈ ಯೋಜನೆ ಮಂಗಳೂರಿಗೇ ಬರಬೇಕೆಂದು ಒತ್ತಾಯಿಸಿರುವುದು ಕೂಡಾ ಈ ಯೋಜನೆ ಇಲ್ಲಿಗೆ ಬರಲು ಕಾರಣವಾಯಿತು ಎನ್ನಲು ಅವರು ಮರೆಯಲಿಲ್ಲ. ಈ ಕುರಿತು ನಂತರ ದಕ್ಷಿಣ ಕನ್ನಡ ಕಾಂಗ್ರೆಸ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಬ್ಲೇಸಿಯಸ್ ಡಿಸೋಜ ಅವರೊಡನೆ ಮಾತನಾಡಿದಾಗ ‘ಇದು ಸೋನಿಯಾ ಗಾಂಧಿಯವರ ಆಸಕ್ತಿಯಿಂದಾಗಿ ಇಲ್ಲಿಗೆ ಬಂದಿದೆ’ ಎಂದರು! ‘ನಾನು ಕೂಡಾ ದೆಹಲಿಗೆ ಹೋಗಿದ್ದಾಗ ಜಿಲ್ಲೆಯ ಪರವಾಗಿ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದೇನೆ’ ಎಂದೂ ಬ್ಲೇಸಿಯಸ್ ನುಡಿದರು.

ಹೀಗೆ, ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಸೇರಿದಂತೆ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕಾರಣಿಗಳಲ್ಲಿ ಹಲವರು ಒ.ಎನ್.ಜಿ.ಸಿ.ಯ ಮುಖ್ಯ ಘಟಕವನ್ನು ಇಲ್ಲಿಗೆ ತರುವಲ್ಲಿ ಅವರವರ ಪಾತ್ರಗಳನ್ನು ಹೇಳಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಅಥವಾ ಇಂತಹ ರಾಜಕಾರಣಿಗಳ ಅನುಯಾಯಿಗಳು ಇಂಥವರ ಹೆಸರುಗಳನ್ನು ತೇಲಿಬಿಡುವುದು ಈಚೆಗಿನ ದಿನಗಳಲ್ಲಿ ಸಹಜ ಎನಿಸಿಬಿಟ್ಟಿದೆ.

ಮೂರು ವಾರಗಳ ಹಿಂದೆ ಕೇಂದ್ರ ಕ್ರೀಡಾ ಇಲಾಖೆಯ ವತಿಯಿಂದ ಮಂಗಳೂರಿಗೆ ಭಾರತ ಕ್ರೀಡಾ ಪ್ರಾಧಿಕಾರದ ‘ಕ್ರೀಡಾ ಕೇಂದ್ರ’ವು ಮಂಜೂರಾಯಿತು. ಇದಕ್ಕೆ ಸಂಬಂಧಿಸಿದಂತೆ ಶ್ರಮಿಸಿದವರೆನ್ನಲಾದ ನಾಯಕರುಗಳ ‘ಫೋಟೊ’ಗಳನ್ನು ಒಳಗೊಂಡ ಜಾಹೀರಾತು ಗಳು ಕೆಲವು ಪತ್ರಿಕೆಗಳಲ್ಲಿ ರಾರಾಜಿಸಿದವು!

ಈಚೆಗಿನ ದಿನಗಳಲ್ಲಿ ಇಂತಹ ಸಂಗತಿಗಳು ಸಹಜವೇನೋ ಎಂಬಂತೆ ಕಾಣತೊಡಗಿರುವುದೊಂದು ವಿಪರ್ಯಾಸ.

ಇಂತಹ ಅಬ್ಬರಗಳ ನಡುವೆ ಇವತ್ತಿಗೂ ಕನ್ನಡ ಕರಾವಳಿಯ ಸೂಕ್ಷ್ಮಪ್ರಜ್ಞೆಯ ಸಂಕೇತ ಎಂಬಂತೆ ಉಳ್ಳಾಲ ಶ್ರೀನಿವಾಸ ಮಲ್ಯ ಬಹಳಷ್ಟು ನೆನಪಾಗುತ್ತಾರೆ. ಪ್ರಸಕ್ತ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿ ಚಿಂತನೆಯ ಮಟ್ಟಿಗೆ ಯು.ಎಸ್. ಮಲ್ಯರು ಪ್ರಾತಃಸ್ಮರಣೀಯರು.

ಸದ್ದುಗದ್ದಲ ಇಲ್ಲದೆ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ.

ಅಸಾಧ್ಯ ಬುದ್ಧಿವಂತಿಕೆ, ವ್ಯವಹಾರ ಕುಶಲತೆ ಹೊಂದಿರುವ ನಮ್ಮ ಕರಾವಳಿಯ ಕೊಂಕಣ ಸಾರಸತ್ವರು ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಈ ನೆಲದ ವಿಭಿನ್ನ ರಂಗಗಳಿಗೆ ಅಸಂಖ್ಯ ಮಹನೀಯರನ್ನು ನೀಡಿದೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಸಾಮಾಜಿಕ ಪರಿವರ್ತನೆಯ ಹರಿಕಾರ ಕುದ್ಮುಲ್ ರಂಗರಾಯರು, ಬ್ಯಾಂಕಿಂಗ್ ಆಂದೋಲನದ ರೂವಾರಿಗಳಲ್ಲೊಬ್ಬರಾದ ಅಮ್ಮೆಂಬಳ ಸುಬ್ಬರಾಯರು, ರಾಷ್ಟ್ರಕವಿ ಎನಿಸಿದ ಗೋವಿಂದ ಪೈಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉಳ್ಳಾಲ ಶ್ರೀನಿವಾಸ ಮಲ್ಯ ಕೂಡಾ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದವರೇ.

ದಶಕಗಳ ಹಿಂದಿನ ಮಾತು. ಆಗ ಶ್ರೀನಿವಾಸ ಮಲ್ಯರಿಗೆ ಹದಿನೆಂಟರ ಹರೆಯ. ಎಲ್ಲೆಡೆ ಭುಗಿಲೆದ್ದಿದ್ದ ಸ್ವಾತಂತ್ರ್ಯ ಚಳವಳಿಗೆ 1918ರಲ್ಲಿ ಇವರೂ ಧುಮುಕಿದರು. ಕಾಲೇಜು ಶಿಕ್ಷಣವನ್ನು ಕೈಬಿಟ್ಟರು. ಆ ನಂತರ ನಿರಂತರವಾಗಿ ಒಂದಲ್ಲ ಒಂದು ಸಾರ್ವಜನಿಕ ಚಟುವಟಿಕೆಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡ ಮಲ್ಯರು 1930ರ ದಂಡಿಯ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀಜಿಯವರೊಂದಿಗೆ ಹೆಜ್ಜೆ ಇಟ್ಟರೆ, 1942ರ ಕ್ವಿಟ್ ಇಂಡಿಯ ಚಳುವಳಿಯಲ್ಲಿ ಪೊಲೀಸರಿಂದ ಹಿಂಸೆಗೆ ಒಳಗಾದರು. ಸ್ವಾತಂತ್ರ್ಯಾ ನಂತರ ಮಲ್ಯರು 1952, 1957 ಮತ್ತು 1962ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಗೆದ್ದು ಸತತ ಮೂರು ಅವಧಿಗೆ ಉಡುಪಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಜನನಾಯಕ ಎನಿಸಿದರು.

ನೆಹರು ಸೇರಿದಂತೆ ಆಗಿನ ಹಲವು ಕಾಂಗ್ರೆಸ್ ಮುಖಂಡರ ನಿಕಟವರ್ತಿಗಳಾಗಿದ್ದ ಮಲ್ಯರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳೂ ಆಗಿದ್ದರು. ತಮಗೆ ಕೇಂದ್ರ ಸಚಿವರಾಗಲು ಬಂದ ಆಹ್ವಾನಗಳನ್ನೆಲ್ಲಾ ನಯವಾಗಿಯೇ ತಿರಸ್ಕರಿಸಿದ ಮಲ್ಯರು, ಲೋಕಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿದ್ದುಕೊಂಡೇ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸಿದರು.

ಉಳ್ಳಾಲ ಶ್ರೀನಿವಾಸ ಮಲ್ಯರ ಪ್ರಯತ್ನದಿಂದಾಗಿಯೇ ಬಜ್ಪೆ ವಿಮಾನ ನಿಲ್ದಾಣವು ಐವತ್ತರ ದಶಕದ ಆರಂಭದ ವರ್ಷದಲ್ಲಿಯೇ ರೂಪುಗೊಂಡಿತು. ನವಮಂಗಳೂರು ಬಂದರು, ಸುರತ್ಕಲ್ನ ಈಗಿನ ಎನ್.ಐ.ಟಿ.ಕೆ., ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್, ಪಣಂಬೂರಿನ ಎಂ.ಸಿ.ಎಫ್. ಕಾರ್ಖಾನೆ, ಕದ್ರಿಯಲ್ಲಿರುವ ಸರ್ಕೀಟ್ ಹೌಸ್, ಮಂಗಳೂರು ಆಕಾಶವಾಣಿ ಕೇಂದ್ರ ಮುಂತಾದವುಗಳೆಲ್ಲಾ ಮಲ್ಯರ ಕನಸುಗಳು ನನಸಾದ ಕತೆಗಳೇ ಆಗಿವೆ.

ಕೇವಲ ಅರ್ಧ ಶತಮಾನದ ಹಿಂದೆ ಮಂಗಳೂರಿನಿಂದ ಕುಂದಾಪುರಕ್ಕೆ ಹೋಗಲು ಒಂಭತ್ತು ಗಂಟೆಗಳಷ್ಟು ಕಾಲ ವ್ಯಯವಾಗುತ್ತಿತ್ತು. ಆದರೆ ಈ ಹಾದಿಯ ಉದ್ದಕ್ಕೂ ಮಿಂಚಿನ ವೇಗದಲ್ಲಿ ಸೇತುವೆಗಳು ನಿರ್ಮಾಣಗೊಂಡು ಇವತ್ತು ಒಂದೂವರೆ ತಾಸಿನಲ್ಲಿ ಆ ಊರು ತಲುಪಲು ಸಾಧ್ಯವಾಗುತ್ತಿರುವುದು ಯು.ಎಸ್. ಮಲ್ಯರ ದೂರದೃಷ್ಟಿತ್ವ ಮತ್ತು ಕಾರ್ಯಕ್ಷಮತೆಯ ದ್ಯೋತಕವಾಗಿದೆ. ಇದೇ ರೀತಿ ಹಾಸನ-ಮಂಗಳೂರು ರೈಲು ಸಂಚಾರಕ್ಕೆ ಅಡಿಗಲ್ಲು ಯು.ಎಸ್. ಮಲ್ಯರ ಪರಿಕಲ್ಪನೆಯಾಗಿದೆ. ಅವಿಭಜಿತ ದಕ್ಷಿಣ ಕನ್ನಡದ ನೂರಾರು ಕಡೆ ವಿದ್ಯುಚ್ಛಕ್ತಿ ಸಂಪರ್ಕ ಬರುವಂತೆ ಮಾಡಿದ್ದು ಮಲ್ಯರು. ಉಳ್ಳಾಲದ ಬಳಿಯ ನೇತ್ರಾವತಿ ನದಿ ಮೇಲಣ ಸೇತುವೆ ನಿರ್ಮಾಣ ಕೂಡಾ ಅವರ ಕಲ್ಪನೆಯ ಕೂಸು. ಮಾಣಿ-ಉಳ್ಳಾಲ ರಸ್ತೆಯೂ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ನೂರಾರು ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರಣಕರ್ತರು ಯು.ಎಸ್. ಮಲ್ಯರು. ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಧುನಿಕ ಆಯಾಮ ನೀಡಿದರು.

ಬಿ.ಎಂ. ಇದಿನಬ್ಬ, ಅಮ್ಮೆಂಬಳ ಬಾಳಪ್ಪ ಸೇರಿದಂತೆ ಹಳೆಯ ತಲೆಮಾರಿನ ರಾಜಕಾರಣಿಗಳೊಡನೆ ಮಾತಿಗಿಳಿದರೆ ಅಂಥವರು ಶ್ರೀನಿವಾಸ ಮಲ್ಯರ ಸರಳತೆ, ಸಜ್ಜನಿಕೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಯ ಬಗ್ಗೆ ಇದ್ದ ಅನನ್ಯ ಪ್ರೀತಿಯ ಬಗ್ಗೆ ಗಂಟೆಗಟ್ಟಲೆ ಮನತುಂಬಿ ಮಾತನಾಡುತ್ತಾರೆ.

ಒಂದು ಪುಟ್ಟ ಕೈಚೀಲ ಹಿಡಿದುಕೊಂಡು ಏಕಾಂಗಿಯಾಗಿ ಮಲ್ಯರು ಮನೆಯಿಂದ ಹೊರಟರೆಂದರೆ ಜಿಲ್ಲೆಗೆ ಏನೋ ಹೊಸ ಯೋಜನೆ ಬರಲಿದೆ ಎಂದೇ ಅರ್ಥ. ಯಾವುದೇ ಹಳ್ಳಿಗೊಂದು ರಸ್ತೆ ಬೇಕೆಂದರೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ದುಂಬಾಲು ಬಿದ್ದು ಮಂಜೂರು ಮಾಡಿಸಿಕೊಂಡು, ಅದಕ್ಕೆ ಸಂಬಂಧಿಸಿದ ಹಣಕಾಸು ಸಮಿತಿಯ ಕಚೇರಿಗೆ ಕೂಡಾ ನಿತ್ಯವೂ ಅಲೆದು ಹಣವನ್ನೂ ಬಿಡುಗಡೆ ಮಾಡಿಸಿಕೊಂಡು, ನಂತರ ಜಿಲ್ಲೆಯಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮರ್ಪಕ ಸೂಚನೆಗಳನ್ನು ನೀಡುತ್ತಾ ಕೆಲಸವು ಮಿಂಚಿನ ವೇಗದಲ್ಲಿ ನಡೆಯುವಂತೆ ಅವರು ನೋಡಿಕೊಳ್ಳುತ್ತಿದ್ದರು. ತಾವು ಮಂಗಳೂರಿಗೆ ಬಂದಾಗಲೆಲ್ಲಾ ಅಂತಹ ಕಾಮಗಾರಿಗಳು ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯ, ಅವುಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದರು.

ಆ ದಿನಗಳಲ್ಲಿ ಖಾದಿಧಾರಿ ಮಲ್ಯರು ತಮ್ಮ ಹಿಂದೆ ತಮ್ಮ ಜಾತಿಯ ಪಟಾಲಂ ಅನ್ನು ಇರಗೊಡುತ್ತಿರಲಿಲ್ಲ. ಅವರು ಮನೆಯಿಂದ ಹೊರಬೀಳುತ್ತಿದ್ದಂತೆಯೇ ಅಥವಾ ಸಾರ್ವಜನಿಕ ಸ್ಥಳಗಳಿಗೆ ಹೋಗುತ್ತಿದ್ದಂತೆಯೇ ಚಂಡೆ, ಕೊಂಬು ಕಹಳೆಗಳ ಅಬ್ಬರ ಬೇಕಿರಲಿಲ್ಲ. ಕಲ್ಲಡ್ಕ ಬೊಂಬೆಗಳೂ ಇರಬೇಕಿರಲಿಲ್ಲ. ತಳಿರು ತೋರಣಗಳನ್ನೂ ಇಷ್ಟ ಪಡುತ್ತಿರಲಿಲ್ಲ. ಪತ್ರಿಕಾಗೋಷ್ಠಿಗಳನ್ನು ಅವರು ಕರೆಯುತ್ತಿರಲೇ ಇಲ್ಲ. ತಮ್ಮ ಸಾಧನೆಗಳ ಬಗ್ಗೆ ಎಂದೂ ಅವರು ಪತ್ರಿಕಾ ಪ್ರಕಟಣೆಗಳನ್ನು ನೀಡಿರಲಿಲ್ಲ. ಅವರು ಅಭಿವೃದ್ದಿ ಚಟುವಟಿಕೆಗಳನ್ನೇ ತಪಸ್ಸು ಎಂದುಕೊಂಡಿದ್ದ ಮಹಾಯೋಗಿ. ಜತೆಗೆ ನವಮಂಗಳೂರು ಬಂದರು, ನೇತ್ರಾವತಿ ಸೇತುವೆಗಳಂತಹ ನಿರ್ಮಾಣಗಳನ್ನೇ ದೇವಸ್ಥಾನಗಳೆಂಬ ತನ್ಮಯತೆಯಿಂದ ಆರಾಧಿಸಿದವರು.

ಯು.ಎಸ್. ಮಲ್ಯರು ಎಂದಿಗೂ ಗುತ್ತಿಗೆದಾರರೊಡನೆ ಕಮಿಷನ್ ದಂಧೆ ನಡೆಸಲಿಲ್ಲ. ಜಾತ್ಯಸ್ಥ ಅಧಿಕಾರಿಗಳನ್ನು ಬೆನ್ನಿಗೆ ಇಟ್ಟುಕೊಂಡು ಕುಣಿಯಲಿಲ್ಲ. ದಕ್ಷ ಅಧಿಕಾರಿಗಳನ್ನು ಎಲ್ಲೆಲ್ಲಿಂದಲೋ ಇಲ್ಲಿಗೆ ವರ್ಗಾಯಿಸಿಕೊಂಡು ಉತ್ತಮವಾದುದನ್ನೇ ಸಾಧಿಸಿದರು. ಇದಲ್ಲದೆ ಸುಮಾರು ಮೂರು ದಶಕಗಳ ಕಾಲ ಕೆನರಾ ಬ್ಯಾಂಕಿನ ನಿರ್ದೇಶರಾಗಿದ್ದು ಕೊಂಡು ಆ ಬ್ಯಾಂಕಿನ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ತಮಗೆ ಆ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಅಪಾರ ಪ್ರಭಾವ, ಅಧಿಕಾರಸ್ಥರೊಂದಿಗಿನ ನಿಕಟ ಸಂಬಂಧಗಳನ್ನು ಅವರು ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಬಳಸಿಕೊಳ್ಳಲಿಲ್ಲ. ಈ ಎಲ್ಲಾ ಸಂಬಂಧ, ಪ್ರಭಾವಗಳನ್ನು ಬಳಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಮುಖ್ಯ ಕಾರಣರಾದವರು ಈ ವ್ಯವಹಾರಶೀಲ ಮುತ್ಸದ್ದಿ ಮಲ್ಯರು ಎಂದರೆ ಅತಿಶಯೋಕ್ತಿಯಂತು ಅಲ್ಲ.

ಮೂರು ಸಲ ಲೋಕಸಭಾ ಸದಸ್ಯರಾಗಿದ್ದ ಮಲ್ಯರು ಎಂದೂ ಕೂಡ ಸಂಸತ್ತಿನಲ್ಲಿ ಮಾತನಾಡಿರಲೇ ಇಲ್ಲ. ಚುನಾವಣಾ ಪ್ರಚಾರದ ಕಾಲದಲ್ಲಿಯೂ ಭಾಷಣ ಮಾಡಿದ್ದೇ ಅಪರೂಪ. ಸಾರ್ವಜನಿಕ ಸಭೆಗಳೆಂದರೆ ಬಲು ದೂರ ಇರುತ್ತಿದ್ದ ಇವರು ಆ ಕಾಲದಲ್ಲಿ ಅದೆಷ್ಟು ಪ್ರಭಾವಿಯಾಗಿದ್ದರೆಂದರೆ ತಮ್ಮ ಗೆಳೆಯ ಬಿ.ಡಿ. ಜತ್ತಿಯವರನ್ನು ಮುಖ್ಯಮಂತ್ರಿ ಯಾಗಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು.

ಶ್ರೀನಿವಾಸ ಮಲ್ಯರು 1965ರ ಡಿಸೆಂಬರ್ 19ರಂದು ಹೃದಯಾಘಾತಕ್ಕೆ ಒಳಗಾಗಿ ದೆಹಲಿಯಲ್ಲಿಯೇ ನಿಧನರಾದಾಗ, ಕಂಬನಿಗರೆದ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ತಮ್ಮ ಅಧಿಕೃತ ವಿಮಾನದಲ್ಲಿಯೇ ಮಲ್ಯರ ಮೃತದೇಹವನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಆಗ ಕೂಡಾ ತಾಂತ್ರಿಕ ಕಾರಣಗಳಿಂದಾಗಿ ಹಲವು ನಿಮಿಷಗಳ ಕಾಲ ಆಗಸದಲ್ಲಿಯೇ ಹಾರಾಟ ನಡೆಸಿದ ವಿಮಾನವು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕೆಳಗಿಳಿದಿತ್ತು. ಬಹುಶಃ ಅಂದು ಮಂಗಳೂರಿನ ಚರಿತ್ರೆಯಲ್ಲಿಯೇ ಕಂಡು ಕೇಳರಿಯದಷ್ಟು ಜನಸಾಗರ ಮಲ್ಯರ ಅಂತ್ಯಸಂಸ್ಕಾರದ ವೇಳೆಗೆ ಕಿಕ್ಕಿರಿದಿತ್ತು ಎಂದು ಇವತ್ತಿಗೂ ಹಳೆ ತಲೆಮಾರಿನ ಮಂದಿ ನೆನಪಿಸಿಕೊಳ್ಳುತ್ತಾರೆ.

ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ನಳಂದ ಶಾಲೆಯಲ್ಲಿ ಉಳ್ಳಾಲ ಶ್ರೀನಿವಾಸ ಮಲ್ಯರ ಜನ್ಮಶತಾಬ್ದ ಸಂಬಂಧಿ ಸಭೆಯೊಂದು ನಡೆದಿತ್ತು. ಆ ಸಭೆಯಲ್ಲಿ ಹೆಸರಾಂತ ಬ್ಯಾಂಕಿಂಗ್ ತಜ್ಞ, ವಯೋವೃದ್ಧ ಕೆ.ಕೆ. ಪೈಯವರು ಯು.ಎಸ್. ಮಲ್ಯರ ಕುರಿತು ಅರ್ಧ ಶತಮಾನದ ಹಿಂದಿನ ಕೆಲವು ಘಟನೆಗಳನ್ನು ಹಂಚಿಕೊಂಡ ನೆನಪು…

ಮುಂಬೈನಲ್ಲಿ ದಕ್ಷಿಣ ಕನ್ನಡದವರ ಹೋಟೆಲ್ ಒಂದಕ್ಕೆ ನಿತ್ಯವೂ ಕೆ.ಕೆ. ಪೈಯವರು ಊಟಕ್ಕೆಂದು ಹೋಗುತ್ತಿದ್ದರಂತೆ. ಅವರ ಎದುರಿನ ಮೇಜಲ್ಲಿ ಸಾಮಾನ್ಯ ಉಡುಪು ಧರಿಸಿದ್ದವರೊಬ್ಬರು ಬಂದು ಊಟ ಮಾಡಿ ಎದ್ದು ಹೋಗುತ್ತಿದ್ದರಂತೆ. ಮಾತಿಲ್ಲ, ಕತೆ ಇಲ್ಲ. ಅತ್ತ ಇತ್ತ ದೃಷ್ಟಿ ಹರಿಸುತ್ತಿದ್ದುದು ಕಡಿಮೆಯಂತೆ. ಹೀಗೆಯೇ ಒಂದು ದಿನ ಕೆ.ಕೆ. ಪೈಯವರು ಆ ಹೋಟೆಲ್ಗೆ ಹೋದಾಗ ಹೊರಗಡೆ ಸುತ್ತಮುತ್ತ ಪೋಲಿಸರ ಟೊಪ್ಪಿಗೆಗಳು ಕಾಣಿಸುತ್ತಿದ್ದವಂತೆ. ಅದಕ್ಕೆ ಪೈಯವರು ಆ ಹೋಟೆಲ್ ಮಾಲೀಕರನ್ನು  ‘ಇದೇನಿದು ಪೊಲೀಸರು’ ಎಂದು ಪ್ರಶ್ನಿಸಿದರಂತೆ. ‘ನಿಮಗೆ ಗೊತ್ತಿಲ್ಲವ. ಆ ಶ್ರೀನಿವಾಸ ಮಲ್ಯರನ್ನು ಹುಡುಕಿಕೊಂಡು ಬಂದಿದ್ದಾರೆ’ ಎಂದರಂತೆ. ಆಗ ‘ಅವರು ಇಲ್ಲಿಗೆ ಬಂದಿದ್ದರೇ’ ಎಂದು ಪೈಯವರು ಪ್ರಶ್ನಿಸಿದಾಗ, ‘ನಿಮ್ಮ ಎದುರಿನ ಮೇಜಲ್ಲಿಯೇ ಕುಳಿತು ಊಟ ಮಾಡುತ್ತಿದ್ದರಲ್ಲಾ ಅವರೇ’ ಎಂದಿದ್ದರಂತೆ. ಆಗ ಆ ಸರಳ, ನಿರ್ಲಿಪ್ತನಂತಿದ್ದ ವ್ಯಕ್ತಿ ಶ್ರೀನಿವಾಸ ಮಲ್ಯರೆಂದು ಗೊತ್ತಾದಾಗ ಕೆ.ಕೆ. ಪೈಯವರಿಗೆ ದಿಗ್ಭ್ರಮೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಉತ್ತಮ ಒಡನಾಟ ಅರಳಿತ್ತು.

ಶ್ರೀನಿವಾಸ ಮಲ್ಯರ ಬಗ್ಗೆ ಇಂತಹ ನೂರಾರು ಕತೆಗಳು ಜನರ ಬಾಯಿಂದ ಬಾಯಿಗೆ ಜನಪದದಂತೆ ವ್ಯಾಪಿಸಿಕೊಂಡಿವೆ.

ಶ್ರೀನಿವಾಸ ಮಲ್ಯರು ತಮ್ಮ ಜೀವಿತಾವಧಿಯಲ್ಲಿ ತಮಗಾಗಿ, ತಮ್ಮ ಬಂಧುಗಳಿಗಾಗಿ ಯಾವುದೇ ಆಸ್ತಿ ಮಾಡಿಡಲಿಲ್ಲ. ಅವರ ಸಾವಿನ ನಂತರ ಬಡತನದ ಬಾಳ್ವೆ ನಡೆಸಿದ ಅವರ ಪತ್ನಿ ಇಂದಿರಮ್ಮ ಅವರು ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ಶ್ರೀನಿವಾಸ ಮಲ್ಯರ ಜನ್ಮಶತಾಬ್ದಿಯ ವರ್ಷವಾಗಿದ್ದ 2002ರಲ್ಲಿ ಮಂಗಳೂರಿನ ವಿವಿಧ ಕಡೆ ಹಲವು ಹತ್ತು ಕಾರ್ಯಕ್ರಮಗಳು ನಡೆದಿದ್ದವು. ಅವರ ಸರಳತೆ, ಪ್ರಾಮಾಣಿಕತೆ, ದಕ್ಷತೆಯ ಬಗ್ಗೆ ಬಹಳಷ್ಟು ಜನ ಬಹಳಷ್ಟು ವಿಚಾರಗಳನ್ನು ಮಾತಾಡಿದ್ದು ಇವತ್ತು ನೆನಪಾಗಿ ಉಳಿದಿವೆ.

ಎಂದೂ ಭಾಷಣ ಮಾಡದ ಮಲ್ಯರು ಎಲ್ಲವನ್ನೂ ಕೃತಿಯ ಮೂಲಕ ಸಾಧಿಸಿ ತೋರಿಸಿದರು. ಇವತ್ತು ನಮ್ಮ ರಾಜಕಾರಣಿಗಳಿಗೆ ಮಾತೇ ಬಂಡವಾಳವಾಗಿರುವುದೊಂದು ವಿಪರ್ಯಾಸ.

ಇವತ್ತು ನಮ್ಮ ಕರಾವಳಿಯ ರಾಜಕಾರಣಿಗಳಲ್ಲಿ ಬಹುಮುಖ್ಯ ಎನಿಸಿರುವ ವೀರಪ್ಪ ಮೊಯಿಲಿಯವರ ಸಾಧನೆಯ ಕುರಿತು ಆಂಗ್ಲ ಭಾಷೆಯಲ್ಲಿ ಅವರೇ ಪ್ರಕಾಶಿಸಿರುವ ಮುನ್ನೂರು ಪುಟಗಳ ಪುಸ್ತಕ ನಮ್ಮಲ್ಲಿದೆ. ಜನಾರ್ದನ ಪೂಜಾರಿಯವರು ಗೋಕರ್ಣ ನಾಥೇಶ್ವರ ದೇಗುಲದ ಒಳಗೆ ನಾರಾಯಣಗುರುಗಳ ಪಕ್ಕದಲ್ಲಿ ಸ್ವತಃ ತಾವೇ ನಿಂತು ಆ ದೇಗುಲದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಯಾರಿಸಲಾದ ಸಿ.ಡಿ. ಕೂಡಾ ಈಗಾಗಲೇ ಬಿಡುಗಡೆಯಾಗಿದೆ. ಆಸ್ಕರ್ ಫರ್ನಾಂಡಿಸ್ ಅವರು ಕೃಷ್ಣಮಠದಲ್ಲಿ ನೃತ್ಯ ಮಾಡಿರುವ ಆಕರ್ಷಕ ಭಂಗಿಯ ಭಾವಚಿತ್ರಗಳು ಕೂಡಾ ಈಗ ಲಭ್ಯವಿದೆ. ಈ ಎಲ್ಲಾ ರಾಜಕಾರಣಿಗಳು ಈ ನಾಡಿನ ಜನಮಾನಸದಲ್ಲಿ ತಮ್ಮದೇ ಆದ ಸಾಧನೆಗಳಿಂದ ಸ್ಥಾನ ಪಡೆದಿದ್ದಾರೆ.

ಆದರೆ ಜಾತಿ, ಮತಗಳೆಲ್ಲವನ್ನೂ ಮೀರಿ ನಿಂತು ನಿರಂತರವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಿಸ್ವಾರ್ಥದಿಂದ ಚಿಂತಿಸಿ ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸಿದ ಆಧುನಿಕ ದಕ್ಷಿಣ ಕನ್ನಡದ ನಿರ್ಮಾತೃ ಎಂದೇ ಕರೆಯಲಾಗುವ ಯು.ಎಸ್. ಮಲ್ಯರ ಪ್ರತಿಮೆಯನ್ನು ನವಮಂಗಳೂರು ಬಂದರಿನ ಎದುರು, ತೊಕ್ಕೋಟು ವೃತ್ತದಲ್ಲಿ ಇರಿಸಲಾಗಿದೆ. ಎನ್.ಐ.ಟಿ.ಕೆ.ಯ ಮಹಾದ್ವಾರಕ್ಕೆ ಇವರ ಹೆಸರಿಡಲಾಗಿದೆ. ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣ ಕೂಡಾ ಎದ್ದು ನಿಂತಿದೆ, ನಿಜ. ಆದರೆ ಭಾರತದ ರಾಜಕಾರಣದಲ್ಲಿ ತಮ್ಮದೇ ಆದ ‘ಲಾಲ್ ಬಹದ್ದೂರ್ ಶಾಸ್ತ್ರಿ ಪರಂಪರೆಯನ್ನು’ ಹೊಂದಿದ್ದ ಮಹೋನ್ನತ ಮುತ್ಸದ್ದಿ ಯು.ಎಸ್. ಮಲ್ಯರ ಹೆಸರನ್ನು ಬಜ್ಪೆಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಮೂಲಕ ಈ ಅಭಿವೃದ್ಧಿಯ ಹರಿಕಾರನನ್ನು ನಿತ್ಯವೂ ನಾವು ನೆನಪಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಈ ಪ್ರದೇಶದ ಜನನಾಯಕರು ಉತ್ಸುಕತೆ ವಹಿಸಬೇಕಷ್ಟೇ. ಮಲ್ಯರು ‘ನಾನು ಮಾಡಿದ್ದು’ ಎಂದು ಯಾವತ್ತೂ ಯಾವುದರ ಬಗ್ಗೆಯೂ ಏನನ್ನೂ ಹೇಳಲಿಲ್ಲ. ಆದರೆ ಇವತ್ತು ನಾವು ‘ಈ ಎಲ್ಲಾ ಕೊಡುಗೆ ನಿಮ್ಮದು’ ಎಂದು ಕೃತಜ್ಞತೆಯಿಂದ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ಬಜ್ಪೆಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು ಸೂಕ್ತ.

ಮೊನ್ನೆ ಇದೇ ಬಜ್ಪೆ ವಿಮಾನ ನಿಲ್ದಾಣದಿಂದ ಪೆರ್ಮುದೆಯ ಉದ್ದೇಶಿತ ಒ.ಎನ್.ಜಿ.ಸಿ. ಘಟಕವಿರುವ ಸ್ಥಳದವರೆಗೆ ಇಕ್ಕೆಲಗಳಲ್ಲಿಯೂ ಬೃಹತ್ ಗಾತ್ರದ ಫಲಕಗಳು ಕಂಡುಬಂದವು. ಬಹುತೇಕ ರಾಜಕಾರಣಿಗಳ ಮುಖಗಳು ಅವುಗಳಲ್ಲಿ ಹೊಳೆಯುತ್ತಿದ್ದವು. ಶಂಕುಸ್ಥಾಪನಾ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಉತ್ಕೃಷ್ಟ ಮಟ್ಟದ ವೇದಿಕೆ ಮತ್ತು ಸಭಾಂಗಣವನ್ನು ನಿರ್ಮಿಸಲಾಗಿತ್ತು. ಸುಖಾಸೀನಗಳನ್ನು ಹಾಕಲಾಗಿತ್ತು. ವೇದಿಕೆಯ ಕಾರ್ಯಕ್ರಮಗಳನ್ನು ಪ್ರಸರಿಸಲಿಕ್ಕಾಗಿಯೇ ವೇದಿಕೆಯಿಂದ 50 ಅಡಿ ದೂರದಲ್ಲಿ ಅತ್ಯಾಧುನಿಕವಾದ ಬೃಹತ್ ಪರದೆಯನ್ನು ನಿಲ್ಲಿಸಲಾಗಿತ್ತು. ಈ ಬೃಹತ್ ಪರದೆಗೆ ಒಂದು ದಿನದ ಬಾಡಿಗೆಯೇ ಹಲವು ಲಕ್ಷ ರೂಪಾಯಿಗಳು! ವೇದಿಕೆಗೆ ಅತಿ ಸಮೀಪದಲ್ಲಿಯೇ ಪಂಚತಾರಾ ಮಟ್ಟದ ಹವಾನಿಯಂತ್ರಿತ ಆಕರ್ಷಕವಾದ ತಾತ್ಕಾಲಿಕ ಊಟದ ‘ಮನೆ’ಯನ್ನು ಹಲವು ಲಕ್ಷಗಳನ್ನು ವ್ಯಯಿಸಿ ನಿರ್ಮಿಸಲಾಗಿತ್ತು. ಅತಿಥಿಗಳ ಸೇವೆಗಾಗಿ ನೂರಾರು ಹವಾನಿಯಂತ್ರಿತ ಬಾಡಿಗೆ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ದುಬಾರಿ ವೆಚ್ಚದ ಆಕರ್ಷಕ ಸ್ವಾಗತ ಫಲಕಗಳು…. ಈ ನಡುವೆ ‘ನಮ್ಮ ಹೆಸರು ಆಹ್ವಾನ ಪತ್ರಿಕೆಯಲ್ಲಿ ಕೈಬಿಡಲಾಗಿತ್ತು’ ಎಂದು ಬಿಜೆಪಿಯವರ ಧರಣಿಯ ಸುದ್ದಿ. ಇತ್ಯಾದಿಗಳ ಅಬ್ಬರವನ್ನು ಪರಲೋಕದಲ್ಲಿರುವ ಯು.ಎಸ್. ಮಲ್ಯರು ನೋಡುತ್ತಾ ಕಣ್ಣೀರುಗರೆದಿರ ಬಹುದೇ… ಅದೇ ಮಳೆಯಾಗಿರಬಹುದೇ ಎಂಬ ಕೆಲವು ಪ್ರಜ್ಞಾವಂತರ ಮಾತು ಬಹಳ ಅರ್ಥಪೂರ್ಣ ಕೂಡಾ.

ಕೃಪೆ : ಪ್ರಜಾವಾಣಿ

ನೆನಪು ಅಮರ

ಮಂಗಳೂರು : ನವಮಂಗಳೂರಿನಲ್ಲಿ ಶಿಲ್ಪಿ ಉಳ್ಳಾಲ ಶ್ರೀನಿವಾಸ ಮಲ್ಯರ ನೆನಪನ್ನು ಮರವೊಂದು ಅಮರಗೊಳಿಸುತ್ತಿದೆ ! 107 ವರ್ಷಗಳ  ಹಿಂದೆ ಹುಟ್ಟಿ (ಜನನ: ನ. 21, 1902) ತಾನು ಕಟ್ಟಿದ ಸ್ಥಾವರಗಳ ಮೂಲಕವೇ ಚಿರಸ್ಥಾಯಿಯಾಗಿ ಉಳಿದ ಮಲ್ಯರ ಬದುಕನ್ನು ಅಜರಾಮರಗೊಳಿಸುವ ಈ ಮರ ಇರುವುದು ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು. ಅಲ್ಲಿರುವ ಸಣ್ಣ ಅಶ್ವತ್ಥ ಮರವನ್ನು ಮಲ್ಯರ 60ನೇ ಹುಟ್ಟುಹಬ್ಬದ ಸಂದರ್ಭ 1961ರಲ್ಲಿ ನೆಟ್ಟಿದ್ದು.

ಮಲ್ಯರು ತುಂಬ ಸಂಕೋಚ ಸ್ವಭಾವದವರು. ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರನ್ನು ತುಂಬ ಒತ್ತಾಯಿಸಿ ಆವತ್ತು ಜನ್ಮ ಷಷ್ಟ್ಯಬ್ದ ಆಚರಣೆಗೆ ಒಪ್ಪಿಸಲಾಗಿತ್ತು.

ಕಾಂಗ್ರೆಸ್ ನಾಯಕರಾದ ಟಿ.ಎ. ಪೈ, ಕೆ.ಕೆ. ಶೆಟ್ಟಿ ಡಾ. ನಾಗಪ್ಪ ಆಳ್ವ, ಸಾಮ್ರಾಜ್ಯರು ಸೇರಿದಂತೆ ಹಲವು ಪ್ರಮುಖ ನಾಯಕರು 2000 ಜನ ಸೇರಿದ್ದ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರೂ ಸಾಧನೆಯನ್ನು ಹೊಗಳುತ್ತಿದ್ದಾಗ ಮಲ್ಯರು ಗುಬ್ಬಚ್ಚಿಯಂತೆ ಕುಳಿತಿದ್ದರಂತೆ. ಅವತ್ತೇ ದೇವಸ್ಥಾನದ ಮುಂದೆ ಒಂದು ಅಶ್ವತ್ಥ ಗಿಡವನ್ನು ಮಲ್ಯರ ಕೈಯಲ್ಲಿ ನೆಡಿಸಲಾಗಿತ್ತು. ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಶ್ರೀನಿವಾಸ ಮಲ್ಯ-ಇಂದಿರಾ ಮಲ್ಯ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಸಂಪ್ರದಾಯದಂತೆ ಅಶ್ವತ್ಥ ವೃಕ್ಷವನ್ನು ಮಗುವಾಗಿ ಸ್ವೀಕರಿಸಿದ್ದರು. ಅಶ್ವತ್ಥ ವೃಕ್ಷದಲ್ಲಿ ಅದೆಷ್ಟೋ ಸಾವಿರ ಎಲೆಗಳು ಮೂಡಿದಾಗ ಉಪನಯನ ಮತ್ತು ಮದುವೆ ಮಾಡಿಸಬೇಕು ಎನ್ನುವ ಸಂಪ್ರದಾಯವಿದೆ. ಆದರೆ, ಅಷ್ಟುಕಾಲ ಮಲ್ಯರು ಬದುಕಲಿಲ್ಲ. 1965ರ ಜನವರಿ 19ರಂದು ಅವರು ಕೊನೆಯುಸಿರೆಳೆದರು. ಅಷ್ಟಾದರೂ ಅವರ ಕುಟುಂಬಿಕರು ಮರದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬಿಡಲಿಲ್ಲ, 1977ರ ಏಪ್ರಿಲ್ 26ರಂದು ಶ್ರೀನಿವಾಸ ಮಲ್ಯರ ಅಣ್ಣ ಡಾ. ಯು.ಪಿ. ಮಲ್ಯರ ಪುತ್ರ ಮೋಹನ ಮಲ್ಯರು ಮತ್ತು ಪತ್ನಿ ತಾರಾ ಮಲ್ಯ ಅವರ ನೇತೃತ್ವದಲ್ಲಿ ಮರಕ್ಕೆ ಉಪನಯನ ಮತ್ತು ಮದುವೆಯನ್ನು ಭಾರಿ ಗೌಜಿಯಲ್ಲಿ ನಡೆಸಲಾಗಿತ್ತು.

ಆವತ್ತು 2000ಕ್ಕೂ ಅಧಿಕ ಜನ ಸೇರಿದ್ದರು ಎಂದು ಮೋಹನ ಮಲ್ಯ ದಂಪತಿ ನೆನಪಿಸುತ್ತಾರೆ ಮತ್ತು ಆವತ್ತಿನ ಚಿತ್ರಗಳನ್ನು ಜತನವಾಗಿ ಕಾದಿಟ್ಟುಕೊಂಡಿದ್ದಾರೆ. ಊರಿನ ಜನರೆಲ್ಲ ಸೇರಿ ಆವತ್ತು 5000 ರೂ.ವನ್ನು ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಮಲ್ಯರ ಬಂಧು ಪೈಲ್ಯಾಂಡ್ ಬಿಲ್ಡರ್ನ ಮಾಲೀಕ ರಂಗ ಪೈ ನೆನಪುಗಳ ಖಜಾನೆ ಬಿಚ್ಚಿಡುತ್ತಾರೆ.

47 ವರ್ಷಗಳ ಹಿಂದೆ ನೆಟ್ಟ ಆ ಗಿಡ ಯು.ಎಸ್. ಮಲ್ಯರ ಪ್ರತಿನಿಧಿಯಂತೆ ನೂರಾರು ಮಂದಿಗೆ ಆಶ್ರಯ, ನೆರಳು ನೀಡುತ್ತಿದೆ.

ಕೃಪೆ : ವಿಜಯ ಕರ್ನಾಟ

ಉಳ್ಳಾಲ ಶ್ರೀನಿವಾಸ ಮಲ್ಯರು

* ಮುದ್ದು ಮೂಡುಬೆಳ್ಳೆ

1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮಲ್ಯರು ಶ್ರೀರಂಗನಾಥ ದಿವಾಕರರೊಂದಿಗೆ ಕೊಯಂಬತ್ತೂರು ಮತ್ತು ಮಂಗಳೂರಿನಲ್ಲಿ ಸೆರೆವಾಸದಲ್ಲಿದ್ದರು. ಈ ಸಮಯದಲ್ಲವರು ದೀರ್ಘ ಅಸ್ವಾಸ್ಥ್ಯಕ್ಕೂ ಈಡಾದರು.

1947ರಲ್ಲಿ ರಾಷ್ಟ್ರ ಸ್ವತಂತ್ರವಾಯಿತು. ಈ ಹಂತದಲ್ಲಿ 1946ರಲ್ಲಿ ನೂತನವಾಗಿ ರಚನೆಗೊಂಡ ನಡುಗಾಲ ಸರಕಾರದ ಉದಯ ಮತ್ತು ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿ ಮಲ್ಯರು ಕಾಂಗ್ರೆಸ್ ವರಿಷ್ಠರಿಂದ ನೇಮಕಗೊಂಡರು. 1950ರ ವರೆಗೆ ಈ ಕಾನ್ಸ್ಟಿಟ್ಯುಯನ್ಸಿ ಅಸೆಂಬ್ಲಿ ಸದಸ್ಯರಾದರು. ಅವರ ಕಾರ್ಯಕ್ಷೇತ್ರ ರಾಷ್ಟ್ರ ರಾಜಧಾನಿಗೆ ವರ್ಗಾವಣೆಗೊಂಡಿತು. ಭಾರತದಾದ್ಯಂತ ಅವರು ಜನಪ್ರಿಯರಾದರು. ಸ್ವತಂತ್ರ ಭಾರತದ ಚೊಚ್ಚಲ ಗೃಹ ಸಮಿತಿಯ ಸದಸ್ಯರಾಗಿ, ಅಖಿಲ ಭಾರತ ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ರಾಗಿ, ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸಿದರು.

‘ಹೊಗಳಿಕೆ-ತೆಗಳಿಕೆಗಳಿಗೆ ಸೇರದ ಸೂಕ್ಷ್ಮಮತಿಯಾಗಿದ್ದ ಮಲ್ಯರು ಮಾತು ಕಮ್ಮಿ – ಕೆಲಸ ಹೆಚ್ಚು ಎಂಬ ಮಾತಿಗೆ ಉದಾಹರಣೆಯಂತಿದ್ದ, ಆಡಂಬರವಿಲ್ಲದ ಸಜ್ಜನ’ ಎಂಬುದಾಗಿ ನೇರನುಡಿಯ ಹಿರಿಯ ಪತ್ರಕರ್ತ ಶ್ರೀ ಬನ್ನಂಜೆ ರಾಮಾಚಾರ್ಯ ತಮ್ಮಂದು ಲೇಖನದಲ್ಲಿ ಬರೆದಿದ್ದಾರೆ. ಜನಪರ ಕಾಳಜಿ, ಅತ್ಯುತ್ಸಾಹ, ಅದ್ಭುತ ಗ್ರಹಣಶಕ್ತಿ, ಸಂಘಟನಾ ಚಾತುರ್ಯ – ಇವು ಅವರ ಶ್ರೇಷ್ಠ ವ್ಯಕ್ತಿತ್ವದ ಲಕ್ಷಣಗಳಾಗಿದ್ದವು.

ಇಂತಹ ಕಾರ್ಯದುರಂಧರ ಮಲ್ಯರನ್ನು ಅಂದಿನ ಭಾರತದ ಪ್ರಧಾನಿ ಜವಾಹರಲಾಲ ನೆಹರೂ ತಮ್ಮ ಒಡನಾಡಿಯನ್ನಾಗಿ ಮಾಡಿಕೊಂಡರು. ನೆಹರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷರಾಗಿದ್ದಾಗ ಮಲ್ಯರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು. ಆಗ ಮಲ್ಯರೊಂದಿಗೆ ಅದೇ ಹುದ್ದೆಯಲ್ಲಿದ್ದ ಇನ್ನಿಬ್ಬರೆಂದರೆ ಲಾಲ್ ಬಹಾದೂರ್ ಶಾಸ್ತ್ರಿಗಳು ಹಾಗೂ ಬಲವಂತರಾಯ್ ಮೆಹ್ತಾ.

1952ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ನಡೆಯಿತು. ಶ್ರೀ ಮಲ್ಯರನ್ನು ನಿರಂತರವಾಗಿ ಲೋಕಸಭೆಗೆ ಆಯ್ಕೆಮಾಡಿ ಕಳುಹಿಸಿದುದು ಉಡುಪಿ ಕ್ಷೇತ್ರ. 1952, 1957, 1962 ಹೀಗೆ ಸತತ ಮೂರು ಬಾರಿ ಉಡುಪಿ ಕ್ಷೇತ್ರದಿಂದ ಅವರು ಗೆದ್ದು ಮುಂದಿನ ತಮ್ಮ ಜೀವಿತಾವಧಿಯ 17 ವರ್ಷಗಳ ಕಾಲವೂ ಪಾರ್ಲಿಮೆಂಟ್ ಸದಸ್ಯರಾಗಿದ್ದರು.

ರಾಷ್ಟ್ರ ರಾಜಕಾರಣದ ಜೊತೆಯಲ್ಲೇ ಮಲ್ಯರು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಹಳ್ಳಿಹಳ್ಳಿಗಳಲ್ಲಿ ಸಂಪರ್ಕ ರಸ್ತೆ, ಸೇತುವೆಗಳು, ಗುಡಿಕೈಗಾರಿಕೆ, ಉದ್ಯೋಗ ನಿರ್ಮಿತಿ, ಬೃಹತ್ ಕಾರ್ಖಾನೆ, ಜಲ ನಿರ್ವಹಣೆಗಳಿಗೆ ಆದ್ಯತೆ ನೀಡಿ, ಈ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಿದರು.

ಸ್ವಾತಂತ್ರ್ಯಾನಂತರ ಈ ದೇಶ ಅಸಂಖ್ಯ ರಾಜಕಾರಣಿಗಳನ್ನು ಕಂಡಿದೆ. ಇವರ ನಡುವೆ ಜನೋಪಯೋಗಿಯಾಗಿ ಕಾರ್ಯನಿರ್ವಹಿಸಿ, ಜನಮಾನಸದಲ್ಲಿ ಉಳಿದವರು ಬೆರಳೆಣಿಕೆಯವರು. ಜನರ ನಿರೀಕ್ಷೆಗೂ ಮೀರಿ ದ.ಕ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ರೂವಾರಿಯಾಗಿ ವೌನವಾಗಿ ಶ್ರಮಿಸಿದವರು ಶ್ರೀನಿವಾಸ ಮಲ್ಯರು.

ಬಜಪೆ ವಿಮಾನ ನಿಲ್ದಾಣ, 1965ರಲ್ಲಿ ಸುರತ್ಕಲ್ನಲ್ಲಿ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಶರಾವತಿ, ನೇತ್ರಾವತಿ, ಗಂಗೊಳ್ಳಿ ಮೊದಲಾದ ನದಿಗಳಿಗೆ 8 ಬೃಹತ್ ಸೇತುವೆ ನಿರ್ಮಾಣ, ಹಾಸನ-ಮಂಗಳೂರು ರೈಲುಮಾರ್ಗ ನಿರ್ಮಾಣ (ಈ ವೇಳೆಃ ಈ ಮಾರ್ಗ ಮತ್ತೆ ನೆನೆಗುದಿಗೆ ಬಿದ್ದಿದೆ) ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಧುನೀಕರಣ, ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಸೇತುವೆ, ಜಿಲ್ಲೆಗೆ ವಿದ್ಯುತ್ ಸಂಪರ್ಕ ವಿಸ್ತರಣೆ ಮುಂತಾದವು ಅವರ ಸಾಧನೆಗಳಲ್ಲಿ ಕೆಲವು. ಪಣಂಬೂರಿನ ಸರ್ವಋತು ಬಂದರು ಯೋಜನೆಯನ್ನು ಮಲ್ಪೆಗೆ ವರ್ಗಾಯಿಸಲು ಆ ಭಾಗದಲ್ಲಿ ಒತ್ತಡಗಳಿದ್ದರೂ, ಹಾಗೊಂದು ವೇಳೆ ಆದಲ್ಲಿ ಯೋಜನೆಯೇ ಬೇರೆ ರಾಜ್ಯಕ್ಕೆ ಹೋದೀತು, ಅಲ್ಲದೆ ಮಂಗಳೂರು ಪ್ರಮುಖ ವ್ಯಾಪಾರೀ ಕೇಂದ್ರವಾಗಿರುವುದರಿಂದ ಈ ಸರ್ವಋತು ಬಂದರು ಮಂಗಳೂರಿನಲ್ಲೇ ಆಗುವಂತೆ ಮಲ್ಯರು ನೋಡಿಕೊಂಡರು. ಈ ಅಸಂತುಷ್ಠಿ ಉಡುಪಿ ಭಾಗದವರಲ್ಲಿ ಉಳಿದುಬಿಟ್ಟರೂ, ಮುಂದೆ ಅವರ ಮುತ್ಸದ್ದಿತನ, ರಾಜಕಾರಣದ ನಿಷ್ಕಲ್ಮಶ ನೋಟ, ದೂರದೃಷ್ಟಿಗಳು ಮಲ್ಯರನ್ನು ಗೌರವಿಸುವಲ್ಲಿ ಪರ್ಯವಸಾನಗೊಂಡಿರಬೇಕು.

ಮಲ್ಯರಲ್ಲಿ ಇನ್ನಷ್ಟು ಅಭಿವೃದ್ಧಿಯ ಕನಸುಗಳಿದ್ದವು. ದ.ಕ.ದ ಎಲ್ಲ ನದಿ, ಹಳ್ಳಗಳಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಯಂತಹ ಇನ್ನೂ ಹಲವು ಮುನ್ನೋಟಗಳು ಅವರೆದುರು ಇದ್ದವು. ಆದರೆ ಅವರ ಆರೋಗ್ಯ ಹದಗೆಡುತ್ತ ಸಾಗಿತ್ತು. ಸಚೇತಕ ಹುದ್ದೆಯನ್ನೂ ತೊರೆದರು. ಮಲ್ಯ ದಂಪತಿಗೆ ಸಂತಾನಭಾಗ್ಯವಿಲ್ಲದ ಕೊರಗು ಕಾಡುತ್ತಿತ್ತು. ಕೊನೆಗೆ ತಮ್ಮ ಸಮೀಪ ಕುಟುಂಬದ 13 ವರ್ಷ ವಯಸ್ಸಿನ ಬಾಲಕ ಜನಾರ್ದನ ಪ್ರಭು ಎಂಬವರನ್ನು ದತ್ತುಪುತ್ರನಾಗಿ ಸ್ವೀಕರಿಸಿ, ತಮ್ಮ ಸ್ವಂತ ಮಗನಂತೆಯೇ ಸಲಹಿದರು.

ಮುಂದಿನ ನಾಲ್ಕು ವರ್ಷಗಳಲ್ಲಿ ಅವರ ಆರೋಗ್ಯ ಮತ್ತೆ ಮತ್ತೆ ಕಾಡತೊಡಗಿತು. ಅದಾಗಲೇ 3-4 ಬಾರಿ ಹೃದಯಾಘಾತ ಸಂಭವಿಸಿತ್ತು. 1965ರ ಡಿಸೆಂಬರ್ 19ರಂದು ಮಲ್ಯರು ಕೆನರಾ ಬ್ಯಾಂಕ್ ಬೋರ್ಡ್ ಮೀಟಿಂಗಿಗೆಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನ ಪ್ರಯಾಣಕ್ಕೆ ಹೊರಟಿದ್ದರು. ಕಾರಿನಲ್ಲಿ ಮಲ್ಯರಿಗೆ ಹೃದಯಾಘಾತವಾಯಿತು. ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ಅವರನ್ನು ಒಯ್ಯಲಾಯಿತು. ಅಲ್ಲಿ ಆ ಚೇತನ ನಿಶ್ಚಲವಾಯಿತು. ಆಗ ಅವರಿಗೆ 63 ವರ್ಷ ವಯಸ್ಸು.

ಅವರ ಪಾರ್ಥಿವ ಶರೀರವನ್ನು ಅಂದಿನ ಪ್ರಧಾನಿ ಲಾಲ್ಬಹಾದೂರ್ ಶಾಸ್ತ್ರಿಗಳ ತುರ್ತು ಸಂದೇಶದೊಂದಿಗೆ ಶಾಸ್ತ್ರಿಗಳದ್ದೇ ವಿಮಾನದಲ್ಲಿ ಮಂಗಳೂರಿಗೆ ತರಲಾಯಿತು. ಅಸಂಖ್ಯ ಅಭಿಮಾನಿಗಳು ಧಾವಿಸಿ ಅಂತಿಮ ನಮನ ಸಲ್ಲಿಸಿದರು. ಮರುದಿನ ಉರ್ವ ಬಳಿಯ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಹೀಗೆ ಕರಾವಳಿ ಕರ್ನಾಟಕದ ಅನರ್ಘ್ಯ ರತ್ನವೊಂದು ಪರಮಾತ್ಮನಲ್ಲಿ ಲೀನವಾಯಿತು. ಉಳ್ಳಾಲ ಶ್ರೀನಿವಾಸ ಮಲ್ಯರು ನಡೆಸಿದ ಅಭಿವೃದ್ಧಿ ಕಾರ್ಯಗಳು ಅವರ ಸಫಲ ಜೀವನದ ಸಾಕ್ಷಿಗಳಾಗಿ ನಮ್ಮೆದುರಿಗಿವೆ.

ಮಲ್ಯರ ಓರಗೆಯ ರಾಜಕೀಯ ಒಡನಾಡಿಗಳಾಗಿದ್ದ ವಾಮನ ಕುಡ್ವ, ಶ್ರೀನಿವಾಸ ಶೆಣೈ, ಪಂಚಮಹಲ್ ನರಸಿಂಗ ರಾವ್, ರಾಮರಾಯ ಕಿಣಿ, ಎ.ಬಿ. ಶೆಟ್ಟಿ, ಕೆ.ಎಸ್. ಹೆಗ್ಡೆ ಕಿಲ್ಲೆಯವರು, ಆಗಿನ ತಮಿಳ್ನಾಡು ಮುಖ್ಯಮಂತ್ರಿ ಕಾಮರಾಜ ನಾಡಾರ್, ಬಿ.ಡಿ. ಜತ್ತಿ, ಇಂಜಿನಿಯರ್ ಶ್ರೇಷ್ಠ – ಇವರಲ್ಲದೆ ನೆಹರೂ, ಶಾಸ್ತ್ರೀಜಿಯಂಥವರು ಮಲ್ಯರ ಸಾಧನೆಗಳ ಹಿಂದಿನ ಶಕ್ತಿಗಳಾಗಿ ಸಹಕರಿಸಿದ್ದರು.

ಕೃಪೆ : ಸಂಪ್ರಭಾ ಕಿನ್ನಿಗೋಳಿ, ದ.ಕ.