ಇಲ್ಲ, ನಾವೂ ನೀವೂ ಸೇರಲೇ ಇಲ್ಲ ;
ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು
ಮಾತಾಡಲೇ ಇಲ್ಲ.
ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು ;
ತಂತಿ ಕಂಬಗಳುರುಳಿ,
ಇದ್ದ ಸೇತುವೆ ಮುರಿದು
ಅಲ್ಲಿನ ಗಾಡಿ ಅಲ್ಲೇ
ಇಲ್ಲಿನ ಗಾಡಿ ಇಲ್ಲೇ.

ಮುಚ್ಚಿದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ
ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ,
ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ,
ಆಮೆ ಚಿಪ್ಪುಗಳಲ್ಲಿ ಮೈಮರೆಸಿಕೊಂಡು ಲೊಚಗುಟ್ಟುತ್ತ,
ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ
ಹತ್ತಿದ ಹಣತೆಗಳನ್ನು ನಂದಿಸುತ್ತ
ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ.
ರಾಂಗ್ ನಂಬರಿಗೆ ಟೆಲಿಫೋನು ಮಾಡಿ
ಉತ್ತರಕ್ಕೆ ಕಾಯುತ್ತ ಕೂರುತ್ತೇವೆ.