ಅಶಾಬ್ದಿಕ ಸಂವಹನ ಸಮುದಾಯವನ್ನು ಕಲ್ಪಿಸಿಕೊಳ್ಳಬಹುದೇನೋ, ಆದರೆ ವ್ಯಕ್ತಿನಾಮಗಳಿಲ್ಲದ ಸಮುದಾಯವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸಮುದಾಯವೊಂದರಲ್ಲಿ ಒಪ್ಪಿತ ವ್ಯಕ್ತಿನಾಮವಿಲ್ಲದಿದ್ದರೂ ಕೊನೆಪಕ್ಷ ಪರ್ಯಾಯ ನಾಮದೊಂದಿಗೆ ಆದರೂ ಸಂಬೋಧನೆ ಜರುಗುತ್ತಿರುತ್ತದೆ. ವಾಸ್ತವವಾಗಿ ವ್ಯಕ್ತಿಗೂ ಆತನ ಹೆಸರಿಗೂ ನಡುವೆ ಸಂಬಂಧವಿಲ್ಲ. ಅಂದರೆ ಪರಸ್ಪರ ಇವೆರಡು ಯಾದೃಚ್ಚಿಕವಾದವು. ವ್ಯಕ್ತಿಗೆ ತಕ್ಕಂತೆ ಹೆಸರು ಇರುವುದಿಲ್ಲ. ಹೆಸರಿಗೆ ತಕ್ಕಂತೆ ವ್ಯಕ್ತಿಯೂ ಇರುವುದಿಲ್ಲ. ಇವೆರಡರ ನಡುವಿನ ಸಂಬಂಧ ಕೇವಲ ಸಂಬೋಧನೆಗಾಗಿ ಇದೆಯೇ ಹೊರತು, ಅದರಿಂದಾಚೆಗೆ ಏನು ಇರುವುದಿಲ್ಲ. ವ್ಯಕ್ತಿನಾಮಗಳು ಯಾವಾಗಲೂ ಭಾಷೆಯೊಂದರಲ್ಲಿ ಬೆಳವಣಿಗೆಯ ಹಾದಿಯಲ್ಲಿ ರುತ್ತವೆ. ಹಾಗಾಗಿ ವ್ಯಕ್ತಿನಾಮಗಳು ಹೆಸರಿಸುತ್ತವೋ ಅಥವಾ ವರ್ಣಿಸುತ್ತವೋ ಎಂಬುದು ಭಾಷೆಯಲ್ಲಿ ಚರ್ಚೆಯ ವಿಚಾರ. ಹೆಚ್ಚಿನ ಪ್ರಮಾಣದಲ್ಲಿ ವ್ಯಕ್ತಿನಾಮಗಳು ಹೆಸರಿಸುತ್ತವೆ. ಕೆಲವು ಸಂದರ್ಭದಲ್ಲಿ ವರ್ಣಿಸುತ್ತವೆ. ಮೆಳ್ಳಗಣ್ಣಪ್ಪನಿಗೆ, ಕಣ್ಣುಗುಳ್ಳೆ ದಪ್ಪವಾಗಿರಬೇಕಿಲ್ಲ. ಇಂತಹ ಸಂದರ್ಭದಲ್ಲಿ ಹೆಸರು ವರ್ಣಿಸುತ್ತಿಲ್ಲ. ಆಮೇಲೆ ಹೆಚ್ಚು ವ್ಯಕ್ತಿನಾಮಗಳು ಸಂಪ್ರದಾಯ ಬದ್ಧವಾಗಿರುತ್ತವೆ. ಅಂದರೆ ವಂಶಪಾರಂರ್ಯವಾಗಿ ಬಳಕೆಯಲ್ಲಿ ಇರುತ್ತವೆ. ಅಂದರೆ ವ್ಯಕ್ತಿನಾಮಗಳು ಸಮುದಾಯದ ನಂಬಿಕೆ ಭಾಗವಾಗಿಯೂ ಬಳಕೆಯಲ್ಲಿವೆ.

ನಂಬಿಕೆ ಮತ್ತು ವ್ಯಕ್ತಿನಾಮ

ನಂಬಿಕೆ ಎನ್ನುವುದು ಮನುಷ್ಯರು ಎಂದು ಜಗತ್ತಿಗೆ ಬಂದರೋ ಅಂದೆ ಹುಟ್ಟಿಕೊಂಡಿದೆ. ನಂಬಿಕೆ ಇಲ್ಲದ ಕ್ಷೇತ್ರವಿಲ್ಲ, ಕೆಲವು ಸಮುದಾಯಗಳಲ್ಲಿ ವ್ಯಕ್ತಿಗಳ ಹೆಸರುಗಳನ್ನು ನಿಷಿದ್ಧವಾಗಿಡುವರು. ಅದು ಎಷ್ಟರಮಟ್ಟಿಗೆ ಎಂದರೆ ತಮ್ಮ ಸಂಬಂಧಿಕರಿಗೆ ಬಿಟ್ಟರೆ ಅನ್ಯರಿಗೆ ತಿಳಿಯಬಾರದು ಎಂಬ ಭಯದಿಂದ, ಹುಟ್ಟು ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನೂ ಕೆಲವು ಸಮುದಾಯ ಗಳಲ್ಲಿ ಪದೆ ಪದೇ ಮಕ್ಕಳಿಗೆ ಕಾಯಿಲೆ ಪೀಡಿತವಾದರೆ, ಮಕ್ಕಳೆಲ್ಲ ಸಾಯುತ್ತಿ ದ್ದಾರೆ ಎಂದರೆ ಅದನ್ನು ತಡೆಗಟ್ಟಲು ‘ಸುಡುಗಾಡಮ್ಮ’ ಎಂತಲೂ ಗಂಡು ಮಕ್ಕಳಾದರೆ ‘ಸುಡುಗಾಡಪ್ಪ’ ಎಂದೂ ಇಡುವುದು ಸರ್ವೇಸಾಮಾನ್ಯ. ಸುಡುಗಾಡಮ್ಮ ಮತ್ತು ಸುಡುಗಾಡಪ್ಪ ಹೆಸರುಗಳನ್ನು ನೇರವಾಗಿ ಇಡುವುದಿಲ್ಲ. ತಮ್ಮ ಮನದೇವರಾದ ಸುಡುಗಾಡಮ್ಮ ದೇವಸ್ಥಾನಕ್ಕೆ ಹೋಗಿ ನನಗೆ ಮುಂದೆ ಹುಟ್ಟುವ ಮಕ್ಕಳಿಗೆ ನಿನ್ನ ಹೆಸರನ್ನೇ ಇಡುತ್ತೇನೆ ಎಂದು ಹರಕೆ ಹೊರುತ್ತಾರೆ. ಮತ್ತೆ ಕೆಲವು ಸಮುದಾಯಗಳಲ್ಲಿ ಪದೆ ಪದೆ ಹೆಣ್ಣು ಮಕ್ಕಳೇ ಆಗುತ್ತಿದ್ದು, ಗಂಡು ಮಕ್ಕಳನ್ನು ಬಯಸುವವರು ತಮ್ಮ ಮನೆ ದೇವರಿಗೆ ಹರಕೆ ಹೊತ್ತು. ಮುಂದೆ ಗಂಡುಮಗು ಆದರೆ ನಿನ್ನ ಹೆಸರನ್ನೇ ಇಡುತ್ತೇನೆ ಎಂದು ಹರಕೆ ಹೊರುತ್ತಾರೆ.

ಹಳೆ ಮೈಸೂರು ಪ್ರಾಂತ್ಯದ ಕಡೆ ತಮ್ಮ ಮನೆ ದೇವರುಗಳಿಗೆ ವಂಶ ಪಾರಂರ್ಯವಾಗಿ ಗುಡ್ಡರು ದಾಸರು ಮತ್ತು ಜೋಗಿಗಳನ್ನು ಬಿಡುವ ಸಂಪ್ರದಾಯ ವಿದೆ. ಇದು ಆಯಾ ಒಕ್ಕಲಿನವರು ಪಾಲಿಸಿಕೊಂಡು ಬಂದ ಸಂಪ್ರದಾಯವಾಗಿದೆ. ಜತೆಗೆ ತಮ್ಮ ತಮ್ಮ ಮನೆ ದೇವರಿನ ಹೆಸರನ್ನೇ ಇಡುವ ಪದ್ಧತಿಯಿದೆ. ಒಂದು ವೇಳೆ ಈ ರೀತಿ ನಿಯಮ ಪಾಲಿಸದಿದ್ದಲ್ಲಿ ಮನೆಯಲ್ಲಿ ಕಷ್ಟ ಸಂಭವಿಸಬಹುದು ಎಂಬ ನಂಬಿಕೆಯಿಂದ ಈ ಮಾದರಿ ಹೆಸರಿಡುವ ಪದ್ಧತಿ ಆಚರಣೆಯಲ್ಲಿದೆ. ಇದೊಂದು ಸಂಪ್ರದಾಯವಾಗಿಯೂ ಬಳಕೆಯಲ್ಲಿದೆ.

ಮುಂದುವರಿದು ವ್ಯಕ್ತಿನಾಮಗಳು ಮನುಷ್ಯನ ಜೀವನದಲ್ಲಿ ಹೇಗೆ ಅನಿವಾರ್ಯವಾದ ಭಾಗವೆಂದರೆ ವ್ಯಕ್ತಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅವುಗಳ ಪಾತ್ರ ಹಿರಿದು. ಹಿಂದೂ ಧರ್ಮದಲ್ಲಿ ವಿವಾಹಕ್ಕಿಂತ ಮೊದಲು ವರ ಮತ್ತು ವಧುವಿನ ಹೆಸರಿನ ಬಲ ನೋಡಿಯೇ ವಿವಾಹ ನಿಶ್ಚಯಿಸುವುದು. ಒಂದು ವೇಳೆ ವರ ಮತ್ತು ವಧುವಿನ ನಕ್ಷತ್ರ, ರಾಶಿಗಳು ವಿರುದ್ಧವಾಗಿದ್ದರೆ, ವಿವಾಹ ಕಾರ್ಯಕ್ಕೆ ತೆರೆ ಬಿದ್ದಂತೆಯೇ ಸರಿ. ಆದರೂ ಮನುಷ್ಯರು ಪರ್ಯಾಯವಾಗಿ ಚಿಂತಿಸುವ ಜೀವಿಯಾದ್ದರಿಂದ ಸಂಬಂಧ ಬೆಳಸಲೇಬೇಕು ಎಂಬ ಹಠದಿಂದ ಪರ್ಯಾಯವಾದ ವ್ಯಕ್ತಿನಾಮವೊಂದನ್ನು ಸೃಷ್ಟಿಸಿ ವಿವಾಹ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಅಂಶವನ್ನು ಗಮನಿಸಿದಾಗ ವ್ಯಕ್ತಿಗೂ ಅವರ ಹೆಸರಿಗೂ ಇರುವ ಸಂಬಂಧ ಯಾದೃಚ್ಛಿಕವಾದುದು ಎಂದೆನಿಸುತ್ತದೆ. ಅದು ನಿಜವೋ, ತಪ್ರೋಗೊತ್ತಿಲ್ಲ. ಹೆಸರು ವ್ಯಕ್ತಿಯ ಜೀವನವನ್ನು ರೂಪಿಸಲು, ಅವರ ಬದುಕನ್ನು ನಡೆಸುವುದು, ಕೆಡಿಸುವುದು ಹೆಸರಿನಿಂದ ಸಾಧ್ಯ ಎಂಬ ನಂಬಿಕೆ ಇರುವುದು ಚಾರಿತ್ರಿಕ ಸತ್ಯ. ಕೆಲವು ಸಂದರ್ಭದಲ್ಲಿ ವ್ಯಕ್ತಿ ಸತ್ತಾಗ ಅವರ ಹೆಸರು ಮಾತ್ರ ಉಳಿಯುತ್ತದೆ. ಇನ್ನೂ ಕೆಲವು ಸಮುದಾಯಗಳಲ್ಲಿ ವ್ಯಕ್ತಿಯೊಬ್ಬ ಸತ್ತ ತಕ್ಷಣ ಅವರ ಹೆಸರಿನವರೆಲ್ಲ ತಂತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಪರಿಪಾಠವಿದೆ. ಅಲ್ಲದೆ ಬಳಕೆಯಿಂದ ದೂರವಿಡುತ್ತಾರೆ. ಮತ್ತೆ ಕೆಲವು ಸಮುದಾಯಗಳಲ್ಲಿ ಇದಕ್ಕೆ ವಿರುದ್ಧವಾದ ಆಚರಣೆಯಿದೆ. ಸತ್ತ ವ್ಯಕ್ತಿಯ ಹೆಸರನ್ನು ಅದೇ ಮನೆತನದವರಿಗೆ ಅಂದರೆ ಅದೇ ಮನೆತನದವರಲ್ಲಿ ಮುಂದೆ ಹುಟ್ಟುವ ಮಕ್ಕಳಿಗೆ  ಕಡ್ಡಾಯವಾಗಿ ಇಡಬೇಕು ಇಲ್ಲವಾದಲ್ಲಿ ಸತ್ತ ವ್ಯಕ್ತಿಯ ಆತ್ಮ ಹಿಂಸೆ ಪಡುತ್ತದೆಂಬ ನಂಬಿಕೆಯಿದೆ. ಈ ಪದ್ಧತಿ ಕನ್ನಡ ಸಮಾಜದಲ್ಲಿ ಬಳಕೆಯಲ್ಲಿದೆ.

ನೆನಪು ಮತ್ತು ವ್ಯಕ್ತಿನಾಮ

ಕೆಲವು ಸಂದರ್ಭದಲ್ಲಿ ಕೆಲವು ಸಮುದಾಯಗಳು ವ್ಯಕ್ತಿನಾಮಗಳನ್ನು ಮೂರು ತಲೆಮಾರಿನ ಹಿಂದಿನ ಹೆಸರನ್ನು ಇಡುವ ಪದ್ಧತಿ ಇದೆ. ಕಾರಣ ತಮ್ಮ ವಂಶಸ್ಥರ ನೆನಪು ಮಾಡಿಕೊಳ್ಳುವುದಕ್ಕೋಸ್ಕರ ಅವರ ಹೆಸರನ್ನು ಮೊಮ್ಮಕ್ಕಳು, ಮೂಳುಮಕ್ಕಳಿಗೆ ಇಡುತ್ತಾರೆ. ಈ ಮೂಲಕ ಅವರ ಸಾವನ್ನು ದೂರವಿಡಲು ಈ ಕ್ರಮವೊಂದನ್ನು ಅನುಸರಿಸುತ್ತಾರೆ.

ವ್ಯಕ್ತಿನಾಮವನ್ನು ವಿದ್ವಾಂಸರು ಎರಡು ಭಾಗಗಳಾಗಿ ವಿಭಜನೆ ಮಾಡಿ ಅಧ್ಯಯನ ಮಾಡಿದ್ದಾರೆ. ಎರಡು ಭಾಗಗಳಲ್ಲಿ ಮೊದಲನೆಯ ಭಾಗವನ್ನು ‘ನಿರ್ದಿಷ್ಟ’ ಎಂದು, ಎರಡನೆಯದು ‘ವಾರ್ಗಿಕ’ ಎಂದು ಹೇಳಿದ್ದಾರೆ. ಇವೆರಡು ಭಾಗಗಳಲ್ಲಿ ಮೊದಲನೆಯ ಭಾಗವಾದ ‘ನಿರ್ದಿಷ್ಟವೇ’ ವ್ಯಕ್ತಿಯ ನಿಜನಾಮ. ಎರಡನೆಯ ಭಾಗವಾದ ವಾರ್ಗಿಕ ಸಂಬಂಧವಾಚಿ ಅಥವಾ ವರ್ಗವಾಚಿ, ಕುಲವಾಚಿ, ವ್ಯಕ್ತಿವಾಚಿ, ಸ್ಥಳವಾಚಿ ಆಗಿರುತ್ತದೆ. ಸಾಮಾನ್ಯವಾಗಿ ಇದು ವ್ಯಕ್ತಿನಾಮಗಳ ಸ್ವರೂಪ. ಉದಾಹರಣೆಗೆ ಕೆಲವು ವ್ಯಕ್ತಿನಾಮಗಳು ಆಯಾ ವ್ಯಕ್ತಿಗಳ ನಾಮನಿದೇರ್ಶನ ಮಾಡುವುದರ ಜತೆಗೆ ವಾರ್ಗಿಕಗಳು ಬದಲಾದಂತೆ ಜಾತಿಸೂಚಕ ನಾಮಗಳಾಗಿ ಬದಲಾವಣೆ ಆಗಿರುವುದನ್ನು ಕೆಳಗಿನ ಉದಾಹರಣೆ ಗಳಿಂದ ತಿಳಿಯಬಹುದು.

ರಂಗ + ಅಣ್ಣ = ರಂಗಣ್ಣ

ರಂಗ + ರಾವ್ = ರಂಗರಾವ್

ರಂಗ + ಶಾಸ್ತ್ರಿ = ರಂಗಶಾಸ್ತ್ರಿ

ರಂಗ + ಅಪ್ಪ = ರಂಗಪ್ಪ

ರಂಗ + ಗೌಡ = ರಂಗೇಗೌಡ

ರಂಗ + ದೇವರು = ರಂಗದೇವರು

ರಂಗ + ಶೆಟ್ಟಿ = ರಂಗಶೆಟ್ಟಿ

ರಂಗ + ನಾಯ್ಕ = ರಂಗನಾಯ್ಕ

ರಂಗ + ಸ್ವಾಮಿ = ರಂಗಸ್ವಾಮಿ

ರಂಗ + ರಾಜು = ರಂಗರಾಜು

ರಂಗ + ಅಯ್ಯ = ರಂಗಯ್ಯ

ಮುಂತಾದ ರೂಪಗಳು ‘ರಂಗ’ ಹೆಸರಿನ ಮೂಲ ಪಡೆದಿವೆ. ಇವುಗಳ ವಾರ್ಗಿಕ ಸಹಾಯದಿಂದ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಉಪ್ಪಾರ, ಬೇಡ, ಪರಿವಾರ, ಹೊಲೆಯ, ಮಾದಿಗ, ಜಾಡಮಾಲಿ, ಜನರ ಜಾತಿಸೂಚಿ ನಾಮಗಳಾಗಿವೆ. ಆದರೆ ವಾರ್ಗಿಕಗಳ ಸಹಾಯದಿಂದ ಸ್ತ್ರೀಯರ ಹೆಸರಿನಲ್ಲಿ ಜಾತಿಸೂಚಿ ನಾಮಗಳನ್ನು ನಿರ್ಣಯಿಸುವುದು ಕಷ್ಟ. ಇದೇ ರೀತಿಯಲ್ಲಿ ಒಂದೇ ಮೂಲದ ಹೆಸರಿನ ವಾರ್ಗಿಕಗಳ ಸಹಾಯದಿಂದ ಒಂದೇ ಜಾತಿ ಸೂಚಿನಾಮ ದಲ್ಲಿ ವಯಸ್ಸು, ಲಿಂಗಗಳ ಭಿನ್ನತೆ ಸೂಚಿಸುತ್ತವೆ.

ಉದಾ.

ಮಲ್ಲ + ಅಣ್ಣ + ಗೌಡ = ಮಲ್ಲಣ್ಣಗೌಡ

ಮಲ್ಲ + ಅಣ್ಣ + ಅಯ್ಯ = ಮಲ್ಲಣ್ಣಯ್ಯ

ಮಲ್ಲ + ಅಮ್ಮ = ಮಲ್ಲಮ್ಮ

ಮಲ್ಲ, ಮಲ್ಲಿ ಮುಂತಾದ ಸ್ತ್ರೀ ಮತ್ತು ಪುರುಷ ವ್ಯಕ್ತಿನಾಮದ ವಿಸ್ತೃತರೂಪ ಇಲ್ಲವೆ ಸಂಕುಚಿತ ರೂಪಗಳು ವಯಸ್ಸು ಲಿಂಗಗಳನ್ನು ಸೂಚಿಸುತ್ತವೆ.

ಮೇಲೆ ವಿವರಿಸಿದಂತೆ ಒಂದು ವ್ಯಕ್ತಿನಾಮದಲ್ಲಿ ಸಾಮಾನ್ಯವಾಗಿ ಎರಡು ಘಟಕಗಳಿರುತ್ತವೆ ಎನ್ನುವುದು ಖಚಿತವಾಯಿತು. ಆದರೆ ಕೆಲವು ವ್ಯಕ್ತಿನಾಮ ಗಳಲ್ಲಿ ವಾರ್ಗಿಕಗಳೇ ಇಲ್ಲದಿರಬಹುದು. ಉದಾಹರಣೆಗೆ ಸಂತೋಷ್, ಆನಂದ್ ಮುಂತಾದ ಹೆಸರುಗಳನ್ನು ಒಡೆದು ತೋರಿಸಲು ಬರುವುದಿಲ್ಲ. ಅವು ಅತ್ಯಂತ ಕನಿಷ್ಠ ಘಟಕಗಳಾಗಿ ಬಳಕೆಯಲ್ಲಿವೆ. ಇಲ್ಲಿ ನಿರ್ದಿಷ್ಟ ಮಾತ್ರ ಇದೆ. ಆದರೆ ಕೆಲವು ಸಂದರ್ಭದಲ್ಲಿ ನಿರ್ದಿಷ್ಟಕ್ಕೆ ವಾರ್ಗಿಕವು ಸೇರಬಹುದು. ಉದಾಹರಣೆಗೆ ಸಂತೋಷಕುಮಾರ್, ಆನಂದಕುಮಾರ್, ಅಂದರೆ ಸಂತೋಷ್ ಮತ್ತು ಆನಂದ್ ನಿರ್ದಿಷ್ಟಗಳಿಗೆ ಮೂರ್ತಿ, ಗೌಡ ಮತ್ತು ರಾವ್ ಎಂಬ ವಾರ್ಗಿಕಗಳು ಸೇರಬಹುದು, ಸೇರದೆಯೇ ಇರಬಹುದು. ಆದರೆ ವ್ಯಕ್ತಿಯ ನಿಜನಾಮ ಹಿಂದಿನ ಘಟಕವೇ ಆಗಿದೆ. ಇವುಗಳಿಗಿಂತ ಭಿನ್ನವಾಗಿರುವ ವ್ಯಕ್ತಿನಾಮಗಳನ್ನು ನೋಡಬಹುದು. ಉದಾ. ಶಿವರಾಮ, ರಾಮಕೃಷ್ಣ, ಶಿವಸ್ವಾಮಿ, ಮುಂತಾದ ಹೆಸರುಗಳನ್ನು ಗಮನಿಸಿದಾಗ ಈ ವ್ಯಕ್ತಿನಾಮಗಳನ್ನು ಎರಡು ಘಟಕಗಳಾಗಿ ಒಡೆದರೆ ಕೆಲವು ಸಮಸ್ಯೆಗಳು ಎದುರಾಗುತ್ತದೆ. ಅದೇನೆಂದರೆ ಶಿವ + ರಾಮ, ರಾಮ + ಕೃಷ್ಣ, ಶಿವ + ಸ್ವಾಮಿ, ಎಂದು ಒಡೆದರೆ ಎರಡು ಘಟಕಗಳು ನಿರ್ದಿಷ್ಟವೇ ಆಗಿದೆ. ಹಾಗಾಗಿ ಎರಡು ನಿರ್ದಿಷ್ಟಗಳು ಸೇರಿ ಒಂದು ನಾಮ ಆಗಿದೆ. ಈ ಹಿನ್ನೆಲೆಯಿಂದ ಶಿವ + ಸ್ವಾಮಿ ಎನ್ನುವಲ್ಲಿ ನಿರ್ದಿಷ್ಟ + ನಿರ್ದಿಷ್ಟ ಇದೆಯೇ ಹೊರತು, ನಿರ್ದಿಷ್ಟ + ವಾರ್ಗಿಕ ಇಲ್ಲ.

ಸಮಾಜದಲ್ಲಿ ನಿರ್ದಿಷ್ಟ + ನಿರ್ದಿಷ್ಟ ಮಾದರಿಯ ವ್ಯಕ್ತಿನಾಮಗಳು ಇರುವ (ಶಿವಸ್ವಾಮಿ) ವಾರ್ಗಿಕ + ವಾರ್ಗಿಕ ಮಾದರಿಯ ವ್ಯಕ್ತಿನಾಮಗಳು ಬಳಕೆಯಲ್ಲಿವೆ. ಉದಾಹರಣೆಗೆ ಅಣ್ಣಯ್ಯ, ತಮ್ಮಯ್ಯ, ತಂಗಮ್ಮ ಮುಂತಾದ ವ್ಯಕ್ತಿನಾಮಗಳನ್ನು ಒಡೆದಾಗ ಅಣ್ಣ + ಅಯ್ಯ, ತಮ್ಮ + ಅಯ್ಯ, ತಂಗಿ + ಅಮ್ಮ ಎಂದು ಆಗುತ್ತದೆ. ಇಲ್ಲೂ ಸಹ ಮೊದಲನೆಯದು ನಿರ್ದಿಷ್ಟ ರಚನೆಯ ಘಟಕ. ವಾರ್ಗಿಕ ಎಂದರೆ ತಪ್ಪಾಗುತ್ತದೆ. ಏಕೆಂದರೆ ‘ಅಣ್ಣ’ ಎನ್ನುವುದು ವಾರ್ಗಿಕ ಎಂದು ಒಪ್ಪಿಕೊಂಡಿದ್ದೇವೆ ಅಂದ ಮೇಲೆ ಇಲ್ಲಿ ವಾರ್ಗಿಕ+ವಾರ್ಗಿಕ ಸೇರಿ ವ್ಯಕ್ತಿನಾಮಗಳು ಬಳಕೆಯಲ್ಲಿವೆ ಎಂದಾಯಿತು. ಇದು ವ್ಯಕ್ತಿನಾಮದ ವೈವಿಧ್ಯವನ್ನು ಸೂಚಿಸುತ್ತದೆ. ವ್ಯಕ್ತಿನಾಮದಲ್ಲಿ ನಿರ್ದಿಷ್ಟವೇ ಆಗಲಿ ವಾರ್ಗಿಕವೇ ಆಗಲಿ ಅದು ನಿಜನಾಮವಾಗಿ ಅಂದರೆ ನಿರ್ದಿಷ್ಟದಂತೆ ಕೆಲಸ ಮಾಡುವ ಘಟಕ ಮಾತ್ರ ಮುಖ್ಯ. ಒಂದೇ ಕುಟುಂಬದಲ್ಲಿ ಒಂದೇ ಹೆಸರನ್ನು ಮತ್ತೆ ಮತ್ತೆ ಇಡಲಾಗುತ್ತಿತ್ತು. ಕೆಲವು ಮನೆಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನ ಅದೇ ಹೆಸರಿನ ಜನರಿರುತ್ತಿದ್ದರು. ಆಗ ಅವರನ್ನು ಗುರುತಿಸಲು ಹೆಸರಿನ ಪದಾದಿಯಲ್ಲಿ ವಾರ್ಗಿಕಗಳು ಬರುವುದರಿಂದ ಬಂಧುತ್ವ ವಯಸ್ಸನ್ನು ಸೂಚಿಸುತ್ತವೆ.

ಉದಾ.

ದೊಡ್ಡ + ಅರಸ = ದೊಡ್ಡ ಅರಸ

ಚಿಕ್ಕ + ಅರಸ = ಚಿಕ್ಕ ಅರಸ

ದೊಡ್ಡ + ಜವರ = ದೊಡ್ಡಜವರ

ಚಿಕ್ಕ + ಜವರ = ಚಿಕ್ಕಜವರ

ದೊಡ್ಡ + ಮನಿ = ದೊಡ್ಡಮನಿ

ಚಿಕ್ಕ + ಮನಿ = ಚಿಕ್ಕಮನಿ

ದೊಡ್ಡ + ಸಿದ್ಧ = ದೊಡ್ಡಸಿದ್ಧ

ಚಿಕ್ಕ + ಸಿದ್ಧ = ಚಿಕ್ಕಸಿದ್ಧ

ಕೆಲವು ಸಮುದಾಯಗಳಲ್ಲಿ ವ್ಯಕ್ತಿನಾಮಗಳು ಸ್ತ್ರೀ ಮತ್ತು ಪುರುಷ ರಿಬ್ಬರಿಗೂ ಒಂದೇ ಮೂಲದ ಹೆಸರುಗಳಿರುತ್ತಿದ್ದು, ಸಂಬೋಧನೆಯಲ್ಲಿ ‘ಅ’ ಕಾರದಿಂದ ಅಂತ್ಯಗೊಂಡರೆ ಪುಲ್ಲಿಂಗ ಎಂದೂ ‘ಇ’ ಕಾರದಿಂದ ಅಂತ್ಯಗೊಂಡರೆ ಸ್ತ್ರೀಲಿಂಗವನ್ನು ಸೂಚಿಸುತ್ತದೆ. ಈ ನಿಯಮ ಎಲ್ಲ ಸಂದರ್ಭದಲ್ಲೂ ಸಾಧ್ಯವಿಲ್ಲ.

ಉದಾ.

ಪುರುಷ

ಪುಟ್ಟ

ಸಿದ್ಧ

ಮಾದ

ಬಸವ

ಮಾರ

ಕೆಂಚ

ಮಲ್ಲ

ನಂಜ

ರಂಗ

ಮಸಣ

ಸ್ತ್ರೀ

ಪುಟ್ಟಿ

ಸಿದ್ದಿ

ಮಾದಿ

ಬಸವಿ

ಮಾರಿ

ಕೆಂಚಿ

ಮಲ್ಲಿ

ನಂಜಿ

ರಂಗಿ

ಮಸಣೆ

 

ಹೀಗೆ ವ್ಯಕ್ತಿನಾಮಗಳಲ್ಲಿ ಹಲವಾರು ವೈವಿಧ್ಯತೆ ಇರುವುದನ್ನು ಕಾಣಬಹುದು. ಪ್ರಾದೇಶಿಕವಾಗಿ, ಸಾಮಾಜಿಕವಾಗಿ ವ್ಯಕ್ತಿನಾಮಗಳು ಬದಲಾವಣೆ ಹೊಂದುತ್ತವೆ. ಉದಾಹರಣೆಗೆ ಎಸ್.ಎಸ್.ಅಂಗಡಿ, ಎಸ್.ಎಸ್. ಹಿರೇಮಠ, ಎಸ್.ಎಸ್. ಪಾಟೀಲ್ ಮತ್ತು ಎಂ.ಬಿ. ಬಿರದಾರ್ ಮುಂತಾದ ಹೆಸರುಗಳಲ್ಲಿ ಅಂಗಡಿ, ಹಿರೇಮಠ, ಪಾಟೀಲ್ ಮತ್ತು ಬಿರದಾರ್ ವ್ಯಕ್ತಿಯ ನಾಮವಲ್ಲ. ಇದರಲ್ಲಿ ಮೊದಲ ಅಕ್ಷರ ಎಸ್.ಎಸ್.ಗಳು ನಿಜವಾದ ಸಂಕೇತಗಳು ಎಸ್.ಎಸ್.ಅಂಗಡಿ ಯಲ್ಲಿ ಸುರೇಶ್. ಇದು ನಿಜವಾದ ವ್ಯಕ್ತಿನಾಮ. ಇಲ್ಲಿ ಗೌಣವಾಗಿ ಕುಲನಾಮ ಮುಖ್ಯವಾಗಿ ಬಳಕೆಯಲ್ಲಿದೆ.

ಕೆಲವು ವ್ಯಕ್ತಿನಾಮ ಮೇಲಿನ ಮಾದರಿಯ ವ್ಯಕ್ತಿನಾಮಗಳಿಗೆ ವಿರುದ್ಧ ವಾಗಿರುವಂತಿದೆ. ಉದಾಹರಣೆಗೆ ಕೆ.ವೈ. ನಾರಾಯಣಸ್ವಾಮಿ, ಕೆ.ಬಿ.ಸಿದ್ಧಯ್ಯ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದ ಹೆಸರುಗಳಲ್ಲಿ  ಮೊದಲು ಅಂದರೆ ಕೆ.ಬಿ.ಎಚ್.ಎಸ್. ಸಂಕೇತ ಪದವಾಗಿದ್ದರೂ ಅದರ ಮುಂದಿರುವ ಸಿದ್ದಯ್ಯ, ವೆಂಕಟೇಶ್‌ಮೂರ್ತಿ ನಿಜವಾದ ವ್ಯಕ್ತಿನಾಮಗಳಾಗಿವೆ. ಚಂದ್ರ ಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಸುಬ್ಬು ಹೊಲೆಯಾರ್ ಮುಂತಾದ ವ್ಯಕ್ತಿನಾಮಗಳು ಮೇಲಿನ ಎರಡು ಮಾದರಿ ವ್ಯಕ್ತಿನಾಮಗಳಿಗಿಂತ ಭಿನ್ನವಾಗಿದೆ. ಇಲ್ಲಿ ಮೊದಲು ವ್ಯಕ್ತಿಯನಾಮ ಬಂದು, ನಂತರ ಆ ವ್ಯಕ್ತಿಯ ವೃತ್ತಿ ಜಾತಿ ಸೂಚಕವಾಗಿ ಬಳಕೆಯಲ್ಲಿರುವುದು ವಿಶೇಷ. ಮಾಧವ ಪೆರಾಜೆ, ಅಮರೇಶ ನುಗಡೋಣಿ, ಕರೀಗೌಡ ಬೀಚನಹಳ್ಳಿ, ರಹಮತ್ ತರೀಕೆರೆ, ಜೈನುಲ್ಲಾ ಬಳ್ಳಾರಿ ಮುಂತಾದ ಹೆಸರುಗಳಲ್ಲಿ ಮೊದಲು ವ್ಯಕ್ತಿನಾಮ ಬಂದು, ಅನಂತರ ಆ ವ್ಯಕ್ತಿಯ ಊರು ಬಂದಿದೆ. ಇದು ವ್ಯಕ್ತಿಯನ್ನು ಖಚಿತಪಡಿಸಲು ಪೂರಕವಾಗಿದೆ.

ವ್ಯಕ್ತಿನಾಮ ಮತ್ತು ರಾಚನಿಕತೆ : ವ್ಯಕ್ತಿನಾಮಗಳ ಸ್ವರೂಪ ಅರಿಯುವಲ್ಲಿ ರಾಚನಿಕತೆ ಬಹಳ ಮುಖ್ಯವಾದ ಭಾಗ. ವ್ಯಕ್ತಿನಾಮಗಳನ್ನು ಒಂದು ನಿರ್ದಿಷ್ಟವಾದ ಶಿಸ್ತಿಗೆ ಒಳಪಡಿಸುವಾಗ ರಾಚನಿಕತೆ ಅಗತ್ಯ ಇದೆಯೇ? ಎಂಬ ಪ್ರಶ್ನೆ ಎದುರಾಗಬಹುದು. ಸಂಬೋಧನೆ ಹಂತದಲ್ಲಿ ವ್ಯಕ್ತಿನಾಮಗಳಲ್ಲಾಗುವ ಬದಲಾವಣೆ ರಚನೆಯ ದೃಷ್ಟಿಯಿಂದ ವಿಶಿಷ್ಟವಾದುದು ಎಂದೆನಿಸುತ್ತದೆ. ನಾವು ಮೊದಲೆ ಗಮನಿಸಿದಾಗ ಎರಡು ವಾರ್ಗಿಕಗಳು ನಿರ್ದಿಷ್ಟದ ಸ್ಥಾನದಲ್ಲಿ ಬಳಕೆಯಾಗುವ ಸಂಬೋಧನೆಯಲ್ಲಿ ಆಗುತ್ತಿರುವ ಬದಲಾವಣೆ, ಭಾಷಾ ಶಾಸ್ತ್ರದ ದೃಷ್ಟಿಯಿಂದ ಗಮನಿಸುವಂತಹ ಅಂಶ. ಕೆಲವು ಅಂಶಗಳನ್ನು ನೋಡಬಹುದು.

ಅ. ಅಣ್ಣಗೌಡ ವ್ಯಕ್ತಿನಾಮದಲ್ಲಿ ರಚನೆಯ ದೃಷ್ಟಿಯಿಂದ ಮೂರು ಘಟಕಗಳಾಗಿ ವಿಭಜನೆ ಮಾಡಬಹುದು. ಅಣ್ಣ + ಅಯ್ಯ + ಗೌಡ ಎಂದು ಸಂಬೋಧನೆ ಹಂತದಲ್ಲಿ ‘ಅಯ್ಯ’ ಲೋಪವಾಗಿ ಅಣ್ಣ + ಗೌಡ ಎಂಬ ನಿರ್ದಿಷ್ಟ ಮತ್ತು ವಾರ್ಗಿಕ ಘಟಕಗಳು ಮಾತ್ರ ಉಳಿಯುತ್ತದೆ. ಅಣ್ಣ+ಗೌಡ ಎರಡು ಘಟಕಗಳು ಸೇರುವಾಗ, ‘ಏ’ ದೀರ್ಘಸ್ವರ ಸೇರಿಕೊಂಡು ‘ಅಣ್ಣೇಗೌಡ’ ಎಂದು ಸಂಬೋದನೆಯಲ್ಲಿದೆ.

ಆ. ಒಂದೇ ವ್ಯಕ್ತಿನಾಮದಲ್ಲಿ ನಿರ್ದಿಷ್ಟ ಸಂಬಂಧವಾಚಿ ವಾರ್ಗಿಕ ಸೇರಿಕೊಂಡು ಸಂಬೋಧನೆಯಲ್ಲಿರುವುದು ವಿಶೇಷ. ಉದಾ. ಹನುಮಣ್ಣ ನಾಯಕ

ಇ. ಮುದ್ದು ಹೆಸರುಗಳ ರಚನೆಯಲ್ಲಿ ಎರಡು ಮಾದರಿಯಿಂದ ಸಂಬೋಧನೆ ಆಗುತ್ತದೆ.

1. ನಿಜನಾಮವನ್ನು ಸಂಕ್ಷಿಪ್ತಗೊಳಿಸಿ ಸಂಬೋಧನೆ ಮಾಡುವುದು.

2. ನಿಜನಾಮವನ್ನು ಬಿಟ್ಟು ಪರ್ಯಾಯ ನಾಮವನ್ನು ಸಂಬೋಧನೆಗೆ ಅಳವಡಿಸಿಕೊಳ್ಳುವುದು. ಈ ಕ್ರಮವನ್ನು ಅಡ್ಡ ಹೆಸರು ಎಂತಲೂ ಕರೆಯಬಹುದು. ಈ ಎರಡು ಮಾದರಿ ಹೆಸರುಗಳ ನಿರ್ದಿಷ್ಟದ ಅಂತ್ಯಕ್ಕೆ ಇ ಮತ್ತು ಉ ಸೇರಿಕೊಂಡು ಸಂಬೋಧನೆ ಮಾಡುವ ಕ್ರಮವಿದೆ.

ನಿರ್ದಿಷ್ಟ ಅಂತ್ಯದಲ್ಲಿ ಇ ಸೇರಿಸಿ ಬಳಕೆ

ಕೆಂಪಮ್ಮ = ಕೆಂಪಿ

ನಂಜಮ್ಮ = ನಂಜಿ

ಶ್ರೀನಿವಾಸ = ಸೀನಿ

ಅಶೋಕ = ಅಸು

ಪದ್ಮ = ಪದ್ದಿ

ಕೆಲವು ಪ್ರದೇಶಗಳಲ್ಲಿ ಹೆಸರಿನ ನಿರ್ದಿಷ್ಟ ಮತ್ತು ವಾರ್ಗಿಕ ಎರಡು ಭಾಗ ಗಳಿಲ್ಲದೆ. ಪರ್ಯಾಯ ಹೆಸರೊಂದಿಗೆ ಸಂಬೋಧನೆಯಲ್ಲಿವೆ. ಪಿಂಕಿ, ಪುಟ್ಟಿ, ಪುಟ್ಟ, ಇತ್ಯಾದಿ…… ಹಾಗೆಯೇ ಕೆಲವು ಪ್ರದೇಶಗಳಲ್ಲಿ ತಂದೆಯ ಹೆಸರು ಜನ್ಮನಾಮ ಸೇರಿಸಿಕೊಂಡು ಬಳಕೆ ಮಾಡುತ್ತಿದ್ದಾರೆ.

ಉದಾಹರಣೆ ಎಂ. ವೆಂಕಟಸುಬ್ಬಯ್ಯ ಇತ್ಯಾದಿ. ಊರಿನ ಹೆಸರು ತಂದೆಯ ಹೆಸರು ಜನ್ಮನಾಮ ಮಾದರಿಯ ವ್ಯಕ್ತಿನಾಮಗಳಿವೆ.

ರಂ.ಶ್ರೀ.ಮುಗಳಿ

ಬಿ.ನಂ. ಚಂದ್ರಯ್ಯ, ತೀ.ನಂ. ಶ್ರೀಕಂಠಯ್ಯ ಇತ್ಯಾದಿ.

ಅದೇ ರೀತಿ ಊರಿನ ಹೆಸರು + ಜನ್ಮನಾಮ ಮಾದರಿಯ ಹೆಸರುಗಳಿವೆ.

ಉದಾಹರಣೆ ಮೈಲಹಳ್ಳಿ ರೇವಣ್ಣ, ಅಂಬಳಿಕೆ ಹಿರಿಯಣ್ಣ, ಇನ್ನೂ ಕೆಲವು ವ್ಯಕ್ತಿನಾಮಗಳು ಮೊದಲು ಜನ್ಮನಾಮ ಊರಿನ ಹೆಸರುಳ್ಳವು ಸಾಕಷ್ಟು ಸಂಬೋಧನೆಯಲ್ಲಿವೆ.

ಉದಾಹರಣೆ

ವೆಂಕಟೇಶ್ ಇಂದ್ವಾಡಿ

ಅಮರೇಶ ನುಗಡೋಣಿ

ಜೈನುಲ್ಲಾ ಬಳ್ಳಾರಿ

ರಹಮತ್ ತರೀಕೆರೆ

ಕರೀಗೌಡ ಬೀಚನಹಳ್ಳಿ

ಮೊಗಳ್ಳಿ ಗಣೇಶ ಇತ್ಯಾದಿ…

ಹಾಗೆಯೇ ಜನ್ಮನಾಮ + ಕುಲನಾಮ, ಜನ್ಮನಾಮ + ಪಿತೃನಾಮ + ಕುಲನಾಮ ಹೆಸರುಗಳು ಬಳಕೆಯಲ್ಲಿವೆ.

ಸುರೇಶ ಶಂಕರಪ್ಪ ಅಂಗಡಿ, ಬಸಪ್ಪ ದಾಸಪ್ಪ ಜತ್ತಿ, ಪಾಟೀಲ ಪುಟ್ಟಪ್ಪ ಮುಂತಾದವು. ಊರು ಜನ್ಮನಾಮ ಕುಲನಾಮ ಮಾದರಿಯ ಹೆಸರುಗಳಿಗೇನು ಬರಲಿಲ್ಲ. ಉದಾಹರಣೆಗೆ ಬಂಟ್ವಾಳ ಮಾಧವಶೆಣೈ. ಇಂಗ್ಲಿಶ್ ಭಾಷೆಯ ಪ್ರಭಾವ ವ್ಯಕ್ತಿನಾಮದ ಮೇಲೆ ಆಗಿದೆ. ಹೆಸರಿನ ಆರಂಭಕ್ಕೆ ಇಂಗ್ಲಿಶ್‌ನ ವರ್ಣ ಗಳನ್ನು ಇಟ್ಟುಕೊಂಡಿರುವುದು ವಿಶೇಷ, ಇದು ಸ್ತ್ರೀಯರ ಹೆಸರಿನಲ್ಲಿ ಪ್ರಮಾಣ ಕಡಿಮೆ ಇದೆ ಎನಿಸುತ್ತದೆ.

ಕೆ.ವೈ. ನಾರಾಯಣಸ್ವಾಮಿ

ಎಂ.ಎ. ಕಲಬುರ್ಗಿ

ಆರ್.ಸಿ. ಹಿರೇಮಠ

ವ್ಯಕ್ತಿನಾಮಗಳ ಕೊನೆಯಲ್ಲಿ ‘ನವರು’ ಮತ್ತು ‘ರವರು’ ಬಳಕೆ ಮಾಡುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಯಾವ ಯಾವ ವ್ಯಕ್ತಿನಾಮಗಳಿಗೆ ‘ನವರು’ ‘ರವರು’ ಬಳಕೆಮಾಡುತ್ತಿದ್ದೇವೆ. ಎಂಬುದಕ್ಕೆ ಕೆ.ವಿ. ನಾರಾಯಣ ಅವರು ಒಂದು ನಿಯಮ ರೂಪಿಸಿದ್ದಾರೆ. ಉದಯವಾಣಿ ಪದಪದಾರ್ಥ ಅಂಕಣದಲ್ಲಿ ಅವರು ಅಭಿಪ್ರಾಯಪಡುತ್ತಾ ಸಾಮಾನ್ಯವಾಗಿ ವ್ಯಕ್ತಿನಾಮಗಳ ಮುಂದೆ ನವರು, ರವರು, ರುಗಳು ಇತ್ಯಾದಿ ರೂಪಗಳನ್ನು ಸೇರಿಸಿ ಬಳಕೆ ಮಾಡಲಾಗುತ್ತಿದೆ. ಈ ರೂಪಗಳಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಕುರಿತು ಒಂದು ನಿಯಮದಲ್ಲಿಡುತ್ತಾರೆ. ನಾಮಪದದ ಅಂತಿಮ ಪರಿಸರದಲ್ಲಿ ಸ್ವಜಾತೀಯ ಒತ್ತಕ್ಷರವಾಗಿದ್ದಲ್ಲಿ ನವರು ಎಂತಲೂ, ವಿಜಾತೀಯ ಒತ್ತಕ್ಷರವಾಗಿದ್ದಲ್ಲಿ ರವರು ಸೇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗಾಗಿ, ರಾಮಣ್ಣನವರು, ಕೃಷ್ಣರವರು ಇತ್ಯಾದಿ. ಸ್ವಜಾತೀಯ ಅಥವಾ ವಿಜಾತೀಯ ದ್ವಿತ್ವಗಳಿಲ್ಲದಿರುವ ಸಂದರ್ಭ ದಲ್ಲಿ ಅವರು ಸೇರುತ್ತದೆ. ಉದಾಹರಣೆಗೆ ಡಾ. ಕೆ.ವಿ. ನಾರಾಯಣ ಅವರು ಕೆಲವು ಪ್ರದೇಶಗಳಲ್ಲಿ ರು ಇನ್ನೂ ಕೆಲವು ಪ್ರದೇಶಗಳಲ್ಲಿ ಗಳು ಸೇರಿಸುವುದುಂಟು.

ವ್ಯಕ್ತಿನಾಮ ಮತ್ತು ಚಾರಿತ್ರಿಕತೆ : ಒಂದು ನಿರ್ದಿಷ್ಟ ಸ್ಥಳದ ಇತಿಹಾಸವನ್ನು ತಿಳಿಯಲು ಶಾಸನಗಳು ಚರಿತ್ರೆ, ಜಾನಪದ, ಪುರಾಣ ಮತ್ತು ಕಲೆಗಳು ಹೇಗೆ ಸಹಾಯಕ್ಕೆ ಬರುತ್ತವೋ ಹಾಗೆಯೇ ವ್ಯಕ್ತಿನಾಮದ ಚರಿತ್ರೆಯನ್ನು ತಿಳಿಯಲೂ ಕೂಡ ಸಹಾಯಕ್ಕೆ ಬರುತ್ತವೆ. ವ್ಯಕ್ತಿನಾಮದಿಂದ ಒಂದು ನಿರ್ದಿಷ್ಟ ಸಮುದಾಯದ ಇತಿಹಾಸವನ್ನು ತಿಳಿಯಬಹುದಾಗಿದೆ. ಕಾಲಮಾನದ ಬದಲಾವಣೆ ಏನೇ ಆಗಿರಲಿ, ವ್ಯಕ್ತಿನಾಮಗಳು ಮಾತ್ರ ಚಾರಿತ್ರಿಕವಾಗಿ ಹಾಗೆ ಉಳಿದಿರುತ್ತವೆ. ಚಾರಿತ್ರಿಕ ವ್ಯಕ್ತಿಗಳ ಹೆಸರುಗಳನ್ನು ಇಟ್ಟುಕೊಂಡಿರುವವರು ಅವರಂತೆ ಸಾಹಸ ಮಾಡಬೇಕಿಲ್ಲ. ಚಾರಿತ್ರಿಕ ವ್ಯಕ್ತಿಗಳಂತೆ ಸಾಹಸ ಮಾಡಿದ್ದಕ್ಕೆ ಚಾರಿತ್ರಿಕ ವ್ಯಕ್ತಿಗಳ ಹೆಸರುಗಳು ಸಾಕಷ್ಟಿವೆ. ಅಂತಿಮವಾಗಿ ವ್ಯಕ್ತಿ ಗುರುತಿಸುವು ದಕ್ಕೆ ಒಂದು ನಿರ್ದಿಷ್ಟವಾದ ವ್ಯಕ್ತಿನಾಮ ಇರಬೇಕೇ ಹೊರತು ಅವರಂತೆ ಸಾಹಸ ಮಾಡಬೇಕಾಗಿಲ್ಲ. ನಿರ್ದಿಷ್ಟ + ವಾರ್ಗಿಕ ರಚನೆಗಳ ಆಧಾರದ ಮೇಲೆ ವ್ಯಕ್ತಿನಾಮಗಳ ಹಿಂದಿರುವ ಚರಿತ್ರೆಯನ್ನು ಪರಿಶೀಲಿಸಬಹುದು. ಗೌಡ, ನಾಯಕ, ಕಂಚುಗಾರ, ಗಾಣಿಗ, ತಳವಾರ, ಕಮ್ಮಾರ, ಮಡಿವಾಳ, ಸಾಲಿಗ, ಹಾರುವ ಮುಂತಾದ ವಾರ್ಗಿಕಗಳು ಹಿಂದೆ ವೃತ್ತಿಸೂಚಿನಾಮಗಳಾಗಿದ್ದವು. ಇಂದು ಜಾತಿಸೂಚಿ ನಾಮಗಳಾಗಿ ಸಂಬೋಧನೆಯಲ್ಲಿವೆ. ವಚನಕಾರರಲ್ಲಿ ಇವುಗಳ ನಿಜ ನಿಷ್ಪತ್ತಿ ಹೀಗಿದೆ.

ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ

ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ

ಕರ್ಣದೊಳು ಜನಿಸಿದವರುಂಟೆ

ಚಾರಿತ್ರಿಕ ವ್ಯಕ್ತಿಗಳ ಹೆಸರುಗಳ ಪ್ರಭಾವದಿಂದ ಆಯಾ ಆರಸರು, ರಾಜರು ಆಳ್ವಿಕೆ ಮಾಡಿದ ಪ್ರದೇಶಗಳಲ್ಲಿ ಅರಸರು, ರಾಜರುಗಳ ಹೆಸರುಗಳು ಬಳಕೆ ಯಲ್ಲಿರುವುದನ್ನು ನೋಡಬಹುದು. ಉದಾಹರಣೆಗೆ.

ಹಿರಿಯೋನೆ ತಿಮ್ಮಣ್ಣನಾಯಕ ಚಿಕ್ಕೋನು ಮದಕರಿನಾಯ್ಕ

ನಡುವೋನೆ ಜಂಪಳನಾಯ್ಕ ಅವರೆಲ್ಲಿ ಗೆದ್ದಿದ್ದಾರೆ

ಅಲ್ಲೆಲ್ಲ ಕೋಟಿಗಳ ಕಟ್ಟಿಸ್ಯಾರೆ!

ಈ ತ್ರಿಪದಿಯಲ್ಲಿ ದುರ್ಗದ ದೊರೆಗಳ ವಯಸ್ಸು ಬಂಧುತ್ವ, ಅವರ ಸಾಹಸ, ಶೌರ್ಯ, ಪರಾಕ್ರಮಗಳಿಂದ ಎಲ್ಲ ಕಡೆಗಳಲ್ಲಿ ಕೋಟೆ ನಿರ್ಮಿಸಿ ಅವುಗಳಿಗೆಲ್ಲ ತಮ್ಮ ಹೆಸರುಗಳನ್ನು ಇಟ್ಟಿದ್ದಾರೆ. ಇಂದಿಗೂ ಚಿತ್ರದುರ್ಗದ ಸುತ್ತಮುತ್ತಲ ಪ್ರದೇಶದಲ್ಲಿ ತಿಮ್ಮನಾಯಕ, ಮದಕರಿನಾಯಕ ಮತ್ತು ಜಂಪಳನಾಯ್ಕ ಎಂದು ನಿರ್ದಿಷ್ಟ ವಾರ್ಗಿಕ ಎಂಬೆರಡು ಮಾದರಿ ಹೆಸರುಗಳು ಸಂಬೋಧನೆಯಲ್ಲಿವೆ.

ಮೈಸೂರು ಮತ್ತು ಚಾಮರಾಜನಗರ ಪ್ರಾಂತ್ಯಗಳಲ್ಲಿ ಚಾಮರಾಜು, ಚಾಮಯ್ಯ, ಚಾಮಣ್ಣ, ಚಾಮಮ್ಮ ಮುಂತಾದ ಹೆಸರುಗಳು ಬಳಕೆಯಲ್ಲಿವೆ.

ಕಿತ್ತೂರು ಚೆನ್ನಮ್ಮನ ಪ್ರಭಾವದಿಂದ ಕಿತ್ತೂರು ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಚೆನ್ನ, ಚೆನ್ನಮ್ಮ, ಚಿನ್ನಮ್ಮ ಮುಂತಾದ ಹೆಸರುಗಳು ಬಳಕೆ ಯಲ್ಲಿವೆ. ಮುಸ್ಲಿಮ್‌ರು 16ನೇ ಶತಮಾನದಲ್ಲಿ ಪ್ರಬಲವಾದ ಆಡಳಿತದಿಂದ ನೇರವಾಗಿ ಹಿಂದುಗಳ ವ್ಯಕ್ತಿನಾಮ ಮತ್ತು ಸ್ಥಳನಾಮಗಳೆರಡರ ಮೇಲೂ ಪ್ರಭಾವ ಆಗಿದೆ. ಹುಸೇನಪ್ಪ, ಸುಲ್ತಾನಪ್ಪ, ಖಾಜಣ್ಣ, ಫಕೀರಪ್ಪ, ಹುಸೇನಮ್ಮ, ಸಾಬಮ್ಮ ಮುಂತಾದ ಹೆಸರುಗಳಲ್ಲಿ ಹಿಂದುಗಳ ಹೆಸರಿನ ಜತೆ ಮುಸ್ಲಿಮರ ಸ್ತ್ರೀ ಮತ್ತು ಪುರುಷರ ಹೆಸರಿನ ಪ್ರಭಾವ ಆಗಿರುವುದು ತಿಳಿಯುತ್ತದೆ. ಈ ಮಾದರಿ ಹೆಸರುಗಳಲ್ಲಿ ನಿರ್ದಿಷ್ಟ ಭಾಗದಲ್ಲಿ ಮುಸ್ಲಿಂ ಸ್ತ್ರೀ ಮತ್ತು ಪುರುಷರ ಹೆಸರು ಕಾಣಿಸಿಕೊಂಡರೆ, ವಾರ್ಗಿಕದಲ್ಲಿ ಹಿಂದೂಗಳ ಸ್ತ್ರೀ ಮತ್ತು ಪುರುಷರ ಹೆಸರು ಕಂಡುಬರುತ್ತವೆ.

12ನೇ ಶತಮಾನದಲ್ಲಿ ವಚನ ಸಾಹಿತ್ಯದ ಪ್ರಭಾವದಿಂದ ಶರಣಬಸವ, ಶರಣಬಸಪ್ಪ, ಶರಣಪ್ಪ, ಬಸಪ್ಪ, ಶರಣಮ್ಮ, ಬಸವಣ್ಣದೇವರು ಮುಂತಾದ ಹೆಸರು ಹಾಗೆಯೇ ಚಾಮರಾಜನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾದರಚನ್ನಯ್ಯ, ಹೊಲೆಯರ ಹೊನ್ನಯ್ಯ ಹೆಸರುಗಳಲ್ಲಿ ನಿರ್ದಿಷ್ಟ ಭಾಗ ಮಾತ್ರ ಬಳಕೆಯಲ್ಲಿದೆ. ಉದಾಹರಣೆಗೆ ಚನ್ನಮ್ಮ, ಹೊನ್ನಯ್ಯ, ಹೀಗೆಯೇ ಅಕ್ಕಮಹಾದೇವಿ, ಗಾಂಧಿಪುಟ್ಟ ಮಾದಯ್ಯ, ರಮೇಶ್‌ಗಾಂಧಿ, ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರವೀಂದ್ರನಾಥ ಠಾಕೂರ್, ಜಯಪ್ರಕಾಶ್ ನಾರಾಯಣ, ಗೌತಮಬುದ್ಧ, ವಿವೇಕಾನಂದ, ಪರಮಹಂಸ ಮುಂತಾದ ದಾರ್ಶನಿಕರ, ರಾಜಕೀಯ ವ್ಯಕ್ತಿಗಳ ಹೆಸರುಗಳು ಬಳಕೆಯಲ್ಲಿವೆ.

ವ್ಯಕ್ತಿನಾಮ ಮತ್ತು ಸಾಮಾಜಿಕತೆ : ಒಂದು ನಿರ್ದಿಷ್ಟ ಸಮಾಜದ ರಚನೆ ಅಥವಾ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಲು ವ್ಯಕ್ತಿನಾಮಗಳು ಸಹಾಯಕ ವಾಗಿವೆ. ವ್ಯಕ್ತಿನಾಮಗಳು ಸಮಾಜದಲ್ಲಿ ವ್ಯಕ್ತಿ ಮತ್ತು ಸಮಾಜದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಭಾರತೀಯ ಪರಿಸರದಲ್ಲಿ ಎರಡು  ಮಾದರಿ ಜನವರ್ಗಗಳಿವೆ. ಒಂದು ಧರ್ಮ ಮತ್ತು ಜಾತಿ. ಎರಡನೆಯದು ಆರ್ಥಿಕತೆ ಮತ್ತು ಸಾಮಾಜಿಕತೆಯ ಸ್ತರಗಳು. ಮುಖ್ಯವಾಗಿ ಜಾತಿ ಮತ್ತು ಧರ್ಮಗಳು ನಂಬಿಕೆ, ಸಂಸ್ಕೃತಿ, ಪರಂಪರೆ ಆಚರಣೆಗಳನ್ನು ಒಳಗೊಡಿದ್ದರೆ, ವೃತ್ತಿ, ಆದಾಯ ಮತ್ತು ಆರ್ಥಿಕ, ಸಾಮಾಜಿಕ ಸ್ತರಗಳನ್ನು ಸೃಷ್ಟಿ ಮಾಡುತ್ತವೆ. ವ್ಯಕ್ತಿನಾಮವನ್ನು ಕೇಳಿದ ತಕ್ಷಣ ಧರ್ಮವನ್ನು ನಿರ್ಣಯಿಸುವುದಕ್ಕೆ ಸಾಧ್ಯ. ಶಿವ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಶಂಕರ, ಬಸವ, ಮಹಾದೇವ, ಮಂಟೇಲಿಂಗ, ರಾಚಪ್ಪಾಜಿ ಮುಂತಾದವು ಹಿಂದೂ ಧರ್ಮವನ್ನು ಪ್ರತಿನಿಧಿಸಿದರೆ, ಅಕ್ಬರ್ ಅಬ್ದುಲ್, ರಹಮತ್ ರಫಿಕ್, ಅಕ್ರಮ್, ಫಾತಿಮಾ, ನಜ್‌ಮುನಿಷಾ ಮುಂತಾದ ಹೆಸರುಗಳು ಮುಸ್ಲಿಂ ಧರ್ಮವನ್ನು ಪ್ರತಿನಿಧಿಸುತ್ತವೆ. ಅದೇ ರೀತಿ ರಿಚರ್ಡ್, ಮೇರಿ, ಜೊಸೆಫ್, ಲೂಥರ್, ಜಾನ್‌ಸನ್, ಮಾರ್ಗರೆಟ್ ಮುಂತಾದ ಹೆಸರುಗಳು ಕ್ರಿಶ್ಚಿಯನ್ ಧರ್ಮವನ್ನು ಪ್ರತಿನಿಧಿಸುತ್ತವೆ. ಇಷ್ಟೇ ಅಲ್ಲದೆ ಹೆಸರುಗಳಿಂದ ಭಾಷಾಗಡಿಗಳನ್ನು ಗುರುತಿಸಲು ಸಾಧ್ಯ ಅಥವಾ ಇವರು ಅನ್ಯಭಾಷಿಕರು ಎಂದು ಖಚಿತವಾಗಿ ನಿರ್ಧರಿಸಲು ಸಾಧ್ಯ. ಸೆಲ್ವಿ, ಮುರುಗೇಶ್, ಮುರಗನ್, ಮಣಿಯನ್, ಮಣಿ ಮುಂತಾದ ಹೆಸರುಗಳು ತಮಿಳುನಾಡಿನ ಹೆಸರುಗಳೆಂದು ನಿರ್ಧರಿಸಬಹುದು. ಇದೇ ರೀತಿ ಬೇರೆ ಬೇರೆ ಭಾಷೆಗಳ ಪ್ರಭಾವವನ್ನು ಗುರುತಿಸಲು ಸಾಧ್ಯವಿದೆ.

ಹೆಸರುಗಳು ಮತ್ತು ವ್ಯಕ್ತಿ, ಜಾತಿ, ಸ್ತರದ ಅಂಶಗಳು : ಹೆಸರಿಗೂ ಸಮಾಜಕ್ಕೂ ಸಂಬಂಧವಿದೆ. ಅದೇ ರೀತಿ ಹೆಸರಿಗೂ ಸಮಾಜದಲ್ಲಿ ವಾಸಿಸುವ ಸಮುದಾಯದ ವೃತ್ತಿ ಸ್ತರ ಸಾಮಾಜಿಕ ಮತ್ತು ಆರ್ಥಿಕ ಸ್ತರಗಳಿಗೂ ಸಂಬಂಧವಿದೆ. ಹೆಸರಿನ ನಿರ್ದಿಷ್ಟ ಭಾಗದಿಂದ ಧರ್ಮ, ಲಿಂಗ, ಜಾತಿ ಮುಂತಾದ ಅಂಶಗಳನ್ನು ನಿರ್ಧರಿಸಬಹುದು. ವಾರ್ಗಿಕ ಭಾಗದಿಂದ ವ್ಯಕ್ತಿಯ ಜಾತಿ, ಸಾಮಾಜಿಕ ಸ್ತರಗಳನ್ನು ಗುರುತಿಸಬಹುದು. ಈ ವಿಚಾರವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನಾಮವಿಜ್ಞಾನ ಕೃತಿಯಲ್ಲಿ ಉಲ್ಲೇಖಿತವಾದ ಸಿದ್ದನಗೌಡ ಪಾಟೀಲರ ಪದ್ಯದಿಂದ ತಿಳಿದುಕೊಳ್ಳಬಹುದು.

ಅಯ್ಯನಾರ ಹುಡುಗ ಬಸಯ್ಯ ಅಂತ

ಗೌಡರ ಹುಡುಗ ಬಸವನಗೌಡ ಅಂತ

ಬಣಜಗೇರು ಉಳಿದ ಲಿಂಗಾಯತ

ಹುಡುಗ್ರು ಬಸವರಾಜ ಅಂತ

ಆ ಕರುವರ ಹುಡುಗ ಬಸಪ್ಪ ಅಂತ

ನಾ ಬಸ್ಯಾ ಅಂತಯಾಕಂದ್ರ ನಾಹೊಲ್ಯಾ ಅಂತ.

ಮೇಲಿನ ಪದ್ಯದಲ್ಲಿ ಬಸವ ಎಂಬ ನಿರ್ದಿಷ್ಟ ಭಾಗಕ್ಕೆ ಬೇರೆ ಬೇರೆ ವಾರ್ಗಿಕಗಳು ಸೇರಿಕೊಂಡು ಬೇರೆ ಬೇರೆ ಸಾಮಾಜಿಕ ವರ್ಗಗಳು ಆಗಿರುವುದನ್ನು ಕಾಣಬಹುದು. ಬಸವ ಎಂಬ ನಿರ್ದಿಷ್ಟ ಭಾಗಕ್ಕೆ – ಅಯ್ಯ – ಗೌಡ – ಅಪ್ಪ – ರಾಜ ಎಂಬ ವಾರ್ಗಿಕಗಳು ಸೇರಿಕೊಂಡು ಭಾರತೀಯ ಪರಿಸರದಲ್ಲಿ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುತ್ತಿವೆ.

ರಂಗರಾವ್ ರಂಗೇಗೌಡ ರಂಗಶೆಟ್ಟಿ ರಂಗಚಾರಿ ರಂಗಯ್ಯ

ರಂಗೇದೇವರು ಸಿದ್ದೇಗೌಡ  ಸಿದ್ದಶೆಟ್ಟಿ    ಸಿದ್ಧಚಾರಿ   ಸಿದ್ದಯ್ಯ     ಮೇಲಿನ ವ್ಯಕ್ತಿನಾಮಗಳ ರಾಚನಿಕತೆಯನ್ನು ಗಮನಿಸಿದಾಗ ಬೇರೆ ಬೇರೆ ಮಾದರಿ ವ್ಯಕ್ತಿನಾಮಗಳಿರುವುದು ಕಂಡುಬರುತ್ತದೆ. ಅ, ಆ, ಇ, ಈ ಮತ್ತು ಉ ಎಂಬ ಐದು ಮಾದರಿ ವ್ಯಕ್ತಿನಾಮಗಳಾಗಿ ವರ್ಗೀಕರಿಸಬಹುದು. ನಿರ್ದಿಷ್ಟ ಭಾಗ ಗಳಿಂದ ಯಾವುದೆ ಸಾಮಾಜಿಕತೆಯನ್ನು ವಿಭಜಿಸಲು ಸಾಧ್ಯವಿಲ್ಲ. ವಾರ್ಗಿಕಗಳಿಂದ ಆಯಾಯ ಜಾತಿ ವೃತ್ತಿಗಳನ್ನು ಸೂಚಿಸುವುದನ್ನು ಗಮನಿಸಬಹುದು. ಸೆಟ್ಟಿ ವಾರ್ಗಿಕವು ವ್ಯಾಪಾರಿ ವೃತ್ತಿಯನ್ನು ಸೂಚಿಸಿದರೆ, ಆಚಾರಿ ವಾರ್ಗಿಕವು ಮರಗೆಲಸ, ಚಿನ್ನದ ಕೆಲಸದ ವೃತ್ತಿಯನ್ನು ಸೂಚಿಸುತ್ತವೆ. ರಾವ್, ದೇವರು, ಅಪ್ಪ, ಅಣ್ಣ, ವಾರ್ಗಿಕಗಳು ಉನ್ನತ ಸಾಮಾಜಿಕ ವರ್ಗಗಳನ್ನು ಸೂಚಿಸುತ್ತವೆ. ಅಯ್ಯ ವಾರ್ಗಿಕವು ಕೆಳವರ್ಗದ ಸಾಮಾಜಿಕ ವರ್ಗವನ್ನು ಸೂಚಿಸುತ್ತವೆ. ಹೀಗೆ ವಾರ್ಗಿಕ ಭಾಗದ ಸಹಾಯದಿಂದ ಸಾಮಾಜಿಕತೆಯನ್ನು ತಿಳಿಯಬಹುದಾಗಿದೆ. ಇದು ಪುರುಷ ವ್ಯವಸ್ಥೆಯಲ್ಲಿ ನಿರ್ಧರಿಸುವ ಹಾಗೆ ಸ್ತ್ರೀಯರ ವ್ಯಕ್ತಿನಾಮಗಳ ಸಹಾಯದಿಂದ ಸಾಮಾಜಿಕ ವ್ಯವಸ್ಥೆಯನ್ನು ನಿರ್ಧರಿಸುವುದು ಸ್ವಲ್ಪ ಕಷ್ಟದ ಕೆಲಸ, ಸ್ತ್ರೀಯರ ಹೆಸರಿನಿಂದ ವೃತ್ತಿ, ಕುಲಕಸುಬುಗಳನ್ನು ನಿರ್ಧರಿಸುವುದು ಕಷ್ಟ. ಸ್ವಲ್ಪಮಟ್ಟಿಗೆ ಸಾಮಾಜಿಕತೆಯನ್ನು ನಿರ್ಧರಿಸಲು ಸಾಧ್ಯ. ಕೆಳಗಿನ ವ್ಯಕ್ತಿನಾಮಗಳ ಪಟ್ಟಿಯನ್ನು ಗಮನಿಸಿದಾಗ ತಿಳಿಯುತ್ತದೆ.

ಕಾಳಮ್ಮ

ತಿಬ್ಬಮ್ಮ

ಕುಳ್ಳಿಚನ್ನಮ್ಮ

ನಂಜಿ

ಮಾದಿ

ಬುಂಡ್ಗಿ

ರಮಾಬಾಯಿ

ರಮಾದೇವಿ

ಸುಮಿತ್ರಾಬಾಯಿ

ಲಕ್ಷ್ಮಿದೇವಿ

ಸರೋಜಮ್ಮ

ಜಗದಂಬ

ಮೇಲಿನ ಪಟ್ಟಿಯಲ್ಲಿ ಮತ್ತು ಎರಡು ಗುಂಪಿನಲ್ಲೂ ಅಮ್ಮ ಭಾಗ ಇರುವ ಇಲ್ಲದಿರುವ ವ್ಯಕ್ತಿನಾಮಗಳೆರಡು ಮಾದರಿಗಳಿವೆ. ಈ ವ್ಯಕ್ತಿನಾಮಗಳ ಎರಡನೇ ಭಾಗದ ಸಹಾಯದಿಂದ ಸಾಮಾಜಿಕತೆಯನ್ನು ತಿಳಿಯಲು ಸಾಧ್ಯವಿಲ್ಲ. ಪಟ್ಟಿಯಲ್ಲಿರುವ ವ್ಯಕ್ತಿನಾಮಗಳು ಉನ್ನತವರ್ಗದ ಸಾಮಾಜಿಕತೆಯನ್ನು ಪ್ರತಿನಿಧಿಸಿದರೆ, ಪಟ್ಟಿಯಲ್ಲಿರುವ ವ್ಯಕ್ತಿನಾಮಗಳು ಕೆಳವರ್ಗದ ಪ್ರತಿನಿಧಿಗಳಾಗಿವೆ.

ಸಾಮಾಜಿಕವಾಗಿ ವ್ಯಕ್ತಿನಾಮಗಳನ್ನು ಎರಡು ನೆಲೆಗಳಲ್ಲಿ ಅಧ್ಯಯನ ಮಾಡಲು ಸಾಧ್ಯ. 1. ಸಂಬೋಧನ ನೆಲೆ, 2. ಸಂಕಥನದಲ್ಲಿ ಬಳಕೆ. ಸಂಬೋಧನಾ ನೆಲೆಯಲ್ಲಿ ವ್ಯಕ್ತಿಯ ಪೂರ್ಣಹೆಸರು ಬಳಕೆಯಾಗದೆ, ಅಡ್ಡಹೆಸರೋ, ಮುದ್ದು ಹೆಸರೋ ಬಳಕೆಯಾಗುತ್ತಿರುವುದು ಸಾಮಾನ್ಯ. ಸಂಬೋಧನಾ ನೆಲೆಯಿಂದ ಬಳಕೆಯಾಗುವ ವ್ಯಕ್ತಿನಾಮಗಳ ಸಹಾಯದಿಂದ ಸಾಮಾಜಿಕ ವರ್ಗವನ್ನು ನಿರ್ಧರಿಸಬಹುದಾಗಿದೆ. ಇದನ್ನು ಒಂದು ನಿರ್ದೇಶನ ಮೂಲಕ ಸ್ಪಷ್ಟಪಡಿಸಿಕೊಳ್ಳೋಣ. ನಿರ್ದಿಷ್ಟ ವ್ಯಕ್ತಿಯೊಬ್ಬನ ಹೆಸರು ನಿಂಗರಾಜು ಎಂದಿಟ್ಟುಕೊಳ್ಳೋಣ. ಈತ ಮೂಲತಃ ಕೆಳವರ್ಗದವನಾಗಿದ್ದಾನೆ. ಮೇಲುವರ್ಗದವರು ಈತನನ್ನು ನಿಂಗ ಎಂದಷ್ಟೇ ಸಂಬೋಧನೆ ಮಾಡಬಹುದು. ಅದೆ ನಿಂಗರಾಜು ವ್ಯಕ್ತಿನಾಮದವನು ಉನ್ನತ ವರ್ಗಕ್ಕೆ ಸೇರಿದ್ದರೆ ಕೆಳವರ್ಗದವರು ಈತನನ್ನು ನಿಂಗರಾಜಪ್ಪ, ನಿಂಗರಾಜು ಅವರು ಎಂದೆ ಸಂಬೋಧಿಸುವುದು ವಾಡಿಕೆ. ಅಂದರೆ ವ್ಯಕ್ತಿನಾಮಗಳು ಸಂಬೋಧನೆಯಲ್ಲಿ ಸಾಮಾಜಿಕ ವರ್ಗಕ್ಕನುಗುಣವಾಗಿ ಹ್ರಸ್ವೀಕರಣ ಮತ್ತು ದೀರ್ಘೀಕರಣ ಗೊಳ್ಳುತ್ತದೆ. ಅಂದರೆ ಉನ್ನತ ವರ್ಗದವರ ವ್ಯಕ್ತಿನಾಮಗಳನ್ನು ಸಂಬೋಧನೆ ಮಾಡುವಾಗ ಗೌರವ ಸೂಚಕವಾಗಿಯೂ ಕೆಳವರ್ಗದವರ ವ್ಯಕ್ತಿನಾಮಗಳನ್ನು ಕೆಳಮಟ್ಟದ ಸಂಭೋದನೆಯಲ್ಲಿ ವ್ಯವಹರಿಸುತ್ತಿರುವುದು ಸತ್ಯಸಂಗತಿ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗದವರು ಕೆಳವರ್ಗದವರ ವ್ಯಕ್ತಿನಾಮಗಳನ್ನು ಸಂಬೋಧಿಸುವಾಗ ಕೆಲವು ಎರಡು ಅಕ್ಷರಗಳಿಗೆ ಸೀಮಿತ ಮಾಡಿಕೊಂಡರೆ, ಕೆಳವರ್ಗದವರು ಮೇಲ್ವರ್ಗದವರ ಹೆಸರುಗಳನ್ನು ಸಂಬೋಧನೆ ಮಾಡುವಾಗ ನಿಂಗರಾಜು ಎಂದಿದ್ದರೂ, ನಿಂಗರಾಜಪ್ಪ ಎಂದು ಗೌರವಸೂಚಕವಾಗಿ ಬಳಕೆ ಮಾಡುವುದು ಸಹಜವಾಗಿದೆ. ಸಂಬೋಧನೆ ಮಾಡುತ್ತಿರುವುದು ಕಂಡುಬರುತ್ತದೆ.

ಉದಾ: ರಾಚಯ್ಯ, ನಿಂಗಯ್ಯ, ಮಾರಯ್ಯ, ಸಿದ್ಧಯ್ಯ, ಕೆಂಪಯ್ಯ, ಹೆಸರುಗಳನ್ನು ಮೇಲ್ವರ್ಗದವರು ರಾಚ, ನಿಂಗ, ಮಾರ, ಸಿದ್ಧ ಮತ್ತು ಕೆಂಪ ಎಂದು ಸಂಬೋಧನೆ ಮಾಡುವರು. ಅದೇ ಕೆಳವರ್ಗದವರು ಮೇಲ್ವರ್ಗದವರ ಹೆಸರುಗಳನ್ನು ಸಂಬೋಧಿಸುವಾಗ ವಾರ್ಗಿಕ ಇಲ್ಲದಿದ್ದರೂ ಸೇರಿಸಿಕೊಂಡು ಬಳಕೆ ಮಾಡುವರು. ಉದಾಹರಣೆಗೆ ನಂಜುಂಡಶೆಟ್ಟಿ ನಂಜುಂಡಯ್ಯನವರು. ಲಿಂಗದೇವರು ಎಂದೇ ಸಂಬೋಧಿಸುತ್ತಾರೆ. ಕೆಲವು ಸಂದರ್ಭದಲ್ಲಿ ಕೆಳವರ್ಗ ದವರು ಮೇಲುವರ್ಗದವರ ಹೆಸರುಗಳನ್ನು ಸಂಬೋಧಿಸುವಾಗ ನಿರ್ದಿಷ್ಟ ಭಾಗವನ್ನು ಬಳಸಿದರೆ ಏಕವಚನದಲ್ಲಿ ಸಂಬೋಧಿಸಿದಂತೆ ಎಂದು ತಿಳಿದು ವಾರ್ಗಿಕ ಭಾಗವನ್ನು ಮಾತ್ರ ಬಳಕೆ ಮಾಡುವರು. ಉದಾಹರಣೆಗೆ ಮಸಣಶೆಟ್ಟಿ, ಮಸಣಗೌಡ್ರು, ಮಸಣಪ್ಪ ಮುಂತಾದ ವ್ಯಕ್ತಿನಾಮದವರನ್ನು ಶೆಟ್ರು, ಗೌಡ್ರು, ಅಪ್ಪ ಎಂದೇ ಸಂಬೋಧಿಸುತ್ತಾರೆ. ಇಲ್ಲಿ ಗೌರವಸೂಚಕವಾಗಿ ಬಳಕೆಯಾಗುತ್ತಿ ರುವುದು ಗಮನಿಸುವಂತಹ ಅಂಶ.

ಸಂಕಥನದಲ್ಲಿ ವ್ಯಕ್ತಿನಾಮಗಳ ಬಳಕೆ : ಡಾ. ಗುರುಪಾದ ಮರಿಗುದ್ದಿ ಅವರು ‘ಕುವೆಂಪು ಕಾದಂಬರಿಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯಲ್ಲಿ ಭಾಷಿಕ ವಿವೇಚನೆ ಎನ್ನುವ ಅಧ್ಯಾಯದಲ್ಲಿ ವ್ಯಕ್ತಿನಾಮಗಳನ್ನು ಕುರಿತು ಒಂದು ಪಟ್ಟಿ ನೀಡಿದ್ದಾರೆ. ಅದು ಜಾತಿವಾರು ಹೆಸರುಗಳಾಗಿವೆ. ಅಂದರೆ ಒಬ್ಬ ಸೃಜನಶೀಲ ಲೇಖಕ ಒಂದು ಸಂಕಥನ ಕಟ್ಟುವಾಗ ಹೇಗೆ ವ್ಯಕ್ತಿನಾಮಗಳು ಬಳಕೆ ಯಾಗುತ್ತವೆ. ಅವುಗಳ ಬಳಕೆಯಿಂದ ನಾವು ಸಾಮಾಜಿಕವಾಗಿ ಹೇಗೆ ವರ್ಗೀಕರಿಸಬಹುದು ಎಂಬುದು ಗಮನಿಸುವಂತಹ ಅಂಶ. ಡಾ. ಗುರುಪಾದ ಮರಿಗುದ್ದಿ ಅವರು ವ್ಯಕ್ತಿನಾಮಗಳನ್ನು ಹೀಗೆ ವರ್ಗೀಕರಿಸಿದ್ದಾರೆ.

ಒಕ್ಕಲಿಗರ ವ್ಯಕ್ತಿನಾಮಗಳು : ಅಣ್ಣಯ್ಯಗೌಡ, ಕಲ್ಲಯ್ಯಗೌಡ, ಚಂದ್ರಯ್ಯಗೌಡ, ಚಿನ್ನಪ್ಪಗೌಡ, ತಿಮ್ಮಣ್ಣಗೌಡ
ಬ್ರಾಹ್ಮಣರ ವ್ಯಕ್ತಿನಾಮಗಳು : ಕಿಟ್ಟಿ, ಐತಾಳ, ನಾರಾಯಣಭಟ್ಟ, ಮಂಜುಭಟ್ಟ, ರಾಮಭಟ್ಟ, ವೆಂಕಪ್ಪಯ್ಯ
ಸೆಟ್ಟರ ವ್ಯಕ್ತಿನಾಮಗಳು : ಅನಂತ, ಐಗಳು, ಅಂತಕ್ಕ, ಕಾವೇರಿ, ಕೃಷ್ಣಯ್ಯಸೆಟ್ಟಿ, ಗಂಗೆ, ತಿಮ್ಮಪ, ರಂಗಪ್ಪ
ಹಳೆ ಪೈಕದವರ ವ್ಯಕ್ತಿನಾಮಗಳು: ಕಾಡಿ, ಚಾಡಿ, ತಿಮ್ಮ, ತಿಮ್ಮನಾಯ್ಕ, ಪುಟ್ಟನಾಯ್ಕ, ಬುಕುಡ, ಯಂಕೆ, ಯಂಗ
ಬಿಲ್ಲವರ ವ್ಯಕ್ತಿನಾಮಗಳು : ಅಕ್ಕಣಿ, ಐತ, ಕಾಡಿ ಕುದುಕ, ಚೀಂಕ್ರ, ದೇಯಿ, ಪಿಜಿಣ, ಬಗ್ರ, ಬಾಗಿ
ಹೊಲೆಯರ ವ್ಯಕ್ತಿನಾಮಗಳು : ಕರಿಸಿದ್ಧ, ಕೆಂಚ, ಗಂಗ, ಗಿಡ್ಡಿ, ಗುತ್ತಿ, ದೊಡ್ಡಬೀರ, ಪುಟ್ಟಲಕ್ಕಿ, ಸಣ್ಣ, ಸಿದ್ದಿ, ಸೇಸಿ
ಇತರ ವ್ಯಕ್ತಿನಾಮಗಳು : ಅಜ್ಜೀಸಾಬು (ಮುಸ್ಲಿಂ), ಅಪ್ಪಣ್ಣಯ್ಯ
(ಕಾಡುಕೊಂಕಣಿ), ಕಣ್ಣಾಪಂಡಿತ
(ಮಲೆಯಾಳಿ), ಜಾಕಿ (ಕ್ರಿಶ್ಚಿಯನ್ಸ್),
ನಂಜು (ಕುಂಬಾರ) ಇತ್ಯಾದಿ

ವ್ಯಕ್ತಿನಾಮಗಳು ಬದಲಾವಣೆಯ ಸ್ಥಿತ್ಯಂತರಗಳು : ಇಂದು ಅನೇಕ ಕಾರಣ ಗಳಿಂದ ವ್ಯಕ್ತಿನಾಮಗಳು ಬದಲಾವಣೆಗೆ ಒಳಗಾಗುತ್ತಿವೆ. ಅದು ಅನಿವಾರ್ಯ ಕೂಡ. ವ್ಯಕ್ತಿಯು ವಾಸಿಸುವ ಸಮುದಾಯ ಆಧುನೀಕರಣಗೊಂಡಂತೆ ವ್ಯಕ್ತಿನಾಮಗಳು ಮೊದಲಿದ್ದ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿವೆ. ವ್ಯಕ್ತಿಯು ಶೈಕ್ಷಣಿಕವಾಗಿ ಮುಂದುವರಿದೆಂತೆಲ್ಲ ವ್ಯಕ್ತಿನಾಮಗಳನ್ನು ಪುನರ್‌ಪರಿಶೀಲನೆಗೆ ಒಳಗು ಮಾಡುತ್ತಾನೆ. ಈ ವಿಚಾರವನ್ನು ಕೆಲವು ನಿದರ್ಶನಗಳೊಂದಿಗೆ ಪರಿಶೀಲಿಸಬಹುದು.

ನಂಜಯ್ಯ

ಕೆಂಚಯ್ಯ

ನಿಂಗರಾಜು

ಸಿದ್ದಮ್ಮ

ಹನುಮಿ

ನಂದನಕುಮಾರ್

ಜ್ಞಾನಪ್ರಕಾಶ

ಶರತ್ ಮತ್ತು ಸಾಗರ್

ಶೀಲದೇವಿ

ಮೈತ್ರಿ

ಇದು ಒಂದು ಮಾದರಿಯ ಬದಲಾವಣೆಯಾದರೆ, ಈ ಪ್ರಕ್ರಿಯೆಗೆ ವಿರುದ್ಧವಾಗಿ ವ್ಯಕ್ತಿನಾಮಗಳು ಬದಲಾವಣೆಗೆ ಒಳಗಾಗುತ್ತಿವೆ. ಅಂದರೆ ಹಿಂದೆ ವ್ಯಕ್ತಿನಾಮಗಳ ರಾಚನಿಕ ನೆಲೆಯಲ್ಲಿ ವಾರ್ಗಿಕಗಳನ್ನು ಬಿಟ್ಟು ಬಳಕೆ ಮಾಡಿರುವುದು ವ್ಯಕ್ತಿನಾಮಗಳ ಚರಿತ್ರಾರ್ಹವಾದ ವಿಚಾರ, ಆದರೆ ಇಂದು ಮತ್ತೆ ಹಳೆಯ ಮಾದರಿಗೆ ಹಿಂದಿರುಗುತ್ತಿರುವುದು ಗಮನಿಸುವಂತಹ ಅಂಶ ವಾಗಿದೆ. ಇದಕ್ಕೆ ಕಾರಣಗಳು ಇಲ್ಲದೆ ಇಲ್ಲ. ರಾಜಕೀಯವಾಗಿ, ಸಾಮಾಜಿಕವಾಗಿ ಸಂಘಟನೆ ಆಗುವುದು ಅನಿವಾರ್ಯವಾಗಿದೆ. ಆ ಹಿನ್ನಲೆಯಿಂದ ನಿರ್ದಿಷ್ಟಭಾಗವನ್ನು ಮಾತ್ರ ಬದಲಾವಣೆ ಮಾಡಿಕೊಂಡು ವಾರ್ಗಿಕವನ್ನು ಸಾಮಾಜಿಕವಾಗಿ, ಜಾತಿಸೂಚಕವಾಗಿಯೇ ಬಳಕೆ ಮಾಡಲಾಗುತ್ತಿದೆ.

ಉದಾ.

ಅಂಬರೀಷ್

ಮಸಣಾಶೆಟ್ಟಿ

ರಾಮನಾಯ್ಕ

ಅಭಿಷೇಕ್‌ಗೌಡ

ಮಹೇಂದ್ರಶೆಟ್ಟಿ

ಪ್ರಪುಲ್ಲನಾಯ್ಕ

ಚಾರಿತ್ರಿಕವಾಗಿ ವ್ಯಕ್ತಿನಾಮಗಳನ್ನು ಅಧ್ಯಯನ ಮಾಡಿದಾಗ ಹಿಂದೂ ಯೇತರ ವ್ಯಕ್ತಿಗಳು ಹಿಂದೂಧರ್ಮದ ಹೆಸರುಗಳನ್ನು, ಹಿಂದು ಧರ್ಮದ ವ್ಯಕ್ತಿಗಳು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಹೆಸರುಗಳನ್ನು ಇಟ್ಟು ಕೊಳ್ಳುವುದಿಲ್ಲ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹಿಂದುಗಳು ಇಸ್ಲಾಂ ಧರ್ಮದ ಹೆಸರುಗಳನ್ನು ಭಾವೈಕ್ಯತೆ ಸಂಕೇತವಾಗಿ ಇಟ್ಟುಕೊಂಡಿದ್ದಾರೆ. ಸಮಾಜದಲ್ಲಿ ವ್ಯಕ್ತಿನಾಮಗಳ ಅನುಕರಣೆ ವಿಶಿಷ್ಟವಾದುದು. ಈ ಮಾತು ವ್ಯಕ್ತಿನಾಮಕ್ಕಷ್ಟೇ ಸೀಮಿತವಾಗಿರದೆ ಅದು ಎಲ್ಲ ರೀತಿಯ ಸಾಮಾಜಿಕ ಸಮಸ್ಯೆಗಳಿಗೂ ಅನ್ವಯವಾಗುತ್ತದೆ. ಅಂದರೆ ಮೇಲುವರ್ಗದವರ ವ್ಯಕ್ತಿನಾಮ ಗಳನ್ನು ಕೆಳವರ್ಗದವರು ಸ್ವೀಕರಿಸಿ ಇಟ್ಟುಕೊಳ್ಳುತ್ತಾರೆ. ಕೆಳವರ್ಗದವರ ಹೆಸರುಗಳನ್ನು ಮೇಲ್ವರ್ಗದವರು ಇಟ್ಟುಕೊಳ್ಳುವುದು ಕಡಿಮೆ. ಇದರಿಂದ ವ್ಯಕ್ತಿನಾಮಗಳು ಸಮಾಜದಲ್ಲಿ ಮೇಲ್ಮುಖದಿಂದ ಕೆಳಮುಖದೆಡೆಗೆ ಹರಿಯುತ್ತದೆ.

ಒಟ್ಟಾರೆ ವ್ಯಕ್ತಿನಾಮಗಳ ಚಾರಿತ್ರಿಕತೆಯನ್ನು ಅಧ್ಯಯನ ಮಾಡಿದಾಗ ಕಂಡುಬರುವ ಅಂಶವೆಂದರೆ ಹೇಗೆ ತಲೆಮಾರಿನಿಂದ ತಲೆಮಾರಿಗೆ ವ್ಯಕ್ತಿನಾಮ ಗಳು ಬದಲಾವಣೆಯನ್ನು ಹೊಂದಿದೆ ಎಂಬುದನ್ನು ಲಂಬಾಣಿ ಸಮುದಾಯ ವನ್ನು ಗಮನದಲ್ಲಿಟ್ಟುಕೊಂಡು ನೋಡಬಹುದು.

ತಾತಾ ಅಜ್ಜಿ

ಚಿಕ್ಕಸಿದ್ದಶೆಟ್ಟಿ

ರಂಗಪ್ಪ

ಜಗ್ಗನಾಯ್ಕ

ಹಿರಿಯನಾಯ್ಕ

ದೇವಿಲಿಬಾಯಿ ಶಾಮ್ಕಿಬಾಯಿ

ತಂದೆ ತಾಯಿ

ಆನಂದ

ಚಿಕ್ಕಮಹಾದೇವಿ

ಭೀಮನಾಯ್ಕ

ಶೇಖರನಾಯ್ಕ

ಕೇಶರಿಬಾಯಿ

ರಾಮಿಬಾಯಿ

ಮಕ್ಕಳು

ಜ್ಞಾನಪ್ರಕಾಶ್

ರವಿತೇಜ

ಕುಮಾರ್

ಪ್ರಕಾಶ್

ಲಕ್ಷ್ಮಿ

ಮಂಜುಳ

ಮೇಲಿನ ಪಟ್ಟಿಯಿಂದ ತಿಳಿದುಬರುವ ಸಂಗತಿಯೆಂದರೆ ಲಂಬಾಣಿ ಸಮುದಾಯದಲ್ಲಿ ಮೊದಲನೆ ತಲೆಮಾರಿನ ಹೆಸರುಗಳು ಮುಂದಿನ ದಿನಗಳಲ್ಲಿ ಬಳಕೆಯಿಂದ ದೂರ ಉಳಿಯುತ್ತವೆ ಎಂಬುದು ಖಚಿತ. ಇದನ್ನು ಇಂದಿನ ಸಮುದಾಯದ ಈ ಮಾದರಿಯನ್ನೇ ಗಮನಿಸಿ ಹೇಳಬಹುದು. ಈ ಪ್ರಕ್ರಿಯೆ ಯನ್ನು ಇನ್ನುಳಿದ ಸಮುದಾಯಗಳಿಗೂ ವಿಸ್ತರಿಸಬಹುದು. ಇಲ್ಲಿ ನಿದರ್ಶನಕ್ಕೆ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿನಾಮಗಳು ಹೆಚ್ಚು ಹಳೆ ಮೈಸೂರು ಪ್ರಾಂತ್ಯವನ್ನು ಪ್ರತಿನಿಧಿಸುತ್ತವೆ. ವ್ಯಕ್ತಿನಾಮಗಳು ಪ್ರಾದೇಶಿಕ ವಾಗಿಯೂ ಬೇರೆಯಾಗಿರುತ್ತವೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಅವುಗಳ ಗುಣಲಕ್ಷಣಗಳು ಮಾತ್ರ ಒಂದೆ.