ಪತ್ರಿಕಾ ಸಂಪಾದಕರಿಗೆ ತಮ್ಮ ಸಂಪಾದಕೀಯ ಜತೆಗೆ ಪತ್ರಿಕೆಯ ಇತರ ಅಂಕಣಗಳನ್ನು ಬರಹಗಳನ್ನು ತುಂಬುವ ಕಾಲವೊಂದಿತ್ತು. ಇಂದಿನ ಭಾಂಡವಲುದಾರ ಪತ್ರಿಕೆಗಳಿಗೆ ಆದಾಯದ ಅನೇಕ ಮೂಲಗಳಿದ್ದು, ಅಂದಿನ ಸಾಹಿತ್ಯಿಕ ಪತ್ರಿಕೆಗಳ ಸಂಪಾದಕರು-ಪ್ರಕಾಶಕರು ಕೈಸುಟ್ಟುಕೊಂಡಿದ್ದೇ ಹೆಚ್ಚು. ಹೆಚ್ಚು ಸಿಬ್ಬಂದಿಯನ್ನಿಡಲಾಗದ ಪತ್ರಿಕೆಗಳ ಸಂಪಾದಕರು, ಹೆಚ್ಚಾಗಿ ತಾವೇ ಪತ್ರಿಕೆಯನ್ನು ತುಂಬಬೇಕಾಗುತ್ತಿತ್ತು. ಬಹಳಷ್ಟು ಬರಹಗಳಿಗೆ ಒಂದೇ ಹೆಸರಿದ್ದರೆ, ಓದುಗರಿಗೆ ಒಂದು ಬಗೆಯ ಮುಜುಗರವಾಗಬಹುದೆಂದು, ಬೇರೆ ಬೇರೆ ಹೆಸರುಗಳ ಮುಖವಾಡದಲ್ಲಿ ಲೇಖನಗಳನ್ನು-ಅಂಕಣಗಳನ್ನು ಪತ್ರಿಕೆಯಲ್ಲಿ ಭರ್ತಿಮಾಡುವುದು ವಾಡಿಕೆ, ಆನಂದಕಂದರೂ ಅದಕ್ಕೆ ಹೊರತಾಗಿರಲಿಲ್ಲ. ನಿಜನಾಮ ಪಡೆದ ಕೃಷ್ಣ ಶ್ರೀನಿವಾಸ ಬೆಟಗೇರಿ(ಪಾಟೀಲ) ಇವರು ಪ್ರಾರಂಭದಲ್ಲಿ ಬೆಟಗೇರಿ ಕೃಷ್ಣಶರ್ಮ ಎಂದು ಬರೆದು, ಅನಂತರ ‘ಆನಂದಕಂದ’ ಎಂಬ ಕಾವ್ಯನಾಮದಿಂದ ಹೆಸರು ಗಳಿಸಿದರು. ಕನ್ನಡ ಸಾಹಿತ್ಯದಲ್ಲಿ ಅದು ತನ್ನದೇ ಆದ ಒಂದು ಸ್ಥಾನವನ್ನು ಪಡೆದ ನಾಮಧೇಯವಾಯಿತು. ಆದರೂ ಕೂಡ ‘ಬೆಟಗೇರಿ ಕೃಷ್ಣಶರ್ಮ’ ಹೆಸರೂ ಕೂಡ ಪ್ರಚಲಿತವಾಗಿಯೇ ಇತ್ತು.

ಜಯಂತಿಯಲ್ಲಿ ನಾಲ್ಕೂ ನಿಟ್ಟಿನ ವಿದೇಶ ಸುದ್ದಿಗಳನ್ನು ವಿಶ್ಲೇಷಿಸಿ ಬರೆದು ಪ್ರಕಟಿಸುವಾಗ ‘ಚಾಡಿಯ ಚಾಣಕ್ಯ’ ಎಂದೂ ಮತ್ತೊಂದು ಪ್ರಸಂಗದಲ್ಲಿ ‘ಜಯಂತಿಯ ಜೇನ್ನೊಣ’ ಎಂದೂ ಬರೆದುಕೊಂಡಿದ್ದಾರೆ. ವಿನೋದ ಲೇಖನಗಳನ್ನು, ವಿಶೇಷ ವರದಿಗಳನ್ನು ‘ಸೊಂತದ ಸುದ್ದೆಪ್ಪ’ ಎಂದು ಬರೆಯುತ್ತಿದ್ದರು. ಇದೇ ರೀತಿಯ ಬರಹಗಳಿಗೆ ‘ವಿಹಯಾರಿ “ಗುಡದಪ್ಪ’ ಎಂತಲೂ ಹೇಳಿಕೊಂಡಿದ್ದಾರೆ. ಗೀತೆಯ ಪ್ರಭಾವ ಹಾಗೂ ಕೃಷ್ಣನ ಆದರ್ಶಗಳಿಂದ ಪ್ರೇರಿತರಾಗಿ ‘ಸಾಹಿತ್ಯ ಸಂಜಯ’ ‘ಕುಂಜವಿಹಾರಿ’ ಎಂದೂ ಹೆಸರಿಸಿಕೊಂಡಿದ್ದಾರೆ.

ವಿಜಯನಗರದ ಇತಿಹಾಸ ಆನಂದಕಂದರ ಮೇಲೆ ತುಂಬ ಪ್ರಭಾವ ಬೀರಿದ್ದು, ಅಲ್ಲಿಯ ಮಂತ್ರಿಯ ಸಂಕೇತವಾಗಿ ‘ರಾಯರ ಅಪ್ಪಾಜಿ’ ‘ಸ್ನೇಹ ಗಂಭೀರ’ ಎಂದು ಕರೆದುಕೊಂಡಿದ್ದಾರೆ. ‘ಗೂಡದಾರಿನ ಶಾಖಾ ಮೃಗೇಂದ್ರ’ (ಬೆಟ್ಟಗೇರಿಯ ಮಂಗ), ‘ನಕಲಿ ನಾರಾಯಣಾಚಾರ್ಯರು’ ಇವೂ ರೂಪಾಂತರದ ಹೆಸರುಗಳು. ಬಿ.ಪಿ. ಎಸ್‌.ರಾವ್‌, ಬೆಟಗೇರಿ ಪಾರ್ಥಸಾರಥಿರಾವ್‌, ಕೃಷ್ಣಕಿಂಕರ, ಬೆ.ಕೃ.ಶ.,ವಿಹಂಗಮ, ಸಾಮಾಜಿಕ, ನಿರೀಕ್ಷಕ, ಶ್ರೀ ಮಲ್ಲಿನಾಥ, ಕಾಲಭೈರವ, ಬೀರಣ್ಣ, ಕೃ.ಶ್ರೀ. ಬೆ., ಮಧುಕರ, ವಿಚಾರಿ ಈ ರೀತಿ ೨೧ ವಿವಿಧ ಹೆಸರುಗಳನ್ನಿರಿಸಿಕೊಂಡು ಆನಂದಕಂದರು ಬರೆದಿದ್ದೇ ಒಂದು ದಾಖಲೆ.