ನಕ್ಷತ್ರಗಳ ನಡುವೆ
ಹೂವುಗಳಿಗೇನು ಕೆಲಸ
ಎನ್ನಬಹುದು ನೀವು.

ಹೂವು ಹೂವೇ, ನಕ್ಷತ್ರ ನಕ್ಷತ್ರವೇ
‘ಎತ್ತಣಿಂದೆತ್ತ ಸಂಬಂಧವಯ್ಯಾ’,
ಆದರೆ ನಾನು ಹೇಳುತ್ತೇನೆ :
ಹೂವುಗಳು ನೆಲದ ನಕ್ಷತ್ರಗಳು
ನಕ್ಷತ್ರಗಳು ಆಕಾಶದ ಹೂವುಗಳು.

ನನಗೂ ಗೊತ್ತು : ಈ ಹೂವುಗಳ ಬದುಕು
ಕೆಲವೇ ಹೊತ್ತು,
ಆದರೆ, ಕೆಲವೇ ಹೊತ್ತಿನ ಈ
ಹೂವುಗಳಿಗಿರುವ ಸೊಗಸು, ಆ
ನಕ್ಷತ್ರಗಳಿಗಿಲ್ಲ,
ಇಷ್ಟರ ಮೇಲೆ, ನಕ್ಷತ್ರಗಳೂ
ಶಾಶ್ವತವಾಗಿರುತ್ತವೆ ಎಂಬ ಭ್ರಮೆ
ನನಗೂ ಇಲ್ಲ!