. ವ್ಯತಿರೇಕ

ಆದಿ-ಪ್ರ[1]ತೀತಿಯಂ ಶಬ್ದಾದರದಿಂ ಸದೃಶಮಾದ ವಸ್ತು-ದ್ವಯದೊಳ್ |

ಭೇದಮನಱಪುವುದುಚಿತ-ಗುಣೋದಯ-ಕೃತ-ವಾಕ್ಯ-ವಿಸ್ತರಂ ವ್ಯತಿರೇಕಂ ||೩೯||

i) ಏಕವ್ಯತಿರೇಕ

ಶ್ರೀ-ವನಿತಾ-ಪ್ರಸವದಿನಾ ಲಾವಣ್ಯದಿನತಿ-ಗಭೀರ-ಭಾವದೆ ನೀನಿಂ- |

ತಾ ವಾರಿಧಿಯಂ ಪೋಲ್ತಯ್ ಕೇವಲಭೇದಂ ದ್ವಿತೀಯ-ಲಲಿತಾಕಾರಂ ||೪೦||

೩೭. ‘ಅಶೋಕದ ತಳಿರುಗಳಿಂದ ಮಾಡಿದ ಹಾಸಿಗೆ ನನ್ನ ಮೈಯನ್ನು ತುಂಬಾ ಉರಿಸಿತು. ಉರಿಬೆಂಕಿಯನ್ನು ಹೋಲುವ (ಬಣ್ಣವಿರುವ) ಅದು ಬೆಂಕಿಯ ಸಮಾನವಾದ ಗುಣವನ್ನೇ ಹೊಂದಿರುವುದು ಯೋಗ್ಯವೇ ಇದೆ’. ಇದು ‘ಯುಕ್ತಾರ್ಥ’ವೆಂಬ ಅರ್ಥಾಂತರನ್ಯಾಸಪ್ರಕಾರ. *ಇದನ್ನೇ ದಂಡಿ ‘ಯುಕ್ತಕಾರಿ’ಯೆಂದು ಕರೆದು ಇದೇ ರೀತಿಯ ಲಕ್ಷ್ಯವನ್ನಿತ್ತಿದ್ದಾನೆ MM-೧೭೭ ರಲ್ಲಿ.*

೩೮. ಈ ಬಗೆಯಾಗಿ ಅರ್ಥಾಂತರನ್ಯಾಸದ ಪ್ರಭೇದಗಳನ್ನು ವಿದ್ವಾಂಸರು ಅರಿಯಬೇಕು. ‘ವ್ಯತಿರೇಕ’ದ ಲಕ್ಷಣ, ಲಕ್ಷ್ಯ, ಮತ್ತು ಅಂತರ್ಭೇದಗಳು ಮುಂದೆ ಉಕ್ತವಾಗಿವೆ-

೩೯. ‘ಶ್ರೀರಮಣಿಗೆ ಜನಕತ್ವ, ಲಾವಣ್ಯ, ಅತಿಶಯವಾದ ಗಾಂಭೀರ್ಯ- ಈ ಅಂಶಗಳಲ್ಲಿ ನೀನು ಸಮುದ್ರವನ್ನು ಹೋಲುತ್ತಿರುವೆ. ಆದರೆ ನೀನು ಬೇರೆ ಸುಂದರ ನರಾಕೃತಿಯನ್ನು ತಳೆದಿರುವುದೊಂದೇ ನಿಮ್ಮಿಬ್ಬರಲ್ಲಿರುವ ಭೇದ!’ *ನರಾಕಾರವು ರಾಜನೊಬ್ಬನಲ್ಲಿ ಮಾತ್ರ ಇರುವ ಅಂಶವಾಗಿದೆ; ಸಮುದ್ರದಲ್ಲಿ ಅದಿಲ್ಲ. ಹೀಗೆ ಒಬ್ಬನಲ್ಲಿ ಮಾತ್ರ ಇರುವ ಭೇದದಿಂದ ಇಬ್ಬರಿಗೂ ವ್ಯತ್ಯಾಸವಿದೆಯೆಂಬುದು ತಿಳಿಯುವಾಗ ಅದು ‘ಏಕವ್ಯತಿರೇಕ’ವೆನಿಸುತ್ತದೆ. ಹೋಲಿಸಿ-ದಂಡಿ ಐಐ -೧೮೨.*

ii) ಉಭಯವ್ಯತಿರೇಕ

ಪರಮೋದಯರಿರ್ ಕಮಲಾಕರ-ಭೋಧಕರಿರ್ ದಿನೇಶನುಂ ನೀನುಂ ಭಾ- |

ಸ್ಕರನನಿಯತವೃತ್ತಕ್ರಮನರಸಾ ನಿನ್ನಂತೆ ನಿಯತವೃತ್ತಸ್ಥಿ[2]ತನೇಂ ||೪೧||

iii) ಶ್ಲೇಷವ್ಯತಿರೇಕ

ಪರಿಣತ-ಗುಣರಿರ್ ಕಾಂತೋತ್ಕರರಿರ್ ನಿಜ-ಸೌಖ್ಯರಿರ್ ನಿಶಾ-ನಾಯಕನುಂ |

ನರಪಾ ನೀನುಂ ದೋಷಾಕರನಾ ಶಶಿ ನೀನುದಾರ-ಗುಣ-ಸಮುದಯನಯ್ ||೪೨||

iv) ಸಾಕ್ಷೇಪವ್ಯತಿರೇಕ

ಅಲಘು*ಭುಜನಾಗಿಯುಂ ನಿಶ್ಚಲನಾಗಿಯುಮಖಿಳ-ಭೂಭೃದುತ್ತಂಗತೆಯೊಳ್ |

ನೆಲಸಿಯುಮೆಯ್ದದು ನಿನ್ನಾ ವಿಲಸಿತಮಂ ಮೇರು ಕಠಿನ-ಭೋಗಾಧಾರಂ ||೪೩||

೪೧. ‘ರಾಜನೆ, ನೀನೂ ಸೂರ್ಯನೂ (ಇಬ್ಬರೂ ಒಂದೇ ಸಮವಾಗಿ) ಪರಮೋದಯವುಳ್ಳವರು, ‘ಕಮಲಾಕರಬೋಧಕರು’ *ಸೂರ್ಯನು ಕಮಲವನ್ನು ಅರಳಿಸುವವನು ಮತ್ತು ರಾಜನು ಲಕ್ಷಿಯ ಕರವಿಡಿದು ನಡೆವವನು; ಇಲ್ಲಿ ಉಭಯಾರ್ಥಕ ಶ್ಲೇಷಯಿದೆ; ‘ಕಮಲಾ’ ಎಂದರೆ ಲಕ್ಷ್ಮಿ-“ಕಮಲಾ ಶ್ರೀಃ ಹರಿಪ್ರಿಯಾ” -ಅಮರಕೋಶ.*ಆದರೆ ಸೂರ್ಯನ ಸಂಚಾರ ಅನಿಯತವಾದ ವೃತ್ತದಲ್ಲಿಯೇ ವಿನಾ ನಿನ್ನಂತೆ ಅವನು ನಿಯತವಾದ ವೃತ್ತದಲ್ಲಿರಬಲ್ಲನೇನು?’ *ಅನಿಯತ=ನಿಯಮಬದ್ಧವಲ್ಲದ ವೃತ್ತ=ಸಂಚಾರಪಥ ಮತ್ತು ನಿಯತ=ಶಾಸ್ತ್ರಬದ್ಧವಾದ ವೃತ್ತ=ವರ್ತನೆ, ನಡೆವಳಿಕೆ; ಇಲ್ಲಿಯೂ ಉಭಯಾರ್ಥಗಳಿವೆ. ಇಲ್ಲಿ ಸೂರ್ಯನಲ್ಲಿರುವ ಭಿನ್ನಗುಣವನ್ನೂ ಹಾಗೆಯೇ ರಾಜನಲ್ಲಿರುವ ಭಿನ್ನಗುಣವನ್ನೂ ಬೇರೆಬೇರೆಯಾಗಿ ಎತ್ತಿ ಹೇಳಿರುವುದರಿಂದ ಇದು ‘ಉಭಯವ್ಯತಿರೇಕ’.*

೪೨.‘ರಾಜನೆ, ನೀನೂ ನಿಶಾನಾಥನಾದ ಚಂದ್ರನೂ ಇಬ್ಬರೂ ಪರಿಣತ ಗುಣರು, (ಇಬ್ಬರೂ) ಕಮನೀಯತೆಯಿಂದ ತುಂಬಿದವರು, (ಇಬ್ಬರೂ) ನಿಜಸೌಖ್ಯವುಳ್ಳವರು. ಆದರೆ ಚಂದ್ರನು ‘ದೋಷಾಕರ’ *ದೋಷಗಳಿಗೆ ನೆಲೆಮನೆ ಮತ್ತು ರಾತ್ರಿಯನ್ನು ಉಂಟುಮಾಡುವನು ಎಂದು ಉಭಯಾರ್ಥ*; ನೀನು ಗುಣಪಪೂರ್ಣ. *ಇದು ಶ್ಲೇಷವ್ಯತಿರೇಕ. ಹೋಲಿಸಿ-ದಂಡಿ, ಐಐ -೧೮೫-೧೮೬.*

೪೩. ‘ನಿಡಿದೋಳಿದ್ದರೂ, ನಿಶ್ಚಲನಾದರೂ, ಸಕಲ ಭೂಧರಗಳಲ್ಲೂ ಅತ್ಯಂತ ಔನ್ನತ್ಯವನ್ನು ಪಡೆದಿದ್ದರೂ, ಕಠಿನ ಸ್ಪರ್ಶಕ್ಕೆ ಅಧಾರನಾಗಿರುವ ಮೇರು ನಿನ್ನ ಸೊಬಗನ್ನು ಪಡೆಯಲು ಶಕ್ಯವಿಲ್ಲ’. *ಇಲ್ಲಿ ಮೇರುವಿಗೂ ರಾಜನಿಗೂ ಕೆಲವೊಂದು ಅಂಶಗಳಲ್ಲಿ ಸಾಮ್ಯವಿದ್ದರೂ ಕೂಡ ಮೇರುವೇ ನಿಕೃಷ್ಟವೆಂದು ಶಬ್ದತಃ ಅದನ್ನು ಆಕ್ಷೇಪಿಸಿರುವುದರಿಂದ ಇದು ‘ಸಾಕ್ಷೇಪವ್ಯತಿರೇಕ’. ಹೋಲಿಸಿ-ದಂಡಿ, II-೧೮೭*.

v) ಸಹೇತುಕ ವ್ಯತಿರೇಕ

ಪಾರ್ಥಿವ-ಗುಣ-ಯುತಮಾಗಿಯುಮರ್ಥಿತ-ಫಲ-ದಾಯಿಯಾಗಿಯುಂ ನಿನ್ನೊಳ್ ತಾಂ |

ವ್ಯರ್ಥತೆಯಂ ಪಡೆಗುಂ ಪರಮಾರ್ಥವಚೇತನತೆಯಿಂದೆ ಕಲ್ಪ-ಕುಜಾತಂ ||೪೪||

vi) ವಾಚ್ಯವಾಗಿರುವ ಸದೃಶವ್ಯತಿರೇಕ

ಮದಮುದಿತಾಳಿಕದಂಬಂ ಮೃದುವಿಳಸಿತಸರಸಕೇಸರಂ ಸರಸಿರುಹಂ |

ವದನಮಿದು ಲೋಲ-ಲೋಚನ-ಮುದಿತಂ ಸ್ಮಿತ-ದಶನ-ವಸನ-ರಾಗೋಪಚಿತಂ ||೪೫||

vii) ಪ್ರತೀಯಮಾನವ್ಯತಿರೇಕ

ಶರದಂಬರಮುಂ ಮತ್ತೀ ಸರ-ವರಮುಂ ವಿಳಸದತನು-ಧವಳ-ಚ್ಛವಿಗಳ್ |

ಹರಿಣಾಂಕಾಲಂಕೃತಮಂಬರಮೀ ಕೊಳಮುಚಿತರಾಜಹಂಸೋತ್ತಂಸಂ ||೪೬||

 

೪೪. ನಿನ್ನಂತೆ ‘ಪಾರ್ಥಿವ ಗುಣಯುತ’ವಿದ್ದರೂ (ಪಾರ್ಥಿವ=ಕ್ಷತ್ರಿಯ) ಎಂದರೆ ಪೃಥ್ವಿಯ ಗುಣಸಂಬಂಧವಿದ್ದರೂ, ಪ್ರಾರ್ಥಿತ ಫಲವನ್ನೆಲ್ಲ ನೀಡುತ್ತಿದ್ದರೂ, ಕಲ್ಪವೃಕ್ಷವು ಅದರ ಅಚೇತನತ್ವದ ಕಾರಣದಿಂದ (ನಿನಗೆ ಹೋಲಿಸಿದರೆ) ವ್ಯರ್ಥವೇ (=ನಿರುಪಯುಕ್ತವೇ) ಎನಿಸುವುದು”. *ಇದೂ ಮೆಲ್ನೋಟಕ್ಕೆ ಮೇಲಿನ ಉದಾಹರಣೆಯಂತೆಯೇ ಇದ್ದರೂ ಅಲ್ಲಿಯಂತೆ ನಿಕರ್ಷಕಾರಣವನ್ನು ಇಲ್ಲಿ ವಿಶೇಷಣರೂಪದಲ್ಲಿ ಅಡಗಿಸಿಹೇಳಿಲ್ಲ. ಅದಕ್ಕೆ ಬದಲು ಪ್ರಧಾನವಾಗಿ ಒತ್ತಿ ಹೇಳಲಾಗಿದೆ- ‘ಅಚೇತನತೆಯಿಂದೆ’ ಎಂಬುದಾಗಿ. ಆದ್ದರಿಂದ ಇದು ಕಾರಣೋಪನ್ಯಾಸ ಸ್ಪಷ್ಟವಿರುವ ‘ಸಹೇತುಕ ವ್ಯತಿರೇಕ’. ಹೋಲಿಸಿ-ದಂಡಿ, II -೧೮೮.*

೪೫. ‘ಕಮಲವು ದುಂಬಿಗಳನ್ನು ಸೊಕ್ಕೇರಿಸಿ ಆನಂದಪಡಿಸಿದೆ, ಮೃದುವೂ ರಮಣೀಯವೂ ಸರಸವೂ ಆದ ಕೇಸರಗಳನ್ನು ತಳೆದಿದೆ. (ಅದರಂತೆ ಇದ್ದರೂ ಬೇರೆಯೇ ಆದ) ನಿನ್ನ ಈ ಮುಖವು ಚಂಚಲ ನೇತ್ರಗಳಿಂದ ಆನಂದಿತವಾಗಿದೆ, ನಗುವ ಚೆಂದುಟಿಗಳ ಕೆಂಪಿನಿಂದ ರಂಜಿತವಾಗಿದೆ’. ಇಲ್ಲಿ ಉಪಮಾನೋಪಮೇಯಗಳಿಗೆ(ಎಂದರೆ ಕಮಲ ಹಾಗು ಮುಖಗಳಿಗೆ) ಸಾದೃಶ್ಯವನ್ನು ವಾಚ್ಯವಾಗಿಯೇ ಎತ್ತಿಹೇಳಿ ಅವುಗಳ ಭೇದವನ್ನೂ ತಿಳಿಸಿರುವುದರಿಂದ ಇದು ವಾಚ್ಯವಾಗಿರುವ ‘ಸದೃಶ-ವ್ಯತಿರೇಕ’. ಹೋಲಿಸಿ-ದಂಡಿ, II -೧೯೩).

೪೬. ‘ಶರತ್ಕಾಲದ ಆಕಾಶವೂ ಈ ಸರೋವರವೂ ಎರಡೂ ಅತಿಶಯವಾದ ಬಿಳಿಯ ಕಾಂತಿಯನ್ನು ಪಡೆದಿವೆ; ಆದರೆ ಆಕಾಶವು ಚಂದ್ರನಿಂದ ಭೂಷಿತವಾಗಿದೆ, ಸರೋವರವು ರಾಜಹಂಸಗಳಿಂದ ವಿಭೂಷಿತವಾಗಿದೆ’ *ಇಲ್ಲಿ ಆಕಾಶಕ್ಕೂ ಸರೋವರಕ್ಕೂ ಇರುವ ಸಾಮ್ಯಾಂಶಗಳಲ್ಲಿ ಒಂದು (=ಬಿಳಿಯ ಕಾಂತಿ) ಶಬ್ದತಃ ಉಕ್ತವಾಗಿದೆ; ಉಕ್ತವಾಗದೆ ಇರುವ ಇತರ ಸಾಮ್ಯಾಂಶಗಳೂ ಗಮ್ಯವಾಗಿ ಎಂದರೆ ಸೂಚ್ಯವಾಗಿವೆ-ನಿರ್ಮಲತ್ವ, ವಿಶಾಲತ್ವ ಇತ್ಯಾದಿ. ಇದಲ್ಲದೆ ಇವುಗಳ ಭೇದವು ಕೂಡ ಸೂಚ್ಯವಾಗಿದೆಯೇ ಹೊರತು ವಾಚ್ಯವಾಗಿಲ್ಲ. ಆದ್ದರಿಂದ ಇದು ‘ಪ್ರತೀಯಮಾನ ಸದೃಶ-ವ್ಯತಿರೇಕ’. ಹೋಲಿಸಿ-ದಂಡಿ, II-೧೯೪-೫*.

viii) ಪ್ರತೀಯಮಾನಸಾದೃಶ್ಯ ವ್ಯತಿರೇಕ

ಅಮದಾಲಸ-ಲೋಚನ-ಲೀಲಮಪಾಸ್ತ-ಭ್ರೂ-ಲತಾ-ವಿಲಾಸ-ವಿಶೇಷಂ |

ಕಮಲಮದು ಪೋಲದೀ ನಿನ್ನ ಮುಖಮನಿಂತೆತ್ತಮುಕ್ತ-ಗುಣ-ಭೂಷಣಮಂ ||೪೭||

ಸಜಾತಿವ್ಯತಿರೇಕ

ಅನಲನಿ[3]ನದಾಹ್ಯ-ಕಳಂಕಮನನಿಳ-ತಪನೀಯ-ಧೂಳಿಯಾನಜಲ-ಕ್ಷಾ- |

ಲನಮನನಾ‘ಕಲ’*ತಪ?*ಶೋಷ್ಯಮನನಿಯತ-ಕರ್ದಮಮನಯಶಮಂತೊ[4]ಱೆಗಱವಂ ||೪೮||

೪೭. ಮದಾಲಸವಾದ ಲೋಚನಗಳ ಲೀಲೆಯಿಲ್ಲದ, ಭ್ರೂಲತಾವಿಲಾಸಾತಿಶಯವೂ ಇಲ್ಲದ, ಕಮಲವು ಈ ಗುಣಗಳೆಲ್ಲ ಸಮನ್ವಿತವಾಗಿರುವ ನಿನ್ನ ಮುಖವನ್ನು ಹೇಗೂ ಹೋಲಲಾರದು. *ಇಲ್ಲಿ ವಾಚ್ಯವಾಗಿ ಸಾದೃಶ್ಯವಿಲ್ಲವೆಂದು ವ್ಯತಿರೇಕವನ್ನಷ್ಟೇ ಎತ್ತಿಹಿಡಿಯಲಾಗಿದ್ದರೂ ಸೂಚ್ಯವಾಗಿ ಮಿಕ್ಕೆಲ್ಲ ಅಂಶಗಳಲ್ಲಿ-ಮೃದುತ್ವ, ಬಣ್ಣದ ಸೊಬಗು, ಸೌರಭ, ಅರಳಿದ ಸೌಂದರ್ಯ ಇತ್ಯಾದಿ- ಸಾದೃಶ್ಯವಿದೆಯೆಂದು ಸಹೃದಯರಿಗೆ ವೇದ್ಯವಾಗುತ್ತದೆ. ಆದ್ದರಿಂದ ಇದೂ ಪ್ರತೀಯಮಾನ ಸಾದೃಶ್ಯ-ವ್ಯತಿರೇಕದ ಇನ್ನೊಂದು ಪ್ರಕಾರ. ಹಿಂದಿನ ಪದ್ಯದಲ್ಲಿ ವ್ಯತಿರೇಕ ಪ್ರತೀಯಮಾನವಾಗಿದ್ದರೆ, ಈ ಪದ್ಯದಲ್ಲಿ ಸಾದೃಶ್ಯ ಪ್ರತೀಯಮಾನವಾಗಿದೆ. ಹೋಲಿಸಿ-ದಂಡಿ, ಐ-೧೮೯ ಮತ್ತು ೧೯೧*.

೪೮. ಅಪಕೀರ್ತಿಯೆಂಬುದು ಬೆಂಕಿಯಿಂದ ಸುಟ್ಟರೂ ಹೋಗದ ಕಳಂಕ; ಗಾಳಿಯಿಂದಲೂ ಚೊಕ್ಕಟವಾಗದ ಕೊಳೆ; ನೀರಿನಿಂದ ತೊಳೆಯಲಾಗದ ಮತ್ತು ಬಿಸಿಲಿನಿಂದ ಒಣಗಿಸಲಾಗದ ವಿಚಿತ್ರವಾದ ಒಂದು ಕೆಸರು. ಜಾಣನು ಅದನ್ನು ತೊರೆಯಬೇಕು. *ಇದು ದಂಡಿಯ II-೧೯೭ಕ್ಕೆ ಸಂವಾದಿಯಾದ ಒಂದು ಲಕ್ಷ್ಯವೆಂಬುದು ನಿಸ್ಸಂಶಯ. ಆ ಲಕ್ಷ್ಯ ಹೀಗಿದೆ-

“ಅರತ್ನಾಲೋಕಸಂಹಾರ್ಯಮಹಾರ್ಯಂ ಸೂರ್ಯರಶ್ಮಿಭಿಃ |

ದೃಷ್ಟಿರೋಧಕರಂ ಯೂನಾಂ ಯೌವನಪ್ರಭವಂ ತಮಃ ||”

‘ರತ್ನದ ಬೆಳಕಿನಿಂದ ಹೋಗಲಾಡಿಸಲಾಗದ, ಸೂರ್ಯನ ಕಿರಣಗಳಿಂದ ನಿವಾರಿಸಲಾಗದ, ಯೌವಜನ್ಯವಾದ ಕತ್ತಲೆ ಯುವಕರ ಕಣ್ಣನ್ನು ಕುರುಡಾಗಿಸುತ್ತದೆ’. ಇಲ್ಲಿ ಹೇಳಿರುವ ಕತ್ತಲೆಯೆಂಬುದು ಅಜ್ಞಾನ; ಇದು ಮಿಕ್ಕ ಪರಿಚಿತ ಕತ್ತಲೆಯ ಜಾತಿಯಂತೆ ಯಾವ ಬಾಹ್ಯ ಬೆಳಕಿನಿಂದಲೂ ಪರಿಹಾರ್ಯವಾದದ್ದಲ್ಲ ಎಂದು ಹೇಳಿರುವ ಕಾರಣ ‘ಸಜಾತಿವ್ಯತಿರೇಕ’ ಎಂದು ವ್ಯಾಖ್ಯಾಕಾರರಿಬ್ಬರೂ ಬರೆದಿದ್ದಾರೆ. ಪ್ರಸ್ತುತ ಪದ್ಯದಲ್ಲೂ ನಿಷೇಧಾವ್ಯಯಗಳು ಮೇಲಿಂದಮೇಲೆ ಬರುವುದರಿಂದ ಇದೇ ರೀತಿಯ ತಾತ್ಪರ್ಯ ಗ್ರಂಥಕಾರನಿಗೆ ವಿವಕ್ಷಿತವಾಗಿದೆ. ಲಿಪಿಕಾರರ ದೋಷಗಳಿಂದ ತಿಳಿಯದಂತಾಗಿದೆ. ಸೂಚಿತ ಪಾಠಾಂತರಗಳಿಂದ ಅರ್ಥಕ್ಲೇಶದ ಪರಿಹಾರ ಸುಕರವಾಗುತ್ತದೆ. ಈ ಪದ್ಯಕ್ಕೆ ಪ್ರೊ. ಎಂ. ವಿ. ಸೀತಾರಾಮಯ್ಯನವರ ಅರ್ಥ ತಪ್ಪುದಾರಿ ಹಿಡಿದಂತಿದೆ (ನೋಡಿ ಅವರ ಗ್ರಂಥ: ಪು. ೨೪೫). ಇಲ್ಲಿ ಅಪಕೀರ್ತಿಯನ್ನು ಕೆಸರೆಂದರೂ, ಮಿಕ್ಕ ಕೆಸರಿನ ಜಾತಿಯದಲ್ಲ; ಬೇರೆಯಾದ ವಿಶಿಷ್ಟ ಸ್ವರೂಪದ್ದು ಎಂದು ವರ್ಣಿಸಿರುವುದರಿಂದ ಇದು ‘ಸಜಾತಿವ್ಯತಿರೇಕದ’ ಉದಾಹರಣೆಯೇ ಸರಿ.*


[1] ಪ್ರತೀತಿಯಂ ‘ಮ, ಬ’.

[2] ಸ್ಥಿತನಯ್ ‘ಪಾ, ಸ್ಥತನೇ ‘ಮ’.

[3] ನನಸಾಧ್ಯಕಳಂಕ ‘ಪಾ, ಸೀ’-ಇವುಗಳಲ್ಲಿ ಅರ್ಥವೈಶದ್ಯವಿಲ್ಲವಾಗಿ ಇಲ್ಲಿ ಪಾಠ ಪರಿಷ್ಕೃತ.

[4] ತೊರೆಗರಿವಂ ‘ಬ’.