ನಿನ್ನೆ ಇದ್ದರು, ಇಂದು ಇಲ್ಲ,
ಅವರೆ ವೆಂಕಟರಾಯರು,
ಇಲ್ಲಿ ಕಣ್ಣೆದುರಿಗೇ ಬೈಸಿಕಲ್ಲನು ಹತ್ತಿ
ಪೇಟೆ ಕಡೆ ಹೋದವರು,
ಮತ್ತೆ ಬರಲಿಲ್ಲ,

ಬರಲಿಲ್ಲವೆಂದೆನೇ, ಬಂತು ಅವರ ಶರೀರ ;
ಅದೆಲ್ಲೋ ಆ ಬೀದಿಯಂಚಿನಲಿ ಸಂಜೆ
ಬಿದ್ದಿದ್ದರಂತೆ ;
ಹೊತ್ತು ಮುಳುಗಿದ ವೇಳೆ, ಕಂಡವರು ಕನಿಕರಿಸಿ
ನೀರು ತಟ್ಟಿದರಂತೆ.
ಕೈಯೊಳಗಿದ್ದ ಗಡಿಯಾರ ಮಾತ್ರ ಮಿಡಿಯುತಿತ್ತಂತೆ,
ಎದೆ ಮಾತ್ರ ಸ್ತಬ್ದವಂತೆ !

ಗಾಡಿಯಲಿ ಮನೆಗೆ ತಂದರು ಅವರ ;
ಮನೆಯೊಳಗೆ ಮನೆಯೊಡೆಯನಿರಲಿಲ್ಲ, – ಅಷ್ಟೆ.
ನೋಡಿದರೆ, ದೊಡ್ಡ ಕಾರ್ಖಾನೆಯಲಿ
ತಂತಿ ಕತ್ತರಿಸಿ ವಿದ್ಯುತ್ತು ಹೋದ ಬಗೆ :
ಇದ್ದ ಬೆಳಕಾರಿ ಚಕ್ರ – ತಿರುಗಣೆ ಎಲ್ಲ ಸ್ತಬ್ದ ಮೌನ.

ನಿನ್ನೆ ಇದ್ದರು ಅವರು, ಇಂದಿಲ್ಲ-
ಇಷ್ಟೆ ವ್ಯತ್ಯಾಸ ?
ಇದ್ದವರು ಇದ್ದಕಿದ್ದಂತೆ ಯಾವ ಟೆಲಿಫೋನನೋ
ಕೇಳಿ ಹೊರಟರೆ ಹೇಗೆ ?

ಇದ್ದುದನ್ನಲ್ಲಲ್ಲಿಯೇ ಬಿಟ್ಟು ನಡೆದರೆ ಇವರು
ಇದು ಎಂಥ ಯಾತ್ರೆ ?
ಸುತ್ತಲೂ ತುಂಬಿ ತುಳುಕಿ ಸಾಗುತ್ತಲೇ ಇದೆ
ಏನೂ ಆಗಿಲ್ಲವೆಂಬಂತೆ ನಡೆವ ಈ ಜಾತ್ರೆ !

ಹೊಳೆಯ ದಡದಲಿ ಕುಳಿತು ಬೆರಗಾದ ಮೂಕ ಮಗು-
ನೀರು ನೀರೋ ನೀರು,
ಮೊರೆವ ನೀರು,
ಕಸ ಕಡ್ಡಿ ತೇಲಿ ಬರುತ್ತಲಿವೆ ಉಕ್ಕೇರಿ ಬಂದಿರುವ
ಕೆಂಪುನೀರಿನ ಜೊತೆಗೆ.
ಬಂದುದೆಷ್ಟೋ ಏನೊ, ಹೋದುದೆಷ್ಟೋ ಏನೊ,
ಯಾರು ಇಟ್ಟಿದ್ದಾರೆ ಈ ಎಲ್ಲ ದಾಖಲೆ ?