ಜನಪದರು ಸ್ವಭಾವತಃ ಸಂಪ್ರದಾಯನಿಷ್ಠರು. ಅವರ ನಿತ್ಯಜೀವನದಲ್ಲಿ ಸಂಪ್ರದಾಯನಿಷ್ಠೆ ಎದ್ದು ಕಾಣುತ್ತದೆ. ಅವರು ತಮ್ಮ ಹಿರಿಯರ ಪರಂಪರಗತ ಸಂಪ್ರದಾಯಗಳೇ ಪರಮಪ್ರಮಾಣವೆಂದು ನಂಬಿರುವವರು. ಮುಂಜಾವಿಗೆ ಎದ್ದು ದೇವರ ಸ್ಮರಣೆ ಮಾಡುತ್ತ, ದೈನಂದಿನ ಕೆಲಸಕಾರ್ಯಗಳಲ್ಲಿ ತೊಡಗುವವರು ಅವರು, ಹಬ್ಬ, ಮದುವೆ, ತಿಥಿ, ಪಂಚಾಯ್ತಿ ತೀರ್ಪು ಇತ್ಯಾದಿಗಳಲ್ಲಿಯೂ ತಮ್ಮ ಪೂರ್ವಿಕರು ಸಂಪ್ರದಾಯಗಳನ್ನು ಆದರ್ಶವಾಗಿರಿಸಿಕೊಂಡು ಆದಷ್ಟುಮಟ್ಟಿಗೆ ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರಪಂಚದ ಎಲ್ಲ ದೇಶ ಜನಾಂಗಗಳಲ್ಲಿನಂತೆ  ಕರ್ನಾಟಕದಲ್ಲೂ ಅನೇಕ ಜನಪದ ಸಂಪ್ರದಾಯಗಳು ಆಚರಣೆಗಳಲ್ಲಿ ಉಳಿದುಕೊಂಡು ಬರುತ್ತಿವೆ ಎಂದು ಹೇಳಲಾಗುವುದಿಲ್ಲ. ಸಂಪ್ರದಾಯವೇ ವಿನೋದದ ಪರಿವೇಷ ತೊಡುತ್ತದೆ. ಹಾಗೆಯೇ ಅದರ ನಂಬಿಕೆಗಳಲ್ಲಿ ಉಂಟಾಗುವ ಮೌಲ್ಯಗಳ ಸಡಿಲಿಕೆ ಕೂಡ ಗಮನಾರ್ಹವಾದುದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಜನಪದ ಸಂಪ್ರದಾಯಗಳ ಮಹತ್ವವನ್ನು ಅರಿಯುವ ಮತ್ತು ವ್ಯಾಖ್ಯಾನಿಸುವ ಪ್ರಯತ್ನ ಮಾಡಬಹುದಾಗಿದೆ.

ಉತ್ತರ ಕರ್ನಾಟಕದ ಆಚರಣೆಗಳು

ಪ್ರಚಲಿತವಿರುವ ಉತ್ತರ ಕರ್ನಾಟಕದಲ್ಲಿನ ವ್ಯವಸಾಯ ಸಂಬಂಧಿ ಆಚರಣೆಗಳಲ್ಲಿ ಜೋಕುಮಾರನ ಪೂಜೆ, ಅರಲೆ ಬಸವನ ಪೂಜೆ, ತಾರ್ಲೆ, ಭೂಮಿ ಹುಣ್ಣಿಮೆ. ಮಳೆಮಲ್ಲಪ್ಪನ ಪೂಜೆ ಮಳೆರಾಯನ ಪೂಜೆ, ಭೂಮಿಪೂಜೆ, ತಿಂಗಳ ಮಾವನ ಪೂಜೆ, ಕೊಂತಿಪೂಜೆ, ಮುಖ್ಯವಾದವು.

ಜೋಕುಮಾರನ ಆಚರಣೆ

ವ್ಯವಸಾಯ ಸಂಬಂಧಿ ಆಚರಣೆಗಳನ್ನು ಕುರಿತು ಈ ಭಾಗದಲ್ಲಿ ಚರ್ಚಿಸಲಾಗುವುದು. ಅವುಗಳಲ್ಲಿ ಜೋಕುಮಾರನ ಪೂಜೆ, ಗುಳ್ಳವನ ಪೂಜೆ, ಅರಳೆ ಬಸವನಪೂಜೆ, ತಾರ್ಲೆ ಆಚರಣೆ, ಭೂಮಿ ಹುಣ್ಣಿಮೆ ಮುಂತಾದವು ಮುಖ್ಯವಾದವು. ಉತ್ತರ ಕರ್ನಾಟಕದಲ್ಲಿ ಮಾತ್ರವೇ ಆಚರಣೆಯಲ್ಲಿ ಉಳಿದುಬಂದಿರುವ  ವಿಶಿಷ್ಟವಾದ ಆಚರಣೆ ಜೋಕುಮಾರನ ಪೂಜೆ. ಇದು ವ್ಯವಸಾಯ ಸಂಬಂಧವಾದ ಒಂದು ಆಚರಣೆ. ಈ ಆಚರಣೆಗೆ ಆನಂತನ ಹುಣ್ಣಿಮೆ, ಜೋಕುಮಾರನ ಹುಣ್ಣಿಮೆ ಅಥವಾ ಹೋಲೇರ ಹುಣ್ಣಿಮೆ ಎಂಬುದಾಗಿ ಕರೆಯುತ್ತಾರೆ (ವೃಷಭೇಂದ್ರಸ್ವಾಮಿ ಎಸ್.ಎಂ., ೧೯೮೭: ೯೮). ಜೋಕುಮಾರ ಒಬ್ಬ ಜನಪದ ದೇವತೆ. ಇವನಿಗಾಗಿ ಪ್ರತ್ಯೇಕವಾಗಿ ಎಲ್ಲಿಯೂ ದೇವಸ್ಥಾನಗಳಲ್ಲಿ. ಕಬ್ಬಲಿಗ : ಕುಂಬಾರ ಜಾತಿಯ ಜನರು ಮಾತ್ರ ಜೋಕುಮಾರನ ಮೂರ್ತಿಯನ್ನು ಹೊತ್ತು ತಿರುಗುವುದು ಒಂದು ವಿಶೇಷವಾಗಿದೆ. ಬಹು ಪ್ರಾಚೀನ ಕಾಲದಿಂದಲೂ ಜೋಕುಮಾರನ ಆಚರಣೆಯು ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಜೋಕುಮಾರ ಹುಟ್ಟವುದು ಭಾದ್ರಪದ ಮಾಸದಲ್ಲಿ. ಅವನು ಹುಟ್ಟಿದ ಮೇಲೆ ಮಳೆಯಾಗುವುದೆಂಬ ನಂಬಿಕೆ ಇರುವುದರಿಂದ, ರೈತರು ಬಹಳ ಸಂಭ್ರಮ ಆದರಗಳಿಂದ ಜೋಕುಮಾರನನ್ನು ಬರಮಾಡಿಕೊಳ್ಳುತ್ತಾರೆ. ಈ ಬಗೆಯ ಪೂಜೆಯನ್ನು “ಮಣ್ಣಪೂಜೆ” ಎಂಬುದಾಗಿ ಕರೆಯುತ್ತಾರೆ. ಇದು ನಾಲ್ಕನೆಯ ಮಣ್ಣಪೂಜೆ ಅನ್ನುವ ನಂಬಿಕೆ ಉಂಟು. ಮೊದಲನೆಯದು ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಮಾಡುವ ಎತ್ತಿನ ಪೂಜೆ. ಎರಡನೆಯದು ಗುಳ್ಳವನ ಪೂಜೆ. ಮೂರನೆಯದು ಪಂಚಮಿಯಲ್ಲಿ ಮಾಡುವ ಹುತ್ತಪ್ಪನ ಪೂಜೆ. ಆನಂತರ ಕೊನೆಯಾದ ಅನಂತನ ಹುಣ್ಣಿಮೆಯಲ್ಲಿ ಆಚರಿಸುವ ಜೋಕುಮಾರನ ಪೂಜೆ. ಈ ನಾಲ್ಕು ಸಂಪ್ರದಾಯಗಳನ್ನು ರೈತರು ತುಂಬ ಶ್ರದ್ಧೆ ಭಕ್ತಿಗಳಿಂದ ಆಚರಿಸುತ್ತಾರೆ.

ಜೋಕುಮಾರನ ಹುಟ್ಟಿನ ಬಗೆಗೆ ಕಥೆಗಳು ಪ್ರಚಲಿತವಾಗಿವೆ.

ಸಪ್ತಋಷಿಗಳ ಮೆಚ್ಚಿನ ಸೇವಕನಾದ ಜೋಕುಮಾರನಿಗೆ ಮರ್ತ್ಯಲೋಕದ ವೈಭವವನ್ನು ಸವಿಯಬೇಕೆಂಬ ಬಯಕೆ ಬಂದಿತು. ಋಷಿಗಳಲ್ಲಿ ತನ್ನ ಮನದಾಸೆಯನ್ನು ತಿಳಿಸಿದಾಗ ಅವರು ಒಪ್ಪಿ ಮೃಷ್ಟಾನ್ನವನ್ನು ಉಣ್ಣಬಾರದು; ಬಾಲೆಯರಿಗೆ ಮನಸೋಲಬಾರದು, ಅದಷ್ಟು ಬೇಗ ಹಿಂದಿರಗಬೇಕು ಎಂದು ಷರತ್ತುಗಳನ್ನು ಹಾಕಿ ಕಳುಹಿಸಿಕೊಡುತ್ತಾರೆ. ಅದರಂತೆಯೇ ಅವನು ಭೂಮಿಗೆ ಬರುವಷ್ಟರಲ್ಲಿ ಸಂಜೆಯಾಗುತ್ತದೆ. ಅವನು ಆ ರಾತ್ರಿ ಉಳಿದುಕೊಳ್ಳುವುದಕ್ಕೆ ಜಾಗವಿಲ್ಲದೆ ಯೋಚಿಸುತ್ತಿರುವಾಗ ಮುಂದೆ ಕಾಣಿಸಿಕೊಂಡ ಮಾರಿಯ ಗುಡಿಗೆ ಹೋಗಿ ಸುಶ್ರಾವ್ಯವಾಗಿ ಹಾಡುತ್ತಾ ಕುಳಿತುಕೊಂಡ. ಅವನ ಹಾಡಿಗೆ ಮಾರುಹೋದ ಮಾರಿಯು ಬಗೆ ಬಗೆಯ ಅಡುಗೆಯನ್ನು ಮಾಡಿ ಚಿನ್ನದ ಹರಿವಾಣದಲ್ಲಿ ಬಡಿಸಿ ಜೋಕನ ರೂಪಕ್ಕೆ ಬೆರಗಾಗಿ ನಿಲ್ಲುತ್ತಾಳೆ. ಜೋಕನಿಗೆ ತಾನು ಊಟ ಮಾಡಿದರೆ ತನಗೆಲ್ಲಿ ತೊಂದರೆಯಾಗುವುದೋ ಎಂಬ ಆತಂಕವಿದ್ದಿತಾದರೂ ಭಕ್ಷ್ಯ ಭೋಜನದ ವಾಸನೆ ಅವನನ್ನು ಬಿಡಲಿಲ್ಲ. ಧೈರ್ಯ ಮಾಡಿ ಊಟ ಮಾಡಿದುದಲ್ಲದೆ ಅವಳ ರೂಪಕ್ಕೆ ಮನಸೋಲುತ್ತಾನೆ. ಮಾರಿಯ ದೈಹಿಕಸಂಪರ್ಕದಿಂದ ತನಗೆ ಅಪಚಾರವಾಯಿತೆಂದು ನಡುಗುತ್ತಲೇ ಋಷಿಗಳ ಬಳಿಗೆ ಹೋದಾಗ ಋಷಿಗಳು ಅವನನ್ನು ಕೋಪದಿಂದ ಕಾಲಲ್ಲಿ ಒದ್ದು ಬಿಡುತ್ತಾರೆ. ಆಗ ಅವನು ಪಶ್ಚಾತ್ತಾಪ ವ್ಯಕ್ತಪಡಿಸಿದಾಗ ಏಳು ದಿನಗಳು ಇದ್ದು ಇಲ್ಲಿಗೆ ಬಾ ಎಂದು ವಿಮೋಚನೆಗೊಳಿಸುತ್ತಾರೆ. ಜೋಕನ ದೈಹಿಕ ಸಂಪರ್ಕವನ್ನು ಪಡೆದುದುರ ಫಲವಾಗಿ ಭಾದ್ರಪದ ಶುದ್ಧದಲ್ಲಿ ಅಷ್ಟಮಿಯ ದಿನ ಮಾರಿಯು ಗಂಡು ಮಗುವೊಂದಕ್ಕೆ ಜನ್ಮ ಕೊಡುತ್ತಾಳೆ. ಆ ಮಗುವೇ ಜೋಕುಮಾರ. ಜೋಕುಮಾರ ತನ್ನ ತಂದೆ ಯಾರೆಂದು ತಿಳಿದುಕೊಳ್ಳಲು ಹೊರಟ. ಹೀಗೆ ಏಳು ದಿನ ಹುಡುಕುತ್ತಾ ಇರುವಾಗ ಹುಣ್ಣಿಮೆ ಬಂದಿತು. ಆ ಹುಣ್ಣಿಮೆಯ ದಿನ ಅಗಸರೆಲ್ಲರೂ ಒಂದಡೆ ಸೇರಿಕೊಂಡು ಮನೆಮನೆಗೆ ಹೋಗಿ ಬೇಡಿ ರೈತಾಪಿಗಳು ಕೊಟ್ಟ ದವಸಧಾನ್ಯಗಳನ್ನು ಹೆಡಿಗೆಗೆ ತುಂಬಿಕೊಂಡು ಅಡುಗೆ ಮಾಡಿ, ಗಂಗೆಯ ಕಲ್ಲನ್ನು ಪೂಜೆ ಮಾಡುತ್ತಿರುತ್ತಾರೆ. ಊಟ ಮಾಡುವ ಸಂದರ್ಭದಲ್ಲಿ ಕತ್ತೆಗಳು ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡದಂತೆ ನೋಡಿಕೊಳ್ಳಲು ಸುಕರ್ಣಿಕ ಎಂಬುವಳನ್ನು ನೇಮಿಸಿರುತ್ತಾರೆ. ತಂದೆಯನ್ನು ಹುಡುಕುತ್ತಾ ಬಂದ ಜೋಕುಮಾರ ಸುಕರ್ಣಿಯ ರೂಪಕ್ಕೆ ಮರುಳಾಗಿ ಆಕೆಯನ್ನು ಪೀಡಿಸತೊಡಗುತ್ತಾನೆ. ಆಕೆ ಭಯದಿಂದ ಕೊಗಿಕೊಳ್ಳುತ್ತಾಳೆ. ಅಗಸರು ಬಂದು ಜೋಕುಮಾರನನ್ನು ಬಡಿದು ಸಾಯಿಸಿ ಅವನನ್ನು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಹಾಕಿ ಮುಚ್ಚುತ್ತಾರೆ. ಅಲ್ಲಿಗೆ ಅವನ ಶಾಪ ವಿಮೋಚನೆಯಾಗಿ ಸಪ್ತಋಷಿಗಳನ್ನು ಸೇರಿಕೊಳ್ಳುತ್ತಾನೆ.

ಎರಡನೆಯ ಕಥೆಯ ಪ್ರಕಾರ, ಚಿಕ್ಕವನಿರುವಾಗಲೇ ಆಡುತ್ತಾ ಕಂಡ ಕಂಡ ಹೆಣ್ಣುಗಳ ಬೆನ್ನುಹತ್ತಿ ಕಾಡಿಸತೊಡಗಿದಾಗ ಅಗಸರು ಬೇಸತ್ತು ಹೊಡೆದು ಸಾಯಿಸಿ ಒಗೆಯುವ ಕಲ್ಲಿನ ಕೆಳಗೆ ಮುಚ್ಚಿಟ್ಟರು. ಕೆಲವು ಕಡೆಗಳಲ್ಲಿ ಜೋಕುಮಾರನು ಜೋಕುಋಷಿ ಹಾಗೂ ಎಳೆ ಗೌರಿಗಳ ಮಗನೆಂದೂ ಹೇಳುತ್ತಾರೆ. ಅವರು ಸಂತಾನ ಫಲವಿಲ್ಲದೆ ಶಿವನನ್ನು ಕುರಿತು ಪ್ರಾರ್ಥಿಸಿದಾಗ ಶಿವ ಅವರಿಗೆ ಏಳು ದಿನ ಆಯಸ್ಸುಳ್ಳ ಮಗನನ್ನು ಕರುಣಿಸಿದನೆಂದು ಹೇಳುತ್ತಾರೆ. ಅಂತೆಯೇ ಭಾದ್ರಪದ ಮಾಸದಲ್ಲಿ ಒಂದು ವಾರದವರೆಗೂ ಅಗಸರ ಹೆಂಗಸರು ಮನೆ ಮನೆಗೂ ಹೋಗಿ ಜೋಕುಮಾರನನ್ನು ಕುರಿತ ಹಾಡುಗಳನ್ನು ಕುರಿತ ಹಾಡುಗಳನ್ನು ಹಾಡುತ್ತಾ ದವಸಧಾನ್ಯಗಳನನ್ನು ಶೇಕರಿಸಿ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿ ಬೆಳೆದುಬಂದಿದೆ. ಇನ್ನೊಂದು ಕಥೆಯ ಪ್ರಕಾರ ಚಿಕ್ಕವನಿರುವಾಗಲೇ ಜೋಕುಮಾರ ತುಂಬಾ ಕಾಮುಕನಾಗಿದ್ದ. ಕಂಡಕಂಡವರನ್ನೆಲ್ಲ ಇಣುಕಿ ನೋಡುತ್ತಿದ್ದ. ಒಂದು ದಿನ ಬ್ರಾಹ್ಮಣ ಸ್ತ್ರೀಯು ಸ್ನಾನ ಮಾಡುತ್ತಿದ್ದಾಗ ಬಚ್ಚಲು ಮರೆಯಿಂದ ಇಣುಕಿ ನೋಡುತ್ತಿದ್ದನಂತೆ. ಆಗ ಅವಳು ಅಕಸ್ಮಾತ್ತಾಗಿ ನೋಡಿ ಸೀರೆಯುಟ್ಟುಕೊಂಡು ಕಚ್ಚೆ ಬಿಗಿದುಕೊಂಡು ಓಡಿದಳು (ಆಗಿನಿಂದಲೂ ಬ್ರಾಹ್ಮಣ ಸ್ತ್ರೀಯರು ಕಚ್ಚೆ ಹಾಕಿಯೇ ಸೀರೆ ಉಡಲು ಪ್ರಾರಂಭಿಸಿದರೆಂದು ಹೇಳುತ್ತಾರೆ). ಓಣಿಯ ಹೆಣ್ಣುಗಳೆಲ್ಲಾ ಇವನ ಬಗ್ಗೆ ದೂರು ಹೇಳತೊಡಗಿದಾಗ ಹೊಲೇರ ಓಣಿಯಲ್ಲಿ ತಲೆ ಕತ್ತರಿಸಿ ಅಗಸರು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಮುಚ್ಚಿಟ್ಟರು ಎಂಬುದೊಂದು ಕಥೆಯಿದೆ.

ಈ ಮೇಲೆ ನಿರೂಪಿಸಿದ ಕಥೆಗಳಿಗಿಂತ ಭಿನ್ನವಾದ ಇನ್ನೊಂದು ಕಥೆಯ ಪ್ರಕಾರ ಮಳೆಬೆಳೆ ತರುವ ದೇವತೆ. ಗಣಪತಿಯು ಮೃಷ್ಟಾನ್ನ, ಮೋದಕ ಉಂಡು ಹೋಗಿ ಜನರೆಲ್ಲ ಅತ್ಯಂತ ಸುಖವಾಗಿಯೇ ಇದ್ದಾರೆಂದು ಶಿವ ಬಳಿ ಹೆಳಿದ. ಆತ ಹೋದ ಕೆಲವು ದಿನಗಳಲ್ಲಿ ಜೋಕುಮಾರನು ಶಿವನ ಬಳಿಗೆ ಹೋಗಿ, ಓಣಿಯಲ್ಲೆಲ್ಲ ತಿರುಗಾಡಿ ಬಂದಿದ್ದೇನೆ. ಮಳೆ ಬೆಳೆ ಇಲ್ಲದೆ ಜನರೆಲ್ಲ ಕಂಗಾಲಾಗಿದ್ದಾರೆ. ದುಃಖದಲ್ಲಿದ್ದಾರೆಂದು ಶಿವನಿಗೆ ಹೇಳಿದ. ಶಿವನು ಇವನ ಮಾತಿಗೆ ಕಣ್ತೆರದು ನೋಡಿದನು. ಆಗ ಮಳೆಯು ಬಂದಿತು. ಬೆಳೆಯು ಸಮೃದ್ಧವಾಗಿ ಬಂದಿತು. ಹೀಗೆ ಜೋಕುಮಾರನನ್ನು ಕುರಿತು ಎರಡು ಅಭಿಪ್ರಾಯಗಳಿರುವುದು ಸ್ಪಷ್ಟ. ಜೋಕುಮಾರನೊಬ್ಬ ಕಾಮುಕ, ಪುಂಡ, ಅತಿ ಕಾಮುಕತನದಿಂದ ನಡೆದುಕೊಂಡದ್ದಾಕ್ಕಾಗಿ ಅವನಿಗೆ ಹೊಲೇರ ಓಣಿಯಲ್ಲಿ ಹೊಡೆದು ಸಾಯಿಸಿ ಅಗಸರ ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ಮುಚ್ಚಿಡಲಾಯಿತು. ನೀತಿಗೆಟ್ಟು ನಡೆದವರಿಗೆ ಉಳಿಗಾಲವಿಲ್ಲ ಎಂಬ ಆಶಯ ಈ ನೀತಿಯಲ್ಲಿರುವುದು ಸ್ಪಷ್ಟ. ಅವನು ದುರ್ಭುದ್ಧಿಯವನಾಗಿದ್ದರೂ ಕೆಲವು ಜನರಿಗಾದರೂ ಒಳ್ಳೆಯದನ್ನು ಮಾಡಿದಂತಿದೆ. ಒಳಿತನ್ನು ಮಾಡುವ ದೇವರು ಎಂದು ಜನ ನಂಬಿಕೊಂಡಿದ್ದಾರೆ. ಅವನು ಬಂದುಹೋದ ಮೇಲೆ ಗೊಡ್ಡುಗಳು ಹಾಲು ಕೊಡಲು ಆರಂಭಿಸುತ್ತವೆ. ಅವನನ್ನು ಅರಸಿಕೊಂಡು ಕುಂಚಿಗೆ, ಕುಲಾಯಿ ಹೊಲಿಯಿ ಹೊಲಿದುಕೊಟ್ಟರೆ ಬಂಜೆಗೂ ಮಕ್ಕಳಾಗುತ್ತವೆ. ಇವು ಈ ಆಚರಣೆಯ ಮಹತ್ವವನ್ನು ಮನಗಾಣಿಸುತ್ತವೆ.

ಈ ಆಚರಣೆಗಾಗಿ ನಿರ್ಮಿಸಲಾಗುವ ಮೂರ್ತಿಯ ಸ್ವರೂಪ ಆಕರ್ಷಕವಾಗಿರುತ್ತದೆ. ಅದು ಮಣ್ಣಿನಿಂದ ಮಾಡಿದ ಪುರುಷ ಮೂರ್ತಿಯಾಗಿರುತ್ತದೆ. ಕೋರೆ ಮೀಸೆ, ಗುರುತರವಾದ ಹುಬ್ಬು, ದಪ್ಪನಾದ ತುಟಿಗಳು, ಉದ್ದ ಮೂಗು, ಸಾಮಾನ್ಯವಾದ ದೇಹಾಕೃತಿಗೆ ಎದ್ದು ಕಾಣುವ ಜನನೇಂದ್ರಿಯ ಇರುತ್ತದೆ. ಸಗಣಿಯಿಂದ ಸಾರಿಸಿದ ಬಿದಿರಿನ ಹೆಡಿಗೆಯಲ್ಲಿ ಈ ಮೂರ್ತಿಯನ್ನು ಇಟ್ಟುಕೊಂಡು ಅದರ ಮೇಲೆ ಬೇವಿನಸೊಪ್ಪನ್ನು ಹಾಕುತ್ತಾರೆ. ಮೂರ್ತಿಯ ಬಾಯಿಗೆ ಮತ್ತು ಜನನೇಂದ್ರಿಯಕ್ಕೆ ಲೇಪಿಸುವುದು ವಿಧಿ. ಜೋಕುಮಾರನನ್ನು ಕುರಿತ ಹಾಡುಗಳನ್ನು ಹೇಳುತ್ತ ಹೆಂಗಸರು ಊರಿನ ರೈತಾಪಿಗಳ ಮನೆಗೆ ಹೋಗುವುದು ಪದ್ಧತಿ. ಮನೆಯ ಹೆಂಗಸರು ಜೋಳ, ರಾಗಿ, ಅಕ್ಕಿ, ಹುಣಸೇಹಣ್ಣು, ಮೆಣಸಿನಕಾಯಿ, ಕೊಬ್ಬರಿ ಮುಂತಾದ ದವಸಧಾನ್ಯ, ಬೆಣ್ಣೆ ಕುಲಾಯಿ ಕೊಂಬಿಗೆ ಮುಂತಾದ ಅರಿವೆಗಳನ್ನೂ ಕೊಡುತ್ತಾರೆ. ಜೋಕುಮಾರನನ್ನು ಮಾರಿಯ ಮಗನೆಂದು ಬಗೆದು, ಮಾರಿಯ ಕಾಟವನ್ನು ತಪ್ಪಿಸುವ ಸಲುವಾಗಿ ಕಾಣಿಕೆಯ ರೂಪದಲ್ಲಿ ದವಸಧಾನ್ಯಗಳನ್ನು ಕೊಡುವುದೂ ಉಂಟು. ಇದರಿಂದಾಗಿ ಅವನ ಕಾಟ ತಪ್ಪುವುದಿಲ್ಲವೆಂದು ನಂಬುತ್ತಾರೆ.

ಮನೆಯಲ್ಲಿರುವ ತಗಣಿ ಚಿಕ್ಕಾಡುಗಳನ್ನು ಜೋಕುಮಾರನ ಬುಟ್ಟಿಯಲ್ಲಿ ಬಿಡುವುದು ಸಂಪ್ರದಾಯ. ಇಂತವುಗಳನ್ನು ಜೋಕುಮಾರ ನಾಶ ಮಾಡುತ್ತಾನೆಂದು ನಂಬಿಕೆ. ದವಸ ಧಾನ್ಯವನ್ನು ಕೊಟ್ಟದ್ದಕ್ಕೆ ಪ್ರತಿಯಾಗಿ ಜೋಕುಮಾರನನ್ನು ಹೆತ್ತ ಹೆಂಗಸು ಪ್ರಸಾದದ ರೂಪವಾಗಿ ಹುಳಿನುಚ್ಚು, ಬೇವಿನಸೊಪ್ಪನ್ನು ಕೊಡುವುದು ಪದ್ಧತಿ. ಜೋಕುಮಾರನಿಗೆ ಏಳು ದಿನ ಮಾತ್ರ ಆಯುಷ್ಯವೆಂದು ಅವನನ್ನು ಕುರಿತ ಹಾಡುಗಳು ವರ್ಣಿಸುತ್ತವೆ.

ಹುಟ್ಟಿದಾ ಏಳ್ದಿನಕ ಪತ್ಣಾವ ತಿರುಗ್ಯಾನ
ದಿಟ್ನಾದೇವಿ
ನಿನಮಗ! ಕೊಮರಾಗಬರೆದಾಳಾ ಸೆಟವಿಎಳ್ದಿನ

ಆರೇಳು ದಿನಕೆ ಆಲಿದನೆ ರಾಜ್ಯವ
ದಿಟ್ಟಾದೇವಿ
ನಿನಮಗ! ಕೊಮರಾಗಕೊಟ್ಟಾರ ಏಳು ದಿನಗಳು

ಅಳುವುತ ಸಿರಿತಾನು ಬಳಲುತಲಿ ಬಂದಾನು
ಅಳಕದಂಬಲಿ
ತಡೆದವು! ನಮಕೊಮರಕಳೆದಳು ದಿನಕರ ಮರಣಾವ್ವ

ಮೇಲಿನ ಪದ್ಯಭಾಗದಿಂದ ಜೋಕುಮಾರ ಹುಟ್ಟಿದ ಏಳುದಿನಗಳಲ್ಲಿ ಪಟ್ಟಣವನ್ನು ತಿರುಗುತ್ತಾನೆ. ಆತ ದಿಷ್ಟಾದೇವಿಯ ಮಗ. ಹುಟ್ಟಿದ ಕೊಡಲೆ ತನ್ನ ತಾಯಿ ಕುಮಾರಿಯನ್ನೇ ಮೋಹಿಸಲು ಹೋದಾಗ ಆಕೆ ಕೋಪಗೊಂಡು ಮಗನ ತಲೆಯನ್ನು ಹೊಡೆದಳೆಂದೂ ಕಥೆಯುಂಟು. ಜೋಕುಮಾರ ಮಳೆಯ ದೇವತೆಯಗಿರುವಮತಯೇ ಫಲದೇವತೆಯೂ ಆಗಿದ್ದಾನೆ. ಪುರುಷ ಜನನೇಂದ್ರಿಯವೇ ಎದ್ದು ಕಾಣುವಂತಿರುವ ಜೋಕುಮಾರನು ಮಕ್ಕಳನ್ನು ದಯಪಾಲಿಸುವ ದೇವರು ಎಂದು ಕೂಡ ಜನಪದ ನಂಬಿಕೆ. ಈ ಕಾರಣದಿಂದಾಗಿಯೇ ಮಕ್ಕಳಿಲ್ಲದವರು ಜೋಕುಮಾರನನ್ನು ಪೂಜಿಸುವುದು ರೂಢಿಯಂತೆ ಕಾಣುತ್ತದೆ:

ಪುಂಡಿಯ ಸೊಪ್ಪಿಗೆ ಹೋದಳೆ ಹನುಮವ್ವ
ಕುಂಡಿಲ್ಲವಂತ
ಅಳುತಾಳ! ನಮಕೋಮರಕುಂಡಿಮಾಡಿ ಮನೆಗೆ ಕಳುವ್ಯಾನ

ಬಸಲಿಂಗಿ ಸೊಪ್ಪಿಗೆ ಹೋದಾಳ ಹನುಮವ್ವ
ಬಸರಿಲ್ಲಂತ
ಆಳುತಾಳಾ! ನಮಕೊಮರಬಸರ್ಮಾಡಿ ಮನಿಗೆ ಕಳುವ್ಯಾನ

ಈ ಪದ್ಯಗಳು ಜೋಕುಮಾರ ಒಬ್ಬ ಫಲ ಕೊಡುವ ದೇವತೆ ಎಂದು ದೃಢೀಕರಿಸುತ್ತವೆ.

ಬಹುಪಾಲು ಹಾಡುಗಳಲ್ಲಿ ಜೋಕುಮಾರನನ್ನು ಕಾಮುಕನಾಗಿ ಸಂಪತ್ತಿನ ದೇವತೆಯಾಗಿಯೂ ಚಿತ್ರಿತನಾಗಿದ್ದಾನೆ. ಮಳೆ ಬೀಳದೆ ಜನ ಕಂಗಾಲಾಗಿದ್ದ ಸಂದರ್ಭದಲ್ಲಿ ಜನರು ಜೋಕುಮಾರನನ್ನು ಪ್ರಾರ್ಥಿಸುತ್ತಾರೆ:

ಮಾಡಿದ ಪೈರು ಬಾಡಿ ಹೋಗುತಾವೆ
ತಾಯವ್ವ
ಹಿಟ್ಟು ಕೊಡವಳ್ಳ! ಶಿವರಾಯಉತ್ತರಿ ಮಳೆಯ ಕರುಣಿಸೋ

ಬಿತ್ತಿದ ಪೈರು ಬತ್ತಿ ಹೋಗುತಾವೆ
ಹೆತ್ತವ್ವ
ಹಿಟ್ಟು ಕೊಡವಳ್ಳ! ಶಿವರಾಯ ಅರಿದ್ರಾ ಮಳೆಯ ಕರುಣಿಸೋ

ರೈತಾಪಿಗಳ ಈ ಮೊರೆಯನ್ನು ಕೇಳಿ ಜೋಕುಮಾರ ನೀಲಿ ಕುದರೆಯನ್ನು ಎರಿ ಸೆಲ್ಲೆಯನ್ನು ಬೀಸಿ ಮಳೆಯನ್ನು ಕರೆದ ಎಂಬ ವರ್ಣನೆಯನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳಬಹುದು:

ಕಟ್ಟೆಯ ಹತ್ಯಾನೆ ಹೊತ್ತುಗಳ ನೋಡ್ಯಾನೆ
ಎರ್ಯಾನೆ
ನೀಲಕುದುರೆಯ! ನಮಕೊಮರಸಲ್ಯೇವ ಬೀಸಿ ಕರೆದಾನೆ.

ಎರಿಯ ಹತ್ಯಾನೆ ಯಾಳ್ಯೇವ ನೋಡ್ಯಾನ್
ಎರ್ಯಾನೆ ನೀಲಕುದುರೆಯ | ನಮಕೊರ –ಸಲ್ಯೇವ ಬೀಸಿ ಕರೆದಾನೆ.

ಜೋಕುಮಾರನ ಆಚರಣೆ ಉತ್ತರ ಕರ್ನಾಟಕದಾದ್ಯಂತ ಸಣ್ಣ ಪುಟ್ಟ ವ್ಯತ್ಯಾಸಗಳೊಡನೆ ಪ್ರಚಲಿತದಲ್ಲಿದೆ. ಬಾದ್ರಪದ ಅಷ್ಟಮಿಯ ದಿನ ಕುಂಬಾರನ ಮನೆಯಲ್ಲಿ ಜೋಕುಮಾರನ ಮೂರ್ತಿಯನ್ನು ತಯಾರಿಸುವರು. ಗಂಗಾಮತದ ಹೆಣ್ಣು ಮಕ್ಕಳು ಜೋಕುಮಾರನನ್ನು ಹೊತ್ತು ತಿರುಗುವರು. ಸ್ನಾನ ಮಡಿಯಿಂದ  ಕುಂಬಾರನ ಮನೆಗೆ ಹೋಗಿ ಹತ್ತು ಸೇರು ಜೋಳ ಇಲ್ಲವೆ ಇಪ್ಪತ್ತೈದು ರೂಪಾಯಿ ಕೊಟ್ಟು ಪೂಜಿಸಿ ತಮ್ಮ ಮನೆಗೆ ತರುತ್ತಾರೆ. ತಂದೆ ಜೋಕುಮಾರನ ಮೂರ್ತಿಯನ್ನು ಪಡಸಾಲೆಯಲ್ಲಿಟ್ಟು ಪೂಜಿಸುತ್ತಾರೆ. ಜೋಕುಮಾರನ ತಲೆಗೆ ಕುಲಾವಿ ಕಟ್ಟಿ, ಸಣ್ಣ ಶಲ್ಯ ಹೊದಿಸಿ ಬಾಯಿಗೆ ಬೆಣ್ಣೆ ಹಚ್ಚುತ್ತಾರೆ. ಹಣೆಗೆ ಭಂಡಾರ (ಕುಂಕುಮ, ಅರಿಶಿನ) ಹಚ್ಚುತ್ತಾರೆ. ಸುತ್ತೆಲ್ಲಾ ಬೇವಿನಕೊಪ್ಪನ್ನು ಇಟ್ಟು ಪೂಜಿಸಿ ಊದಿನಕಡ್ಡಿಯಿಂದ ಬೆಳಗಿ, ಕಡುಬು, ಹಿಂಡಿಪಲ್ಯ ರೊಟ್ಟಿ, ಅನ್ನ ಮುಂತಾದ ಪದಾರ್ಥಗಳನ್ನು ನೈವೇದ್ಯಕ್ಕೆ ಇಟ್ಟು ಪೂಜಿಸುತ್ತಾರೆ.

ಮರುದಿನ ಗೌಡರ ಮನೆಗೆ ಜೋಕುಮಾರನನ್ನು ಹೆಂಗಸರು ಹೊತ್ತುಕೊಂಡು ಹೋಗುತ್ತಾರೆ. ಮನೆಯಲ್ಲಿ ಜೋಕುಮಾರನಿಗೆ ಶಲ್ಯ ಹೊದಿಸಿ, ಜೋಳ ಇತ್ಯಾದಿ ದವಸಧಾನ್ಯವನ್ನು ಕೊಡುವರು. ಮನೆಯೊಡತಿಯು ಮೊರಕ್ಕೆ ಪ್ರಸಾದದ ರೂಪವಾಗಿ ನಾಲ್ಕಾರು ಕಾಳು ಜೋಳ, ಸ್ವಲ್ಪ ಬೇವಿನಸೊಪ್ಪು, ಸ್ವಲ್ಪ ಅರಿಶಿಣ, ಕುಂಕುಮವನ್ನು ಹಾಕಿಸಿಕೊಳ್ಳುವಳು. ಅನಂತರ ಜೋಕುಮಾರನನ್ನು ಹೊತ್ತು ತಿರುಗುವ ಹೆಂಗಸರು ಬೇರೆ ಹೆಂಗಸರು ಮನೆಗಳಿಗೆ ಹೋಗುವರು. ಮನೆ ಮನೆಗೆ ಜೋಕುಮಾರನನ್ನು ಹೊತ್ತು ತಿರುಗುವಾಗ ಹಾಡುಗಳನ್ನು ಹಾಡುತ್ತಾ, ಅವರು ಕೊಟ್ಟ ದವಸಧಾನ್ಯವನ್ನು ತೆಗೆದುಕೊಂಡು ಬರುವರು. ಕೆಲವರು ಜೋಕುಮಾರನ ಬುಟ್ಟಿಯನ್ನು ಎತ್ತಿ ಕುಳಿತುಕೊಂಡು ಊಟ ಮಾಡುವರು. ಕೆಲವು ಪ್ರದೇಶಗಳಲ್ಲಿ ಹಾಡುವುದರ ಜೊತೆಗೆ ಕೋಲಾಟ ಆಡುವುದುಂಟು.

ಅರಲೆ ಬಸವನ ಪೂಜೆ 

ನಮ್ಮ ರೈತಾಪಿಗಳು ನೂರಾರು ಜನಪದ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದರೂ ಅವುಗಳನ್ನು ವಿವಿಧ ಋತುಮಾನಕ್ಕನುಗುಣವಾಗಿ, ವೈವಿಧ್ಯಮಯವಾಗಿ ಆಚರಿಸುತ್ತ ಬಂದಿರುವುದು ಗಮನಾರ್ಹ ಸಂಗತಿ. ಮಳೆಗಾಲದಲ್ಲಿ ಸಾಮಾನ್ಯವಾಗಿ ಮಣ್ಣಿನ ಪೂಜೆಗೆ ಸಂಬಂಧಿಸಿದಂತೆ ಆಚರಣೆಗಳು ನಡೆಯುತ್ತವೆ. ಅಂತವುಗಳಲ್ಲಿ ಅರಲೆಬಸವನ ಪೂಜೆಯು ಮಹತ್ವಪೂರ್ಣವಾದುದು. ದೇಜಗೌ ಹೇಳುವಂತೆ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ. ಅದು ಸಂಪತ್ತನ್ನು ಹೆರುವ ಜೀವಶಕ್ತಿ. ಮಣ್ಣು ಹೊನ್ನುಗಳೆರಡು ಆತನ ಪಾಲಿಗೆ ಅಭೇದ ವಸ್ತುಗಳು. ದುಡಿಯುವ ಬಾಳಿಗೆ ಮಣ್ಣೇ ಹೊನ್ನಾಗಿ ಪರಿಣಮಿಸುತ್ತದೆ (ಉದ್ಧೃತ: ವೃಷಭೇಂದ್ರಸ್ವಾಮಿ ಎಸ್. ಎಂ., ೧೯೮೭ : ೬೭). ಮಣ್ಣು ಪೂಜೆಯು ಭೂಮಿ ತಾಯಿಯ ಪೂಜೆ ಎಂದೇ ಭಾವಿಸಿದ್ದಾರೆ. ಈ ಪೂಜೆಯ ಮಳೆಗಾಲದಲ್ಲಿ ವಿಶೇಷ ಮಹತ್ವದ್ದಾಗಿ ಕಾಣಿಸುತ್ತದೆ. ಮಳೆಗಾಲವು ಪ್ರಾರಂಭವಾದಾಗ ರೈತರು ತಮ್ಮ ಗದ್ದೆಯನ್ನು ಉಳುವುದಕ್ಕೆ ತೊಡುಗುತ್ತಾರೆ. ಇಂತಹ ಸಮಯದಲ್ಲಿ ಊರಿನವರೆಲ್ಲ ಸಮತೋಷ, ಸಂಭ್ರಮಗಳಿಂದ ಇರುತ್ತಾರೆ. ಹೆಣ್ಣು ಮಕ್ಕಳಿಗೆ ಸಾಕಷ್ಟು ಸಮಯ ಇರುವುದರಿಂದ ಅವರು ವ್ರತ, ಪೂಜೆ ಇತ್ಯಾದಿಗಳಿಗೆ ಕೈ ಹಾಕುತ್ತಾರೆ. ಸಕಲ ಜೀವರಾಶಿಗಳಿಗೂ ಅನ್ನ ನೀಡುವ ಭೂಮಿತಾಯಿಗೂ ಬಸವಣ್ಣನಿಗೂ ರೈತರು ಕೃತಜ್ಞತೆಯನ್ನು ಅರ್ಪಿಸಲು ಅವುಗಳ ಪೂಜೆಯನ್ನು ಮಾಡುತ್ತಾರೆ.

ಒಟ್ಟಿನಲ್ಲಿ ಅರಲೆ ಬಸವನ ಪೂಜೆ ಉತ್ತರ ಕರ್ನಾಟಕದಲ್ಲಿ ಹೊಲಗದ್ದೆಗಳು ಹಸಿರು ತುಂಬಿ ಕಂಗೊಳಿಸುವ ಸಂದರ್ಭದಲ್ಲಿ ಆಚರಿಸುವ ಒಂದು ಸಂಪ್ರದಾಯ. ಹೆಣ್ಣು ಮಕ್ಕಳ ಜೇಷ್ಠ ಬಹುಳ ಅಮವಾಸ್ಯೆ ದಿನ. ಅರಲೆ ಮಂಟಪವನ್ನು ನಿರ್ಮಿಸಿ, ಅದರೊಳಗೆ ಮಣ್ಣಿನಿಂದ ಮಾಡಿದ ಬಸವಣ್ಣನನ್ನು ಇಟ್ಟು ಅದಕ್ಕೆ ಅಲಂಕಾರ ಮಾಡಿ ಕೆರೆ ಅಥವಾ ಹೊಲದಿಂದ ನೀರು ತಂದು, ಹಾಡು ಹೇಳುತ್ತಾ ಪೂಜೆ ಮಾಡುವರು. ಇದನ್ನು ಮೊದಲ ಮಣ್ಣಿನ ಪೂಜೆ ಅಥವಾ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುವರು. ಬಿಳುವಲದಲ್ಲಿ ಊರ ಮಡದಲ್ಲಿ ಮಣ್ಣಿನ ಬಸವನನ್ನು ಪೂಜಿಸುವ ರೂಢಿಯಿದೆ. ಈ ಸಮಯದಲ್ಲಿ ಹೆಣ್ಣುಮಕ್ಕಳು ಆರತಿ ಬೆಳಗುತ್ತಾ ಕೋಲನ್ನು ಹಾಕುತ್ತಾ ಹಾಡುತ್ತಾರೆ. ಹೀಗೆ ಮಣ್ಣಿನ ಬಸವನನ್ನು ಅರಲೆಯ ಮಂಟಪದಲ್ಲಿ ಪೂಜಿಸುವುದರಿಂದ ಇದಕ್ಕೆ ಅರಲೆಬಸವನ ಪೂಜೆ ಎಂದು ಕರೆಯುತ್ತಾರೆ.

ಉತ್ತರ ಕರ್ನಾಟಕದಲ್ಲಿ ಜೇಷ್ಠ ಬಹುಳ ಅಮವಾಸ್ಯೆಗೆ ಮಣ್ಣೆತ್ತನ ಅಮವಾಸ್ಯೆ ಎಂದು ಕರೆಯುತ್ತಾರೆ ತೀರದ ಮಣ್ಣಿನಿಂದ ಎತ್ತುಗಳನ್ನು ಮಾಡಿ ಜಗುಲಿಯ ಮೇಲೆ ಇಟ್ಟು ಪೂಜಿಸುತ್ತಾರೆ. ಮಣ್ಣು ನಮಗೆ ಅನ್ನ ನೀಡುವ ಭೂಮಿತಾಯಿಯ ಪ್ರತೀಕ. ಅಂದು ಸಂಜೆ ಹೆಣ್ಣು ಮಕ್ಕಳೆಲ್ಲ ಗುಂಪು ಕೂಡಿಕೊಂಡು ಊರ ಮಠದಲ್ಲಿ ಬಸವನಿಗೆ ಸಾಮೂಹಿಕ ಪೂಜೆ ನಡೆಸಿ ಆರತು ಬೆಳಗಿ ಕೋಲಾಟದ ಹಾಡುಗಳನ್ನು ಹಾಡುತ್ತಾರೆ. ಉದಾಹರಣೆಗಾಗಿ :

ಒಂದು ಸುತ್ತಿನ ಕ್ವಾಟೆ! ಅದರಾಗ
ಚಂದ
ಕುಂತಾನ ಬಸವ ಬಸವನ ಪಾದಕ ಹೊಸ ಮುತ್ತ ಹೊಸಗೆಜ್ಜೆ
ಬಸವಕ
ಬಸವೆನ್ನಿರೆ ! ಬಸವನ ಪಾದಕ ಶರಣೆನ್ನಿರೆ!!

ಎರಡು ಸುತ್ತಿನ ಕ್ವಾಟೆ ! ಅದರಾಗ ಇಡ್ಡಿಕುತ್ತಾನ ಬಸವ
ಬಸವನ
ಪದಕ ಹೊಸಮುತ್ತ ಹೊಸಗೆಜ್ಜೆ !
ಬಸವಕ ಬಸವೆನ್ನಿರೆ!!
(ಗದ್ದಗೀಮಠ ಬಿ. ಎಸ್., ೧೯೬೩೧೪)

ಬಸವನನ್ನು ಕುರಿತ ಹಾಡುಗಳು ಹೀಗೆ ಹತ್ತು ಸುತ್ತಿನ ಕೋಟೆಯವರೆಗೆ ಮುಂದುವರೆಯುತ್ತದೆ. ಈ ಹಾಡುಗಳನ್ನು ಹಾಡುತ್ತಾ ಹೆಣ್ಣುಮಕ್ಕಳು ಕೈ ಚಪ್ಪಾಳೆ ಹಾಕುತ್ತ ಬಸವನಿಗೆ ಪ್ರದಕ್ಷಿಣೆ ಹಾಕುವರು. ಹಿಮ್ಮೇಳ ಮುಮ್ಮೇಳದೊಂದಿಗೆ ಪದಗಳು ಮುಂದುವರೆಯುತ್ತದೆ. ಅರಲೆ ಬಸವನ ಪೂಜೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಹೊರೆಯ ರಾಜ್ಯದಲ್ಲಿಯೂ ಆಚರಿಸುವುದು ಕಂಡುಬಂದಿದೆ. ಅಂಧ್ರ ಪ್ರದೇಶದಲ್ಲಿ ಎದ್ದುಲ ಅಮವಾಸ್ಯೆ ಎಂದೂ, ಮಹಾರಾಷ್ಟ್ರದಲ್ಲಿ ಪೋಳಾಸಣ ಎಂದೂ ಕರೆಯುತ್ತಾರೆ. ಇದರ ಅರ್ಥ ಕೂಡ ಎತ್ತಿನ ಪೂಜೆ ಎಂದೇ ಆಗಿದೆ. ಈ ಪೂಜೆಯ ಉದ್ದೇಶ ಬೆಳೆ ಸಮೃದ್ಧವಾಗಿ ಬರಲಿ ಎನ್ನುವುದೇ ಆಗಿದೆ.

ತಾರ್ಲೆ ಆಚರಣೆ

ವ್ಯವಸಾಯಕ್ಕೆ ಸಂಬಂಧಿಸಿದ ಕರಾವಳಿ ಪ್ರದೇಶ ಆಚರಣೆಗಳಲ್ಲಿ ಮುಖ್ಯವಾದದ್ದು ತಾರ್ಲೆ ಆಚರಣೆ. ಇದು ಮಳೆಯನ್ನು ಕುರಿತ ಆಚರಣೆಯಾಗಿದೆ. ಕರಾವಳಿಯ ರೈತಾಪಿಗಳು ಒಕ್ಕಲುತನಕ್ಕೆ ಮಳೆಯನ್ನೇ ಅವಲಂಬಿಸಿದ್ದಾರೆ. ಬೆಳೆಗೆ ಅಗತ್ಯವಿದ್ದಷ್ಟು ಮಳೆಯಾಗದೇ ಹೋದ ಸಂದರ್ಭದಲ್ಲಿ ರೈತಾಪಿಗಳು ವರುಣನ ಕೃಪೆಗಾಗಿ ಕಾಯಬೇಕಾಗುತ್ತದೆ. ಮಳೆ ಇಲ್ಲದೆ ಬೆಳೆ ಎಲ್ಲ ಒಣಗತೊಡಗಿದಾಗ ಜನರ ಸಂಕಟ ನಿವಾರಣೆಗಾಗಿ ಹಾಲಕ್ಕಿ ಒಕ್ಕಲಿಗರು ಬಯಲಲ್ಲಿ ಸಮಸಂಖ್ಯೆಯಲ್ಲಿ ಸೇರುತ್ತಾರೆ. ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಂಡು ವೃತ್ತಾಕಾರವಾಗಿ ನಿಲ್ಲುತ್ತಾರೆ. ನುರಿತ ಹಾಡುಗಾರ್ತಿಯೊಬ್ಬಳು ಹಾಡನ್ನು ಹೇಳಿ ಮುಗಿಸಿದ ನಂತರ ಉಳಿದವರು ನಿಂತ ಸ್ಥಳದಿಂದ ಮುಂದಕ್ಕೆ ಹಾರಿ ಬಾಗಿ ಪುನಃ ಹಿಂದಕ್ಕೆ ಜೀಕಿ ನಿಂತುಕೊಂಡು ತಾರ್ಲೆ ಎಂದು ಎಲ್ಲರೂ ಗಟ್ಟಿಯಾಗಿ ಹೇಳುತ್ತಾರೆ. ಹಾಡುಗಾರ್ತಿ ಹಾಡಿನ ಒಂದೊಂದೂ ಸೊಲನ್ನು ಹೇಳುತ್ತಾ ಮುಂದುವರೆಸಿದಂತೆ ಉಳಿದ ಹೆಂಗಸರು ತಾರ್ಲೆ ಹಾಕಿ ಕುಣಿಯುವುದರಿಂದ ಇದು ತಾರ್ಲೆ ಕುಣಿತವಾಯಿತೆಂದು ನಂಬಲಾಗಿದೆ. ಮೊದಲು ಮಳೆ ತರಲು (ತರಲೆ ತಾರಲ್ ತಾರ್ಲೆ) ವರುಣ  ದೇವತೆಯನ್ನು ಸ್ತುತಿಸುವ ಹಾಡನ್ನು ಹೇಳುವ ಸಂಪ್ರದಾಯವಿದ್ದಂತೆ ಕಾಣುತ್ತದೆ:

ಚಣಮೊಳೆ ಹೊಯ್ಯಲೆ ಚಣಕೆರೆ ತುಂಬಲೆ ಬಯ್ದೀಗೊಳೆಲ್ಲ ಹಯ್ನಾದೊ ! ತಾರ್ಲೆ
ಜಾಂಜೀಯ ಬೀರೂ ತಳಮಳಗೊಂಡೇ ದೇವತ್ತಗೋಳಾ ಮದವೀಯೋ ! ತಾರ್ಲೆ

ಮೇಲೆ ಉದಾಹರಿಸಿದ ಹಾಡಿನಲ್ಲಿ ಮಳೆ ಮತ್ತು ಬೆಳೆ ಸಮೃದ್ದಿಯ ಹಾರೈಕೆ ಇರುವುದನ್ನು ಕಾಣಬಹುದು. ಎಲ್. ಜಿ. ಭಟ್ಟರು ಸಂಗ್ರಹಿಸಿದ ತಾರ್ಲೆ ಹಾಡುಗಳಲ್ಲಿ ಮಳೆಯ ಬರುವಿಕೆಯನ್ನು ಹಾಗೆಯೇ ಕೃಷಿ ಸಮೃದ್ದಿಗೆ ಸಂಬಂಧಿಸಿದಂತೆ  ವಸ್ತುವಿದೆ. ಆದರೆ ಇಲ್ಲಿ ಈ ಹಾಡುಗಳನ್ನು ಕುಣಿಯುತ್ತಾ ಹಾಡುವುದಿಲ್ಲ. ಗದ್ದೆಯ ಬಯಲಲ್ಲಿ ಲೋಕೋದ್ಧಾರಕ್ಕಾಗಿ ತಾರ್ಲೆ ಹಾಡಲು ಊರಿನ ಗೌಡನಿಂದ ವೀಳ್ಯವನ್ನು ಹಿಡಿದ ಹಾಡುಗಾರ್ತಿಯರು ಹಸೆ ಹಾಸಿಕೊಡು ಹಾಡುತ್ತಾರೆ. ಸಮಸಂಖ್ಯೆಯಲ್ಲಿ ಹಾಡು ಹಾಡಬಾರದೆಂಬ ನಿಷೇಧವಿದೆ. ಈ ಮೇಲಿನ ಹಾಡುಗಳಲ್ಲಿ ತನ್ನ ದೇವರ ಭಕ್ತಿಗೆ ಉದ್ದು, ಗೊಂಡೆ ಬಿತ್ತುವುದು. ತುಲಸಿ, ಬಿದಿರು ನೆಡೆವ ಪ್ರಸ್ತಾವ ಸಾಮಾನ್ಯವಾಗಿ ಕಂಡುಬರುತ್ತದೆ. ಬಿತ್ತಿದ ಬೆಳೆ ಸಮೃದ್ಧವಾಗಿ ಬೆಳೆಯುವ ಸಲುವಾಗಿ ನಿರೋ ನಿರೋ ಎಂದು ಕೂಗುವ ತಳಮಳದ ಧ್ವನಿ ಇದೆ:

ಹಯ್ತು ಹರನೂಯ್ದ !ಶೀತೇನ ತಿರುಗೊಯ್ದ
ಶ್ವಾತಿರಾಜುನ
ಕೊಂಡೊಯ್ದ! ಹೊಯ್ಲಿಲ್ಲ ಮಾಲೆಗಾಲ
ಮಾಬ್ಲೋರ
ಮನೆ ಮೈನೆ ! ಹೊಯ್ಯೆಂದ್ರೆ ಹೊಯ್ಯಾ ಮಾಲೆಗಾಲ
ನಿಲ್ಲೆಂದ್ರ ನಿಲ್ಲೊ ಮಾಲೆಗಾಲ ಲೀಗೇಕೆಲಿನ್ನೂ ಬರಲಿಲ್ಲೋ!

-ಎಂಬುದಾಗಿ ಮಳೆಯನ್ನು ಕುರಿತು ಸ್ತುತಿಸುತ್ತಾರೆ. ಮಳೆ ಬಂದರೆ ಬೆಳೆಯು ಸಮೃದ್ಧವಾಗಿ ಬೆಳೆದು ರೈತರ ಬದುಕು ಹಸನಾಗುತ್ತದೆ ಎಂದು ಅವರ ಆಶಯ

ಮೇನನ ರಾಜುದಲ್ಲಿ ಗುಡುಗಿ ಮಾಲುಗಾಲಯ್ತೋ
ಕೆಲುಗೀನ ರಾಜುದಲ್ಲಿ ಹರಿನಗಶ ! ಕಟ್ಟುವಾಗೆ ಗಂಗೆ ಕೋಡೀಲಿ ಹಣಿನೀರು!

ಮಳೆ ಬಂದು ಮನಸ್ಸು ತಣಿಯುತ್ತದೆ. ಬಿತ್ತಿದ ಬೆಳೆ ಬೆಳೆದು ಸುಖ ಸಮೃದ್ದಿ ತರುತ್ತವೆ. ಮಗಳು ಮದುವೆ ವಯಸ್ಸಿಗೆ ಬರುತ್ತಾಳೆ. ಅವಳು ಸಿಂಗರಿಸಿಕೊಂಡು, ಹೂ ಮುಡಿದು ದೇವರಿಗೆ ನಮಿಸಿ ಅಪ್ಪನ ಕಾಲಿಗೆರಗಿ ಆಶೀರ್ವಾದ ಪಡೆಯುತ್ತಾಳೆ. ಆಕಾಶಕ್ಕೆ ಕೈಮುಗಿಯುತ್ತಾಳೆ:

ಆಕಾಶಕ್ಕೆ ಕಯ್ಯಮುಗ್ವವೆಲ್ಲ್ಯದಲ್ಲಿ ! ಗುಡುಗು ಮಿಂಚೆಂಬ ವಾದ್ಯಬಂತು
ಆಕಾಶದಲ್ಲಿ
ಗುಡುಗುಗರನಾಗಲು ಹೊಡೆದು! ಚಕಚಕಯೆಂಬ ಲಾರುತೀಯೆ ಬೆಲುಗೀರು
ಬರಬರನೆ
ಮೊಲುಗಾಲು ಶುರುವಾಯ್ತು! ಬರಬರನೆ ಮಳೆರಾಯ ಬರ್ವ ಯಾವ್ಯಾದಲ್ಲಿ
ಹಕ್ಕರಣೆ
ನೀರು ಕುಡುದೀವು! ಗೌಡ್ಲೂಲ್ ಮಕ್ಲು ಹೊಡುಕೆ ಹೊಟೇರು

ಈ ರೀತಿಯಾಗಿ ಕರಾವಳಿಯಲ್ಲಿ ಇಂದಿಗೂ ಮಳೆ, ಬೆಳೆಗಾಗಿ ಹಾರೈಸುವ ಹಾಡುಗಳನ್ನು ಹಾಡುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಮತ್ತೆ ಕೆಲವು ಪ್ರದೇಶಗಳಲ್ಲಿ ‘ತಾರ್ಲೆ’ ಎಂಬ ಸಮೂಹ ಧ್ವನಿಗೆ ಬದಲಾಗಿ ‘ದುಮಸಾಯ್ಲೋ’ ಇಲ್ಲವೇ ‘ದುಮಸಾಲೇ’ ಪಲ್ಲವಿಯನ್ನು ಹಾಡುವುದುಂಟು (ಚನ್ನಬಸಪ್ಪ ಗೊ.ರೂ., ೧೯೭೭ : ೧೪೪.) ಇದಕ್ಕೆ ‘ದುಮಸಾಲೆ’ ಕುಣಿತವೆಂದು ಕರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ಕೆಲವು ಪ್ರದೇಶಗಳಲ್ಲಿ ಹೆಂಗಸರು ನಿರ್ಜನ ಬೆಟ್ಟಕ್ಕೆ ಹೋಗಿ ಅಲ್ಲಿ ಬೆತ್ತಲಾಗಿ ನಿಂತು ‘ತಾರ್ಲೆ’ ಹಾಕಿ ಕುಣಿಯುವುದು ಇದ್ದುದಾಗಿ ತಿಳಿಯುತ್ತದೆ ಇದು ವರುಣ ದೇವತೆಯನ್ನು ಹಾಡು ಮತ್ತು ಕುಣಿತದ ಮೂಲಕ ತೃಪ್ತಿಪಡಿಸಿ ಅವನನ್ನು ಒಲಿಸಿಕೊಳ್ಳುವ ಕ್ರಮ. ಆಗ ವರುಣ ದೇವತೆ ಆ ಹೆಂಗಸರ ನಗ್ನತೆಯಿಂದ ರೋಮಾಂಚಿತನಾಗಿ ಮಳೆಯ ಧಾರೆಯನ್ನು ಸುರಿಸುತ್ತಿದ್ದನಂತೆ. ಹೀಗೆ ಹೆಂಗಸರು ‘ತಾರ್ಲೆ’  ಹಾಕಿ ಕುಣಿದರೆ ಮಳೆ ಬಂದೇ ಬರುವುದೆಂಬ ಏಕಮಾತ್ರ ನಂಬಿಕೆಯಿಂದ ಹಾಲಕ್ಕಿ ಜನರು ಈ ಕುಣಿತವನ್ನು ಮಾಡುತ್ತಾರೆ. ಹಿಂದೆ ಏಳು ರಾತ್ರಿ ಏಳು ಹಗಲು ಕುಣಿದು ಮಳೆ ಕರೆಯುವ ಪದ್ಧತಿ ಇತ್ತಂತೆ. ಒಟ್ಟಿನಲ್ಲಿ ಈ ಆಚರಣೆ ಮಳೆಯನ್ನು ಕುರಿತು ಸ್ವತಂತ್ರ ಆಚರಣೆಯಾಗಿದೆ.

ತಾರ್ಲೆ ಕುಣಿತವು ಹಾಲಕ್ಕಿ  ಒಕ್ಕಲಿಗರ ಹೆಣ್ಣು ಮಕ್ಕಳ ಒಂದು ಪ್ರದರ್ಶನಾತ್ಮಕ ಕಲೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿನ ಹಾಲಕ್ಕಿ ಹೆಣ್ಣುಮಕ್ಕಳು ಮಳೆ ಬಾರದಿದ್ದಾಗ ಈ ಕುಣಿತವನ್ನು ಅವರ ಹಾಡಿಗಳಲ್ಲಿ ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಕೇರಿಯ ಹೆಂಗಸರೆಲ್ಲಾ ವರ್ತುಲಾಕಾರವಾಗಿ ನಿಂತು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ಮಂಡಲಾಕಾರದಲ್ಲಿ ಸುತ್ತ ತೊಡಗುತ್ತಾರೆ. ಹಾಡುಗಾರ್ತಿಯೊಬ್ಬಳು ಹಾಡಿನ ಮೊದಲ ಸೊಲ್ಲೊಂದನ್ನು ಹೇಳುತ್ತಾನೆ. ಕೂಡಲೇ ಉಳಿದವರು ಮುಂದಕ್ಕೆ ಬಾಗಿ ಪುನಃ ಹಿಂದಕ್ಕೆ ನಿಂತು ತಾರ್ಲೆ ಎಂದು ಸಾಮೂಹಿಕವಾಗಿ ಹಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಈ ತಾರ್ಲೆಯ ಬದಲಿಗೆ “ದುಮ್ ಸಾಲ್ಯೋ, ದುಮ್ ಸಾಲೆ” ಎಂದು ಹೇಳುತ್ತಾರೆ. ಈ ಕುಣಿತದ ಒಟ್ಟು ಸ್ವರೂಪವನ್ನು ಗಮನಿಸಿದರೆ ಅದರ ಹಿಂದೆ ಸಮೃದ್ದಿಯ ಕಲ್ಪನೆಯಿರುವುದು ವೇದ್ಯವಾಗುತ್ತದೆ. ಈ ಕುಣಿತದ ಸಂದರ್ಭದ ಮತ್ತೊಂದು ವಿಶೇಷವೆಂದರೆ “ಅಣುಕು ಹಿಂಡು ಮದುವೆ” ಹಾಗೂ “ಬಿದಿರ ಹಿಂಡೂ ನಡುವೆ” ಎಂಬ ಎರಡು ಆಚರಣೆಗಳನ್ನು ಮಾಡುತ್ತಾರೆ. ಅಣುಕು ಭೂಮಿ ಆಕಾಶಗಳ ಮಿಲನದ ಹಾಗೂ ಆ ಮೂಲಕ ಆ ಭೂಮಿಗೆ ಮಳೆಯ ಸ್ಪರ್ಶದ ಸಂಕೇತವಾಗಿರುತ್ತದೆ.