ಸೂರ‍್ಯನ ಸುತ್ತ ಸುತ್ತಲೇಬೇಕಾಗಿರುವ ಈ
ಭೂಮಂಡಲಕ್ಕೆ
ಎರಡೇ ಹೋಳು ;
ಅರ್ಧ ಬೆಳಕು
ಅರ್ಧ ಕತ್ತಲೆ.
ನನಗೂ ಅಷ್ಟೆ :
ಸದಾ ನನ್ನರ್ಧಭಾಗಕ್ಕೆ ಹಗಲು
ಇನ್ನರ್ಧಭಾಗಕ್ಕೆ ಇರುಳು.
ಇರುಳು ಮುಚ್ಚುವುದು
ಹಗಲು ಬಿಚ್ಚುವುದು.
ಈ ಮುಚ್ಚು ಬಿಚ್ಚಾಟದಲಿ
ಕಂಡದ್ದು ಕಾಣದಂತಾಗಿ
ಕಾಣದ್ದು ಕಂಡಂತಾಗಿ
ಬರೀ ಕಣ್ಣುಮುಚ್ಚಾಲೆ
ಬೆಳಕು ಕತ್ತಲ ನಡುವೆ ಒಂದೇಸಮನೆ
ಗಡಿಯಾರದುಯ್ಯಾಲೆ.